01 March 2024

ಪುಸ್ತಕ ಪರಿಚಯ - ೨೫

ಪುಸ್ತಕ ಪರಿಚಯ

ಕಾದಂಬರಿ - "ರಸಾತಳ"
ಕಾದಂಬರಿಕಾರರು - ಕೂಡ್ಲು ತಿಮ್ಮಪ್ಪ ಗಟ್ಟಿ.
ಪ್ರಕಟಿತ ವರ್ಷ: ೧೯೯೮
ಕ್ರಯ: ₹೬೦.
ಪ್ರಕಾಶಕರು: ರಾಜಾ ಚೆಂಡೂರು
ನೆಮ್ಮದಿ ಪ್ರಕಾಶನ
೮೮ "ನೆಮ್ಮದಿ"
ಪಟ್ಟಣಗೆರೆ
ರಾಜರಾಜೇಶ್ವರಿ ನಗರ
ಬೆಂಗಳೂರು ೫೬೦೦೩೯

ಮುನ್ನುಡಿ.


"ರಸಾತಳ" ಎಂಬ ಹೆಸರಿನ ಬಗ್ಗೆ ಜಿಜ್ಞಾಸೆ ವ್ಯಕ್ತಪಡಿಸಿದವರಿಗಾಗಿ ಸ್ವಲ್ಪ ವಿವರಣೆಯನ್ನು ಕೊಡಬಯಸುತ್ತೇನೆ.

ಕಾದಂಬರಿ ಬರೆದು ಮುಗಿಸಿದ ಬಳಿಕ ಹೆಸರಿಡಲು ತುಂಬಾ ಯೋಚಿನಬೇಕಾಯಿತು. ಹಲವು ದಿನಗಳ ಬಳಿಕ ಹೊಳೆದ ಹೆಸರು "ರಸಾತಳ". ಇದು ಈ ಕಾದಂಬರಿಗೆ ಅತ್ಯಂತ ಸೂಕ್ತವಾದ ಹೆಸರು ಅನ್ನಿಸಿತು.

ಶ್ರೀಮದ್ಭಾಗವತದಲ್ಲಿ ಏಳು ಅಧೋಲೋಕಗಳ ವರ್ಣನೆ ಬರುತ್ತದೆ. ಬಹಳ ಸಂಕ್ಷಿಪ್ತವಾಗಿ ಹೇಳುವುದಾದರೆ:

'ಅತಳ' - ಇದು ಅಸುರ ಶಿಲ್ಪಿ ಮಯನ ಪುತ್ರ ಬಲನ ವಾಸಸ್ಥಾನ. ಇವನ 'ಮಾಯೆ'ಯನ್ನು ಸೃಷ್ಟಿಸಿದನು.


'ವಿತಳ' - ಇಲ್ಲಿ ಶಿವನು ತಾಟಕೇಶ್ವರ ಎಂಬ ಹೆಸರಿನಲ್ಲಿ ತನ್ನ ಗಣಗಳಿಂದೊಡಗೂಡಿ ಪಾರ್ವತಿಯ ಜೊತೆಯಲ್ಲಿ ವಾಸಿಸುತ್ತಾನೆ.

'ಸುತಳ' - ಇಲ್ಲಿ ವೀರೋಚನ ಪುತ್ರನಾದ ಬಲಿ ಚಕ್ರವರ್ತಿ ವಾಸಿಸುತ್ತಾನೆ. ವಾಮನನಿಂದ ಅಧೋಃಲೋಕಕ್ಕೆ ತಳ್ಳಲ್ಪಟ್ಟ ಬಲಿ ಪುನಃ ಇಂದ್ರ ಪ್ರಾಪ್ತಿಯಾಗುವವರೆಗೆ ಇಲ್ಲಿ ವಾಸಿಸುತ್ತಾನೆ. ಇಲ್ಲಿ ವಿಷ್ಣುವು ಬಲಿಯ ಅರಮನೆಯ ಬಾಗಿಲು ಕಾಯುವವನಾಗಿರುತ್ತಾನೆ. ಈಗಿನ ಇಂದ್ರ ಪದವಿ ಮುಗಿದ ಬಳಿಕ ಬಲಿ ಮುಂದಿನ ಇಂದ್ರನಾಗುತ್ತಾನೆ.

'ತಳಾತಳ' - ಇದು ನಾಗಲೋಕ. ಇಲ್ಲಿ ನಾಗರು ವಾಸಿಸುತ್ತಾರೆ.

'ರಸಾತಳ' - ಫಣಿಗಳೆಂಬ ದೈತ್ಯರು ವಿಷ್ಣುವಿಗೆ ಭಯಪಟ್ಟು ಇಲ್ಲಿ ವಾಸಿಸುತ್ತಾರೆ. ಇವರಿಗೆ ವಾಯುವು ಕೂಡ ಪ್ರವೇಶಿಸದಂತ ಕವಚವಿದೆ. ಬ್ರಹ್ಮದೇವನ ಮುಖದಿಂದ ಜನಿಸಿದ ಕಾಮಧೇನು ಇಲ್ಲಿ ವಾಸ ಮಾಡುತ್ತದೆ. ಇದರ ಹಾಲಿನಿಂದ ಕ್ಷೀರನಿಧಿಯೆಂಬ ಹಾಲಿನ ಮಡು ಇಲ್ಲಿ ತುಂಬಿಕೊಂಡಿರುತ್ತದೆ. ಕಾಮಧೇನುವಿನ ಮಕ್ಕಳಾದ ಸುರೂಪಾˌ ಹಂಸಿಕಾˌ ಸುಭದ್ರಾ ಹಾಗೂ ಸರ್ವಕಾಮದುಘಾ ಎಂಬ ನಾಲ್ಕು ದೇನುಗಳು ಈ ಲೋಕದ ನಾಲ್ಕು ದಿಕ್ಕುಗಳಲ್ಲಿವೆ.


'ಪಾತಾಳ' - ಇದು ನಾಗರಾಜನಾದ ವಾಸುಕಿ ಮತ್ತು ಇತರ ನಾಗಗಳು ವಾಸಿಸುವ ಲೋಕ.


ಇನ್ನು ಈ ಲೋಕಗಳು ಎಲ್ಲಿವೆ ಎನ್ನುವ ಪ್ರಶ್ನೆ ಎಲ್ಲಿಯೂ ಇಲ್ಲ ಎಂದರೆ ತಪ್ಪೇನಾಗಲಾರದು. ಆದರೆ ಒಂದರ್ಥದಲ್ಲಿ ಇವು ಭೂಮಿಯ ಮೇಲೆಯೆ ಇರುವ ಅಧೋಲೋಕಗಳೆಂದೆ ಹೇಳಬಹುದು. ಒಂದು ದೇಶವು ಒಂದು ಕಾಲದಲ್ಲಿ ಅತಳದಂತೆಯೂˌ ಇನ್ನೊಂದು ಕಾಲದಲ್ಲಿ ವಿತಳದಂತೆಯೂˌ ಮತ್ತೊಂದು ಕಾಲದಲ್ಲಿ ಬೇರೆ ಯಾವುದೋ ಒಂದು ಅಧೋಲೋಕದಂತೆಯೂ ಇರಬಹುದು. ಅಥವಾ ಏಕಕಾಲದಲ್ಲಿಯೆ ಒಂದು ದೇಶದ ಬೇರೆ ಬೇರೆ ಭಾಗಗಳಲ್ಲಿ ವಿವಿಧ ಅಧೋಲೋಕಗಳ ಸ್ಥಿತಿಯೂ ಇರಬಹುದು.


ಅಧೋಲೋಕವೆಂದರೆ ನರಕವಲ್ಲ. ನರಕವು ಬೇರೆಯೆ ಒಂದು ಲೋಕ. ಅದೂ ಕೂಡ ಇರುವುದು ಭೂಮಿಯ ಮೇಲೆಯೆ ಎನ್ನಲಡ್ಡಿಯಿಲ್ಲ.


ಪುರಾಣದ ಪ್ರಕಾರ ಮೇಲೆ ಏಳು ಲೋಕಗಳಿವೆ. "ಮೇಲೆ" ಎಂದರೆ ಅಧೋಲೋಕದಿಂದ ಮೇಲೆ ಎಂದರ್ಥ. ಆದ್ದರಿಂದ ಭೂಮಿಯೂ ಮೊತ್ತ ಮೊದಲಿನ ಮೇಲಿನ ಲೋಕ. ಹಾಗೆˌ ಭೂಲೋಕˌ ಭುವರ್ಲೋಕˌ ಸ್ವರ್ಲೋಕˌ ಮಹರ್ಲೋಕˌ ಜನಲೋಕˌ ತಪೋಲೋಕˌ ಸತ್ಯಲೋಕ - ಏಳು ಊರ್ಧ್ವಲೋಕಗಳು.

ಇವು ಕೂಡ ಭೂಮಿಯ ಮೇಲಿರುವ ಲೋಕಗಳೆ ಎಂದು ತಿಳಿದುಕೊಳ್ಳಬೇಕಾಗುತ್ತದೆ.

ರಸಾತಳದ ಪೂರ್ಣ ವರ್ಣನೆಯನ್ನು ಓದಿ ನೋಡಿದರೆˌ ಈ ಕಾದಂಬರಿಗೆ ಈ ಹೆಸರು ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದೆನಿಸುವುದರಲ್ಲಿ ಸಂದೇಹವಿಲ್ಲ. ಬದರಿನಾರಾಯಣ ಒಂದು ಫಣಿಯಂತೆ ಕಾಣಿಸಬಹುದು.

ರಾಮಕಿಂಕರರಿಗೆ ಹೇಗೆ ರಾಮ ಉತ್ತಮನೋˌ ಹಾಗೆಯೆ ರಾವಣಕಿಂಕರನಿಗೆ ರಾವಣನೂ ಉತ್ತಮನೆ.


ಒಂದು ವರ್ಷದ ಹಿಂದೆ ಬರೆದ 'ರಸಾತಳ' ಈಗ ಪುಸ್ತಕದ ರೂಪದಲ್ಲಿ ಬರುತ್ತಿದೆ. ಬದರಿನಾರಾಯಣ ಉದ್ಯೋಗ ತೊರೆಯಬೇಕಾಗಿ ಬಂದಾಗ ಅವನ ಸಂಪತ್ತಿನ ಮೌಲ್ಯ ಮೂರುಕೋಟಿಗಿಂತ ಹೆಚ್ಚಿತ್ತು. ಆಗ ಅದೆ ದೊಡ್ಡ ಮೊತ್ತವೆಂದುಕೊಂಡಿದ್ದೆ. ಈಗ ಬರೆಯುವುದಾಗಿದ್ದರೆ ಮೂವತ್ತು ಕೋಟಿಯೆಂದು ಬರೆಯಬೇಕಾಗಿತ್ತೋ ಏನೋ! ಯಾಕೆಂದರೆ ಮೂರು ಕೋಟಿ ಅಸಾಧ್ಯ ಸಂಪತ್ತು ಎಂದು ನನಗನಿಸಿತ್ತು. ಆದರೆ ಆ ಮೊತ್ತವನ್ನು ಬದರಿನಾರಾಯಣನ ಸಂಪತ್ತಾಗಿ ಕಂಡಾಗ ನನಗಾದಷ್ಟು ಭಯ 'ರಸಾತಳ' ಧಾರವಾಹಿಯ ಕೆಲವು ಓದುಗರಿಗೆ ಆಗಲಿಲ್ಲ ಎಂಬುದು ನನ್ನಲ್ಲಿ ಕೊನೆಯಿಲ್ಲದ ಕುತೂಹಲವಾಗಿ ಉಳಿದಿದೆ.

ಕೃತಜ್ಞತೆ: ಧಾರವಾಹಿಯಾಗಿ ಪ್ರಕಟಿಸಿದ 'ಮಂಗಳ' ವಾರಪತ್ರಿಕೆಗೆˌ ಮುನ್ನುಡಿ ಬರೆಯುವಲ್ಲಿ ಕೆಲವೊಂದು ವಿಷದಿಕರಣ ನೀಡಿದ ಶ್ರೀವಿಷ್ಣುಮೂರ್ತಿ ಭಟ್ಟರಿಗೆˌ ಕಾದಂಬರಿಯ ಹೊಸ ಹೆಸರಿನ ಬಗ್ಗೆ ಕುತೂಹಲ ವ್ಯಕ್ತಪಡಿಸಿˌ ಕೊನೆಯ ಬಗ್ಗೆಯೂ ಕುತೂಹಲ ಉಳಿಸಿಕೊಂಡ ಧಾರವಾಹಿಯ ಓದುಗರಿಗೆ.

ಕೆಟಿ ಗಟ್ಟಿ
ಉಜಿರೆ
೦೮ ೦೫ ೯೮


"ನನ್ನ ಹಾಗೂ ಕೆ ಟಿ ಗಟ್ಟಿಯವರ ನಡುವಿನ ಸಂಬಂಧ ಹಾಗೂ ಅನುಬಂಧವನ್ನ ಒಂದು ನಿರ್ದಿಷ್ಟ ವ್ಯಾಖ್ಯಾನದಲ್ಲಿ ವಿವರಿಸಲರಿಯೆ. ಅವರು ನನಗೆ ಹಿರಿಯ ಮಿತ್ರರೂ - ಮಾರ್ಗದರ್ಶಕರೂ - ಅಭಿಮಾನದ ಲೇಖಕರೂ - ಆತ್ಮೀಯ ಬಂಧುವೂ - ರಕ್ತಸಂಬಂಧ ಮೀರಿದ ಹಿತೈಶಿಯೂ ಆಗಿದ್ದರೂ. ಇದರಿಂದ ಒಂದಕ್ಷರ ಹೆಚ್ಚು ಬರೆದರೆ ಸ್ವತಃ ನನಗೆ ಅದು ಕೃತಕ ಅನ್ನಿಸುತ್ತೆ. ಅವರ ಹಾಗೂ  ಯಶೋದಮ್ಮನ ಆರೈಕೆಯಲ್ಲಿ ಅವರು ಉಜಿರೆಯ ವನಶ್ರೀಯಲ್ಲಿದ್ದ ದಿನಗಳಲ್ಲಿ ಹಲವಾರು ಹಗಲು - ರಾತ್ರಿಗಳನ್ನ ಕಳೆದಿದ್ದೇನೆ. ನನಗಾಗಿ ಅವರು ಹಂಡೆಗೆ ಉರಿ ಹಾಕಿ ಮೀಯಲು ಬಿಸಿ ನೀರು ಕಾಯಿಸುತ್ತಿದ್ದುದು - ರುಚಿಕರವಾಗಿ ಹೊತ್ತು ಹೊತ್ತಿಗೆ ತಿಂಡಿ - ಊಟ ಬೇಯಿಸಿ ಹಾಕುತ್ತಿದ್ದುದು ನೆನಪಾಗುವಾಗ ಕಣ್ಣು ಹಾಗೂ ಮನತುಂಬಿ ಬರುತ್ತದೆ. ತೀರ ಖಾಸಗಿ ಅನ್ನುವಂತಾ ಅಥವಾ ವಯಕ್ತಿಕ ಹಾಗೂ ಮುಜುಗರ ಹುಟ್ಟಿಸುವಂತ ಮಾತುಗಳನ್ನೂ ನಿರ್ಭಿಡೆಯಿಂದ ಅವರಿಬ್ಬರಲ್ಲೂ ಕೇಳಿ ಚರ್ಚಿಸುವಷ್ಟು ಸ್ವಾತಂತ್ರ್ಯ ನನಗಿತ್ತು. ಸದ್ಯ ಅವರ ಕೊನೆಯ ಕಾದಂಬರಿ "ಮೋಹ ಚುಂಬಿತ ಮಾಯೆ" ಓದುತ್ತಿದ್ದೇನೆ. ಪುತ್ತೂರು ಕರ್ನಾಟಕ ಸಂಘ ಪ್ರಕಟಿಸಿದ್ದ ಪ್ರೊಫೆಸರ್ ಶ್ರೀಧರರ ಸಂಪಾದಕತ್ವದ ಅವರ ಅಭಿನಂದನಾ ಗ್ರಂಥದಲ್ಲಿ "ವಿಕ್ರಾಂತ ಕರ್ನಾಟಕ"ಕ್ಕಾಗಿ ನಾನು ಹಾಗೂ ನನ್ನ ಆತ್ಮಬಂಧು ರುದ್ರಪ್ರಸಾದ ನಡೆಸಿದ್ದ ಅವರ ಸಂದರ್ಶನವೂ ಸೇರಿದೆ ಅನ್ನೋದೆ ನನಗೆ ನೆಮ್ಮದಿಕೊಡುವ ಅಂಶ. ಆತ್ಮೀಯರೊಬ್ಬರನ್ನ ಕಳೆದುಕೊಂಡ ವೇದನೆಯಲ್ಲಿದ್ದೇನೆ. ಸದ್ಯಕ್ಕೆ ಇಷ್ಟನ್ನೆ ಹೇಳಬಲ್ಲೆ."

- 🙂


'ರಸಾತಳ'


".......ಒಂದು ಗಾಢವಾದ ನಿದ್ರೆಯಿಂದ ಎಚ್ಚೆತ್ತಂತೆ ಅನ್ನಿಸಿತು. ನಿದ್ರೆ ಮಾಡಿದ್ದೆನಾದರೆˌ ಎಷ್ಟು ಹೊತ್ತು ಅಥವಾ ಪ್ರಜ್ಞಾಹೀನ ಸ್ಥಿತಿಯಾಗಿತ್ತೆ? ಹಾಗಿದ್ದರೆ ಎಷ್ಟು ಕಾಲ? ಎಷ್ಟು ಕಾಲದಿಂದ ನಾನು ಹೀಗೆ ಮಲಗಿದಲ್ಲಿಯೆ ಇದ್ದೇನೆ? ಘಂಟೆಗಳೆ - ದಿನಗಳೆ ಅಥವಾ ತಿಂಗಳುಗಳೆ ದಾಟಿ ಹೋಗಿವೆಯೆ? ಈಗ ನೋವು ಅನುಭವಕ್ಕೆ ಬಾರದಿರುವುದರಿಂದ ದೇಹವೆಂಬುದು ಅನುಭವವೇದ್ಯ ಸಂಗತಿಯಾಗಿರಲಿಲ್ಲ. ಕಿಂಚಿತ್ ತೆರೆದ ರೆಪ್ಪೆಯಡಿಯಿಂದ ಬದರಿನಾರಾಯಣನಿಗೆ ತನ್ನ ದೇಹ ಕಾಣಿಸುತ್ತಿತ್ತಾದ್ದರಿಂದ ತಾನು ಸತ್ತಿಲ್ಲ. ತನ್ನ ಜೀವ ದೇಹದೊಳಗೆ ಇದೆ ಎಂಬ ವಿಶ್ವಾಸ ಉಂಟಾಯಿತು. ಆದರೆ ದೇಹ ಹೇಗಿದೆ? ಗಾಯ ಒಣಗಿದೆಯೆ? ಬೆನ್ನಿನಲ್ಲಿ ಹುಣ್ಣಾಗಿರಬಹುದೆ? ದೇಹಕ್ಕೆ ಪೋಷಕಾಂಶಗಳನ್ನು ಹೇಗೆ ಒದಗಿಸುತ್ತಿದ್ದಾರೆ ಯಾವುದೂ ತಿಳಿಯಲಿಲ್ಲ. ಮೂರು ಜನ ಡಾಕ್ಟರುಗಳು ತನ್ನ ಮೇಲೆ ಏನೋ ಪ್ರಯೋಗಕ್ಕೆ ಸಿದ್ಧರಾಗುತ್ತಿದ್ದಾರೆ ಎನ್ನಿಸಿತು.


ಎನೋ ಒಂದು ಔಷಧಿಯನ್ನು ಚುಚ್ಚಿದರು. ಪ್ರಜ್ಞೆಯನ್ನು ಕಳೆಯಲಿಕ್ಕಾಗಿರಬಹುದೆ? ಅಥವಾ ಪ್ರಜ್ಞೆಯನ್ನು ಹೊಡೆದೆಬ್ಬಿಸುವ ಚೋದಕವಾಗಿರಬಹುದೆ? 


ಸ್ವಲ್ಪ ಹೊತ್ತಿನಲ್ಲಿ ತಟ್ಟನೆ ಕತ್ತಲಾವರಿಸಿದಂತೆ ತೋರಿತು. ರೆಪ್ಪೆ ತೆರೆದೆ ಇದೆಯೆ? ಮುಚ್ಚಿಕೊಂಡಿದಿಯೆ? ಎಂದು ತಿಳಿಯಲಿಲ್ಲ. ಹೆಚ್ಚಿನಂಶ ತೆರೆದೆ ಇದೆಯೆನ್ನಿಸಿತು. ಹಾಗಿದ್ದರೆ ಕತ್ತಲೆಯೇನು? ಎಲ್ಲಿಂದ ಬಂತು? ಇಷ್ಟು ಹೊತ್ತು ಕಾಣಿಸುತ್ತಿತ್ತು - ಕೇಳಿಸುತ್ತಿತ್ತು! ಈಗ ಶ್ರವಣ ಶಕ್ತಿ ಮಾತ್ರ ಉಳಿದುಕೊಂಡಿದೆ. ದೃಷ್ಟಿ ಶಕ್ತಿಯೂ ಕೊನೆಗೊಂಡಿತೆಂದು ಇದರರ್ಥವೆ? ಇವರ ಪ್ರಯೋಗದಿಂದಾಗಿ ಇನ್ನು ಶ್ರವಣ ಶಕ್ತಿಯೂ ನಷ್ಟವಾದರೆ? ಪಂಚೇಂದ್ರಿಯಗಳ ಕಾರ್ಯಭಾರವೂ ನಿಂತಂತಾಯಿತು. ಆಮೇಲೆ ಜೀವವೆಂಬುದು ಇರುವುದೆಲ್ಲಿ? ಎದೆ ಬಡಿತ ಇರುವವರೆಗೆ - ದೇಹದಲ್ಲಿ ಬಿಸಿ ಇರುವವರೆಗೆ - ಉಸಿರಾಟ ನಡೆಯುವವರೆಗೆ ಜೀವಂತˌ ಆ ಮೂರೂ ಕೊನೆಗೊಂಡಾಗ ಮೃತ. ಆ ಮೆರೂ ಒಂದೊಂದಾಗಿ ಕೊನೆಗೊಳ್ಳುವುದಿಲ್ಲ. ಒಮ್ಮೆಲೆ ಕೊನೆಗೊಳ್ಳುತ್ತವೆ. ಆಗ ನಾನು ಉಳಿಯುತ್ತೇನೆಯೆ.


ಬದರಿನಾರಾಯಣನಿಗೆ ಪುನರ್ಜನ್ಮದಲ್ಲಿ ನಂಬಿಕೆಯಿತ್ತು. ಈ ಸ್ಥಿತಿಯಲ್ಲಿಯೂ - ಈ ಗಾಢಾಂಧಕಾರದಲ್ಲಿಯೂ ಅವನು ಹತಾಶನಾಗಲಿಲ್ಲ. ಹೇಗೋ ನಾನು ಬದುಕಿ ಮರುಳುತ್ತೇನೆ ಎಂಬ ವಿಶ್ವಾಸ ಅದಮ್ಯವಾಗಿತ್ತು.


ಈಗ ಅವನು ಯೋಚಿಸಿದ. ನೋವಿಲ್ಲ - ಯಾವ ಸಂವೇದನೆಯೂ ಇಲ್ಲ. ಜೀವಂತಿಕೆ ಮತ್ತು ಕತ್ತಲೆ. ಡಾಕ್ಟರುಗಳು ಏನೋ ಮಾತನಾಡಿದಾಗ ಮಾತ್ರ ಸ್ವಲ್ಪ ಕಿರಿಕಿರಿ - ಅಸ್ವಸ್ಥತೆ. ಅದು ಸ್ಪಷ್ಟವಾಗುದದರಿಂದ ಒಂದು ರೀತಿಯ ಅಸಹನೆ. ಅವರು ಶಬ್ದಗಳಲ್ಲಿ ಮಾತನಾಡದೆ ಅಕ್ಷರಗಳಲ್ಲಿ ಮಾತನಾಡುತ್ತಿರುವಂತೆ ತೋರಿತು. ತಾಂತ್ರಿಕ ಶಬ್ದದ ಹೃಸ್ವರೂಪವಾದ ಅಕ್ಷರಗಳು.


ಈಗ ನಾನು ಕೂಡ ಇವರಿಗೆ ಒಬ್ಬ ಮನುಷ್ಯನಲ್ಲ. ಒಂದು ಅಕ್ಷರ ಅಥವಾ ಒಂದು ಸಂಖ್ಯೆ ಅನ್ನಿಸಿತು ಬದರಿನಾರಾಯಣನಿಗೆ. ಇವರು ಮಾತಾಡದೆ ಇದ್ದಾಗ ನೆಲಸುವ ನಿಶ್ಯಬ್ಧತೆ ಒಂದು ರೀತಿಯಲ್ಲಿ ಹಿತಕರವಾಗಿತ್ತು. ಜೀವಕ್ಕೆ ತಂಪು ನೀಡುವ ನಿಶ್ಯಬ್ಧತೆ. ಶ್ರವಣ ಶಕ್ತಿಯೂ ಅದೃಶ್ಯವಾದ ಮೇಲೆ ಈ ತಂಪು ಶಾಶ್ವತವಾಗಬಹುದು. ಅದು ತುಂಬಾ ಸುಖಪ್ರದವಾಗಿರಬಹುದು. ನಿಜವಾದ ಶಾಂತಿಯೆಂದರೆ ಅದೆ ಇರಬಹುದು. ಸಾವು ಎಂದರೆ ಅದೆ ಆಗಿರಬಹುದೆ? ಸಾವು ಅಷ್ಟು ಸುಖಕರವಾದ ದಿವ್ಯಾನುಭಾವವಾಗಿರಬಹುದೆ?  ಮೋಕ್ಷವೆಂದರೆ ಅದೆ ಏನು?


ಬದರಿನಾರಾಯಣ ಈಗ ಬದುಕನ್ನು ಬಯಸುವಷ್ಟೆ ತೀವೃವಾಗಿ ಮೋಕ್ಷವನ್ನೂ ಬಯಸತೊಡಗಿದ. ಮರಳಿ ಬದುಕಿಗೆ ಬರುವ ಬಯಕೆ ಎಷ್ಟು ತೀವೃವಾಗಿತ್ತೋ - ಪುನರ್ಜನ್ಮದ ಬಯಕೆಯೂ ಅಷ್ಟೆ ತೀವೃವಾಗಿತ್ತು. ಕ್ಷಣದಿಂದ ಕ್ಷಣಕ್ಕೆ ಪುನರ್ಜನ್ಮದ ಬಯಕೆಯೆ ಬಲಗೊಳ್ಳುತ್ತಾ ಹೋಯಿತು. ಬಹುಶಃ ಇದು ಸಾವನ್ನು ಸಮೀಪಿಸುವ ಮುನ್ಸೂಚನೆಯಾಗಿರಬಹುದೆ? ವೇದನೆಯಿಲ್ಲದ ಸ್ಥಿತಿ - ದುಃಖವಿಲ್ಲದ ಸ್ಥಿತಿ - ಜೀವ ಅತ್ಯಂತ ಸಶಕ್ತವಾಗಿರುವ ಸ್ಥಿತಿ.


ಆದರೆ ಆ ಸ್ಥಿತಿಯಲ್ಲಿ ಒಂದು ಅಪಸ್ವರದಂತೆ ಕಾಡುತ್ತಿದ್ದುದು ಡಾಕ್ಟರುಗಳಾಡುತ್ತಿದ್ದ ಮಾತುಗಳು. ಈ ಶ್ರವಣ ಶಕ್ತಿಯೂ ಬೇಗನೆ ಹೊರಟು ಹೋಗಲಿ ಎಂದೂ ಕೂಡ ಅವನಿಗೆ ಅನಿಸದಿರಲಿಲ್ಲ. ಆದರೆ ಕೇವಲ ಅನಿಸಿಕೆ ಮಾತ್ರˌ ಬಯಕೆಯಲ್ಲ. ಯಾಕೆಂದರೆˌ ಇದು ಇಹಲೋಕದೊಂದಿಗೆ ಅವನಿಗಿದ್ದ ಕೊನೆಯ ಕೊಂಡಿಯಾಗಿತ್ತು. ಈ ಕೊಂಡಿ ಕಳಚಿತೆಂದರೆ ಮತ್ತೆ ಬರುವ ಆಸೆಯಿಲ್ಲ.


ಏನೋ ಮಾಡಿˌ ಕತ್ತಲೆಯನ್ನು ಮತ್ತು ಪರಿಪೂರ್ಣ ನಿಶ್ಯಬ್ಧತೆಯನ್ನು ಬಿಟ್ಟು ಎಲ್ಲರೂ  ಹೊರಟು ಹೋದರು. ಎಲ್ಲಿಂದಲೋ ಎಂಬಂತೆ ಕೇಳಿಸುತ್ತಿರುವ ಎಲೆಕ್ಟ್ರಾನಿಕ್ ಗಡಿಯಾರದ ಚಕ್ ಚಕ್ ಎಂಬ ದನಿಯಿಂದ ಮಾತ್ರವೆ ತನ್ನ ಶ್ರವಣಶಕ್ತಿ ನಷ್ಟವಾಗಿಲ್ಲ ಎಂದು ಬದರಿನಾರಾಯಣ ಅರ್ಥೈಸಿಕೊಳ್ಳಬೇಕಿತ್ತು.


ಆಪರೇಷನ್ಗಾಗಿ ಆಸ್ಪತ್ರೆ ಸೇರುವ ಹಿಂದಿನ ದಿನ ಸುಪ್ರಿಯಾ ನ್ಯೂಯಾರ್ಕಿನಿಂದ ಮಾತಾಡಿದ್ದಳು. ಬದರಿನಾರಾಯಣನೆ ಫೋನು ಮಾಡಿದ್ದ. "ಇಲ್ಲಿಗೆ ಬಂದು ಐದು ವರ್ಷವಾಗ್ತಾ ಬಂತು. ನಿಮ್ಮನ್ನು ನೋಡಬೇಕು ಅನ್ನುವ ಮನಸಾಗ್ತಿದೆ ಅಂಕಲ್" ಎಂದಿದ್ದಳು. ತನ್ನ ಆಪರೇಷನ್ ಕುರಿತು ಅವನು ಅವಳಿಗೆ ಹೇಳಲಿಲ್ಲ. ಅವನನ್ನು ಹಚ್ಚಿಕೊಂಡವರು ಬೇರೆ ಯಾರೂ ಇರಲಿಲ್ಲ. ಅವನಿಗೆ ಕೂಡಿ ಹಾಗೆ ಅಷ್ಟು ಪ್ರೀತಿಪಾತ್ರ ವ್ಯಕ್ತಿ ಬೇರೆ ಇರಲಿಲ್ಲ.ಅದು ದೇವೇಚ್ಛೆಯಂತೆ ಉಂಟಾದ ಸಂಬಂಧ ಎಂದು ಅವನು ಭಾವಿಸಿದ್ದ. ತನಗೆ ಆಪರೇಷನ್ ಎಂದು ತಿಳಿದರೆ ಸುಪ್ರಿಯಾ ತಟ್ಟನೆ ಬಂದು ಬಿಡಬಹುದೆಂದನಿಸಿತ್ತು. "ನೀನು ಇತ್ತ ಬರುವುದು ಬೇಡˌ ಇಲ್ಲಿ ತೊಂದರೆಯಿದೆ. ನಾನೆ ಒಂದೆರಡು ತಿಂಗಳುಗಳ ನಂತರ ಅಲ್ಲಿಗೆ ಬರ್ತೇನೆ" 

"ಏನು ಅಂಕಲ್ ತೊಂದರೆ?"

 "ನಿನ್ನ ಅಪ್ಪ ಬಂದಿದಾನೆ"

 "ಹೌದೆ?" 

"ಹೌದು ಸುಪ್ರಿಯಾˌ ಹೊರ ಬಂದು ಐದು ವರ್ಷವಾಯ್ತಂತೆ. ಒಂದು ಉದ್ದನೆಯ ಕಥೆ ಹೇಳಿದ" 


"ಏನು ಕಥೆ"

"ಅದೀಗ ಬೇಡˌ ಅದೇನಿದ್ದರೂ ಅವನಿಗೆ ಮಾತ್ರ ಸಂಬಂಧಪಟ್ಟದ್ದು. ನಿನಗೂ ಅದಕ್ಕೂ ಸಂಬಂಧವಿಲ್ಲ. ನೀನು ಅಲ್ಲೆ ಚೆನ್ನಾಗಿರು. ಅವಕಾಶವಾದಾಗ ನಾನೆ ಅಲ್ಲಿಗೆ ಬರುತ್ತೇನೆ. ನೀನು ಇಲ್ಲಿಗೆ ಬಂದು ನಿನ್ನಪ್ಪನ ಬಾಯಿಗೆ ಬೀಳುವುದು ಬೇಡ. ಅವನು ಯಾವತ್ತೂ ನೀನಿದ್ದಲ್ಲಿಗೆ ಬರಲಾರ."


"ಈಗ ಬದರಿನಾರಾಯಣನಿಗೆ ಅನಿಸಿತು ತಾನು ಜಯಕರನ ದಾರಿ ತಪ್ಪಿಸಿದ್ದು ಹೇಗೆ ಎಂದು ಸುಪ್ರಿಯಾಳಿಗೆ ಹೇಳಬೇಕಾಗಿತ್ತು ಎಂದು. 

"ಸುಪ್ರಿಯಾ ಎಲ್ಲಿ?" ಎಂದು ಜಯಕರ ಆ ದಿನ ಕೇಳಿದ್ದಾಗˌ ಅನಿರೀಕ್ಷಿತ ಪ್ರಶ್ನೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಒಂದು ಕ್ಷಣ ಬೇಕಾಯಿತು. ಆದರೆ ಅಪೂರ್ವ ಪ್ರಸಂಗಾವಧಾನತೆಯ ಮನುಷ್ಯ ಬದರಿನಾರಾಯಣ.


"ಸುಪ್ರಿಯಾಳನ್ನು ನಾನು ನನ್ನ ಮಗಳಂತೆ ನೋಡಿಕೊಂಡೆ ಜಯಕರ. ಎಂಬಿಬಿಎಸ್ ವರೆಗೆ ಓದಿಸಿದೆ. ಆಮೇಲೆ ಎಂಡಿ ಓದಲು ಅಮೇರಿಕೆಗೆ ಕಳಿಸಿದೆ. ಅವಳು ಎಂಡಿ ಮುಗಿಸಿ ಅಲ್ಲೆ ಮದುವೆ ಮಾಡಿಕೊಂಡಳು. ಹುಡುಗನೂ ನಮ್ಮ ದೇಶದವನೆˌ ಪಂಜಾಬಿನವನು. ಅವನೂ ಡಾಕ್ಟರ್. ಅಲ್ಲಿಂದ ಅವರಿಬ್ಬರೂ ಕೆನಡಾಕ್ಕೆ ಹೋದರು. ಆರು ತಿಂಗಳ ಹಿಂದೆ ಕೆನಡಾದಿಂದ ಪತ್ರ ಬಂತು. ಅದು ಅವಳು ಕೆನಡಾದಿಂದ ಬರೆದಿದ್ದ ಮೊದಲ ಪತ್ರ. ಅದರ ಬಳಿಕ ಅವಳ ಗಂಡನಿಂದ ಒಂದು ಪತ್ರ ಬಂತು. ಅದರಲ್ಲಿ ಒಂದು ಆಕ್ಸಿಡೆಂಟಲ್ಲಿ ಸುಪ್ರಿಯಾ ಮೃತಳಾದಳು ಎಂದಿತ್ತು. ಸುಪ್ರಿಯಾ ಬರೆದ ಮೊದಲ ಪತ್ರದಲ್ಲಿ ಒಂದು ಆಸ್ಪತ್ರೆಯ ವಿಳಾಸವಿತ್ತು. ಅವಳ ಗಂಡನಿಂದ ಬಂದ ಪತ್ರದಲ್ಲಿ ಯಾವುದೆ ವಿಳಾಸವಿರಲಿಲ್ಲ" ಇಷ್ಟು ಕಥೆ ಸಾಕು ಎಂದು ಬದರಿನಾರಾಯಣ ನಿಲ್ಲಿಸಿದ.


- ಕೂಡ್ಲು ತಿಮ್ಮಪ್ಪ ಗಟ್ಟಿ.

21 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೧.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೧.👊

ತುಂಬಾ ಹೊತ್ತು ಅತ್ತಿತ್ತ ಹೊರಳಾಡುತ್ತಿದ್ದರೂ ಸಹ ನಿದ್ರೆ ಮತ್ತವನ ಕಣ್ಣುಗಳ ಹತ್ತಿರ ಸುಳಿಯಲಿಲ್ಲ. ವ್ಯಥಾ ಪ್ರಯತ್ನ ನಡೆಸುತ್ತಾ ಮತ್ತೊಂದಷ್ಟು ಹೊತ್ತು ಅವನು ಹಾಸಿಗೆಯಲ್ಲೆ ಸೆಣೆಸಿದ. ಒಂಥರಾ ವ್ಯಥೆಯ ಕಂಪನಗಳು ಅವನ ಕೈ ಕಾಲುಗಳ ನರಗಳಲ್ಲಿ ಏಳಲಾರಂಭಿಸಿತು. ಇದವನ ಹಳೆಯ ವೈಕಲ್ಯಗಳಲ್ಲೊಂದು. ಯಾವುದಾದರೂ ಸ್ಥಳದಲ್ಲಿ ಕೊಂಚ ಸಮಯವಾದರೂ ಇದ್ದು ಅಲ್ಲಿನ ಪರಿಸರದೊಂದಿಗೆ ಅನುಬಂಧದ ಎಳೆ ಬೆಸೆದ ನಂತರ ಆ ಜಾಗವನ್ನು ಬಿಟ್ಟು ಹೊರಡಬೇಕಾದ ಹೊತ್ತೆದುರಾಗುವ ಕ್ಷಣ ಹತ್ತಿರವಾಗುತ್ತಿದ್ದಂತೆ ಇಂತಹ ಕೌತುಕದ ಚೋದಕರಸ ಅವನ ನಾಡಿಗಳಲ್ಲಿ ಹರಿವ ನೆತ್ತರ ಸೇರಿ ಮಿಡಿಯಲಾರಂಭಿಸುತ್ತದೆ. ಹಾಗೆ ತನಗೆ ಮಾತ್ರ ಆಗೋದ? ಅಥವಾ ಎಲ್ಲಾ ನರಮನುಷ್ಯರಿಗೂ ಇದು ಸಾಮಾನ್ಯವ? ಅನ್ನುವ ಗೊಂದಲ ಅವನೊಳಗೆ ಅನುಗಾಲದೊಂದಿಗೂ ಇದೆ.

ಅವನಿಗೆ ನೆನಪಿರುವಂತೆ ಸಣ್ಣ ಪ್ರಾಯದಲ್ಲಿ ಬೇಸಿಗೆ ಹಾಗೂ ದಸರಾ ರಜೆಗೆ ಅವ ಅಮ್ಮ ಅಂತಲೆ ಸಂಬೋಧಿಸುತ್ತಿದ್ದ ಅಜ್ಜಿಯ ಊರಿಗೆ ಅವರ ಜೊತೆ ಹೋಗಿ ಪುನಃ ರಜೆ ಮುಗಿದು ಮನೆಗೆ ಹಿಂದಿರುಗುವ ದಿನ ಹತ್ತಿರವಾಗುತ್ತಿದ್ದಂತೆ ಇಂತಹ ಅನುಭವವಾಗುತ್ತಿತ್ತು ಅನ್ನೋದು ಅವನ ನೆನಪಿನಲ್ಲಿದೆ. ತೀರ ಹೊರಡುವ ದಿನದ ಹಿಂದಿನ ರಾತ್ರಿಯಂತೂ ಇದರ ಪ್ರಭಾವ ಹೆಚ್ಚಿ ಥೇಟ್ ಹೀಗೆಯೆ ರಾತ್ರಿ ಎಚ್ಚರವಾಗಿ ಮತ್ತೆ ನಿದ್ರೆ ಬರದೆ ಪರದಾಡುತ್ತಿದ್ದ. ಮನೆಯಲ್ಲೆಲ್ಲರೂ ಮಲಗಿ ಗೊರಕೆ ಹೊಡೆಯುತ್ತಿದ್ದ ಹೊತ್ತಿಗೆ ಚಾಪೆಯಲ್ಲಿ ಹೊರಳಾಡಿ ನಿದ್ರೆ ಹತ್ತದೆ ಮತ್ತೆದ್ದು ಕೂತೆ ಬೆಳಕು ಹರಿಸುತ್ತಿದ್ದ. ಅಮ್ಮನೋ ಚಿಕ್ಕಮ್ಮನೋ ಚುಮುಚುಮು ಮುಂಜಾನೆ ಎಲ್ಲರಿಗಿಂತಲೂ ಮೊದಲೆದ್ದು ಮನೆ ಕೆಲಸಕ್ಕೆ ತೊಡಗಿದಾಗ ಬಿಡುಗಡೆ ಸಿಕ್ಕಂತೆ ಅನ್ನಿಸಿ ಅವರ ಬೆನ್ನು ಹಿಡಿದೆದ್ದು ಹೋಗುತ್ತಿದ್ದ.

ಹತ್ತರ ಪ್ರಾಯದಲ್ಲಿ ಕಾರ್ಕಳದ ಹಾಸ್ಟೆಲ್ ವಾಸ ಆರಂಭವಾದ ನಂತರವಂತೂ ಇದು ಅತಿಯಾಯಿತು. ಸಾಮಾನ್ಯವಾಗಿ ಮಾರ್ಚ್ ತಿಂಗಳ ಇಪ್ಪತ್ತೈದರ ಹೊತ್ತಿಗೆಲ್ಲ ಪರಿಕ್ಷೆಗಳು ಮುಗಿದು ಎಲ್ಲರೂ ಅವರವರ ಮನೆಗಳಿಗೆ ಹಿಂದಿರುಗಿ ಅವನ ಹಾಗೂ ಸಿಬ್ಬಂದಿಗಳ ಹೊರತು ಇಡಿ ವಿದ್ಯಾರ್ಥಿ ನಿಲಯ ಖಾಲಿ ಹೊಡೆಯುತ್ತಿದ್ದ ಕಾಲ ಅದು. ನಿಯಮಗಳ ಪ್ರಕಾರ ಆ ವರ್ಷದ ಫಲಿತಾಂಶ ಬರುವ ಎಪ್ರಿಲ್ ಹತ್ತರ ತನಕ ಅದನ್ನ ಮುಚ್ಚುವಂತಿರಲಿಲ್ಲವಾಗಿ ಅವನನ್ನ ಮನೆಗೆ ಕರೆದಿಟ್ಟುಕೊಳ್ಳಲು ಇಷ್ಟವಿಲ್ಲದ "ಓದಿಸಲು ಕರೆದುಕೊಂಡು ಹೋಗಿದ್ದ" ಚಿಕ್ಕಪ್ಪ-ಚಿಕ್ಕಮ್ಮ ಅಲ್ಲಿಯವರೆಗೂ ಅಲ್ಲೆ ಇಟ್ಟುಕೊಳ್ಳುವಂತೆ ತಾಕೀತು ಮಾಡಿರುತ್ತಿದ್ದರಿಂದ ಅನಿವಾರ್ಯವಾಗಿ ಮತ್ತೆರಡು ವಾರ ಅಲ್ಲಿರಲೆ ಬೇಕಿದ್ದ ಪರಿಸ್ಥಿತಿಯಲ್ಲಿ ಅವನಿರುತ್ತಿದ್ದ. ಮನಸು ಮಾಡಿದ್ದರೆ ಮನೆಗೆ ಕರೆಸಿಕೊಳ್ಳದಿದ್ದರೂ ಊರಿಗಾದರೂ ಕಳಿಸಿ ಅವನ ಕ್ಲೇಶವನ್ನವರು ಕಡಿಮೆ ಮಾಡಬಹುದಿತ್ತು. ಆದರೆ ಶಿಕ್ಷಕರಾಗಿದ್ದ ಅವರಿಬ್ಬರಿಗೂ ತಮ್ಮ ಮುಂಬಡ್ತಿಯ ಇಲಾಖಾ ಪರಿಕ್ಷೆಗಳು ಶಾಲಾ ರಜಾ ಸಮಯದಲ್ಲೆ ಇರುತ್ತಿದ್ದರಿಂದ ಅವನ ಅವಶ್ಯಕತೆ ರಜೆಯಲ್ಲಿರುತ್ತಿದ್ದು ರಜಾವಧಿಯ ಅರ್ಧ ಅಲ್ಲಿ ಹೋಗಿ ಮನೆ ಕಾಯುವ ಕೆಲಸ ಮಾಡಬೇಕಿತ್ತು. ಅದು ಮುಗಿದ ನಂತರವೆ ಕೆಲದಿನಗಳ ಮಟ್ಟಿಗೆ ಮಾತ್ರ ಊರಿಗೆ ಹೋಗಿ ಬರಲು ಅನುಮತಿ ಸಿಗುತ್ತಿತ್ತು. ಹಾಗೆ ನೋಡಿದರೆ ಪರಿಕ್ಷೆ ಆರಂಭವಾಗುವಾಗಲೆ ಮನೆಗೆ ಹೋಗುವ ದಿನಗಳ ಲೆಕ್ಖವನ್ನ ನೋಟುಬುಕ್ಕಿನ ಕೊನೆಯ ಪುಟದಲ್ಲಿ ಬರೆದಿಟ್ಟು ದಿನಕ್ಕೊಂದು ಸಂಖ್ಯೆಯ ಮೇಲೆ ಪೆನ್ಸಿಲ್ಲಿನ ಗೆರೆ ಎಳೆದು ಆ ಸಂಭ್ರಮದ ದಿನ ಹತ್ತಿರವಾಗುತ್ತಿದ್ದ ಪುಳಕವನ್ನ ಅನುಭವಿಸುತ್ತಿದ್ದ. ಆದರೆ ಅವನ ಅತಿರೇಕದ ಅಂತಃರ್ದ್ವಂದ್ವದ ಪರಿಣಾಮ ಊರ ಹಾದಿ ಹಿಡಿಯುವ ಖುಷಿಯ ಕ್ಷಣಕ್ಕೆ ಇನ್ನೇನು ಒಂದೋ ಎರಡೋ ದಿನ ಮಾತ್ರ ಬಾಕಿ ಇರುವಾಗ ಈ ಕೌತುಕದ ಕಂಪನ ಇದ್ದಕ್ಕಿದ್ದಂತೆ ನರನಾಡಿಗಳಲ್ಲಿ ಎದ್ದು ನಟ್ಟನಡು ಇರುಳಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾಗಿ ಮತ್ತೆ ಮಲಗಲಾರದೆ ಪರಿತಪಿಸುತ್ತಿದ್ದ. ಭೂತಬಂಗಲೆಯಂತ ಅಷ್ಟು ದೊಡ್ಡ ವಿದ್ಯಾರ್ಥಿ ನಿಲಯದಲ್ಲಿ ಅವನೊಬ್ಬನೆ! ಅವನಿರುತ್ತಿದ್ದ ಕರ್ಮಕ್ಕೆ ತಾವೂ ಇರಲೆಬೇಕಾದ ಕಟ್ಟುಪಾಡಿಗೆ ಕಟ್ಟುಬಿದ್ದಿದ್ದ ಸಿಬ್ಬಂದಿ ತಮ್ಮ ತಮ್ಮ ಕೋಣೆಯಲ್ಲಿ ಮಾರ್ಚ್ ಎಪ್ರಿಲ್ಲಿನ ಸೆಖೆಗೆ ಪಂಖ ಹಾಕಿಕೊಂಡು ಮಲಗಿ ಗೊರಕೆ ಹೊಡೆಯುತ್ತಿದ್ದರು. ಇನ್ನು ನಿದ್ರೆ ಮಾಡಲಾರೆ ಅಂತನಿಸಿದ ಮೇಲೆ ಮೇಲೆದ್ದು ಮೆಲ್ಲನೆ ಬಾಗಿಲು ತೆಗೆದು ವರಾಂಡದ ಮೆಟ್ಟಿಲ ಮೇಲೆ ಮಂಡಿಗಳ ಮೇಲೆ ಮುಖ ಒರಗಿಸಿ ಕೂತು ಸುಮ್ಮನೆ ಬಾನ ಮಿನುಗುತಾರೆಗಳನ್ನೋ ಇಲ್ಲಾˌ ಆ ಹೊತ್ತಿನಲ್ಲಿ ಹೊಳೆಯುವ ಶುಕ್ರಗ್ರಹವನ್ನೋ ಕಾಣುತ್ತಾ ಸರಿಯಾಗಿ ಬೆಳಗಾಗುವವರೆಗೂ ಕೂತಿರುತ್ತಿದ್ದ.

ಮಂಗಳೂರಿನ ಆಶ್ರಮ ಸೇರಿದ ನಂತರವೂ ಇದು ಕಡಿಮೆಯಾಗಲಿಲ್ಲ. ಅಲ್ಲಿ ಮನೆಗೆ ಹೋಗಲು ಬಿಡುತ್ತಿದ್ದುದೆ ಕಡಿಮೆ. ಮಕ್ಕಳನ್ನ ಎರಡೆರಡು ತಂಡ ಮಾಡಿ ಒಂದು ತಿಂಗಳ ದಸರಾ ರಜೆಗೆ ಒಂದೊಂದು ತಂಡವನ್ನ ಎರಡೆರಡು ವಾರ ಮನೆಗೆ ಕಳಿಸಿದರೆˌ ಅದೆ ಎರಡು ತಿಂಗಳ ಬೇಸಿಗೆ ರಜೆಯಲ್ಲಿ ಕೇವಲ ಒಂದೊಂದು ತಿಂಗಳಷ್ಟೆ ಮನೆ ಮುಖ ನೋಡಬಹುದಿತ್ತು. ಈ ಸಲ ಮೊದಲ ತಿಂಗಳು ರಜೆ ಅನುಭವಿಸುವ ತಂಡಕ್ಕೆ ಮರುವರ್ಷ ಎರಡನೆ ತಿಂಗಳು ರಜಾಭಾಗ್ಯ ಲಭ್ಯವಾಗುತ್ತಿತ್ತು. ಅವಾಗಲೂ ತಿಂಗಳ ಹಿಂದೆಯೆ ಉಳಿದ ದಿನಗಳ ಲೆಕ್ಖ ಬರೆದಿಡೋದು - ದಿನಕ್ಕೊಂದರ ಮೇಲೆ ಗೆರೆ ಎಳೆಯೋದು ಎಲ್ಲಾ ಮಾಮೂಲೆ. ಆದರೆ ಹೋಗುವ ದಿನದ ಹಿಂದಿನೆರಡು ಮೂರು ದಿನ ಅರಿಯದ ಕಾರಣಕ್ಕೆ ವಿಪರೀತ ತಳಮಳವಾಗಿ ರಾತ್ರಿಯ ನಿದ್ರೆ ಹಾರಿ ಹೋಗುತ್ತಿತ್ತು.

ಅದಲ್ಲಿಂದ ಹೋಗುವ ಬಿಡುಗಡೆಯ ಖುಷಿಗೋ ಇಲ್ಲಾ ಇದನ್ನೆಲ್ಲಾ ಬಿಟ್ಟು ನಡೆಯಬೇಕಲ್ಲ! ಅನ್ನುವ "ಸ್ಟಾಕ್ ಹೋಂ ಸಿಂಡ್ರೋಮ್" ಲಕ್ಷಣವೋ ಅನ್ನುವ ಅನುಗಾಲದ ಗೊಂದಲ ಅವನಿಗೆ ಇದ್ದೆ ಇದೆ. ಈಗಲೂ ಸಹ ಪ್ರಯಾಣಿಸುವಾಗ ನಿಗದಿತ ಗುರಿ ಹತ್ತಿರವಾದಂತೆಲ್ಲ ಅವನಿಗೆ ಅದೆ ಬಗೆಯ ದೈಹಿಕ ತಳಮಳ ಏಳೋದಿದೆ. ದೂರದೂರಿನಲ್ಲಿ ಬಹುಕಾಲವಿದ್ಧು ಮನೆಗೆ ಮರಳುವ ಹಂತದಲ್ಲೂ ಹಾಗೆ ಆಗಿರೋದಿದೆ. ಅದೇನು ಹಿತಾನುಭಾವವೋ? ಹೆದರಿಕೆಯ ಸೂಚನೆಯೋ! ಒಂದೂ ಅರ್ಥವಾಗದಂತಿದ್ದಾನವನು. ಒಟ್ಟಿನಲ್ಲಿ ಅದೊಂದು ಗೊಂದಲದ ಹುತ್ತವಾಗಿ ಅವನನ್ನ ಆವರಿಸಿಯೆ ಉಳಿದಿದೆ. ಇಂದು ನಡುರಾತ್ರಿ ನಿದ್ರೆ ಜಾರಿದವ ಅದೆ ಮನಸ್ಥಿತಿಯಲ್ಲಿದ್ದ.

*****

ಅಂಧೇರಾ ಪಾಗಲ್ ಹೈಂ
ಕಿತನಾ ಘನೇರಾ ಹೈಂ
ಚುಪತಾ ಹೈಂ ಢಸತಾ ಹೈಂ
ಫಿರ್ ಭೀ ವಹಂ ಮೇರಾ ಹೈಂ.

ಉಸ ಕೀ ಹೀ ಗೋಧೀ ಮೈ
ಸರ್ ರಖ್ ಕೇ ಸೋನಾ ಹೈಂ.
ಉಸ ಕೀ ಹೀ ಬಾಹೋಂ ಮೈ
ಚುಪ್ ಕೇ ಸೇ ರೋನಾ ಹೈಂ.
ಆಂಖೋ ಸೇ ಕಾಜಲ್ ಬನ್
ಬೆಹೆತಾ ಅಂಧೇರಾ ಆಜ್.

ಕೈಫೋನಿನಲ್ಲಿ ಶಂತನು ಮೊಯಿತ್ರನ ಹಾಡುಗಳನ್ನ ಹಾಕಿಕೊಂಡ. ಬಾಕಿ ಉಳಿದ ಹೊತ್ತನ್ನ ಕಳೆಯಲು ಅದೆ ಸೂಕ್ತ ಅನಿಸಿತವನಿಗೆ. ಸ್ವಾನಂದ ಕಿರ್ಕಿರೆ ಅವರೆ ಬರೆದ ಸಾಲುಗಳನ್ನ ಚಿತ್ರಕ್ಕನ ಯುಗಳದಲ್ಲಿ ಗುನುಗುಡುತ್ತಿದ್ದರು.

ನಿಶಾಚರನಂತೆ ನಟ್ಟಿರುಳಿನಲ್ಲೆದ್ದು ಬಾಗಿಲು ತೆಗೆದು ಹೊರಗಿನ ಬಾಲ್ಕನಿಯಲ್ಲಿ ಕುರ್ಚಿ ಹಾಕಿಕೊಂಡು ಕೂತ. ಊರು ನಿಶ್ಯಬ್ಧವಾಗಿತ್ತು. ಬಹುತೇಕ ನಿದ್ರೆಯ ತೆಕ್ಕೆಯಲ್ಲಿ ಊರ ಮಂದಿ ಹುದುಗಿದ್ದರು. ಮೆಲುವಾಗಿ ಬೀಸುತ್ತಿದ್ದ ತಂಗಾಳಿ ತನ್ನೊಂದಿಗೆ ಧೂಳಿನ ಕಣಗಳ ಜೊತೆಜೊತೆಗೆ ಹತ್ತಿರದ ಹೆದ್ದಾರಿಯಲ್ಲಿ ಸಾಗುವ ಭಾರಿ ವಾಹನಗಳದ್ದೋˌ ತುಸು ದೂರದ ರೈಲು ನಿಲ್ದಾಣದಲ್ಲಿ ಗಡಗಡಿಸುತ್ತಾ ಓಡುವ ಅನಾಮಿಕ ಊರಿನ ರೈಲು ಬಂಡಿಗಳದ್ದೋ ಸದ್ದನ್ನೂ ಹೊತ್ತು ತರುತ್ತಿತ್ತು. ಬೆಳ್ಳಿಚುಕ್ಕಿ ಮೂಡಣದಲ್ಲಿ ಢಾಳವಾಗಿ ಹೊಳೆಯುತ್ತಾ ಮಿನುಗುತ್ತಿತ್ತು. ವಾಸ್ತವದಲ್ಲಿ ಅದು ಶುಕ್ರ ಗ್ರಹ. ಗ್ರಹವೊಂದನ್ನ ಅದ್ಯಾಕೆ ನಮ್ಮ ಹಿರಿಯರು ಚುಕ್ಕಿಯೆಂದು ಕರೆದರೋ! ಅವರಿಗೂ ಅದು ಅಷ್ಟು ಗಾಢವಾಗಿ ಇರುಳ ಆಗಸದಲ್ಲಿ ಹೊಳೆಯುವುದನ್ನು ಕಾಣುವಾಗ ತನಗೀಗ ಆಗುವಂತೆ ತಳಮಳದ ಅನುಭವವಾಗುತ್ತಿತ್ತೇನೋ ಅಂದುಕೊಂಡು ನಸು ನಕ್ಕ.

( ಇನ್ನೂ ಇದೆ.)

https://youtu.be/Cq5PR-9mUN4


20 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೦.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೦.👊


ರಾತ್ರಿಯ ನಾಯರನ ಕ್ಯಾಂಟೀನಿನ ಊಟಕ್ಕೆ ಹೊರಡುವ ಮೊದಲೆ ಮಂಗಳವಾರ ಸಂಜೆಯ ರೈಲಿನಲ್ಲಿ ಹೊರಟು ಮರುದಿನ ಬುಧವಾರ ಬೆಳ್ಳಂಬೆಳಗ್ಯೆ ಬೆಂಗಳೂರಿನಿಂದ ಹೊರಟು ಬರುವ ಐಲ್ಯಾಂಡ್ ಎಕ್ಸಪ್ರೆಸ್ಸಿಗೆ ಪಾಲ್ಘಾಟಿನಲ್ಲಿ ಬದಲಾಯಿಸಿಕೊಳ್ಳಲು ಅನುಕೂಲವಾಗುವಂತೆ ಕನ್ಯಾಕುಮಾರಿಗೆ ಟಿಕೇಟನ್ನ ಮುಂಗಡವಾಗಿ ಕಾಯ್ದಿರಿಸಿದ್ದ. ಇಲ್ಲಿಂದ ಮುಂದೆ ಅಲ್ಲಿಗೆ ಹೋಗಲು ನಿರ್ಧರಿಸಿದ್ದನಾದರೂ ಅಲ್ಲಿ ಅದೆಷ್ಟು ದಿನ ಇರೋದು ಅನ್ನುವ ಬಗ್ಗೆ ಅವನಿಗೇನೆ ಖಚಿತತೆ ಇರಲಿಲ್ಲ. ಕನ್ಯಾಕುಮಾರಿಯ ವಿವೇಕಾನಂದಪುರಂನ ಶಾಶ್ವತ ದತ್ತಿದಾತರಲ್ಲಿ ಅವನೂ ಒಬ್ಬನಾಗಿದ್ದ. ಅದರಿಂದಾಗುತ್ತಿದ್ದ ಅನುಕೂಲವೆಂದರೆ ಬಯಸಿದಾಗ ವರ್ಷಕ್ಕೊಂದಾವರ್ತಿ ಅಲ್ಲಿಗೆ ಹೋಗಿ ಎರಡು ವಾರ ಅಲ್ಲಿನ ಒಂದು ಕೋಣೆಯ ಕಾಟೇಜಿನಲ್ಲಿ ಖರ್ಚಿಲ್ಲದೆ ಇದ್ದು ಬರುವ ಅವಕಾಶ ಅವನಿಗಿತ್ತು. 


ಬಾಳಿನಲ್ಲಿ ಅಸಹಾಯಕತೆ ಕಾಡಿ ವಿಹ್ವಲ ಮನಸ್ಥಿತಿ ವಿಪರೀತ ಕಾಡಿಸಿದ್ದಾಗ ಮೊತ್ತ ಮೊದಲ ಸಲ ಬರಿಗೈಯಲ್ಲಿ ಅಲ್ಲಿಗೆ ಹೋಗಿದ್ದ ನೆನಪಾಗಿ ಮಂದಹಾಸ ಮುಖದಲ್ಲಿ ಮಿನುಗಿತು. ಹೆಚ್ಚಿನ ಓದನ್ನೆ ಗುರಿಯಾಗಿಸಿಕೊಂಡು ರಾಜಧಾನಿಗೆ ಎರಡೂ ಕಾಲು ದಶಕಗಳ ಹಿಂದೆ ಬಂದಿದ್ದವ ಪಿಯುಸಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿದ್ದ ಹಣವಿಲ್ಲದೆ ದಿಕ್ಕೆಟ್ಟ ಪರಿಸ್ಥಿತಿಯಲ್ಲಿ ರೈಲು ನಿಲ್ದಾಣಕ್ಕೆ ಬಂದವನ ಜೇಬಿನಲ್ಲಿ ಅಂದು ಕನ್ಯಾಕುಮಾರಿಯ ಟಿಕೇಟು ಖರೀದಿಸಿದ ಅನಂತರ ಐವತ್ತು ರೂಪಾಯಿ ಮಾತ್ರ ಉಳಿದಿತ್ತು. 


ಹಿಂದಿರುಗಿ ಬರುವ ಯೋಚನೆಯನ್ನೆ ಇಟ್ಠುಕೊಳ್ಳದೆ ಆಗಿದ್ದಾಗಲಿ ಅಂದುಕೊಂಡು ಕೇವಲ ಅಷ್ಟನ್ನೆ ಹಿಡಿದು ಭಂಡಧೈರ್ಯದಿಂದ ಕಂಡಿರದ ಊರಿಗೆ ಹೊರಟಿದ್ದ. ಪರಿವ್ರಾಜಕನಾಗಿ ಕಾಲಯಾಪನೆ ಮಾಡಿ ಮುಂದಿನ ಜೀವನ ಸವೆಸುವ ವೈರಾಗ್ಯ ಹೊತ್ತು ಹೊರಟಿದ್ದ ಅವನನ್ನ ಅಲ್ಲಿ ಮಾಮಾಜಿ ಕೂರಿಸಿಕೊಂಡು ಮಮತೆಯಿಂದ ಅವನ ಇತ್ಯೋಪರಿಗಳನ್ನ ವಿಚಾರಿಸಿ ಧೈರ್ಯ ತುಂಬಿ ತನ್ನದೆ ಕೋಣೆಯಲ್ಲಿರಿಸಿಕೊಂಡು ಉಡಲು ಪಂಚೆ - ತೊಡಲು ಅಂಗಿ ಕೊಡಿಸಿˌ ಕೈಯಲ್ಲಿ ದುಗ್ಗಾಣಿಯಿರದಿದ್ದ ಅವನನ್ನ ಸ್ವಯಂ ಸೇವಕರ ಊಟದ ಮನೆಯಲ್ಲೆ ಉಣ್ಣಲು ವ್ಯವಸ್ಥೆ ಮಾಡಿ ಐದು ದಿನ ಉಳಿಸಿಕೊಂಡುˌ ಬೆಂಗಳೂರಿನ ಮರು ಪಯಣದ ರೈಲು ಬಂಡಿಯ ಟಿಕೇಟು ತೆಗಿಸಿಕೊಟ್ಟು ಖರ್ಚಿಗೆ ನೂರು ರೂಪಾಯಿ ಜೇಬಿನಲ್ಲಿಟ್ಟು ಬೆನ್ನು ತಟ್ಟಿ ಹಿಂದಿರುಗಿ ಕಳಿಸಿದ್ದರು.


ಮರಳಿ ಬಂದಿಳಿದಾಗ ಅವನ ಜೇಬಿನಲ್ಲಿ ಖರ್ಚು ಕಳೆದು ಐವತ್ತು ರೂಪಾಯಿ ಉಳಿದಿತ್ತು. ಈ ಐವತ್ತರ ಸಂಖ್ಯೆಗೂ ಅವನಿಗೂ ಅವಿನಾಭಾವ ಸಂಬಂಧ. ಅವನ ಮೊದಲ ಸಂಪಾದನೆ ಅದೆ ಐವತ್ತು ರೂಪಾಯಿ. ಅಡುಗೆ ಕೆಲಸ ಮಾಡುವಾಗ ಅಲ್ಲಿ ಸಂಪಾದನೆಯಾಗುತ್ತಿದ್ದುದು ಸಹ ಐವತ್ತು ರೂಪಾಯಿ. ಊರು ಬಿಟ್ಟು ಬೆಂಗಳೂರಿನ ಹಾದಿ ಹಿಡಿದಿದ್ದಾಗ ದಾರಿಯ ಖರ್ಚಿಗೆ ಬಾಲ್ಯಮಿತ್ರ ಸುಶ್ರುತ ಕೊಟ್ಟಿದ್ದು ಅವನ ಪಾಕೆಟ್ ಮನಿಯ ಉಳಿಕೆಯ ಐವತ್ತು ರೂಪಾಯಿ. ಕಾಕತಾಳೀಯವಾಗಿ ಐವತ್ತು ಇವನ ಅದೃಷ್ಟ ಬದಲಿಸಿದಾಗಲೆಲ್ಲಾ ಜೇಬಿನಲ್ಲಿದ್ದ ಹಣದ ಮೊತ್ತವಾಗಿತ್ತು. 


ಅಂದು ಮಾಮಾಜಿ ಈ ಅಪರಿಚಿತ ದಿಕ್ಕೆಟ್ಟವನಲ್ಲಿ ತೋರಿದ್ದ ಸಹೃದಯತೆ ಅವನ ಆತ್ಮವಿಶ್ವಾಸ ಸಹಜವಾಗಿ ಹೆಚ್ಚಿಸಿತ್ತು. ಬಾಳಿನ ಕವಲು ದಾರಿಯಲ್ಲಿ ನಿಂತಿದ್ದ ನಿಸ್ಪೃಹತೆಯ ಹೊತ್ತಿನಲ್ಲಿ ಅವನಿಗೆ ಅಂತಹ ಒಂದು ಧೈರ್ಯದ ಮಾತುಗಳ - ಪ್ರೋತ್ಸಾಹದ ನುಡಿಯ ಅವಶ್ಯಕತೆಯಿದ್ದ ಕಾಲ ಅದು. ಮೊದಲ ಸಲ ಅಲ್ಲಿಂದ ಮರಳಿ ಬಂದಿದ್ದವ ಅಲ್ಲಿಲ್ಲಿ ಓಡಾಡಿ ಅವರಿವರಲ್ಲಿ ಕಾಡಿಬೇಡಿ ಕೆಲಸವನ್ನೂ ಹಿಡಿದು ಓದನ್ನೂ ಮುಂದುವರೆಸಿದ. ಖಾಲಿ ಕೈಯಲ್ಲಿ ಅಂದು ಹೋಗಿದ್ದ ಕನ್ಯಾಕುಮಾರಿಯಲ್ಲಿ ಇಂದು ಅವನೂ ಒಬ್ಬ ದತ್ತಿಕೊಟ್ಟ ದಾನಿ! ಅರಿವಿಲ್ಲದಂತೆ ಬಾಳು ಪೂರ್ತಿ ಮುನ್ನೂರರವತ್ತು ಡಿಗ್ರಿ ಕೋನದಲ್ಲಿ ಬದಲಾವಣೆ ಕಂಡಿತ್ತು. ಕೋಣೆಗೆ ಬಂದು ಅರೆಬತ್ತಲಾಗಿ ಅಂಗಾತ ಹಾಸಿಗೆಯ ಮೇಲೆ ಬಿದ್ದುಕೊಂಡ. ನಿದ್ರೆ ಅಂದೇಕೋ ಸತಾಯಿಸದೆ ಬಂದು ಉಪಕರಿಸಿತು. ಕೈಫೋನಿನಲ್ಲಿ ಕಿರ್ಕರೆಯ ಧ್ವನಿ ಉಲಿಯುತ್ತಲೆ ಇತ್ತು. ಇತ್ತೀಚಿನ ಯಾವುದೋ ಟೊವಿನೋ ಥಾಮಸ್ ನಟನೆಯ ಮಲಯಾಳಂ ಸಿನೆಮಾದಲ್ಲಿ ಇದೆ ಹಾಡನ್ನ ನಟಿ ದರ್ಶನಾಳಿಂದ ಮರು ಬಳಸಲು ಹಾಡಿಸಿದ್ದ ನೆನಪಾಯಿತು. ಅದರ ಮಾಧುರ್ಯವನ್ನೆ ಕೇಳುತ್ತಾ ನಿದ್ರೆಗೆ ಜಾರಿದ್ದೆ ಅರಿವಾಗಲಿಲ್ಲ. ದೀಪ ಆರಿಸಲೂ ಮರೆತುಬಿಟ್ಟಿದ್ದ.


"ಬಾಂವರಾ ಮನ್ ದೇಖನೇ
ಚಲಾ ಏಕ್ ಸಪ್ನಾˌ
ಬಾಂವರೀ ಸೀ ಮನ್ ಕೀ ದೇಖೋ 
ಬಾಂವರೀ ಹೈಂ ಬಾತೇಂ./
ಬಾವರೀಂ ಸೀ ದಢ್ಕನೇ ಹೈಂ
ಬಾವರೀಂ ಹೈಂ ಸಾಂಸೇಂ
ಬಾವರೀಂ ಸೀ ಕರವಟೋಂ ಸೇ
ದುನಿಆ ದೂರ್ ಭಾಗೇˌ
ಬಾವರೀಂ ಸೀ ನೈನ್ ಚಾಹೇಂ
ಬಾವರೀಂ ಜ಼ರೋಕೇಂಸೇ
ಬಾವರೀಂ ನಜಾ಼ರೋಂ ಕೋ ಥಕನಾ//."


*****

ಆ ವಿಚಿತ್ರ ಕನಸು ಮರಳಿ ಬಿದ್ದು ಅವನನ್ನ ಕಾಡಿತು. ಆ ಕನಸನ್ನವನು ಕಾಣುತ್ತಿರೋದು ಅದೆ ಮೊದಲ ದಿನವೇನಲ್ಲ. "ಅವನು ಒಬ್ಬಂಟಿಯಾಗಿ ಅದೆಲ್ಲಿಗೋ ನಡುರಾತ್ರಿ ಕತ್ತಲಲ್ಲಿ ಕಾಲೆಳೆದುಕೊಂಡು ಹೋಗುತ್ತಿದ್ದಾನೆ. ಎಲ್ಲಿಗೆಂದೆ ಅರಿಯದೆ ಹೋಗಹೋಗುತ್ತಿದ್ದಂತೆ ಮುಂದೆ ಕಟ್ಟೆಯಿದ್ದ ಬಾವಿಗೆ ಅವನು ಅದು ಹೇಗೋ ಜಾರಿ ಬಿದ್ದು ಹೋದ. ಆಳದಲ್ಲಿದ್ದ ಬಾವಿಯ ನೀರಿನಲ್ಲಿ ತೇಲುತ್ತಾ ಇದ್ದವನ ಕಾಲಿಗೆ ದಪ್ಪದ ಸರಪಳಿ ಕಟ್ಟಿದೆ ಅದರ ಮತ್ತೊಂದು ದೊಡ್ಡ ಕಬ್ಬಿಣದ ಗುಂಡು ಕಟ್ಟಿದ್ದು ನೀರಿನಾಳದಲ್ಲಿತ್ತು. ಅವನ ಆ ಅವಸ್ಥೆ ನೋಡಿ ಉದ್ದುದ್ದ ಗಡ್ಡ ಬಿಟ್ಟಿದ್ದ ಅರ್ಧ ಡಝ಼ನ್ ಮಂದಿ ತಮ್ಮ ಕೈಯನ್ನ ಅವನತ್ತ ಚಾಚುತ್ತಿದ್ದಾರೆ. ಅದು ಹೇಗೋ ಅವನತ್ತ ಚಾಚಿದ ಅವರ ಕೈ ಅವನಿರವಲ್ಲಿಗೂ ಉದ್ದವಾಗುತ್ತಾ ಬೆಳೆದು ಬಂತು! ಆದರೆ ಕಾಲಿಗೆ ಕಟ್ಟಿಕೊಂಡಿದ್ದ ಆ ಭಾರವಾದ ಲೋಹದ ಗುಂಡನ್ನ ತನ್ನಿಂದ ಬೇರ್ಪಡಿಸದೆ ಅವನನ್ನ ಮೇಲೆತ್ತಲು ಅವರಿಗೂ ಸಾಧ್ಯವಿರಲಿಲ್ಲ. ಇವನಿಗೋ ಅದನ್ನ ತನ್ನಿಂದ ದೂರಾಗಿಸಿಕೊಳ್ಳಲು ಚೂರೂ ಮನಸಿರಲಿಲ್ಲ. ಅವರು ಚಾಚಿದ ಕೈಯತ್ತ ಕೃತಜ್ಞತೆಯಿಂದ ನೋಡಿದ ಅವನು ಮರಳಿ ತನ್ನ ಕಾಲಿನ ಸರಪಳಿಗೆ ಅಂಟಿದ್ದ ಗುಂಡನ್ನ ಮೋಹದ ಅಶ್ರುಗಳ ಮಿನುಗಲ್ಲಿ ದಿಟ್ಟಿಸುತ್ತಾ ಅಲ್ಲೆ ಉಳಿದುಬಿಟ್ಟ. ಮೇಲತ್ತಲು ಕೈ ಚಾಚಿದವರು ಇವನ ದ್ವಂದ್ವವನ್ನ ಅರ್ಥ ಮಾಡಿಕೊಂಡವರಂತೆ ಕೈ ಹಿಂದೆಳೆದುಕೊಂಡು ಅಸಹಾಯಕತೆಯನ್ನು ಕಂಡು ಲೊಚಗುಟ್ಟಿ ಮುಂದುವರೆದರು." ಇಲ್ಲವನಿಗೆ ಮತ್ತೆ ಅದೆ ಹಂತದಲ್ಲಿ ಎಚ್ಚರವಾಯಿತು. 


ಇವಿಷ್ಟೂ ಅವನಿಗೆ ಪ್ರತಿಬಾರಿ ಆ ಕನಸು ಬಿದ್ದಾಗಲೂ ಸ್ಪಷ್ಟವಾಗಿ ನೆನಪಿರುತ್ತದೆ. ಬಾವಿಗೆ ಬಿದ್ದ ಗಾಬರಿಗೇನೋ ಸ್ವಪ್ನ ಕಂಡು ಎದ್ದಾಗಲೆಲ್ಲಾ ಮೈ ಬೆವರಿರುತ್ತದೆ. ಆದರೆ ದಾರಿಯಲ್ಲಿ ಹೋಗುತ್ತಿದ್ದ ತಾನ್ಯಾಕೆ ಹೋಗಿ ಹೋಗಿ ಬಾವಿಯಲ್ಲಿ-ಅದೂ ಕಟ್ಟೆಯಿರುವ ಬಾವಿಯಲ್ಲಿ ಅದ್ಹೇಗೆ ಜಾರಿ ಬಿದ್ದೆ ಅನ್ನೋದೆ ಅವನಿಗೆ ಅರಿವಾಗುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಬಿದ್ದ ತನ್ನ ಕಾಲಿಗೆ ಅಂಟಿರೋ ಆ ಸರಪಳಿ ಯಾವುದು? ಅದರ ಮತ್ತೊಂದು ತುದಿಗೆ ಕಟ್ಟಿರೋ ಲೋಹದ ಗುಂಡದೇನು? ಪ್ರತಿಸಲವೂ ತನ್ನನ್ನ ರಕ್ಷಿಸಲು ಬರುವವರು ಕೇವಲ ಆರೆ ಮಂದಿ ಏಕಿರುತ್ತಾರೋ ಒಂದೂ ಅವನಿಗೆ ಅರ್ಥವಾಗುತ್ತಿರಲಿಲ್ಲ. ಎಂದಿನಂತೆ ಅಂದೂ ಅವನು ಕನಸು ಬಿಟ್ಟೆದ್ದಾಗ ಬೆವರಿದ್ದ. ಆ ಕನಸು ಬಿದ್ದಾಗಲೆಲ್ಲಾ ಮನಸು ಕಸಿವಸಿಗೊಳ್ಳುತ್ತಿತ್ತು. ಕೈಫೋನಿನ ಗಡಿಯಾರದಲ್ಲಿ ಮೂರೂವರೆ ತೋರಿಸುತ್ತಿತ್ತು. ಹೋಗಿ ಉಚ್ಛೆ ಹೊಯ್ದು ಬಂದು ಬೆಳಕನ್ನ ಆರಿಸಿ ಮಂದರಿ ಹೊದ್ದುಕೊಂಡು ಹಾಸಿಗೆಯ ಮೇಲೆ ಬಿದ್ದುಕೊಂಡ.


ಸುಭಾಶನ ಬಗ್ಗೆ ಯೋಚಿಸಿದ. ಸುಭಾಶನಂತಹ ಮುಗ್ಧ ಮಕ್ಕಳು ಇನ್ನೂ ಪ್ರಪಂಚ ಅರಿಯದವುಗಳು. ಸಿಗಬೇಕಾದ ಪ್ರಾಯದಲ್ಲಿ ಗಂಡು ಮಕ್ಕಳಿಗೆ ಅಪ್ಪನದ್ದೋ ಇಲ್ಲಾ ಸಹೋದರ ಮಾವನದ್ದೋ ಮಾರ್ಗದರ್ಶನ ಮಮತೆ ಸಿಗದಿದ್ದರೆ ಸಮಾಜದ ಕಿತ್ತು ತಿನ್ನೋ ದುರುಳ ಕೈಗಳು ಅವುಗಳ ಮುಗ್ಧತೆಯನ್ನ ಹೊಸಕಿ ಹಾಕಿ ಬಿಡಲು ಮುನ್ನುಗ್ಗುತ್ತವೆˌ ಪಾಪ ಅವನ ಮುಂದಿನ ಭವಿಷ್ಯ ಎಂದು ಲೊಚಗುಟ್ಟುತ್ತಲೆ ನಿದ್ರೆಗೆ ಜಾರಿದ.

( ಇನ್ನೂ ಇದೆ.)



https://youtu.be/T0dOuSC6g88

19 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೯.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೯.👊


ಅಂದಿನಿಂದ ಎಲ್ಲರ ಎದುರಿಗಿದ್ದೆ ವೇಷ ಮರೆಸಿಕೊಳ್ಳದೆಯೂ ಸಹ ಇದ್ದೂ ಇಲ್ಲದಂತಿರುವ ಅವನ ಅಜ್ಞಾತವಾಸ ಆರಂಭವಾಯಿತು. ಅವಸರವಸರವಾಗಿ ಕೆಲಸ ಮುಗಿಸಿ ಬಂದವ ಖಾಕಿ ಅಂಗಿ ಚಡ್ಡಿ ಕುಚ್ಚಿನ ಟೊಪ್ಪಿ ಏರಿಸಿ ಅಂದಿನ ಎನ್ ಸಿ ಸಿ ತರಗತಿಗೆ ಓಡಿದ. ಸುಸ್ತಾಗಿದ್ದರೂ ಅದನ್ನಂತೂ ತಪ್ಪಿಸಿಕೊಳ್ಳುವಂತೆಯೆ ಇರಲಿಲ್ಲ. ಕೆಲಸ ಮುಗಿಸಿ ಸದಾ ತಡವಾಗಿಯೆ ಹೋಗುವ ಅವನನ್ನ ರೈಫಲ್ ಹೊತ್ತು ಮೈದಾನಕ್ಕೆ ಮೂರು ಸುತ್ತು ಓಡುವ ಶಿಕ್ಷೆ ವಿಧಿಸುತ್ತಿದ್ದುದು ಮಾಮೂಲು. 


ಇವತ್ತಂತೂ ಇನ್ನೂ ತಡವಾಗಿ ಹೋಗಿದ್ದ ಕಾರಣ ಅವನ ಕಳೆದ ರಾತ್ರಿಯ ನಾಯಿಪಾಡಿನ ಅವಸ್ಥೆ ಅರಿಯದ ಎನ್ ಸಿ ಸಿ ಕ್ಯಾಪ್ಟನ್ ರಾಮಪ್ಪ ಮೊಯ್ಲಿ ಮಾಸ್ಟ್ರು ಅವತ್ತವನನ್ನ ಮೂರರ ಬದಲು ಐದು ಸಾಲು ಸುತ್ತಿಸಿದರು. ಓಡದೆ ವಿಧಿಯಿರಲಿಲ್ಲ. ಓಡಿ ಆಡಿ ವ್ಯಾಯಾಮ ಮಾಡಿ ಅವರ ಆಜ್ಞೆಗಳನ್ನ ಚಾಚೂ ತಪ್ಪದೆ ಪಾಲಿಸಿದರೆ ಕಡೆಗೆ ಸೇನೆಯ ಕಡೆಯಿಂದ ಕೆಡೆಟ್ಟುಗಳಿಗೆ ಕೊಡಲಾಗುತ್ತಿದ್ದ ಉಚಿತ ತಿಂಡಿಯ ಕೂಪನ್ನುಗಳ ಆಸೆ ಹಲ್ಲು ಕಚ್ಚಿಕೊಂಡು ಹೇಳಿದ್ದಷ್ಟನ್ನ ಮಾಡುವಂತೆ ಅವನನ್ನ ಪುಸಲಾಯಿಸುತ್ತಿತ್ತು. ಅದನ್ನೂ ತಪ್ಪಿಸಿಕೊಂಡರೆ ಅಂದಿನ ಬೆಳಗಿನ ತಿಂಡಿಗೆ ಸೊನ್ನೆಯಾಗುವ ಸಂಭವವಿತ್ತು. ರಾತ್ರಿ ಹೊಡೆಸಿಕೊಂಡ ಮೈ ಕೈ ನೋವಿನ್ನೂ ಇಳಿದಿರಲಿಲ್ಲ. ನಜ್ಜುಗುಜ್ಜಾಗಿದ್ದ ಮೈ - ಜರ್ಜರಿತ ಮನಸು ಎರಡನ್ನೂ ಹೊತ್ತು ಅನ್ಯಮಸ್ಕತೆಯಿಂದಲೆ ಅಧ್ಯಾಪಕರ ಕಣ್ಣು ತಪ್ಪಿಸಿ ಅಷ್ಟಿಷ್ಟು ಕುಗುರುತ್ತಾ ಕೂತು ಹೇಗೋ ಆ ದಿನ ಕಳೆದ. 


ಸಂಜೆ ಮೂಡುತ್ತಲೆ ಅಧೀರನಾಗ ತೊಡಗಿದ. ನಿಜವಾದ ಸವಾಲು ಇನ್ನೇನು ಎದುರಾಗಲಿತ್ತು. ಹೌದುˌ ಇನ್ನು ಮುಂದೆ ರಾತ್ರಿ ಮಲಗುವುದೆಲ್ಲಿ? ಅನ್ನುವ ಪ್ರಶ್ನೆಗೆ ಅವನಲ್ಲಿಯೆ ಉತ್ತರವಿರಲಿಲ್ಲ. ಶಾಲೆ ಮುಗಿದ ಮೇಲೆ ಬೇಕರಿ ಲೈನಿನ ಕೆಲಸ ಮುಗಿಸಿ ಅಲ್ಲಿ ಇಲ್ಲಿ ಸುತ್ತಿ ಮನೆಯ ಹತ್ತಿರದ ಗುಡ್ಡದ ಮೇಲಿನ ಕಲ್ಲುಬೆಂಚಿನ ಮೇಲೆ ಬಂದು ಒಬ್ಬಂಟಿಯಾಗಿ ಕೂತ. ಅವನ ದುಸ್ಥಿತಿಗೆ ಅವನಿಗೆ ಮರುಕ ಹುಟ್ಟಿತು. ಆಡುವಂತಿರದ ಅನುಭವಿಸದಿರಲಾರದ ಅಯೋಮಯದ ಪರಿಸ್ಥಿತಿ. ಅಜ್ಜಿಗೆ ಅಂಟಿಕೊಂಡು ಬೆಳೆದಿದ್ದವ ಅವರಲ್ಲೆ ಅಮ್ಮನನ್ನು ಕಾಣುತ್ತಿದ್ಧ. ಊರಲ್ಲಿ ಸಿಕ್ಕ ಆಸ್ತಿಯ ಕಾರಣ ಅವರೂ ಅಲ್ಲಿಗೆ ಹೋಗಿ ನೆಲೆಸಿದ ಮೇಲೆ ಅವನನ್ಯಾರೂ ವಿಚಾರಿಸುವವರೆ ಗತಿಯಿರಲಿಲ್ಲ. ದಂಡಿಸಲು ಮಾತ್ರ ಸದಾ ಮುಂದಿರುತ್ತಿದ್ದ ಕೈಗಳಲ್ಲಿ ಯಾವುವಕ್ಕೂ ಕನಿಷ್ಠ ಒಂದೆ ಒಂದು ಸಲ ಅವನನ್ನ ಮಮತೆಯಿಂದ ಕಂಡು ಅವನ ಮಗು ಮನಸನ್ನೂ ಅರ್ಥ ಮಾಡಿಕೊಂಡು ತಬ್ಬಿ ಸಂತೈಸಲು ಆಸಕ್ತಿಯಿರಲಿಲ್ಲ. ಅವನ ಹೆತ್ತವರಿಗೆ ಲಾಲನೆ ಪಾಲನೆ ಮಾಡಲು ಅವನಿಗಿಂತ ಹತ್ತು ವರ್ಷ ನಂತರ ಹುಟ್ಟಿದ್ದ ಮತ್ತೊಂದು ಮಗುವಿತ್ತು. ಅವನದೊಂತರ ಎಲ್ಲರೂ ಇದ್ದೂ ಅನಾಥನಾಗಿರುವ ಪರಿಸ್ಥಿತಿ. ಅವನ ಅಜ್ಜ ಆ ಊರಿಗೆ ಬಂದು ನೆಲೆಸಿದ ಮೇಲೆ ಸ್ವಾಭಿಮಾನದಿಂದ ದುಡಿದು ಅವರೆ ಸ್ವಯಾರ್ಜಿತವಾಗಿ ಗಳಿಸಿದ ಘನತೆ ಗೌರವ ಅವನ ಒಂದೆ ಒಂದು ತಪ್ಪು ನಡೆಯಿಂದ ಮುಕ್ಕಾಗುವ ಸಂಭವವಿತ್ತು. ಪುಣ್ಯಕ್ಕೆ ಪ್ರಾಯ ಚಿಕ್ಕದಾಗಿದ್ದರೂ ಕೂಡ ಅವನಿಗದರ ಅರಿವಿತ್ತು. 

ಮುಂದಿನ ದಿನಮಾನಗಳಲ್ಲಿ ಅಂತಹದ್ದೆ ಪರಿಸ್ಥಿತಿಯಲ್ಲಿ ಬಾಳಬೇಕಿದ್ದವನಿಗೆ ಹೊಸತಾಗಿ ದಿನಚರಿ ರೂಪಿಸಿಕೊಳ್ಳದೆ ವಿಧಿಯಿರಲಿಲ್ಲ. ಊಟದ ಹೆಸರಿನಲ್ಲಿ ಸಿಕ್ಕಿದ್ದನ್ನ ಹೊಟ್ಟೆಗಷ್ಟು ಹಾಕಿಕೊಂಡು ಬಂದಿದ್ದ. ನೆನ್ನೆ ರಾತ್ರಿಯಷ್ಟೆ ಮೈಮುರಿಯ ತಿಂದಿದ್ದ ಪೆಟ್ಟಿನ ನೋವಿನ್ನೂ ಆರಿರಲಿಲ್ಲ. ಅಂತಹ ವಿಪರೀತ ಪರಿಸ್ಥಿತಿಯಲ್ಲಿ ಓದುವ ಮನಸಾಗಲಿ ಅನುಕೂಲವಾಗಲಿ ಇರಲಿಲ್ಲ. ಸಾಲದ್ದಕ್ಕೆ ದಣಿದಿದ್ದ ದೇಹವನ್ನ ನಿದ್ರೆ ಬೇರೆ ಸೆಳೆಯುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅಪ್ಪ ಕೆಲಸ ಮುಗಿಸಿ ಮನೆಗೆ ಬರುವ ಮೊದಲು ಎಲ್ಲಾದರೂ ಮಲಗುವ ಅಂದುಕೊಂಡು ಸದ್ದಾಗದಂತೆ ಹಿತ್ತಲ ಬಾಗಿಲಿಂದ ಕತ್ತಲಲ್ಲಿ ಮೆಲ್ಲ ತನ್ನ ಸರಂಜಾಮುಗಳನ್ನಿಟ್ಟಿದ್ದ ಒತ್ತಿನ ಮನೆಯ ಕಟ್ಟಿಗೆ ಕೊಟ್ಟಿಗೆಯಿಂದ ತನ್ನ ಚಾಪೆ ಸುರುಳಿ ಹೊತ್ತು ಮನೆಯಿಂದ ಚೂರು ಮೇಲಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟೆ ತಲುಪಿದ. ಎತ್ತರವಾಗಿದ್ದ ಸ್ಥಳದಲ್ಲಿದ್ದ ಶಾಲೆಯ ಸುತ್ತ ಬೆಳೆದಿದ್ದ ಯುಪಟೋರಿಯಂ ಜಿಗ್ಗಿನ ಮರೆಯಲ್ಲಿ ಅವನಲ್ಲಿರುವುದು ಯಾರಿಗೂ ಗೋಚರಿಸುವ ಸಾಧ್ಯತೆಯಿರಲಿಲ್ಲ. 


ನಿಜವಾದ ಸವಾಲಿದ್ದದ್ದು ನಿತ್ಯ ಅಲ್ಲಿ ಠಿಕಾಣಿ ಹೂಡುತ್ತಿದ್ದ ಬೀದಿನಾಯಿಗಳ ಜೊತೆ ಸೆಣೆಸಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳುವುದರಲ್ಲಿ ಮಾತ್ರ. ಆರಂಭದಲ್ಲಿ ತಮ್ಮ ಸಾಮ್ರಾಜ್ಯದ ಎಲ್ಲೆಯಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದ ಅವನ ಮೇಲೆ ಗುರುಗುಟ್ಟಿ ತಮ್ಮ ತಮ್ಮ ಆಕ್ಷೇಪ ವ್ಯಕ್ತ ಪಡಿಸಿದರೂ ಕೂಡ ನಿತ್ಯ ಕಾಣುತ್ತಿದ್ದ ಅವನ ಮುಖ ಅವುಗಳನ್ನ ಹೆಚ್ಚು ಕೆಂಗೆಡಿಸಲಿಲ್ಲ. ಕಟ್ಟೆಯ ಮೂಲೆಯೊಂದರಲ್ಲಿ ಚಾಪೆ ಹಾಸಿಕೊಂಡು ಮಂದರಿ ಹೊದ್ದು ದಿಂಬಿಗೆ ತಲೆಕೊಟ್ಟಿದ್ದೊಂದೆ ಗೊತ್ತುˌ ಅಂದಿಡಿ ಅಲ್ಲಿಲ್ಲಿ ಅಲೆದು ಬೆವರಿದ್ದ ಮೈ ಮೀಯದೆ ಹುಟ್ಟಿಸುತ್ತಿದ್ದ ರೇಜಿಗೆಯೂ ನಗಣ್ಯವಾಗಿ ನಿದ್ರೆಯ ಜೊಂಪು ಅಟ್ಟಿಸಿಕೊಂಡು ಬಂತು. ಆಗಿದ್ದ ದಣಿವಿಗೆ ಆರಾಮದ ಅವಶ್ಯಕತೆಯಿದ್ದ ಅವನ ದೇಹ ಮನಸ್ಸು ಮಲಗಿ ಸುಧಾರಿಸಿಕೊಳ್ಳತೊಡಗಿತು.


*****

"ಬಾಂವರೀ ಸೀ ಇಸ್ ಜಹಾನ್ ಮೈ
ಬಾಂವರಾ ಏಕ್ ಸಾಥ್ ಹೋˌ
ಇಸ್ ಸಯಾನೀ ಭೀಡ್ ಮೈ
ಬಸ್ ಹಾಥೋಂ ಮೈ ತೇರಾ ಹಾಥ್ ಹೋ./
ಬಾಂವರೀ ಸೀ ಧುನ್ ಹೋ ಕೋಈ
ಬಾಂವರಾ ಏಕ್ ರಾಗ್ ಹೋˌ
ಬಾಂವರೀ ಸೀ ಪೈರ್ ಚಾಹೇಂ
ಬಾಂವರೀ ತರಾನೋಂ ಕೀ
ಬಾಂವರೀ ಸೀ ಬೋಲ್ ಪೇ ಧಿರಕನಾ//"


ಬದುಕೀಗ ಸಂಪೂರ್ಣ ಬದಲಾದ ಕಾಲಘಟ್ಟದಲ್ಲಿತ್ತು. ಇಂದು ಅವನದ್ದೆ ಆದ ಒಂದು ವ್ಯಕ್ತಿತ್ವ ರೂಪಿಸಿಕೊಂಡಿದ್ದ. ತಪ್ಪು ಆಯ್ಕೆಗಳ ಆಗರವಾಗಿದ್ದರೂ ಬದುಕಿಗೀಗ ಒಂದು ಲಯವಿತ್ತು. ಬೆರಳೆಣಿಕೆಯಷ್ಟರವರಾದರೇನು? ಅವನ ಬಗ್ಗೆ ಯೋಚಿಸುವ ಕೆಲವೆ ಕೆಲವರಾದರೂ ಇದ್ದರು. ಬದುಕಿನ ಸೌಂದರ್ಯವೇನು? ಅನ್ನುವ ಸುಖಾನುಭವವನ್ನ ಬಾಳಿನಲ್ಲಿ ಬಂದು ಕಿರು ಅವಧಿಯವರೆಗಾದರೂ ಮರೆಯಲಾಗದ ಜೊತೆ ಕೊಟ್ಟು ತಿಳಿಸಿ ಹೋದ ಮೂವರಿದ್ದರು. ಸುಂದರವೆಂದು ಬೆನ್ನು ತಟ್ಟಿ ಹೇಳಿಕೊಳ್ಳುವಷ್ಟಿಲ್ಲದಿದ್ದರೂನು ಕುರೂಪದ ಕುರುಹೇನೂ ಬದುಕಿನಲ್ಲಿರಲಿಲ್ಲ. ಒಂಟಿತನದ ಶಾಪದ ಹೊರತು.

ಕೋಣೆಗೆ ಮರಳಿದವನಿಗೆ ಮತ್ತೊಂದು ಸಲ ಬೆಚ್ಚನೆ ನೀರಿನಲ್ಲಿ ನೆಂದು ಮೀಯುವ ಸುಖ ಬೇಕೆನಿಸಿತು. ಅಂದಿಗವನದ್ದು ಮೂರನೆ ಸ್ನಾನ ಅದು. ಮಿಂದು ಮೈ ಮನ ಹಗುರಾಗಿಸಿಕೊಂಡವನಿಗೆ ನಾಯರನ ಕ್ಯಾಂಟೀನಿನ ಮೀನು ಸಾರು ಆಮ್ಲೇಟು ಉಪ್ಪಡು ಪಪ್ಪಡ ತೊವ್ವೆಯ ಬಿಸಿಬಿಸಿ ಊಟ ಸ್ವರ್ಗದ ಬಾಗಿಲನ್ನ ತೆರೆದಂತಿತ್ತು. ಉಂಡು ಇನ್ನೊಂದು ದಿನ ಮಾತ್ರ ತಾನಲ್ಲಿ ಇರುವುದಾಗಿಯೂˌ ಮಂಗಳವಾರ ಅಲ್ಲಿಂದ ಹೊರಡುವುದಿದೆಯೆಂದೂ ನಾಯರನಿಗೆ ಮುಂದಾಗಿ ತಿಳಿಸಿದ.

"ಶೇ ಅದಾಣೋ! ಎವಿಡೆಯ? ತರವಾಡುಲೇತ್ತಿಯೋ ಇಲ್ಲಂಗಿಲ್ ನಾಟ್ಟಿಲ್ ವಳಿಯಾಣೋ ಪೋವುನ್ನದು?" ಅಂದ ನಾಯರ. "ಇಲ್ಲಿಯಾˌ ಕನ್ಯಾಕುಮಾರಿ ಪೋಕ್ಕುನ್ನ ಪದ್ಧತಿಯಾ. ಟಿಕೇಟು ಬುಕ್ ಚೇಯ್ದು. ಚೌವಾಳ್ಚಯಿಲೆ ವೈಕುನ್ನೋರಂ ಬಂಡಿಯಾ. ಅದುಕ್ಕೊಂಡು ಮುನ್ಬು ಪರಙಿಟ್ಟುಳ್ಳು. ಒರುಪಕ್ಷ ಅವಿಡೆಲೇತ್ತಿ ನಾಟ್ಟಿಲಾಕ್ಕಿ ಮರುಙುಕ್ಕಾನ್ ಞಾನ್ ಕುರುತ್ತುನ್ನದ. ಒನ್ನುಂ ಅಂತಿಮಮಾಯಿಟ್ಟಿಲ್ಲ ನಾಯರೆ." ಅಂದನವ. ಅವನ ಅಲೆಮಾರಿ ಯಾತ್ರೆಯ ಸುಳಿವಿಲ್ಲದ ನಾಯರನಿಗಿದ್ಯಾಕೋ ಇದು ತಿಕ್ಕಲು ಅನ್ನಿಸಿರಬೇಕುˌ ಮಾರುತ್ತರವಾಗಿ ತನ್ನ ಹುಳುಕು ಹಲ್ಲುಗಳನ್ನ ಹುಳ್ಳಗೆ ಕಿರಿಯುತ್ತಾ "ಶರಿಯ ಪಿನ್ನೆˌ ಅಙನೆ ಆಯಕಟ್ಟೆ." ಅಂದ ನಾಯರ.

ಕೋಣೆಗೆ ಮರಳಿ ಕೈ ಫೋನಿನ ಹಾಡುಗಳ ಸಂಗ್ರಹ ಹಾಕಿದ ಸ್ವಾನಂದ ಕಿರ್ಕರೆಯ ಧ್ವನಿಯಲ್ಲಿ ಅವರದ್ದೆ ಬರವಣಿಗೆಯ ಹಾಡು ಹಿತವಾಗಿ ಮೊಳಗುತ್ತಿತ್ತು. ಈ ಶಂತನು ಮೊಯಿತ್ರ ಮೂಡಿಸುವ ನಾದ ತರಂಗಗಳಲ್ಲೂ ಒಂಥರಾ ಮದನ ಮೋಹನ ಸಾಬರ ಸ್ವರ ಸಂಚಾರದ ಮೋಹಕತೆಯ ಛಾಯೆಯಿದೆ ಅನ್ನಿಸಿತು.

( ಇನ್ನೂ ಇದೆ.)



https://youtu.be/rkV2j4Q37aI

18 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೮.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೮.👊


ಆದ ಹಿಂಸೆಯ ನೋವಿನಿಂದ ನೊಂದು ಸುಧಾರಿಸಿಕೊಳ್ಳೋದನ್ನ ಕಂಡರೂ ಅಲ್ಲಿಗೂ ಬಿಡದೆ ಅಟ್ಟಿಸಿಕೊಂಡು ಬೆನ್ನುಬಿದ್ದ ಅಪ್ಪ ಅನ್ನುವ ರಾಕ್ಷಸ ಕೈಗೆ ಸಿಕ್ಕ ಇಟ್ಟಿಗೆ ಚೂರು-ಕಲ್ಲು ಹೀಗೆ ಸಿಕ್ಕಿದ್ದನ್ನ ಅವನತ್ತ ತೂರಿ ಅಲ್ಲಿಂದಲೂ ಅವನನ್ನ ಓಡಿಸಿದರು. ಅಪ್ಪಿತಪ್ಪಿ ಪುನಃ ಕೈಗವನು ಸಿಕ್ಕಿದ್ದಿದ್ದರೆ ಬಹುಶಃ ಹಾಕಿ ತುಳಿದು ಇನ್ನಿಲ್ಲವಾಗಿಸಿ ಬಿಡುತ್ತಿದ್ದರೋ ಏನೋ! ಅವನ ಹಿಡಿತ ಕೈತಪ್ಪಿದ ಸಿಟ್ಟನ್ನು ಪೂರ್ತಿಯಾಗಿ ಅವನ ಕೋಣೆಯ ಮೇಲೆ ತೀರಿಸಿಕೊಂಡಾಗಲೆ ತಣಿದಿರಬಹುದು ಅವರ ಸಿಟ್ಟು. ರೇಡಿಯೋˌ ವಾಕಮೆನ್ˌ ಕ್ಯಾಸೆಟ್ಟುಗಳುˌ ಜಂಕ್ಸನ್ ಬಾಕ್ಸ್ˌ ಅಡಾಪ್ಟರ್ˌ ಸ್ಪೀಕರ್ ಹೀಗೆ ಅವನ ಪಾಲಿನ ಅವನದ್ದೆ ಸಂಪಾದನೆಯ ಎಲ್ಲಾ ಅಮೂಲ್ಯ ಸ್ವತ್ತುಗಳನ್ನೂ ಬಲವಾಗಿ ಬೀಸಿ ನೆಲಕ್ಕಪ್ಪಳಿಸಿ ಆಗಷ್ಟೆ ಅರಳಲಾರಂಭಿಸಿದ್ದ ಅವನ ಯುವ ಮನಸ್ಸನ್ನೂ ಸೇರಿಸಿ ಅವನ್ನೆಲ್ಲಾ ಛಪ್ಪನ್ನರವತ್ತಾರು ಚೂರಾಗಿಸಿದರು. ಅಲ್ಲಿಗೆ ಅವನ ಆ ಕೋಣೆಯ ಋಣ ಅವತ್ತಿಗೆ ಮುಗಿಯಿತು.

ಆ ರಾತ್ರಿಯಿಡಿ ಸೀತಮ್ಮನ ಮನೆಯ ಓಣಿಯ ಕಲ್ಲುಹಾಸಿನ ಮೇಲೆ ತನ್ನ ಅಸಹಾಯತೆಯಿಂದ ಉಕ್ಕಿದ ದುಃಖಕ್ಕೆ ಬಿಕ್ಕಳಿಸುತ್ತಾ ಚಳಿಗೆ ಮುದುಡುತ್ತಾ ಕೂತಿದ್ದವ ನೋವು ಸುಸ್ತು ಹುಟ್ಟಿಸಿದ ನಿದ್ರೆಗೆ ಅನಿವಾರ್ಯವಾಗಿ ಜಾರಿದಾಗ ಬಹುಶಃ ಬೆಳಗಾಗಿತ್ತು ಅನ್ನಿಸುತ್ತೆ. ಅಂಗಳ ತೊಳೆಯಲು ಬಂದ ಪುಟ್ಟರಾಜಣ್ಣನ ಹೆಂಡತಿ ಪಾರ್ವತಮ್ಮನ ಕಣ್ಣಿಗೆ ಇವನು ಬಿದ್ದ. ಬೀದಿಯ ಉಳಿದೆಲ್ಲರಂತೆ ಇವರ ಮನೆಯಲ್ಲಾಗುತ್ತಿದ್ದ ರಾತ್ರಿಯ ಕಾಳಗವನ್ನ ಕತ್ತಲ ಮೌನದಲ್ಲಿ ಸ್ಪಷ್ಟವಾಗಿ ಅವರೂ ಕೇಳಿಸಿಕೊಂಡಿದ್ದಾರು. ಅವನಪ್ಪನ ಕುಡಿತದ ನಂತರದ ಮೃಗಾವತಾರವನ್ನ ಸ್ಪಷ್ಟವಾಗಿ ಅರಿತಿದ್ದ ಯಾರೊಬ್ಬರೂ ಅಂತಹ ಸಂದರ್ಭದಲ್ಲಿ ಜಗಳವಾಡುತ್ತಿದ್ದರೆ ಬಿಡಿಸಲು ಬರುವ ಧೈರ್ಯ ಮಾಡುತ್ತಿರಲಿಲ್ಲ. ಹಾಗೊಮ್ಮೆ ದೌರ್ಜನ್ಯ ತಡೆಯಲು ರಣಾಂಗಣಕ್ಕೆ ಧುಮುಕುವವರೂ ಅವರ ದುರ್ನಡೆತೆಗೆ ಬಲಿಪಶುವಾಗುವ ಅಪಾಯವಿದ್ದುದರಿಂದ ನೆರೆಕರೆಯ ಯಾರೂ ಹೀಗೆ ಬೇಡದ ಉಸಾಬರಿಗೆ ಇಳಿಯುವ ಸಾಹಸ ಮಾಡುತ್ತಿರಲಿಲ್ಲ. 


ಇವನ ಕರುಣಾಜನಕ ಪರಿಸ್ಥಿತಿ ಕಂಡು ಮರುಕದಿಂದ ಮುದುಡಿ ಮಲಗಿದ್ದ ಅವನ ತಲೆ ಸವರಿದರು. ಅಪ್ಪನೆ ಬಂದು ಮುಟ್ಟಿದರೇನೋ ಎಂಬಂತೆ ಕುಮಟಿ ಬಿದ್ದು ಎಚ್ಚರಾದ. ಎದುರಿಗೆ ಪಾರ್ವತಮ್ಮನ ಮುಖ ಕಂಡು ದೈನ್ಯದಿಂದ ದುಃಖದ ಕೋಡಿ ಹರಿದು ಎದ್ದು ಕೂತು ಮೊಣಕಾಲ ನಡುವೆ ತಲೆ ತಗ್ಗಿಸಿಕೊಂಡು ಶಬ್ದ ಬಾರದಂತೆ ಮುಸುಮುಸು ಅತ್ತ. "ತುಂಬಾ ನೋವಾಗುತ್ತಿದೆಯೇನ?" ಅನ್ನುತ್ತಾ ಕರುಣಾಪೂರಿತ ದೃಷ್ಟಿ ಹರಿಸುತ್ತಾ ಅವರು ಅವನ ತಲೆ ಸವರಿದರು. ಅವನೇನನ್ನೂ ಮಾರುತ್ತರಿಸದಿದ್ದರೂ ಸಹ ಹಾಕಿಕೊಂಡಿದ್ದ ಬಿಳಿ ಬಣ್ಣದ ಅಂಗಿಯ ಮೇಲಿನ ರಕ್ತದ ಕಲೆ ಅವರಿಗೆ ಆಗಿರಬಹುದಾಗಿದ್ದ ಹಲ್ಲೆಯ ಆಳವನ್ನು ಸ್ಪಷ್ಟ ಪಡಿಸಿದವು. ಮರು ಮಾತನಾಡದೆ ಮನೆಗೆ ಹೋದ ಅವರು ಸ್ವಲ್ಪ ಹೊತ್ತಿನ ನಂತರ ಕೂತಲ್ಲೆ ರೋಧಿಸುತ್ತಿದ್ದ ಅವನಿಗೆ ಒಂದು ಲೋಟ ಕಾಫಿ ತಂದು ಕೊಟ್ಟರು. ಹಿಂದೆಯೆ ಅವರ ಮಗಳು ಉಮಕ್ಕ ನೋವಿಗೆ ಸವರಿಕೊಳ್ಳಲು ಮುಲಾಮು ತಂದುಕೊಟ್ಟು ಇವನ ಪರಿಸ್ಥಿತಿ ಕಂಡು ಲೊಚಗುಟ್ಟಿ ಹೋದಳು. ದಿನ ಬೆಳಗಾದರೆ ಸಾಕು ಪತ್ರಿಕೆ ಹಾಗೂ ಹಾಲು ಹಾಕುವ ಕೆಲಸ ಮಾಡುತ್ತಿದ್ದರಿಂದ ಹೀಗೆ ಕಂಡವರ ಓಣಿಯಲ್ಲಿ ಕೂತು ಸೀತೆ ಶೋಕ ಮಾಡಲು ಅವನಿಗೆ ಬಿಡುವಿರಲಿಲ್ಲ. ಮೆಲ್ಲನೆ ಎದ್ದು ಕಳ್ಳ ಹೆಜ್ಜೆ ಹಾಕುತ್ತಾ ಮನೆಯ ಹಿತ್ತಲಿಗೆ ಹೋಗಿ ಮುರಿದು ಬಿದ್ದಿದ್ದ ತನ್ನ ಕೊಟ್ಟಿಗೆ ಕೋಣೆಯನ್ನ ಕಂಡು ಮರುಗುತ್ತಾ ಪುಸ್ತಕˌ ಬಟ್ಟೆಗಳ ಜೊತೆ ಚಾಪೆ ಸುರುಳಿಯನ್ನ ಮಾತ್ರ ಎತ್ತಿಕೊಂಡು ಅವನ್ನೆಲ್ಲಾ ಪಕ್ಕದ ಮನೆಯ ಕಟ್ಟಿಗೆ ಕೊಟ್ಟಿಗೆಯಲ್ಲಿಟ್ಟ. ಅಪ್ಪನ ಗೊರಕೆ ಸ್ಪಷ್ಟವಾಗಿ ಹಿತ್ತಲ ತನಕ ಕೇಳುತ್ತಿತ್ತು. ನೀರಿನ ತೊಟ್ಟಿಯ ಬಳಿ ಮುಖ ಮೈ ಉಜ್ಜಿ ತೊಳೆದುಕೊಂಡ ಚಡ್ಡಿ ಅಂಗಿ ಬದಲಿಸಿ ಅವಸರವಸರವಾಗಿ ಕೆಲಸಕ್ಕೆ ಹೊರಟ. ಆಗಲೆ ಬೆಳಕಾಗುತ್ತಿತ್ತು. ತಡವಾಗಿ ಹೋಗುವಂತಿರಲಿಲ್ಲˌ

*****

ಅವನಿದ್ದ ಮಧ್ಯಮ ವರ್ಗದ ಸಮಾಜದಲ್ಲಿ ಮಕ್ಕಳನ್ನ ಹೆತ್ತವರು ತಪ್ಪೆಸಗಿದಾಗ ತಿದ್ದಲು ದಂಡಿಸೋದೇನೂ ಅಪೂರ್ವ ಸಂಗತಿಯಾಗಿರಲಿಲ್ಲ. ಕಾಲಕಾಲಕ್ಕೆ ತಮ್ಮ ತಮ್ಮ ಮಕ್ಕಳನ್ನ ಹೊಡಿದು ಬಡಿದು ಶಿಕ್ಷಿಸಿ ಅವರ ಅಪರಾಧದ ಅರಿವನ್ನವರಿಗೆ ಮೂಡಿಸಿ ಪ್ರತಿಯೊಬ್ಬರೂ ಸರಿದಾರಿಗೆ ತಂದಿದ್ದವರೆ. ಆದರೆ ಹಾಗಂತ ಯಾರೂ ಈ ಪರಿ ಅಮಾನುಷ ಹಲ್ಲೆಯನ್ನೆಸಗುತ್ತಿರಲಿಲ್ಲ. ಅದಾಗಿ ಸ್ವಲ್ಪ ಕಾಲದ ನಂತರ ಲೋಕದ ಅರಿವು ಅವನ ಮಡ್ಡ ಮಂಡೆಗೂ ಏರಲು ಶುರುವಾದ ಅನಂತರದ ದಿನಗಳಲ್ಲಿ ಬೆಳೆಬೆಳೆಯುತ್ತಾ ಕಾರಣಾಂತರದಿಂದ ಮನೆಯಲ್ಲಿ ಸಿಕ್ಕ ಮಮತೆ ಪ್ರೀತಿ ಹಾಗೂ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ಸಮಾಜಘಾತಕ ಕೃತ್ಯಗಳನ್ನˌ ಅದೂ ಕೆಲವೊಮ್ಮೆ ಕೇವಲ "ಥ್ರಿಲ್" ಪಡೆಯುವ ಕೌತುಕದಿಂದ ಎಸಗಿದ ಎಂತೆಂತಾ ಪರಮ ಪಾತಕಿಗಳಾಗಿ ಬದಲಾಗುತ್ತಿದ್ದ ತಮ್ಮ ಮಕ್ಕಳನ್ನೂ ಸಮರ್ಥಿಸಿಕೊಂಡು ಅಂತವರ ಕಿಡಿಗೇಡಿತನವನ್ನೂ ಮನ್ನಿಸಿ ಅವರ ರಕ್ಷಣೆಗಾಗಿ ಧಾವಿಸುತ್ತಿದ್ದ ಹೆತ್ತವರನ್ನ ಕಂಡಾಗ ಅವನಿಗೆ ಅಯೋಮಯವೆನಿಸುತ್ತಿತ್ತು.


ಗುಣ-ನಡತೆಯಲ್ಲಿ ಹಾಗೇನೂ ಇದ್ದಿರದ ತನಗೆ ಸತ್ಯ ಹೇಳುತ್ತಿದ್ದ ಕಾರಣಕ್ಕೆ ಮಾತ್ರ ಚಿತ್ರಹಿಂಸೆ ಕೊಡುತ್ತಿದ್ದ ಹೆತ್ತವರು ಹಾಗೊಮ್ಮೆ ತಾನೇನಾದರೂ ಇಂತಹ ಭೀಕರ ಪಾತಕಿಯಾಗಿ ಬದಲಾಗಿದ್ದರೆ ಬಿಡಿಸುವುದು ಅತ್ಲಾಗಿರಲಿ ಅವರೆ ಬಂದು ಪ್ರಜ್ಞೆ ತಪ್ಪುವವರೆಗೂ ತದುಕಿ ಕಡೆಗೆ ನೇಣಿಗೇರಿಸಿಯೆ ಹೋಗುತ್ತಿದ್ದರೇನೋ ಅನ್ನಿಸುತ್ತಿತ್ತು. ಅವನ ಅನುಭವದ ಪ್ರಪಂಚ ಹೊರಗಿನ ಲೋಕಾರೂಢಿಯ ಜಗತ್ತಿನಿಂದ ಭಿನ್ನವಾದುದರಿಂದ ಅವನಿಗೆ ಹೀಗನಿಸಿರುತ್ತಿದ್ದುದು ಸಹಜ. ಇದನ್ನ ಉಳಿದವರಿಗೆ ಅಷ್ಟೆ ತೀವೃವಾಗಿ ಅರ್ಥ ಮಾಡಿಸಲು ಅವನು ಅಸಮರ್ಥನಾಗಿದ್ದ.


ಅಂತಹ ಶೋಚನೀಯ ಪರಿಸ್ಥಿತಿಯಲ್ಲಿ ಆಗಾಗ ಅನ್ನ ಹಾಕಿ ಸಲುಹಿದ ಬಪಮˌ ಅವರ ಮನೆಯ ಇಕ್ಕೆಲಗಳಲ್ಲಿ ಬಾಡಿಗೆಗಿದ್ದ ಪುಟ್ಟರಾಜಣ್ಣನ ಮಗಳು ಉಮಕ್ಕ ಹಾಗೂ ಶ್ರೀನಿವಾಸರ ಹೆಂಡತಿ ಅಲ್ಪನಾ ಸಹೃದಯತೆ ತೋರದಿದ್ದಿದ್ದರೆ ಯಾರಿಗೂ ಬೇಡದೆ ಹೋಗಿ ಅವನ ಮಾನಸಿಕ ಪರಿಸ್ಥಿತಿ ಪೂರ್ತಿ ಹದಗೆಡುವ ಸಂಭವವಿತ್ತು. ಹತ್ತನೆ ತರಗತಿಯ ಅವನ ವಾರ್ಷಿಕ ಪರಿಕ್ಷೆಗೆ ಹತ್ತಿರ ಹತ್ತಿರ ಎರಡು ತಿಂಗಳ ಅವಧಿ ಮಾತ್ರ ಬಾಕಿಯಿತ್ತು. ಈ ತನ್ನ ಪರಿಪಾಟಲಿಗೆ ತಾನೆ ಸದಾ ಕಾಲ ಮರುಗುತ್ತಾ ಇರಲೂ ಸಹ ಸಾಧ್ಯವಿರಲಿಲ್ಲ. ಏನಾದರೂ ಸರಿ ತಾನು ಓದಲೆ ಬೇಕುˌ ಮುಂದೆ ತನ್ನನ್ನ ಕಾಯುವ ಏಕೈಕ ಆಸರೆ ಈಗ ತಾನು ಕಲಿಯಲಿರುವ ವಿದ್ಯೆ ಮಾತ್ರ ಅನ್ನುವ ಸಂಪೂರ್ಣ ಅರಿವು ಅವನಿಗಿತ್ತು. 


ಸದ್ಯ ಬೆಳಗಾದರೆದ್ದು ಮನೆಮನೆಗೆ ಸ್ಥಳಿಯ ಮತ್ತು ರಾಜ್ಯ ಮಟ್ಟದ ಒಂದೆರಡು ಪತ್ರಿಕೆಗಳನ್ನ ಜೊತೆಗೆ ಹಾಲನ್ನ ಹಾಕುವುದರಿಂದ ಚೂರುಪಾರು ಸಂಪಾದನೆಯಂತೂ ಆಗುತ್ತಿತ್ತು. ಜೊತೆಗೆ ಬುಕ್ಲಾಪುರದ ರಾಮಸ್ವಾಮಿ ಭಟ್ಟರ ತೈನಾತಿಯಾಗಿ ಮದುವೆ-ಮುಂಜಿ-ನಾಮಕರಣ-ವೈದಿಕ-ವೈಕುಂಠ ಸಮಾರಾಧನೆ ಹೀಗೆ ಅವರು ಕರೆದಲ್ಲಿಗೆ ಅಡುಗೆ ಸಹಾಯಕನಾಗಿ ಹೋಗುತ್ತಿದ್ದ. ಅಲ್ಲಿ ಹೋದಾಗಲೆಲ್ಲ ಐವತ್ತು ರೂಪಾಯಿ ಹಣದೊಟ್ಟಿಗೆ ಹೊಟ್ಟೆ ತುಂಬುವಷ್ಟು ಊಟ ದಕ್ಕುತ್ತಿತ್ತು. 


ಪ್ರತಿ ಶನಿವಾರ ಹೋರಂದೂರಿಗೂ ಆದಿತ್ಯವಾರ ಇಂಡಗದ್ದೆಗೂ ಹತ್ತು ಹದಿನೈದು ಮೈಲಿ ಸೈಕಲ್ ತುಳಿದು ರಾಜಾ ಬೇಕರಿಯ ತಿನಿಸುಗಳನ್ನ ದಾರಿಯುದ್ದ ಸಿಗುತ್ತಿದ್ದ ಅಂಗಡಿಗಳಿಗೆ ಮಾರಿ ಒಂದಷ್ಟು ಗಳಿಸುತ್ತಿದ್ದ. ಅವೆಲ್ಲ ಸಂಪಾದನೆ ಸೇರಿದರೂ ಸಹ ಊಟಕ್ಕೆ ಸಾಲುತ್ತಿರಲಿಲ್ಲ. ದರಿದ್ರದ್ದು ಬೆಳೆಯುವ ಪ್ರಾಯದಲ್ಲಿ ಹಸಿವು ಬೇರೆ ಜಾಸ್ತಿ. ಆದರೂ ಅನಿವಾರ್ಯವಾಗಿ ಕಾಲ ಹಾಕಲೆಬೇಕಿತ್ತು. ಅದರ ಮಧ್ಯ ಪರಿಕ್ಷೆಗೂ ಓದಿಕೊಳ್ಳಬೇಕಿತ್ತು. ಬದುಕು ಅಂದುಕೊಂಡಷ್ಟು ಸುಲಭವಾಗಿರಲ್ಲ ಅನ್ನೋ ಜೀವನ ಪಾಠವನ್ನವನು ಕಲಿಯುತ್ತಾ ತನ್ನನ್ನ ತಾನು ಎದುರಾದ ಪರಿಸ್ಥಿತಿಗೆ ಹೊಂದಿಸಿಕೊಳ್ಳಲೆಬೇಕಿತ್ತು.

( ಇನ್ನೂ ಇದೆ.)



https://youtu.be/A-o_l78NnQc

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೭.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೭.👊

ವಾಸ್ತವದಲ್ಲಿ ನಾವಿರಬೇಕಿದ್ದದ್ದು ಇನ್ನೆಲ್ಲೋˌ ಇಲ್ಲಿ ಹೀಗಿರೋದು ಒಂಥರಾ ಭಂಡಬಾಳು. ಹೀಗಾಗಿಯೆ ನಮಗೆ ಕುಟುಂಬದಲ್ಲೂ ಅಷ್ಟು ಮರ್ಯಾದೆ ಸಿಗುತ್ತಿಲ್ಲ ಅನ್ನುವ ಅರಿವು ಮೆಲ್ಲಗೆ ಮನಸೊಳಗೆ ಮೊಳಕೆಯೊಡೆದು ಮೂಡ ತೊಡಗುತ್ತಿದ್ದಂತೆ ಇರುಸು ಮುರುಸಾಗಲು ಆರಂಭಿಸಿದ ಕಾರಣಕ್ಕೆ ನಿಧಾನವಾಗಿ ಅವನ ಹದಿಹರೆಯದ ಮನಸ್ಸು ಹಾಗಿಲ್ಲದೆ ಸ್ವಾಭಿಮಾನ ಬಿಟ್ಟು ಹೀಗೆ ಅಜ್ಜನ ಆಶ್ರಯದಲ್ಲುಳಿದಿರುವ ಅಪ್ಪ - ಅಮ್ಮನ ಮೇಲೆಯೆ ಬಂಡೇಳ ತೊಡಗಿತು. ಅದನ್ನ ಕೇವಲ ಮನಸೊಳಗೆ ಇಟ್ಟುಕೊಂಡು ಬೇಯದೆ ಸಮಯ ಸಂದರ್ಭ ನೋಡಿಕೊಂಡು ಒಂದೆರಡು ಬಾರಿ ತಂದೆ-ತಾಯಿಗೂ ಮರ್ಮಕ್ಕೆ ತಾಗುವಂತೆ ಹೇಳಿಯೂ ಬಿಟ್ಟ. ಅವನ ಅಂತಹ ನೇರ ಮಾತುಗಳನ್ನ ಕೇಳಿ ಅಪ್ರತಿಭರಾದ ಕೈಲಾಗದವ ಮೈ ಪರಚಿಕೊಂಡಂತೆ ಅಪ್ಪ ಅಂದಿನಿಂದ ಸಣ್ಣಪುಟ್ಟ ವಿಷಯಕ್ಕೂ ಸಿಡಿಮಿಡಿಗೊಳ್ಳುತ್ತಾ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಆಯುಧವನ್ನಾಗಿಸಿಕೊಂಡು ಅವನನ್ನ ಥಳಿಸುವುದನ್ನೆ ಕಾಯಕವನ್ನಾಗಿಸಿಕೊಂಡರೆˌ ಅಮ್ಮ ಸರಿಯಾಗಿ ಅಡುಗೆ ಮಾಡದೆ - ಒಂದೊಮ್ಮೆ ಮಾಡಿದರೂ ಸಹ ಸರಿಯಾಗಿ ಹೊಟ್ಟೆಗೆ ಹಾಕದೆ ತಮ್ಮ ಮೇಲಿನ್ನೂ ಆಶ್ರಿತನಾಗಿದ್ದ ಅವನನ್ನ ಬೆಳೆಯುವ ಪ್ರಾಯದಲ್ಲಿ ದೈಹಿಕವಾಗಿಯೂ-ಮಾನಸಿಕವಾಗಿಯೂ ಹಿಂಸಿಸಲಾರಂಭಿಸಿದರು.

ಹೀಗೆ ಕೂತಲ್ಲಿ ನಿಂತಲ್ಲಿ ತಪ್ಫಿದ್ದರೂ ಇಲ್ಲದಿದ್ದರೂ ನೆಪ ಹುಡುಕಿ ಚಚ್ಚುವ ಹೆತ್ತವರ ದೌರ್ಜನ್ಯ ಮಿತಿಮೀರ ತೊಡಗಿದಾಗ ಅವನ ಮಾನಸಿಕ ಸ್ಥೈರ್ಯ ಕುಗ್ಗತೊಡಗಿತು. ಓದಿನಲ್ಲಿ ಮುಂದಿದ್ದ ಅವನಿಗೆ ಅಘಾತವಾಗುವಂತೆ ಒಂದು ಜನವರಿಯ ರಾತ್ರಿ ಮನೆಯಲ್ಲಿ ದೊಡ್ಡದೊಂದು ಪ್ರಹಸನವೆ ನಡೆದು ಹೋಯಿತು. ಅವನ ಹತ್ತನೆ ತರಗತಿಯ ಅಂತಿಮ ಪರಿಕ್ಷೆಗಳಿಗೆ ನೆಟ್ಟಗೆ ಎರಡು ತಿಂಗಳ ಸಮಯವೂ ಬಾಕಿಯಿರಲಿಲ್ಲ. ಕುಟುಂಬ ಸಣ್ಣದಾದ ಮೇಲೆ ದೊಡ್ಡ ಮನೆಯನ್ನ ಬಾಡಿಗೆಗೆ ಬಿಟ್ಟ ಅವನಜ್ಜ ಮಗಳು-ಅಳಿಯನ ವಾಸಕ್ಕೆ ಹಿಂದೆ ಬಾಡಿಗೆಗೆ ಬಿಡುತ್ತಿದ್ದ ಸಣ್ಣ ಭಾಗವನ್ನ ಬಿಟ್ಟುಕೊಟ್ಚಿದ್ದರು. ತಮ್ಮ ವಾಸಕ್ಕೆ ಒಂದು ಪ್ರತ್ಯೇಕ ಕೋಣೆಯನ್ನ ಮನೆಯ ಮತ್ತೊಂದು ಮೂಲೆಯಲ್ಲಿ ಕಟ್ಟಿಸಿಕೊಂಡು ಆಗಷ್ಟೆ ಹರೆಯಕ್ಕೆ ಕಾಲಿಡುತ್ತಿದ್ದ ಅವನ ಖಾಸಗಿತನವನ್ನ ಪರಿಗಣಿಸಿ ದನಗಳನ್ನೆಲ್ಲ ಮಾರಿ ದಶಕಗಳಾಗಿದ್ದರಿಂದ ಖಾಲಿ ಹೊಡೆಯುತ್ತಿದ್ದ ಮನೆ ಹಿಂಬದಿಯ ಕೊಟ್ಟಿಗೆಯ ಒಂದು ಭಾಗವನ್ನ ಚೆನ್ನಾಗಿ ದಬ್ಬೆಗಳನ್ನ ಏರಿಸಿ ಬಟ್ಟೆಯಿಂದ ಮರೆ ಮಾಡಿ ಕಟ್ಟಿ ಕೋಣೆಯಂತಾಗಿಸಿ ಬಿಟ್ಟುಕೊಟ್ಟಿದ್ದರು. ತನ್ನ ಚಾಪೆ ಸುರುಳಿ-ಪುಸ್ತಕಗಳು-ಬಟ್ಟೆಬರೆ-ಪಾಕೆಟ್ ರೇಡಿಯೋ-ಪಾಕೆಟ್ ವಾಕಮೆನ್-ಅದಕ್ಕೆ ಅವನೆ ತಯಾರಿಸಿದ್ದ ಮಡಿಕೆ ಧ್ವನಿವರ್ಧಕ-ಗ್ರಂಥಾಲಯದ ಎರವಲು ಪುಸ್ತಕಗಳನ್ನ ವರ್ಗಾಯಿಸಿದ ಅವನಲ್ಲಿಗೆ ಖುಷಿಯಿಂದಲೆ ನೆಲೆ ಬದಲಿಸಿದ್ದ. ಮನೆಯ ಒಳಗೆ ಬಾರದೆಯೆ ಪಕ್ಕದ ಓಣಿಯಿಂದ ನೇರ ಹಿತ್ತಲಿಗೆ ಬಂದು ಅಲ್ಲಿಂದ ತನ್ನ ಕೊಟ್ಟಿಗೆ ಕೋಣೆ ಹೊಕ್ಕುವ ಸ್ವಾತಂತ್ರ್ಯ ಅವನಿಗೆ ತಾನೂ ದೊಡ್ಡವನಾದೆ! ಅನ್ನೋ ಆತ್ಮವಿಶ್ವಾಸದ ಭಾವನೆ ಮೂಡಿಸ ತೊಡಗಿದ್ದ ಕಾಲ ಅದು. ರಾತ್ರಿ ಬೆಳಕಿಗೆ ಒಂದು ವಿದ್ಯುತ್ ಬಲ್ಬ್ ಸಹ ಹಾಕಿಕೊಟ್ಟುˌ ಅದರ ಹೋಲ್ಡರಿನ ಮೂಲಕವೆ ಅವನ ಕ್ಯಾಸೆಟ್ ಕೇಳುವ ಖಯಾಲಿಗೂ ವ್ಯವಸ್ಥೆ ಮಾಡಿಕೊಟ್ಟ ಅಜ್ಜ ಅವನಿಗುಪಕರಿಸಿದ್ದರು. ನೆಲ ನಯವಾಗಿದ್ದ ಹಾಸುಗಲ್ಲಿನದಾಗಿದ್ದರಿಂದ ಗುಡಿಸಿ ಒರೆಸಿಟ್ಟುಕೊಳ್ಳುವುದೊಂದು ಸಮಸ್ಯೆಯೆ ಆಗಿರಲಿಲ್ಲ.

ಹಾಗೊಂದು ದಿನ ಅಜ್ಜ ತನ್ನ ಎರಡನೆ ಮಗಳ ಮನೆಗಂತ ಕಾರ್ಕಳಕ್ಕೆ ಹೋಗಿದ್ದಾಗ ಇವನ ಪಾಲಿನ ಶನಿದೆಸೆ ಆರಂಭವಾಯ್ತು. ಆ ರಾತ್ರಿ ಎಂದಿನಂತೆ ರೇಡಿಯೋದಲ್ಲಿ ಟ್ಯೂನು ಮಾಡುವಾಗ ರಾತ್ರಿಯ ತಂಪಿನಲ್ಲಿ ಸ್ಪಷ್ಟವಾಗಿ ಕೇಳಲಾರಂಭಿಸಿದ್ದ ಎರಡನೆ ಬ್ಯಾಂಡಿನ ಬಿಬಿಸಿ ಹಾಕಿಕೊಂಡು ಅರೆಬರೆ ಅರ್ಥವಾಗುತ್ತಿದ್ದ ಯಾರದ್ದೋ ಆಂಗ್ಲ ಸಂದರ್ಶನ ಕೇಳಿಸಿಕೊಳ್ಳುತ್ತಾ ನೆಲದಲ್ಲಿ ಹಾಸಿದ ಚಾಪೆಯ ಮೇಲೆ ಕಾಲುಚಾಚಿ ಕೂತು ಗೋಡೆಗೊರಗಿ ಮಂಡಿ ಮುಚ್ಚುವಂತೆ ಮಂದರಿ ಹೊದ್ದುಕೊಂಡು ಯಾವುದೋ ನೋಟ್ಸನ್ನ ಓದಿಕೊಳ್ಳುತ್ತಾ ಪರಿಕ್ಷೆಯ ತಯಾರಿಯಲ್ಲಿ ತೊಡಗಿದ್ದ. ಆಗ ಕರ್ಕಶವಾಗಿ ಕೇಳಿ ಬಂತು ಆಗಷ್ಟೆ ಕೆಲಸ ಮುಗಿಸಿ ಮನೆಗೆ ಮರಳಿ ಬಂದಿದ್ದ ಅಪ್ಪನ ಬೆದರಿಕೆಯ ಧ್ವನಿ. "ಇನ್ನು ಮುಂದೆ ನಿನಗೆ ಪುಗಸಟ್ಟೆ ಊಟ ಹಾಕಲು ಆಶ್ರಯ ಕೊಡಲು ಸಾಧ್ಯವಿಲ್ಲ! ದುಡಿದು ದಿನಕ್ಕೆ ಐವತ್ತು ರೂಪಾಯಿ ತಂದು ಕೊಡೋದಾದ್ರೆ ಮಾತ್ರ ಇಲ್ಲಿರು" ಅಂತ ಒಂದು ರಾತ್ರಿ ಚೂರು ಅಮಲೇರಿಸಿಕೊಂಡಿದ್ದ ಅಪ್ಪ ತೊದಲುತ್ತಾ ನುಡಿದಾಗ ಮಾತ್ರ ಇವನ ತಾಳ್ಮೆಯ ಕಟ್ಟೆ ಒಡೆದೆ ಹೋಯಿತು.

ತಕ್ಷಣವೆ ಯಾವ ಹಿಂಜರಿಕೆಯೂ ಇಲ್ಲದೆ "ನೀವು ಮತ್ತು ನಿಮ್ಮ ಹೆಂಡತಿ ನನಗೆ ಅನ್ನ ಹಾಕ್ತಿರೋದು ಅಷ್ಟರಲ್ಲೆ ಇದೆ. ಈಗೆಲ್ಲಾ ಮದುವೆ-ಮುಂಜಿಗಳಿಗೆ ಅಡುಗೆ ಸಹಾಯಕನಾಗಿ ಬಡಿಸಲು ಹೋದಾಗಲಷ್ಟೆ ನಾನು ಹೊಟ್ಟೆ ತುಂಬಾ ಉಣ್ಣುತ್ತಿರೋದು ಗೊತ್ತಿರಲಿ. ನನಗೆ ಅಲ್ಲಿ ಸಿಗೋ ಐವತ್ತು ರೂಪಾಯಿ ಸಂಬಳವನ್ನೂ ನಿಮಗೆ ತಂದು ಕೊಡೋದು ನನ್ನ ಇಷ್ಟವಾಗಬೇಕೆ ಹೊರತುˌ ನಿಮ್ಮ ಒತ್ತಾಯವಲ್ಲ. ಖಂಡಿತ ನಯಾಪೈಸೆಯನ್ನೂ ಕೊಡಲ್ಲ. ಅದನ್ನೂ ಕೊಟ್ಟು ನಾನೇನು ಮಣ್ಣು ತಿನ್ನಲ? ದಿನಾ ಯಾವುದಾದರೂ ಸಮಾರಂಭ ಆಗಿ ಕೆಲಸ ಸಿಗಲು ಇದೇನು ಬೊಂಬಾಯಿಯ? ಆಗೊಮ್ಮೆ-ಈಗೊಮ್ಮೆ ಅದೂ ಮದುವೆ ಹಂಗಾಮಿನಲ್ಲಿ ಮಾತ್ರ ಕೆಲಸ ಇರೋದು. ಬಾಕಿ ದಿನಗಳೆಲ್ಲ ನಾನೇನು ಕದ್ದು ತಂದು ಕೊಡಬೇಕ ಐವತ್ ರೂಪಾಯಿ ನಿಮಗೆ?. ಈಗ ನಾನಿನ್ನೂ ಓದುತ್ತಿರೋ ಹುಡುಗ. ನನ್ನನ್ನ ಓದುವ ತನಕ ಬೆಂಬಲಿಸೋದು ನಿಮ್ಮ ಕೃಪೆಯಲ್ಲ ಕರ್ತವ್ಯ ತಿಳ್ಕಳಿ. ಅದು ಬಿಟ್ಟು ನನ್ನಲ್ಲೆ ದುಡ್ಡು ಕೇಳಕ್ಕೆ ನಾಚಿಕೆಯಾಗಬೇಕು ನಿಮ್ಮಿಬ್ಬರಿಗೂ. ಮರಿಬೇಡಿ ನೀವೆ ನಿಮ್ಮ ಮಾವನ ಆಶ್ರಯದಲ್ಲಿ ನಾಚಿಕೆಗೆಟ್ಟು ಪುಗಸಟ್ಟೆ ವಾಸ ಮಾಡ್ತಾ ಇರೋದು. ಹಾಗೆ ನೋಡಿದರೆ ನಾನಿಲ್ಲಿ ಇರೋದು ತಪ್ಪಲ್ಲ ಇದು ನನ್ನಜ್ಜನ ಮನೆ. ನೀವಿಲ್ಲಿರೋದೆ ಅವಮಾನಕರ. ಮೊದ್ಲು ಬೇರೆ ಮನೆ ಮಾಡಿ ನಾವೂ ಅಲ್ಲಿಗೆ ಬರ್ತಿವಿˌ ಆಗಲ್ಲಿ ನಿಮ್ಮ ಕಟ್ಟಳೆಗಳನ್ನ ನನ್ನ ಮೇಲೆ ಹೇರಿ ಆಗ ಒಪ್ಪಿಕೊಳ್ತಿನಿ. ನೀವೆ ನಮ್ಮಲ್ಲಿ ಬಂದಿರೋವಾಗ ಪೊಗರು ತೋರಿಸಬೇಡಿ. ದಿನ ಐವತ್ತು ರೂಪಾಯಿ ಅತಿಥಿಯಾದ ನಿಮಗೆ ಕೊಟ್ಟು ಹಕ್ಕಿನ ಮೊಮ್ಮಗ ನಾನಿಲ್ಲಿರಕ್ಕೆ ನನ್ನಜ್ಜನ ಮನೆಯೇನು ಲಾಡ್ಜ್ ಅಲ್ಲ. ಹಾಗೇನಾದ್ರೂ ಕೊಡಲೆ ಬೇಕಿದ್ರೆ ಅಜ್ಜನಿಗೆ ಇಲ್ಲಿರೋಕೆ ಬಾಡಿಗೆ ತಿಂಗಳ ತಿಂಗಳ ಸರಿಯಾಗಿ ಕೊಡಬೇಕಾಗಿರೋವ್ರು ದುಡಿಯುತ್ತಿರೋ ನೀವಿಬ್ರು ಗೊತ್ತಾಯ್ತ?!" ಅಂತ ಅವನು ಅಪ್ಪನ ವಿರುದ್ಧ ಕೆರಳಿ ನಿಂತು ಕಿರುಚಿದ. 

ಆಗೆಲ್ಲ ಸಿಕ್ಕಸಿಕ್ಕದ್ದನ್ನೆಲ್ಲಾ ಓದಿ ಸಮೃದ್ಧವಾಗುತ್ತಿದ್ದ ಅವನ ಯೋಚನಾ ಲಹರಿ ಇಷ್ಟು ತರ್ಕಬದ್ಧವಾಗಿ ಕಠಿಣ ನುಡಿಗಳನ್ನ ಅವನಿಂದ ಭಿಡೆಯಿಲ್ಲದೆ ಆಡಿಸಿತ್ತು. ಇನ್ನೂ ಹಿರಿಯರ ಹೊಡೆತ ಬಡಿತಗಳಿಂದ ಪಾರಾಗಲಾಗದ ಪ್ರಾಯದಲ್ಲಿದ್ದ ಸಣಕಲ ದೇಹದವನ ನಾಲಗೆ ಮಾತ್ರ ಸ್ಫುಟವಾಗಿತ್ತು. ಪರಿಣಾಮ ಮಾತ್ರ ಸಹಜವಾಗಿ ಭೀಕರವಾಯ್ತು. ಮೊದಲನೆಯದಾಗಿ ತನ್ನಾಜ್ಞೆಯನ್ನ ಧಿಕ್ಕರಿಸಿ ಎದುರುತ್ತರ ಕೊಡುತ್ತಿರೋ ಮಗˌ ಎರಡನೆಯದಾಗಿ ತನ್ನ ಹುಳುಕುಗಳನ್ನ ಸರಿಯಾಗಿ ಗುರುತಿಸಿ ಕೊಟ್ಟ ಅವನ ಮಾತುಗಳಿಂದಾದ ಮರ್ಮಾಘಾತˌ ಕೊನೆಯದಾಗಿ ಆ ಹೊತ್ತಿನಲ್ಲಿ ಹೊಟ್ಟೆಗಿಳಿದಿದ್ದ ದ್ರವರೂಪಿ ಪರಮಾತ್ಮನ ಕುಮ್ಮಕ್ಕು ಇಷ್ಟೂ ಒಂದಾಗಿ ಕೈಗೆ ಸಿಕ್ಕ ಸೌದೆ-ಇಟ್ಟಿಗೆ-ಹೆಂಚು ಹಿಡಿದು ಮುಖ-ಮೂತಿ ನೋಡದೆ ಚಚ್ಚಿ ಹಾಕಿದರು. ಅವರ ಸೈಂಧವ ಹಿಡಿತದಿಂದ ಅದು ಹೇಗೋ ತಪ್ಪಿಸಿಕೊಂಡು ಪಾರಾಗಿ ಜೀವ ಉಳಿಸಿಕೊಂಡು ಬೀದಿಗೆ ಓಡಿದ ಅವನಿಗೆ ಈ ಅನಿರೀಕ್ಷಿತ ದಾಳಿಯಿಂದ ಬೊಬ್ಬೆ ಹೊಡೆಯುವ ಶಕ್ತಿಯೂ ಉಳಿದಿರಲಿಲ್ಲ. ಬಿದ್ದ ಪೆಟ್ಟಿಗೆ ಬಾಯಿಯೊಳಗಾದ ಗಾಯಕ್ಕೋ-ಹೊಟ್ಟೆಗೆ ಒದ್ದ ರಭಸಕ್ಕೆ ಒಳಗಿಂದ ಚಿಮ್ಮಿ ಬಂದದ್ದೋ ಗೊತ್ತಿಲ್ಲ ರಸ್ತೆಗೆ ಎದುರಾಗಿ ಕೂತು ಕೆಮ್ಮಿದವನ ಬಾಯಿಯಿಂದ ರಕ್ತ ಚಿಮ್ಮಿ ಬಂತು. ಅವ ಸೋತಿದ್ದ.

(ಇನ್ನೂ ಇದೆ.)


https://youtu.be/qhBnygVePWs

14 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೪.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೪.👊


ಬೆಳಗ್ಯೆ ಅಂದಿನ ದಿನಪತ್ರಿಕೆಯನ್ನ ತಂದು ಕೊಟ್ಟವರು ಅದೆ ಸಂಜೆ ಅದನ್ನವರು ಮರಳಿ ಒಯ್ಯುವ ಮೊದಲು ಹೋಗಿ ಅದನ್ನ ಸಹ ಓದಿ ಮುಗಿಸುವ ಅಭ್ಯಾಸ ಅವನ ಮೈಗಂಟಿತು. ಆದರೆ "ಕನ್ನಡಪ್ರಭ"ದಷ್ಟು ಬರೆ ಊರ ಸತ್ತವರ ವಿವಿಧ ಗಾತ್ರಗಳ ಚಿತ್ರಗಳೊಡನೆ ಶ್ರದ್ಧಾಂಜಲಿˌ ಬಾಷ್ಪಾಂಜಲಿಗಳ ಜಾಹಿರಾತುಗಳೆ ತುಂಬಿ ತುಳುಕುತ್ತಿದ್ದ ವೈಕುಂಠ ಸಮಾರಾಧನೆಯ ಆಹ್ವಾನ ಪತ್ರಿಕೆಯಂತಿದ್ದ ಸಂಪಾದಕೀಯವೂ ಪ್ರಕಟವಾಗಿರದ "ಉದಯವಾಣಿ" ಅವನಿಗೆ ಒಂಚೂರೂ ರುಚಿಸಲಿಲ್ಲ. ಆದರಿನ್ನೂ ದುಡಿಮೆ ಆರಂಭಿಸಿರದೆ ಸ್ವಂತದ ಸಂಪಾದನೆ ಇಲ್ಲದ ಅವನಿಗೆ ಖರೀದಿಸಿ ಓದುವ ಸಾಮರ್ಥ್ಯವಿನ್ನೂ ಇಲ್ಲದಿದ್ದ ಕಾರಣ ಪಾಲಿಗೆ ಬಂದದ್ದನ್ನೆ ಪಂಚಾಮೃತ ಅಂದುಕೊಂಡು ಎರವಲು ಪತ್ರಿಕೆಗಳನ್ನ ಓದುವ ಅನಿವಾರ್ಯತೆಯಿದ್ದಿತ್ತಲ್ಲ? ಬೇರೆ ಆಯ್ಕೆಯೂ ಇದ್ದಿರಲಿಲ್ಲ.

ಪುಟ್ಟರಾಜಣ್ಣನ ಮನೆಯೊಂತರಾ ಅವನ ಪಾಲಿನ ಗ್ರಂಥಾಲಯ. ಅವರು ತರಿಸುತ್ತಿದ್ದ ದಿನ-ವಾರ-ಮಾಸ ಪತ್ರಿಕೆಗಳುˌ ಗ್ರಂಥಾಲಯದ ಸದಸ್ಯತ್ವ ಬಳಸಿ ಎರವಲು ತರುತ್ತಿದ್ದ ಕಾದಂಬರಿಗಳು ಇವೆಲ್ಲಕ್ಕೂ ಅವರಿಗಿಂತ ಮೊದಲು ಇವನೆ ಓದುಗನಾಗಿರುತ್ತಿದ್ದುದು ಮೂಮೂಲು. ಹೆಚ್ ಜಿ ರಾಧಾದೇವಿˌ ವಿಜಯಶ್ರಿˌ ಹೆಚ್ ಎಸ್ ಪಾರ್ವತಿˌ ಸಾಯಿಸುತೆˌ ಕೌಂಡಿನ್ಯˌ ಬೀಚಿˌ ಸಿ ಎನ್ ಮುಕ್ತಾˌ ಸಾಕೃ ಪ್ರಕಾಶ್ˌ ಶಾರದಾ ಉಳುವಿˌ ನರಸಿಂಹಯ್ಯˌ ರಾಜಾ ಚಂಡೂರು ತರದವರು ಅನುವಾದಿಸಿದ ತೆಲುಗಿನ ಉದ್ದನಪೂಡಿ ಸುಲೋಚನಾರಾಣಿˌ ಯಂಡಮೂರಿ ವೀರೇಂದ್ರನಾಥ ಮುಂತಾದ ಬ್ರಾಂಡಿನ "ಜನಪ್ರಿಯ" ಸಾಹಿತಿಗಳು ಬರೆಬರೆದು ಗುಡ್ಡೆ ಹಾಕಿರುತ್ತಿದ್ದ ಕಾದಂಬರಿಗಳೆ ಹೆಚ್ಚಾಗಿ ಇರುತ್ತಿದ್ದು ಅಪರೂಪಕ್ಕೆ ಅವರು ಸತ್ಯಕಾಮˌ ಭೈರಪ್ಪˌ ಕುವೆಂಪು ರಚನೆಯ ಪುಸ್ತಕಗಳನ್ನೂ ಅವರು ಓದಲು ತರೋದಿತ್ತು. 

ಬಹಳಷ್ಟು ಸಲ ಅವುಗಳಲ್ಲಿ ಬರೆದಿರುವ ಅನೇಕ ಅಂಶಗಳು ನಾಲ್ಕಾಣೆಯಷ್ಟೂ ಸಹ ಅವನಿಗೆ ಅರ್ಥವಾಗುತ್ತಿರದಿದ್ದರೂ ಕೂಡ ಅವನ ಮೆದುಳು ಹೊಕ್ಕಿದ್ದ ಓದುವ ಹುಳ ಸಿಕ್ಕಸಿಕ್ಕದನ್ನೆಲ್ಲಾ ಓದುವ ಗೀಳಿಗೆ ಅವನನ್ನ ಕ್ರಮೇಣ ದಾಸನನ್ನಾಗಿಸುತ್ತಿತ್ತು.

ದಿನ ಬೆಳಗಾದರೆ ಸಾಕು ಪುಟ್ಚರಾಜಣ್ಣನ ಹೆಂಡತಿ ಪಾರ್ವತಮ್ಮ ಚೆನ್ನಾಗಿ ಗುಡಿಸಿ ತೊಳೆದಿರುತ್ತಿದ್ದ ಅವರ ಮನೆಯ ಅಂಗಳದಲ್ಲಿ ಹಾಸಿದ್ದ ಹಾಸುಗಲ್ಲುಗಳ ಮೇಲೆ ಅವರದೆ ಗೇಟಿಗೆ ಪೇಪರು ಹಾಕುವ ಹುಡುಗರು ಸಿಕ್ಕಿಸಿ ಹೋಗಿರುತ್ತಿದ್ದ ತೀರಾ ಕನಿಷ್ಠ ಗುಣಮಟ್ಟದ ಕಾಗದದಲ್ಲಿ ಪ್ರಕಟವಾಗಿರುತ್ತಿದ್ದ ಕನ್ನಡಪ್ರಭ ಹಾಗೂ ಛಲಗಾರಗಳನ್ನ ಚಾಪೆಯಂತೆ ಹಾಸಿಕೊಂಡು ಅವುಗಳ ಮೇಲೆ ಮಲಗಿಕೊಂಡು ಅವುಗಳಲ್ಲಿ ಪ್ರಕಟವಾಗುತ್ತಿದ್ದ ಮೂರು ಮಾರ್ಕಿನ ಬೀಡಿಯ ಜಾಹಿರಾತಿನಿಂದ ಆರಂಭಿಸಿ ನಿತ್ಯ ಭವಿಷ್ಯದಿಂದ ಹಿಡಿದು ಶೇರುಪೇಟೆ ಸಮಾಚಾರ - ಕಡೆಗೆ ಬೆಂಗಳೂರಿನಲ್ಲಿ ಇಂದಿನ ಬಂಗಾರದ ದರದವರೆಗೂ ತನಗೆ ಒಂಚೂರೂ ಉಪಯೋಗವಿಲ್ಲದ ಮಾಹಿತಿಗಳನ್ನೂ ಸೇರಿಸಿ ಒಂದಕ್ಷರವನ್ನೂ ಬಿಡದೆ ಓದುವ ಅವನ ಉದ್ಧಟತನ ಪುಟ್ಟರಾಜಣ್ಣನ ಕುಟುಂಬಕ್ಕೆ ಕಿರಿಕಿರಿ ಹುಟ್ಟಿಸುತ್ತಿದ್ದರೂ ಸಹ ಅಪಾರ ತಾಳ್ಮೆಯಿಂದ ಅವರೆಲ್ಲ ಅವನ ಈ ಗೂಂಡಾಗಿರಿಯನ್ನು ಸಹಿಸಿ ಕ್ಷಮಿಸುತ್ತಿದ್ದರು. 

ಕಲ್ಲು ಹಾಸಿನ ಮೇಲೆ ಆರದೆ ಉಳಿದಿರುತ್ತಿದ್ದ ನೀರು ಹೀರಿ - ಅದರ ಮೇಲೆ ಬಿದ್ದು ಒದ್ದಾಡಿದ ಇವನ ಒತ್ತಡದಿಂದ ಅತ್ತಿತ್ತಲಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡ ಪತ್ರಿಕೆ ನಿಜವಾಗಿಯೂ ಅದನ್ನ ಕಾಸು ಕೊಟ್ಟು ಖರೀದಿಸಿದವರ ಕೈ ಸೇರುವ ಹೊತ್ತಿಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಹರಿದ ಬಾಳೆಲೆಯಂತಾಗಿರುತ್ತಿದ್ದ ನಿಷ್ಪಾಪಿ ಹೆಣ್ಣಿನಂತಾಗಿರುತ್ತಿದ್ದರೂˌ ಅವರವನ ಈ ಅಧಿಕಪ್ರಸಂಗವನ್ನು ಮನ್ನಿಸಿ ಸುಮ್ಮನಿರುತ್ತಿದ್ದರು. ಆಗೆಲ್ಲಾ ಹಾಗೆ ಮಾಡೋದು ತಪ್ಪು ಅನ್ನುವ ಕನಿಷ್ಠ ಪ್ರಜ್ಞೆಯೂ ಇದ್ದಿರದಿದ್ದ ಅವನು ಅದನ್ನ ಹಕ್ಕೆಂಬಂತೆ ಭಾವಿಸಿ ವರ್ಷಗಟ್ಟಲೆ ಅವರೆಲ್ಲರನ್ನೂ ಸತಾಯಿಸಿದ್ದಾನೆ.

ಅವರ ಮನೆಯಲ್ಲಿ ಹೀಗೆ ಮುಂಜಾನೆ ಎದ್ದವನೆ ಕದ್ದು ಪತ್ರಿಕೆ ಓದುವˌ ಹೇಳದೆ ಕೇಳದೆ ಒಳ ನುಗ್ಗಿ ಬಂದು ಕನಿಷ್ಠ ಅನುಮತಿ ಕೇಳುವ ಸೌಜನ್ಯವನ್ನೂ ತೋರದೆ ಮನೆಗೆ ತಂದಿರುತ್ತಿದ್ದ ಪುಸ್ತಕಗಳನ್ನ ತೆಗೆದುಕೊಂಡೊಯ್ಯುವ ಇವನ ಇಂತಹ ದಬ್ಬಾಳಿಕೆಯ ನಡುವಳಿಕೆಗಳು ಹದ್ದುಮೀರಿದಾಗ ಅದನ್ನ ವಿರೋಧಿಸುತ್ತಿದ್ದವಳು ಪುಟ್ಟರಾಜಣ್ಣನ ಮಗಳು ಸಣ್ಣಿ ಅಲಿಯಾಸ್ ಉಮಕ್ಕ ಮಾತ್ರ. ಆದರೆ ಅವಳ ವಿರೋಧವನ್ನೆಲ್ಲ ಲೆಕ್ಕಕ್ಕೇ ಇಟ್ಟಿರದಿದ್ದ ಅವನು ಕಾಲೇಜಿನ ಮೊದಲ ವರ್ಷದಲ್ಲಿದ್ದ ಅವಳ ಪಠ್ಯಪುಸ್ತಕಗಳನ್ನೆ ಅವಳಿಗೆ ಹೇಳದೆ ತೆಗೆದು ಪರಿಶೀಲಿಸುತ್ತಿದ್ದ. 

ಹಾಗೊಂದು ರೇಡು ಹಾಕುತ್ತಿದ್ದಾಗ ಅವನ ಕೈಗೆ ಕೆ ಪಿ ಪೂರ್ಣಚಂದ್ರ ತೇಜಸ್ವಿ ಬರೆದಿದ್ದˌ ಆಗ ಕುವೆಂಪು ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ತರಗತಿಗೆ ಪಠ್ಯವಾಗಿ ಆಯ್ಕೆಯಾಗಿದ್ದ "ಅಲೆಮಾರಿಯ ಅಂಡಮಾನ್" ಸಿಕ್ಕಿತು. ಆ ಪ್ರವಾಸ ಕಥನವನ್ನು ಓದಿದವನಿಗೆ ಏಕಕಾಲಕ್ಕೆ ಇಷ್ಟು ಕಾಲ ತಾನು ಓದುತ್ತಿದ್ದ ಇತರರ ಒಣ ಸಾಹಿತ್ಯ ಅದೆಷ್ಟು ರಸಹೀನ ಅನ್ನುವುದು ಅರ್ಥವಾಗುವುದರೊಂದಿಗೆ. ಇಷ್ಟು ದಿನ ಈ ಲೇಖಕರನ್ನ ಓದದಿದ್ದದ್ದಕ್ಕೆ ಅಪಾರ ವ್ಯಥೆಯೂ ಆಯಿತು. ಎರಡನೆ ವರ್ಷದ ಪದವಿಯ ಕಾಲದಲ್ಲೂ ಅವಳದ್ದೆ ಪಠ್ಯ ಪುಸ್ತಕದ ಸಾಲಿನಲ್ಲಿದ್ದ ಸಾಗರದ ಸಾಹಿತಿ ನಾರ್ಬರ್ಟ್ ಡಿ'ಸೋಝಾ಼ರ ಕಾದಂಬರಿ "ಕೊಳಗ"ದ ಓದು ಅವನನ್ನ ಬೇರೆಯದ್ದೆ ಒಂದು ಲೋಕದ ಪಯಣವನ್ನ ಮಾಡಿಸಿತು. 


ವಿಜಯೇಂದ್ರಣ್ಣನ ತಮ್ಮ ರಾಧಾಕೃಷ್ಣಯ್ಯನ ಆಪ್ತ ಸ್ನೇಹಿತರಾಗಿದ್ದ ಈ ಡಿ'ಸೋಝ಼ರನ್ನ ಆತ ಬಾಲ್ಯದಿಂದಲೆ ನೋಡಿ ಬಲ್ಲ. ಅವರ ಮೊತ್ತಮೊದಲ ಕಾದಂಬರಿಯನ್ನ ಅವರು "ನನ್ನ ಗೆಳೆಯ ರಾಧಾಕೃಷ್ಣನಿಗೆ" ಅಂತಲೆ ಅರ್ಪಣೆ ಮಾಡಿದ್ದಾರೆ. ಆದರೆ ಅವರ ಸಾಹಿತ್ಯವನ್ನವನು ಓದಿದ್ದು ಮಾತ್ರ ಅದೆ ಮೊದಲು. ಬರವಣಿಗೆಯ ಹೊಸ ಮಜಲುಗಳ ಪರಿಚಯವಾಗುತ್ತಾ ಹೋದಂತೆ ಅದಕ್ಕೂ ಹಿಂದೆ ಓದುತ್ತಿದ್ದ ಲೇಖಕರ ಪುಸ್ತಕಗಳೆಲ್ಲ ತೀರಾ ಸಪ್ಪೆ ಅನ್ನಿಸಿ ಅವುಗಳ ಓದನ್ನ ಕ್ರಮೇಣ ತ್ಯಜಿಸ ತೊಡಗಿದ. 

ಅಲ್ಲದೆ ಗ್ರಂಥಾಲಯಕ್ಕೆ ಹೋದರೆ ಯಾವುದೆ ಪುಸ್ತಕವನ್ನಾದರೂ ಉಚಿತವಾಗಿ ಓದಬಹುದು ಅನ್ನುವ ಪುಟ್ಟರಾಜಣ್ಣನ ಮಾಹಿತಿಯ ಬೆನ್ನು ಹಿಡಿದು ಹೋಗಿ ಅಲ್ಲಿ ಧೂಳು ತುಂಬಿದ್ದ ಅರೆಗಳಲ್ಲಿ ಹುಳ ತಿನ್ನಲು ತಯಾರಾಗಿದ್ದ ಅನೇಕ ಪುಸ್ತಕಗಳ ಮೇಲಿದ್ದ ಧೂಳಿನ ಪರದೆ ಸರಿಸಿ ಅರ್ಥವಾದಷ್ಟು ಓದಲು ಪ್ರಯತ್ನಿಸಿದ. ಆದರೆ ನಿಗದಿ ಪಡಿಸಿದ ಹೊತ್ತಲ್ಲಲ್ಲದೆ ಮನಸೋ ಇಚ್ಛೆ ನುಗ್ಗಲು ಅವಕಾಶವಿರದಿದ್ದ ಗ್ರಂಥಾಲಯ ಅವನಿಗೆ ಒಂಥರಾ ಪುಸ್ತಕಗಳ ಸೆರೆಮನೆ ಅನ್ನಿಸಿ ಕ್ರಮೇಣ ಅಲ್ಲಿಗೆ ಠಳಾಯಿಸುವ ಅಭ್ಯಾಸವನ್ನ ಕಡಿಮೆ ಮಾಡಿದ.

*****

ಬಪಮನ ಸೊಸೆ ಸೀತಮ್ಮ ಅಡುಗೆಯಲ್ಲಿ ಗಟ್ಟಿಗಿತ್ತಿ. ಸಾರಸ್ವತರ ಸಕಲೆಂಟು ಪಾಕಪ್ರಾವೀಣ್ಯತೆ ಇದ್ದವರು. ಆದರೆ ಅವರ ಅಡುಗೆಯಲ್ಲಿ ಬಳಸುವ ವಸ್ತುಗಳ ಕಳಪೆ ಗುಣಮಟ್ಟ ಮಾತ್ರ ಅದರ ರುಚಿ ಕೆಡಿಸಿ ಉಣ್ಣುವವರ ಬಾಯಿರುಚಿ ಕೆಡಿಸಿ ಹೊಟ್ಟೆಯ ಪರಿಸ್ಥಿತಿಯನ್ನ ಹಳ್ಳ ಹಿಡಿಸುತ್ತಿತ್ತು. ಅಡಿಗಡಿಗೆ ಅವರ ಅಂಗಳಕ್ಕೆ ದಾಂಗುಡಿಯಿಡಲು ಪುಸ್ತಕ - ಪತ್ರಿಕೆಗಳನ್ನ ಹೊರತುಪಡಿಸಿ ಅವನಿಗಿದ್ದ ಮತ್ತೊಂದು ಆಕರ್ಷಣೆ ಸೀತಮ್ಮ ನೆಟ್ಟು ಬೆಳೆಸಿದ್ದ ಎರಡು ಅಮಟೆಕಾಯಿ ಮರಗಳು ಹಾಗೂ ಒಂದು ರತ್ನಗಂಧಿ ಗಿಡ. ಹುಳಿಹುಳಿಯಾದ ಅಮಟೆ ದಂಟು ಹಾಗೂ ಕಾಯಿ ತಿನ್ನುವ ಚಪಲವಿದ್ದ ಅವನಿಗೆ ರತ್ನಗಂಧಿಯ ಎಳೆಬೀಜಗಳು ಸಹ ರುಚಿ ಅನ್ನಿಸುತ್ತಿದ್ದವು. ಕಿತ್ತು ತಿಂದ ತಪ್ಪಿಗೆ ಬಹಳಷ್ಟು ಸಲ ಚೊರೆಪಟ್ ಸೀತಮ್ಮನ ಬೈಗುಳಗಳಿಗೆ ಬಲಿಯಾಗಿದ್ದರೂ ಅಭ್ಯಾಸ ಮಾತ್ರ ಬಿಟ್ಟಿರಲಿಲ್ಲ.

ತಾವು ಮಾಡುವ ಸಕಲೆಂಟು ಅಡುಗೆಗಳಿಗೂ ಹುಳಿ ಹಾಕಬೇಕಿದ್ದಲ್ಲಿ ಬಹುಪಾಲು ಅಮಟೆ ಕಾಯಿ ಜಜ್ಜಿ ಹಾಕಿಯೆ ಸುಧಾರಿಸುತ್ತಿದ್ದ ಸೀತಮ್ಮ ಹುಣಸೆ ಹಣ್ಣುˌ ಬಿಂಬುಳಿˌ ದಾರೆ ಪುಳಿˌ ಬಿರ್ಕನ ಹುಳಿ ಇವುಗಳನ್ನ ಹಾಕಬೇಕಿರುತ್ತಿದ್ದ ಖಾದ್ಯಗಳ ರುಚಿ ಕೆಡಿಸುತ್ತಿದ್ದರು.

( ಇನ್ನೂ ಇದೆ.)


https://youtu.be/dGfi4NXsdkk