04 December 2008

ಏಯಂ ಆಕಾಶವಾಣಿ...

ಆಗಿನ ಮಧ್ಯಮವರ್ಗದ ಮನೆಗಳಲ್ಲಿ ಇರುತ್ತಿದ್ದ ಏಕೈಕ ಐಶಾರಾಮಿ ವಸ್ತು ರೇಡಿಯೋ! ಆಕಾಲದ ರೇಡಿಯೋಗಳನ್ನು ಬಡಪೆಟ್ಟಿಗೆ ವರ್ಣಿಸುವುದು ಅಸಾಧ್ಯ! ದೊಡ್ಡ ರಟ್ಟಿನ ಪೆಟ್ಟಿಗೆಯಂತಹ ಮರದ ಚೌಕದ ಮೂರು ಮೇಲ್ಮೈ ಸಪಾಟು,ಹಿಂದೆ ಬಲ ಬಿಟ್ಟು ಒತ್ತಿದರೆ ಮಾತ್ರ ಬದಲಾಗುತ್ತಿದ್ದ ಬ್ಯಾಂಡ್ ಸ್ವಿಚ್,ಎದುರಲ್ಲಿ ಸದಾ ಹಲ್ಕಿರಿದಂತ ಟ್ಯೂನರ್ ಪಟ್ಟಿ ಜೊತೆಗೆರಡು ಪಕ್ಕ ದುಂಡನೆಯ ಸ್ವಿಚ್ಗಲೆರಡು.ಇದು ಆಕಾಲದ ರೇಡಿಯೋಗಳ ಸ್ಥೂಲ ಸ್ವರೂಪ.ಕನಿಷ್ಠ ಇಬ್ಬಿಬ್ಬರು ಸೇರಿ ಹೊರಬೇಕಾಗಿದ್ದಂತ ಅವುಗಳಿಗೆ ಬಲೆ ಬಲೆ ಯಂತಿದ್ದ ಏರಿಯಲ್ ಕೂಡ ನಾಯಿಯೊಂದಿಗಿನ ಬಾಲದಂತಿರುತ್ತಿತ್ತು,ಇಂತಹ ಬ್ರಹತ್ ದೇಹಿಯ ನಿರ್ವಹಣೆ ಮಾತ್ರ ಬಲು ನಾಜೂಕು.ನೆಗಡಿ ಕೆಮ್ಮು ಜ್ವರ ಮುಂತಾದ ಮನುಷ್ಯರಿಗೆ ಬರುವ ಎಲ್ಲ ರೋಗಗಳು ತನಗೂ ಬರುತ್ತವೇನೋ ಎಂಬಂತೆ ಆಗಾಗ ಮಳೆ ಹೆಚ್ಚಾದ-ಚಳಿ ಎದ್ದ ದಿನಗಳಲ್ಲೆಲ್ಲ ಅದು ಕಾಯಿಲೆ ಬೀಳುತ್ತಿತ್ತು.ಆಗೆಲ್ಲಾ ಗೊರಗೊರ ಸದ್ದು ಬಿಟ್ಟರೆ ಇನ್ನುಳಿದಂತೆ ಮೌನ! ಅಂತಹ ಸನ್ನಿವೇಶಗಳಲ್ಲಿ ಅದನ್ನು ಬೆಡ್ ಶೀಟ್ನಲ್ಲಿ ಸುತ್ತಿಡುವುದೂ ಇತ್ತು.ಪುಣ್ಯಕ್ಕೆ ಕಷಾಯ ಮಾಡಿ ಕುಡಿಸುವ ಸೇವೆಯೊಂದು ನಡೆಯುತ್ತಿರಲಿಲ್ಲ ಅಷ್ಟೆ.ಹೀಗಾಗಿ ಮನೆಯ ಒಂದು ಜೀವಂತ ಸದಸ್ಯನ ಸ್ಥಾನ-ಮಾನ ಅದಕ್ಕೂ ಇತ್ತು.

"ಏಯಂ ಆಕಾಶವಾಣಿ,ಸಂಪತಿ ವಾರ್ತಾಹ ಶೂಯಂತಾಂ...ಪ್ರವಾಚಕಃ ಬಲದೇವಾನಂದ ಸಾಗರಹ" ಒಂದು ಕಿವಿಯ ಮೇಲೆ ಈ ಅಶರೀರವಾಣಿ ಬೀಳುತ್ತಾ ಎಬ್ಬಿಸುತ್ತಿದ್ದರೆ ಇನ್ನೊಂದು ಕಿವಿಯ ಮೇಲೆ ಏಳಲು ತಡವಾದುದಕ್ಕಿನ ಅಮ್ಮನ ಬೈಗುಳದ ಸುಪ್ರಭಾತ ಬಿತ್ತೆಂದರೆ ಬೆಳಗಾಗಿದೆ ಎಂದೇ ಅರ್ಥ! ಸುಮ್ಮನೆ ಹೊರಳಾಡಿ ಆಲಸ್ಯದಿಂದ ಎಳುವಾಗ"...ಇತಿ ವಾರ್ತಾಹ" ಕಿವಿಗೆ ಬೀಳುತ್ತಿತ್ತು.ಅದೇ ಆಲಸ್ಯಕ್ಕೆ ಮತ್ತಷ್ಟು ಬೈಗುಳದ ಬಹುಮಾನ ಗಿಟ್ಟಿಸುತ್ತಾ ಹಲ್ಲುಜ್ಜಲು ಅದೇ ಸವೆದ ಬ್ರೆಷ್ ಗೆ ಪೇಸ್ಟ್ ಸವರುವಾಗ "ಈಗ ಪ್ರದೇಶ ಸಮಾಚಾರ ಧಾರವಾಡ ಕೇಂದ್ರದ ಸಹಪ್ರಸಾರದಲ್ಲಿ"ಮೂಡಿ ಬರಲು ಅಣಿಯಾಗುತ್ತಿತ್ತು.ಆಗ ಹಲ್ಲುಜ್ಜುವ ನೆಪದಲ್ಲಿ ಬರಗೆಟ್ಟವನಂತೆ ಹಚ್ಚಿದ ಪೇಷ್ಟನ್ನೆಲ್ಲ ತಿಂದ ತಪ್ಪಿಗೆ ಮತ್ತಷ್ಟು ಬೈಗುಳ. ಪ್ರದೇಶ ಸಮಾಚಾರ ಮುಗಿಯುತ್ತಿದ್ದಂತೆ ಮುಖ ತೊಳೆದ ಶಾಸ್ತ್ರ ಮುಗಿಸಿ ಬೈಗುಳದೊಂದಿಗೆ ದಯಪಾಲಿಸಿದ ಚಾ ಕುಡಿದು ಶಾಲೆ ಪುಸ್ತಕ ಹರಡಿಕೊಂಡು ಓದುವ ಕಾಟಾಚಾರದ ವಿಧಿ ಮುಗಿಸುವಾಗ ದೆಹಲಿ ಕೇಂದ್ರದಿಂದ ಕನ್ನಡ ವಾರ್ತೆಗಳೂ ಮುಗಿದು ಚಿತ್ರಗೀತೆಗಳು ಶುರುವಾಗುತ್ತಿದ್ದವು.ಇನ್ನು ಓದುವ ಚಂದ ಇಷ್ಟೇ ಎಂಬ ಅರಿವಿದ್ದ ಅಮ್ಮನ ಕೊರಳಿನ ಕರೆ ತಿಂಡಿ ಮುಕ್ಕಲು ಅಡುಗೆ ಮನೆಗೆ ಬೈಗುಳದ ಹಿಮ್ಮೇಳದ ಜೊತೆಗೆ ಆಹ್ವಾನಿಸುತ್ತಿತ್ತು.ಒಂದೆಡೆ ಚಿತ್ರಗೀತೆಗಳ ಕೇಳುವ ಸುಖ...ಇನ್ನೊಂದೆಡೆ ಕಾಯಿ ಚಟ್ನಿಯೊಂದಿಗೆ ಹಬೆಯಾಡುವ ಇಡ್ಲಿಯ ಅಪ್ಯಾಯಮಾನ ರುಚಿ...ಒಟ್ಟಿನಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ...

No comments: