09 November 2009

ಏಕಾಂತದ ನಿಟ್ಟುಸಿರು...

ಆಗತಾನೆ ಅರಳಿದ ಪಾರಿಜಾತದ ಮೇಲೆ,
ಇರುಳು ಹನಿದ ಹನಿ ಇಬ್ಬನಿ/
ಹೂವ ಮೋಹಕೆ ಸೆರೆಯಾಗಿ...
ಅದರಲೇ ಕರಗಿ ಲೀನವಾಯ್ತು//



ಇಬ್ಬನಿಯ ಹೊದಿಕೆ ಕಸಿಯಲು ಬಾನಿಗೂ ಭೂಮಿಗೂ ನಡುವೆ ,
ಹುಸಿ ಗುದ್ದಾಟ/
ನೋಡಿ ಕಲಿಯ ಬಾರದೆ ವಿವೇಕ?...
ಬೆಚ್ಚಗೆ ನಿನ್ನನೇ ಹೊದ್ದ ನನ್ನ...ಇಬ್ಬರಿಗೂ ಸಮಪಾಲು//



ಸ್ಪರ್ಶಕ್ಕೊಂದು ಅರ್ಥ,
ಸಿಕ್ಕಾಗಲೆಲ್ಲ ಜಗಳವನ್ನೇ ಅಭಿನಯಿಸಿದರೂ...ಚೂರೂ ಕುಂದಿಲ್ಲ ನಿನ್ನೆಡೆಗಿನ ಪ್ರೀತಿ/
ಹೇಳೋಕೆ ಬರೋದಿಲ್ಲ ಆದರೇನು?
ನೀನಾದರೂ ಒದಬಾರದಿತ್ತೆ ನನ್ನ ಕಣ್ಣಿನ ಭಾಷೆ?//




ಜೀವಿಸೋಕೆ ಇರುವ ಏಕೈಕ ಕಾರಣ ನೀನೆ,
ನನ್ನ ಬದುಕ ಗುರಿಯ ಕೊನೆ/
ಒಂಟಿಯಾಗೆ ಕೊನೆಯುಸಿರೆಳೆವಾಗ ಮುಗುಳ್ನಗಲು ,
ನಿನ್ನವೆರಡು ಕಂಗಳಿದ ಜಾರೋ ಬಿಸಿ ಹನಿಗಳು...ನನ್ನ ಕೆನ್ನೆಗಳ ತೋಯಿಸಲಿ ಸಾಕು//



ನಡುವೆ ತುಸು ಗಾಳಿಯೂ ಸುಳಿಯದಂತೆ,
ತಬ್ಬಿಕೊಳ್ಳುವ ಆಸೆ/
ಅದ ನೆರವೇರಿಸಲಾದರೂ ನೀ ಬಂದೆ ಬರುವೆ,
ನನಗಿದೆ ಆ ಭರವಸೆ//



ಬೀಸುವ ಗಾಳಿಯ ಬಿಸಿಯುಸಿರು,
ಹದ ಬಿದ್ದ ಮಳೆಗೆ ಚಿಮ್ಮಿ ಚಿಗುರೊಡೆದ ಹಸಿರು/
ನೇಗಿಲು ಸೀಳಿ ನೋಯಿಸಿದರೂ...
ಒಡಲು ತುಂಬಿ ಮುಗುಳ್ನಗುವ ಇಳೆಯ ಬಸಿರು,
ನನ್ನ ಒಂಟಿ ಬಾಳಲಿ...ನನಗೆ ನೀನು ,ನಿನ್ನ ನೆನಪು//


ಕಣ್ಣನ್ಚಿಂದ ಸುರಿದ ಸೋನೆ,
ನಿಶ್ಚಲ ಮೌನದ ಕೊಳವ ಕಲಕಿ...ಉಮ್ಮಳಿಸಿ ಬಂದ ಬಿಕ್ಕಳಿಕೆ/
ಒಬ್ಬಂಟಿತನದ ನೋವ ಮರೆಸೋ,
ಆಪ್ತ ಸಂಗಾತಿಗಳಾದವು//

No comments: