10 July 2011

ಕಣ್ಣಂಚಿನಲ್ಲಿ ನೀರ ಝರಿ...

ಮಳೆಗೆ ತನ್ಮಯವಾಗಿ ಮೈಯೊಡ್ಡಿ
ಮಿಂದ ದಾಸವಾಳದಂತಹ ನನ್ನ ಮನ....
ಮತ್ತನಾಯಿತು.
ಹನಿ ತೋಯಿಸಿದ ಕಡೆಯಲ್ಲೆಲ್ಲ ನಿನ್ನ ಸ್ಪರ್ಶವನ್ನೆ ಪರಿಭಾವಿಸಿ
ಇನ್ನಸ್ಟು ಕೆಂಪಾಗಿ...
ಉನ್ಮತ್ತನಾಯಿತು/
ಸಂಬಂಧಗಳನ್ನ ಕಳಚುವ ಕಾನೂನಿದೆ...
ಒಲವಲ್ಲಿ ನಾವಿಬ್ಬರೂ ಜೊತೆಗೆ ಹಂಚಿಕೊಂಡಿದ್ದ ಕ್ಷಣಗಳ ಸಂಭ್ರಮಗಳನ್ನಲ್ಲ,
ಬೇಡದ್ದನ್ನು ಅಳಿಸಿ ಹಾಕುವ ಬಗೆ ಮನಸಿಗೆ ಗೊತ್ತಿದೆ
ಆದರೆ....ನಿನ್ನೊಂದಿಗ​ೆ ಕಂಡಿದ್ದ ಕನಸುಗಳನ್ನಲ್ಲ//




ಅರ್ಥವೋ ಅನರ್ಥವೋ
ನನಗಂತೂ ಗೊತ್ತಿಲ್ಲ.....
ಆಗಾಗ ನಿನ್ನ ನೆನಪಲ್ಲಿ ನಾಲ್ಕುಸಾಳು ಗೀಚುವ ಗೀಳು ನನ್ನನ್ನಂತೂ ಮರುಳನ್ನನ್ನಾಗಿಸಿದೆ,
ನೆಪವಷ್ಟೇ ಈ ಪದ್ಯದ ಹಂಗು...
ಬದುಕ ಹಾದಿಯ ಪೂರ್ತ ನಡೆಯಲೇ ಬೇಕಲ್ಲ?
ಹಿಡಿದು ಹೀಗೆ ಗತದ ಅಂಗಿಯ ಚುಂಗು/
ನೀ ಬೇಕಂತಲೆ ಮರೆತು ಹೋದ
ನೆನಪಿನ ಕೈಚೀಲ ಜತನವಾಗಿದೆ ನನ್ನ ಬಳಿ....
ನೀನಿತ್ತು ಹೋದ ನಾ ತೀರಿಸಲಾಗದ ಗತದ ಕೈಸಾಲ,
ಆಗಾಗ ನೆನಪಿಸಿ ಕುಟುಕುತಿದೆ
ನನ್ನೆದೆಯ ಗೂಡಿನಲ್ಲಿ ಬಂಧಿತ ಮಾತನಾಡುವ ಗಿಳಿ//



ನೋವೊ ನಲಿವೊ
ನಿನ್ನುಸಿರ ಪರಿಮಳ ನನ್ನ ಮಲೆತ ಬಾಳನ್ನೂ ಸುವಾಸಿತವಾಗಿಸಿತ್ತಲ್ಲ....
ಇದಕ್ಕಿಂ​ತ ಹೆಚ್ಚು ಬೇರಿನ್ನೇನು ಬೇಕು ಬದುಕಲ್ಲಿ?,
ಉಕ್ತ ನುಡಿಗಳಲ್ಲಿ ವಿವರಣೆ ಅಸಾಧ್ಯ...
ನಿನ್ನ ನಿರಾಕರಣೆಯ ಬರೆಬಿದ್ದ ಹೃದಯದ ವೃಣವನ್ನ ಮರೆಮಾಚಲಾದರೂ ಹೇಗೆ ಸಾಧ್ಯ?/
ಘಾಸಿಗೊಂಡ ನನ್ನ ಮನ ಮೌನ
ಭಗ್ನ ನಿರೀಕ್ಷೆಗಳ ಎದುರು ಉಳಿದ ನೋವುಗಳೆಲ್ಲವು ಗೌಣ....
ಕಣ್ಣಂಚಿನಲ್ಲಿ ನೀರ ಝರಿ
ಆದರೂ ಸಾಂಗತ್ಯದ-ಸಾಮೀಪ್ಯದ ಬಾಯಾರಿಕೆಯಿಂದ ನಾ ತಪ್ತ,
ನಿನ್ನೊಂದಿಗೆ ಕಳೆದ ಮಧುರ ಕ್ಷಣಗಳ ನೆನಪಿನ ಜಾತ್ರೆ ಎದೆಯಾಳದಲ್ಲಿ....
ಆದರೂ ವಿರಹದ ಭಣಗುಡುವ ಏಕಾಂತದಲ್ಲಿ ಮನಸು ಲುಪ್ತ//

No comments: