09 September 2011

"ಕುಮಾರ"ಮೋಸ ಭಾರತ.....

ಹುಟ್ಟು ಹರಳೆಣ್ಣೆ ಮುಖದವರೂ ,ತುಂಬಾ ಕಿರಿ ವಯಸ್ಸಿನಲ್ಲಿಯೆ ಕರ್ನಾಟಕದ ಮುಖ್ಯಮಂತ್ರಿ ಪಟ್ಟದಲ್ಲಿ ಅಂಡೂರೆದ್ದವರೂ, ಅಲ್ಲದೆ ಆಗಾಗ 'ಬಿಚ್ತೀನಿ ಜೊತೆಗೆ ಎಲ್ರದ್ದೂ ಬಿಚ್ಚಾಕ್ತೀನಿ' ಅಂತ ಮಾಧ್ಯಮಗಳ ಮುಂದೆ ಚೀರಿ ರಂಪ ಮಾಡಿ ಕಡೆಗೆ ತಾವು ಬಿಚ್ಚಲು ಹೊರಟವರಿಂದ ತಾವೆ ಸರಿಯಾಗಿ ಬಿಚ್ಚಿಸಿಕೊಂಡು-ಜೊತೆಗಿಷ್ಟು ಚಚ್ಚಿಸಿಕೊಂಡು ಮರ್ಯಾದೆ ಮಣ್ಣುಪಾಲಾದರೂ ಮತ್ತೆ ಕಂಕುಳಲ್ಲಿ ಅದ್ಯಾವುದು ಓಬಿರಾಯನ ಕಾಲದ ಕಡತಗಳನ್ನೆಲ್ಲ ಇರುಕಿಕೊಂಡು ಕ್ಯಾಮರ ಕಂಡಾಗಲೆಲ್ಲ ಅದರ ಕಥೆಯ ಕ್ಯಾತೆ ಬಿಚ್ಚುವ 'ಸುಟ್ಟರೂ ಹೋಗದ ಹುಟ್ಟು ಗುಣ 'ಹೊಂದಿದವರೂ,ಇವೆಲ್ಲಕ್ಕಿಂತ ಹೆಚ್ಚಾಗಿ "ರಾಧಿಕಾ"ರಮಣರೆಂದೆ ಕನ್ನಡನಾಡಿನ 'ರಸಿಕರ' ಮನೆಮಾತಾಗಿರುವವರೂ ಆದ 'ಹೊರೆಹೊತ್ತ' ಪಕ್ಷದ ದೇವೆಗೌಡರು ರಾಜ್ಯಕ್ಕೆ ಬೇಡದಿದ್ದರೂ ಹೊರೆಸಿದ ದೊಡ್ಡ ಹೊರೆಯಾಗಿರುವ ಹೆಚ್ ಡಿ ಕುಮಾರಣ್ಣ ಕೆಲವು 'ಮಾಧ್ಯಮ ಮಿತ್ರರು' ಹಬ್ಬಿಸಿದ ಉಹಾಪೋಹಗಳಿಂದ ವಿಪರೀತ ನೊಂದುಬೆಂದು ಹೋಗಿದ್ದಾರಂತೆ!


"ನಾನು ಕಾನೂನಿಗೆ ಹಾಗು ನ್ಯಾಯಾಲಯಕ್ಕೆ ತೀರಾ ಬೆಲೆ ಕೊಡುವ ವ್ಯಕ್ತಿ! (ಕಳೆದ ಒಂದು ತಿಂಗಳಿಂದ ಸಮನ್ಸ್'ಗೆ ಹೆದರಿ ತಲೆತಪ್ಪಿಸಿಕೊಂಡು ಅಡ್ಡಾಡುತ್ತಿದ್ದಾಗಲೆ ಅವರ ಈ "ಬೆಲೆ" ಕೊಡುವ ಬುದ್ಧಿ ನಮಗೆಲ್ಲ ಚನ್ನಾಗಿ ಅರ್ಥವಾಗಿತ್ತು ಅನ್ನೋದು ಬೇರೆ ಮಾತು!) "ಕಾನೂನಿನ ಪರಿಧಿಯಲ್ಲಿ ಕಟಕಟೆಗೆ ಬಂದರೆ ಹೇಳದೆ ಕೇಳದೆ (ಯಾರನ್ನ ಕೇಳಬೇಕಿತ್ತು,ಕರ್ನಾಟಕದ ಖಾಯಂ 'ಮಾಜಿ ಪ್ರಧಾನಿ'ಗಳನ್ನ? ಯಾರಿಗೆ ಹೇಳಬೇಕಿತ್ತು ಅವರ ಆಪ್ತಮಿತ್ರ "ಕಬಡ್ಡಿ ಬಾಬು"ವಿಗಾ? ಎಂಬ ನಿಮ್ಮ ಕುಹಕವೆಲ್ಲ ಅವರು 'ನೊಂದಿರುವ' ಇಂತಹ ಕಾಲದಲ್ಲಿ ಬೇಡ!) ದಸ್ತಗಿರಿ ಮಾಡಬಹುದು ಹೀಗಾಗಿ ಯಾವುದಕ್ಕೂ ಒಂದು ನಿರೀಕ್ಷಣ ಜಾಮೀನು ( ಮತ್ತದೆ ನಿಮ್ಮ ಕುಹಕ,ಜಮೀನಲ್ಲ ಸ್ವಾಮಿ ಅದು ಜಾಮೀನು!) ಪಡೆದೇ ತೀರಿ" ಎಂಬ ಹಿತವಚನ ಹೇಳಿದ ನನ್ನ ವಕೀಲರ ಮಾತಿಗೆ ಬೆಲೆ ಕೊಟ್ಟು ಅವರ 'ವಕೀಲವಾಕ್ಯ ಪರಿಪಾಲನೆ'ಗಾಗಿ ಇಷ್ಟು ದಿನ ಕಾದು ಈಗ ಇಲ್ಲಿಗೆ ಬಂದಿದ್ದೀನಷ್ಟೆ! (ತೆರೆದ ನ್ಯಾಯಾಲಯದಲ್ಲಿ ಯಾರೊ ನಿಮಗಾಗದವರು 'ತೆರೆದ ಹೃದಯ ಶಸ್ತ್ರಚಿಕಿತ್ಸೆ' ಆಗಿರೊ ಕಾರಣ ನಿಮಗೆ 'ಎದೆಬೇನೆ' ಇತ್ತು ಹಾಗಾಗಿ ನೀವು ಬರಲಿಲ್ಲ ಅಂದ ಹಾಗಿತ್ತಲ್ಲ! ಯಾರು ಅಂತಹ ಅಪದ್ಧವನ್ನಾಡಿದ ಅಧಮ?),ಅದನ್ನ ಬಿಟ್ಟು ಕುಮಾರಣ್ಣ ಹೆದರಿ ಓಡಿ ಹೋಗಿದ್ದಾರೆ (ಅಷ್ಟಕ್ಕೂ ಅವರು ಓಡಿ ಹೋಗಿದ್ದರೂ ಹೆಚ್ಚಂದರೆ ಎಲ್ಲಿಗೆ ತಾನೆ ಓಡಿ ಹೋಗ್ತಿದ್ರು ಹೇಳಿ? ಜೆಪಿನಗರದಿಂದ ಡಾಲರ್ಸ್'ಕಾಲೋನಿಗೆ ಓಡಿಹೊಗ್ತಿದ್ರು ಅಷ್ಟೆ?!) ಅಂತೆಲ್ಲ ಸುದ್ದಿ ಹಬ್ಬಿಸಿದ ಕೆಲವು 'ಮಾಧ್ಯಮ ಮಿತ್ರ'ರ ಊಹಾಪೋಹಗಳಿಂದ ನನಗೆ ವಿಪರೀತ ನೋವಾಗಿದೆ!" ಅಂತ ಅಪ್ಪಟ 'ಕುಮಾರ"ವ್ಯಾಸನ ಕಾಲದ ಕನ್ನಡದಲ್ಲಿ ಅವರು ಎಂದಿನಂತೆ ಕ್ಯಾಮರಾಗಳ ಮುಂದೆ ಅವಲತ್ತುಕೊಳ್ಳುತಿದ್ದರೆ ಏನೂ ಕಪಟವರಿಯದ ಈ ಚನ್ನಮ್ಮನ ಕಂದಮ್ಮನ್ನ ಕಂಡು ಕನ್ನಡಿಗರು ಅವರ ಜೊತೆಗೆ ಸೇರಿ ಕಣ್ಣೀರು ಇಡೋದೊಂದೆ ಬಾಕಿಯಿತ್ತು!


ಮೊನ್ನೆ ಮೊನ್ನೆಯವರೆಗೂ 'ಎದೆನೋವು' ಅನ್ನುತ್ತಿದ್ದ ಕಟ್ಟಾ ಆಮೇಲೆ 'ಬೆನ್ನುನೋವು' ಅಂತಲೂ,ಆನಂತರ 'ಮೂಳೆನೋವು!' ಅಂತಲೂ (ಯಾವುದರ ಮೂಳೆ ಹಾಗು ಎಲ್ಲಿನ ಮೂಳೆ ಎಂಬ ಅಡ್ಡಪ್ರಶ್ನೆ ಆಮೇಲೆ ಕೇಳೋರಂತೆ ಸ್ವಲ್ಪ ತಾಳಿ!) ,ಅದಾದ ಮೇಲೆ "ಭೇದಿಗಾಗಿ ಆಪರೇಶನ್" ಅಂತಲೂ ( ಈವರೆಗೂ ಕೇವಲ "ಬೇಬಿಗಾಗಿ ಆಪರೇಶನ್" ಮಾತ್ರ ನೋಡಿ ಗೊತ್ತಿದ್ದ ಕನ್ನಡಿಗರಿಗಾಗ ಅದನ್ನ ಕೇಳಿ ಅಚ್ಚರಿಯಿಂದ ಯಾವುದೆ ಆಪರೇಶನ್'ನ ಅಗತ್ಯ ಇಲ್ಲದೆಯೆ ಸ್ಥಳದಲ್ಲೆ ಸರಾಗ ಭೇದಿಯಾಗಿ ಹೋದದ್ದು ಮಾತ್ರ ಬೇರೆ ಮಾತು!) ಈಗ ಅದೇನೂ ಮತ್ತೆ "ಮೂಳೆ ರೋಗಕ್ಕೆ" ಶಸ್ತ್ರಚಿಕಿತ್ಸೆ ಅಂತಲೂ (ಬಹುಶಃ ಅದು "ಮೂಲ" ರೋಗವಿದ್ದೀತ? ವ್ಯಾಕರಣ ದೋಷದಿಂದ ಒಂದುವೇಳೆ ಮೂಳೆ ಆಗಿರಬಹುದ? ಎಂಬ ಸಂಶಯ ಬೇಡ,ಅದು ಅವರಂದಂತೆ ಅದು "ಮೂಳೆ ರೋಗವೆ!") ಹೀಗೆ "ದಿನಕ್ಕೊಂದು ಕಥೆ" ಹೊಡೆಯುತ್ತ ಕುಮಾರಣ್ಣ ,ಅನಿತಕ್ಕರಾದಿಯಾಗಿ ಬೂಸಿಯವರೆಗೂ ಈ ವಿಷಯದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟು ಆದರ್ಶ"ಪ್ರಾಯ"ರಾಗಿರುವ ಹೊತ್ತಲ್ಲಿ ಕುಮಾರಣ್ಣನಿಗೂ ಎದೆನೋವು ಬಂದು,ಅನಿತಕ್ಕನಿಗೂ ಬೆನ್ನುನೋವು ಬೆನ್ನುಹತ್ತಿ ಕನ್ನಡ ಕುಲಕೋಟಿಯನ್ನ ಏಕಕಾಲದಲ್ಲಿ ತಮ್ಮ ಹಾಗು ಅವರೆಲ್ಲರ ಭವಿಷ್ಯದ ಕುರಿತು ಚಿಂತಾಕ್ರಾಂತರಾಗುವಂತೆ ಮಾಡಿದ್ದವು.ಅಂತದ್ದರಲ್ಲಿ ತನಗೇನೂ ಮಂಡೆಮಾರಿಯೂ ಬಡಿದಿಲ್ಲ ;ಅದೆಲ್ಲ ತಮಗಾಗದವರು ಹಬ್ಬಿಸಿದ ಸುಳ್ಳುಸುದ್ದಿಗಳು ಎಂಬ ಸಮಜಾಯಶಿಯನ್ನ ಸ್ವತಃ ಕುಮಾರಣ್ಣನ ಬಾಯಿಯಿಂದಲೆ ಕೇಳಿ ಕನ್ನಡಿಗರು ಕೊಂಚ ನಿರಾಳರಾದರು.ಇದರ ಜೊತೆಗೆ "ವಾಕ್ಯ ಪರಿಪಾಲನೆ"ಯಲ್ಲಿ ಅವರಿಗಿರುವ ಕಾಳಜಿಯನ್ನೂ ಕಂಡು ಬೆಕ್ಕಸ ಬೆರಗಾದರು.

ನೀವೆ ನೋಡಿ, ಅವರು ಈ ಹಿಂದೆ 'ಕಮಲ'ಳ ಕೈಯನ್ನ 'ಅನೈತಿಕ" ಹಿಡಿದು "ಕೋಜಾ" ಮಗುವೊಂದನ್ನು ಹೆತ್ತು (ಕೋಮುವಾದಿ-ಜಾತ್ಯತೀತ ಎಂದಷ್ಟೆ ಅದನ್ನ ವಿಸ್ತರಿಕೊಂಡು ಓದಿ ಪ್ಲೀಸ್!) ಅಧಿಕಾರದ ಸವಿಯುಂಡಾಗಲೂ ಆಗ ಅದಕ್ಕೊಪ್ಪದ ತಮ್ಮ ಪೂಜ್ಯ ತೀರ್ಥರೂಪರ "ಪಿತೃಪಕ್ಷ"ವನ್ನ ತಪ್ಪಿಯೂ ಒಡೆಯದೆ,ಸುದೀರ್ಘ ಒಂದೂ ಮುಕ್ಕಾಲು ವರ್ಷ ಅದನ್ನೆ ಆಲೋಚಿಸಿ ಮತ್ತೆ ಇಪ್ಪತ್ತು ತಿಂಗಳ ಮೊದಲ ಇನ್ನಿಂಗ್ಸ್ ಮುಗಿಯುತ್ತಿದ್ದಂತೆ "ಮರಳಿ ಮನೆಗೆ" ಸೇರಿ (ಅವರು ಮಣ್ಣಿನ ಮೊಮ್ಮಗನೂ ಆಗಿರೋದರಿಂದ ಇದನ್ನ "ಮರಳಿ ಮಣ್ಣಿಗೆ" ಸೇರಿ ಅಂತಲಾದರೂ ನೀವು ಓದಲಿಕ್ಕೆ ಅಡ್ಡಿಯಿಲ್ಲ!) ಮತ್ತೆ "ಪಿತೃವಾಕ್ಯ ಪರಿಪಾಲಕ'ರೆ ಆಗಿದ್ದರು.ಆದರೂ ಅವರಿಗಾಗದ ಮಂದಿ ಅವರನ್ನ ಸುಮ್ಮನಾದರೂ 'ವಚನಭ್ರಷ್ಟ" ಅಂತೆಲ್ಲ ಜರಿದದ್ದನ್ನು ಕೇಳಿ ಆಗಲೂ ಅವರು "ನೊಂದಿರುವ' ಸಾಧ್ಯತೆಯಿದೆ! ಇಂಥ ಸತ್ಯಸಂಧರು ಈಗ ತಮ್ಮ "ವಕೀಲವಾಕ್ಯ ಪರಿಪಾಲನೆ"ಯಲ್ಲಿ ನಿರತರಾಗಿರೋದು ನಮ್ಮ ನಿಮ್ಮೆಲ್ಲರಿಗೂ ಅತೀವ ಹೆಮ್ಮೆಯ ಸಂಗತಿಯೆ ಸರಿ.

ಇನ್ನು ಚಂಚಲಗುಡದ ಕಲ್ಲಿನರಮನೆ ಸೇರಿ ನಾಲ್ಕುದಿನ ಕಳೆದ ನಂತರವೂ ಯಾವುದೆ ಅಕಾಲದಲ್ಲಿ ವಕ್ಕರಿಸಿ ಕಾಡುವ 'ರೋಗ ರುಜಿನ'ಗಳಿಗೆ ಬಲಿಯಾಗದೆ ಕಲ್ಲುಗುಂಡಿನ ಹಾಗಿರುವ ಜನಾರ್ಧನ ರೆಡ್ಡಿಯನ್ನ ನೋಡಿದಾಗ,ಸದ್ಯ ಪರಪ್ಪನ ಅಗ್ರಹಾರದ ಅತಿಥಿಗೃಹಕ್ಕೆ ಅಮರಿಕೊಂಡಿರುವ ವಾಸ್ತುದೋಷ ಪರಿಹಾರ ಆಗುವವರೆಗೆ, ಇಲ್ಲಿನ 'ರಹಸ್ಯ' ರೋಗಿಷ್ಟ ಅತಿಥಿಗಳನ್ನೆಲ್ಲ ತಾತ್ಕಾಲಿಕವಾಗಿ ಅವರ ಆರೋಗ್ಯದ ಹಿತದೃಷ್ಟಿಯಿಂದ "ರೆಡ್ಡಿ"ರೇಂಜಿಗೆ ಗಡಿಪಾರು ಮಾಡಿದರೆ ಚನ್ನಾಗಿತ್ತು ಅನ್ನಿಸುತ್ತಿದೆ,ಇದಕ್ಕೆ ನೀವೇನಂತೀರಿ?!

2 comments:

s k naik said...

grama vasthvya da ku swa ge nerikshana jamininidagi sadyakke jailu vasthvya tappitu(grama vasthvyadalli ontiyagiddare jailu vasthvyadalli janti yagirabahudittu )

anagha kirana said...

good one satish..