29 November 2011

ಕಲ್ಲನ್ನೂ ಕರಗಿಸುವ ಚಳಿಯ ನೋವಿನಿರುಳಲ್ಲಿ....

ಅಶಾಂತ ಮನಸಿನ ಒಳಗೆದ್ದ ಕಂಪನಗಳು
ಮೌನವಾಗಿ ಎದೆಯ ದಡವನ್ನ ಸೋಕಿ....
ನಿಟ್ಟುಸಿರು ಬಿಟ್ಟು ಶೋಕದ ನಡುಕಡಲಿಗೆ ಮರಳಿ ಹೋಗಿ ಲೀನವಾಗಿವೆ,
ಕತ್ತಲಲ್ಲೆ ಕರಗಿದ ನಿರೀಕ್ಷೆಗಳ ಬಾಕಿ ಉಳಿದುಹೋದ ನನ್ನ ಮನಸಿಗೆ
ನೀ ಬಾರದ ಹಾದಿಯನ್ನೆ ಹಗಲಲ್ಲೂ ಕಾಯುವ ಹಂಬಲ....
ಪಿಸುರಿಲ್ಲದೆ ನನ್ನ ಕಂಗಳಿಂದ ಜಾರಿದ ಪ್ರತಿಯೊಂದು ಕನಸಿನ ಕಟ್ಟಡಕ್ಕೂ
ಒಂದೊಮ್ಮೆ ಆಸರೆಯಾಗಿದ್ದುದ್ದು ನಿನ್ನದೆ ಒಲವಿನ ಅಡಿಪಾಯ/
ಕಣ್ಣ ಆಸರೆ ತಪ್ಪಿ ಜಾರಿದ ಹನಿಗಳನ್ನೆಲ್ಲ
ಒಂದನ್ನೂ ಬಿಡದಂತೆ ಪೋಣಿಸಿ......
ನಿನಗೊಂದು ನನ್ನ ನೆನಪುಗಳ ಪರಿಮಳದಲ್ಲದ್ದಿದ
ಮಣಿಮಾಲೆ ಕಳುಹಿಸಿ ಕೊಡುವ ಕನಸು ನನ್ನೊಳಗಿನ್ನೂ ಜೀವಂತವಾಗಿದೆ,
ಮನಸಲ್ಲಿ ಮೂಡಿದ ನಿನ್ನ ಸ್ಥಿಗ್ಧ ಚಿತ್ರಕೆ
ಕಣ್ಣ ಗಾಜಿನ ಪರದೆ ಹಾಕಿ ಕಾಪಿಡುವ ನನ್ನ ಜತನದ ಹಿಂದೆ...
ಎದೆಯೊಳಗೆ ಜಿನುಗುವ ಹನಿ ಪ್ರೀತಿಯ ಪಾತ್ರವೂ ಇದೆ ಗೊತ್ತಾ?//



ಒಲವಿನ ಗೆದ್ದಲು ಹಿಡಿಸಿದ ನಿನ್ನೆಡೆಗಿನ ಆಕರ್ಷಣೆ ಎಬ್ಬಿಸಿದೆ
ನನ್ನೆದೆಯೊಳಗೂ ಚಡಪಡಿಕೆ ಸಹಿತ ನೆಮ್ಮದಿಯನ್ನು ಹುದುಗಿಸಿಟ್ಟಿರುವ ಹುತ್ತ....
ಮನಸಲ್ಲಿ ಮೂಡಿದ ನಿನ್ನ ಸ್ಥಿಗ್ಧ ಚಿತ್ರಕೆ ಕಣ್ಣ ಗಾಜಿನ ಪರದೆ ಹಾಕಿ
ಕಾಪಿಡುವ ನನ್ನ ಜತನದ ಹಿಂದೆ
ಎದೆಯೊಳಗೆ ಜಿನುಗುವ ಹನಿ ಪ್ರೀತಿಯ ಪಾತ್ರವೂ ಇದೆ ಗೊತ್ತಾ?,
ಒಲವಿನ ಗೆದ್ದಲು ಹಿಡಿಸಿದ ನಿನ್ನೆಡೆಗಿನ ಆಕರ್ಷಣೆ ಎಬ್ಬಿಸಿದೆ
ನನ್ನೆದೆಯೊಳಗೂ ಚಡಪಡಿಕೆ ಸಹಿತ ನೆಮ್ಮದಿಯನ್ನು ಹುದುಗಿಸಿಟ್ಟಿರುವ ಹುತ್ತ/
ಸಂದಿಗ್ಧ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಸೊರಗಿದ
ನನ್ನೆದೆಯ ಮೂಕರಾಗಕ್ಕೆ...
ಲವಲವಿಕೆಯ ತಾಳ ಕೂಡಿಸುವ
ನಿನ್ನ ನೆನಪುಗಳಿಗೆ ನಾನು ಚಿರಋಣಿ,
ಸ್ವಪ್ನವನ್ನ ತೆರೆದ ಕಣ್ಗಳಲ್ಲಿಯೇ ಕಾಣುವ
ಪುರಾತನ ಅಭ್ಯಾಸವಿರುವ ನನ್ನ ಇರುಳನ್ನೂ.....
ಹಗಲಾಗಿಸಿದ ನೀನು ನನಗೆ ಇತ್ತಿರೋದು ನೋವೊ? ನಲಿವೊ?
ಎಂಬ ಗೊಂದಲದಲ್ಲಿ ನಾನು ಚಿರಲೀನ//



ಕಣ್ಣಲ್ಲೆ ಮುದ್ದಿಸುವ ಭಾವಗಳ ಬಯಕೆ ಅನೇಕ
ಪ್ರತಿಯೊಂದನೂ ತುಟಿ ಎರಡು ಮಾಡಿ....
ಮಾತುಗಳಾಗಿ ಉಸಿರಿನೊಂದಿಗೆ ಉಸುರಲೇ ಬೇಕ?,
ಗಹನ ಮೌನದ ಮೇಲೆ
ನೋವಿನ ಚಾದರ ಹೊದಿಸಿದ ಇರುಳು ಇದೇಕೆ ಇಷ್ಟು ನಿರ್ದಯಿ?
ಸಂಕಟದ ಭಾರಕ್ಕೆ ಬಸವಳಿದ ಮನಸೊಳಗೆ ಸತ್ತಿದೆ ಮಾತು...
ಕಟ್ಟಿದೆ ಎದೆಯೊಳಗೆ ಇದ್ದ ಹನಿ ಅಪೇಕ್ಷೆಯ ಬಾಯಿ/
ಕುರುಡುಗಣ್ಣಿನ ಕತ್ತಲ ಕನಸುಗಳಿಗೂ
ಆಸೆಯ ವರ್ಣ ತುಂಬೋದು ನಿನ್ನೊಲವು....
ಬದುಕು ಚಿತ್ತಾರವಾಗಿದೆ ತುಂಬಿ ನೀನಲ್ಲಿ ಬಣ್ಣ ಹಲವು,
ಸರದಿ ಪ್ರಕಾರ ಕಾಡುವ ನೆನಪುಗಳಿಂದ
ಪಾರಾಗಿ ಹೋಗಲು ಮನಸ್ಸೆ ಇಲ್ಲದ ನನ್ನದು....
ನಿನ್ನ ನೆನಪ ಬಂಧಿಖಾನೆಯಲ್ಲಿ ಸ್ವಇಚ್ಚೆಯ ಸೆರೆವಾಸ//



ಕನಸುಗಳಿಗೇನು? ಬರವಿಲ್ಲದೆ ಬಂದು
ಎದೆಯ ಬರಡಲ್ಲೆಲ್ಲ ಭರಪೂರ ಹಸಿರುಕ್ಕಿಸುತ್ತವೆ...
ಕಣ್ಣ ಹನಿ ನೀರಾವರಿಯ ಆಸರೆಯಲ್ಲೆ ಹುಲುಸಾಗಿ ಹಬ್ಬಿ ಹರಡುತ್ತವೆ,
ನೋವಿನ ಗುಂಗಿಹುಳ ಮನಸಲ್ಲಿ ಕೊರೆದ ವೇದನೆಯ ಪೊಟರೆಯನ್ನೂ
ನಾನೇನು ಖಾಲಿ ಬಿಟ್ಟಿಲ್ಲ....
ನಿರಾಕರಣೆಯ ಬರಡು ವ್ಯಾಪಿಸಿ ನಿರಂತರ ನೋಯಿಸಿದರೂ
ನಿರೀಕ್ಷೆಯ ಸ್ವಪ್ನಗಳನ್ನೆ ಜತನದಿಂದ ತೂರಿದೆ ಹೊರತು
ಎದೆಯ ಹೊಲದಲ್ಲಿ ನಿನ್ನನೆಂದೂ ಶಪಿಸುವ ಬೀಜವ ಬಿತ್ತಿಲ್ಲ/
ಸಾಕಾರಗೊಳ್ಳದ ಖಾತ್ರಿ ನೂರಕ್ಕೆ ನೂರಿದ್ದರೂ
ನನ್ನ ಕಣ್ಗಳಂಚಿನಲ್ಲಿ ನಿನ್ನನೆ ಕನವರಿಸುವ ಕನಸುಗಳಿಗೇನೂ ಬರವಿಲ್ಲ....
ಗುರುತು ಮರೆತ ಒಲವ ದಾರಿಯಲ್ಲಿ ಬರಿಗಾಲಲ್ಲಿ ಹೊರಟಿರುವ
ನನ್ನ ನೆನ್ನೆಗಳಿಗೆ ನಿನ್ನ ಜೊತೆಯ ಆಸರೆಯಿತ್ತು...ಈಗ ಅದರ ಆಸೆ ಮಾತ್ರ ಉಳಿದಿದೆ,
ಕಲ್ಲನ್ನೂ ಕರಗಿಸುವ ಚಳಿಯ ನೋವಿನಿರುಳಲ್ಲಿ....
ತುಸು ಬೆಚ್ಚಗಾಗಲಿಕ್ಕೆ ನಿನ್ನ ನೆನಪುಗಳಷ್ಟೆ ಕೊಂಚ ಭರವಸೆಯ ದೀವಿಗೆ//

No comments: