02 November 2014

ನೀರ ಮೇಲೆ ಅವಳ ಹೆಜ್ಜೆ....





( ಭಾಗ - ೪.)


ಅವನಿಗೇನೆ ಅರಿವಿಲ್ಲದಂತೆ ಅವ ಯಾಂತ್ರಿಕವಾಗಿ ರೈಲೇರಿದ, ಏರಿದ ಅನ್ನುವುದಕ್ಕಿಂತ ಹೊರಗೆ ತುಂಬಿದ್ದ ಗಲಾಟೆಯ ಜನಜಂಗುಳಿ ದೂಡುತ್ತಲೇ ಅವನನ್ನು ಒಳಗೆ ತರುಬಿತು. ಯಾವುದೋ ಹೊರಗಿನ ಒತ್ತಡಕ್ಕೆ ಒಳಗಾಗಿ ಅದರ ಇಚ್ಛಾನುಸಾರ ವರ್ತಿಸುವ ತೊಗಲುಬೊಂಬೆಯಂತಾಗಿದ್ದ ಆ ಹೊತ್ತಿನಲ್ಲವನು. ಇಡಿ ಬೋಗಿ ಕಿಕ್ಕಿರಿದು ತುಂಬಿತ್ತು. ರೈಲು ಬೆಂಗಳೂರಿನ ದಿಕ್ಕಿನಿಂದ ಧಾವಿಸುವಾಗಲೆ ಹೆಣಕ್ಕೆ ಕಾದು ನಿಂತ ಹದ್ದುಗಳಂತೆ ಒಂದಷ್ಟು ಮಂದಿ ಸನ್ಮಾನ್ಯ ಪ್ರಯಾಣಿಕರು ಅದರ ಮೇಲೆರಗಲು ಹೊಂಚು ಹಾಕುತ್ತಾ ತಂಗುಗಟ್ಟೆಯ ಮೇಲೆ ಕಾದಿದ್ದರು. ಕೆಲವು ಭಂಡ ಸಾಹಸಿಗಳು ಹಳಿ ದಾಟಿ ಅತ್ತಲಿಂದಲೂ ಬಂದು ನಿಲ್ಲುವ ರೈಲಿನ ಮೇಲೆ ಮುಗಿ ಬೀಳಲು ಟೊಂಕ ಕಟ್ಟಿ ನಿಂತಿದ್ದರು. ಒಟ್ಟಿನಲ್ಲಿ ಬಂದು ಮುಟ್ಟಿದ ಪ್ರಯಾಣಿಕರೊಬ್ಬರೂ ಹೊರಗಿಳಿಯುವ ಮುಂದೆಯೆ ಅವರನ್ನೆಲ್ಲ ದೂಡಿಕೊಂಡು ಒಳ ನುಗ್ಗುವವರ ಸಂಖ್ಯೆ ಅಲ್ಲಿನ ಸ್ಥಳ ಸಾಮರ್ಥ್ಯಕ್ಕಿಂತಲೂ ದುಪ್ಪಟ್ಟಾಗಿದ್ದು ಕೂತು ಕೊಳ್ಳುವುದಕ್ಕಿರಲಿ ನಿಲ್ಲಲಿಕ್ಕೂ ಸಹ ಚೂರು ಎಡೆ ಸಿಕ್ಕರೆ ಅದೆ ಅವರ ಅಜ್ಜಿ ಮಾಡಿದ ಪುಣ್ಯ ಅನ್ನುವ ತುರ್ತು ಪರಿಸ್ಥಿತಿ ಅಲ್ಲಿತ್ತು.


ಅದು ಹೇಗೋ ಪ್ರಯಾಸ ಪಟ್ಟು ಒಳ ನುಗ್ಗಿದವನಿಗೆ ಬಾಗಿಲ ಬಳಿ ಕೊಂಚ ನಿಲ್ಲಲು ಎಡೆ ಮಾತ್ರ ಸಿಕ್ಕಿತು. ಅಲ್ಲಿ ನಿಂತೆ ಆತ ಕಾಣದ ನಾಳೆಗೆ ಭಯ ಪಟ್ಟು ಮುಂದಿನ ಬಾಳಿನ ಅನಿಶ್ಚಿತತೆಯ ಬಗ್ಗೆ ಚಿಂತಿಸ ತೊಡಗಿದ. ಬೆಂಗಳೂರಿನಲ್ಲಿ ಹೋಗಿ ಎಲ್ಲಿರಬೇಕು ಅನ್ನುವ ಪ್ರಶ್ನೆಗೆ ಅವನೆ ಒಂದು ತಕ್ಷಣದ ಉತ್ತರ ಕಂಡುಕೊಂಡಿದ್ದ, ಅವನೊಂದಿಗೆ ಹೈಸ್ಕೂಲಿನಲ್ಲಿ ಓದುತ್ತಿದ್ದ ಒಬ್ಬ ಓದಿನಲ್ಲಿ ಆಸಕ್ತಿ ತೋರದೆ ಬೆಂಗಳೂರಿಗೆ ಹೋಗಿ ಅಲ್ಲಿ ತನ್ನ ಅಣ್ಣನ ಜೊತೆ ಏನೋ ಕೆಲಸ ಮಾಡಿಕೊಂಡು ಇದ್ದಾನೆ ಎನ್ನುವ ಸುಳಿವವನಿಗಿತ್ತು. ಹರಸಾಹಸ ಮಾಡಿ ತನ್ನ ಬುದ್ಧಿ ಮತ್ತೆಯನ್ನೆಲ್ಲಾ ಉಪಯೋಗಿಸಿ ಅವನ ಅಮ್ಮನಿಂದ ಅವನ ವಿಳಾಸವನ್ನಿವ ಸಂಪಾದಿಸಿದ್ದ. ಆಕೆಗೆ ವಿಳಾಸ ಕೊಡಲು ಮನಸ್ಸಿರಲಿಲ್ಲ ಹೇಗಾದರೂ ಮಾಡಿ ಅದನ್ನ ಗಿಟ್ಟಿಸದೆ ಇವನಿಗೆ ಅನ್ಯಮಾರ್ಗವೆ ಇರಲಿಲ್ಲ! ಸಾವಿರ ಸುಳ್ಳಿನ ಮಾಲೆ ಹಣೆದು ಕಡೆಗೂ ಆ ವಿಳಾಸವನ್ನ ಗೆದ್ದುಕೊಳ್ಳುವಷ್ಟರಲ್ಲಿ ಅವನಿಗೆ ಸಾಕು ಬೇಕಾಗಿತ್ತು. ಇದೆಲ್ಲವನ್ನೂ ಕೇವಲ ಮೂರು ದಿನಗಳಲ್ಲಿ ಅವನು ಸಾಧಿಸಿದ್ದ!

ಒಂದು ಸುದೀರ್ಘ ಶ್ವಾಸವನ್ನ ಎಳೆದುಕೊಂಡ ರೈಲು ಚೂರೆಚೂರು ಹಿಂದೆ ತಳ್ಳಿದಂತಾಗಿ ಮುಂದೆ ಮೆಲ್ಲಗೆ ಹಳಿಯ ಮೇಲೆ ತೆವಳ ತೊಡಗಿತು. ಅಲ್ಲಿಯವರೆಗೆ ಸ್ವಗತದ ಸರೋವರದಲ್ಲಿ ಮೂಗಿನ ಮಟ್ಟ ಮುಳುಗಿದ್ದ ಅವನಿಗೆ ಇದರಿಂದ ಒಮ್ಮೆಲೆ ಅಘಾತವಾದಂತಾಗಿ ವಾಸ್ತವಕ್ಕೆ ದೊಪ್ಪನೆ ಎಸೆದಂತಾಯಿತು. ನೋಡಿದರೆ ರೈಲು ಮೆಲ್ಲನೆ ವೇಗ ಹೆಚ್ಚಿಸಿಕೊಳ್ಳುತ್ತಿದೆ! ಒಮ್ಮೆಲೆ ಮನೆಗೆ ಮರಳುವ ಹಂಬಲ ಕಾಡಿ ಹಾಗೆಯೆ ಹೊರ ಹಾರಿ ಮನೆಯ ಹಾದಿ ಹಿಡಿಯಲ? ಅನ್ನುವ ಆಲೋಚನೆಯೂ ಸುಳಿದು ಹೋಯಿತು. ಹಾಗೊಮ್ಮೆ ಹೋದರೆ ಅಲ್ಲಿ ಆರತಿ ಹಿಡಿದು ತನ್ನನ್ನ ಸ್ವಾಗತಿಸುವವರ್ಯಾರಾದರೂ ಇದ್ದಾರ? ಎಂದು ಯೋಚಿಸಿದಾಗ ಮಾತ್ರ ಮತ್ತೆ ಅನಾಥ ಭಾವವೆ ಮನೆ ಮಾಡಿ ದೋಭಿಯ ನಾಯಿಯಂತಾದೆ ನಾನು ಎಂದವನಿಗನ್ನಿಸಿತು. ವಿಷಾದದ ನಗೆಯೊಂದು ಮೂಡಿದಷ್ಟೆ ಬೇಗ ತುಟಿಯಂಚಿನಲ್ಲಿ ಅಸ್ತಂಗತವೂ ಆಯ್ತು.

.....


ಹಾಗೆ ನೋಡಿದರೆ ಅವನಿಗೆ ಅವನವರೆಂದು ಹೇಳಿಕೊಳ್ಳಲು ಎಲ್ಲಾ ಸಂಬಂಧಿಕರೂ ಇದ್ದರು. ಆದರೆ "ಕೇವಲ" ಹೇಳಿಕೊಳ್ಳಲು ಮಾತ್ರ. ಯಾರೊಬ್ಬರಿಗೂ ಅವನ ಅಭ್ಯುದಯದ ಬಗ್ಗೆ ಆಸಕ್ತಿ ಇರಲೇ ಇಲ್ಲ. ತಂದೆಯ ಒಡ ಹುಟ್ಟಿದವರೆಲ್ಲ ತೀರಾ ಬಡವರಾಗಿದ್ದು ಹಳ್ಳಿಗರಾಗಿದ್ದರಿಂದ ಅವರಿಂದ ಏನೊಂದನ್ನೂ ನಿರೀಕ್ಷಿಸುವಂತಿರಲಿಲ್ಲ. ಹೆಚ್ಚೆಂದರೆ ಅವರಿಗೆ ಸಾಧ್ಯವಿದ್ದರೆ ಇವನೇ ಏನನ್ನಾದರೂ ಕೊಡಬಹುದಾಗಿತ್ತು ಅಷ್ಟೆ. ಆದರೆ ತಾಯಿಯ ಒಡ ಹುಟ್ಟಿದವರ್ಯಾರೂ ಆರ್ಥಿಕವಾಗಿ ಸೋತವರಾಗಿರಲಿಲ್ಲ. ಆದರೆ ಸ್ವಾರ್ಥದಲ್ಲಿ ಉನ್ಮತ್ತರಾಗಿದ್ದರಿಂದ ಅವರಿಂದಲೂ ಮೂರು ಕಾಸಿನ ಪ್ರಯೋಜನ ಅವನಿಗೆ ಇದ್ದಿರಲೇ ಇಲ್ಲ. ಹಾಗಂತ ಅವರಲ್ಲಿ ಔದಾರ್ಯಕ್ಕೇನೂ ಕೊರತೆ ಇರಲಿಲ್ಲ. ಇವನ ಹೊರತು ಇನ್ನಿತರ ಮನೆಯ ಮೊಮ್ಮಕ್ಕಳ ಬೇಡಿಕೆಗಳನ್ನೆಲ್ಲ ಅವರೆಲ್ಲ ಸಾಮರ್ಥ್ಯಾನುಸಾರ ಪೂರೈಸುವುದಿತ್ತು. ಆದರೆ ತಮಗೆ ಏನೊಂದೂ ಸಹಾಯ ಮಾಡುವ ಸ್ಥಿತಿಯಲ್ಲಿ ಇದ್ದಿಲ್ಲದ ಈ ಅಕ್ಕನ ಮಗನ ಮಗನ ಬಗ್ಗೆ ಅವರಿಗೆ ಸಹಜವಾಗಿ ಅಸಡ್ಡೆ ಇತ್ತು. ತಮಗೆ ಏನೊಂದೂ ತಿರುಗಿ ದೊರೆಯದಲ್ಲಿ ಪುಕ್ಕಟೆ ಕೃಪೆ ತೋರಲು ಅವರ್ಯಾರೂ ಸುತಾರಾಂ ತಯ್ಯಾರಿರಲಿಲ್ಲ.


ಅದರೆ ಇವನನ್ನ ತಮ್ಮ ಕೆಲಸಗಳಿಗೆ ಉಪಯೋಗಿಸಿಕೊಳ್ಳ ಬೇಕಾದ ಸಂದರ್ಭಗಳಲ್ಲಿ ಮಾತ್ರ ಅವರಿಗೆ ಸಂಬಂಧ ನೆನಪಾಗುತ್ತಿತ್ತು. ಅಂತಹ ಹೊತ್ತಿನಲ್ಲಿ ಇವನ ಎರವಲು ಸೇವೆಯನ್ನ ಉಪಯೋಗಿಸಿಕೊಳ್ಳಲು ಅವರ್ಯಾರೂ ಮರು ಆಲೋಚಿಸುತ್ತಲೇ ಇರಲಿಲ್ಲ. ಅವರ ಪಾಲಿಗೆ ಇವನೊಬ್ಬ ಅಗ್ಗದ ಸೇವಕನಾಗಿದ್ದ. ಒಂಥರಾ ಸಂಬಳ ಕೇಳದ ಜೀತದಾಳು. ಇದೆಲ್ಲಾ ಅವನಿಗೆ ಬಾಲ್ಯದಲ್ಲಿ ಅರ್ಥವಾಗುತ್ತಲೆ ಇರಲಿಲ್ಲ. ಯಾರು ಏನೆ ಹೇಳಿದರೂ ಸಹ ಮುಗ್ಧವಾಗಿ ನಂಬುತ್ತಿದ್ದನವ. ಅಲ್ಲದೆ ಯಾರೊಬ್ಬರೂ ತನಗೆ ವಂಚಿಸರು ಎನ್ನುವ ಕುರುಡು ನಂಬಿಕೆಯೊಂದು ಬೇರೆ ಅವನಲ್ಲಿತ್ತು. ಕೊಂಚ ಹೊಗಳಿಕೆಗೆ ಮರಳಾಗುವ ಅವನ ಬಲಹೀನತೆಯನ್ನ ಅವಶ್ಯಕತೆ ಬಿದ್ದಗಲೆಲ್ಲಾ ಧಾರಾಳವಾಗಿ ಅವರೆಲ್ಲ ಉಪಯೋಗಿಸಿಕೊಳ್ಳುತ್ತಿದ್ದರು.


ಅವನನ್ನ ಒಂಬತ್ತನೆ ವಯಸ್ಸಿನಲ್ಲಿ ಅವನ ತಾಯಿಯ ಒಡ ಹುಟ್ಟಿದವಳೆ ಓದಿಸುವ ನೆಪ ಮಾಡಿ ತನ್ನೂರಿಗೆ ಕರೆದೊಯ್ದಿದ್ದಳು. ಅಲ್ಲಿ ತನ್ನ ಮನೆ ಕೆಲಸಕ್ಕೆ ತಿಂಗಳಾನುಗಟ್ಟಲೆ ಉಪಯೋಗಿಸಿಕೊಂಡು ಆಮೇಲೆ ತನ್ನ ಅವಶ್ಯಕತೆ ತೀರಿದ ಮೇಲೆ ವಿದ್ಯಾರ್ಥಿ ನಿಲಯವೊಂದಕ್ಕೆ ಉಪಾಯವಾಗಿ ಸಾಗ ಹಾಕಿ ತನ್ನ ಹೊಣೆಯಿಂದ ಪಾರಾಗಿದ್ದಳು. ಕರೆದು ಕೊಂಡು ಹೋಗುವಂತೆ ಇವನೇನೂ ಆಶಿಸಿರಲಿಲ್ಲ, ಅವಳ ಮನೆಯಲ್ಲಿ ಮಗುವನ್ನ ನೋಡಿಕೊಳ್ಳಲಿಕ್ಕೆ ಒಂದು ಜನ ಸಿಗದೆ ಪರದಾಡುತ್ತಿದ್ದವಳು ಸುಲಭವಾಗಿ ತನ್ನೂರಿಗೆ ಸೆಳೆದೊಯ್ದಿದ್ದಳು. ಮಗು ನೋಡಿಕೊಳ್ಳುವ ಜೊತೆಗೆ ಮನೆಯ ಸಕಲೆಂಟು ಕೆಲಸಗಳನ್ನೂ ಆತ ಬೇಸರವಿಲ್ಲದೆ ಮಾಡುತ್ತಿದ್ದ. ಆದರೆ ಅವಳ ಗಂಡನಿಗೆ ಇವ ಅಲ್ಲಿರೋದು ಇಷ್ಟವಿರಲಿಲ್ಲ. ಹಾಗಂತ ಕರೆ ತಂದಾಗಿತ್ತು ಸೂಕ್ತ ಕಾರಣ ಕೊಡದೆ ವಾಪಾಸು ಕಳಿಸುವ ಹಾಗೂ ಇರಲಿಲ್ಲ.


ಅವನ ಇಚ್ಛೆಗೆ ವಿರುದ್ಧವಾಗಿ ಮೊದಲಿಗೆ ವಿಧ್ಯಾರ್ಥಿ ನಿಲಯಕ್ಕೆ ಸೇರಿಸಿ ಪಾರಾಗಿದ್ದವರು ಮೂರು ವರ್ಷಗಳ ನಂತರ ಅಷ್ಟೆ ಅಸ್ಥೆಯಿಂದ ದೂರದೂರೊಂದರ ಇನ್ನೊಂದು ಉಚಿತ ವಸತಿ ಶಾಲೆಗೆ ಸಾಗ ಹಾಕಿ ಶಾಶ್ವತವಾಗಿ ತಮ್ಮ ಹೊಣೆಗಾರಿಕೆಯಿಂದ ಹೆಗಲು ಕೊಡವಿಕೊಂಡು ಸಲೀಸಾಗಿ ಪಾರಾಗಿದ್ದರು. ಅಲ್ಲಿಂದೀಚೆಗೆ ಅವನ ಬದುಕು ಸೂತ್ರ ತಪ್ಪಿದ ಪಟದಂತಾಗಿ ಹೋಗಿತ್ತು. ಹೆತ್ತವರಿಗೆ ಇವನೊಬ್ಬ ಬದುಕಿದ್ದಾನೆ ಅಂತಲೆ ನೆನಪಿರಲಿಲ್ಲ. ತಮ್ಮ ಸ್ವಾರ್ಥಕ್ಕೆ ಕರೆದು ಕೊಂಡು ಹೋದವರಿಗೆ ತಮ್ಮ ಕೆಲಸ ತೀರಿದ ಮೇಲೆ ಇವ 'ಹೊಳೆ ದಾಟಿಸಿದ ಅಂಬಿಗ'ನಾಗಿದ್ದ, ಹೆಚ್ಚಿನ ಹೊಣೆ ಹೊರಲು ಅವರೂ ಸಹ ಸಿದ್ಧರಿರಲಿಲ್ಲ.

.......


ಶಿವಮೊಗ್ಗ ನಿಲ್ದಾಣ ಬಿಟ್ಟು ಹೊರಟ ರೈಲು ನಡುಗುವಂತೆ ತುಂಗಾ ಸೇತುವೆಯ ಮೇಲೆ ಸಾಗುತ್ತಿದ್ದಾಗ ಬಿಸಿಲಿಗೆ ಬತ್ತಿದ್ದರೂ ಅಲ್ಲಲ್ಲಿ ಕೊರಕಲಲ್ಲಿ ಹರಿಯುತ್ತಿದ್ದ ಹೊಳೆ ಕಣ್ಣಿಗೆ ಬಿದ್ದಾಗ ಖುಷಿಯೊಂದು ತಕ್ಷಣ ಆವರಿಸಿ ಅವ ಭಾವುಕನಾದ. ಇದೇ ಹೊಳೆ ಅವನೂರು ದಾಟಿ ಇಲ್ಲಿಗೆ ಬರುತ್ತಿತ್ತಲ್ಲ, ಅಲ್ಲಿ ಮೈತುಂಬಿ ಹರಿಯುತ್ತಿದ್ದವಳು ಇಲ್ಲಿ ಕೊರಕಲುಗಳ ನಡು ಕಡು ಕಷ್ಟದಿಂದ ಪಾರಾಗಿ ಮುಂದುವರೆಯುತ್ತಿದ್ದ ಹಾಗೆ ಅವನ ಕಣ್ಣಿಗೆ ಕಂಡಿತು. ಅನೇಕ ಬೇಸರದ ಸಂಜೆಗಳನ್ನ ತುಂಗೆಯ ತಟದಲ್ಲಿ ಒಂಟಿಯಾಗಿ ಕೂತು ಅವನು ಕಳೆದಿದ್ದ. ಅವಳೊಂದಿಗೆ ತನ್ನ ಅನೇಕ ನೋವುಗಳನ್ನ ರಹಸ್ಯಗಳನ್ನ ನಸು ಸಂಜೆಯಲ್ಲಿ ಹೇಳಿ ಹಂಚಿಕೊಂಡು ಹಗುರಾಗಿದ್ದ. ಆಕೆ ತನ್ನನ್ನ ಹರಿಯುತ್ತಲೆ ಆಲಿಸುತ್ತಾಳೆ ಎನ್ನುವ ಭ್ರಮೆ ಅವನಲ್ಲಿತ್ತು. ಸಂಕಟದ ಸಂಜೆಗಳಲ್ಲಿ ಅವಳ ಸಾನಿಧ್ಯದಲ್ಲಿ ಮನಸಿನ ಭಾರಗಳನ್ನೆಲ್ಲ ಹೇಳಿಕೊಂಡು ಇಳಿಸಿ ಹಗುರಾಗುವಾಗ ಅವಳೊಬ್ಬ ಆತ್ಮೀಯ ಗೆಳತಿಯಂತೆ ಭಾಸವಾಗಿದ್ದಳು. ಎಂದೆಂದೂ ತನ್ನ ದೂರದ, ತನ್ನ ಎಂದೂ ತಿರಸ್ಕರಿಸದ ನಿಷ್ಕಾಮಿ ಸಖಿ ಅವಳಂತ ಆತ ಬಗೆದಿದ್ದ.


ಈಗ ತನ್ನನ್ನ ಬೀಳ್ಕೊಡುವ ಮನಸಿಲ್ಲದೆ ತುಂಗೆ ನೋವಿನಲ್ಲಿ ಸೋತು ಸೊರಗಿದ್ದಾಳೆ ಅಂತನ್ನಿಸಿತವನಿಗೆ. ತುಂಗೆಯೊಂದಿಗೆ ಒಂದು ಅವ್ಯಕ್ತ ಭಾವನಾತ್ಮಕ ನಂಟನ್ನ ಬೆಳೆಸಿಕೊಂಡಿದ್ದ ಫಲ ಅದು. ಇನ್ನು ಮತ್ಯಾವಾಗ ಮರಳಿ ಅವಳ ದಡದ ಮರಳಲ್ಲಿ ಕೂತು ಕೊಳ್ಳೋದು? ಹರಿವ ಅವಳ ನಿಶ್ಚಲ ಎದೆಯಲ್ಲಿ ಮತ್ತೆಂದು ತಾನು ಬೆತ್ತಲೆ ಕಾಲುಗಳನ್ನ ಇಳಿಬಿಟ್ಟು ತನ್ನ ಒಂಟಿತನದ ನೋವನೆಲ್ಲ ಕ್ಷಣ ಕಾಲವಾದರೂ ಮರೆಯೋದು? ಎನ್ನುವ ಉತ್ತರಗಾಣದ ಪ್ರಶ್ನೆಗಳ ಅಲೆಗಳು ಮನದ ಪಾತ್ರದಲ್ಲಿ ಏಳುತ್ತಿದ್ದಂತೆ ಅವನಿಗೇನೆ ಅರಿವಿಲ್ಲದಂತೆ ಕಣ್ಣು ತುಂಬಿ ಬಂತು. ಸುಮ್ಮನೆ ಮೂಕ ಪಶುವಿನಂತೆ ಕಣ್ಣೀರು ಹಾಕಿದ.

ಅದೆಷ್ಟು ಹೊತ್ತು ಹಾಗೆಯೆ ನಿಂತಿದ್ದನೋ ಅವನಿಗರಿವಿರಲಿಲ್ಲ. ನಿಂತೂ ನಿಂತೂ ಕಾಲು ಬಚ್ಚಿತ್ತು, ಅಲ್ಲಸಲ್ಲದ್ದನ್ನ ವಿನಾಕಾರಣ ಮತ್ತೆ ಮತ್ತೆ ಆಲೋಚಿಸಿ ಅವನ ಮಂಡೆಯೂ ಬಳಲಿತ್ತು. ಹಾಗೆ ಅಕ್ಕ ಪಕ್ಕ ಅಲ್ಲೆ ನೆಲದ ಮೇಲೆ ಕೂತವರತ್ತ ಆರ್ತ ದೃಷ್ಟಿ ಬೀರಿ ಅವರ ಕೃಪೆಯಿಂದ ಸಿಕ್ಕಿದ ತುಣುಕು ಎಡೆಯಲ್ಲಿ ಕಷ್ಟದಿಂದ ತಾನೂ ಅಂಡೂರಿದ. ಕೇವಲ ಹೆಸರು ಮಾತ್ರ ಕೇಳಿ ಗೊತ್ತಿದ್ದ ಊರುಗಳೆಲ್ಲ ಒಂದೊಂದಾಗಿ ಹಿಂದಾಗುತ್ತಿದ್ದವು. ಹೆಸರೂ ಸಹ ಕೇಳಿ ಗೊತ್ತಿಲ್ಲದ ಅನೇಕ ನಿಲ್ದಾಣಗಳಲ್ಲಿ ಆಗಾಗ ನಿಂತು ರೈಲುಬಂಡಿ ಮುಂದೋಡುತ್ತಿತ್ತು.

ರೈಲು ಮತ್ತವನ ಮನಸಿನ ಚಲನೆಯಲ್ಲೊಂದು ಸಾಮ್ಯತೆ ಇತ್ತು. ತಾದ್ಯಾತ್ಮನಾಗಿ ಆಲೋಚಿಸುತ್ತಿದ್ದ ಅವನ ಮನದ ಬಂಡಿ ಹಿಂದಿರುಗಿ ನೆನ್ನೆಗಳತ್ತ ಓಡುತ್ತಿತ್ತು. ಆದರೆ ಅವ ಕುಳಿತ ಬಂಡಿ ಮಾತ್ರ ಹೊಸ ಕನಸುಗಳ ಬೆನ್ನು ಹತ್ತಿದ ನಾಳೆಗಳತ್ತ ದೌಡಾಯಿಸುತ್ತಾ ಮುಂದೋಡುತ್ತಿತ್ತು. ಹೊರಗೆ ಸೂರ್ಯ ಮುಪ್ಪಾಗುತ್ತಿದ್ದ. ಅನಿರೀಕ್ಷಿತಗಳಿಗೆ ಅನಿವಾರ್ಯವಾಗಿ ತೆರೆದುಕೊಳ್ಳಲು ಅವನೂ ಹೆದರು ಹೆದರುತ್ತಲೇ ತಯಾರಾಗುತ್ತಿದ್ದ. ಅದ್ಯಾವುದೋ ಒಂದು ಜಂಕ್ಷನ್ನಿನಲ್ಲಿ ರೈಲು ಒಮ್ಮೆಲೆ ನಿಂತಾಗ ಅಲ್ಲಿನ ಗೌಜಿ ಗದ್ದಲಕ್ಕೆ ಬೆಚ್ಚಿ ವಾಸ್ತವಕ್ಕವನು ಮರಳಿದ. ರೈಲಿಳಿಯುವವರ ಭರಾಟೆ. ಅದೂ ಇದು ಮಾರುವವರ ಗಲಾಟೆ ಗದ್ದಲ, ಏರಲು ಕಾತರದಿಂದ ಕಾಯುತ್ತಿರುವವರ ಅವಸರ ಇವೆಲ್ಲದರ ನಡುವೆ ಇವನ ನೋವು ಅನಾಥ ಕೂಸಿನಂತಿತ್ತು. ಇಳಿಯುವವರು ಇಳಿಯುತ್ತಿದ್ದರು ಏರುವವರು ಏರುತ್ತಿದ್ದರು ಬೀಡಿ ಸೇದುವವರು ಸೇದುತ್ತಿದ್ದರು. ಒಟ್ಟಿನಲ್ಲಿ ಅಲ್ಯಾರಿಗೂ ಇವನೊಬ್ಬ ಲಕ್ಷ್ಯ ಕೊಡಬೇಕಾದ ವಿಶೇಷ ವ್ಯಕ್ತಿಯೇನೂ ಆಗಿರಲಿಲ್ಲ. ಅಲ್ಲಿ ನೆರೆದ ಯಾರಿಗೂ ಅವನ ನೋವು ಕಾಣುತ್ತಿರಲಿಲ್ಲ. ಜಗತ್ತು ಅದರ ಪಾಡಿಗದು ಓಡುತ್ತಿತ್ತು. ಇವ ಇವನ ಲೋಕದ ಝಂಜಡದಲ್ಲಿಯೆ ಮುಳುಗಿ ಹೋಗಿದ್ದ.


( ಮುಂದಿದೆ.)

No comments: