04 January 2015

ವಾಸ್ತವ ಇರೋದೆ ಬೇರೆ, ಆದರ್ಶ ಅದೇ ಬೇರೆ.......



ಬೇರು ಮರೆತ ಹೂವು ಬಾಡೋದು ಖಚಿತ
ಋಣ ಹರಿದ ಮನಸಿಗೆ ನೋವು ಮಾತ್ರ ಉಚಿತ,
ಕಾಲ ಯಾರಿಗೂ ಕ್ಷಣ ಮಾತ್ರವೂ ಕಾಯುವುದಿಲ್ಲ
ನಾಳೆ ಇಂದಿಗೆ ಹತ್ತಿರದ ನೆಂಟ ಹಾಗಂತ ನೆನ್ನೆಯಾಗದೆ
ಅದು ನಿಂತಲ್ಲಿಯೆ ಸುಮ್ಮನೆ ಕಾಯುತ್ತಾ ಉಳಿಯುವುದಿಲ್ಲ/
ಹಳಬರಾಗುವುದು ಕೇವಲ ನಾವು ಮಾತ್ರ
ಕಾಲಮಾನ ಯಾವತ್ತೂ ಹೊಚ್ಚ ಹೊಸದು,
ನಮ್ಮದಿಲ್ಲೇನಿದ್ದರೂ ಕೇವಲ ನಾಟಕದ ಪಾತ್ರ
ವಿಧಿ ನಿರ್ಧರಿಸಿದಾಗ ನಾವು ನಿರ್ಗಮಿಸಬಹುದು//


ಕೆಲವೊಮ್ಮೆ ಮನದ ಮರುಳ ಕಂಡು
ಕನಸು ಇರುಳ ನಿದ್ದೆಯಲ್ಲಿ ಅದನ್ನ ಅಣಗಿಸುತ್ತದೆ,
ಸಾಕಾರವಾಗದ ಅದರ ಆಸೆಗಳನ್ನ ತನ್ನ ನೆರಳ ಛಾವಣಿಯೊಳಗೆ ಎಳೆದುಕೊಳ್ಳದೆ
ಬರ್ಬರ ನಿರೀಕ್ಷೆಯ ಬಿಸಿಲಿನಲ್ಲಿಯೇ ನಿರ್ದಯವಾಗಿ ಒಣಗಿಸುತ್ತದೆ/
ಪ್ರಾಮಾಣಿಕತೆಗೆ ಇಲ್ಲಿ ಸಿಗದು ಕಿಂಚಿತ್ತೂ ಕರುಣೆ
ಶುಭ್ರ ಮನಸಿನ ಯಾಚನೆಗೆ ಯಾವತ್ತೂ
ಮುಲಾಜಿಲ್ಲದೆ ಹೆಗಲು ಜಾರಿಸುತ್ತದೆ ಜಗತ್ತು ಹೊರಲೊಪ್ಪದೆ ಹೊಣೆ,
ಇನ್ನೊಬ್ಬರ ವಂಚಿಸ ಹೊರಟವರಿಗೆ ಇಲ್ಲಿ
ಯಾವತ್ತೂ ಸಿಗುತ್ತಲೇ ಇರುತ್ತದೆ ರಾಜ ಮನ್ನಣೆ...
ಬರೆದದ್ದನ್ನ ಬೇಡವೆಂದಾಗ ಬರಿಗೈಯಲ್ಲಿ ಒರೆಸುವಂತಿಲ್ಲವಲ್ಲ
ಇದು ವಿಧಿಯ ಕಪ್ಪುಹಲಗೆಯಾಗಿರುವ ಕರ್ಮದ ಹಣೆ//


ಅಕಾಶ ಅತಿ ಚಿಕ್ಕದು ಇಲ್ಲಿ ಅನಿರೀಕ್ಷಿತವಾಗಿ ಸಿಗುವ ಅವಕಾಶದ ಮುಂದೆ
ಅಯೋಗ್ಯರ ಕರಗ ಹೊತ್ತು ತಿರುಗುವ ತಲೆತಿರುಕರ ಜಗತ್ತಿದು
ಜನ ಇಲ್ಲಿ ಬಿಕರಿಗೆ ಮೆದುಳಡವಿಟ್ಟ ಬರಿ ಕುರಿ ಮಂದೆ,
ಗೊತ್ತು ಗುರಿಯಿಲ್ಲದಿದ್ದರೂ ಕಾಂಚಣದ ಝಣಝಣ ಕಿವಿ ತುಂಬಿದರೆ ಸಾಕು
ಹಾಕುತಾರೆ ಮತಿಗೆಟ್ಟವರಂತೆ ಹೆಜ್ಜೆ ಹೊರಟ ಜಾತ್ರೆಯ ಗುಂಪಿನ ಹಿಂದೆ/
ಪ್ರತಿಭೆ ಇಲ್ಲಿ ಯಾವತ್ತೂ ಕಾಡ ಸುಮದ
ಕಾಣದೆ ಅರಳಿ ಬಾಡುವ ಸುಗಂಧದ ಮೊಗ್ಗು,
ಸುರೂಪವದೆಷ್ಟೆ ಇದ್ದರೂ ಬಡವನ ಕೂಸನ್ನ ಯಾರೂ ಎತ್ತಿ ಮುದ್ದಿಸರು
ಅವಕಾಶವಾದಿ ಜಗತ್ತಿನ ಕಣ್ಣಿಗೆ ಯಾವತ್ತೂ....
ಹಣವಂತರು ಹೆತ್ತದ್ದೆ ವಿಶ್ವದ ಅತಿಸುಂದರ ಮಗು//


No comments: