06 September 2016

ಗಣಪತಿ ಬಪ್ಪದೆ ಹೋಗಯ್ಯ, ಈಗ ಆದ ಅನಾಹುತವೇ ನಮಗೆ ಸಾಕಯ್ಯಾ........





ಪಾಪ, ಉದಾತ್ತ ಮನಸ್ಸಿನ ಮಹಾನುಭಾವರಾಗಿದ್ದ ಅಮರ ಹೋರಾಟಗಾರ ಬಾಲಗಂಗಾಧರ ತಿಲಕರ ಆಶಯವೇ ಅಸಲಿಗೆ ಬೇರೆ ಇತ್ತೇನೋ! ಆದರೆ ಈಗಿನ ಬಹುತೇಕ ಹುಟ್ಟಾ 'ಚಂದಾ'ಮಾಮಂದಿರಾದ ಭಂಡಮುಂಡೆಗಂಡರು ಅದನ್ನ ಸಂಪೂರ್ಣ ಹಳ್ಳ ಹಿಡಿಸಿ ಬಿಟ್ಟು, "ಗಣಪತಿ ಹಬ್ಬ"ವನ್ನ ಸಾರ್ವಜನಿಕವಾಗಿ ಆಚರಿಸೋದು ಎಂದರೆ ಸಾರ್ವತ್ರಿಕವಾಗಿ ಗಲಭೆ ಮಾಡೋದು ಹಾಗೂ ಮಾಡಿಸೋದು ಅಂತಲೇ ತೀರ್ಮಾನಿಸಿಬಿಟ್ಟ ಹಾಗಿದೆ. ಈತನಕ 'ಗಣಪತಿ'ಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವಿಷಯ ಹಿಂದೂ ಹಾಗೂ ಮುಸಲ್ಮಾನರ ನಡುವಿನ ಕೋಮು ಗಲಭೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಜಾತಿ ಹಾಗೂ ಸ್ಪರ್ಶ್ಯತೆ - ಅಸ್ಪರ್ಶ್ಯತೆಗೂ ಅದನ್ನ ಯಶಸ್ವಿಯಾಗಿ ನಾಚಿಕೆ ಬಿಟ್ಟು ತಳುಕಿಸಲಾಗಿದೆ.

ಬರುಬರುತ್ತಾ, ಈ ಸಾರ್ವಜನಿಕ ಆಚರಣೆಯ 'ಗಣಪತಿ ಹಬ್ಬ' ಸಹ 'ಕಾಂಗ್ರೆಸ್ ಸಂಸ್ಥೆ'ಯಂತೆ ಆಗಿಹೋಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿದ್ದಂತೆ ಈ ಸಾರ್ವಜನಿಕ ಗಣಪತಿ ಉತ್ಸವದಂತೆ ಆ ಕಾಂಗ್ರೆಸ್ ಕೂಡಾ ಅಪ್ರಸ್ತುತವಾಗಿ ಹೋಗಿಯಾಗಿದೆ. ಅವೆರಡರ ಸ್ಥಾಪನೆಯ ಉದ್ದೇಶವೂ ಸ್ವಾತಂತ್ರ್ಯ ಸಾಧನೆಯ ಮೂಲಕ ತೀರಿದ ಮೇಲೆ ಅವೆರಡನ್ನೂ ಮುಚ್ಚಿಕೊಂಡು ವಿಸರ್ಜಿಸೋದು ಬಿಟ್ಟು ನಮ್ಮ ಜನ ಇಲ್ಲಸಲ್ಲದ ಜಾತಿ - ಕೋಮುಗಳ ಪುಕಾರು ಹಬ್ಬಿಸಿಕೊಂಡು ಇವೆರಡು ಸ್ಥಾಪಿತ ಹಿತಾಸಕ್ತಿಗಳನ್ನೂ ಪ್ರಬಲವಾಗಿ ಪೋಷಿಸಿಕೊಂಡು ಎಂತೆಂತದೋ ಚಿತಾವಣೆ ಮಾಡಲು ಜೀವಂತವಾಗಿಟ್ಟುಕೊಂಡೇ ಬರುತ್ತಿದ್ದಾರೆ. ನನ್ನ ಅನುಭದ ಮಟ್ಟಿಗಂತೂ ಹಿಂದೂ ಮುಸ್ಲಿಮ್ ನಡುವಿನ ಅಸಹನೆಗೆ ಇನ್ನಷ್ಟು ಸೀಮೆ ಎಣ್ಣೆ ಸುರಿದು ಫಕ್ಕನೆ ಬೆಂಕಿ ಹಚ್ಚಲಿಕ್ಕೆ ಸಾರ್ವಜನಿಕ ಗಣಪತಿ ಉತ್ಸವಗಳಷ್ಟು ಪ್ರಶಸ್ತವಾದ ಅವಕಾಶ ಸದ್ಯಕ್ಕೆ ಮತ್ತೊಂದು ಇರಲಿಕ್ಕಿಲ್ಲ.

ನಿಮ್ಮೆಲ್ಲರಿಗೆ ಶಿವಮೊಗ್ಗದ ಶ್ರೀರಾಮಣ್ಣ ಶ್ರೇಷ್ಠಿ ಪಾರ್ಕಿನ ಗಣಪತಿ ಉತ್ಸವದ ಭಯಾನಕ ಚರಿತ್ರೆ ನೆನಪಿರಬಹುದು. ಮಹಾವೀರ ಸರ್ಕಲ್ಲಿನಲ್ಲಿ ಹಿಂದೊಮ್ಮೆ ಆತನ ವಿಸರ್ಜನಾ ಮೆರವಣಿಗೆಯ ಕಾಲದಲ್ಲಿ ನಡೆದ ಮಾರಾಮಾರಿಯಲ್ಲಿ ಶಿವಮೂರ್ತಿ ಎಂಬ ಯುವಕನಿಗೆ ಯಾರೋ ಚೂರಿ ಹಾಕಿ, ಮೆರವಣಿಗೆಯ ಹುಮ್ಮಸ್ಸಿನಲ್ಲಿದ್ದ ಗಣಪತಿ ನಡು ನಡುಬೀದಿಯಲ್ಲಿಯೇ ಅನಾಥನಾಗಿ ಉಳಿದು. ಬೇಡ ಕಥೆ! ಈಗ ಅದರ ಪಕ್ಕದ ಸರ್ಕಲ್ಲಿಗೆ ಅದೇ ಸತ್ತ ಶಿವಮೂರ್ತಿಯ ಹೆಸರನ್ನಿಟ್ಟು ಆ ಗಲಭೆಯ ನೆನಪನ್ನ ಸದಾಕಾಲಕ್ಕೂ ಜೀವಂತವಾಗಿರಿಸಲಾಗಿದೆ?!

ಇವತ್ತಿಗೂ ಪ್ರತಿವರ್ಷ ರಾಮಣ್ಣ ಸೆಟ್ಟರ ಈ ಜನರ ದುಡ್ಡಿನ ದೊಡ್ದ ಗಾತ್ರದ ಗಣಪ ಹಾಗೂ ಹಿಂದೂ ಮಹಾಸಭಾ ಗಣಪತಿಯ ಹೊಳೆ ಸೇರಲು ಸಾಗುವ ಹಾದಿಯಲ್ಲಿ ಸಿಗುವ ಅಮೀರ್ ಅಹಮದ್ ಸರ್ಕಲ್ಲಿನ ಬಳಿ ಬರುತ್ತಿದ್ದಂತೆ, ಸದಾ ಸಜ್ಜಾಗಿಯೇ ಬರುವ 'ಕೆಲವರು' ಪಕ್ಕದಲ್ಲಿರುವ ಮಸೀದಿಗೆ ಸಂಪ್ರದಾಯದಂತೆ ಒಂದಷ್ಟು ಕಲ್ಲನ್ನ ಮುಲಾಜಿಲ್ಲದೆ ಎಸೆದು ಮುಂದೆ ಹೋಗುತ್ತಾರೆ! ಇನ್ನೇನು ಮುಳುಗಿ ಮರೆಯಾಗಲಿರುವ ಗಣಪತಿಗೆ ಜಯಕಾರ ಕೂಗಲಾದರೂ ಈ ಗಡವರು ಮರೆತಾರು, ಆದರೆ ಮಸೀದಿಗೆ ಕಲ್ಲೆಸೆಯುವುದನ್ನ ಮಾತ್ರ ಯಾವತ್ತಿಗೂ ಮರೆಯರು. ಆಮೇಲೆ ಕರೆದು ಕೇಳಿದರೆ, "ಮಸೀದಿಯಿಂದಲೇ ಕಲ್ಲುಗಳು ಬಂದು ಮೆರವಣಿಗೆಯ ಮೇಲೆ ಬಿದ್ದವು!" ಅನ್ನುವ ಅನುಗಾಲದ ಅದೇ ಹಸೀ ಸುಳ್ಳೊಂದನ್ನ ಕೇಳಿದವರ ಮುಖಕ್ಕೆ ಎಸೆದು ಮಿಣ್ಣಗೆ ಮರೆಯಾಗಿ ಹೋಗುವುದರಲ್ಲಿ, ಈ ಸೆಟ್ಟರ ಗಣಪಣ್ಣನ ಕಳ್ಳ ಭಕ್ತ ಕೋತಿಗಳು ಬಲು ನಿಸ್ಸೀಮರು.

ಹಿರಿಯ ಗೆಳೆಯರೊಬ್ಬರ ಮಧ್ಯ ಕರ್ನಾಟಕದ ಹುಟ್ಟೂರೊಂದರಲ್ಲಿ ಈ ಸಾರಿ ಜಾತಿ ಜಗಳ ತೆಗೆದು ಗಣಪತಿ ಕೂರಿಸಲು ಅನುಮತಿ ಸಿಗದೆ ಹೋಗುವಂತಾಯಿತಂತೆ. ಲಿಂಗಾಯತರು ಹಾಗೂ ಗೊಲ್ಲರು ಸಲ್ಲದ ಸಂಪ್ರದಾಯದ ಜಾತಿ ಜಗಳ ತೆಗೆದು ಗಣಪಣ್ಣನಿಗೆ ಸಾರ್ವಜನಿಕ ಬೈಠಕ್ ಜಸ್ಟ್‍ಮಿಸ್ ಮಾಡಿಸಿಬಿಟ್ಟರಂತೆ!. ಇದನ್ನ ಕೇಳಿದಾಗ ಮೇಲಿನದೆಲ್ಲಾ ನೆನಪಿಗೆ ಬಂತು. ಒಟ್ಟಿನಲ್ಲಿ ಊರೊಗ್ಗಟ್ಟಿಗೆ ಕಾರಣವಾಗಬೇಕಿದ್ದ ಉತ್ಸವವೊಂದು ಊರೊಟ್ಟಿನ ಒಡುಕಿಗೆ ನೇರ ಕಾರಣವಾಗುತ್ತಿರೋದು ಮಾತ್ರ ನಾಚಿಗೆಗೇಡು.

ಕಾಲ ಕಳೆದ ಹಾಗೆ ತಂತ್ರಜ್ಞಾನ, ಸವಲತ್ತು ಹಾಗೂ ಸಂವಹನ ಕೇವಲ ವಿಶ್ವವನ್ನಷ್ಟೆ ಕುಗ್ರಾಮವನ್ನಾಗಿಸುತ್ತಿಲ್ಲ. ಜನರೂ ಸಹ ಮಾನಸಿಕವಾಗಿ ದಿನದಿಂದ ದಿನಕ್ಕೆ ಕುಬ್ಜರಾಗುತ್ತಾ ತಮ್ಮ 'ಸಣ್ಣತನಗಳಿಂದ' ಮರಳಿ ಶಿಲಾಯುಗದ ಹಾದಿಗೆ ಹೊರಳುತ್ತಿದ್ದಾರೆ ಅನ್ನಿಸುತಿದೆ.

No comments: