ಸುಗಂಧ....
ಅಳಿಸಿ ಹೋಗದ ಬಣ್ಣದ ಶಾಯಿಯಲ್ಲಿ ಬರೆದ ಅಕ್ಷರಗಳೆಲ್ಲ
ಅರಿವಿಗೆ ಸಹ ಬಾರದಂತೆ ಮಾಸಿ ಹೋದ ಹಾಗೆˌ
ಆಗಿದ್ದರೂ ಇದು ಮೌನದ ಹಾಯಿದೋಣಿಯ ಮೇಲಿನ ಏಕಾಂಗಿ ಪಯಣ
ತೆಪ್ಪದ ಮೂಲೆಯಲ್ಲಿ ಹೋದವಳಂದಿರಿಸಿದ ನೆನಪಿನ ಹಲಸು ಅಂಟಿಸುವ ಸೌಗಂಧದ ಮೇಣದ ಕಥೆಯೆ ಹೀಗೆ./
ದಟ್ಟ ಅನುಭವದ ಬಾಳೂ ಸಹ ಕೆಲವೊಮ್ಮೆ ದಟ್ಟದರಿದ್ರವನ್ನಿಸುತ ಹೋಗಿˌ
ನೆನ್ನೆಯ ನೆನಪುಗಳ ಕೂಸನ್ನ ಮಲಗಿಸಿದ ತೊಟ್ಟಿಲ ಜೋಲಿಯನ್ನೆ ಅಪ್ಯಾಯಮಾನವಾಗಿ ಇಂದಿನ ಕೈಗಳು ಸಹ ತೂಗಿ ತೂಗಿ.//
ನೀರ ಮೇಲೆ ಅವಳ ಹೆಜ್ಜೆ
ಉಳಿಸದೆ ಹೋದ ಗುರುತುಗಳೆಲ್ಲ ಮನಸಲಿ ಗಾಢವಾಗಿ ಉಳಿದು ಭಾವಲೋಕ ತುಂಬಾ ವಜ್ಜೆˌ
ನೀಲಿ ಜಲದ ಮೇಲೆ ತೇಲಿ ಕನಸುಗಳೆಲ್ಲ ಕರಗಿದಂತೆ
ಕಲ್ಲಾಗಿ ಕ್ಷಣ ನಾನು ನಾವಿಬ್ಬರೂ ಅಂದು ಕೂಡಿದ್ದ ಸ್ಥಳದಲ್ಲೆ ಮೌನವಾಗಿ ನಿಂತೆ./
ಹರಿವ ನದಿಯ ಜಲದ ಕನ್ನಡಿ
ಪ್ರತಿಬಿಂಬಿಸಿತೆ ಸೋತ ಮನದೊಳಗೆ ಮೂಡಿದ ಶೋಕದ ಮುನ್ನುಡಿˌ
ಕಣ್ಣ ಭಿತ್ತಿಯ ಮೇಲೆ ತೂಗಿದ ಕನಸುಗಳ ಬಿಂಬ
ನೋವನೆ ಬಡಿದೆಬ್ಬಿಸಿದ್ದು ಸುಳ್ಳಲ್ಲ ವಿಷಾದದೆದೆಯ ತುಂಬಾ.//
ಹುಣ್ಣಿಮೆ ಹುಟ್ಟಿಸುತ್ತಿದ್ದ ಖುಷಿಗಳೆಲ್ಲ ಈಗ ಕನಸು
ಕಾರ್ಗತ್ತಲ ಅಮಾವಾಸ್ಯೆ ನಿತ್ಯಸತ್ಯ ನನಸುˌ
ವಯಸ್ಸು ಮೀರಿ ಪ್ರೌಢವಾದ ಮಗು ಮನ
ಏಕಾಂತದಲ್ಲಿ ದೈನ್ಯತೆ ಉಕ್ಕಿಬಂದಾಗ ಅನಾಥ ಭಾವದಲ್ಲಿ ಆಗುತ್ತಿರುತ್ತದೆ ವಿಪರೀತ ದೀನ./
ಮಹಲ ಕೊಳದಲ್ಲಿ ನಳನಳಿಸಿ ತೇಲುವ ಕಮಲದ ಪತ್ರೆಯ ಮೇಲಷ್ಟೇ ಅಲ್ಲ
ಗುಡಿಸಲ ಹಿತ್ತಲ ನಿಶ್ಪಾಪಿ ಕೆಸುವಿನ ಎಲೆಯ ಮೇಲೂ ಮಳೆಯ ಹನಿ ನಿಂತಾಗ ಹೊಳೆವ ಮುತ್ತಾಗುತ್ತದೆˌ
ಹೊರ ಸಿರಿಯ ಹೊತ್ತವರ ಹೆಗಲ ಮೇಲೆ ತಲೆ ಆನಿಸಿ ಕಳೆವ ಕ್ಷಣಗಳಷ್ಟೆ ಅಲ್ಲವಲ್ಲ
ಮಾನಸ ಶ್ರೀಮಂತಿಕೆಯ ಮಡಿಲನ್ನ ನೆಮ್ಮದಿಯ ತಲೆದಿಂಬಾಗಿಸಿ ಮಾಡುವ ನಿದ್ದೆಯಲ್ಲೂ ಸಹ ನಿರಾಳತೆಯ ಸ್ಪಪ್ನ ಹೊಳೆವ ನತ್ತಾಗುತ್ತದೆ.//
- 😇
No comments:
Post a Comment