16 October 2008

ಬಾಲ್ಯ ಬಲು ಮಧುರ...

ಹಾಗೆ ನೋಡಿದರೆ ನಮ್ಮ ಅಜ್ಜನಿಗೆ ಒಟ್ಟು ಆರು ಮಕ್ಕಳು.ನನ್ನ ಹೆತ್ತಮ್ಮ ಮೊದಲನೆಯವಳು,ನನ್ನ ಮೊದಲ ಚಿಕ್ಕಮ್ಮನಿಗೆ ಎರಡೆ-ಎರಡು ವರ್ಷ ವಯಸ್ಸಾಗಿದ್ದಾಗ ಕ್ಷುಲ್ಲಕ ಕಾರಣಕ್ಕಾಗಿ ನನ್ನಜ್ಜಿ ಆತ್ಮಹತ್ಯೆ ಮಾಡಿಕೊಂಡರಂತೆ.ಡ್ರೈವರ್ ಕೆಲಸ ಮಕ್ಕಳ ದೆಖಾರೇಖಿ ಮಾಡಿಕೊಳ್ಳಬೇಕಾದ ಸಂಕಟ ನೋಡಲಾರದೆ ಅಳಿಯನ ಮರು ಮದುವೆಯನ್ನ ತಾವೇ ಖುದ್ಧಾಗಿ ಹೆಣ್ಣು ನೋಡಿ ಅತ್ತೆ-ಮಾವನೆ ಮುಂದೆನಿಂತು ಮಾಡಿಸಿಕೊಟ್ಟರಂತೆ.ಶೀಘ್ರ ಕೋಪಿಯೂ,ಅವಿವೇಕಿಯೂ ಆದ ಮಗಳ ತಪ್ಪು ತಿಳಿದ ವಿವೇಕಿಗಳು ಅವರಿದ್ದಿರಬಹುದೇನೋ!.ಹೀಗೆ ನಮ್ಮ ಮನೆತುಂಬಿ ಬಂದವರೇ ನನ್ನಮ್ಮ.
ಅವರಿಗೂ ಎರಡು ಗಂಡು ಹಾಗು ಎರಡು ಹೆಣ್ಣು ಮಕ್ಕಳಾದವು.ನನ್ನ ಹೆತ್ತಮ್ಮ ಅಹಲ್ಯ,ಚಿಕ್ಕಮ್ಮ ನಾಗರತ್ನ,ಮಾವಂದಿರಾದ ಸುರೇಶ-ಪ್ರಕಾಶ,ಕಿರಿಚಿಕ್ಕಮ್ಮಂದಿರು ಆಶಾ -ಪೂರ್ಣಿಮಾ ಇವರಿಷ್ಟೇ ಇದ್ದ ನಮ್ಮ ಮನೆಗೆ ಕಿರಿಯವನಾಗಿ ನಾನು ಹುಟ್ಟಿದ್ಧು ೨೬ ಆಗೋಸ್ಟ್ ೧೯೮೨ ರಂದು.ಮನೆಗೆ ಮೊದಲ ಮೊಮ್ಮಗ ನಾನಾಗಿದ್ದರಿಂದ ಆ ಕಾಲದ ಸೆಂಟಿಮೆಂಟ್ನಂತೆ ನಾನು ಮನೇಲೆ ಹುಟ್ಟಿದೆ.
ಇಲ್ಲೊಂದು ತಮಾಷೆಯೂ ಇದೆ.ನನ್ನ ಹುಟ್ಟಿನ ಕಾಲಕ್ಕೋ ನಮ್ಮಜ್ಜ ಡ್ಯೂಟಿ ಮೇಲಿದ್ದರು,ಅವರು ಬಂದು ನನ್ನ ಮೊದಲಿಗೆ ನೋಡಿದಾಗ ನಾನು ನಾಲ್ಕು ಧಿನ ದೊಡ್ಡವನಾಗಿದ್ದೆ.ಇವರು ಪುರಸಭೆಗೆ ಜನನ ನೋಂದಣಿ ಮಾಡಿಸೋಕೆ ಹೋದಾಗ ಅಲ್ಲಿನವರು ತಡವಾಗಿ ಬಂದುದಕ್ಕೆ "ಏನ್ರಿ ನಾಲ್ಕ್ ದಿನದಿಂದ ಮಗು ಹುಟ್ ತಲೆ ಇತ್ತ?" ಅಂತ ಸರಿಯಾಗಿ ಬೈದರಂತೆ.ಅವರ ಮಾತಿಗೆ ಬೆಪ್ಪಾಗಿ ನನ್ನ ಜನನ ದಿನವನ್ನ ಅಜ್ಜ ಅದೇ ದಿನಕ್ಕೆ ಅಂದರೆ ೧ನೆ ಸೆಪ್ಟೆಂಬರ್ ಅಂತಲೇ ಬರಿಸಿದ್ದಾರೆ ಹೀಗಾಗಿ ದಾಖಲಾತಿಗಳಲ್ಲಿ ನಾನು ನಾಲ್ಕುದಿನ ತಡವಾಗಿ ಹುಟ್ಟಿದೆ!
ನಾನು ಹುಟ್ಟುವಾಗ ಮೊದಲ ಚಿಕ್ಕಮ್ಮ ಅಲ್ಲೇ ಸಮೀಪದ ಊರಲ್ಲಿ ಟೀಚರ್ ಆಗಿದ್ದರು.ಮಾವಂದಿರು ಕಾಲೇಜ್ನಲ್ಲಿದ್ದರೆ,ಒಬ್ಬ ಚಿಕ್ಕಮ್ಮ ಹೈಸ್ಕೂಲ್ನಲ್ಲೂ ಇನ್ನೊಬ್ಬಳು ನಾಲ್ಕನೇ ಕ್ಲಾಸಿನಲ್ಲೂ ಇದ್ದಳು.ಹೀಗಾಗಿ ನಾನೆಂದರೆ ಎಲ್ಲರಿಗೂ ವಿಪರೀತ ಪ್ರೀತಿ.ಅವರೆಲ್ಲರಿಗೂ ಆಡಲು ಒಂದು ಜೀವಂತ ಬೊಂಬೆ ಸಿಕ್ಕಂತೆ ಆಗಿತ್ತೇನೋ! ಅದೇನೇ ಇದ್ದರೂ ನನ್ನ ಮೊದಲ ಐದು ವರ್ಷಗಳು ಸಂಭ್ರಮದಿಂದಲೇ ಕೂಡಿದ್ದವು.

No comments: