17 October 2008

ನೆನಪಿನ ನೆರಳು...

ಮನೆಯ ನಿರ್ವಹಣೆ ಅಮ್ಮ ಹೇಗೆ ಮಾಡುತ್ತಿದ್ದರೋ? ಎಂಬ ವಿಸ್ಮಯ ಈಗಲೂ ಕಾಡುತ್ತದೆ.ಅಜ್ಜ ಡ್ರೈವರ್ ಆಗಿದ್ದರಿಂದ ಸಮೀಪದ ಹಳ್ಳಿಗರ ಪರಿಚಯ ಅವರಿಗಿತ್ತು.ಅವರಲ್ಲಿ ಒಬ್ಬರಾದ ಎಡುವಿನಕೊಪ್ಪದ ಪುಟ್ಟಪ್ಪಗೌಡರ ಒಬ್ಬ ಮಗ ಹಾಗು ಮೂವರು ಸಂಭಂದಿಕರನ್ನು ಶಾಲೆಗೆ ಹೋಗುವ ಸಲುವಾಗಿ ಮನೆಯಲ್ಲಿ ಇಟ್ಟುಕೊಂಡರು.ಆಗ ತುಂಗಾನದಿಗೆ ಅವರೂರಿನಿಂದ ಸೇತುವೆ ಇರದಿದ್ದರಿಂದ ಮಳೆಗಾಲದಲ್ಲಿ ತುಂಗೆ ಉಕ್ಕಿಹರಿದಾಗ ಅವರೂರಿನ ಸಂಪರ್ಕ ತೀರ್ಥಹಳ್ಳಿಯಿಂದ ಕಡಿದು ಹೋಗುತ್ತಿತ್ತು,ಆದ್ದರಿಂದ ಓದುವ ಹುಡುಗರು ಪೇಟೆಯಲ್ಲಿ ಹೀಗೆ ವ್ಯವಸ್ಥೆ ಮಾಡಿಕೊಂಡೋ,ಇಲ್ಲ ಹಾಸ್ಟೆಲ್ಲಿನಲ್ಲಿ ಇದ್ದುಕೊಂಡೋ ಶಾಲೆಗೆ ಹೋಗುವುದು ಅನಿವಾರ್ಯವಾಗಿತ್ತು.ಇವರೊಂದಿಗೆ ಊರಿನ ಅಜ್ಜನ ಮನೆಕಡೆಯ ಇಬ್ಬರು ಟೀಚರ್ಗಳೂ ಆಗ ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು.ಅವರೆಲ್ಲರ ಕಡೆಯಿಂದ ಒಂದಲ್ಲ ಒಂದು ರೀತಿಯ ಪ್ರತಿಫಲ ದೊರೆಯುತ್ತಾ ಇದ್ದಿರಬೇಕು ಎಂಬುದು ನನ್ನ ಊಹೆ.ಇದರೊಂದಿಗೆ ಸಾಕಿದ್ದ ದನಗಳ ಹಾಲಿನ ವ್ಯಾಪಾರ-ಅಮ್ಮ ಇಟ್ಟುಕೊಂಡಿದ್ದ ಹೊಲಿಗೆ ಮಿಶನ್ನಿನಿಂದ ಹುಟ್ಟುತ್ತಿದ್ದ ಪುಡಿಗಾಸು.... ಹೀಗೆ ಉಟ್ಟು ಉಡಲು ಕೊರತೆಇಲ್ಲದಂತೆ ನಮ್ಮೆಲ್ಲರ ಕನಿಷ್ಠ ಅಗತ್ಯಗಳು ಸುಸೂತ್ರವಾಗಿ ಪೂರೈಕೆ ಆಗುತ್ತಿದ್ದವು.
ನಾನು ಬಾಲವಾಡಿಗೆ ಹೋಗಲಾರಂಭಿಸಿದ ನಂತರ ನನ್ನ ಪ್ರಪಂಚವೂ ನಿಧಾನವಾಗಿ ಹಿಗ್ಗಿತು ಅನ್ನಿಸುತ್ತೆ.ಅಲ್ಲಿಂದ ನನ್ನನ್ನು ಭಾರತಿ ಶಿಶುವಿಹಾರಕ್ಕೆ ಸೇರಿಸಲಾಯಿತು.ಅಲ್ಲಿ ಎರಡು ವರ್ಷದ ಓದು.ಅನಂತರ ಸೇವಾಭಾರತಿಯಲ್ಲಿ ಭರ್ತಿಯಾದೆ.ಮನೆ,ಶಾಲೆ,ಶಿಶುವಿಹಾರದಲ್ಲಿದ್ದಾಗ ಕರೆದುಕೊಂಡು ಹೋಗುತ್ತಿದ್ದ ಶಾರದಕ್ಕ...ಅಲ್ಲಿನ ಮೊದಲ ಗೆಳೆಯರು..ಮನೆ ತುಂಬ ಇದ್ದ ಹಲವಾರು ಅಕ್ಕ,ಅನ್ನ,ಮಾವಂದಿರು ಹೀಗೆ ಯಾವಾಗಲೂ ತುಂಬಿದ ಮನೆಯಲ್ಲಿದ್ದು ಅಭ್ಯಾಸವಾಗಿದ್ದ ನನಗೆ ಹೊರಗೂ ಹೆಚ್ಚಿನ ವ್ಯತ್ಯಾಸ ಅನ್ನಿಸುತ್ತಿರಲಿಲ್ಲ.

No comments: