28 November 2008

ನಮೋ ವೆಂಕಟೇಶಾ.......

ಅಳಿದ ಊರಿಗೆ ಉಳಿದವನೆ ಗೌಡ ಅಂತನ್ನಿ ಅಥವಾ ಕರುಡರೂರಿನಲ್ಲಿ ಒಕ್ಕಣ್ಣನೆ ಹೀರೋ ಎಂತಾದರೂ ಅನ್ನಿ ಒಟ್ಟಿನಲ್ಲಿ ತೀರ್ಥಹಳ್ಳಿಯಲ್ಲಿ ವೆಂಕಟೇಶ್ವರ ಚಿತ್ರಮಂದಿರಕ್ಕೆ ಎದುರಾಳಿಗಳಂತೂ ಇರಲೇಇಲ್ಲ,ಇಪ್ಪತ್ತೆರಡು ವರ್ಷಗಳ ಹಿಂದೆ ವಿನಾಯಕ ಟಾಕೀಸು ಹುಟ್ಟುವತನಕ! ಸಗಣಿ ಸಾರಿಸಿದ ನೆಲ-ಸರ್ವರಿಗೂ ಸಮಪಾಲು ಎಂಬಂತೆ ಉದ್ದಾನುದ್ದ ಪಟ್ಟಿ ಹೊಡೆದ ಬೆಂಚುಗಳಿದ್ದ ಜೈಶಂಕರ್...ಸಿಮೆಂಟಿನ ನೆಲ-ಎರಡೆರಡು ವರ್ಗ ಜೋತೆಗೆರಡು ಬಾಲ್ಕನಿಯೆಂಬ ಡಬ್ಬಗಳನ್ನು ಹೊಂದಿದ್ದ ವೆಂಕಟೇಶ್ವರದ ಮುಂದೆ ಮಂಕೋಮಂಕು.

ಚಿತ್ರವೊಂದು ಆರಂಭವಾಗುವ ಮುನ್ನ "ನಮೋ ವೆಂಕಟೇಶ"ದ ಹಿನ್ನೆಲೆಯಲ್ಲಿ ಬೆಳ್ಳಿತೆರೆಯ ಮೇಲಿನ ಪರದೆ ಮೇಲೇರುತ್ತಿತ್ತಾದರೂ ಪರದೆ ತುದಿತಲುಪುತ್ತಲೇ ಆಹಾಡು ಪೂರ್ತಿಯಾಗುವ ಮೊದಲೇ ಬಂದಾಗಿ "ಡಿಸ್ಕೋ ಡ್ಯಾನ್ಸರ್"ನ (ಮಿಥುನ್ ಚಕ್ರವರ್ತಿಯ ಆ ಚಿತ್ರ ಆ ಕಾಲಕ್ಕೆ ಸೂಪರ್ ಹಿಟ್ ಆಗಿದ್ದು ಯುವಕರನ್ನು ಸೆಳೆದಿತ್ತು) ಜಿಮ್ಮಿ ಜಿಮ್ಮಿ ಜಿಮ್ಮಿ ಆಜಾ ಆಜಾ...ನಾಜಿಯ ಹಸನ್ ಧ್ವನಿಯಲ್ಲಿ ತೇಲಿಬರುತ್ತಿದ್ದ ಹಾಗೆ "ಧೂಮಪಾನ ಆರೋಗ್ಯಕ್ಕೆ ಹಾನಿಕರ" "ಬೀಡಿ-ಸಿಗರೇಟು-ಚುಟ್ಟ ವಗೈರೆ ಸೇದುವುದನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ" (ಈ ವಗೈರೆ ಅಂದರೆ ಏನು? ಎಂದು ನಾವೆಲ್ಲ ಆಗ ತಲೆ ಕೆಡೆಸಿಕೊಳ್ಳುತ್ತಿದ್ದೆವು!) ಮುಂತಾದ ಅಣಿಮುತ್ತುಗಳ ಸ್ಲೈಡ್ ಬಂದು.....ಆನಂತರ ಮುಂಬರುವ ಚಿತ್ರಗಳ ಸ್ಲೈಡ್ ಬರುವುದನ್ನೇ ಜಾತಕಪಕ್ಷಿ ಗಳಂತೆ ಕಾತರದಿಂದ ಕಾಯುತ್ತಿದ್ದೆವು.ಆನಂತರ ಬರುತ್ತಿದ್ದುದೇ ನಾವೆಲ್ಲರೂ ಎಷ್ಟು ರೀಲ್ ಎಂದು ನೋಡಿ ಹೇಳಲು ಕಾಯುತ್ತಿದ್ದ ಸೆನ್ಸಾರ್ ಸರ್ಟಿಫಿಕೆಟ್.ಇದೆಲ್ಲ ಆಗುವಾಗಲೇ ಉರಿಯುತ್ತಿದ್ದ ಮೂರು-ಮತ್ತೊಂದು ಲೈಟುಗಳು ಕುಗುರುವವರಂತೆ ಉದಾಸೀನದಿಂದ ಕಣ್ಣು ಮುಚ್ಚುತಿದ್ದವು.ಅಲ್ಲಿಗೆ ನಮ್ಮ ಕಲ್ಪನೆ ಊಹೆ,ಮುಂಬರುವ ಚಿತ್ರಗಳ ನೋಡುವ ಭವಿಷ್ಯದ ಯೋಜನೆಯ ಮನೋವ್ಯಾಪಾರಗಳೆಲ್ಲ ಮುಗಿದು ಕನಸಿನ ಲೋಕಕ್ಕೆ ಜಾರಿಕೊಳ್ಳುತಿದ್ದೆವು.

ಇನ್ನೇನು ಚಿತ್ರದ ರೋಮಾಂಚಕಾರಿ ಸೀನ್ ಬರಬೇಕು ತಟ್ಟನೆ ಕರೆಂಟ್ ಕೈಕೊಟ್ಟು ಬಿಡುತ್ತಿತ್ತು! ಇದು ಯಾವಾಗಲೂ ಹೀಗೆ...ಎಲ್ಲರೂ ಮನಸಿಟ್ಟು ನೋಡುತ್ತಿರುವಾಗಲೇ ರೀಲ್ ಕಟ್ ಆಗೋದೋ ಇಲ್ಲ ಕರೆಂಟ್ ಕೈಕೊಡೋದೋ ಆಗಿ ಟಾಕೀಸ್ ಒಳಗೆ ಕುಳಿತ ಸಭ್ಯ ಪ್ರೇಕ್ಷಕ ಪ್ರಭುಗಳು ಫಕೀರನ ಅಮ್ಮ -ಅಕ್ಕನ್ನನ್ನೂ ಬಿಡದೆ ನಿವಾಳಿಸಿ ಕೂಗೋದು...ಅವ ಓಡಿಹೋಗಿ ಜನರೇಟರ್ ಆನ್ ಮಾಡಿ ಆ ಭೀಕರ ಹಿನ್ನೆಲೆ ಸದ್ದಿನೊಂದಿಗೆ ಮತ್ತೆ ರೀಲೋಡಿಸುವುದು...ಮತ್ತೆ ಅಲ್ಲಿಂದಲೇ ಶುರುವಾಗೋ ಸೀನಿನಲ್ಲಿ ಎಲ್ಲರೂ ತನ್ಮಯರಾಗೋದು..ಇವೆಲ್ಲ ಸಂಪ್ರದಾಯದಂತೆ ನಡೆದುಹೊಗುತಿತ್ತು.ನಿತ್ಯ ನಡೆಯುವ ಈ ಜಂಜಾಟಗಳನ್ನೆಲ್ಲ ಫಕೀರನಾಗಲೀ ಪ್ರೆಕ್ಷಕರಾಗಲೀ ಅಭ್ಯಾಸಬಲದಿಂದ ಎಂಬಂತೆ ತಲೆಕೆಡಿಸಿಕೊಳ್ಳದೆ ಅನುಭವಿಸುತ್ತಿದ್ದರು!

No comments: