08 September 2010

ಸುಂದರ ತಾಣಗಳ ಆಗರ...

ಅಭಿಮಾನದ ಭರದಲ್ಲಿ ನೆನ್ನೆ ತೀರ್ಹಹಳ್ಳಿಯನ್ನ ವಿಪರೀತ ಹೊಗಳಿ ಬಿಟ್ಟೆನೇನೋ.ಇತ್ತೀಚಿಗೆ 'ನೆನಪಿರಲಿ' ಕನ್ನಡ ಚಿತ್ರಕ್ಕಾಗಿ ಹಂಸಲೇಖರವರು ಬರೆದ ಹಾಡೊಂದರಲ್ಲಿ'....ತೀರ್ಥಹಳ್ಳಿಲಿಕುವೆಂಪು ಹುಟ್ಟಿದ್ರು' ಎಂಬ ಸಾಲಿದೆ,ಅವರು ಸಿಕ್ಕಾಗ 'ಕುವೆಂಪು ಅಷ್ಟೇ ಅಲ್ಲ ಸಾರ್ ನಮ್ಮಂತ ಬಡಪಾಯಿಗಳೂ ಹುಟ್ಟಿದ್ದೇವೆ' ಅಂತ ತಮಾಷೆ ಮಾಡ್ತಿರ್ತೀನಿ.ಸಿನೆಮ ಅಂದ ಕೂಡಲೆ ಹೇಳಲೇ ಬೇಕಾದ ಮುಖ್ಯ ಸಂಗತಿಯೊಂದಿದೆ.ಇತ್ತೀಚಿಗೆ ಕನ್ನಡ ಚಿತ್ರರಂಗದ ಪಾಲಿಗೆ ತೀರ್ಥಹಳ್ಳಿ ಮಾವನ ಮನೆಯಂತಾಗಿದೆ.ಪ್ರತಿ ನಾಲ್ಕನೇ ಚಿತ್ರದ ಚಿತ್ರೀಕರಣಕ್ಕಾಗಿ ಗಾಂಧಿನಗರದ ಮಂದಿ ಇಲ್ಲಿಗೆ ಕ್ಯಾಮರಾದೊಂದಿಗೆ ದೌಡಾಯಿಸುತ್ತಾರೆ.ಆಗುಂಬೆ,ಕವಲೇದುರ್ಗ,ಭೀಮನಕಟ್ಟೆ,ಹುಂಚ,ಕುಂದಾದ್ರಿ ಬೆಟ್ಟ,ಬರ್ಕಣ,ಒನಕೆ ಅಬ್ಬಿ,ಗಾಜನೂರಿನ ಹಿನ್ನೀರು,ಚಕ್ರಾ-ಯಡೂರಿನ ವಾರಾಹಿ ಹಿನ್ನೀರು,ಮಂಡಗದ್ದೆ ಪಕ್ಷಿಧಾಮ,ಸಕ್ರೆಬೈಲಿನ ಹಿನ್ನೀರ ಬಳಿಯಿರುವ ಆನೆ ಬಿಡಾರ ,ಸಿಬ್ಬಲಗುಡ್ಡೆ,ಕುಪ್ಪಳಿ,ತೀರ್ಥಹಳ್ಳಿ ಪೇಟೆಯೊಳಗಿನ ಗ್ರಾಮೀಣ ಸೊಗಡು ಹೀಗೆ ಸುಂದರ ಹಿನ್ನೆಲೆಗೆ ಕೊರತೆ ಇಲ್ಲದಿರುವುದರಿಂದ ಸಿಕ್ಕ ಸಿಕ್ಕ ಸಿನೆಮಾಗಳ ಪತ್ರಿಕಾಗೋಷ್ಠಿಗಳಲ್ಲಿ ಕೊಡುವ ಪ್ರೆಸ್ನೋಟ್ ಗಳು ಖಡ್ಡಾಯ ಎಂಬಂತೆ ಹೊರಾಂಗಣಗಳ ಪಟ್ಟಿಯಲ್ಲಿ ತೀರ್ಥಹಳ್ಳಿಯನ್ನೂ ಒಳಗೊಂಡಿರುತ್ತವೆ.


ನನಗೆ ನೆನಪಿರುವಂತೆ ಆಕಸ್ಮಿಕ,ಕಾದಂಬರಿ,ಫಣಿಯಮ್ಮ,ನಿಲುಕದ ನಕ್ಷತ್ರ,ಮುಂಗಾರಿನ ಮಿಂಚು,ಉಲ್ಟಾಪಲ್ಟ,ಮಸಣದ ಮಕ್ಕಳು,ಸಂಭ್ರಮ,ಪ್ರೇಮ-ಪ್ರೇಮ-ಪ್ರೇಮ,ಸಂಸ್ಕಾರ,ಘಟಶ್ರಾದ್ಧ,ನಿನದೆ ನೆನಪು,ಕಾನೂರು ಹೆಗ್ಗಡತಿ,ಮೌನಿ,ಕಲ್ಯಾಣ ಮಂಟಪ,ಮೈ ಆಟೋಗ್ರಾಫ್,ಮಿಸ್ ಕ್ಯಾಲಿಫೋರ್ನಿಯ,ಚಿಲಿಪಿಲಿ ಹಕ್ಕಿಗಳು,ಕರಾವಳಿ ಹುಡುಗಿ,ಮಠ,ಮತದಾನ,ಮತ್ತೆ ಮುಂಗಾರು,ಗಾಳಿಪಟ,ಮಾತಾಡ್ ಮಾತಾಡ್ ಮಲ್ಲಿಗೆ,ಹೊಂಗನಸು,ನಮ್ ಏರಿಯಾಲ್ ಒಂದಿನ,ಲಿಫ್ಟ್ ಕೊಡ್ಲ?,ಶ್ರೀರಾಮದಾಸು (ತೆಲುಗು) ಹೀಗೆ ಅನೇಕ ಚಿತ್ರಗಳಿಗೆ ಇಲ್ಲಿ ರೀಲು ಸುತ್ತಲಾಗಿದೆ.

ಈ ಊರಿನ ಚಹರೆಪಟ್ಟಿ ವಿವರಿಸೋದು ಸುಲಭ,ನಿಮ್ಮ ಅಂಗಯ್ಯನ್ನೊಮ್ಮೆ ನೋಡಿ ಕೊಂಡರಾಯಿತು! ಥೇಟ್ ಅದರ ಪಡಿಯಚ್ಚೆ ನಮ್ಮ ತೀರ್ಥಹಳ್ಳಿ.ದಕ್ಷಿಣಕ್ಕೆ ಒಂದೆಡೆ ಊರನ್ನೂ,ಇನ್ನೊಂದೆಡೆ ಕುರುವಳ್ಳಿಯ ಕಲ್ಲು ಕ್ವಾರಿಗಳನ್ನೂ ಬಳಸಿಕೊಂಡು ತುಂಗೆ ಹರಿಯುತ್ತಾಳೆ,ಕೊಪ್ಪದ ಕಡೆಯಿಂದ ಬರುವವರಿಗೆ ಕಮಾನುಸೇತುವೆಯಿದೆ (ಹಿಂದೆ ಇಲ್ಲಿ ಕಲ್ಲುಸಾರ ಮಾತ್ರವಿತ್ತು,ಹೊಳೆದಾಟುವವರು ದೋಣಿಯನ್ನೇ ಆಶ್ರಯಿಸಬೇಕಿತ್ತು,ಕುವೆಂಪು-ಎಂ ಕೆ ಇಂದಿರಾ ಕಾದಂಬರಿಗಳಲ್ಲಿ ಇದರ ಚಿತ್ರಣ ನೀವು ಓದಿರಬಹುದು. ಸಾರ=ಕಾಲಲ್ಲಿ ಮಾತ್ರ ಸಾಗಬಹುದಾದ ಕಿರುಸೇತುವೆ).ಊರ ಮಧ್ಯ ಇರುವ ಮುಖ್ಯರಸ್ತೆ ಮೌಲಾನ ಅಬ್ದುಲ್ ಕಲಾಂ ಆಜಾದ್ ಎಂಬ ಮೈಲುದ್ದದ ಹೆಸರಿನದಾಗಿದ್ದರೂ ಜನ ಅದನ್ನು ಕರಿಯೋದು ಆಜಾದ್ ರಸ್ತೆ ಎಂದೇ.ಪೂರ್ವಕ್ಕೆ ಆನಂದಗಿರಿಯಿದೆ ಇದನ್ನ ಬಳಸಿಕೊಂಡು ಶಿವಮೊಗ್ಗ ರಸ್ತೆ ಊರನ್ನ ಕೂಡುತ್ತದೆ.ಪಶ್ಚಿಮಕ್ಕೆ ಯಡೇಹಳ್ಳಿ ಕೆರೆ ಇಲ್ಲಿಂದ ಸಾಗರ ರಸ್ತೆ ಸೀಬಿನಕೆರೆ ಹಾಗು ಕೋಳಿಕಾಲುಗುಡ್ಡ ಬಳಸಿ ಊರನ್ನು ಮುಟ್ಟುತ್ತದೆ.ವಾಯುವ್ಯಕ್ಕೆ ಸಿದ್ದೇಶ್ವರಗುಡ್ಡ ಇದರ ಪಕ್ಕದ ಹೆದ್ದಾರಿ ಮಂಗಳೂರಿಗೆ ಊರಿನ ಕೊಂಡಿ.ಎಡವಿದರೊಂದು ದೇವಸ್ಥಾನ ಸಿಗುವ ರಥಬೀದಿ,ಹಿಂದೊಮ್ಮೆ ಛತ್ರಗಳಿದ್ದಿರಬಹುದಾದ ಛತ್ರಕೆರಿ,ಊರಿಗೊಬ್ಬಳೇ ಪದ್ಮಾವತಿಯಂತಿದ್ದ ಏಕೈಕ ಬಡಾವಣೆ ಸೊಪ್ಪು ಗುಡ್ಡೆ ಅಲ್ಲಿನ ಸಂತೆ ಮೈದಾನ ಪಕ್ಕದ ಸಾಬರ ಕೇರಿ,ಮಸೀದಿ ರಸ್ತೆಯ ಅಂಚಿಗೆ ಸೆಯಿಂಟ್ ಮೇರಿಸ್ ಇಗರ್ಜಿ,ಹೊಸತಾಗಿ ವಿಸ್ತಾರವಾದ ಬೆಟ್ಟಮಕ್ಕಿ,ಊರ ಆರಂಭದ ಕುಶಾವತಿ (ಪಕ್ಕದಲ್ಲೇ ನಾಡ್ತಿ ಹಾಗು ಕುಶಾವತಿ ಸೆಲೆಯಿದೆ),ಬಾಳೆಬೈಲಿನ ಹೊರವಿಸ್ತಾರ ಇವಿಷ್ಟು ಸೇರಿ ತೀರ್ಥಹಳ್ಳಿ ರೂಪುಗೊಂಡಿದೆ.


ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ಗಡಿಯಾಗಿದ್ದ (ಘಟ್ಟದ ಕೆಳಗಿನ ದಕ್ಷಿಣ ಕನ್ನಡ ಆಗ ಮದರಾಸು ಪ್ರಾಂತ್ಯದ ಭಾಗವಾಗಿತ್ತು) ತೀರ್ಥಹಳ್ಳಿಗೆ ಒಡೆಯರ ಕೃಪಾದೃಷ್ಟಿ ಆಗಲೆ ಹರಿದಿತ್ತು.ಸರ್ ಎಂ ವಿಶ್ವೇಶ್ವರಯ್ಯನವರ ಮುತುವರ್ಜಿಯಿಂದ ಆ ಕಾಲದಲ್ಲಿಯೇ ತುಂಗೆಗೆ ಅಡ್ಡಲಾಗಿ ಕಮಾನು ಸೇತುವೆ ಕಟ್ಟಲಾಯಿತು,ಏಳು ದಶಕದ ಹಿಂದೆ ಕಟ್ಟಲಾಗಿರುವ ಆ ಸೇತುವೆ ಇವತ್ತಿಗೂ ಗಟ್ಟಿಮುಟ್ಟಾಗಿದೆ.ಮೂರೆದಿನಕ್ಕೆ ಬೀಳುವ ಇಂದಿನ ಸರಕಾರಿ ಸೇತುವೆಗಳ 'ಸಾಧನೆ'ಗಳನ್ನು ಇದು ಇಂದಿಗೂ ನಾಚಿಸುತ್ತಿದೆ.ಈಗಿನ ಕಾಲದಲ್ಲಾದರೆ ನಿಶ್ಚಿತ ಮೊತ್ತಕ್ಕಿಂತ ಹೆಚ್ಚುವರಿ ಅನುದಾನಕ್ಕಾಗಿ ಬಾಯಿ ಬಿಡುತ್ತಿದ್ದರೇನೋ? ಆದರೆ ಆಗಿನ ವಿಶ್ವೇಶ್ವರಯ್ಯನವರ ಕಾಮಗಾರಿಯಲ್ಲಿ ಸೇತುವೆ ಕಟ್ಟಿಯೂಕಚ್ಚಾ ಸಾಮಗ್ರಿ ಮಿಕ್ಕಿತು! ಉಳಿದಿದ್ದನ್ನು ಒಂದು ನೆಲೆ ಮುಟ್ಟಿಸಲು ಅವರು ಕಂಡುಕೊಂಡದ್ದೆ ಬೆಟ್ಟಕ್ಕೆ ಕಲ್ಲು ಹೊರುವ ಉಪಾಯ! ಅಂದು ಅವರು ಬೆಟ್ಟಕ್ಕೆ ಕಲ್ಲು ಹೊತ್ತದ್ದು ಖಂಡಿತ ನಿರುಪಯೋಗವಾಗಲಿಲ್ಲ.ಇಂದಿಗೂ ತೀರ್ಥಹಳ್ಳಿಯ ಯಾವುದೆ ಭಾಗದಿಂದಲಾದರೂ ಅನಂದಗಿರಿಯತ್ತ ಕಣ್ಣು ಹಾಯಿಸಿದರೆ ಅದರ ತುತ್ತತುದಿಯಲ್ಲಿ ಟೋಪಿಯಂತೆ ಕಾಣುವ ಸುಂದರ ಮಂಟಪವೊಂದನ್ನು ನೀವು ಕಾಣಬಹುದು.ಅದರ ತಪ್ಪಲಿನಲ್ಲಿರುವ ತುಂಗಾ ಕಾಲೇಜಿನ ದೂರದ ನೋಟವೂ ಸೇರಿ ಅದು ಮನೋಹರವಾಗಿ ಕಾಣುತ್ತೆ.ಸ್ಥಳಿಯರ ಬಾಯಲ್ಲಿ 'ವಿಶ್ವೇಶ್ವರ ಮಂಟಪ'ಎಂದೇ ಕರೆಸಿ ಕೊಳ್ಳುವ ಈ ಮಂಟಪಕ್ಕೆ ಎಲ್ಲಾದರೂ ಬಾಯಿದ್ದಿದ್ದರೆ ತನ್ನ ಆಸುಪಾಸಿನಲ್ಲಿ ಈ ತನಕ ನಡೆದಿರುವ ಪ್ರೇಮ ಕಲಾಪ-ಪ್ರಣಯ ಪ್ರಕರಣಗಳನ್ನು ಅದು ಇದ್ದ ಬದ್ದವರಿಗೆಲ್ಲ ಹೇಳಿ ಅನೇಕರ ಮನೆ ಹಾಳು ಮಾಡುತ್ತಿತ್ತು! ತಾಲೂಕಿನ ಕೇಂದ್ರದಲ್ಲಿರುವ ಸರಕಾರಿ ಆಸ್ಪತ್ರೆಯೂ ಮೈಸೂರಿನ ಒಡೆಯರ ಕೊಡುಗೆಯೆ,ಇದನ್ನು ಇಲ್ಲಿಯ ಜನ ಬಾಯ್ತುಂಬ 'ಜಯಚಾಮ ರಾಜೇಂದ್ರ ಆಸ್ಪತ್ರೆ' ಅನ್ನುತ್ತರೆಯೇ ಹೊರತು ಸರಕಾರಿ ಆಸ್ಪತ್ರೆ ಎನ್ನರು.

No comments: