29 August 2011

ಕುಚ್ "ಕಟ್ಟಾ"....ಸಬ್'ಕುಚ್ ಜೂಟಾ....



ಇಷ್ಟ್ ದಿನ ಜಮೀನಿಗೆ ಬಾಯಿ ಬಿಟ್ಟು-ಈಗ ಜಾಮೀನಿಗೆ ಬಾಯಿಬಾಯಿ ಬಿಡುತ್ತಿರೊ ಕುಮಾರಣ್ಣನ ವಿವಿಧ ವಿನೋದಾವಳಿಗಳಿಗೆ ನಗಲಾರದೆ ಅಳಲಾರದೆ ಕನ್ನಡಿಗ ತನಗಿರುವ ಒಂದೇ ತಲೆಯನ್ನ ಚಚ್ಚಿಕೊಂಡು ಹೈರಾಣಾಗಿರೊ ಹೊತ್ತಿಗೆ ;ಊರಿಗೆಲ್ಲ ತಾನು ಟೋಪಿ ತೊಡೆಸಿದ ಸಂಕೇತವಾಗಿ ತಾನೂ ಒಂದನ್ನು ಹಾಕಿಕೊಂಡಿರುವ ಮಾಜಿ ಮಂ(ಕಂ)ತ್ರಿ ಕಟ್ಟಾ ಬಗ್ಗೆ ಒಂದು ಕೆಟ್ಟ ಸುದ್ದಿ ಈಗಷ್ಟೆ ಬಂದಿದೆ.

ಈಗಾಗಲೆ ಎರಡೆರಡು ಹಬ್ಬಗಳನ್ನ ಪರಪ್ಪನ ಅಗ್ರಹಾರದ ಅತಿಥಿಗೃಹದಲ್ಲಿಯೆ ತಮ್ಮ ಸುಪುತ್ರನೊಂದಿಗೆ ಸಕುಂಟುಂಬಿಕವಾಗಿ ಆಚರಿಸಿರುವ ಹಾಗು ಇನ್ನೂ ನೂರಾರು ಹಬ್ಬಗಳನ್ನ ಅಲ್ಲೇ ಆಚರಿಸುವ ಸಕಲ ಸಾಧ್ಯತೆಗಳೂ ಇರುವ ಕಟ್ಟಾ ಸುಬ್ರಮಣ್ಯಂ ನಾಯ್ದುಗಾರು ಇದೀಗ ವಿಪರೀತ ಬೇಧಿಯಿಂದ ಹಾಡಾಲೆದ್ದು ಹೋಗಿದ್ದಾರಂತೆ,ಅಯ್ಯೋ ಪಾಪ! ಒಂದು ವೇಳೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಕನಿಷ್ಠ ಇನ್ನೆರಡು ಮೂರುವರ್ಷ ವಿಕ್ಟೋರಿಯ ಆಸ್ಪತ್ರೆಯ ವಿಶೇಷ ವಾರ್ಡಿನಲ್ಲಿಯೇ ವೈದ್ಯರ ಮುಚ್ಚಟೆಯ ನಿಗಾದಲ್ಲಿ ಅವರನ್ನ ಇಡದೆ ಇದ್ದರೆ,ಅಕಟಾಕಟಾ! ಅವರ ಅಮೂಲ್ಯ ಪ್ರಾಣಪಕ್ಷಿ ಯಾವುದೆ ಕ್ಷಣದಲ್ಲಾದರೂ ಅನಂತದಲ್ಲಿ ಲೀನವಾಗಿ ರಾಜ್ಯಕ್ಕೆ ತುಂಬಲಾಗದ ನಷ್ಟ ಆಗಿಯೆ ತೀರುತ್ತದಂತೆ.

ಹಾಗಂತ ಅತ್ತ ಈಗಷ್ಟೆ ಮರೆಯಲ್ಲಿ ನಿಂತು ಮೂಗಿನ ಮುಟ್ಟ ಕಟ್ಟಾ ಕೊಟ್ಟ ಪ್ರಸಾದ ತಿಂದ ವಾಸನೆ ಎದ್ದು ಹೊಡಿಯುತ್ತಿರುವ ವಿಕ್ಟೋರಿಯ ಆಸ್ಪತ್ರೆಯ ಅಧೀಕ್ಷಕ ಡಾ,ತಿಲಕ್ ಕುಮಾರ್ ಒಂದೆ ಉಸಿರಿನಲ್ಲಿ ವಿಪರೀತ ಆತಂಕದಲ್ಲಿ ಮಾಧ್ಯಮಗಳ ಮುಂದೆ ಹೇಳಿ ಮುಗಿಸಿ ತಮ್ಮ ಸ್ವಂತ ಸುಳ್ಳಿಗೆ ತಾವೆ ಬೆಚ್ಚಿಬಿದ್ದಂತೆ ಕಾಣಿಸುತ್ತಿದ್ದರೆ! ಇತ್ತ ಅದನ್ನು ಕೇಳಿ ಪುಳಕಿತರಾದ ಮಾಜಿ ಮಂತ್ರಿಗಳ 'ಕಟ್ಟಾ'ಭಿಮಾನಿಗಳು ಮಾತ್ರ ಸರಕಾರಿ ವೈದ್ಯರ ಅತಿ ಜಾಣತನಕ್ಕೆ ಎಲ್ಲೆಲ್ಲೊ (?) ರೋಮಾಂಚಿತರಾಗುತ್ತಿದ್ದಾರೆ!.

ಹಾಗೊಂದು ವೇಳೆ ಬೇಧಿಯಾದದ್ದಕ್ಕೆಲ್ಲ ಕಟ್ಟಾ ಆಪರೇಶನ್ ಮಾಡಿಸಿಕೊಂಡದ್ದೆ ಆದರೆ ಅದೊಂದು ಜಾಗತಿಕ ದಾಖಲೆಯೆ ಆಗಿ ಹೋಗಿ ;ನಾಳೆ ಬೀದಿ ಬದೀಲಿ ಕೂತು ಬೇಧಿ ಮಾಡೋರೆಲ್ಲ ಅರ್ಜೆಂಟಾಗಿ ಆಸ್ಪತ್ರೆಯ ಹಾದಿ ಹಿಡಿದು ಆಪರೇಶನ್'ಗಾಗಿ ಅಣ್ಣಾ ಹಜಾರೆ ಬ್ರಾಂಡಿನ ಸತ್ಯಾಗ್ರಹ ಹೂಡೊ ಎಲ್ಲಾ ಅಪಾಯಗಳೂ ಇವೆ! ಸಹಜವಾಗಿ ಆಗ ಹೆಚ್ಚಬಹುದಾದ ಸರಕಾರಿ ಖರ್ಚಿನ ಬಗ್ಗೆ ಯೋಚಿಸಿಯೆ 'ಸದಾ'ನಗುವ ಮಾನ್ಯ ಮುಖ್ಯಮಂತ್ರಿಗಳ ಹಣೆಯಲ್ಲೂ ಆತಂಕದ ಗೆರೆಗಳು ಮೂಡಿರುವ ಸುದ್ದಿಯಿದೆ!

No comments: