07 November 2012

ಸಕಾರಣವಿದೆ.......


ಕಿತ್ತಿಡಲಾಗದ ಸಹಜ ಭಾವ ನಿನ್ನೆಡೆಗಿನ ನನ್ನ ಸೆಳೆತ ಇಷ್ಟು ಬೇಗ ನಾವು ಅಗಲಲೆ ಬೇಕಿತ್ತಾ?.... ಏನೆಲ್ಲಾ ಕನಸಿದ್ದೆ ಎಷ್ಟನ್ನೆಲ್ಲ ಕನವರಿಸಿದ್ದೆ ಕಮರಿತು ಸ್ವಪ್ನ ಸುಮ ಬಾಳಲ್ಲಿ ಇನ್ನೆಲ್ಲಿ ಸಂತಸದ ಸ್ನೇಹ ಘಮ, ಇಂದು ನೋವಿಗೆ ನೂರು ಕಾರಣಗಳಿವೆ ನಲಿವಿಗೆ ಮಾತ್ರ ನಿನ್ನ ಎಂದಿನದ್ದೋ ಒಂದು ನಿಷ್ಕಲ್ಮಶ ಮುಗುಳ್ನಗೆಯ ನೆನಪೊಂದೆ ನನಗಾಸರೆ/ ಕಂಡಿದ್ದ ಸುಂದರ ಕನಸು ಬಾಳಲ್ಲಿ ಕಡೆಗೂ ಸುಂದರ ಕನಸಾಗಿಯೇ ಉಳಿದು ಹೋಯಿತಲ್ಲ... ನಾನೆಂತಾ ನತದೃಷ್ಟ, ಬಾನು ಭೂಮಿಯ ಗಾಢ ಸಂಬಂಧದ ನಡುವೆ ಮೂಡುವ ಬಿರುಕೆ ಮುಗಿಲಂಚಿನ ಮಿಂಚು// ಗಾಳಿಗೂ ಮೋಡಕೂ ಕಳೆದೆರಡು ದಿನಗಳಿಂದ ವಿರಸ ಅದಕ್ಕೇನೆ ಬಾನು ಬಿಡುತ್ತಿದೆ ಕಡು ತಂಪಿನ ಶ್ವಾಸ... ಮನಸ ಬರಡು ಮರಳುಗಾಡಲ್ಲೂ ಉಳಿದ ನೆನಪ ಜೋಡಿ ಹೆಜ್ಜೆಗಳು ನೆನ್ನೆಯ ನೆನಪನ್ನ ಅಚ್ಚಳಿಯದಂತೆ ಉಳಿಸಿವೆ, ಸಾವಿರ ಕನಸುಗಳ ಅಶ್ವವನ್ನೇರಿ ನಿಶ್ಚಿತ ಗುರಿಯನ್ನಷ್ಟೆ ಹೋಗಿ ಸೇರುವ ಸ್ವಪ್ನಗಳೆಲ್ಲ.... ಹಾದಿಯುದ್ದ ಹೆಜ್ಜೆಗುರುತುಗಳನ್ನ ಉಳಿಸುತ್ತಾ ಸಾಗಿವೆ/ ನನ್ನ ಕಣ್ಣಚಿಂದ ಜಾರಿದ ಕಿರು ಕನಸೊಂದು ನಿನ್ನ ನಗುವಲ್ಲಿ ಕರಗಿ ಕಣ್ಮರೆಯಾಗುವಾಗ ನಾನು ಪರಮ ಸುಖಿ.... ಮಳೆಗೆ ಮರುಳಾದ ಇಳೆ ಇರುಳಿಡಿ ತೊಯ್ದು ಮನದ ಒಳಗೆ ಹನಿ ಒಲವನ್ನೂ ಹಿಡಿದಿಟ್ಟುಕೊಳ್ಳುತ್ತಿದೆ// ಕದಡಿ ಹೋಗಿದ್ದ ಕನಸಿನ ಕೊಳದಲ್ಲಿ ಮೆಲ್ಲಗೆ ಮಳೆಹನಿಗಳು ತಾಕಿ...... ನೆಮ್ಮದಿಯ ಅಲೆಗಳು ಏಳಲಿಕ್ಕೆ ಹವೆಣಿಸುತ್ತಲಿವೆ, ಸರಿ ಹೋಗದ ಮನಸ್ಥಿತಿಯಲ್ಲಿ ಕಿರು ಬೆಳಕು/ ಕಹಿ ನೂರಿದ್ದರೂ ನೆತ್ತಿಯ ಮೇಲೆ ಸಂಕಟದ ಶಾಶ್ವತ ಸೂರಿದ್ದರೂ ನಾಮ ಜಪದ ಕ್ಷಣಿಕ ಸಂತಸವೂ ನನ್ನ ಸಂಗಡವಿದ್ದೇ ಇದೆ, ಕರಿ ಮೆತ್ತಿದ ಕನಸುಗಳಿಗೆ ಬೆಳಕಿನ ನಿರೀಕ್ಷೆಯಿಲ್ಲ..... ಬರಿ ಮತ್ತಿನ ಮಾತುಗಳಿಗೆ ಸಾಕಾರದ ಅಪೇಕ್ಷೆಯೂ ಇಲ್ಲವಲ್ಲ// ಕಿತ್ತು ತಿನ್ನುವ ಹತ್ತು ನೋವುಗಳ ಸಂಗಡ ನಿತ್ಯ ಏಗುವ ಮನ ಮುಗ್ಧ ಮೂಢ..... ಮರೆಮಾಚಿದ ಮಾತುಗಳೆಲ್ಲ ಮೌನದಲ್ಲಿ ಲೀನವಾಗಿ ಮನಸೊಳಗೆ ಕರಗಿ ಹೋದವು, ಕಡುಚಳಿಯ ಕತ್ತಲ ಹಾದಿ ಸವಿಸಲಿದೆ ಎದೆಯಲ್ಲಿ ನೀ ಹೊತ್ತಿಸಿ ಹೋಗಿರುವ ಸುಡುವ ನೋವಿನ ಉರಿ ಅಗ್ಗಿಷ್ಟಿಕೆ/ ಕಾರಣವಿಲ್ಲದೆ ತುಂಬಿಬರುವ ಕಂಗಳಿಗೆ ಹನಿಯಲು ನಿನ್ನ ಅಗಲಿಕೆಯ ಸಕಾರಣವಿದೆ, ನನ್ನ ಕಣ್ನುಗಳು ಗುತ್ತಿಗೆ ಹಿಡಿದ ನಿನ್ನ ಕನಸುಗಳಿಗೆ ನಿತ್ಯ ನಿನ್ನ ನೆನಪಲ್ಲಿಯೆ ನವೀಕರಣ//

No comments: