14 May 2013

ಮಧ್ಯಮ ಮಾಧ್ಯಮ....



ಹೊಸ ಸರಕಾರದ ಹೊಸ ಮುಖ್ಯಸ್ಥ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮಾಧ್ಯಮ ಸಲಹೆಗಾರರಾಗಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಆಯ್ಕೆಯಾಗಿದ್ದಾರೆ. ತಮ್ಮ ನಿಲುವುಗಳ ಮುಕ್ತ ಮಂಡನೆಗಾಗಿ ಅವರು ಖ್ಯಾತರು. ಮುಲ್ಕಿ ಬಳಿಯ ಗ್ರಾಮದ ಮೂಲದವರಾದ ದಿನೇಶ್ ಮುಂಬೈನಲ್ಲಿ ಹುಟ್ಟಿ ಅಲ್ಲಿನ ಬೃಹನ್ಮುಂಬೈ ಮುನಸಿಪಾಲಿಟಿಯವರು ವಲಸಿಗ ಕನ್ನಡಿಗರ ಮಕ್ಕಳಿಗಾಗಿ ನಡೆಸುವ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದು ತಮ್ಮ ವೃತ್ತಿ ಬದುಕನ್ನ ಮಂಗಳೂರಿನಲ್ಲಿ ಎಂಬತ್ತರ ದಶಕದ ಅಂತ್ಯದಲ್ಲಿ ಹನಿದ "ಮುಂಗಾರು"ವಿನಲ್ಲಿ ಕಟ್ಟಿಕೊಂಡಿದ್ದವರು.


ಪ್ರಜಾವಾಣಿಯ ಉಪ ಸಂಪಾದಕರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟರು ಪತ್ರಿಕೆಯ ಮಾಲಕರ ಅಧಿಕಾರಶಾಹಿ ಧೋರಣೆಯನ್ನ ವಿರೋಧಿಸಿ ಮಂಗಳೂರಿನಲ್ಲಿ ಉದಯವಾಣಿಯ ಅರ್ಭಟದ ದಿನಗಳಲ್ಲಿ ಹೊಸ ಹುಮ್ಮಸ್ಸಿನಿಂದ "ಮುಂಗಾರು" ಮಳೆಗೆರೆದಿದ್ದರು. ಅವರ ಗರಡಿಯಲ್ಲಿ ಕೆಲಸ ಕಲಿತು ಬಂದ ಅನೇಕ ಪ್ರತಿಭಾವಂತರಲ್ಲೊಬ್ಬರು ದಿನೇಶ್ ಅಮೀನ್ ಮಟ್ಟು.


ಪಂಜು ಗಂಗೊಳ್ಳಿ, ಪ್ರಕಾಶ್ ಶೆಟ್ಟಿ, ಬಿ ಗಣಪತಿ, ಪಿ ಮಹಮದ್, ಟಿ ಆರ್ ರಮೇಶ್ ಶೆಟ್ಟಿ, ಬಿ ಎಂ ಹನೀಫ್ ಹೀಗೆ ಅನೇಕ ಅಕ್ಷರ ತಜ್ಞರು "ಮುಂಗಾರು" ಮೂಲದಿಂದ ಬಂದಿದ್ದಾರೆ. ಮುಂದೆ ಶೆಟ್ಟರ ಹಾಗೂ ಚೌಟರ ನಡುವಿನ ಮುಸುಕಿನ ಗುದ್ದಾಟದಲ್ಲಿ  ಅಕಾಲದಲ್ಲಿ "ಮುಂಗಾರು" ಹಟಾತ್ತನೆ ನಿಂತು ಬರಬಿದ್ದಾಗ ಉದಯವಾಣಿ ಅಥವಾ ಪ್ರಜಾವಾಣಿಯಲ್ಲಿ ಇವರೆಲ್ಲ ನೆಲೆ ಕಂಡುಕೊಂಡರು. ಹಾಗೆ ಪ್ರಜಾವಾಣಿಗೆ ಬಂದ ಗುಂಪಿನಲ್ಲಿ ದಿನೇಶ್ ಸಹಾ ಒಬ್ಬರು. ಸುದೀರ್ಘ ಕಾಲ ಪ್ರಜಾವಾಣಿಯ ದೆಹಲಿ ಬಾತ್ಮಿದಾರರಾಗಿದ್ದ ಅವರು ಇತ್ತೀಚೆಗಷ್ಟೆ ಬೆಂಗಳೂರಿಗೆ ವರ್ಗವಾಗಿದ್ದರು. ದೆಹಲಿಯ ದಿನಗಳಲ್ಲಿ ಅವರು ಪ್ರತಿ ಸೋಮವಾರ ದಾಖಲಿಸುತ್ತಿದ್ದ "ದೆಹಲಿ ನೋಟ" ಪ್ರಜಾವಾಣಿಯ ಜನಪ್ರಿಯ ಅಂಕಣಗಳಲ್ಲೊಂದಾಗಿತ್ತು.


ಬಂದ ಹೊಸತರಲ್ಲಿ ಅನೇಕ ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯವಾಗುತ್ತಲೆ ತಮ್ಮ ಹಳೆಯ ಅಂಕಣದ ಜಾಗದಲ್ಲಿ "ಅನಾವರಣ"ವೆಂಬ ಹೊಸ ಅಂಕಣವನ್ನ ಬರೆಯಲಾರಂಭಿಸಿದ್ದರು. ಅದೂ ಸಹ ಮೊದಲಿನ ಅಂಕಣದ ಜನಪ್ರಿಯತೆಯನ್ನೆ ಗಳಿಸಿಯೂ ಕೊಂಡಿತ್ತು. ಅದೇ ಆವೇಶದಲ್ಲಿ ಅವರು ಸ್ವಾಮಿ ವಿವೇಕಾನಂದರ ಬಗ್ಗೆ ಹಗುರ ನಿಲುವಿನಲ್ಲಿ ಬರೆದ ಅಂಕಣ ಬರಹವೊಂದು ವಿವಾದಕ್ಕೆ ಒಳಗಾಗಿತ್ತು. ಅದನ್ನ ತರ್ಕಬದ್ಧವಾಗಿ ಖಂಡಿಸಿದ್ದವನಲ್ಲಿ ನಾನೂ ಒಬ್ಬ. ಆ ವಿವಾದವೆ ನಮ್ಮಲ್ಲಿ ಒಂದು ಸ್ನೇಹದ ಬೆಸುಗೆ ಹಾಕಿತ್ತು. http://marethamaathugalu.blogspot.in/2012/02/blog-post.html ಕೊಂಡಿಯಲ್ಲಿ ಆಸಕ್ತರು ಆ ಬರಹವನ್ನ ಓದಬಹುದು. ಅದೆ ವಾರದ ಸೋಮವಾರದ ಪ್ರಜಾವಾಣಿಯಲ್ಲಿ ದಿನೇಶರ ಮೂಲ ಬರಹವೂ ಸಿಗುತ್ತದೆ. ಆದರೆ ಈ ತೀಕ್ಷ್ಣ ಪ್ರತಿಕ್ರಿಯೆಯನ್ನ ಕ್ರೀಡಾ ಸ್ಪೂರ್ತಿಯಿಂದಲೆ ಸ್ವೀಕರಿಸಿದ್ದರವರು. ಹೀಗೆ ಅನೇಕರ ವಿರೋಧ ತೀವೃವಾಗುರತ್ತಿದ್ದಂತೆ ಅದೇ ಗುರುವಾರದ ಪ್ರಜಾವಾಣಿಯ ಸಂಚಿಕೆಯಲ್ಲಿ ಅವರ ಸಮರ್ಥನೆ ಲೇಖನ ರೂಪದಲ್ಲಿ ಪ್ರಕಟವಾದರೂ ಮೊದಲಿನ ಲೇಖನದಲ್ಲಿದ್ದ ತೀಕ್ಷ್ಣತೆ ಮಾಯವಾಗಿತ್ತು ಅನ್ನೋದೂ ಸಹ ಅಷ್ಟೆ ಸತ್ಯ.


ಇತ್ತೀಚೆಗೆ ಅವರಿಗೆ ಕಿರು ಅಪಘಾತವೊಂದಾಗಿ ಎರಡು ತಿಂಗಳು ವಿಶ್ರಾಂತಿ ಪಡೆಯುವುದು ಅನಿವಾರ್ಯವಾಯಿತು. ಆ ಅವಧಿಯಲ್ಲಿ ಕನ್ನಡ ಸುದ್ದಿ ವಾಹಿನಿಯೊಂದರಲ್ಲಿ ಅವರು ಭಾಗವಹಿಸಿದ್ದ ಚುನಾವಣಾ ಪೂರ್ವ ಸಮೀಕ್ಷಾ ಚರ್ಚೆಗಳು ನಿಖರವಾಗಿದ್ದು  ಸಹ ಚರ್ಚಾಪಟುಗಳಾಗಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನ ಅವರ ನೇರ ಖಡಕ್ ನುಡಿಗಳು ಕೆರಳಿಸುತ್ತಿದ್ದವು. ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪನವರ ಉಗ್ರಾವತಾರಕ್ಕೆ ಅಂತಹದ್ದೊಂದು ಚರ್ಚೆ ಎಡೆ ಮಾಡಿ ಕೊಟ್ಟಿತ್ತು ಅಂತ ನೆನಪು. ಒಟ್ಟಿನಲ್ಲಿ ಅವರು ರಾಜಕೀಯ ಪಕ್ಷಗಳೊಂದಿಗೆ ರಾಜಿ ಮಾಡಿಕೊಂಡು ಬೇಳೆ ಬೇಯಿಸಿಕೊಂಡವರಲ್ಲ. ಇದೆ ಮಾತು ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ಹೊತ್ತಿನಲ್ಲಿ ಅವರ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರ ನಡುವೆಯೂ ಹೊತ್ತಿಸಿದ ಬೆಂಕಿಗೆ ಅನ್ವಯಿಸಿ ಹೇಳಬಹುದು.


ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೆಂದರೆ ಅವರ ತೆವಲುಗಳಿಗೆಲ್ಲ ಭೋಪರಾಕು ಹೇಳುವ ಪ್ರಮುಖ ಚಮಚಾ ಅನ್ನುವ ಆರೋಪ ಇರುವ ಕಾಲದಲ್ಲಿ ದಿನೇಶ್ ನೇರ ನಡೆಯ ಮುಖ್ಯಮಂತ್ರಿಯ ಆಸ್ಥಾನ ಸೇರಿದ್ದಾರೆ. ಅಲ್ಲಿನ ಅತ್ಯಾಪ್ತ ಆಸ್ಥಾನ ವಿದೂಶಕರಾಗದೆ, ನಿಲಯದ ಕಲಾವಿದರಾದ ಚಮಚಾಗಿರಿ ಖ್ಯಾತಿಯ "ಜಗ"(ದೀಶ)ದಗಲ "ತೇಜಸ್ವಿ"(ನಿ)ಗಳಾಗಿ ಬಿಟ್ಟುಹೋದ ಕೆಟ್ಟಚಾಳಿಗಳನ್ನೆಲ್ಲ ನಿಲ್ಲಿಸಿ "ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ" ಎಂಬ ಹುದ್ದೆಗೆ ಒಂದು ಘನತೆ ತಂದುಕೊಡುವ ನಿರೀಕ್ಷೆಯಿದೆ. ಅವರಿಂದ ಅದು ಸಾಧ್ಯ ಕೂಡ. ಅಲ್ಲಿನ ಕೊಳೆ ತೊಳೆದು ಮರಳಿ ಪತ್ರಿಕಾರಂಗಕ್ಕೆ ಅವರು ಬರಲಿ. ಅವರಿಗಾಗಿ ಓದುಗರು ಖಂಡಿತಾ ಕಾದಿರುತ್ತಾರೆ. ಅವರಿಗೆ ಶುಭವಾಗಲಿ.

No comments: