19 August 2013

ಬೀಸುವ ನೆನಪಿನ ಗಾಳಿಯಲೆಗಳು ಮನದ ಮಾರ್ದವತೆಯನ್ನ ಮೃದುವಾಗಿ ಸೋಕುತ್ತವೆ......



ನನ್ನವಲ್ಲದ ಸ್ವಪ್ನಗಳಿಗೆ ಹಂಬಲಿಸಿದ್ದು ಸಾವಿರ ಬಾರಿ
ಆದರೂ ತೆರೆದುಕೊಳ್ಳುತ್ತಿಲ್ಲ ಕನಿಷ್ಠ....
ಒಂದೆ ಒಂದು ಭರವಸೆಯ ದಾರಿ,
ಬರೆಯಲಾಗದ ಕವಿತೆಗಳಿಗೆ
ಮರೆಯಲಾಗದ ಹಾಡುಗಳಿಗೆ....
ತೆರೆಯಲಾರದ ಮನ ತೀರ ಶುಷ್ಕ/
ನಿತ್ಯದಂತೆ ನಿನ್ನ ನಿರಂತರ ಜಪದಲ್ಲಿ ಮನ ಲೀನ
ಜೊತೆಗೆ ಕೆಲವು ಗದ್ಗದ ನೆನಪುಗಳು....
ಮತ್ತೊಂದಿಷ್ಟು ಮೌನ,
ಅನುಗಾಲ ಅಷ್ಟಷ್ಟೇ ಸವೆದು ಇನ್ನಿಲ್ಲವಾಗುವ
ಕಾಲದ ಚಕ್ರದ ಗುರುತು....
ಪ್ರತಿ ಮುಖದ ಮೇಲೂ ಅಚ್ಚಳಿಯದೆ
ಹಾಗೆಯೆ ಉಳಿದು ಹೋಗುತ್ತದೆ.//


ಹಾದಿಯಂಚಿನ ಹೂವುಗಳ ತುಟಿಯಂಚಿನಲ್ಲಿ
ಹೆಪ್ಪುಗಟ್ಟಿದ ನಾಚಿಕೆಯ ನಸುನಗುವಿಗೆ....
ನಾಳಿನ ನಲಿವಿನ ನಿರೀಕ್ಷೆಯಿದೆ,
ನೋವ ಜೊತೆಗೆ ಉಕ್ಕುವ ನಲಿವಿನ ಬುಗ್ಗೆಗೆ
ಕಾರಣ ಹುಡುಕೋದು ಕಡು ಕಷ್ಟ....
ಮುಕ್ತ ಮಾತುಗಳ ಆರ್ದ್ರ ನಯನಗಳಿಗೆ
ಖಚಿತ ಭಾಷೆಯ ಹಂಗಿಲ್ಲ/
ಕಲ್ಲಾದರೂ ಹರಿವ ನಿರಂತರ ನೀರ ಧಾರೆಗೆ
ತೋಯ್ದು ಮೆತ್ತಗಾಗಿ ಕರಗೀತು....
ಆದರೆ ಬರಡಾದ ಮನಸ ಬಂಡೆಯಲ್ಲ,
ಅದು ಕೇವಲ ಕ್ಷಣ ಭಂಗುರ ಕನಸು
ನಿರೀಕ್ಷೆಗಳ ರೆಕ್ಕೆ ಫಡಿಫಡಿಸುವ ಹೂಮರಿ ಹಕ್ಕಿ....
ಮತ್ತೆ ನೆಲಕ್ಕೆ ಕಾಲ ಸೋಕಿಸಲೇ ಬೇಕು.//



ಸುಲಭವಾಗಿ ಅಳಿಸಿ ಹಾಕುವ ಮನಸು ಬೇರೆ
ಕಷ್ಟ ಪಟ್ಟರೂ ಮರೆಯ ಮಾಯಾ ಪರದೆ....
ಇಳಿಸಲಾಗದ ಕನಸು ಬೇರೆ
ಎರಡೂ ಒಂದೊಮ್ಮೆ ಒಟ್ಟಾಗಿದ್ದುದೆ ಕಡು ಅಚ್ಚರಿ,
ಮತ್ತದೆ ಏಕಾಂತ ಮುತ್ತಿ ಕಾಡುವ ನಿನ್ನ ನೆನಪು
ಕಣ್ಣು ತೇವ ತೇವ....
ಮನ ತೊಟ್ಟಿಕ್ಕುಸುತಿರೋದು
ಬರಿ ವಿಷಾದದಲ್ಲದ್ದಿದ್ದ ಹನಿ ನೋವ/
ನೀನದೆಂದೋ ಮರೆತ
ನಾನೆಂದೆಂದಿಗೂ ಮರೆಯಲೆ ಆಗದ ಮಾತುಗಳಿಗೆಲ್ಲ....
ವಿಷಾದದ ಚೌಕಟ್ಟು ಹಾಕಿ
ಮೌನದ ಸ್ವರ್ಣ ಲೇಪ ಕೊಡಿಸಿದ್ದೇನೆ,
ಕರಗುವ ಹೊತ್ತಲೂ ಮಂಜಿನ ಕೊನೆ ಹನಿ
ಕರಗಿಸುವ ಕಿರಣದ ಮೋಡಿಗೆ ಸಿಕ್ಕು ಸಾಯುವಾಗಲೂ ಮಿನುಗುತ್ತದೆ....
ಮಿಂಚುತ್ತಲೆ ಕೊನೆಯುಸಿರೆಳೆಯುತ್ತಾ ಮರೆಯಾಗುತ್ತದೆ.//



ಬಿಸಿಲಿಲ್ಲದೆ ಬೆಚ್ಚಗಿರದ ಬೆಳಗು
ಬೆಳದಿಂಗಳನ್ನೂ ಮರೆತ ಕಾರಿರುಳ ಮೆರುಗು....
ಕೇವಲ ಚಿಂತೆಯಿಲ್ಲದ ಮಗು ಮನಸಿನ
ಅರಿವಿಗೆ ಮಾತ್ರ ದಕ್ಕುತ್ತದೆ,
ಕನ್ನಡಿಯಲ್ಲಿ ಕಾಣುವ ಬಿಂಬ ವಾಸ್ತವದಲ್ಲಿ ಅಸಲಲ್ಲದಿದ್ದರೂ
ಮೋಹಕತೆಯ ಕನಸನ್ನ ಮಾತ್ರ....
ತಪ್ಪದೆ ನಿರ್ವಿಕಾರವಾಗಿ ಪ್ರತಿಬಿಂಬಿಸುತ್ತದೆ/
ಮಾಗಲಾರದ ಮಗು ಮೌನಿ ಮನ
ನೋವಲೂ ನಲಿವನ್ನರಸುತ್ತದೆ....
ಸುಡು ಬೆಂಕಿಯಲ್ಲಿ ಬಿರು ಬೆಳಕನ್ನ,
ಸಾಂಗತ್ಯ ತಪ್ಪಿಹೋದ ಮೇಲೆ
ಕೊನೆಯವರೆಗೂ ಒಂಟಿಯಾಗಿಯೆ ಉಳಿಯುತ್ತದಲ್ಲ....
ಸ್ವಚ್ಚಂದವಾಗಿ ಬಾನಾಡಿಯಾಗಿದ್ದ ತೇನೆ
ನಿನ್ನ ಜೊತೆ ತಪ್ಪಿ ಹೋದ ನಾನೂನು ಕೂಡ ಹಾಗೇನೆ.//

No comments: