21 August 2013

ಮೌನ ಮತ್ತೆ ಮಧುರ ಮಾತಾಗುವಾಗ ಮುಸ್ಸಂಜೆಯ ಜಾವ ಕಳೆದಿತ್ತು.....




ಮೋಡಗಳ ಕಳೆಯಿಲ್ಲದ ಖಾಲಿ ಬಾನು
ಗಾಳಿಯೂ ಆಂತರ್ಮುಖಿಯಾಗಿದೆ ತನ್ನ ಪಾಡಿಗೆ ತಾನು.....
ಮಾಡುವ ಪ್ರತಿ ಕ್ಷೀಣ ಪ್ರಯತ್ನಗಳೂ
ಸೋಲನ್ನೆ ಉಡುಗೊರೆಯಾಗಿಸುವಾಗಲೂ,
ನನ್ನದು ಸ್ವತಃ ನನ್ನಿಂದಲೂ ತಡೆದು ನಿಲ್ಲಿಸಲಾಗದ
ಅವಿರತ ಭಗೀರಥ ಮರುಯತ್ನ/
ಪಂಚಮಿ ಸರಿದು ಷಷ್ಠಿಯೂ ಜಾರಿತು
ಒಂದೊಂದಾಗಿ ತಿಥಿಗಳು ಸರಿಯುತ್ತಿವೆ ಸಹಜವಾಗಿ....
ಕಣ್ಣಿಂದ ಕದಲಿ ಕೆನ್ನೆಯ ಮೆಲುವಾಗಿ ತಾಕಿ
ಇನ್ನಿಲ್ಲವಾಗುವಂತೆ ನೆಲಮುಟ್ಟಲೋಡುವ ಹನಿಗಳ ಸರದಿಯಂತೆ,
ಅರಿಯದ ಪ್ರಾಯದ ಅಬೋಧ ನಸುಗಾಲ ಮಾತ್ರ
ಬಾಳಿನ ಚರಮ ಸುಖದ ಕಿರು ಅವಕಾಶ.//



ಕಣ್ಣಿಲ್ಲದ ನನಗೆ ಹಗಲೂ ಒಂದೆ ಇರುಳೂನು ಒಂದೆ
ಬೆಳಕಿನ ಜೊತೆಯಿಲ್ಲ....
ಬೆಳಕಿರಲೆ ಬೇಕಂದೇನೂ ಇಲ್ಲವಲ್ಲ,
ಆಗೆಲ್ಲ ನೀನಿರಲಿಲ್ಲ ನಿನ್ನ ನಿರೀಕ್ಷೆ ಮಾತ್ರ ಇತ್ತು
ಮಧ್ಯೆ ನೀ ಸುಳಿದು ಕ್ಷಣದಲ್ಲೆ ಮರೆಯಾದೆ....
ಈಗ ಮತ್ತೆ ಹೊರಟಲ್ಲಿಗೆ ಬಂದು ಮುಟ್ಟಿದ್ದೇನೆ
ಮತ್ತೆ ಉಳಿದಿರೋದು ನಿರೀಕ್ಷೆಗಳು ಮಾತ್ರ....
ಕೇವಲ ನಿರೀಕ್ಷೆಗಳು/
ಸರಿಕಂಡ ದಾರಿಯಲ್ಲಿ ಹಾಕಿದ ಹೆಜ್ಜೆ
ಊಹಿಸದ ಉಸುಬಿನಲ್ಲಿ ಮುಳುಗಿಸಿ ಕೊಂದರೂ....
ಉಸಿರುಗಟ್ಟುವ ಆ ಹೊತ್ತಲ್ಲೂ ನಿನ್ನುಸಿರ ಕನವರಿಕೆ,
ಯಂತ್ರದಿಂದ ಹಾಯಿಸಿಕೊಂಡ ತಂಪು ಹವೆ ತನುವ
ಸ್ವಚ್ಛಂದ ಗಾಳಿಯ ತಂಪಿನಂತೆ ಸಹಜವಾಗಿ ಅರಳಿಸಬಲ್ಲದೆ?....
ಮನ ಬೇಡದ ಮರು ಸಾಂಗತ್ಯ ಆಶಿಸಿದಷ್ಟು
ಆಪ್ತತೆಯ ಭಾವವನ್ನ ಮನದೊಳಗೆ ಕೆರಳಿಸಬಲ್ಲದೆ?.//


ಆದರೂ ನಾಲ್ಕಾರು ಸಾಲುಗಳಲ್ಲಿ
ಬಿಡಿಬಿಡಿಯಾಗಿ ಮನದ ಹಳಹಳಿಕೆಗಳನ್ನೆಲ್ಲ....
ನನಗೆ ನಾನೆ ಸುತ್ತಿ ಬಳಸಿ
ನಿತ್ಯ ನಿವೇದಿಸೋದು ಒಟ್ಟು,
ಕಡೆ ತನಕ ಮನದುಂಬಿ ಆಪ್ತವಾಗಿ
ವಿವರಿಸಿದರೂ ಮುಗಿಯಲಾರದಷ್ಟಿದೆ....
ಮನದ ಕಪಾಟಿನಲ್ಲಿ ಬಚ್ಚಿಟ್ಟಿರುವ ನೆನಪಿನ ಸುರುಳಿಗಳ ಕಟ್ಟು/
ಶಾಂತಿಯಿಲ್ಲ ಆದರೂ ಅದರ ತಲಾಷಿದೆ
ನೀನೂ ಇಲ್ಲ ಆದರೆ ನಿನ್ನ ನಿರೀಕ್ಷೆಯಿದೆ.....
ಅನುಗಾಲ,
ಅರೆ ಬಿಸಿಲಿಗೆ ಅಷ್ಟಿಷ್ಟು ಅರಳಿದ
ವಸುಂಧರೆಯ ಮುಖದ ನಾಚಿಕೆಯ ಗುಳಿಯಲ್ಲಿ....
ಮಂಜಿನ ಮಣಿಗಳು ಮಿನುಗುತ್ತಿವೆ.//


ಸೋರುವ ಮನದ ಮಾಳಿಗೆಯಿಂದ
ಸುರಿದ ಹೆಚ್ಚುವರಿ ಹನಿಗಳೆಲ್ಲ....
ಕಣ್ಣಿನ ತೂಬಿನಿಂದ ಸರಾಗವಾಗಿ ಹೊರ ಹರಿಯುತ್ತವೆ,
ಉಸಿರುಗಟ್ಟಿಸುವ ಒತ್ತಾಯದ ಏಕಾಂತದಲ್ಲಿ
ಅರಳುವ ಮೊದಲೆ ಬಾಡಿ ಹೋದ ಮನ ಸುಮಗಳು....
ವಾಸ್ತವದಲ್ಲಿ ಅತ್ತಲಾಗಿರಲಿ ಸ್ವಪ್ನದಲ್ಲಿಯೂ
ಸುಗಂಧ ಹೊಮ್ಮಿಸಲಾರದೆ ಹೋದವು/
ಕಾದಂಬರಿ ಬರೆವ ಹಂಬಲ ಹೊತ್ತವ
ಬರೆಯಲಾಗದೆ ಒಂದೊಳ್ಳೆ ಕಿರುಗತೆ....
ಆರಂಭದಲ್ಲಿಯೆ ಬಳಲಿ ಬೀಳುವ ರೀತಿ ನನ್ನ ವ್ಯಥೆ,
ಕಥೆಯಾದ ನೆನ್ನೆಯಂತೆ
ಕವಿತೆಯಂತಹ ನಾಳೆಯೂ ಎದುರಾಗಲಿದೆ....
ಒಂಟಿತನದ ನಿರಂತರ ನೋವು
ಎಂದೆಂದೆಯೂ ಮುಗಿಯದ ಕಾದಂಬರಿಯಂತೆ ಸಶೇಷವಾಗಿ ಕಾಡಲಿದೆ.//

No comments: