03 July 2014

ವಯಸ್ಸು ಮಿತಿ ಮೀರಿದ್ದರೂ ಸಾಂವಿಧಾನಿಕ ಮಾನ್ಯತೆ ಮಾತ್ರ "ತುಳುವಪ್ಪೆ" ( ತುಳುವಮ್ಮ.)ಗೆ ಇನ್ನೂ ಮರೀಚಿಕೆ......ದ್ರಾವಿಡ ಭಾಷೆಗಳ ಇತಿಹಾಸವನ್ನ ನೋಡಿದರೆ ಮೊದಲು ಪ್ರಗ್ದ್ರಾವಿಡ ಎನ್ನುವ ಅಮ್ಮನಿಂದ ಒಟ್ಟಿಗೆ ಹುಟ್ಟಿ ಬೇರೆಯಾದ ಎರಡು ಅವಳಿ ಭಾಷೆಗಳು ತುಳು ಹಾಗೂ ತಮಿಳು. ಇವೆರಡೂ ಭಾಷೆಗಳು ನಾಲ್ಕೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು ಕೂಡಲೆ ಲಿಪಿ ಸಂಸ್ಕಾರ ಪಡೆದುಕೊಂಡವು.


ಅನಂತರ ಸುಮಾರು ಒಂದು ಸಾವಿರ ವರ್ಷಗಳ ನಂತರ ಹುಟ್ಟಿದ ಮೊದಲ ತಂಗಿ ಭಾಷೆ ಕನ್ನಡ. ಇದರ ಹಿಂದೆಯೆ ಮತ್ತೆ ಆರುನೂರು ವರ್ಷಗಳಾಚೆ ತೆಲುಗು ತೆಲ್ಲಿ ಹುಟ್ಟಿದಳು. ಇವರಿಬ್ಬರಿಗೂ ಕೂಡಲೆ ಲಿಪಿ ಸಂಸ್ಕಾರಗಳಾದವು ಸಹ.

ಆದರೆ ಕೊನೆಗೆ ಹುಟ್ಟಿದ ಹಾಗೂ ಕೇವಲ ಒಂದೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮಲಯಾಳಂ ಮಾತ್ರ ಲಿಪಿ ಬದ್ಧವಾಗಲು ಮತ್ತೆ ಸಾವಿರ ವರ್ಷ ನಿರೀಕ್ಷಿಸಬೇಕಾಯಿತು! ನೆರೆಯ ತುಳು ನಾಡಿನ ಲಿಪಿ ಇದರ ಅಗತ್ಯಕ್ಕೆ ಮುಂದಿನ ದಿನಗಳಲ್ಲಿ ಒದಗಿ ಬಂತು. ಇದಕ್ಕೆ ಒಂದು ಸ್ಪಷ್ಟ ನಿದರ್ಶನ ಎಂದರೆ ಹುಟ್ಟು ಮಲಯಾಳಿಯಾಗಿದ್ದರೂ ಶ್ರೀಶಂಕರಾಚಾರ್ಯರು ಔಷಧಕ್ಕೆ ಬೇಕೆಂದರೂ ಒಂದೇ ಒಂದು ಕೃತಿಯನ್ನ ತಮ್ಮ ಮಾತೃಭಾಷೆಯಲ್ಲಿ ರಚಿಸಿಲ್ಲ! ಲಿಪಿ ಇಲ್ಲದ್ದೂ ಇದಕ್ಕೊಂದು ಕಾರಣವಾಗಿದ್ದಿರಬಹುದು. ಅವರ ಕೃತಿಗಳೆಲ್ಲ ದೇವನಾಗರಿ ಲಿಪಿ ಹಾಗೂ ಸಂಸ್ಕೃತ ಭಾಷೆಯಲ್ಲಿವೆ.

ಮಲಯಾಳಂನ ಅತಿ ಪುರಾತನ ಸಾಹಿತ್ಯ ಕೃತಿಗಳ ವಯಸ್ಸು ಐದು ಶತಮಾನ ದಾಟುವುದಿಲ್ಲ. ಒಟ್ಟಿನಲ್ಲಿ ಮನೆಯ ಹಿರಿಯಕ್ಕಂದಿರಲ್ಲಿ ಒಬ್ಬಳಾಗಿದ್ದರೂ ಕಿರಿಯ ಕನ್ನಡ ಹಾಗೂ ಮಲಯಾಳಂನ ಮರ್ಜಿಯಲ್ಲಿ ಕಾಲ ಹಾಕಬೇಕಾದ ಸಂದಿಗ್ಧಕ್ಕೆ ತುಳುವಪ್ಪೆ ಸಿಲುಕಿ ಅನಿವಾರ್ಯವಾಗಿ ಪರಿತಪಿಸುತ್ತಿದ್ದಾಳೆ.


ಸಂಸ್ಕೃತ ಸಹಿತ ಆರ್ಯ ಕುಟುಂಬದ ಭಾಷೆಗಳು ಬಹುತೇಕ ದೇವನಾಗರಿ ಅಥವಾ ಅದರ ವಿವಿಧ ಪರಿಷ್ಕೃತ ಆವೃತ್ತಿಗಳನ್ನ ಬರವಣಿಗೆಗೆ ಬಳಸುತ್ತವೆ. ಸಂಸ್ಕೃತದ ಅಪಭ್ರಂಶಗಳಾದ ಅರ್ಧ ಮಾಗಧಿ, ಪಾಳಿ, ಪೈಶಾಚಿ ಹಾಗೂ ಪ್ರಾಕೃತ ಬ್ರಾಹ್ಮಿ ಲಿಪಿಯನ್ನ ಬರವಣಿಗೆಗೆ ಆಧರಿಸಿವೆ. ಒಟ್ಟಿನಲ್ಲಿ ಸಂಸ್ಕೃತವೂ ಸೇರಿ ಬಹುತೇಕ ಆರ್ಯ ಮೂಲದ ಭಾಷೆಗಳಿಗೆ ಸ್ವಂತ ಲಿಪಿ ಇಲ್ಲ.


ತುಳುವಿಗೆ ಲಿಪಿ ಇಲ್ಲ ಅನ್ನುವುದು ಒಂದು ಜನಪ್ರಿಯ ನಂಬಿಕೆ. ಆದರೆ ಲಿಪಿಯೇ ಇದ್ದಿಲ್ಲದ ಮಲಯಾಳಂ ಭಾಷೆಗೆ ಕಡವಾಗಿ ಕೊಟ್ಟು ತನಗೆ ಇದ್ದ ಲಿಪಿಯ ಬೆಂಬಲವನ್ನ ಕಳೆದುಕೊಂಡು ಕಾಲಾನುಕ್ರಮದಲ್ಲಿ ಬಡವಾದ ನತದೃಷ್ಟ ಭಾಷೆ ತುಳು ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ. ಆಚಾರ್ಯ ಮಾಧ್ವರು ತುಳು ಲಿಪಿಯಲ್ಲಿಯೇ ಧರ್ಮ ಜಿಜ್ಞಾಸೆಗಳನ್ನ ದಾಖಲಿಸಿದ್ದಾರೆ. ಇತ್ತೀಚಿನವರೆಗೂ ತುಳುನಾಡಿನ ಹಿರಿಯರು "ತಿಗಳಾರಿ" ಎಂದು ಕರೆಯಲಾಗುವ ಈ ಲಿಪಿಯನ್ನ ಬಳಸಿ ಬರವಣಿಗೆ ಸಾಗಿಸುತ್ತಿದ್ದರು.

ಇದರಲ್ಲಿ ಬರೆಯಲಾಗಿರುವ ಓಲೆಗರಿಗಳನ್ನ ಇಂದಿಗೂ ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯ, ಉಡುಪಿಯ ಫಲಿಮಾರು ಮಠ ಹಾಗೂ ತಿರುವನಂತಪುರದ ಸರಕಾರಿ ವಸ್ತು ಸಂಗ್ರಹಾಲಯಗಳಲ್ಲಿ ನೋಡಬಹುದು. ತುಳು ಭಾಷಾಭಿಮಾನಿಗಳಿಗೆ ಇಲ್ಲಿದೆ ಅವರದ್ದೆ ಮಾತೃಭಾಷೆಯ ಸ್ವಂತ ಲಿಪಿ. ಇದರ ಪರಿಷ್ಕರಣೆಯೇ ಇಂದು ಚಾಲ್ತಿಯಲ್ಲಿರುವ ಮಲಯಾಳಂ ಲಿಪಿ ಎನ್ನುವುದು ಉಳಿದವರ ಮಾಹಿತಿಗಾಗಿ.


ನನ್ನ ಮಾತೃಭಾಷೆ ಕನ್ನಡ. ಆದರೆ ತುಳುವಿಗೆ ಆದ, ಆಗುತ್ತಿರುವ ಅನ್ಯಾಯಕ್ಕೆ ಮನ ಮಿಡಿಯುತ್ತದೆ. ಇಂದು ಬಳಕೆಯಲ್ಲಿ ರೂಢಿಗೆ ಬಂದಿರುವ ತಮಿಳು ಲಿಪಿಯನ್ನ ಆಧರಿಸಿ ಕೆಲವರು ಕನಿಷ್ಠ ಅಕ್ಷರಗಳಿರುವ ಅದು ಬೆಳೆದಿಲ್ಲ ಎನ್ನುವುದುಂಟು. ಆದರೆ ಅಕ್ಷರ ಸಮೃದ್ಧ ಸಂಗಂ ಕಾಲದ ತಮಿಳಿನಲ್ಲಿ ಈ ಸಮಸ್ಯೆ ಇರಲಿಲ್ಲ. ವಿಕಾಸ ಕೂಡುವುದರಲ್ಲಿ ಅಷ್ಟೇ ಇಲ್ಲ ಹಿತ ಮಿತ ಗೊಳಿಸುವುದರಲ್ಲಿಯೂ ಇರುತ್ತದೆ. ಅಂತೆಯೇ ಇನ್ನುಳಿದ ದ್ರಾವಿಡ ಭಾಷೆಗಳು ಸರಿಸುಮಾರು ೫೪ ಲಿಪಿಗಳಿಗೆ ತಮ್ಮ ವಿಕಸನವನ್ನು ಅಂತಿಮಗೊಳಿಸಿಕೊಂಡರೆ ತಮಿಳು ಮಾತ್ರ ಸೂಕ್ತ ಚಿನ್ಹೆಗಳನ್ನು ಸಮಯೋಚಿತವಾಗಿ ಬಳಸುವ ಸ್ವ ಶಿಸ್ತಿಗೆ ಒಳಪಟ್ಟು ತಾನೊಂದೇ ಭಿನ್ನ ಹಾದಿಯನ್ನು ತುಳಿಯಿತು. ಸೀಮಿತ ಅಕ್ಷರಗಳ ತಮಿಳು ವಿಫುಲ ಅಕ್ಷರಗಳ ಸಂಸ್ಕಾರವಿರುವ ನಮ್ಮಲ್ಲಿ ಗೊಂದಲ ಹುಟ್ಟಿಸಿದರೆ ಅದು ನಮ್ಮ ಕಲಿಕೆಯ ದೋಷವೆ ಹೊರತು, ಇದರಲ್ಲಿ ಆ ಭಾಷೆಯ ತಪ್ಪೇನೂ ನನಗೆ ಗೋಚರಿಸುತ್ತಿಲ್ಲ. ಸಹೋದರಿ ಭಾಷೆಗಳ ತುಲನೆಯಲ್ಲಿ ತುಳುವಿಗೂ ಸಮಾನ ಪಟ್ಟ ಸಿಗಬೇಕಿತ್ತು, ಆದರೆ ಇನ್ನೂ ಸಿಕ್ಕಿಲ್ಲ. ತಡವಾಗಿದೆ ನಿಜ ಆದರೆ ಮಾನ್ಯತೆ ಮತ್ಯಾವತ್ತಿಗೂ ತರಲಾಗದಂತಾಗಬಾರದು.


No comments: