14 December 2014

ಈ ನೆನಪುಗಳೆ ಹಾಗೆ.....



ಮೋಡವ ಕೆಣಕಿ ಗಾಳಿ ಬೀಸಿದಾಗ ಮಳೆ,
ಭೂಮಿಯ ಬಾನು ಮೋಹಿಸುವ ಹೊತ್ತು ಎಲ್ಲೆಲ್ಲೂ ನೆಂದ ನೆಲ ಕಳೆಕಳೆ/
ಮೊದಲ ಹನಿ ಅದ್ಯಾವ ಚಿಪ್ಪಿನಲ್ಲಾಯಿತು ಮುತ್ತು?,
ಅದಿಲ್ಲಿ ಮುಗಿಲಿನ ಮನದಾಳದ ಹೊರತು ಇನ್ಯಾರಿಗೆ ತಾನೇ ಗೊತ್ತು!//

ಬೇಟೆಯ ಮೈ ಬಣ್ಣವ ಮೋಹಿಸಲು ನಾ ರಾಮನಲ್ಲ,
ಕಂಡಕಂಡವರ ಬೆನ್ನು ಹತ್ತುವ ಶ್ಯಾಮನಾಗುವುದೂ ಇಲ್ಲ/
ಸಾಕು ಸಿಕ್ಕಿದ್ದ ನಿನ್ನೊಲುಮೆಯ ಕ್ಷಣಿಕ ಸುಖ ನನಗೆ,
ಇದಕ್ಕಿಂತಾ ಇನ್ನೇನು ಬೇಕು ಹೇಳು?.....
ಕಳೆಯೋಕೆ ಈ ಸುಡು ಬಾಳ ಬೇಗೆ//

ಬತ್ತದ ತುಂಗೆಯ ಹಾಗೆ ಭಾವಗಳು ಮನದೊಳಗೆ,
ಇವನ್ನ ಹೇಳಿಕೊಳ್ಳದೆ ಎದೆಯೊಳಗೆ ಒತ್ತಿ ಬಚ್ಚಿಟ್ಟುಕೊಳ್ಳುವುದಾದರೂ ಹೇಗೆ/
ಹಾಗಂತಲೇ ಕವಿತೆಯ ನೆಪದಲ್ಲಿ ಸಾರ್ವಜನಿಕವಾಗಿ ನಿತ್ಯ ಬೆತ್ತಲಾಗುತ್ತೀನಿ,
ಸಾಧ್ಯವಾದಷ್ಟು ಇತರರಿಗೆ ಬೆಳಕ ತೋರಿ ಮತ್ತದೇ ದೀಪದಡಿಯ ನಿರಂತರ ಕತ್ತಲಾಗುತ್ತೀನಿ//

No comments: