19 December 2014

ಎಂದೂ ನೇರವಾಗದ ಅದರ ಬಾಲ......




ವೇಷ ಬದಲಾದರೆ ಜಾತಿ ಬದಲಾದೀತೆ?
ಮೂರು ನಾಮ ಎಳೆದು ಅವರನ್ನ ನೀನು ಮತ್ತೆ ಹಿಂದಿರುಗಿದೆ ಅಂದರು/
ಭಾಷೆ ಬದಲಾದರೆ ಅಮಿಷದ ದೋಷ ಕಳೆದೀತೆ?
ಒಟ್ಟೆ ಒಟ್ಟೆ ಬಟ್ಟೆ ಟೋಪಿಯ ಮಂಡೆಗೆ ಹಾಕಿ
ಇನ್ನು ನೀನು ಪರಮ ಸತ್ಯ ನಂಬಿದವ ವಿಶ್ವಾಸಿ ಅಂತ ತಲೆ ಮೇಲೆ ಕೈ ಎಳೆದು ಬಂದರು//



ಬೀದಿಗೊಂದು ಜಾತಿ ಸಂಘ ಹಾದಿಗೊಬ್ಬ ಜಗದ್ಗುರು,
ತಾಗುವ ಕೊಳಚೆಯಲ್ಲ ಕಾಣಬಾರದೂ ಅಂತ ಕಾವಿಯನ್ನ ಇವರೆಲ್ಲ ಹಾಕಿ ಕೊಂಡೌರು/
ನೆಟ್ಟಗೆ ನಾಲ್ಕಕ್ಷರ ಕಲಿಯದವ ಇಂದು ಸ್ವರ್ಗ ನರಕದ ಕಥೆಗಳ ಹೇಳಿ ಸುಲಭವಾಗಿ ಹೊಟ್ಟೆ ಹೊರೆಯುತ್ತಾನೆ,
ನಾಲ್ಕು ಮನೆಯ ಅನ್ನವನ್ನ ನಿತ್ಯ ಕಂಠ ಮಟ್ಟ ತಿಂದು ತೇಗಿ .........
ಮೈಕು ಸಿಕ್ಕೊಡನೆ ಮೀಸೆ ಇಲ್ಲದ ತನ್ನ ಮುಖದ ಉದ್ದ ಗಡ್ಡವನ್ನೇ ನೇವರಿಸುತ್ತಾ ದ್ವೇಷವನ್ನೇ ದೊಡ್ಡ ದೊಂಡೆಯಲ್ಲಿ ಮೊರೆಯುತ್ತಾನೆ//




ಧರ್ಮದ ಹೆಸರಲ್ಲಿ ನಮ್ಮನಮ್ಮ ನಡುವೆಯೇ ತಂದಿಟ್ಟು ತಮ್ಮ ಮನೆಗೆ ಅಕ್ಕಿ ಹೊಂಚುವ ವಂಚಕರಿವರು ಹುಷಾರು,
ಕಾವಿ ಮಾತ್ರವಲ್ಲ ಉದ್ದಾನುದ್ದ ಕೊಕ್ಕರೆ ಬಿಳಿ ನಿಲುವಂಗಿಯನ್ನೂ ಹಾಕಿಕೊಂಡ ಆ ಪರಮಾತ್ಮನ ಪುಕ್ಸಟ್ಟೆ ಏಜೆಂಟರು/
ಇವರ ಜೊತೆ ದುಡಿದು ತಿನ್ನುವ ನಮ್ಮಂತವರಿಗೆಂತ ಇದೆ ಹೇಳಿ ಕರಾರು?,
ಇಂತವರ ದೊಂಬರಾಟಗಳನ್ನ ನೋಡಿ ಮನಸಾರ ನಕ್ಕು ಹಗುರಾಗೋಣ....
ನಡೆಯಲಿ ಇನ್ನಷ್ಟು ದಿನ ಇಂತಹ ಅಲ್ಪರ ಕಾರುಬಾರು//




ಅದ್ಯಾರೋ ಪತ್ರಿಕೆಗಳ ಜಾಹಿರಾ....ಥೂಗಳಲ್ಲಿ ಅದೆಂಥದ್ದನ್ನೋ ಅನುಭವಿಸಿದರಂತೆ,
ಇಲ್ಲಿನ ತಾರತಮ್ಯವ ಪ್ರತಿಭಟಿಸಿ ಅದೆಲ್ಲೋ ಹೋಗಿ ಸಾಮೂಹಿಕವಾಗಿ ತಲೆ ಬೋಳಿಸಿಕೊಂಡು ಸಂಘಕ್ಕೆ ಶರಣಾದರಂತೆ/
ಸರಕಾರಿ ಸವಲತ್ತಿನ ವಿಚಾರ ಬಂದಾಗ ಮಾತ್ರ ಇವರಿಗೆಲ್ಲ ತಾವು ದಲಿತರೋ? ಇಲ್ಲಾ ಹೊಸ ಕಡೆ ಹೋಗಿ ಬಲಿತರೋ? ಅನ್ನೋದು ತಕ್ಷಣ ನೆನಪಾಗುತ್ತೆ....
ಒಟ್ಟಿನಲ್ಲಿ ನಮ್ಮ ಸುತ್ತಮುತ್ತಲೆಲ್ಲ ಇಂತಹ ಸಮಯಸಾಧಕ ಎಡಬಿಡಂಗಿಗಳದ್ದೇ ಸಂತೆ//

No comments: