ಅವಳ ಜೊತೆ ಅವನ ಕಥೆ....
"ಹಾದಿಗುಂಟ ಹಿಮದ ಹಾಸು
ಮುಗಿಯಲೊಲ್ಲದು ಚಳಿಗಾಳಿಯ ಬೀಸುˌ
ಬಾಳ ನೊಗಕ್ಕೆ ಬಿಗಿದ ಅಶ್ವದಂತಾಗಿರುವಾಗ ಜೀವನ
ಈ ಶಿಶಿರದ ಹಿಮನ ಹೊಡೆತವೆಲ್ಲ ಅಕ್ಷರಶಃ ತೃಣ."
ತನ್ನ ಹಾಗೂ ತನ್ನನ್ನ ನಂಬಿ ಬಂದವಳ ರಕ್ಷಣೆಯ ಹೊಣೆಯ ಭಾರ ಅವನದಾಗಿತ್ತು. ಹಾಗಂತ ಪಟ್ಟಣದ ಈ ವ್ಯವಹಾರ ನಿಮಿತ್ತ ಯಾತ್ರೆಯನ್ನೂ ಕಡೆಗಣಿಸವಂತಿರಲಿಲ್ಲ. ಇವೆಲ್ಲಾ ಕಾರಣಗಳಿಂದ ಅವನು ಅಂದು ಪಟ್ಟಣ ಮುಟ್ಟಿ ಬಾಕಿ ವಸೂಲಿಯ ಕೆಲಸ ಮೊದಲು ಮುಗಿಸಿ ಅನಂತರ ತನಗೆ ಈ ಚಳಿಗಾಲದಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಕಲ್ಲಿದ್ದಲು ಕೊಂಡುˌ ಉಳಿದಂತೆ ದಿನಸಿ ಪದಾರ್ಥಗಳನ್ನಷ್ಟು ಖರೀದಿಸಿ ಜೊತೆಗೆ ಔಷಧಿಗಳ ತಯಾರಿಕೆಗಾಗಿ ಚೂರು ಪೂರ್ವದ ಸಾಂಬಾರ ಪದಾರ್ಥಗಳನ್ನೂ ಕೊಂಡುಕೊಳ್ಳಬೇಕಿತ್ತು. ಅಷ್ಟರಲ್ಲಿ ಮಧ್ಯಾಹ್ನದ ಊಟದ ಹೊತ್ತಾಗಿರುವ ಸಂಭವವಿದ್ದುˌ ಕೊಟ್ಟ ಕೊನೆಗೆ ಅವಳು ಕೊಟ್ಟ ಪಟ್ಟಿಯಲ್ಲಿದ್ದ ಉಣ್ಣೆಯ ಉಂಡೆˌ ಕ್ರೋಷಾ ಕಡ್ಡಿˌ ಹೊಲಿಗೆಯ ನೂಲುˌ ಬೇರೆ ಬೇರೆ ಗಾತ್ರಗಳ ಸೂಜಿ ಹೀಗೆ ಅವಳ ಕರಕೌಶಲದ ಕೆಲಸದ ವಸ್ತುಗಳಲ್ಲವನ್ನೂ ಖರೀದಿಸಿ ಊರ ಕಡೆಗೆ ಹೊರಡಲೆಬೇಕಿತ್ತು. ಹಗಲು ಬೇರೆ ಕಿರಿದಾಗಿರುವ ಈ ಚಳಿಗಾಲದ ಶೀತ ಮಾರುತ ನಿರ್ದಯವಾಗಿ ಹಾಕಿ ಚಚ್ಚುತ್ತಿರುವ ವಿಷಮಕಾಲದಲ್ಲಿ ಎಷ್ಟು ಬೇಗ ಹಿಂದಿರುಗಿ ಮನೆಯತ್ತ ಮರುಪ್ರಯಾಣ ಆರಂಭಿಸಿದರೂ ಅಷ್ಟು ಒಳ್ಳೆಯದು ಎನ್ನುವ ಪರಿಸ್ಥಿತಿ ಇತ್ತು. ಹೀಗಾಗಿ ದಿಕ್ಸೂಚಿಯ ಮಾರ್ಗದರ್ಶನದಂತೆ ಮುನ್ನಡೆಯುತ್ತಾ ಸುಲ್ತಾನನನ್ನ ಅವನು ಆದಷ್ಟು ವೇಗವಾಗಿ ನಡೆಯುವಂತೆ ಹುರಿದುಂಬಿಸುತ್ತಲಿದ್ದ. ಆದರೆ ಕುದುರೆಯ ಪ್ರತಿಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿರದೆಯಿರೋದು ಅವನ ಅರಿವಿಗೆ ಬಂತು. ನಿತ್ಯದ ಆಹ್ಲಾದಮಯ ನಡುವಳಿಕೆ ಅಂದು ಅಶ್ವದಲ್ಲಿ ಕಾಣ ಸಿಗಲಿಲ್ಲ.
ಹೀಗೆ ಮುನ್ನಡೆಸುತ್ತಿದ್ದಾಗ ಸುಲ್ತಾನ ಇದ್ದಕ್ಕಿದ್ದಂತೆ ತನ್ನ ಮುಖ ಕೊಡವ ತೊಡಗಿದ. ಚಳಿಯ ತೀವೃತೆಗೆ ಉಸಿರೆ ಹಿಮಗಟ್ಟಿ ಮೂಗಿನ ಹೊಳ್ಳೆಗಳು ಮಂಜಿನಿಂದ ಮುಚ್ಚಿ ಹೋಗಿ ಉಸಿರಾಡಲು ಕಷ್ಟವಾಗುವಾಗ ಕುದುರೆಗಳು ಹೀಗೆ ವರ್ತಿಸುವುದು ಸಹಜ. ಕೂಡಲೆ ಕೆಳಗೆ ಹಾರಿದವನೆˌ ಸುಲ್ತಾನನ ಬೆನ್ನ ಮೇಲಿನ ಕೊಂಚ ಜಾರಿ ಹೋದಂತಿದ್ದ ಮಂದರಿಯನ್ನ ಇನ್ನಷ್ಟು ಸರಿಯಾಗಿ ಹೊದಿಸಿ ಬೆನ್ನಿಗೆ ಸಿಕ್ಕಿಸಿಕೊಂಡಿದ್ದ ಕಿರು ಸುತ್ತಿಗೆ ಹೊರಗೆಳೆದು ಅದರಿಂದ ಸುಲ್ತಾನನ ಮೂತಿ ಮೇಲೆತ್ತಿ ಅವನ ಮೂಗಿನ ಹೊಳ್ಳೆಯ ತುಂಬಿ ಹೋಗಿದ್ದ ಮಂಜನ್ನ ಬಿಡಿಸಿ ತೆಗೆಯ ತೊಡಗಿದ. ಬಲ ಹೊಳ್ಳೆ ತೆಗೆದವ ಎಡಗಡೆಯ ಹೊಳ್ಳೆಯದನ್ನೂ ಇನ್ನೇನು ಕೆರೆದು ತೆಗೆದು ಹೊರಗೆಳೆದು ತೆಗೆಯುವಷ್ಟರಲ್ಲಿ ಸುಲ್ತಾನ ಮತ್ತೆ ತಲೆಕೊಡವಿ ಇವನ ಹಿಡಿತ ಮೀರಿ ಬಲವಾಗಿ ಸೀನಿದ ಪರಿಣಾಮ ಕುದುರೆಯ ಮೂಗಿನ ಎಡಹೊಳ್ಳೆಗೆ ಕಟ್ಟಿಕೊಂಡಿದ್ದ ಹಿಮದ ಪರದೆ ತೂಬು ಒಡೆದ ಕೆರೆಯ ಕೋಡಿಯಂತೆ ಕಿತ್ತು ಎಗರಿ ಹೋದದ್ದಷ್ಟೆ ಅಲ್ಲದೆ ಅದರಿಂದ ಧಾರಾಳವಾಗಿ ಹಳದಿ ಲೋಳೆ ಲೋಳೆ ಸಿಂಬಳದ ಧಾರೆಯೆ ಮುನ್ನುಗ್ಗಿ ಸುರಿದು ಬಂತು. ಕೂಡಲೆ ಅದರ ಮುನ್ಸೂಚನೆ ಗ್ರಹಿಸಿ ಅವನು ಬಲಗಡೆ ಎಗರಿದನಾದರೂ ಸಿಂಬಳದ ಕೆಲವು ಹನಿಗಳ ಸಿಡಿತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
ಕುದುರೆ ಸಿಂಬಳದ ಧಾರೆ ಸುರಿಸುರಿಸುತ್ತಲೆ ಮತ್ತೊಮ್ಮೆ ಪ್ರಚೋದನೆಗೆ ಒಳಗಾದಂತೆ ಬಲವಾಗಿ ತಲೆಯಿತ್ತಿ ಸೀನಿತಾದರೂ ಅದೂ ಸಹ ಇನ್ನಷ್ಟು ಹಳದಿ ಹಸುರು ಲೋಳೆಯ ಒಡಕು ಹಾಲಿನಂತಹ ಗೊಣ್ಣೆಗಟ್ಟಿದ ಸಿಂಬಳವನ್ನ ಎಡಹೊಳ್ಳೆಯಿಂದಲೆ ಸುರಿಸುತ್ತಾ ನಿಂತಿತು. ಈಗ ಅವನಿಗೆ ಸುಲ್ತಾನನ ಅನ್ಯ ಮನಸ್ಕತೆಯ ಕಾರಣ ಹೊಳೆಯಿತು. ಪಾಪˌ ಶೀತಗಾಳಿಯ ಹೊಡೆತಕ್ಕೆ ಲಾಯದೊಳಗೆ ಬೆಚ್ಚಗೆ ಕೊಟ್ಟಿಗೆಯ ಇತರ ಪಶುಗಳ ಮೈ ಶಾಖ ಹಾಗೂ ಎಡೆಬಿಡದೆ ತಾನು ಉರಿಸುತ್ತಿರುವ ಅಗ್ಗಿಷ್ಟಿಕೆಯ ಹಿತವಾದ ಬೆಚ್ಚಗಿನ ವಾತಾವರಣದ ನಡುವೆಯೂ ಸುಲ್ತಾನನಿಗೆ ಶೀತವಾಗಿದೆ. ಅದರ ಬಾಧೆ ತಲೆಯವರೆಗೆ ಏರಿ ಸಿಂಬಳದ ಗಟ್ಟಿ ಹೊಳ್ಳೆಯುದ್ದ ಮೆದುಳ ತನಕ ಕಟ್ಟಿಕೊಂಡದ್ದೆ ಕುದುರೆ ಚಡಪಡಿಸುತ್ತಾ ಸರಿಯಾಗಿ ಉಸಿರಾಡಲಾಗದೆ ಹೇಗ್ಹೇಗೆಯೋ ಆಡುತ್ತಿರಲು ಕಾರಣ.
ಇದನ್ನ ಮೂಲದಲ್ಲೆ ಚಿವುಟಿ ಹಾಕಬೇಕು. ಇಲ್ಲದಿದ್ದರೆ ತಿಂಗಳುಗಟ್ಟಲೆ ಕುದುರೆ ಕಾಯಿಲೆ ಬೀಳುವ ಸಂಭವವಿತ್ತು. ಕುದುರೆಗಳು ದೈಹಿಕ ಕ್ಷಮತೆಯ ವಿಷಯಗಳಲ್ಲಿ ತುಂಬಾ ಸೂಕ್ಷ್ಮ. ಅವು ಅಷ್ಟು ಶ್ರಮಜೀವಿಗಳೋ ಅಷ್ಟೆ ಆರೋಗ್ಯದ ವಿಷಯದಲ್ಲಿ ಬೇಗ ಸೋಂಕುಗಳಿಗೆ ಬಲಿಯಾಗುತ್ತವೆ. ಮನುಷ್ಯರಂತೆ ಅವಕ್ಕೂ ಚಳಿ ಜ್ವರ ನೆಗಡಿ ಆಗೋದಿದೆ. ಹುಚ್ಚುನಾಯಿ ಅಥವಾ ಹಾವಿನ ಕಡಿತಕ್ಕೆ ಒಳಗಾಗುವ ಮನುಷ್ಯನ ಹಾಗೂ ಕುದುರೆಯ ಇಬ್ಬರ ಅನಂತರದ ನಡುವಳಿಕೆಗಳಲ್ಲೂ ಹೆಚ್ಚಿನ ಅಂತರವಿರುವುದಿಲ್ಲ. ಮಾನವರಂತೆಯೆ ಕುದುರೆಗಳೂ ಕೂಡ ಸೂಕ್ತ ಸಮಯದ ಮಿತಿಯಲ್ಲಿ ಸಿಗುವ ಚಿಕಿತ್ಸೆಗೆ ಸ್ಪಂದಿಸಿ ಸರಿಯಾದ ಔಷಧೋಪಚಾರಗಳಿಂದ ಚೇತರಿಸಿಕೊಳ್ಳುತ್ತವೆ. ಒಂದೊಮ್ಮೆ ವೈದ್ಯಕೀಯ ನೆರವಿನ ಅಲಭ್ಯತೆ ಎದುರಾದಲ್ಲಿ ಥೇಟ್ ಮಾನವರಂತೆಯೆ ನರಳುತ್ತಾ ಆ ರೋಗ ರುಜಿನ ವಿಷಪ್ರಾಶನದಿಂದ ಅಸಹಾಯಕವಾಗಿ ಸಾಯುತ್ತದೆ.
ಇವನಿಗೀಗ ಸುಲ್ತಾನನ ಆರೋಗ್ಯದ ವಿಚಾರವೆ ಮುಖ್ಯವಾಯಿತು. ಪೇಟೆ ಮನೆಗೆ ಹೋದ ಮೇಲೆ ಒಂದು ಹಂತಕ್ಕೆ ಚಿಕಿತ್ಸೆ ನೀಡಬಹುದಾಗಿದ್ದರೂˌ ಅದಿನ್ನೂ ಹನ್ನೆರಡು ಮೈಲಿ ಅಂತರದ ವಿಚಾರ. ತಕ್ಷಣಕ್ಕೆ ಸರಳ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಪ್ರಥಮ ಚಿಕಿತ್ಸೆ ನೀಡದಿದ್ದರೆ ಪರಿಸ್ಥಿತಿ ಕೈ ಮೀರುವ ಸಂಭವವೂ ಇದ್ದೆ ಇತ್ತು. ಆದರೆ ಅವನ ದುರಾದೃಷ್ಟಕ್ಕೆ ಅವರಿಬ್ಬರೂ ಈ ಹಿಂದುಮುಂದಿಲ್ಲದ ಹಿಮಧಾರೆಯಷ್ಟೆ ಖಚಿತವಾಗಿರುವ ಕಾಡ ಹಾದಿಯಲ್ಲಿ ಪ್ರಯಾಣದ ನಡುವೆ ಸಿಕ್ಕು ಹಾಕಿಕೊಂಡಿದ್ದರು. ಕೊಂಚ ಮೆದುಳಿಗೆ ಕೆಲಸ ಕೊಟ್ಟು ದಿಕ್ಸೂಚಿಯನ್ನ ತಿರುಗಿಸಿ ತಾನಿರುವ ನೆಲೆಯನ್ನ ಮನಸಿನೊಳಗೆ ಲೆಕ್ಕ ಹಾಕಿ ಖಚಿತ ಪಡಿಸಿಕೊಂಡವನಿಗೆ ಅಲ್ಲಿಂದ ಒಂದೂವರೆ ಮೈಲಿಯಷ್ಟು ದೂರ ಎಡಕ್ಕೆ ಇಲ್ಲಿನ ಸ್ಥಳಿಯ ಬುಡಕಟ್ಟಿನವರ ಹಾಡಿಯಿರುವುದು ನೆನಪಿಗೆ ಬಂತು. ಆ ಹಾಡಿಯ ಜನರೆಲ್ಲಾ ಈ ನವ ವಲಸೆಗಾರರ ಹಾವಳಿಯಿಂದ ಬೇಸತ್ತುˌ ಇವರ ಒತ್ತುವರಿಯನ್ನ ಪ್ರತಿಭಟಿಸಲಾರದೆ ತಮ್ಮ ನೆಲೆಯ ವ್ಯಾಪ್ತಿ ದಿನದಿಂದ ದಿನಕ್ಕೆ ಕಿರಿದಾಗುತ್ತಾ ಸಾಗಿˌ ತಮ್ಮ ಸಾಂಪ್ರದಾಯಿಕ ಸಂಚಾರದ ರಸ್ತೆಗಳ ಮೇಲೆಲ್ಲಾ ಹೊಸ ಹೊಲಮನೆಗಳೆದ್ದು ಅಲ್ಲಿ ನೆಲೆ ನಿಂತವರು ಬೇಲಿ ಬಿಗಿದು ಸಾಮಾನ್ಯ ಸಂಚಾರಿ ಮಾರ್ಗಗಳೂ ಸಹ ಮುಚ್ಚಿಹೋಗಿ ಕೆಂಗೆಟ್ಟಂತಾಗಿ ಕಡೆಗೆ ತಾವೆ ಈ ನಿರಂತರ ಕಿರುಕುಳಗಳಿಂದ ಬೇಸತ್ತವರಂತೆ ತಮ್ಮ ತಮ್ಮ ಗಂಟೂ ಮೂಟೆ ಕಟ್ಟಿಕೊಂಡು ಈ ಚಳಿಗಾಲ ಆರಂಭವಾಗುವ ಮೊದಲೆ ಆ ನೆಲೆಯನ್ನ ಶಾಶ್ವತವಾಗಿ ತೊರೆದು ಇನ್ನಷ್ಟು ಪಶ್ಚಿಮದ ಕಾಡುಗಳತ್ತ ಒಲ್ಲದ ಮನಸ್ಸಿನಿಂದಲೆ ಜನ ಜಾನುವಾರು ಸಹಿತ ವಲಸೆ ಹೋಗಿಯಾಗಿತ್ತು.
ಈಗ ಆ ಹಾಡಿ ಒಂಥರಾ ಯಜಮಾನರಿಲ್ಲದ ಮೌನ ಸ್ಮಶಾನದಂತಹ ಜಾಗವಾಗಿದೆ. ಸದ್ಯಕ್ಕೆ ಅಲ್ಲಿ ಯಾರೂ ವಾಸವಿಲ್ಲ. ಇವನೂ ಸಹ ಈಗಲ್ಲಿಗೆ ಹೋಗದೆ ವಿಧಿಯಿರಲಿಲ್ಲ. ಸಾಧಾರಣ ಶೀತ ವಿಪರೀತ ನೆಗಡಿಯಾಗಿ ಕುದುರೆಯ ಜೀವ ಹಿಂಡಿ ಹಿಪ್ಪೆ ಮಾಡುವುದನ್ನ ತಡೆಯಲು ಅದರ ಸಿಂಬಳದ ಲೋಳೆಗಳೆಲ್ಲವನ್ನ ತೊಳೆದು ತೆಗೆದು ಅನಂತರ ಪ್ರಥಮ ಚಿಕಿತ್ಸೆ ನೀಡಲು ಅವನಿಗೆ ಕೊಂಚ ಬಿಸಿನೀರಿನ ಅವಶ್ಯಕತೆಯಿತ್ತು. ಸುತ್ತಲೂ ನೀರಿನ ಗಟ್ಟಿಯೆ ಸುರಿದು ಹಿಮದ ರೂಪದಲ್ಲಿ ಶೇಖರಣೆಯಾಗಿದ್ದರೂ ಸಹ ಮನುಷ್ಯ ನೆಲೆಯೊಂದರಲ್ಲಿ ಸದ್ಯ ನೆರವನ್ನ ಹುಡುಕದೆ ಗತ್ಯಂತರವೆ ಇರಲಿಲ್ಲ. ಹಾಗೊಮ್ಮೆ ನಿರ್ಲಕ್ಷ್ಯ ವಹಿಸಿದರೆ ಪರಿಸ್ಥಿತಿ ಕೈಮೀರಿ ಹೋಗುವ ಸಂಭವವಿತ್ತು ಹಾಗೂ ರೈತನಷ್ಟೆ ಅಲ್ಲದೆ ಉತ್ತಮ ಗೌಳಿಯೂ ಅಶ್ವರೋಹಿಯೂˌ ರಥಿಕನೂ ಆಗಿದ್ದ ಅವನಿಗೆ ತನ್ನ ಕೊಟ್ಟಿಗೆಯ ಪಶುಗಳ ಆಯುರಾರೋಗ್ಯ ತನ್ನ ಕುಟುಂಬದ ಕ್ಷೇಮ ಸಮಾಚಾರದಷ್ಟೆ ಮುಖ್ಯವಾಗಿತ್ತು.
ನಿರುತ್ಸಾಹಿಯಂತಾಗಿದ್ದ ಸುಲ್ತಾನನ್ನ ಹುರಿದುಂಬಿಸುತ್ತಾ ಮುನ್ನಡೆಸುತ್ತಾ ಆತ ಆ ಹಾಡಿಯತ್ತ ಅಡ್ಡದಾರಿ ಹಿಡಿದು ಮುನ್ನಡೆದ. ಒಂದರ್ಧ ತಾಸು ಕಳೆಯುವಷ್ಟರಲ್ಲಿ ಅವರಿಬ್ಬರೂ ಆ ಹಾಡಿಯನ್ನ ಒಂದು ಮುಟ್ಟಿದ್ದರು.
***********
"ಜೀವಕಳೆ ಮರೆತಿತುˌ
ಪ್ರೇತಕಳೆಗೆ ಮರಳಿತು"
ಒಂದಾನೊಂದು ಕಾಲದಲ್ಲಿ ನಳನಳಿಸುತ್ತಾ ಅಜ್ಜಂದಿರ ಕೆಮ್ಮುˌ ಅಮ್ಮಂದಿರ ಲಾಲಿ ಬೈಗುಳ ಮುಚ್ಚಟೆˌ ಅಪ್ಪಂದಿರ ದಂಡನೆ ತರಬೇತಿ ಶಿಸ್ತುˌ ಹದಿ ಹರೆಯದವರ ಪ್ರೀತಿ ಪ್ರೇಮದ ಪ್ರಣಯ ಚೇಷ್ಟೆಗಳುˌ ಎಳೆಯರ ತುಂಟಾಟದ ಪರಮಾವಧಿˌ ಅಜ್ಜಿಯಂದಿರ ಕುಟ್ಟಾಣಿಯ ಸದ್ದುˌ ಅಡುಗೆ ಮನೆಗಳಲ್ಲಿ ರೊಟ್ಟಿ ತಟ್ಟುವ ಸದ್ದನ್ನ ಕೂಡಿ ಹಾಡಿಯೆಲ್ಲ ಪಸರಿಸುತ್ತಿದ್ದ ಶಿಕಾರಿಯಾದ ಸಾರಂಗದ್ದೊ ಇಲ್ಲಾ ಕಾಡೆಮ್ಮೆಯದ್ದೋ ಮಾಂಸ ಒಲೆಯ ಉರಿಯ ಮೇಲೆ ದೊಡ್ಡ ಮರಿಗೆಯಲ್ಲಿ ಬೇಯುತ್ತಿದ್ದ ಘಮ ಇವೆಲ್ಲಾ ತುಂಬಿ ಕಳೆಕಳೆಯಾಗಿದ್ದಿರಬಹುದಾದ ಹಾಡಿ ಪ್ರೇತ ಕಳೆ ಹೊತ್ತು ಚಳಿಯ ನಡುಕ ತಾಳಲಾರದೆ ಸ್ಮಶಾನ ಮೌನ ಹೊದ್ದು ಅವಸಾನದ ಕ್ಷಣಕ್ಕೋಸ್ಕರವೆ ಕಾಯುತ್ತಾ ನಿರ್ಜೀವ ಕಣ್ಗಳಲ್ಲಿ ಕನಸೆ ಇಲ್ಲದಂತೆ ಜೀವಚ್ಛವವಾಗಿ ಕೊಳಕು ಚಾಪೆಯೊಂದರ ಮೇಲೆ ದೀರ್ಘ ಶ್ವಾಸವನ್ನೆಳೆದುಕೊಳ್ಳುತ್ತಾ ಮಲಗಿರುವ ವಯೋವೃದ್ಧನಂತೆ ದೂರದಿಂದಲೆ ಗೋಚರಿಸುತ್ತಿತ್ತು.
ಇಡಿ ಹಾಡಿ ನರ ಮನುಷ್ಯರ ವಾಸವಿಲ್ಲದೆ ಬಿಕೋ ಅನ್ನುತ್ತಿತ್ತು. ಸೂಕ್ತ ನಿರ್ವಹಣೆಯ ಹೊರತಾಗಿಯೂ ಮಣ್ಣಿನ ಗೋಡು ಸರೋವರದ ಬದಿಯ ಹುಲ್ಲಿನ ಹೆಪ್ಪು ಸವರಿ ನಿರ್ಮಿಸಿದ್ದ ಗೋಡೆಗಳ ಮೇಲೆ ಸೀಳಿದ ಪೈನ್ ತೊಲೆಗಳನ್ನ ಏರಿಸಿ ಅದಕ್ಕೆ ಹಾಕಿದ್ದ ರೈ ಹುಲ್ಲಿನ ಛಾವಣಿಯ ಗುಡಿಸಲುಗಳು ಅಲ್ಲೊಂದು ಇಲ್ಲೊಂದು ಗೋಡೆ ಜರಿದದ್ದೋ ಇಲ್ಲವೆ ಚಳಿಗಾಳಿಗೆ ಛಾವಣಿ ಎಗರಿ ಹೋಗಿರೋದೋ ಬಿಟ್ಟರೆ ಬಾಕಿ ಉಳಿದಂತೆ ಭದ್ರವಾಗಿಯೆ ಇತ್ತು. ಅಂತಹ ಜರಿದಿದ್ದ ಗೋಡೆಯೊಂದರ ಒಳಗಿನ ಕೋಣೆಗೆ ಸುಲ್ತಾನನ್ನು ಇವನು ಮುನ್ನಡೆಸಿದ. ಆ ಗುಡಿಸಲುಗಳ ತಲೆ ಬಾಗಿಲುಗಳು ಮನುಷ್ಯರೆ ತಗ್ಗಿ ಬಗ್ಗಿ ಹೋಗುವಷ್ಟು ಕಿರಿದಾಗಿರುತ್ತಿದ್ದುˌ ಹಾಗೆಲ್ಲಾ ಕುದುರೆಗಳು ಪ್ರವೇಶಿಸಲು ಸಾಧ್ಯವೆ ಇಲ್ಲದಂತಿದ್ದವು. ಹೀಗಾಗಿ ಕುಸಿದು ಬಿದ್ದಿದ್ದ ಗೋಡೆಯೆ ಗತಿಯಾಯ್ತು ಒಳ ನುಗ್ಗಲು. ಒಳಗೆ ಹೊರಗಿನ ಹಿಮದ ಹೊಡೆತದ ಹೊರತಾಗಿಯೂ ತಕ್ಕಮಟ್ಟಿಗೆ ಬೆಚ್ಚಗಿನ ಹಿತಕರ ವಾತಾವರಣವೆ ಇತ್ತು. ಮನೆಯ ಒಳಗೆಲ್ಲಾ ಒಂಥರಾ ಆ ಬುಡಕಟ್ಟಿನವರ ಮೈ ಗಂಧದ ಘಮ ಇನ್ನೂ ಆವರಿಸಿಕೊಂಡೆ ಇದ್ದಂತೆ ಅವನಿಗೆ ಭಾಸವಾಯಿತು. ಅದಕ್ಕೂ ಹೊರತಾದ ಇನ್ಯಾವುದೋ ಸುಪರಿಚಿತ ವಾಸನೆ ಅವನ ಮೂಗಿಗೆ ಅಡರಿತು. ಹೌದು! ಇದು ಎಮ್ಮೆತೋಳಗಳದ್ದೆ ಮೈಯ ನಾತ. ತೋಳಗಳ ಮೈಗಂಧ ಹೆಚ್ಚು ಕಡಿಮೆ ಸಾಕು ನಾಯಿಗಳ ಮೈ ವಾಸನೆಯನ್ನೆ ಹೋಲುತ್ತದೆ. ಆದರೆ ಕಾಡುವಾಸಿಗಳಾದ ಅವುಗಳ ಮೈ ಗಂಧ ಮನೆಯ ನಾಯಿಗಳಿಂದಲೂ ಕಟುವಾಗಿರುತ್ತದೆ. ಅಂದರೆ ಇಲ್ಲಿಗೆ ತೋಳಗಳು ಇತ್ತೀಚೆಗೆ ಧಾಳಿಯಿಟ್ಟಿವೆ! ಸಾಮಾನ್ಯವಾಗಿ ಸ್ಥಳಿಯ ಬುಡಕಟ್ಟಿನವರದು ವನ್ಯಮೃಗಗಳ ಜೊತೆಗೆ ಸಹಬಾಳ್ವೆ. ಇತ್ತಂಡಗಳೂ ಇನ್ನೊಬ್ಬರ ವಾಸಸ್ಥಳದ ಗಡಿ ಮೀರದೆ ಒಬ್ಬರಿಗೊಬ್ಬರು ಹೊಂದಿಕೊಂಡೆ ಬದುಕುವುದನ್ನ ಕಲಿತು ಶತಮಾನಗಳಿಂದ ಸೌಹಾರ್ದಯುತವಾಗಿ ಬಾಳುತ್ತಲೂ ಇದ್ದರು. ತೋಳಗಳ ಸಹಜಾಹಾರವಾದ ಕಾಡಿನ ಕೆಲವು ಸಸ್ಯಾಹಾರಿ ಪ್ರಾಣಿಗಳನ್ನ ಬೇಟೆಯಾಡಿ ಅವುಗಳ ಅನ್ನದ ತಟ್ಟೆಗೆ ಮನುಷ್ಯ ಮೃಗ ಕೈ ಹಾಕುತ್ತಿದ್ದುದು - ಕೆಲವೊಮ್ಮೆ ಚರ್ಮದ ಅಗತ್ಯಗಳಿಗಾಗಿ ಎಮ್ಮೆತೋಳಗಳಲ್ಲೆ ಕೆಲವನ್ನ ಹೊಡೆದುರುಳಿಸಿ ಶಿಕಾರಿ ಮಾಡುತ್ತಿದ್ದುದನ್ನ ಬಿಟ್ಟರೆˌ ತೋಳಗಳು ತಾವಾಗಿ ಹಾಡಿಗಳತ್ತ ಸುಳಿಯೋದಾಗಲಿˌ ಮನುಷ್ಯ ಅವಾಸದ ಸುತ್ತಮುತ್ತ ಹೊಂಚು ಹಾಕಿ ಅವರ ಸಾಕೆಮ್ಮೆˌ ದನˌ ಕುರಿˌ ಮೇಕೆˌ ಹಂದಿಗಳನ್ನ ಹಿಡಿದು ಕೊಂದು ತಿಂದದ್ದಾಗಲಿ ಅಲ್ಲಿನ ಇತಿಹಾಸದಲ್ಲೆ ಕಂಡು ಕೇಳರಿಯದ ಸಂಗತಿಯಾಗಿತ್ತು! ಈ ಆಕ್ರಮಣಕೋರ ನವ ವಸಾಹತುಶಾಹಿಗಳು ದೂರದ ನಾಡಿನಿಂದ ಬಂದು ಇಲ್ಲಿಯ ಭೂಮಿಯ ಹಾಗೂ ನೈಸರ್ಗಿಕ ಸಂಪತ್ತುಗಳ ಮೇಲೆ ತಮ್ಮ ಹಕ್ಕು ಸಾಧಿಸುವ ತನಕ.
ಇದ್ದಕ್ಕಿದ್ದಂತೆ ಜನಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗಿ ಕ್ರಮೇಣ ಒಳನಾಡುˌ ಗುಡ್ಡಗಾಡು ಪ್ರದೇಶಗಳತ್ತಲೂ ಜನಸಾಂದ್ರಂತೆ ಒತ್ತಿಕೊಂಡು ಬಂತು. ಅವರೆಲ್ಲರೂ ರೈತಾಪಿ ಹಾಗೂ ಕಾರ್ಮಿಕ ವರ್ಗದವರಾಗಿದ್ದರು. ಮಾಂಸ ಹಾಗೂ ಚರ್ಮಕ್ಕೆ ಶಿಕಾರಿ ವಿಪರೀತ ಹೆಚ್ಚಿತುˌ ಈ ಹಿಂದೆ ಆದಿವಾಸಿಗಳು ಬೇಟೆಯಾಡಿದರೂ ಈ ವಸಾಹತು ಹೂಡಲು ಬಂದವರಷ್ಟು ನಿರ್ದಯವಾಗಿ ಬಂದೂಕು ಬಳಸಿ ಅಗತ್ಯ ಮೀರಿ ವನ್ಯಜೀವಿಗಳನ್ನ ಅವರೆಂದೂ ಕೊಂದು ರಾಶಿ ಹಾಕಿರಲಿಲ್ಲ. ಹೀಗಾಗಿ ಒಂದು ಸ್ಥಿರತೆ ಅವುಗಳ ಸಂಖ್ಯೆಯಲ್ಲೂ ಉಳಿದಿತ್ತು. ಈಗ ಅದೆಲ್ಲಾ ತಲೆ ಕೆಳಗಾಗಿ ಬೇಟೆಯಾಡುವ ಹಿಂಸೃಕ ಪ್ರಾಣಿಗಳ ಸಂಖ್ಯೆಗಿಂತ ಅವುಗಳ ಬೇಟೆಯಾಗಿದ್ದ ಸಾಧು ಪ್ರಾಣಿಗಳ ಸರಾಸರಿ ಶೋಚನೀಯವಾಗಿ ಕುಸಿದು ಎಮ್ಮೆತೋಳಗಳು ಮೇಯಿಸಲು ಬಿಟ್ಟ ಸಾಕು ಪ್ರಾಣಿಗಳನ್ನ ಹೊತ್ತೊಯ್ಯುವ ದೈನೇಸಿ ಸ್ಥಿತಿಗೆ ಬಂದು ಮುಟ್ಟಿದವು. ಗುಂಪುಗುಂಪಾಗಿ ಚಲಿಸುವ ಗುಣದ ಅವು ಕೆಲವೊಮ್ಮೆ ತಮ್ಮ ಸುಷುಪ್ತಿಯಲ್ಲಿ ಅಚ್ಚಾಗಿರುವ ಪರಿಧಿಯ ದಾರಿಗಳಿಗೆ ಅಡ್ಡಲಾಗಿ ಎದ್ದ ತೋಟದ ಮನೆಗಳಿಂದ ಭದ್ರವಾದ ವ್ಯವಸ್ಥೆಯಿಲ್ಲದ ಕೊಟ್ಟಿಗೆˌ ರೊಪ್ಪ ಹಾಗೂ ಲಾಯಗಳಿಗೂ ದಾಳಿಯಿಟ್ಟು ಕುರಿˌ ಕರುˌ ಕುದುರೆಮರಿˌ ಹಂದಿˌ ಕೋಳಿˌ ಬಾತು ಹೀಗೆ ಸಿಕ್ಕಿದ್ದನ್ನ ಸಿಗಿದು ತಿನ್ನುವ ಲೂಟಿಗೂ ಇಳಿದವು. ಇದು ಸಹಜವಾಗಿ ಮನುಷ್ಯ ಹಾಗೂ ಮೃಗಗಳ ನಡುವಿನ ತಿಕ್ಕಾಟ ಹಾಗೂ ನಿರಂತರ ಸಂಘರ್ಷಕ್ಕೆ ಮೂಲವಾಯಿತು. ಇದರ ಸಂಪೂರ್ಣ ಹೊಣೆಗಾರಿಕೆಯೂ ಮಾನವ ಮೃಗದ್ದೆ ಆಗಿತ್ತು ಎನ್ನುವುದನ್ನ ಬಿಡಿಸಿ ಹೇಳಬೇಕಿಲ್ಲ. ತಾನು ಮಾಡಿದ್ದನ್ನೆ ಮುಂದವನು ಉಣ್ಣುತ್ತಿದ್ದ ಅಂತ ಇಟ್ಕಳಿ. ಆದರೆ ಇದೆಲ್ಲದರ ನಡುವೆ ಸ್ಥಳಿಯ ಬುಡಕಟ್ಟಿನ ಜನರಂತೆ ತೋಳಗಳೂ ಸ್ಥಳಿಯ ಕಾಡನ್ನ ತೊರೆದು ಪಶ್ಚಿಮದ ಕಡೆಗೆ ಸಾಮೂಹಿಕ ವಲಸೆ ಹೂಡಲಾರಂಭಿಸಿದ್ದವು. ಅದಕ್ಕೆ ಮಾತ್ರ ಯಥಾಪ್ರಕಾರ ಅವುಗಳ ತುಪ್ಪಟ ಹಾಗೂ ಚರ್ಮಗಳ ದುರಾಸೆಗೆ ಈ ವಸಾಹತು ಹೂಡಲು ಬಂದವರು ನೇರ ಬೇಟೆಯ ಸಂಹಾರಕ್ಕೆ ಇಳಿದದ್ದೆ ಕಾರಣ. ಪ್ರಾಣಿಗಳಾದರೇನು? ಅವುಗಳಿಗೂ ಅಳಿವಿನಂಚಿಗೆ ಬಂದಾಗ ಪರಾರಿಯಾಗಿಯಾದರೂ ಉಳಿಯುವಷ್ಟು ಉಪಾಯ ತೋಚದೆ ಹೋದೀತೆ ಹೇಳಿ?
ಬಹುಶಃ ವಾರಗಳೆರಡರ ಹಿಂದೆ ಇಲ್ಲಿಗೆ ಎಮ್ಮೆತೋಳಗಳ ಹಿಂಡು ಬಂದು ಹೋಗಿರಬಹುದು ಎನ್ನುವುದನ್ನವನು ಗ್ರಹಿಸಿದ. ಒಣಗಿ ಗಟ್ಟಿಯಾಗಿದ್ದ ಅವುಗಳ ಉಚ್ಛಿಷ್ಠ ಅದನ್ನ ಖಚಿತ ಪಡಿಸಿದವು.
ಕುದುರೆಯ ಬೆನ್ನ ಮೇಲಿಂದ ಕೆಳಗಿಳಿದು ಸುಲ್ತಾನನ್ನ ಗೂಟವೊಂದಕ್ಕೆ ಬಿಗಿದವನೆ ಪಾತ್ರೆ ಪಗಡಗಳೇನಾದರೂ ಅಲ್ಲಿದಾವ ಎಂದು ಹುಡುಕಿದ. ಮೂರು ಗುಡಿಸಲು ದಾಟಿ ತಡಕಾಡಿದವನಿಗೆ ಆ ಬುಡಕಟ್ಟಿನ ಮಂದಿ ಹೊತ್ತೊಯ್ಯಲಾಗದೆ ಬಿಟ್ಟು ಹೋಗಿದ್ದ ಮಣ್ಣಿನ ಮರಿಗೆಗಳು ಸಿಕ್ಕವು. ಕೊಂಚ ಪುರುಳೆಗಳೂˌ ಕಲ್ಲಿದ್ದಲ ಗಟ್ಟಿಗಳೂ ಅದ್ಯಾವುದೋ ಜೋಪಡಿಯ ಒಲೆಯ ಬಳಿ ಅನಾಥವಾಗಿ ಬಿದ್ದದ್ದು ಕಣ್ಣಿಗೆ ಬಿತ್ತು. ಕಲ್ಲಿದ್ದಲಂದರೇನೆಂದೆ ಅರಿವಿರದ ಈ ಅನಾಗರೀಕ ಜನರ ಜೋಪಡಿಯಲ್ಲಿ ಇದನ್ನ ಕಂಡು ಅವನಿಗೆ ವಿಸ್ಮಯವಾಯಿತು. ಅದು ಹೇಗೆಯೋ ರೈಲು ರಸ್ತೆ ಹಾಸಲು ಬಂದಿದ್ದ ಕೂಲಿಗಳ ಜೊತೆ ಸಮನ್ವಯ ಸಾಧಿಸಿದ್ದ ಅವರು ತಾವು ಮನೆಯಲ್ಲೆ ಕೊಳೆಹಾಕಿ ತಯಾರಿಸಿದ್ದ ಒಳ್ಳೆಯ ರೈ ಹುಳಿ ಹೆಂಡವನ್ನು ಪಾನಪ್ರಿಯರಾದ ಅವರಿಗೆ ಕೈ ದಾಟಿಸಿ ಅದಕ್ಕೆ ಬದಲಾಗಿ ಆವರೆಗೂ ತಾವು ಕಂಡರಿತಿರದ ಕಲ್ಲಿದ್ದಲನ್ನ ಅವರಿಂದ ವಿನಿಮಯ ರೂಪದ ಇನ್ನಿತರ ವಸ್ತುಗಳ ಜೊತೆಗೆ ಪಡೆದಿರುವ ಸಂಗತಿ ಅವನಿಗೆ ಗೊತ್ತೆ ಇರಲಿಲ್ಲ.
ಹಾಗೆ ರಾಶಿ ರಾಶಿ ಕಲ್ಲಿದ್ದಲನ್ನ ಪಡೆದುಕೊಂಡಿದ್ದರೂ ಸಹ ಅದರ ಸಮರ್ಪಕ ಬಳಕೆಯ ಓನಾಮ ಗೊತ್ತಿಲ್ಲದೆ ನಿರುಪಯುಕ್ತ ವಸ್ತು ಎಂದೆ ಪರಿಗಣಿಸಿದ ಅವರೆಲ್ಲˌ ಅಸಡ್ಢೆಯಿಂದ ಅದನ್ನ ತಮ್ಮ ತಮ್ಮ ಗುಡಿಸಲುಗಳ ಅಡುಗೆ ಒಲೆಗೆ ಹತ್ತಿರದ ಮೂಲೆಗಳಲ್ಲಿ ಕಲ್ಲಿದ್ದಲನ್ನ ರಾಶಿ ಹಾಕಿಟ್ಟುˌ ಹಾಡಿ ತೊರೆದು ಹೋಗುವಾಗಲೂ ಜೊತೆಯಲ್ಲಿ ಕೊಂಡೊಯ್ಯದೆ ಅಸಡ್ಡೆ ಮಾಡಿ ಬಿಟ್ಟು ಹೋಗಿದ್ದರು. ಇವನ ಪುಣ್ಯಕ್ಕೆ ಅಷ್ಟು ಕಲ್ಲಿದ್ದಲು ಅದೊಂದೆ ಹಾಡಿಯಲ್ಲಿ ಕಂಡದ್ದೆ ಬಂಪರ್ ಲಾಟರಿ ಹೊಡೆದಂತಾಗಿತ್ತು ಅವನಿಗೆ. ಈಗವನು ಬಿಸಿನೀರಿಗೂ ಪರದಾಡಬೇಕಿರಲಿಲ್ಲ.
**********
ಮುಂದೆಂದಾದರೂ ಇಲ್ಲಿಗೆ ಬಂದು ಸಮ್ಮನೆ ರಾಶಿ ಬಿದ್ದು ಹಾಳಾಗುತ್ತಿರುವ ಆ ಅನಾಥ ಕಲ್ಲಿದ್ದಲನ್ನ ಗಂಟು ಮೂಟೆ ಕಟ್ಟಿಕೊಂಡು ಸಾಗಿಸುವ ಹಂಚಿಕೆಯನ್ನವನು ಮನದೊಳಗೆ ಹಾಕಿದ. ಅಲ್ಲಿರುವ ದಾಸ್ತಾನು ತೀರಾ ದುಂದುವೆಚ್ಚ ಮಾಡಿ ಉರಿಸಿದರು ಸಹ ಇನ್ನೂ ಐದು ವರ್ಷಗಳ ಚಳಿಗಾಲ ಕಳೆಯಲು ಅವನಿಗೆ ಸಾಕಾಗುವಷ್ಟಿತ್ತು.
ಸದ್ಯ ಪೇಟೆಯಿಂದ ಕಾಸು ಕೊಟ್ಟು ಕೊಂಚ ಕಲ್ಲಿದ್ದಲನ್ನ ಅದೂ ಹೊತ್ತುಕೊಂಡು ಬರುವ ಶ್ರಮ ತಪ್ಪಿತು ಎಂದವನು ಖುಷಿ ಪಟ್ಟ. ಈಗ ಸುಲ್ತಾನನ ಆರೈಕೆ ಮಾಡುವುದು ಆದ್ಯತೆಯಾಗಿತ್ತು ಹೀಗಾಗಿ ಅವುಗಳಲ್ಲೆ ಕೆಲವನ್ನು ಪುರುಳೆಗಳೊಂದಿಗೆ ಆಯ್ದು ಅಲ್ಲೆ ಬಿದ್ದಿದ್ದ ಚಕಮಕಿ ಕಲ್ಲುಗಳನ್ನ ಎತ್ತಿಕೊಂಡು ಮರಿಗೆಗೆ ತುಂಬಿಸಿ ಕುದುರೆ ಕಟ್ಟಿ ಬಂದಿದ್ದ ಗುಡಿಸಿಲ ಕಡೆಗೆ ಹೆಜ್ಜೆ ಹಾಕಿದ.
ಹೊರಗೆ ಬಿದ್ದಿದ್ದ ಹಿಮದಲ್ಲೆ ಸ್ವಲ್ಪ ಮರಿಗೆಗೆ ತುಂಬಿಸಿಕೊಂಡು ಬಂದವ ಒಲೆಯ ಮೇಲೆ ಅದನ್ನಿರಿಸಿ ಚಕಮಕಿ ಕಲ್ಲಿನಿಂದ ಪುರಳೆ ಹೊತ್ತಿಸಲು ಹವಣಿಸಿದˌ ತೀರಾ ಥಂಡಿಯಾಗಿದ್ದರಿಂದಲೋ ಏನೋ ಕಲ್ಲುಗಳಿಂದ ಅದೆಷ್ಟೆ ಕುಟ್ಟಿದರೂ ಕಿಡಿ ಏಳಲಿಲ್ಲ. ಪ್ರಯತ್ನ ಬಿಡದೆ ಚಕಮಕಿ ಕಲ್ಲುಗಳನ್ನ ಚೆನ್ನಾಗಿ ನೆಲಕ್ಕೆ ಹಾಕಿ ಉಜ್ಜಿ ಬಿಸಿಯೇರಿಸಿ ಮತ್ತೆ ಪ್ರಯತ್ನಿಸಿದಾಗ ಪುರುಳೆ ರಾಶಿಗೆ ಕಿಡಿ ಹಾರಿ ಕಡೆಗೂ ಹೊಗೆಯೆದ್ದಿತು. ಮೆಲ್ಲಗೆ ಊದಿ ಕಲ್ಲಿದ್ದಲನ್ನೂ ಒಟ್ಟಿಗೆ ಸೇರಿಸಿ ಕಡೆಗೂ ಒಲೆಯ ಒಡಲಲ್ಲಿ ಸರಿಯಾಗಿ ಜ್ವಾಲೆ ಪ್ರಜ್ವಲಿಸುವಂತೆ ಮಾಡಿದ. ಬೆಂಕಿಯ ಶಾಖಕ್ಕೆ ಒಡ್ಡಿಕೊಂಡ ಮೈ ಕೈಗೆ ತುಂಬಾ ಹಿತಾನುಭಾವ ದೊರಕಿದಂತಾಯಿತು. ಬೆನ್ನ ಚೀಲದಲ್ಲಿ ಕೊಂಚ ಚಹಾದ ಎಲೆಗಳನ್ನ ಕಟ್ಟಿಕೊಂಡು ಬಂದಿದ್ದˌ ಸ್ವಲ್ಪ ಚಹಾ ಹೀರಿ ಚಳಿಗೆ ಮರಗಟ್ಟಿದಂತಾಗಿರುವ ದೇಹದ ನರನಾಡಿಗಳಲ್ಲೂ ಚೈತನ್ಯದ ನೆತ್ತರು ಪ್ರವಹಿಸುವಂತಾಗಿಸಲು ಮನಸು ಮಾಡಿ ಅಲ್ಲೆ ಬಿದ್ದಿದ್ದ ಕುಡಿಕೆಯೊಂದನ್ನಾಯ್ದು ನಿಧಾನವಾಗಿ ನೀರಾಗುತ್ತಿದ್ದ ಹಿಮದಲ್ಲಿ ಗಾಳಿಸಿ ತೊಳೆದು ಕೊಂಚ ಹಿಮ ಜೊತೆಗಿಷ್ಟು ಚಹಾ ಸೊಪ್ಪು ಸುರಿದು ಪಕ್ಕದ ಒಲೆಗೂ ಉರಿ ವಿಸ್ತರಿಸಿ ಕುದಿಯಲಿಟ್ಟ.
ನೀರು ಕುದಿಯಲು ಆ ಕಡು ಚಳಿಯ ವಾತಾವರಣದಲ್ಲಿ ಸಮಯ ತಗುಲುವುದು ಸಹಜˌ ಅದೆಷ್ಟೆ ಕುದಿಬಿಂದುವನ್ನ ತಲುಪಿದರೂ -೨೦ ರಿಂದ -೩೫ರ ತನಕವೂ ಜಾರುವ ಉಷ್ಣತೆಯ ವಿಪರೀತ ಹವಾಮಾನದ ವೇಪರೀತ್ಯದಲ್ಲಿ ಆ ಕುದಿನೀರು ಕೂಡ ಮರಗಟ್ಟಿ ಹೋದ ಹಾಗಿರುವ ಜಡವಾಗುವತ್ತ ಸಾಗಿರುವ ದೇಹಕ್ಕೆ ಬೆಚ್ಚಗಿನ ಭಾವ ಕೊಡಬಲ್ಲದು. ಮನುಷ್ಯರ ಹಾಗೆ ಪ್ರಾಣಿಗಳಿಗೂ ಸಹ. ಸುರಿದ ಸಿಂಬಳದ ಲೋಳೆಯೂ ಚಳಿಗೆ ಗಂಟುಗಟ್ಟಿದ ಹಾಗೆ ಗಟ್ಟಿಯಾಗಿ ಹೋಗಿರುವ ಸುಲ್ತಾನನ ಮುಸುಡಿ ಕೂಡ ಬಿಸಿನೀರಿನಿಂದ ತೊಳಿಸಿಕೊಂಡು ಶುದ್ಧವಾಗಲು ಕಾತರಿಸುತ್ತಿತ್ತು.
ಬಿಸಿ ನೀರಿನ್ನ ಮೊಗೆ ಮೊಗೆದು ಚೋಪಿ ಚೂರೂ ಅಸಹ್ಯ ಪಡದೆ ಅವನು ಮೆಲ್ಲನೆ ಸುಲ್ತಾನನ ಮೂತಿಯ ಸುತ್ತ ಹರಡಿದ್ದ ಸಿಂಬಳವನ್ನ ತೊಳೆದು ತೆಗೆದು ಕೈ ಬಟ್ಟೆಯಲ್ಲಿ ಒರಸಿದ. ಕುದುರೆಯ ಮೇಲ್ತುಟಿಗೂ ಸಿಂಬಳದ ಒಡಕು ಹಾಲಿನಂತಹ ಗಲೀಜು ಅಂಟಿಕೊಂಡು ಕಲ್ಲಿನಂತಾಗಿ ಹೋಗಿತ್ತು. ಹುಷಾರಾಗಿ ಅದನ್ನ ನೀರು ಸೋಕಿಸಿ ಮೆದುವಾಗಿಸಿ ತಿಕ್ಕಿ ತೊಳೆದು ತೆಗೆಯದೆ ಬಲ ಪ್ರಯೋಗಿಸಿ ಕೀಳಲು ಹವಣಿಸಿದರೆ ತುಟಿಯ ಮೃದು ಚರ್ಮಕ್ಕೆನೆ ಹಾನಿಯಾಗುವ ಸಕಲ ಸಾಧ್ಯತೆಗಳೂ ಇದ್ದವು. ಹೀಗಾಗಿ ಜೋಪಾನವಾಗಿ ನಯ ನಾಜೂಕಿನಿಂದ ಲೋಳೆ ಸಿಂಬಳವನ್ನೆಲ್ಲ ತೊಳೆದು ತೆಗಿಯವಷ್ಟರಲ್ಲಿ ಅವನ ಜಾಣ್ಮೆಯೆಲ್ಲಾ ಉಪಯೋಗಿಸಬೇಕಾಗಿ ಬಂತು.
ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಚರ್ಮದ ಸೊಂಟಪಟ್ಟಿಯಲ್ಲಿದ್ದ ಸಣ್ಣ ಸಂದೂಕದಲ್ಲಿರಿಸಿಕೊಂಡಿದ್ದ ಪೂರ್ವದ ಭಾರತದಿಂದ ತರಿಸಿದ್ದ ಘಾಟು ಹೊಗೆಸೊಪ್ಪಿನ ನಶ್ಯದ ಪುಡಿ ತೆಗೆದು ಚಿಟಿಕೆಯಷ್ಟನ್ನ ಹೆಬ್ಬೆರಳು ಮತ್ತು ತೋರು ಬೆರಳ ಮಧ್ಯೆ ಹಿಡಿದು ತೆಗೆದವನೆ ಸುಲ್ತಾನ ಉಸಿರೆಳೆದುಕೊಳ್ಳುವ ಕ್ಷಣವನ್ನೆ ಕಾದು ಅವನ ಮೂಗಿನ ಎರಡೂ ಹೊಳ್ಳೆಗಳಿಗೆ ಹಾಕಿ ತುಂಬಿದ. ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಿದ್ದ ಕುದುರೆಯ ನೆತ್ತಿಗೆ ನಶ್ಯದ ಘಾಟು ಮುಟ್ಟಿದ್ದೆ ತಡ ಎಗರೆಗರಿ ತಲೆ ಕೊಡವುತ್ತಾ ಕುದುರೆ ಸರಣಿ ಸೀನುಗಳನ್ನ ಸೀನ ತೊಡಗಿತು. ಅದರ ಪ್ರತಿ ಸೀನಿಗೂ ಎರಡೂ ಹೊಳ್ಳೆಗಳಿಂದ ಗರಣೆಗಟ್ಟಿದ ಹಸಿರು ಹಳದಿ ಒಡಕಿನ ಸಿಂಬಳದ ಧಾರೆ ಧಾರೆ ಕಿತ್ತುಕೊಂಡು ಬಂದು ನೆಲದ ತುಂಬೆಲ್ಲಾ ಗುಪ್ಪೆ ಗುಪ್ಪೆಯಾಗಿ ಹರಡಿಕೊಂಡು ಸೀನಿನ ಸರಣಿ ಮುಗಿದು ತಲೆಕೊಡವಿದಾಗ ಕುದುರೆಗೆ ಒಂಥರಾ ಸುಖಾನುಭಾವವಾಯಿತು. ಅದರ ನೆತ್ತಿ ಹತ್ತಿದ್ದ ಶೀತದ ಸೋಂಕು ಬುಡ ಸಹಿತ ಕಿತ್ತು ಹೊರ ಚಲ್ಲಿ ಅದರ ತಲೆಭಾರ ಇಳಿದು ಹೋಗಿತ್ತು. ಮತ್ತೆ ಬಿಸಿನೀರನ್ನ ಹಿತವಾಗಿ ಚೋಪಿ ಅವನು ಆ ತಾಜಾ ಲೋಳೆಯ ಸಿಂಬಳದ ಮುಖ ತೊಳಿಸಿ ಅದರ ಹಿತಾನುಭಾವವನ್ನ ಮತ್ತಷ್ಟು ಹೆಚ್ಚಿಸಿದ. ಒಣ ಬಟ್ಚೆಯಲ್ಲಿ ತೊಳೆಸಿದ ಮೂತಿ ಒರೆಸಿದ ನಂತರ ಸೊಂಟಪಟ್ಟಿಯ ಸಂದೂಕದಿಂದ ತೆಗೆದ ಕಿರುಕುಪ್ಪಿಯಲ್ಲಿದ್ದ ಕಚ್ಚಾ ನೀಲಗಿರಿ ಎಣ್ಣೆಯ ನಾಲ್ಕಾರು ಹನಿಗಳನ್ನ ಕುದುರೆಯ ಎರಡೂ ಮೂಗಿನ ಹೊಳ್ಳೆಗಳಿಗೆ ಸೋಕಿಸಿದ. ಶ್ವಾಸದೊಂದಿಗೆ ನೀಲಗಿರಿಯ ಘಮವನ್ನೂ ಉಸಿರಾಡಿದ ಸುಲ್ತಾನ ಮತ್ತಷ್ಟು ಹಗುರ ಭಾವ ಅನುಭವಿಸುತ್ತಾ ಎಂದಿನ ಲವಲವಿಕೆಗೆ ಮರಳ ತೊಡಗಿದ. ಪಟ್ಟಣ ಸೇರಿ ಗೊಟ್ಟದಲ್ಲಿ ಚಳಿಗೆ ತಕ್ಕ ಔಷಧಿಯನ್ನ ಗಾಡಿಖಾನೆಯಲ್ಲಿ ಏರಿಸಿದರೆ ಅವನ ಶೀತದ ಬಾಧೆ ಸಂಪೂರ್ಣ ಹಿಡಿತಕ್ಕೆ ಬರುವುದರಲ್ಲಿ ಯಾವ ಸಂಶಯವೂ ಈಗ ಉಳಿದಿರಲಿಲ್ಲ. ಪಟ್ಟಣ ಮುಟ್ಟುವ ತನಕ ಈ ಪ್ರಥಮ ಚಿಕಿತ್ಸೆ ಖಂಡಿತವಾಗಿ ಅವನನ್ನ ಸ್ವಸ್ಥವಾಗಿರಿಸುತ್ತಿತ್ತು.
ಕುದುರೆಯ ಆರೈಕೆ ಮುಗಿಸಿದವನೆˌ ಅದೆ ನೀರು ಮೊಗೆದ ಕೈ ಪಾತ್ರೆಗೆ ಸುಲ್ತಾನನ ಕುತ್ತಿಗೆಯ ಜೋಳಿಗೆಯಲ್ಲಿದ್ದ ಹುರುಳಿಯೊಂದು ಹಿಡಿ ಓಟ್ಸ್ ಒಂದು ಹಿಡಿ ಸೊಂಟಪಟ್ಟಿಯ ಸಂದೂಕದಿಂದ ತೆಗೆದ ನಾಲ್ಕು ಕಾಳು ಭಾರತದ ಕಾಳು ಮೆಣಸು ಕುಟ್ಟಿ ಹಾಕಿ ಕುದಿಯಲು ಇಟ್ಟುˌ ಹಬೆಯೇರುತ್ತಿದ್ದ ಚಹಾವನ್ನ ಬಿಸಿಯಾರಿಸುತ್ತಾ ಗುಟುಕು ಗುಟುಕಾಗಿ ಹೀರುತ್ತಾ ತನ್ನ ಮೈ ಮನಕ್ಕೆ ಉಲ್ಲಾಸದ ಔಷಧಿ ಏರಿಸ ತೊಡಗಿದ. ಕಡುಚಳಿಗೆ ಹಾಲು ಸಕ್ಕರೆ ಸೇರಿಸದ ಕುದ್ದು ಕುದ್ದು ಕಂದು ಕಷಾಯವಾಗಿದ್ದ ಕಹಿ ರುಚಿಯ ಕಣ್ಣಾ ಚಹ ಹೊಸ ಹುಮ್ಮಸ್ಸಿನ ಗಣಿಯಂತೆ ಅವನಿಗೆ ಅನಿಸ ಹತ್ತಿತು. ಬೆಂದ ಹುರುಳಿ ಓಟ್ಸಿನ ಮಿಶ್ರಣವನ್ನ ಕೊಂಚ ಬಿಸಿಯಾರಿಸಿ ಬೆಚ್ಚಗಿರುವಾಗಲೆ ಅದನ್ನ ಕುದುರೆಯ ಬಾಯಿಚೀಲಕ್ಕೆ ತುಂಬಿಸಿ ಸುಲ್ತಾನನ ಮೂತಿಗೆ ಬಿಗಿದ.
ಅದರ ಬೆಚ್ಚನೆ ಹಬೆಗೆ ಮೂಗು ಮತ್ತೆ ಕಟ್ಟಿಕೊಳ್ಳದಿರಲಿ ಅನ್ನೋದು ಮೊದಲ ಕಾರಣವಾಗಿದ್ದರೆˌ ಹಾದಿಯದ್ದ ಅವನ ನೆಚ್ಚಿನ ತಿನಿಸನ್ನ ಮೆಲ್ಲುತ್ತಲಿದ್ದರೆ ತಕರಾರಿಲ್ಲದೆ ಮುಂದೆ ಮುಂದೆ ಹೆಜ್ಜೆ ಹಾಕುತ್ತಾ ಆದಷ್ಟು ಬೇಗ ಪಟ್ಟಣವನ್ನ ಹೋಗಿ ಮಟ್ಟಬಹುದು ಅನ್ನುವ ಹಂಚಿಕೆಯೂ ಅದರ ಹಿಂದಿತ್ತು. ಅದಾಗಲೆ ಈ ಕಿರು ವೈದ್ಯದ ಕಾರಣ ಅಮೂಲ್ಯವಾದ ಸುಮಾರು ಎರಡು ತಾಸು ಅಲ್ಲಿ ಕಳೆದು ಹೋಗಿತ್ತು. ಮತ್ತೆ ಕುದುರೆಯನ್ನೇರಿ ಪಟ್ಟಣದ ಹಾದಿಯನ್ನವನು ಹಿಡಿದ. ಬೆನ್ನ ಹಿಂದೆ ದೂರಾಗುತ್ತಾ ಬಂದ ಹಾಡಿ ಯಾರದ್ದೋ ಅನಾಥ ಗೋರಿಯಂತೆ ನಿರ್ಲಿಪ್ತವಾಗಿ ನಿಂತಿದ್ದು ಅವರಿಬ್ಬರನ್ನೂ ಬೀಳ್ಕೊಟ್ಟು ಮತ್ತೆ ಮೌನದಂಚಿಗೆ ಜಾರಲು ಸನ್ನದ್ದವಾಯಿತು. ಮುಂದಿನ ಭವಿಷ್ಯದಲ್ಲಿ ಯಾರೂ ಬಂದು ವಾಸ ಮಾಡುವ ಸಾಧ್ಯತೆಯಿಲ್ಲದ ಆ ಹಾಡಿ ಕಾಲನ ಹೊಡೆತಕ್ಕೆ ಬಲಿಯಾಗಿ ಇನ್ನೇನು ಕೆಲವೆ ದಿನಮಾನಗಳಲ್ಲಿ ಕುಸಿದು ಮಣ್ಣಲ್ಲಿ ಮಣ್ಣಾಗಿ ಹೋಗಿ ಶಾಶ್ವತವಾಗಿ ನಾಮಾವಶೇಷವಾಗುವುದು ಖಚಿತವಾಗಿತ್ತು.
ಅವರ ಪ್ರಯಾಣ ನೀರವತೆಯ ಬೇಧಿಸಿ ಮುಂದುವರೆಯಿತು. ಹೊರಗಿನ್ನೂ ಚಳಿಗಾಳಿಯ ಹುಯಿಲಿನ ಅರ್ಭಟ ಕಡಿಮೆಯಾಗಿರಲಿಲ್ಲ. ಬೆಳಕಿನ ಸೆಲೆ ಕೊಂಚ ಕಾಣುತ್ತಿತ್ತಾದರು ಕತ್ತಲ ಸೆರಗು ಇನ್ನೂ ಇಳೆಯ ಮೈಯಿಂದ ಪೂರ್ತಿ ಜಾರಿ ಹೋಗಿರಲಿಲ್ಲ. ಆ ವರ್ಷವಷ್ಟೆ ಕಾಲಿನ ಗೊರಸುಗಳಿಗೆ ಲಾಳ ಕಟ್ಟಿಸಿಕೊಂಡಿದ್ದ ಸುಲ್ತಾನನ ಓಟದ ಲಯಬದ್ಧ ಸದ್ದನ್ನೂ ಮೀರಿಸಿ ಹಿಮಗಾಳಿ ಬೀಸುತ್ತಿತ್ತು.
**********
"ಮಳೆಗಾಲದಲ್ಲಿ ಅಪರೂಪಕ್ಕೆ ಮೋಡದ ಮುಸುಕಿನೊಳಗಿಂದ ಮೂಡಿಬರುವ ಶುಭ್ರ ನೀಲಿ ಬಾನು,
ನೀನಿಲ್ಲದೆ ಏಕಾಂಗಿಯಾದ ನನ್ನೊಳಗಿನ ಸಂತಸ ಹಾಗೂ ನಾನು."
ದಾರಿಯುದ್ದ ಚಳಿಗಾಳಿಯ ಅರ್ಭಟ ಎದುರಿಸುತ್ತಾ ಅವರಿಬ್ಬರ ಸವಾರಿ ಬಹುಶಃ ಮೂರೋ ನಾಲ್ಕೋ ಮೈಲಿ ದೂರ ಸಾಗಿದ್ದಿರಬಹುದು. ಪಟ್ಟಣ ಇನ್ನೇನು ಅದರ ಎರಡರಷ್ಟು ದೂರದ ಫಾಸಲೆಯಲ್ಲಿ ಮಾತ್ರ ಇದೆ ಅನ್ನುವಷ್ಟರಲ್ಲಿ ಒಂದು ದೊಡ್ಡ ಹಿಮಸಾರಂಗಗಳ ಗುಂಪು ಚಲ್ಲಾಪಿಲ್ಲಿಯಾದಂತೆ ಇವರ ಹಾದಿ ಕತ್ತರಿಸುತ್ತಾ ರಸ್ತೆಯ ಒಂದು ಭಾಗದ ಕಾಡಿನ ಕಡೆಯಿಂದ ಚಂಗನೆ ನೆಗೆಯುತ್ತಾ ಇನ್ನೊಂದೆಡೆಯ ಬಯಲಿನಂತಹ ಹಿಮಚ್ಛಾದಿತ ತೆರೆದ ಸ್ಥಳದತ್ತ ಜೀವಭಯದಿಂದ ಅನ್ನುವಂತೆ ನುಗ್ಗಿ ಓಡೋಡಿ ಹೋಗುವುದು ಅವನ ಕಣ್ಣಿಗೆ ಬಿತ್ತು. ಒಂದು ನಿರ್ದಿಷ್ಟ ವೇಗದಲ್ಲಿ ಆತನಕ ದಾರಿ ಸವೆಸುತ್ತಿದ್ದ ಅವರಿಬ್ಬರಿಗೂ ಒಮ್ಮೆಲೆ ಮುಗ್ಗರಿಸಿ ಬಿದ್ದಂತಾಗಿ ಸುಲ್ತಾನನ ಕುತ್ತಿಗೆಯ ಲಗಾಮನ್ನ ಅವನು ಎಳೆದ ವೇಗಕ್ಕೆ ಅನಿರೀಕ್ಷಿತವಾಗಿ ಪ್ರಯಾಣ ನಿಂತಿತು. ಹಾರಿ ಓಡಿ ಹೋಗುತ್ತಿದ್ದ ಹಿಮಸಾರಂಗಗಳ ಹಿಂಡಿಗೂ ಇವರಿಬ್ಬರಿಗೂ ನಡುವೆ ಅಂದಾಜು ನೂರು ಗಜ ದೂರವಿದ್ದರೆ ಹೆಚ್ಚು ಹೆಚ್ಚು. ಆದ ಅಘಾತದಿಂದ ಅವನಿನ್ನೂ ಚೇತರಿಸಿಕೊಂಡೆ ಇರಲಿಲ್ಲˌ ಹಿಂಡಿನ ಹಿಂದೆಯೆ ಬಿಲ್ಲಿನಿಂದ ಚಿಮ್ಮಿ ಹೊರಟ ಬಾಣಗಳಂತೆ ಹೆಚ್ಚು ಕಡಿಮೆ ಅದೆ ವೇಗದಿಂದ ಎರಡು ತರುಣ ಪ್ರಾಯದ ಹಿಮಚಿರತೆಗಳು ಅಟ್ಟಿಸಿಕೊಂಡು ವೇಗವಾಗಿ ಓಡಿ ಬಂದು ಅದೆ ವೇಗದಲ್ಲಿ ರಸ್ತೆ ದಾಟಿ ತಮ್ಮ ಬೇಟೆಯ ಹಿಂಡನ್ನ ಬೆಂಬಿಡದೆ ಬೆನ್ನಟ್ಟಿದವು.
ಅದರೊಲ್ಲೊಂದು ಬಲಿಷ್ಠವಾಗಿದ್ದ ಹಿಮಚಿರತೆ ಆ ಅವಸರದ ಬೇಟೆಯ ನಡುವೆಯೂ ಇವರ ಹಾಜರಿಯನ್ನ ಗಮನಿಸಿ ತನ್ನ ವೇಗವನ್ನ ನಿಯಂತ್ರಿಸಿಕೊಂಡಂತೆ ಒಮ್ಮೆಗೆ ನಿಂತು ಇತ್ತ ದಿಟ್ಟಿಸಿˌ ಮರುಕ್ಷಣ ಮರಳಿ ಹಿಂಡಿನ ಹಿಂದೆ ಎಗರಿ ಓಡಿತು. ಬಹುಶಃ ಬೇಟೆಯ ಸಮಯ ಅಷ್ಟು ಸಮೀಪದಲ್ಲಿ ಮನುಷ್ಯನ ಹಾಜರಿಯನ್ನ ಅದು ನಿರೀಕ್ಷಿಸಿರಲಿಲ್ಲವೆಂದು ತೋರುತ್ತದೆ. ಅವುಗಳ ಲಕ್ಷ್ಯವೆಲ್ಲಾ ಕೇವಲ ಹಿಮಸಾರಂಗಗಳತ್ತ ನೆಟ್ಟಿದ್ದ ಕಾರಣ ಅವರಿಬ್ಬರೂ ಹಿಮಚಿರತೆಗಳ ಮುಖಾಮುಖಿಯಾಗುವುದರಿಂದ ಕೂದಲೆಳೆಯಿಂದ ಪಾರಾಗಿದ್ದರು ಅನಿಸುತ್ತೆ. ಬೇರೆ ಸಮಯದಲ್ಲಾಗಿದ್ದರೆ ಮೂಳೆ ಕೊರೆವ ಈ ಭೀಕರ ಚಳಿಯಲ್ಲಿ ಹಸಿದು ಕೆಂಗೆಟ್ಟಿರುವ ಜೋಡಿ ಚಿರತೆಗಳು ಸುಲಭವಾಗಿ ದಕ್ಕಬಹುದಾಗಿದ್ದ ಕುದುರೆಯ ಕೊಂದು ತಿನ್ನಲು ಸಹ ಹೇಸುತ್ತಿರಲಿಲ್ಲ. ಹಸಿವು ತುಂಬಾ ಕೆಟ್ಟದ್ದುˌ ಪ್ರಾಣಿಗಳಿಗಾದರೂ ಸರಿˌ ಮನುಷ್ಯ ಮೃಗಕ್ಕಾದರೂ ಸರಿ. ವಾರಗಟ್ಟಲೆ ಆಹಾರ ಕಾಣದೆ ಕಂಗಾಲಾಗಿದ್ದ ಅವುಗಳ ಹೊಟ್ಟೆ ಹಸಿದಿದ್ದ ಪರಿ ಹೇಗಿತ್ತೆಂದರೆˌ ಸಾಮಾನ್ಯವಾಗಿ ಮನುಷ್ಯರಿಂದ ಅಂತರ ಕಾಯ್ದುಕೊಳ್ಳುವುದನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ಢ ಆ ವನ್ಯಮೃಗಗಳು ಇಂದು ಕೊಂಚ ಮಟ್ಟಿನ ಅಪಾಯವನ್ನ ಮೈ ಮೇಲೆಳೆದು ಕೊಂಡಾದರೂ ಸರಿ ತಮ್ಮ ಹಸಿವನ್ನ ನೀಗಿಸಿಕೊಳ್ಳಲು ಹೇಸುತ್ತಿರಲಿಲ್ಲವೆನ್ನಬಹುದು.
ಇವನು ಹಿಮಚಿರತೆಗಳನ್ನ ಕಂಡು ಬೆದರಿದ್ದ ಸುಲ್ತಾನನಿಗೆ ಕುತ್ತಿಗೆ ಸವರಿ ಧೈರ್ಯ ಹೇಳುತ್ತಾ ಮುನ್ನಡೆಸಿದ. ವೇಗ ಕುಗ್ಗಿಸಿಕೊಂಡು ಅವರಿಬ್ಬರೂ ರಸ್ತೆಯಲ್ಲಿ ಸಾಗುತ್ತಿರುವದನ್ನು ಈಗ ಸ್ಪಷ್ಟವಾಗಿ ಅವೆರಡು ಚಿರತೆಗಳೂ ತಮ್ಮ ಕ್ರೂರ ಕಣ್ಣುಗಳ ಚೂಪು ನೋಟದಲ್ಲಿ ಗುರುತಿಸಿದವು. ಬೇಟೆ ಭರ್ಜರಿಯಾಗೆ ಆಗಿತ್ತು. ರಸ್ತೆಯಿಂದ ಒಂದೈನೂರು ಗಜ ದೂರದಲ್ಲಿ ಸರಿ ಸುಮಾರು ನೂರು ಕಿಲೋವಾದರೂ ತೂಗಬಹುದಾದ ಒಂದು ಹೋತ ಹಿಮಸಾರಂಗವನ್ನ ಅವೆರಡೂ ಅಡ್ಡಗಟ್ಟಿ ಗುಂಪಿನಿಂದ ಬೇರ್ಪಡಿಸಿ ಚಾಕಚಾಕ್ಯತೆಯ ಜೊತೆಗಾರಿಕೆಯಿಂದ ಕೆಳಗೆ ಕೆಡವಿ ಕೊಂದಿದ್ದವು. ಒಂದು ನೂರು ಗಜವಾದರೂ ಸಹ ಕುತ್ತಿಗೆಯ ಬುಡಕ್ಕೆ ನಾಟಿಸಿದ್ದ ತನ್ನ ಚೂಪು ಕೋರೆಹಲ್ಲುಗಳ ಆಧಾರದಲ್ಲೆ ನೇತಾಡುತ್ತಾ ಅದರಲ್ಲೊಂದು ಹಿಮಚಿರತೆ ಓಡುತ್ತಿದ್ದ ಹಿಮಸಾರಂಗದ ಜೊತೆಜೊತೆಯೆ ಎಳೆದುಕೊಂಡು ಹೋಗಿತ್ತು. ಸೋತ ಹೋತ ಅಡ್ಡಬಿದ್ದ ಕೂಡಲೆ ಇನ್ನೊಂದೂ ಸಹ ಅದರ ಮೇಲೇರಿ ಇನ್ನೂ ಜೀವಂತವಾಗಿದ್ದ ಹಿಮಸಾರಂಗದ ಮುಖದ ಚರ್ಮ ಹರಿದೆಳೆಯುತ್ತಾ ಚಿಮ್ಮಿ ಹಾರುತ್ತಿದ್ದ ಬಿಸಿ ರಕ್ತವನ್ನ ಹೀರಿ ತನ್ನ ಹಸಿವನ್ನ ತೀರಿಸಿಕೊಳ್ಳಲು ಆರಂಭಿಸಿಯಾಗಿತ್ತು.
ಈ ರಣ ಭೀಕರ ಬೇಟೆಯಾಟವನ್ನ ನೇರವಾಗಿ ಕಂಡದ್ದು ಅವನಿಗೆ ಬೆರಗು ಹುಟ್ಟಿಸಿದರೂ ಸಹ ಅಂತಹ ಅಪೂರ್ವ ಅರಣ್ಯ ನ್ಯಾಯಕ್ಕೆ ನೇರ ಸಾಕ್ಷಿಯಾಗಲು ತನಗೆ ದೊರೆತ ಅನಿರೀಕ್ಷಿತ ಅವಕಾಶಕ್ಕಾಗಿ ಅವನು ದೇವರಿಗೆ ಮನಸಿನೊಳಗಿಂದಲೆ ಕೃತಜ್ಞತೆ ಸಲ್ಲಿಸಿದ. ತಮ್ಮ ಭೋಜನವನ್ನಾರಂಭಿಸಿದ ಚಿರತೆಗಳ ಚಿತ್ತ ಕದಡದಂತೆ ಪಟ್ಟಣದ ದಿಕ್ಕಿಗೆ ದೌಡಾಯಿಸುವಂತೆ ಸುಲ್ತಾನನ ಲಗಾಮನ್ನ ಸಡಿಲ ಬಿಟ್ಟ. ಇಷಾರೆ ಅರಿತ ಕುದುರೆ ಕೆನೆಯುತ್ತಾ ವೇಗವಾಗಿ ಮುಂದೋಡಿತು. ತಮ್ಮ ಗುಂಪಿನ ಒಂದು ಹೋತ ಬಿದ್ದು ಬಲಿಯಾದದ್ದನ್ನು ನೋಡಲೂ ಸಹ ಸಮಯವಿಲ್ಲದವುಗಳಂತೆ ಹಿಮಸಾರಂಗಗಳ ಗುಂಪು ಇವರ ಎಡಕ್ಕೆ ಕಾಡಿನತ್ತ ಬದುಕಿದರೆ ಬೇಡಿ ತಿಂದೇವು ಅನ್ನುವ ಭಾವದಲ್ಲಿ ಓಡಿ ಹೋಗಿ ಮರೆಯಾದವು. ಬಹುಶಃ ಅವರಿಬ್ಬರಿಗೆ ಆರಂಭದಲ್ಲಿ ನಸು ಮುಂಜಾನೆಯೆ ಎದುರಾಗಿದ್ದ ಆ ಒಂಟಿ ಗರ್ಭಿಣಿ ಹಿಮಸಾರಂಗ ಸಹ ಇದೆ ಗುಂಪಿನ ಸದಸ್ಯೆಯಾಗಿದ್ದಿರಬಹುದು. ಇನ್ಯಾವುದೋ ಇಂತಹದ್ದೆ ಧಾಳಿ ಅವುಗಳ ಮೇಲೆ ಈ ಹಿಂದೆಯೂ ಆಗಿದ್ದಾಗ ಬೆದರಿ ಓಡಿದ್ದ ಅದು ಗುಂಪಿನಿಂದ ಬೇರ್ಪಟ್ಟಿರಬಹುದು ಎಂದವನು ಗ್ರಹಿಸಿದ.
ಸುಲ್ತಾನ ಇವನ ಮನೋಭಿಲಾಶೆಯನ್ನರಿತಂತೆ ಬಿಸು ಬಿಸುವಾಗಿ ಹೆಜ್ಜೆ ಹಾಕುತ್ತಾ ಗಮ್ಯದೆಡೆಗೆ ತನ್ನ ಸಾಮರ್ಥ್ಯವನ್ನೆಲ್ಲ ಮೀರಿ ಓಡ ತೊಡಗಿದ. ಈಗ ದೂರದಲ್ಲಿ ಗೊಂಬೆಗಳಂತೆ ಪಟ್ಟಣದ ಕಟ್ಟಡಗಳು ಕಾಣ ತೊಡಗಿದವು. ಅವುಗಳ ಮಾಡಿನಿಂದ ಮೊಳೆತು ಮೇಲೆದ್ದಂತಿದ್ದ ಹೊಗೆ ಕೊಳವೆಗಳಿಂದ ಬೂದು ಬಣ್ಣದ ಧೂಮದ ಪರದೆ ಮೇಲೇಳುತ್ತಿರೋದು ಅಸ್ಪಷ್ಟವಾಗಿ ಕಣ್ಣಿಗೆ ಬೀಳತೊಡಗಿತು. ಚಳಿಗಾಲದಲ್ಲಿ ಸಾಮಾನ್ಯವಾಗಿ ಬಿರುಗಾಳಿ ಬೀಸದ ಹೊರತು ಹೊಗೆ ಗೂಡಿನಿಂದ ಎದ್ದ ಹೊಗೆಯ ಪರದೆ ಬರೆದಿಟ್ಟ ಚಿತ್ರದಂತೆ ಸ್ಥಿರವಾಗಿ ಒಂದೆ ಕಡೆ ನಿಂತಂತೆ ಕಾಣತ್ತಿತ್ತು. ಹಳ್ಳಿಮನೆಯ ಸುತ್ತಮುತ್ತˌ ಕಾಡಿನ ಹಾದಿಯದ್ದ ಎಡೆಬಿಡದೆ ಕಾಡಿದ್ದ ಹಿಮಮಾರುತದ ಪ್ರಕೋಪ ಆಶ್ಚರ್ಯಕರವಾಗಿ ಇರುಳಿನ ನಿದ್ದೆ ಕಳೆದು ಹೊಸ ಬೆಳಗಿಗೆ ಮೈ ಮುರಿದುಕೊಂಡು ಮಗ್ಗುಲು ಬದಲಿಸಿ ಏಳಲು ಹವಣಿಸುವಂತೆ ಕಾಣಿಸುತ್ತಿದ್ದ ಪಟ್ಟಣದ ಸಮೀಪ ಅಷ್ಟು ಕಾಡುತ್ತಿದ್ದಂತಿರಲಿಲ್ಲ.
ಪರಿಸರ ಆಗೊಮ್ಮೆ ಈಗೊಮ್ಮೆ ಬೀಸುತ್ತಿದ್ದ ಚಳಿಗಾಳಿಯ ಮರ್ಮರದ ಹೊರತು ಶಾಂತವಾಗಿಯೆ ಇತ್ತು. ಆ ಶಾಂತತೆಯ ಕೊಳಕ್ಕೆ ಕಲ್ಲೆಸೆದಂತೆ ಆಗೊಮ್ಮೆ ಈಗೊಮ್ಮೆ ಯಾರದ್ದೋ ಲಾಯದಿಂದ ಕುದುರೆಯ ಕೆನೆತˌ ಇನ್ಯಾರದ್ದೋ ಕೊಟ್ಟಿಗೆಯಿಂದ ತನ್ನ ಕರುವ ಕೂಗಿ ಕರೆಯುತ್ತಿದ್ದ ದನದ ಕೂಗುˌ ತನ್ನ ಕಂದನಿಗೆ ಹಾಲೂಡಿಸುವ ಸುಖದ ಪರಾಕೇಷ್ಠೆಯಲ್ಲಿ ಟ್ರೋಂಯ್ ಗುಡುತ್ತಿದ್ದ ಎಮ್ಮೆಯ ಕೂಗು. ಬೆಳಗಾಗಿದ್ದರೂ ಸಹ ಇನ್ನೂ ಹಾಸಿಗೆ ಬಿಟ್ಟೇಳದ ಮಕ್ಕಳನ್ನ ಅಡುಗೆ ಮನೆಯ ಪಾತ್ರೆಯ ಸದ್ದು ಗದ್ದಲದ ನಡುವೆಯೆ ಕೂಗಿ ಬೈದು ಎದ್ದೇಳಿಸಲು ಹೆಣಗುತ್ತಿದ್ದ ಅಮ್ಮಂದಿರ ಕೂಗುˌ ತಮ್ಮ ಯಜಮಾನರು ಅದ್ಯಾವಾಗ ಬೆಳಗಿನ ಮೇವು ಹಾಕಿ ಗೂಡಿನಿಂದ ಹೊರಗೆ ಬಚ್ಚಲ ಕೆಸರಿನ ಹುಳ ಹುಪ್ಪಡಿ ಹುಡುಕಿ ಭೋಜನವನ್ನಾರಂಭಿಸಲು ಹೊರಗೆ ಬಿಟ್ಟಾನೆಯೋ ಎಂದು ಚಡಪಡಿಸುತ್ತಾ ಒಟಗುಟ್ಟುತ್ತಿದ್ದ ಬಾತುಕೋಳಿಗಳ ಲಯಬದ್ಧ ಕುಕ್ಕೂ ಸ್ವರ ಹೌದೋ ಅಲ್ಲವೋ ಎನ್ನುವಂತೆ ಅವನ ಕಿವಿಗಾಪು ಹಾಕಿದ ಶ್ರವಣದ್ವಯಗಳ ಮೇಲೆ ಬೀಳುತ್ತಿದ್ದಂತೆಯೆ ಅವರಿಬ್ಬರೂ ಕೂಡಿ ಪಟ್ಟಣ ಪ್ರವೇಶಿಸಿದ್ದರು.
ಮೊದಲಿಗೆ ಸುಲ್ತಾನನ ಆರೈಕೆಯೆ ಅವನ ಆದ್ಯತೆಯಾಗಿತ್ತು ಅನ್ನುವುದನ್ನ ಬಿಡಿಸಿ ಹೇಳಬೇಕಿರಲಿಲ್ಲ. ಅವನ ಶೀತದ ಬಾಧೆ ಕೈ ಮೀರುವ ಮೊದಲೆ ಕುದುರೆಗೆ ಔಷಧೋಪಚಾರ ಮಾಡಿಸಿಯೆ ಮುಂದಿನ ಕೆಲಸಗಳಿಗೆ ಕೈ ಹಾಕಲು ಅವನು ನಿರ್ಧರಿಸಿದ್ದ. ಅವರ ಸವಾರಿ ಮೊದಲು ಊರೊಳಗಿನ ಅವರ ಮನೆಗೆ ಹೋಗಿ ತಲುಪಿತು. ಓಣಿ ದಾಟಿ ಹಟ್ಟಿಯತ್ತ ಅವರು ಸಾಗಿದರು.
***********
https://youtu.be/h7vTDUvLNF8
https://youtu.be/YarwjMttRuM
https://youtu.be/M5OfqPT7HsI
No comments:
Post a Comment