31 January 2022

ಅವನ ಜೊತೆ ಅವಳ ಕಥೆ......೪

ಅವಳ ಜೊತೆ ಅವನ ಕಥೆ......೪


"ಹಿಮದ ಹನಿಗಳ ಮುತ್ತುಮಣಿಗಳೆಲ್ಲ
ಇಳೆಯ ಕೊರಳ ಹಾರದ ಮುತ್ತುಗಳಂತೆ ಕಂಡುˌ
ಮರಮರದ ಪ್ರತಿ ರೆಂಬೆಕೊಂಬೆಯ ಮೇಲೆಯೂ ಅಂತ ಅಸಂಖ್ಯ ಮಾಲೆಗಳೆ ಕಾಣುತ್ತಿವೆಯಲ್ಲ ಹಿಂಡು ಹಿಂಡು."


ಅಷ್ಟರಲ್ಲಾಗಲೆ ಆಹಾರವೂ ಇಲ್ಲದೆ ತೀವೃ ನಿತ್ರಾಣ ಸ್ಥಿತಿ ತಲುಪಿದ್ದ ಆ ಬಸುರಿ ಸಾರಂಗ ತಲೆಯನ್ನಲ್ಲಾಡಿಸಿ ಹೊರಗೆಳೆದುಕೊಳ್ಳಲೂ ಆಗದೆˌ ಕಷ್ಟಪಟ್ಟು ಬಾಯಿಂದ ಉಸಿರೆಳೆದುಕೊಳ್ಳುತ್ತಾ ದೈನ್ಯವಾಗಿ ತನ್ನ ಸಾವನ್ನ ಎದುರು ನೋಡುತ್ತಾ ನಿಂತಿತ್ತು ಅಂತ ಕಾಣುತ್ತದೆ. ಅದಕ್ಕುಳಿದಿದ್ದ ಆಯ್ಕೆಗಳೆ ಅತಿ ವಿರಳ. ಒಂದಾ ಈ ರಣ ಹಿಮಪಾತಕ್ಕೆ ಮರಗಟ್ಟಿ ಸಾಯಬೇಕುˌ ಇಲ್ಲಾ ಹಿಮಚಿರತೆ ಅಥವಾ ಎಮ್ಮೆತೋಳಗಳ ಕಣ್ಣಿಗೆ ಬಿದ್ದರೆ ನಿಂತ ನಿಂತತೆಯೆ ಅವು ಹರಿದು ಮುಕ್ಕುತ್ತವೆˌ ಅದೂ ಇಲ್ಲದಿದ್ದರೆ ಶಿಕಾರಿಗೆ ಬಿಲ್ಲೋ ಬಂದೂಕವೋ ಎತ್ತಿಕೊಂಡು ಇಂತಹ ಚಳಿಯಲ್ಲೂ ಅಂಡಲೆಯುವ ಮನುಷ್ಯ ಪ್ರಾಣಿಯ ಕಣ್ಣಿಗೇನಾದರೂ ಬಿದ್ದರೆ ಆತನ ಬಾಯಿ ಚಪಲದ ತೆವಲಿಗೆ ಬಲಿಯಾಗಬೇಕು. ಇವು ಮೂರೂ ಅಲ್ಲದಿದ್ದರೂ ಒಂದಿಡಿ ದಿನ ನಿಂತಿದ್ದ ಹಾಗೆ ಹಿಮ ಸುರಿಯುತ್ತಲೆ ಇದ್ದಿದ್ದರೂ ಸಹ ಅದು ಜೀವಂತ ಹಿಮ ಸಮಾಧಿಯಾಗುವ ಸಂಭವವೂ ಇಲ್ಲದಿರಲಿಲ್ಲ.

ಮರುಕದಿಂದ ಬಳಿ ಸಾರಿದ ಇವನು ಸುಲ್ತಾನನ್ನ ಬಗಲಿಗೆ ನಿಲ್ಲಿಸಿಕೊಂಡು ಸಾರಂಗದ ಸ್ಥಿತಿಯನ್ನೊಮ್ಮೆ ಅವಲೋಕಿಸಿದ. ಮರುಕ್ಷಣ ಯೋಚಿಸದೆ ಕೂಡಲೆ ಬೆನ್ನಿಗೆ ಬಿಗಿದುಕೊಂಡಿದ್ದ ಕೈಕೊಡಲಿ ಮತ್ತು ಕೈ ಹಾರೆಯಿಂದ ಅದರ ಮೂತಿಯ ಸುತ್ತ ಕಟ್ಟಿಕೊಂಡಿದ್ದ ಹಿಮ ಕುಟ್ಟಿ ಕೆರೆದು ತೆಗೆದ. ಸಾರಂಗದ ಬಾಯಿ ನೆಲದಿಂದ ಮುಕ್ತಿಯನ್ನೇನೋ ಪಡೆಯಿತು. ಆದರೆ ಮೂಗಿನ ಹೊಳ್ಳೆಗಳಲ್ಲಿ ಹತ್ತಿಯ ಉಂಡೆಗಳಿಟ್ಟಂತೆ ಹಿಮದ ಕಲ್ಲುಗಳು ಸಿಕ್ಕಿಕೊಂಡು ಸರಿಯಾಗಿ ಉಸಿರಾಡಲು ಅದಿನ್ನೂ ಪರಿತಪಿಸುತ್ತಿತ್ತು. ಈತ  ನಿಧಾನವಾಗಿ ಅದಕ್ಕೆ ಗಾಬರಿಯಾಗದಂತೆ ಎರಡೂ ಹೊಳ್ಳೆಗಳಿಂದ ಅದನ್ನ ಕಿತ್ತು ತೆಗೆದ. ಬೇರೆ ಸಂದರ್ಭದಲ್ಲಾದರೆ ಇಷ್ಟು ಸಮೀಪ ಬಂದ ಮನುಷ್ಯನ ಮೇಲೆ ಧಾಳಿ ಮಾಡಿಯೋ ಇಲ್ಲಾ ಬೆದರಿ ಓಡಿಯೋ ಹೋಗಬಹುದಾಗಿದ್ದ ಸಾರಂಗ ನಿತ್ರಾಣವೂ ಆಗಿದ್ದರಿಂದ ಕಕ್ಕಾಬಿಕ್ಕಿಯಾಗಿ ಸಹಕರಿಸುವಂತೆ ನಿಂತೆ ಇತ್ತು. ಅದರ ಪರಿಸ್ಥಿತಿಗೆ ಮರುಗಿ ಸುಲ್ತಾನನ ಕುತ್ತಿಗೆಗೆ ಕಟ್ಟಿದ್ದ ಜೋಲಿಯಿಂದ ಅವನದೆ ಮೇವಿನ ಕೊಂಚ ಭಾಗ ತೆಗೆದು ಅದರ ಮೂತಿಗೆ ಹಿಡಿದ. ಹಸಿದ ಅದು ಮೊದಲು ಅನುಮಾನಿಸಿದರೂ ಅನಂತರ ಬಕಬಕನೆ ಅದನ್ನ ಚಪ್ಪರಿಸಿ ತಿಂದಿತು. ಇವ ಕುದುರೆ ಮೇಲೇರಿದ. ಮುಂದೆ ಮುಂದೆ ಸಾಗಿದ ಇವರಿಬ್ಬರ ಸವಾರಿಯನ್ನ ಕೃತಜ್ಞತೆಯಿಂದೇನೋ ಅನ್ನುವಂತೆ ಸಾರಂಗ ನೋಡುತ್ತಾ ಇನ್ನೂ ನಿಂತೆ ಇತ್ತು. ಬಹುಶಃ ಬಸುರಿ ಸಾರಂಗದ ಬಳಲಿಕೆಯಿನ್ನೂ ಕಳೆದಿರಲಿಲ್ಲˌ ಮನುಷ್ಯ ಮೃಗವೊಂದು ಅತಿ ಹತ್ತಿರ ಬಂದು ಅಪಾಯಕಾರಿಯಾಗಿ ವರ್ತಿಸದೆ ಉಪಕಾರಿಯಾಗಿ ನಡೆದುಕೊಂಡ ಅಘಾತದಿಂದ ಅದಿನ್ನೂ ಚೇತರಿಸಿಕೊಂಡಂತಿರಲಿಲ್ಲ. 


ಇವರಿಬ್ಬರ ಪ್ರಯಾಣ ಯಥಾಪ್ರಕಾರ ಪಟ್ಟಣದ ದಿಕ್ಕಿಗೆ ಮುಂದುವರೆಯಿತು. ಹಿಮಪಾತವೂ ಸಹ ಏಕತಾನ ಹಿಡಿದಂತೆ ಒಂದೆ ಸಮನೆ ರಚ್ಚೆ ಹಿಡಿದು ಸುರಿಯುತ್ತಲೆ ಇತ್ತು. ಸ್ಥೂಲವಾಗಿ ಹಿಮದ ಮಳೆಯಲ್ಲಿ ಮೀಯುತ್ತಿರುವ ಕಾಡಿನ ಇಕ್ಕೆಲದ ಮರಗಳ ನಡುವಿನ ಅಗಲ ಸ್ಥಳವನ್ನ ದಾರಿ ಎಂದು ಅಂದಾಜಿಸಿಕೊಂಡು ಮುಂದುವರೆಯುವ ಪರಿಸ್ಥಿತಿ ಅಲ್ಲಿತ್ತು. ವಸಂತದ ನಂತರದ ದಿನಮಾನದಲ್ಲಿ ಅಷ್ಟು ಹೊತ್ತಿಗೆಲ್ಲಾ ಹೊಳೆಯುತ್ತಾ ಭೂಮಿಯ ಮೇಲಿನ ಕತ್ತಲ ಕೊಳೆ ತೊಳೆಯುತ್ತಾ ಬೆಚ್ಚಗೆ ಮೂಡಿರುತ್ತಿದ್ದ ಸೂರ್ಯನೂ ಈ ಭೀಕರ ಹಿಮಪಾತದ ಚಳಿಯ ಹೊಡೆತಕ್ಕೆ ಹೆದರಿ ತಲೆಮರೆಸಿಕೊಂಡು ಓಡಿ ಹೋಗಿದ್ದ. ಕೇವಲ ಮೂಡಣದ ದಿಕ್ಕಿನಲ್ಲಿ ಒಲೆಯ ಬೂದಿ ಕದಡಿದಂತೆ ಕೊಂಚ ಬೂದು ಬೂದು ಬೆಳಕು ಕಂಡಂತಾಗಿ ಮರೆಯಾದದ್ದು ಬಿಟ್ಟರೆ ಮಿಕ್ಕಂತೆ ಹಗಲು ಕಣ್ತೆರೆದಿರೋದಕ್ಕೆ ಆ ನಿಶಾಚರ ಮಾರ್ಗದುದ್ದ ಯಾವೊಂದು ನಿಶಾನಿಯೂ ಅವನಿಗೆ ಕಾಣಸಿಗಲಿಲ್ಲ. 


ಚಳಿಯ ಹೊಡೆತಕ್ಕೆ ತತ್ತರಿಸಿ ಕಾಡಿನ ಹಕ್ಕಿಗಳೆಲ್ಲಾ ಒಂದೋ ಅವುಗಳ ಪೊಟರೆˌ ಗೂಡುಗಳನ್ನ ಬಿಟ್ಟು ಹೊರ ಬರುವ ಧೈರ್ಯವನ್ನೆ ಮಾಡಿರಲಿಲ್ಲˌ ಇಲ್ಲಾ ಅವುಗಳೆಲ್ಲ ತತ್ಕಾಲಿಕವಾಗಿ ಬೆಚ್ಚನೆ ಆಶ್ರಯ ಅರಸಿ ಇನ್ನಷ್ಟು ದಕ್ಷಿಣಕ್ಕೆ ಹಾರಿ ಹೋಗಿ ತಮ್ಮ ಜೀವ ಉಳಿಸಿಕೊಂಡಿದ್ದವು. ಅಷ್ಟು ದೂರ ಸಾಗುವ ಶಕ್ತಿಯಿಲ್ಲದ ನೆಲವಾಸಿಗಳಾದ ಕತ್ತೆಮೊಲಗಳುˌ ಹಿಮಸಾರಂಗಗಳುˌ ಹೆಬ್ಬಾತುಗಳುˌ ಮುಂಗುಸಿಗಳುˌ ಹಾವುಗಳುˌ ಕೆಂಜಳಿಲುಗಳುˌ ಗಡವ ಪಾರಿವಾಳಗಳೆಲ್ಲ ಅಲ್ಲಲ್ಲಿ ಸಿಕ್ಕ ಆಶ್ರಯಗಳಲ್ಲಿ ಸೇರಿ ಹೋಗಿ ಒಮ್ಮೆ ಈ ಚಳಿ ಮುಗಿಯಲಪ್ಪ ದೇವರೆ ಎನ್ನುವಂತೆ ಕಾಯುತ್ತಾ ಉಳಿದ ಹಾಗೆ ಇಡಿ ಪರಿಸರ ಹಿಮ ಸುರಿತದ ಸದ್ದೊಂದರ ಹೊರತು ಶಾಂತವಾಗಿಯೆ ಇದ್ದಂತಿತ್ತು. ದೂರದೂರದವರೆಗೂ ಬರಿ ಬೆಳ್ಳನೆ ಹಿಮರಾಶಿಯೆ. ನಡುನಡುವೆ ಎಲೆಯುದುರಿದ್ದರೂ ಸಹ ತಲೆ ಎತ್ತಿ ನಿಂತ ಕಾನನದ ಹೊರತು ದೂರದೂರದವರೆಗೂ ಅವನ ಸುಲ್ತಾನನ ಹೊರತು ಇನ್ನೊಂದು ಜೀವ ಅಲ್ಲಿ ಕಾಣ ಸಿಗುವ ಸಾಧ್ಯತೆಯೆ ಇರಲಿಲ್ಲ.


ಇಂದು ಇವನಿಗೆ ಹೊರಡುವಾಗಲೆ ಹಿಂದಿರುಗಿ ಇಂದೆ ಮನೆಗೆ ಬಂದು ಮುಟ್ಟಬೇಕು ಅನ್ನುವ ಉದ್ದೇಶ ಮನ ಹೊಕ್ಕಿತ್ತು. ಈ ನಡುವೆ ಮನೆಗೆ ಬಂದಿದ್ದ ತಿಮ್ಮಯ್ಯ ಹೇಳಿದ್ದ ಪ್ರಕರಣವೊಂದು ಅವನ ಕಳವಳ ಹೆಚ್ಚಿಸಿತ್ತು. ಇಲ್ಲದಿದ್ದಲ್ಲಿ ಬಹುಶಃ ಒಂದಿರುಳನ್ನ ಪಟ್ಟಣದ ತಮ್ಮ ಬಿಡಾರದಲ್ಲಿ ಕಳೆಯುವ ಧೈರ್ಯವನ್ನವನು ಖಂಡಿತವಾಗಿ ಮಾಡಿರುತ್ತಿದ್ದ. ಈ ಹಂಗಾಮಿನ ಚಳಿಗಾಲ ಇಷ್ಟು ತೀವೃವಾಗುವ ಬಗ್ಗೆ ಇನಿತು ಸುಳಿವು ಸಿಕ್ಕಿದ್ದರೂ ಸಾಕಿತ್ತುˌ ಅವನು ಆಗ ಪುನಃ ಎರಡು ತಿಂಗಳ ಬಸುರಿಯಾಗಿದ್ದ ಅವಳನ್ನೂ ಕೈಗೂಸು ರಾಜನನ್ನೂ ಪಟ್ಟಣದ ಬಿಡಾರಕ್ಕೆ ಸ್ಥಳಾಂತರಿಸಿಯೆ ಬಿಡುತ್ತಿದ್ದ. ಪಟ್ಟಣದಲ್ಲಿ ಜನವಸತಿಯ ನಡುವೆ ಇಂತಹ ವಿಪರೀತ ಪರಿಸ್ಥಿತಿಯಲ್ಲಿ ಕಾಲ ಹಾಕುವುದು ಜಾಣತನ. ಅಲ್ಲದೆ ಗೋಪಿಯ ಕುಟುಂಬ ಸಹ ಅಲ್ಲೆ ಇತ್ತಲ್ಲ. ತುರ್ತು ಅಗತ್ಯಗಳಿಗೆ ಒದಗಿಬರುವ ಒಳ್ಳೆಯ ನೆರೆಕರೆ ಅವರಾಗಿದ್ದರು. 


ಆದರೆ ಈ ಸಲದ ಒಕ್ಕಣೆ ಮುಗಿಸಿ ಹುಲ್ಲು ಮೆದೆ ಹಾಕಿ ಧಾನ್ಯಗಳ ಹೊಟ್ಟು ಗಾಳಿಗೆ ತೂರಿ ಪಣತ ತುಂಬಿಸುವಾಗಲೆ ತಡವಾಗಿ ಹೋಗಿತ್ತು. ಕೂಲಿಗೆ ಸಮಯಕ್ಕೆ ಸರಿಯಾಗಿ ಕೂಲಿಯಾಳುಗಳು ಸಿಕ್ಕಿರಲಿಲ್ಲ. ಈ ಸಾರಿ ಸಮೀಪದಲ್ಲಿಯೆ ಇನ್ನೆರಡು ಹೊಲಮನೆಗಳ ಜಮೀನಿನ ಬೇಸಾಯದ ಚಟುವಟಿಕೆಗಳೂ ಆರಂಭವಾಗಿ  ಕೂಲಿ ಕೆಲಸಗಾರರ ಬೇಡಿಕೆ ಸಹಜವಾಗಿ ಏರಿತ್ತು. ಹೀಗಾಗಿ ಅವರ ಲಭ್ಯತೆಯನ್ನ ಅನುಸರಿಸಿಕೊಂಡು ಸುಗ್ಗಿ ಒಕ್ಕಣೆಯನ್ನ ತಾನೂ ಸಹ ಮುಂದು ಹಾಕಿಕೊಳ್ಳಬೇಕಾಗಿ ಬಂದಿತ್ತು. ಅದೆಲ್ಲ ರಗಳೆ ಮುಗಿಸಿ ಪೇಟೆಗೆ ಚಳಿಗಾಲದಲ್ಲಿ ಉಪಯೋಗಕ್ಕೆ ಬೇಕಾಗುವ ದಿನಸಿ ತರಲು ಹೋಗಿದ್ದ ವೇಳೆ ಆ ಸ್ಥಳಿಯ ಬುಡಕಟ್ಟಿನ ಹಿರಿಕನ ಮಾತನ್ನ ಪಟ್ಟಣದ ಭಂಡಸಾಲೆಯಲ್ಲಿ ಯಾರೋ ಉದ್ಧರಿಸಿ ಉಢಾಫೆಯಿಂದ ಗೇಲಿ ಮಾಡುತ್ತಿದ್ದುದು ಕೇಳಿ ಇವನ ಕಿವಿ ನಿಮಿರಿತು. ಯಾವುದೆ ಕಾರಣಕ್ಕೂ ಹಿರಿಯರ ಸ್ಥಳಿಯರ ಜೀವನಾನುಭಾವದ ಮಾತುಗಳನ್ನ ಕಡೆಗಣಿಸಲೆಬಾರದು ಅನ್ನುವ ಪ್ರಾಥಮಿಕ ಬದುಕಿನ ಪಾಠ ಅವನಿಗೆ ಅವನ ಅಪ್ಪನಿಂದಾಗಿತ್ತು. 


ಆದರೆ ಇದೀಗ ಈ ಸುದ್ದಿ ಅವನ ಕಿವಿಗೆ ಬೀಳುವ ಹೊತ್ತಿಗೆ ಆ ಹಿರೀಕ ಅದನ್ನ ಘಂಟಾಘೋಷವಾಗಿ ಒದರಿ ಹೋಗಿ ಎರಡು ಪೂಜೆಯ ಆದಿತ್ಯವಾರಗಳು ಕಳೆದು ಮೂರು ದಿನ ಕಳೆದಿತ್ತು. ಅಂದರೆ ಹದಿನೇಳು ದಿನಗಳ ಹಿಂದೆ ಅವ ಇಲ್ಲಿನ ಎಲ್ಲರಿಗೂ ಈ ಎಚ್ಚರಿಕೆ ಸಾರಿದ್ದ. ಈಗ ಹೆಚ್ಚೆಂದರೆ ಎರಡು ಮೂರು ದಿನಗಳಲ್ಲಿ ಈ ಹಂಗಾಮಿನ ಚಳಿ ಆವರಿಸಿಕೊಳ್ಳಲು ಹವಣಿಸುತ್ತಿರೋವಾಗ ಏಕಾಏಕಿ ಸ್ಥಳಾಂತರವಾಗಲು ಸಾಧ್ಯವೆ? ಜನ ಬಂದರೆ ಜಾನುವಾರು ಬಾರದುˌ ಜಾನುವಾರು ತಂದರೆ ಜನರನ್ನ ಕರೆತರಲಾಗದು ಅನ್ನುವ ಇಬ್ಬಂದಿಯ ಪರಿಸ್ಥಿತಿ. ಹಾಗೊಮ್ಮೆ ಜಾನುವಾರುಗಳನ್ನ ಅಲ್ಲೆ ಬಿಟ್ಟು ಬಂದರೂ ಸಹ ನಿತ್ಯ ಅಲ್ಲಿಂದಿಲ್ಲಿಗೆ ಓಡಾಡಿಕೊಂಡು ಎರಡೂ ಕಡೆ ನಿಭಾಯಿಸುವುದು ಅಪಾಯಕ್ಕೆ ಕರೆದು ಆಹ್ವಾನ ಕೊಟ್ಟಂತಾಗುತ್ತಿದ್ದುದರಲ್ಲಿ ಯಾವ ಸಂಶಯವೂ ಇಲ್ಲ. ಹೀಗಾಗಿ ಅವನು ಈ ಪರಿಶ್ರಮ ತೆಗೆದುಕೊಳ್ಳಲಿಲ್ಲ.

**************


"ಊರು ಮುಗಿದರೂ ಯಾವುದೆ ಸೂರು ಕಾಣಲಿಲ್ಲˌ
ಮನೆಗಳ ಗಡಿ ದಾಟಿದವರಿಗೂ ಸಹ ಮನಗಳ ಎಲ್ಲೆ ಮೀರಲಾಗಿಯೆ ಇಲ್ಲ./
ಸುತ್ತಲೂ ಕವಿದ ಮೌನ ಮಾರ್ದವವೋ ಭೀಕರವೋ ಯಾರಿಗೆ ಗೊತ್ತುˌ
ಇನ್ನೂ ಅದನ್ನರಯಲಾಗಲಿಲ್ಲ."



ಬೆಳಗ್ಯಿನಿಂದ ಪ್ರಯಾಣ ಆರಂಭವಾದಾಗಲಿಂದಲೂ ಸುಲ್ತಾನ ಅದೇಕೋ ಅನ್ಯ ಮನಸ್ಕನಾಗಿರುವಂತೆ ಅವನಿಗನಿಸ ತೊಡಗಿತು. ಅವನ ಅನ್ಯಮನಸ್ಕತೆ ಉತ್ಸಾಹ  ಹೀನತೆ ಅವನ ನಡೆಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು. ಕುದುರೆಗಳು ತುಂಬಾ ಸೂಕ್ಷ್ಮ ಜೀವಿಗಳು ಅವಿನ್ನೂ ವಯಸ್ಕರಾಗುವ ಮೊದಲೆ ತುಂಬಾ ತಾಳ್ಮೆಯಿಂದ ಅವುಗಳ ಕಾಟುಮಾರಿತನˌ ಒಡ್ಡೊಡ್ಡು ನಡುವಳಿಕೆಗಳನ್ನೆಲ್ಲ ನಯವಾಗಿಯೆ ತಿದ್ದುತ್ತಾ ಅವುಗಳನ್ನ ಮನುಷ್ಯನ ಉಪಯೋಗಕ್ಕೆ ಯೋಗ್ಯವಾಗಿಸಿಕೊಳ್ಳಬೇಕು. ಸಾಮಾನ್ಯವಾಗಿ ಈ ಪ್ರದೇಶದ್ದೆ ಸ್ಥಳಿಯ ತಳಿಗಳಾದ ಸಪೂರ ಮೈಕಟ್ಟಿನ ಕಾಡುಕುದುರೆಗಳನ್ನ ಪಳಗಿಸಿಕೊಂಡೆ ಸ್ಥಳಿಯ ಬುಡಕಟ್ಟಿನ ಜನರು ಅವುಗಳನ್ನ ಸವಾರಿಗೆ ಉಪಯೋಗಿಸುತ್ತಿದ್ದರು. ತೀರಾ ಕನಿಷ್ಠ ಮಟ್ಟದ ವ್ಯವಸಾಯ ಕೃಷಿ ಮಾಡುತ್ತಿದ್ದ ಆ ಸ್ಥಳಿಯರಿಗೆ ಕುದುರೆಗಳನ್ನ ಬೇಸಾಯಕ್ಕೆ ಉಪಯೋಗಿಸುವ ಅವಶ್ಯಕತೆಯೆ ಬೀಳಲಿಲ್ಲ. 


ಅಲ್ಲದೆ ಲಗಾಮು ಜೀನು ಮುಂತಾದ ನವನಾಗರೀಕತೆಯ ಸಾಧನಗಳೊಂದರ ಪರಿಚಯವೂ ಇದ್ದಿರದಿದ್ದ ಅವರದ್ದೇನಿದ್ದರೂ ಬತ್ತಲೆ ಕುದುರೆ ಮೇಲಿನ ಸಾಹಸಮಯ ಸವಾರಿ. ಅದನ್ನು ಪಳಗಿಸುವ ಹಂತದಲ್ಲಾದರೂ ಸರಿ ಪಳಗಿಸಿ ಉಪಯೋಗಿಸುವ ಹಂತದಲ್ಲಾಗಿರಲಿ ಅವರು ಜೀನು ಬಿಗಿದು ಕೂತದ್ದೆ ಇಲ್ಲ. ತಾವೂ ಕೌಪಿನಧಾರಿಗಳಾಗಿರುತ್ತಿದ್ದ ಆ ಬುಡಕಟ್ಟುಗಳ ಯುವಕ ಯುವತಿಯರು ಬರಿ ಬೆನ್ನಿನ ಕುದುರೆಯನ್ನ ಹಾರಿ ಏರಿˌ ಅದರದ್ದೆ ಮೇಲ್ಗುತ್ತಿಗೆಯ ಜೂಲನ್ನ ಹಿಡಿದು ಮಾರ್ಗದರ್ಶಿಸಿ ಮುನ್ನಡೆಸುತ್ತಿದ್ದರು. ಅವರ ನಿಖರವಾದ ಬಾಯಿ ಮಾತುˌ ಕಾಲಿನ ಬೆರಳಗಳಿಂದ ಅವರು ಹೊಟ್ಟೆಗೆ ಗುದ್ದಿ ಕೊಡುತ್ತಿದ್ದ ಸೂಚನೆˌ ಜೂಲನ್ನ ಸಡಿಲ ಬಿಟ್ಟೋ ಇಲ್ಲಾ ಬಲವಾಗಿ ಹಿಡಿದು ತಮ್ಮ ತೋಳಿನ ಬಿಸುಪನ್ನ ಅಶ್ವಗಳ ಮಸ್ತಿಷ್ಠಕ್ಕೂ ದಾಟಿಸಿ ಕೊಡುತ್ತಿದ್ದ ದೈಹಿಕ ಸಂಜ್ಞೆಗಳನ್ನ ಅನುಸರಿಸಿ ಆ ಕುದುರೆಗಳು ತನ್ನ ಸವಾರನ ಮನೋಭಿಲಾಶೆಯಂತೆ ವರ್ತಿಸುತ್ತಾ ಎಲ್ಲಿಯೂ ಎಲ್ಲೆ ಮೀರದಂತೆ ಮುನ್ನಡೆಯುತ್ತಿದ್ದವು. ಅವರೆಂದೂ ಸಾರೋಟು ಗಾಡಿ ಹೂಡುವ ಪ್ರಮೇಯವೆ ಇಲ್ಲದಿರುತ್ತಿದ್ದುದ್ದರಿಂದˌ ಇಂತಹ ಕಾಡುಕುದುರೆಗಳಿಗೆ ಜೊತೆ ಮಾಡುವ ಅಥವಾ ಬಂಡಿ ಎಳೆಯುವ ತರಬೇತಿ ಕೊಡುವ ಯಾವೊಂದು ಅಗತ್ಯವೂ ಬರುತ್ತಿರಲಿಲ್ಲ. 

ಅವುಗಳ ಆಹಾರದಲ್ಲೂ ಅಷ್ಟೆˌ ಕಾಡು ಮೇಯ್ದುಕೊಂಡು ಹಸಿರು ಹುಲ್ಲನ್ನೆ ಮುಖ್ಯ ಹೊಟ್ಟೆಪಾಡು ಮಾಡಿಕೊಂಡಿರುತ್ತಿದ್ದ ಆ ತುರಗಗಳಿಗೆ ಅವರು ತೋರುತ್ತಿದ್ದ ಔದಾರ್ಯವೇನೆಂದರೆ ಚಳಿಗಾಲದಲ್ಲಿ ತಮ್ಮ ಸೇವನೆಗೆಂದು ತಾವು ಬೆಳೆದಿಟ್ಟುಕೊಳ್ಳುತ್ತಿದ್ದ ಹುರುಳಿಯನ್ನಷ್ಟು ಅವಕ್ಕೂ ಬೇಯಿಸಿ ಹಾಕಿ ಮೇಲೆ ಚೂರು ತಾವೆ ತಯಾರಿಸಿಕೊಳ್ಳುತ್ತಿದ್ದ ಮನೆ ತಯಾರಿಕೆಯ ಕಳ್ಳಿನಲ್ಲೂ ಕೊಂಚ ಪಾಲು ಕೊಟ್ಟು ಅವುಗಳ ಮೈಯನ್ನೂ ಬೆಚ್ಚಗಾಗಿಸುತ್ತಿದ್ದುದ್ದು. ಸತ್ತ ಕುದುರೆಯಿಂದ ಜೂಲು ಗೊರಸು ಬಾಲದ ಕೂದಲು ರೆನ್ನೆಟ್ ಹಲ್ಲು ಚರ್ಮ ಪಕ್ಕೆಲುಬುಗಳು ಹೀಗೆ ಬಳಸಬಹುದಾದ ಸಕಲ ಅಂಗೋಂಪಾಂಗಗಳನ್ನೂ ಕಡಿದು ಬೇರ್ಪಡಿಸಿ ತಮ್ಮ ಅನುಕೂಲಕ್ಕೆ ಅನುಸಾರವಾಗಿ ಅವನ್ನ ಬಳಸಿಕೊಳ್ಳುತ್ತಿದ್ದರವರು.

ಇನ್ನು ಇವನ ಕುಲಸ್ಥರು ದೂರದ ಖಂಡಾಂತರದಿಂದ ನವನಾಡಿನಲ್ಲಿ ನೆಮ್ಮದಿಯ ಬದುಕನ್ನ ಅರಸಿಕೊಂಡು ಬರಲಾರಂಭಿಸಿದ ಹೊಸತರಲ್ಲಿಯೆ ಅವರಲ್ಲಿ ಕೆಲವರ ಜೊತೆ ಕುಬ್ಜ ಮೈಕಟ್ಟಿನ ಪುಟ್ಟ ಪುಟ್ಟ ಕಾಲುಗಳ ಕೊಂಚ ಸ್ಥೂಲ ಮೈಕಟ್ಟಿನ ಫೋನಿ ಜಾತಿಯ ಕುದುರೆಗಳನ್ನ ಕರೆತಂದಿದ್ದರು. ಶೀತಪ್ರದೇಶ ಮೂಲದಿಂದಲೆ ಬಂದಿದ್ದ ಫೋನಿಗಳ ಮೈತುಂಬಾ ಕೂದಲೆಂದರೆ ಕೂದಲು. ಅವುಗಳನ್ನ ನೋಡಲು ಆಕರ್ಷಕವಾಗಿಸುತ್ತಿದ್ದ ಆ ಕೂದಲುಗಳೆ ಅವುಗಳಿಗೆ ಪೀಡೆಯಾಗಿಯೂ ಪರಿಣಮಿಸುತ್ತಿದ್ದವು. ಚಳಿಗಾಲದ ಉತ್ತುಂಗದಲ್ಲಿ ಹೇನು ಉಣ್ಣೆಗಳಾಗುವುದಂತೂ ಅತಿ ಸಾಮಾನ್ಯ ಈ ತಳಿಗಳಲ್ಲಿ. ಚಳಿಯಿಂದ ಪಾರಾಗಿ ಬೆಚ್ಚನೆ ಆಶ್ರಯ ಹಾಗೂ ತಾಜಾ ಸ್ವಾದಿಷ್ಟ ರಕ್ತವನ್ನ ಬಯಸಿ ಇರೋಬರೋ ಕ್ರಿಮಿ ಕೀಟಗಳೆಲ್ಲ ಇವುಗಳ ಜೂಲಿನಲ್ಲಿ ಅಡಗಿ ನೆತ್ತರು ಹೀರುತ್ತಿದ್ದವು. ಹೀಗೆ ರಕ್ತದಾನ ಮಾಡಿ ಮಾಡಿಯೆ ಮೇಲಿಂದ ಜೂಲಿನ ದೆಸೆಯಿಂದ ಕೃತಕವಾಗಿ ದಷ್ಟಪುಷ್ಟವಾಗಿದೆ ಅನ್ನುವ ಭ್ರಮೆ ಹುಟ್ಟಿಸುತ್ತಿದ್ದ ಈ ಫೋನಿಗಳು ಒಳಗೊಳಗೆ ರಕ್ತ ಹೀನತೆಯಿಂದ ಬಡಕಲಾಗುವುದೂ ಇತ್ತು. 

ಅಷ್ಟೆ ಅಲ್ಲದೆ ಇವುಗಳ ಮುಖಾಂತರ ಕೊಟ್ಟಿಗೆಯ ಇನ್ನಿತರ ಜಾನುವಾರುಗಳಿಗೂ ಈ ಪರಪುಟ್ಟ ಕ್ರಿಮಿಕೀಟಗಳು ದಾಟಿ ಕಿರುಕುಳ ಕೊಡುವ ಸಾಧ್ಯತೆಗಳೂ ಇದ್ದವಲ್ಲ! ಅಲ್ಲದೆ ಸಗಣಿ ಗಂಜಲ ಬಿದ್ದು ಬೇಗ ಕೊಳೆಯಾಗುತ್ತಿದ್ದ ಇವುಗಳ ಜೂಲುಗಳು ಕಾಲಕಾಲಕ್ಕೆ ಮೈತೊಳೆದು ಮೀಯಿಸದಿದ್ದರೆ ಇವುಗಳ ಮೈಯೇರಿ ಅಲ್ಲೆ ಗಟ್ಟಿಯಾಗುವ ಕೊಳೆಯ ದುರ್ನಾತ ಇವುಗಳೊಂದಿಗೆ ಸುತ್ತಲ ಪರಿಸರವನ್ನೂ ನಾರುವಂತೆ ಮಾಡುತ್ತಿದ್ದವು. ಒಟ್ಟಿನಲ್ಲಿ ಆಗಾಗ ತೊಳೆದುˌ ವರ್ಷ ಅಥವ ಎರಡು ವರ್ಷಕ್ಕೊಮ್ಮೆ ಮೈಕೂದಲು ಹೆರೆದು ಬೋಳಿಸಿ ಗೊಂಬೆಗಳಂತೆ ಅಂದಗೊಳಿಸಿಟ್ಟುಕೊಂಡು ಜತನವಾಗಿ ಇವುಗಳ ದೇಖಾರೇಖಿ ಮಾಡುವುದು ಈ ಫೋನಿ ಕುದುರೆಗಳ ಮಾಲಕರಾಗಿರುವ ರೈತಾಪಿಗಳಿಗೆ ಅನಿವಾರ್ಯ ಕರ್ಮವೆ ಆಗಿರುತ್ತಿತ್ತು. ಹಾಗಂದ  ಮಾತ್ರಕ್ಕೆ ಇವು ಶ್ರಮದ ದುಡಿಮೆಗೆ ಪೂರಕವಾದ ಮೈಕಟ್ಟು ಹೊಂದಿಯೂ ಇರುತ್ತಿರಲಿಲ್ಲ. ಸಣ್ಣಪುಟ್ಟ ಹೂಟಿಯ ಕೆಲಸಕ್ಕಷ್ಟೆ ಭುಜ ಕೊಡಬಲ್ಲˌ ಬಗ್ಗಿಬಂಡಿಯ ಹೊರತು ಬೇರೆ ಯಾವ ಸಾರೋಟಿಗೂ ಕಟ್ಟಲಾಗದ ಒಟ್ಟಿನಲ್ಲಿ ಉಪಯೋಗಕ್ಕಿಂತ ಹೆಚ್ಚಿನ ಕಾಳಜಿ ಹಾಗೂ ಸೇವೆ ಬಯಸುತ್ತಿದ್ದ ಈ ಫೋನಿ ಕುದುರೆಗಳು ಕೃಷಿಕರ ಹಿತಾಸಕ್ತಿಯಿಂದ ದೃಷ್ಟಿಸಿ ಹೇಳೋದಾಗಿದ್ದರೆ ಇರೋದಕ್ಕಿಂತ ಇಲ್ಲದಿರೋದೆ ಹೆಚ್ಚು ವಾಸಿ!



ಆದರೆ ವಸಾಹತುಗಳ ಜನದಟ್ಟಣೆ ಕಾಲಕ್ರಮೇಣ ಹೆಚ್ಚಿ ಇಲ್ಲಿಯೂ ಜನರ ಶಾಶ್ವತ ನೆಲೆಗಳು ಬೇರೂರ ತೊಡಗಿದ ಅನಂತರದ ದಿನಮಾನಗಳಲ್ಲಿ ಅವರ ಅಗತ್ಯಗಳಿಗೆ ತಕ್ಕಂತೆ ಪರಿಸ್ಥಿತಿಗಳೂ ಬದಲಾಗುತ್ತಲೆ ಸಾಗಿದವು. ಕೃಷಿ ಚಟುವಟಿಕೆ ಗರಿಗೆದರಿತು. ದೂರ ದೂರ ಭೂಮಿಯನ್ನ ಅತಿಕ್ರಮಿಸುತ್ತಾ ಈ ವಲಸಿಗರ ಪಡೆ ಪಶ್ಚಿಮಾಭಿಮುಖವಾಗಿ ಇನ್ನಷ್ಟು ಒಳನಾಡುಗಳತ್ತ ಒತ್ತುವರಿ ಮುಂದುವರೆಸಿಕೊಂಡು ಮುಂದುವರೆದಾಗ ಅವರಿಗೆ ಒದಗಿ ಬಂದದ್ದು ಈ ಬಲಿಷ್ಠ ಅರೆಬಿಯನ್ ತಳಿಯ ಕುದುರೆಗಳು. ಕನಿಷ್ಠ ಏಳೂವರೆಯಡಿ ಮೈಕಟ್ಟಿನˌ ಗೊರಸಿಂದ ತಲೆಯವರೆಗೆ ಕಡಿಮೆಯೆಂದರೂ ಆರಡಿ ಉದ್ದವಿರುತ್ತಿದ್ದ ಈ ಸೈಂಧವ ಗಾತ್ರದ ಅಶ್ವಗಳು ಕಷ್ಟ ಸಹಿಷ್ಣುಗಳಾಗಿದ್ದು ಬಂಡಿ ಬಗ್ಗಿ ಪ್ರಯಾಣಕ್ಕೂˌ ಸವಾರಿಗೂ ಹಾಗೂ ನೊಗ ನೇಗಿಲು ಹೂಡಲೂ ಪ್ರಶಸ್ತವಾಗಿದ್ದವು. ಇವುಗಳ ಪುಂಡಾಟಿಕೆ ಸ್ವಲ್ಪ ಅಧಿಕˌ ಪಳಗಿಸುವುದು ಚೂರು ತ್ರಾಸದಾಯಕ ಅನ್ನೋದು ಬಿಟ್ಟರೆ ಕಡಿಮೆ ನಿರ್ವಹಣೆ ಬಯಸುತ್ತಿದ್ದ ಇವು ರೈತಾಪಿಗಳಿಗೆ ಸಹಜವಾಗಿಯೆ ಅಚ್ಚುಮೆಚ್ಚಿನದಾಗಿದ್ದವು. 



ಆದರೆ ಬರುಬರುತ್ತಾ ಅವುಗಳಲ್ಲೂ ತಳಿಸಂಕರವಾಗಿ ಸ್ಥಳಿಯ ತಳಿಗಳ ಜೊತೆ ಸೇರಿ ಹುಟ್ಟಿದ ಅನೇಕ ಕುದುರೆಗಳೂ ಈಗ ಇವೆ ಅನ್ನಿ. ಆದರೆ ಅಂತಹ ಮಿಶ್ರತಳಿಗಳಿಗೆ ಮಾರುಕಟ್ಟೆಯಲ್ಲಿ ಅಂತಹ ಬೇಡಿಕೆಯಿರಲಿಲ್ಲ. ಪೇಟೆಯಲ್ಲಿ ಬಂಡಿಯೆಳೆಯಲು ಹೇರು ಹೊತ್ತು ಸಾಗಲು ಮಾತ್ರ ಅವು ಲಾಯಕ್ಕು ಅಂತ ಜನ ತೀರ್ಮಾನಿಸಿದ್ದರು. ಈಗಲೂ ಶುದ್ಧ ತಳಿಯ ಅದರಲ್ಲೂ ಸರಿಯಾಗಿ ಪಳಗಿಸಲಾದ ಅರೇಬಿಯನ್ ಕುದುರೆಗೆ ಬೇಡಿಕೆ ಇದ್ದೆ ಇತ್ತು. ಹುಡುಕಿಕೊಂಡು ಬರುವ ಗ್ರಾಹಕರು ಅಂತಹ ಅಶ್ವಗಳಿಗೆ ಕನಿಷ್ಠ  ಬೆಲೆಯಾಗಿಯೆ ಇನ್ನೂರು ರೂಪಾಯಿಗಳನ್ನ ಕೊಟ್ಟು ಖರೀದಿಸಲು ತಯಾರಾಗುತ್ತಿದ್ದರುˌ ಪರಿಶುದ್ಧ ತಳಿಯ ಅರೇಬಿಯನ್ ಕುದುರೆ ಹೊಂದಿರುವುದೆ ಅಂತಸ್ತಿನ ಲಕ್ಷಣ ಅಂತ ಜನರು ಭಾವಿಸುತ್ತಿದ್ದರು. ಸುಲ್ತಾನ ಅಂತಹ ಅರೇಬಿಯನ್ ಶುದ್ಧ ತಳಿಯವ. ಅವನ ಮುತ್ತಜ್ಜನ ಅಪ್ಪ ಹಾಗೂ ಅಮ್ಮನನ್ನ ಇವನ ಅಜ್ಜ ಅರವತ್ತು ವರ್ಷಗಳ ಹಿಂದೆ ಅಶ್ವ ವ್ಯಾಪಾರಿಯಿಂದ ಖರೀದಿಸಿ ಸಾಕಿದ್ದರು.

************

"ಹಳ್ಳಿಯ ಬದುಕು ಹಳಿಗೆ ಬಂದರಷ್ಟೆ ಸೊಗಸುˌ 
ಪೇಟೆಯವರ ಕಣ್ಣಿಗೇನು
ದೂರದ ಬೆಟ್ಟ ಸದಾ ಹಸಿರಾಗಿರುವ ಹಾಗೆಯೆ ಬೀಳುತ್ತಿರತ್ತೆ ಪುಗಸಟ್ಟೆ ಕನಸು"


ಮುಂದೆ ಅವುಗಳದೆ ವಂಶಾಭಿವೃದ್ಧಿಯಾಗಿ ತಳಿಶುದ್ಧತೆ ಕಾಪಿಟ್ಟುಕೊಂಡ ಅವರ ಕುಟುಂಬ ಪಾಲು ಪಡೆದು ಸ್ವತಂತ್ರವಾದ ಅವರ ಕುಟುಂಬಸ್ಥರೆಲ್ಲರಿಗೂ ಅವುಗಳ ಸಂತತಿಗಳನ್ನ ಹಂಚುತ್ತಾ ಹೋಗಿˌ ಸದ್ಯ ಮಾದೇವ ಹಾಗೂ ರಾಜಿ ಇವನ ಪಾಲಿಗೆ ಬಂದಿದ್ದರು. ಸಹಜವಾಗಿ ಆಗ ರಾಜಿಯ ಹಾಲೂಡುತ್ತಿದ್ದ ಕೂಸು ಸುಲ್ತಾನನೂ ಇವನ ಕೊಟ್ಟಿಗೆ ಸೇರಿ ಹೋಗಲು ಇದೆ ಕಾರಣವಾಗಿತ್ತು.

ಹಾಗೆ ನೋಡಿದರೆ ಇವನ ಕೈಯಡಿಯ ತರಬೇತಿಯಲ್ಲಿ ಪಳಗುತ್ತಿರುವ ಮೊದಲ ಅಶ್ವ ಸುಲ್ತಾನ. ಕುದುರೆ ಪಳಗಿಸುವಲ್ಲಿ ತಾಳ್ಮೆ ಇರಬೇಕುˌ ಕೊಂಚ ತಾಳ್ಮೆಗೆಟ್ಟರೂ ಒಂದು ವಿಧೇಯ ಕುದುರೆಯಾಗಬಲ್ಲ ಜಾತಿಯ ತುರಗವೊಂದು ಕೆಟ್ಟು ಹೋಗಿ ಕೇವಲ ಕಸಾಯಿಖಾನೆಯ ವಧೆಗೆ ಮಾತ್ರ ಅರ್ಹವಾಗುತ್ತದೆ ಅನ್ನುವ ಅಪ್ಪನ ಮಾತು ಪದೆ ಪದೆ ಅವನಿಗೆ ನೆನಪಾಗುತ್ತಿತ್ತು. ಹೀಗಾಗಿ ಹಚ್ಚು ದಂಡಿಸಿ ಹೊಡೆದು ಅವನಿವನನ್ನ ಬಾಗಿಸಲೂ ಹೊರಡಲಿಲ್ಲˌ ಹಾಗಂತ ಅತಿ ಮುದ್ದು ಮಾಡಿ ನಯ ವಿನಯದ ನುಡಿಗಳಿಂದ ಕುದುರೆಯ ಅಭ್ಯಾಸಗಳನ್ನ ಕೆಡಿಸಲೂ ಇಲ್ಲ. ಹೀಗಾಗಿ ಶಿಸ್ತಿನ ಸಿಪಾಯಿಯಂತೆ ಸುಲ್ತಾನ ಇವನ ತರಬೇತಿಯಲ್ಲಿ ಪಳಗುತ್ತಲಿದ್ದ. 


ಒಬ್ಬ ಉತ್ತಮ ಅಶ್ವರೋಹಿ ತನಗಿಂತ ಮೊದಲು ತನ್ನ ಕುದುರೆಯ ಕಾಳಜಿ ವಹಿಸುತ್ತಾನೆ ಅನ್ನುವ ಅಪ್ಪನದೆ ಮತ್ತೊಂದು ಮಾತನ್ನೂ ಚಾಚೂ ತಪ್ಪದೆ ಇವನು ಪಾಲಿಸುತ್ತಿದ್ದ. ಯಾವುದೆ ಶ್ರಮದಾಯಕ ಕೆಲಸ ಮಾಡಿಸಿದˌ ದೂರ ಪ್ರಯಾಣ ಹೋಗಿಸಿದ ತರುವಾಯ ಮೊದಲು ಹಟ್ಟಿ ಹುಡುಕಿ ಸ್ವಚ್ಛವಾದ ಸೂಕ್ತ ಗೊಂತಿನಲ್ಲಿ ಸುಲ್ತಾನನ ತಂಗುವ ವ್ಯವಸ್ಥೆ ಮಾಡಿˌ ಅವನ ಮೇವು ನೀರಿನ ಮೇಲುಸ್ತುವರಿ ವಹಿಸಿ. ಅವನ ಮೈ ನೋವಿಗೆ ಅಗತ್ಯವಿದ್ದರೆ ಎಣ್ಣೆ ಮಾಲೀಷಿನ ವ್ಯವಸ್ಥೆಯನ್ನೂ ಮಾಡಿˌ ಕುತ್ತಿಗೆ ತಿಕ್ಕಿ ಮುಖ ಕೆರೆದು ಮುದ್ದಿಸಿ ನಾಲ್ಕು ಮಾತುಗಳನ್ನಾಡಿ ಆಗಾಗ ಆತ್ಮೀಯತೆಯನ್ನ ಪ್ರಕಟಿಸುತ್ತಾ ಕುದುರೆಯೊಂದಿಗೆ ಒಂದು ಸಮನ್ವಯವನ್ನವನು ಸಾಧಿಸಿದ್ದ. ಮಾದೇವನಿಂದ ಪೌರುಷದ ಮೈಕಟ್ಟನ್ನೂ ಹಾಗೂ ರಾಜಿಯಿಂದ ಜೇನು ಬಣ್ಣವನ್ನೂ ಸಹಜವಾಗಿ ಪಡೆದಿದ್ದ ಸುಲ್ತಾನನ್ನ ಸಾಮರ್ಥ್ಯದಲ್ಲಾಗಲಿ ರೂಪದಲ್ಲಾಗಲಿ ಮೀರಿಸುವ ಕುದುರೆಗಳು ಸುತ್ತಲಿನ ಫಾಸಲೆಯಲ್ಲೆ ಇಲ್ಲ ಅನ್ನುವ ಅತೀವ ವಿಶ್ವಾಸ ಅವನಲ್ಲಿ ಮನೆ ಮಾಡಿತ್ತು. ಮುಂದೆ ಸಂಪೂರ್ಣವಾಗಿ ಪ್ರೌಢನಾದ ನಂತರ ಸುಲ್ತಾನ ಅವನ ಗತ್ತು ಗೈರತ್ತನ್ನ ಮತ್ತಷ್ಟು ಹಚ್ಚಿಸಲಿದ್ದ.


ಇತ್ತೀಚೆಗೆ ಈ ಅರೇಬಿಯನ್ ತಳಿಯ ಕುದುರೆಗಳಿಗೆ ಹೆಚ್ಚಿರುವ ಬೇಡಿಕೆಯಿಂದ ಅವುಗಳನ್ನ ಕದ್ದು ಕಳ್ಳ ಸಾಗಣೆ ಮಾಡಿ ಇನ್ನೂ ದೂರದ ಪಶ್ಚಿಮದಲ್ಲಿ ಅವನ್ನ ಮರು ಮಾರಾಟ ಮಾಡುವ ಢಕಾಯತರ ದಂಧೆ ಗರಿಗೆದರಿತ್ತು. ಸಾಮಾನ್ಯವಾಗಿ ಈ ಕುದುರೆ ಕಳ್ಳರ ಗ್ಯಾಂಗಿನ ಕಾರ್ಯಾಚರಣೆಗಳು ಇಂತಿರುತ್ತಿದ್ದವು. 


ಮೊದಲಿಗೆ ಯಾವುದಾದರೂ ನವ ವಸಿತ ಊರನ್ನ ಗುರುತಿಸಿ ಆ ಗುಂಪಿನ ಕೇಡಿಗಳಲ್ಲೊಬ್ಬ ರೈತಾಪಿಯ ಸೋಗಿನಲ್ಲಿ ಪಟ್ಟಣದ ರೈತ ಸಲಕರಣೆ ಮಾಡುವ ಗಾಡಿಖಾನೆಯಲ್ಲಿˌ ಪಡಖಾನೆಯಲ್ಲಿˌ ಊಟದ ಮನೆಗಳಲ್ಲಿ ಅಂಗಡಿಗಳಲ್ಲಿ ಗ್ರಾಹಕರ ಸೋಗಿನಲ್ಲಿ ಅದೂ ಇದು ಮಾತನಾಡಿ ಆ ಸೀಮೆಯ ಸುತ್ತಮುತ್ತಲಿನಲ್ಲಿರುವ ಬಲಶಾಲಿ ಅರೇಬಿಯನ್ ಅಶ್ವಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ. ಅನಂತರ ಅಂತಹ ತೋಟದ ಮನೆಗಳಿಗೆ ಅವರಲ್ಲಿಬ್ಬರು ಕೌಬಾಯ್ಗಳ ವೇಷದಲ್ಲಿ ಕುದುರೆ ಕ್ರಯ ಮಾಡಲು ತೆರಳುವ ವೇಷದಲ್ಲಿ ಹೋಗಿ ಆ ಜಮೀನಿನ ರೈತನಿಗೆ ತಾವು ಬಂದ ಉದ್ದೇಶ ಅರುಹುತ್ತಿದ್ದರು. ಮಾರುವ ಉದ್ದೇಶ ರೈತನಿಗಿರದಿದ್ಢರೆ ಕನಿಷ್ಠ ಕುದುರೆಯನ್ನ ತೋರಿಸುವಂತಾದರೂ ಪ್ರಾರ್ಥಿಸುತ್ತಿದ್ದರು. ಹಾಗೆ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಕುದುರೆಯನ್ನ ತೋರಿಸಿದರೆ ಸಾಕು ಆಗ ಅದನ್ನ ತಟ್ಟಿ ತಡವಿ ಅದರ ಅಂದ ಚಂದವನ್ನ ಹೊಗಳಿˌ ಅದರ ಕುದುರೆ ಜಾತಕವಿದ್ದರೆ ತೋರಿಸಿ ಅಂತ ಜುಲುಮೆ ಮಾಡುತ್ತಿದ್ದರು. 


ಕಡೆಗೆ ತನ್ನ ಕುದುರೆಯ ಸ್ತುತಿ ಕೇಳಿ ಉಬ್ಬಿದ ರೈತ ಒತ್ತಾಯಕ್ಕೆ ಮಣಿದು ಅದರ ಸುಳಿ ಜಾತಕ ತೋರಿಸಿದ್ದೆ ತಡ ತಮ್ಮಲ್ಲಿರುತ್ತಿದ್ದ ಅಶ್ವ ಪಂಚಾಂಗಕ್ಕೆ ಅದನ್ನ ಹೋಲಿಸಿ "ಆಹಾ ಇಂತಾ ಕುದುರೆಯನ್ನ ಈ ಜನ್ಮದಲ್ಲೆ ತಾವು ಕಂಡಿಲ್ಲ ಅಂತಲೂ!" "ಇಂತಹ ಶ್ರೇಷ್ಠ ತಳಿಯ ಕುದುರೆಯನ್ನ ಕಂಡದ್ದೆ ತಮ್ಮ ಪೂರ್ವ ಜನ್ಮ ಪುಣ್ಯ" ಅಂತಲೂˌ "ಸಾಧ್ಯವಾದರೆ ಅದನ್ನ ಕೊಳ್ಳುವುದು ತಮ್ಮ ಅಜನ್ಮ ಸಾರ್ಥಕತೆ" ಅಂತಲೂ ತಾರಾಮಾರ ಹೊಗಳಿ ಅವುಗಳ ದೈಹಿಕ ಲಕ್ಷಣ ಹಾಗೂ ಅದರ ಸಾಮರ್ಥ್ಯ - ಅಂದ ಚಂದಗಳನ್ನ ಪರಿಪರಿಯಾಗಿ ಬಣ್ಣಿಸಿ ಈಗಾಗಲೆ ಹೆಮ್ಮೆಯಿಂದ ಉಬ್ಬಿ ನೆಲದಿಂದ ಒಂದಡಿ ಮೇಲೆ ತೇಲುತ್ತಿರುತ್ತಿದ್ದ ಕುದುರೆಯ ಮಾಲಿಕನನ್ನ ನೇರ ಅಟ್ಟಕ್ಕೇರಿಸಿ ಅವನ ಮುಂದೆ ಒಂದು ಪ್ರಸ್ತಾವನೆಯನ್ನಿಡುತ್ತಿದ್ದರು. ದೂಸರಾ ಮಾತಿಗೆ ಅವಕಾಶ ನೀಡದಂತೆ "ಆ ಅಶ್ವಕ್ಕೆ ಸುತ್ತು ಸೀಮೆಯಲ್ಲೆ ಮುನ್ನೂರು ರೂಪಾಯಿಗೆ ಕಡಿಮೆ ದರ ಇರಲಿಕ್ಕಿಲ್ಲ" ಅಂತಲೂˌ "ತಾವು ಯಾವುದೆ ಚೌಕಾಸಿ ಈ ವಿಷಯದಲ್ಲಿ ಮಾಡದೆ ಖರೀದಿಸಲು ತುದಿಗಾಲ ಮೇಲೆ ನಿಂತಿದ್ದೇವೆ" ಅಂತಲೂˌ ರೈತನಿಗೆ ನಂಬಿಸುವಂತೆ ಮಾತನಾಡಿ ಸ್ಥಳದಲ್ಲೆ ನೂರು ರೂಪಾಯಿ ಮುಂಗಡ ತೆಗೆದು ಮೇಜಿನ ಮೇಲಿಟ್ಟುˌ ಸದ್ಯಕ್ಕೆ ಅದನ್ನ ಇಟ್ಟುಕೊಳ್ಳುವಂತೆಯೂ ಈ ಸುಗ್ಗಿ ಮುಗಿದ ಮೇಲೆ ಚಳಿಗಾಲದಲ್ಲಿಯೆ ತಾವು ಬಂದು ಕುದುರೆ ಕೊಂಡು ಹೋಗುವುದಾಗಿಯೂˌ ಆಗ ಬಾಕಿ ಉಳಿದ ಮೊತ್ತವನ್ನ ಅವತ್ತಿನ ಮಾರುಕಟ್ಟೆ ದರಕ್ಕೆ ತಕ್ಕಂತೆ ಲೆಕ್ಕ ಹಾಕಿ ಪಾವತಿಸುವುದಾಗಿಯೂ ಹಾಗೊಂದು ವೇಳೆ ತಾವು ವಾಯಿದೆ ಮೀರಿದರೆ ಯಾವುದೆ ಕಾರಣಕ್ಕೂ ರೈತ ಮುಂಗಡವಾಗಿ ಕೊಟ್ಟ ಹಣವನ್ನ ಹಿಂದಿರುಗಿಸಬೇಕಿಲ್ಲ ಎಂದು ಹೇಳಿ ರೈತನ ತಲೆ ಕೆಡಿಸುತ್ತಿದ್ದರು. 


ಹೇಗೆ ನೋಡಿದರೂ ತನಗೆ ಸಾಧಕವಾಗಿಯೂ ಲಾಭದಾಯಕವಾಗಿಯೂ ಪರಿಣಮಿಸಬಹುದಾದ ಈ ಏಕಮುಖ ವ್ಯವಹಾರದಿಂದ ಸಂತುಷ್ಟಗೊಳ್ಳುತ್ತಿದ್ದ ರೈತ ಅಸಲಿಗೆ ಮಾರಲು ಮನಸಿಲ್ಲದಿದ್ದರೂ ಸಹ ಆಗುವ ಅಪಾರ ಲಾಭವನ್ನ ಊಹಿಸಿಯೆ ರೋಮಾಂಚಿತನಾಗಿ ಅರೆ ಮನಸಿನಿಂದಲೆ ಇದಕ್ಕೆ ಸಮ್ಮತಿಸುತ್ತಿದ್ದ. ಮಾರುಕಟ್ಟೆಯಲ್ಲಿ ಕೊಂಡು ಹೋಗಿ ಮಾರಿದರೆ ನೆಟ್ಟಗೆ ಇನ್ನೂರು ರೂಪಾಯಿ ದರ ಮೀರದ ತನ್ನ ಕುದುರೆಗೆ ಈ ಅಪರಿಚಿತರು ಅರ್ಧ ಪಟ್ಟು ಹೆಚ್ಚುವರಿ ಬೆಲೆಯನ್ನ ಅದೂ ಮನೆ ಬಾಗಿಲಿಗೆ ಬಂದು ಕೊಟ್ಟು ಕೊಳ್ಳುವುದೇನು ಸಾಮಾನ್ಯದ ವಿಷಯವೆ? ಬರುವ ಹಂಗಾಮಿನಲ್ಲಿ ಇದನ್ನ ಬೆದೆಗೆ ಬಂದ ಹೆಣ್ಣು ಕುದುರೆಯ ಮೇಲೇರಿಸಿ ಗಬ್ಬವಾಗಿಸಿದರೆ ಇದನ್ನ ಮಾರಿದರೂ ಮತ್ತೆರಡು ವರ್ಷಗಳಲ್ಲಿ ಇದರಂತಹದ್ದೆ ಬಲಶಾಲಿ ತುರಗ ತನ್ನ ಹಟ್ಟಿಯಲ್ಲಿ ಕೆನೆಯುತ್ತಾ ನಿಂತಿರುತ್ತದೆ. ಅಷ್ಟಲ್ಲದೆ ಸುಗ್ಗಿಗೆ ಇನ್ನೂ ನಾಲ್ಕು ಋತುಗಳು ಬಾಕಿಯಿದ್ದು ಹೇಗೂ ಮುಂದಿನ ಏಳೆಂಟು ತಿಂಗಳುಗಳ ಕಾಲ ಕುದುರೆ ಬಳಿಯೆ ಇರುವದರಿಂದ ಈ ಹಂಗಾಮಿನಲ್ಲಿ ಅದರ ಗರಿಷ್ಠ  ಪ್ರಯೋಜನವನ್ನ ಪಡೆದುˌ ಬೇಕಿದ್ದರೆ ಮುಂದಿನ ವರ್ಷ ಬಾಡಿಗೆಗೆ ಅಕ್ಕಪಕ್ಕದವರ ಅಶ್ವಗಳನ್ನ ಪಡೆದು ನೊಗಕ್ಕೇರಿಸಿದರಾಯಿತು ಎಂದು ಯೋಚಿಸುತ್ತಿದ್ದ. ಕೂತಲ್ಲೆ ಆಗುವ ನೂರರಿಂದ ನೂರೈವತ್ತು ರೂಪಾಯಿಯ ಲಾಭದಿಂದ ತನ್ನ ತೋಟ ಮನೆಯ ಅಗತ್ಯಗಳು ತೀರಿ ಸಾಧ್ಯವಾದರೆ ಮುಂದಿನ ವರ್ಷದೊಳಗೆ ತಾನೂ ಸಹ ಸಾರೋಟು ಇಟ್ಟವರ ಸಾಲಿಗೆ ಸೇರಬಹುದು ಎನ್ನುವ ಕನಸು ಕಾಣುತ್ತಾ ಕೈ ನೀಡಿ ಆ ಹಣವನ್ನ ಇಸಿದುಕೊಳ್ಳುತ್ತಿದ್ದ.

ಅಷ್ಟರಲ್ಲಾಗಲೆ ಸಂಜೆಯಾಗಲು ಸಮೀಪಿಸುತ್ತಿತ್ತು. ಹೀಗಾಗಿ ಕತ್ತಲಲ್ಲಿ ತಡವರಿಸಿಕೊಂಡು ಪ್ರಯಾಣ ಮುಂದುವರೆಸುವುದಕ್ಕಿಂತ ಅವತ್ತಿನ ರಾತ್ರಿ ಬೇಕಿದ್ದರೆ ಆರಾಮವಾಗಿ ಅಲ್ಲೆ ಕಳೆದು ಹೋಗುವಂತೆ ಹೇಳಿದರೂ ಸಹ ಕುದುರೆ ಕೊಳ್ಳಲು ಬಂದ ಸೋಗಿನ ವ್ಯಾಪಾರಿಗಳು ಆ ಆತಿಥ್ಯದ ಆಹ್ವಾನವನ್ನ ನಿರಾಕರಿಸಿ ಕೇವಲ ಚಹಾ ತಿಂಡಿಗಳ ಉಪಚಾರಕ್ಕೆ ತೃಪ್ತರಾದಂತೆ ನಟಿಸಿ ಒಪ್ಪಂದದ ಪತ್ರಕ್ಕೆ ರೈತನ ಹೆಬ್ಬೆಟ್ಟಿನ ಗುರುತು ಹಾಕಿಸಿಕೊಂಡು. ಅಲ್ಲಿಂದ ಕಾಲ್ಕೀಳುತ್ತಿದ್ದರು.


*********

ರಾತ್ರಿ ಇನ್ನೇನು ಆರಂಭವಾಗಲಿಕ್ಕಿರೋದರಿಂದ ಕೈಲಿರುವ ಆ ದೊಡ್ಡ ಮೊತ್ತವನ್ನ ನಾಳೆ ಬ್ಯಾಂಕಿಗೆ ಕಟ್ಟುವ ಅಂದು ರೈತ ಅದೊಂದು ರಾತ್ರಿ ಮನೆಯಲ್ಲೆ ದುಡ್ಡನ್ನ ಇರಿಸಿಕೊಳ್ಳುವುದು ಅನಿವಾರ್ಯವಾಗುತ್ತಿತ್ತು. ಅಸಲು ಕಥೆ ಆರಂಭವಾಗುತ್ತಿದ್ದುದೆ ಅನಂತರ. ಬಂದವರು ಸರಿಯಾಗಿ ಕಣ್ಣಲ್ಲೆ ಅಲ್ಲಿನ ಪರಿಸರವನ್ನ ಅಳೆದು ಹೋಗಿರುತ್ತಿದ್ದರಲ್ಲˌ ಸರಿಯಾಗಿ ಅದೆ ರಾತ್ರಿ ಮುಖ ಮೋರೆ ಮುಚ್ಚಿಕೊಂಡ ನಾಲ್ಕೈದು ಮಂದಿ ಆ ತೋಟಕ್ಕೆ ದಾಳಿಯಿಡುತ್ತಿದ್ದರುˌ ಮಾರಕಾಸ್ತ್ರಗಳನ್ನ ತೋರಿಸಿ ಬೆದರಿಸಿ ಅವರನ್ನ ಕಂಭಕ್ಕೆ ಕಟ್ಟಿ ಹಾಕಿˌ ಆ ಹಣವನ್ನಷ್ಟೆ ಅಲ್ಲದೆ ಇನ್ನಿತರ ಉಳಿತಾಯವನ್ನೂ ದೋಚುತ್ತಿದ್ದರು. ಕೆಲವೊಮ್ಮೆ ಮರಿ ಕುದುರೆಗಳಿದ್ದರೆ ಅವನ್ನೂ ಕದ್ದು ಜೊತೆಗೆ ಕೊಂಡೊಯ್ಯುತ್ತಿದ್ದರು. ಈ ಅನಿರೀಕ್ಷಿತ ದರೋಡೆಕೋರರ ದಾಳಿಯಿಂದ ಸಹಜವಾಗಿ ರೈತ ಕಂಗಾಲಾಗಿ ಹೋಗಿರುತ್ತಿದ್ದ. ತೋಟಗಳು ಪರಸ್ಪರ ಮೈಲಿಗಟ್ಟಲೆ ದೂರ ಇರುತ್ತಿದ್ದುದರಿಂದ ಈ ದರೋಡೆಯ ಸುದ್ದಿ ಅನ್ಯರಿಗೆ ಅರಿವಾಗದೆ ದಿನ ಎರಡು ದಿನ ಯಾರೂ ಬಿಡಿಸಲು ಬಾರದೆ ಹಾಗೆ ಹಿಂಸೆ ಅನುಭವಿಸುತ್ತಾ ಕಂಭಕ್ಕೆ ಬಿಗಿಸಿಕೊಂಡಂತೆಯೆ ಉಳಿದಿರುತ್ತಿದ್ದವರೂ ಇದ್ದರು! ಹೀಗಾಗಿ ಪಟ್ಟಣದ ಅಪರಾಧ ಪ್ರಕರಣಗಳ ತನಿಖೆ ನಡೆಸುವ ಶರೀಫನ ಕಛೇರಿಯಲ್ಲಿ ಹಲವು ಬಾರಿ ಈ ಬಗ್ಗೆ ದೂರೆ ದಾಖಲಾಗುತ್ತಿರಲಿಲ್ಲ. ಅದು ಆ ಕಳ್ಳ ಕುದುರೆ ವ್ಯಾಪಾರಿಗಳಿಗೆ ಸಹಜವಾಗಿ ಸಾಧಕವಾಗಿ ಪರಿಣಮಿಸುತ್ತಿತ್ತು.


ಅದಾಗಿ ಮೂರ್ನಾಲ್ಕು ತಿಂಗಳಲ್ಲಿ ಮುಂಗಡ ಕೊಟ್ಟವ ಹಿಂತಿರುಗಿ ಬಂದು ಮಹಾ ವಿಪತ್ತೊಂದರಲ್ಲಿ ತನ್ನ ವ್ಯವಹಾರಿಕ ಪಾಲುದಾರ ಸತ್ತನೆಂದೂˌ ಈಗ ಒಂಟಿಯಾಗಿ ಈ ವ್ಯಾಪಾರ ನಡೆಸಲು ತಾನು ಶಕ್ತನಲ್ಲವೆಂದೂˌ ಆದಾಗ್ಯೂ ರೈತ ತಾನು ಮುಂಗಡವಾಗಿ ಕೊಟ್ಟ ಹಣದಲ್ಲಿ ಕೇವಲ ತನ್ನ ಪಾಲಿನ ಐವತ್ತು ಶೇಕಡಾ ಹಣವನ್ನಾದರೂ ಹಿಂದಿರುಗಿಸಬೇಕೆಂದೂ ಹೊಸ ವರಸೆ ತೆಗೆಯತ್ತಿದ್ದ. ಈಗಾಗಲೆ ದರೋಡೆಗೆ ಒಳಗಾಗಿ ಬರಿಗೈಯವನಾಗಿ ಕಡೆಗೆ ಅವರಿವರಿಂದ ಸಾಲ ಮಾಡಿ ಹೇಗೋ ತನ್ನ ಹಳಿ ತಪ್ಪಿದ ಬದುಕನ್ನ ಮತ್ತೆ ಹಸನುಗೊಳಿಸಿಕೊಳ್ಳಲು ಹಣಗಾಡುತ್ತಿರುವ ಬಡ ರೈತ ಈ ಅನಿರೀಕ್ಷಿತ ಬೇಡಿಕೆಯನ್ನ ಆಲಿಸಿಯೆ ಕಂಗಾಲಾಗುತ್ತಿದ್ದ. ನಿಂತ ನಿಲುವಲ್ಲೆ ಐವತ್ತು ರೂಪಾಯಿಯಷ್ಟು ಬೃಹತ್ ಮೊತ್ತ ಹೊಂದಿಸಿಕೊಡುವುದು ಅವನ ಸಾಮರ್ಥ್ಯಕ್ಕೆ ಮೀರಿದುದಾಗಿರುತ್ತಿತ್ತು. ಅವನ ಪರಿಪರಿಯಾದ ವಿನಂತಿಗಳಿಗೆ ಕಿಂಚಿತ್ತೂ ಕಿವಿಗೊಡದ ಆ ಕುದುರೆ ಕಳ್ಳರ ಗುಂಪಿನ ವ್ಯಾಪಾರಿ ಒಂದಾ ತನಗೆ ಕೂಡಲೆ ಹಣ ಹೊಂದಿಸಿ ಕೊಡಬೇಕಂತಲೂ ಇಲ್ಲದಿದ್ದಲ್ಲಿ ಕುದುರೆಯನ್ನಾದರೂ ಅಂದಿನ ಮಾರುಕಟ್ಟೆ ದರಕ್ಕೆ ಕ್ರಯ ಮಾಡಿ ಕೊಟ್ಟಾದರೂ ಸರಿ ವ್ಯವಹಾರ ಚುಕ್ತಾ ಮಾಡಬೇಕೆಂದು ಒತ್ತಡ ಹೇರುತ್ತಿದ್ದ. ಹಾಗಾಗದಿದ್ದಲ್ಲಿ ಶರೀಫನಲ್ಲಿಗೆ ಈ ವಾಜ್ಯ ಕೊಂಡೊಯ್ಯುವ ಬೆದರಿಕೆಯನ್ನೊಡ್ಡಿ ರೈತನ ವಿರುದ್ಧ "ವಂಚನೆ ಪ್ರಕರಣ" ದಾಖಲಿಸುವುದಾಗಿಯೂ ಕಳ್ಳ ವ್ಯಾಪಾರಿ ಒಳಗುದ್ದು ಕೊಟ್ಟು ರೈತನ ಕಳವಳ ಮಾನಸಿಕ ಗೊಂದಲ ಹಚ್ಚಿಸುತ್ತಿದ್ದ. 


ಈ ವರ್ಷ ಕಳೆದರೆ ಮಾಡಿರುವ ಸಾಲ ತೀರಿಸಿ ಇವನ ಹಣ ಹೊಂದಿಸಿಕೊಡುವ ಭರವಸೆ ಅದಾಗಲೆ ಕಳೆದುಕೊಂಡಿರುತ್ತಿದ್ದ ರೈತನಿಗೆˌ ಈಗಾಗಲೆ ಹಣಕಾಸಿನ ವಿಷಯದಲ್ಲಿ ಕುಗ್ಗಿ ಹೋಗಿರುವ ತಾನು ಈ ಬೇಡದ ಪಂಚಾಯ್ತಿಕೆಯ ಗೋಜಲುಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ಗೊಡವೆ ಸಹಜವಾಗಿ ಬೇಡವಾಗಿರುತ್ತದೆ. ಸಾಲದ್ದಕ್ಕೆ ಶರೀಫನ ಕಛೇರಿಯಲ್ಲಿ ವಂಚನೆಯ ಮೊಕದ್ದಮೆ ದಾಖಲಾಗಿ ಊರೆಲ್ಲ ಒಮ್ಮೆ ಹೆಸರು ಕೆಟ್ಟರೆ ಮುಂದೆ ಅಲ್ಲಿಯೆ ತಳ ಊರಿ ಬದುಕಬೇಕಾದ ತನಗೆ ಅಸಂಖ್ಯ ಕಷ್ಟ ನಷ್ಟಗಳು ಎದುರಾಗುವ ಭೀತಿಯೂ ಕಾಡುತ್ತದೆ. ಹೀಗೆ ಮಾನಸಿಕವಾಗಿ ಜರ್ಜರಿತನಾಗುವ ರೈತ ಆ ಕುದುರೆಯನ್ನ ಕೊಟ್ಟೆ ಋಣ ಮುಕ್ತನಾಗುವ ಸುಲಭ ಪರಿಹಾರವನ್ನೆ ಸಹಜವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ. ಆದರೆ ಈ ಹಿಂದೆ ಮುನ್ನೂರರವರೆಗೂ ಕುದುರೆಯ ದರವನ್ನೇರಿಸಿ ಬೆಟ್ಟ ಹತ್ತಿಸಿದ್ದ ಅದೆ ವ್ಯಾಪಾರಿ ಈಗ ಮಾರುಕಟ್ಟೆಯ ಗರಿಷ್ಠ ದರ ಇನ್ನೂರೆ ಎಂದೂ ಇನ್ನಷ್ಟು ಚೌಕಾಸಿ ಮಾಡಿ ಮತ್ತೂ ಇಪ್ಪತ್ತೈದು ರೂಪಾಯಿ ಅಗ್ಗವಾಗಿಯೆ ದರ ನಿಷ್ಕರ್ಶೆ ಮಾಡಿ ಮುಂಗಡ ಕಡಿದು ಕೊಂಡು ಕೇವಲ ಎಪ್ಪತ್ತೋ ಎಂಬತ್ತೋ ರೂಪಾಯಿಗಳಿಗೆ ಇನ್ನೂರು ಇನ್ನೂರೈವತ್ತು ರೂಪಾಯಿಗಳ ಕುದುರೆ ಬಿಚ್ಚಿಕೊಂಡು ಹೋಗುತ್ತಿದ್ದ. ದೂರ ಪಶ್ಚಿಮದಲ್ಲಿ ಅದನ್ನೆ ಮತ್ತೆ ಇನ್ನೂರಕ್ಕೆ ಮಾರಿ ತಾನು ಮುಂಗಡ ಕೊಟ್ಟು ದೋಚಿದ್ದ ಹಣವೂ ಸೇರಿ ಭರ್ತಿ ಒಂದಕ್ಕೆ ಐದರಷ್ಟು ಲಾಭದ ಸುರಿಮಳೆ ಗಳಿಸುತ್ತಿದ್ದ. ಅದೆ ಸಮಯಕ್ಕೆ ಈ ಮೋಸದ ಬಲೆಗೆ ಬಿದ್ದ ರೈತನ ಬದುಕು ಮಾತ್ರ ಮೂರಾಬಟ್ಟೆಯಾಗಿ ಹೋಗಿರುತ್ತಿತ್ತು.

ಇಂತಹ ಹಗಲು ದರೋಡೆಯ ಪ್ರಕರಣಗಳು ಈ ಹೊಸ ತೋಟ ಮನೆಗಳ ಸುತ್ತಮುತ್ತಲ ವಠಾರದಲ್ಲೂ ನಡೆದ ಸುದ್ದಿ ಇವನ ಕಿವಿಗೂ ಬಂದು ಮುಟ್ಟಿತ್ತು. ಹೆಚ್ಚು ದೂರ ಏಕೆ? ಹೊಸತಾಗಿ ಅಲ್ಲೆ ಹತ್ತು ಮೈಲಿ ಸಮೀಪದಲ್ಲಿ ಹೊಸತಾಗಿ ಹೊಲಮನೆ ಮಾಡಲು ಬಂದಿದ್ದ ರೈತನೊಬ್ಬ ಇತ್ತೀಚೆಗೆ ಹೀಗೆ ಮೋಸ ಹೋಗಿದ್ದ. ಗೋಪಿಯಂತೆ ಸ್ಥಳಿಯ ವಲಸಿಗರ ಭಾಷೆ ಬಾರದ ದೇಶದಿಂದ ಬಂದಿದ್ದವನವನು. ಅವನನ್ನೂ ಹೀಗೆ ಕುತಂತ್ರದಿಂದ  ತಮ್ಮ ಖೆಡ್ಡಾದ ಜಾಲಕ್ಕೆ ಕೆಡವಿಕೊಂಡಿದ್ದ ಖದೀಮರು ರಾತ್ರೋ ರಾತ್ರಿ ಅವನ ತೋಟದ ಮನೆಯಲ್ಲಿ ದರೋಡೆ ಮಾಡಿ ಅವನಲ್ಲಿದ್ದ ಎರಡು ಕುದುರೆಗಳಿಗೆ ತಾವೆ ಮುಂಗಡವಾಗಿ ಕೊಟ್ಟಿದ್ದ ಇನ್ನೂರು ರೂಪಾಯಿಗಳಲ್ಲದೆ ಸಂಸಾರವಂದಿಗನಾದ ಅವನ ಹೆಂಡತಿ ಹಾಗೂ ಪುಟ್ಟ ಮಕ್ಕಳನ್ನೂ ಬಿಡದೆ ಕಂಭಕ್ಕೆ ಬಿಗಿದು ಹಿಂಸಿಸಿ ನೂರಾರು ರೂಪಾಯಿ ಬೆಲೆ ಬಾಳುತ್ತಿದ್ದ ಅವರ ನಗ ನಟ್ಟುಗಳನ್ನೂ ಸಹ ಒಂದೂ ಬಿಡದ ಹಾಗೆ ದೋಚಿದ್ದರು. ಸಾಲದ್ದಕ್ಕೆ ಅವನ ಹಟ್ಟಿಯಿಂದ ಎರಡು ಎಳೆಯ ಕುದುರೆ ಮರಿಗಳನ್ನೂ ಕೊಂಡೊಯ್ದಿದ್ದರು. ಅವರ ಈ ದೈನೇಸಿ ಸ್ಥಿತಿ ಪಕ್ಕದ ತೋಟದ ತಿಮ್ಮಯ್ಯ ಎರಡು ದಿನ ಕಳೆದು ಕಾರ್ಯ ನಿಮಿತ್ತ ಅವರಲ್ಲಿಗೆ ಹೋದಾಗಲಷ್ಟೆ ಬಯಲಿಗೆ ಬಂದಿತ್ತು. ಎರಡು ದಿನ ಅನ್ನ ನೀರಿಲ್ಲದೆ ನಿತ್ರಾಣರಾಗಿ ಕಟ್ಟಿದಲ್ಲೆ ಜೋತು ಬಿದ್ದಿದ್ದ ಅವರ ಸ್ಥಿತಿ ದಾರುಣವಾಗಿತ್ತು. 

ಸಹೃದಯಿ ತಿಮ್ಮಯ್ಯ ಹಾಗೂ ಲೀಲಕ್ಕ ಅವರಿಗೆ ಸಾಂತ್ವಾನ ಹೇಳಿˌ ಬಲವಾದ ಪಹರೆಗೆ ವ್ಯವಸ್ಥೆ ಮಾಡಿ ಅವರೊಂದಿಗೆ ಎರಡು ದಿನ ತಂಗಿ ಅವರ ಕಷ್ಟಕ್ಕೆ ಸ್ಪಂದಿಸದಿದ್ದಿದ್ದರೆ ಅವರು ಆ ಅಘಾತದಿಂದ ಚೇತರಿಸಿಕೊಳ್ಳುವುದೆ ಕಷ್ಟವಾಗುತ್ತಿತ್ತು. ದರೋಡೆ ನಡೆದು ದಿನವೆರಡು ಆಗಿದ್ದುದರಿಂದ ಕಳ್ಳರ ಜಾಡು ಹಿಡಿದು ಯಾವ ದಿಕ್ಕಿಗೆ ಆ ಖದೀಮರು ಸಾಗಿರಬಹುದು ಎಂಬ ತನಿಖೆಗೆ ಇಳಿಯುವದೂ ಅಸಾಧ್ಯವಾಗಿತ್ತು. ಇದಾಗಿ ಸರಿಯಾಗಿ ಮೂರೂವರೆ ತಿಂಗಳಾಗುವಷ್ಟರಲ್ಲೆ ಮೇಲೆ ವಿವರಿಸಿದಂತೆಯೆ ಆ ಖದೀಮ ವ್ಯಾಪಾರಿಗಳು ಏಕಾಏಕಿ ಯಾವ ಸೂಚನೆಯನ್ನೂ ಕೊಡದೆ ಬಂದು. ತಮ್ಮ ಕರುಣಾಜನಕ ಕಟ್ಟುಕಥೆ ಹೇಳಿˌ  ಚಿಲ್ಲರೆ ಕಾಸಿಗೆ ಆ ರೈತನ ಕುದುರೆಗಳೆರಡನ್ನೂ ಅಕ್ಷರಶಃ ದೋಚಿಕೊಂಡು ಪರಾರಿಯಾಗಿದ್ದರು.


ಹೀಗಾಗಿ ಇಂತಹ ಸಂಭವನೀಯ ದರೋಡೆಗಳಿಂದ ಹುಷಾರಾಗಿ ಪಾರಾಗಬೇಕಾದ ಅಗತ್ಯ ಪ್ರತಿಯೊಬ್ಬ ಶ್ರಮಿಕ ರೈತಾಪಿಗೂ ಇತ್ತು. ಸುದೂರವಾದ ತೋಟದ ಒಂಟಿ ಮನೆಗಳಲ್ಲಿ ಸಂಸಾರವಂದಿಗರಾಗಿ ಕೃಷಿಯ ಸಾಹಸಕ್ಕಿಳಿದು ವ್ಯವಸಾಯದ ಜೀವನದಲ್ಲಿನ ಕಷ್ಟ ನಷ್ಟಗಳನ್ನ ಏಗಿ ಎದುರಿಸಿ ಅನುಭವಿಸಿ ಅದರಿಂದ ಪಾರಾಗಲು ಸದಾ ತಾನೆ ಕುತ್ತಿಗೆಗೆ ನೊಗ ಏರಿಸಿಕೊಂಡ ಕುದುರೆಯಂತೆ ದುಡಿಯುವ ಸಾಹಸಿ ರೈತರಿಗೆ ಇಂತಹ ಅನಿರೀಕ್ಷಿತ ಅಪಾಯಗಳನ್ನ ಎದುರಿಸುತ್ತಲೆ ಬಾಳುವುದು ಅನಿವಾರ್ಯ ಕರ್ಮವೆ ಆಗಿತ್ತು. ಪರಿಸ್ಥಿತಿ ಹೀಗಿರೋವಾಗ ಇವನೂ ಸಹ ತನ್ನ ಸಂಸಾರದ ಕಾಳಜಿ ವಹಿಸಲೆಬೇಕಾಗುತ್ತಿತ್ತು. ಅಷ್ಟಲ್ಲದೆ ಇವನ ಹೆಂಡತಿಗೆ ಇದೀಗ ಎರಡನೆ ಕೂಸಿನ ಬಸಿರು ಬೇರೆ ಕಟ್ಟಿದೆ. ರಾಜ ಬೇರೆ ಇನ್ನೂ ಕೈಗೂಸು. ಮನೆಯಲ್ಲಿ ಧೈರ್ಯಕ್ಕೆ ಕರಿಯನನ್ನ ಬಿಟ್ಟು ಬಂದಿದ್ದ. ಸಾಲದ್ದಕ್ಕೆ ತುಂಬಿದ ಕೋವಿಯನ್ನೂ ಸಹ ಅವಳ ಆತ್ಮರಕ್ಷಣೆಗೆ ಕೊಟ್ಟು ಬಂದಿದ್ದ. ಅದೇನೆ ಇದ್ದರೂ ತಾನಿರುವಂತಾಗುತ್ತದೆಯೆ?

https://youtu.be/Os3kPG9puck


https://youtu.be/Gzap0Uk-5m8


https://youtu.be/1pZbQrPJ1tg



https://youtu.be/8m4va3b_k24

No comments: