24 January 2022

ಅವನ ಕಥೆ ಅವಳ ಜೊತೆ......೨

ಅವನ ಕಥೆ ಅವಳ ಜೊತೆ.....೨

ಅವಳ ಕಥೆ ಅವನ ಜೊತೆ



ಚಳಿಗಾಲದಲ್ಲಿ ವಾಡಿಕೆಯಂತೆ ವಾರಕ್ಕೊಂದೆ ಸ್ನಾನ. ವಾರಕ್ಕೊಮ್ಮೆ ಪಟ್ಟಣದ ಸಮೀಪದ ಮಠದಲ್ಲಿನ ಸಾಮೂಹಿಕ ಬೆಳಗಿನ ಪೂಜೆಗೆ ತೀವೃ ಹಿಮಪಾತವಾಗದ ದಿನಗಳಲ್ಲಿ ಹೋಗೋದು ಪದ್ಧತಿ. ಹೀಗಾಗಿ ಶನಿವಾರ ಸಂಜೆ ಸ್ನಾನದ ಬಾನಿಯನ್ನ ಹಜಾರದಲ್ಲಿ ನೀರು ಹರಿದು ಹೋಗಲು ಹೊರ ಕೊಳವೆ ಬಿಟ್ಟಲ್ಲಿ ಇಟ್ಟುˌ ಹೊರ ಸುರಿದ ಹಿಮದ ರಾಶಿಯಲ್ಲಿ ಒಂದಷ್ಟನ್ನು ಬಕೇಟುಗಳಲ್ಲಿ ತುಂಬಿ ತಂದು ಒಲೆಯ ಉರಿಯ ಮೇಲಿಟ್ಟಿರುವ ಲೋಹದ ಕಡಾಯಿಯಲ್ಲಿ ಕುದಿಸಿ ಹದ ಮಾಡುತ್ತಾನೆ. ಅದನ್ನೆ ಸ್ನಾನದ ಬಾನಿಗೆ ತುಂಬಿ ಬಿಸಿ ಹದ ಮಾಡಲು ಸಮೀಪದಲ್ಲೆ ತಣ್ಣನೆ ನೀರಿನ ಬಕೇಟನ್ನೂ ನೀರು ತೋಡಿ ಮೀಯಲು ಕೈ ಪಾತ್ರೆಯನ್ನೂ ಸಾಬೂನು ತಿಕ್ಕಲು ಕತ್ತದ ಸಹಿತ  ಪಕ್ಕದಲ್ಲೊಂದು ಸ್ಟೂಲಿನ ಮೇಲಿಡುತ್ತಾನೆ. 


ಅವಳು ಮೊದಲಿಗೆ ಒಂದೂವರೆ ವರ್ಷ ತುಂಬಿರುವ ರಾಜನಿಗೆ ಆ ಹಬೆಯಾಡುವ ನೀರಲ್ಲಿ ಬಾನಿಗಿಳಿಸಿ ತಿಕ್ಕಿ ತಿಕ್ಕಿ ತಲೆಯ ಮುಡಿಯಿಂದ ಕಾಲಿನ ಉಗುರ ತುದಿ ತನಕ ಸಾಬೂನು ಹಚ್ಚಿ ಸ್ವಚ್ಛವಾಗಿ ಮೀಯಿಸುತ್ತಾಳೆ. ಅವನು ಕಣ್ಣಿಗೆ ಸೋಪು ಹೋಗಿ ಕಿಟಾರನೆ ಕೂಗಿ ಗಲಾಟೆ ಮಾಡಿದಾಗಲೆಲ್ಲ ರಮಿಸುತ್ತಾ ಆ ಊರಿನ ಆಡುಗೂಲಜ್ಜಿಯ ಕಥೆ ಹೇಳಿ ಉಪಾಯವಾಗಿ ಅವನ ಗಮನ ಅತ್ತ ತಿರುಗಿಸಿ ಕಾರ್ಯ ಸಾಧಿಸಿಕೊಳ್ಳುತ್ತಾಳೆ. ಸ್ನಾನ ಮಾಡಿಸಿದ್ದೆ ಶುಭ್ರವಾದ ಒಣಗಿದ ಬಟ್ಟೆಯ ತುಂಡಿನಿಂದ ಮಗುವನ್ನ ಒರೆಸಿ ಧೂಪಕ್ಕೆ ಹಿಡಿದು ಕಾಡಿಗೆ ಹಚ್ಚಿ ಬೆಚ್ಚನೆ ಬಟ್ಟೆ ತೊಡಿಸಿ ಉಣ್ಣೆಯ ಶಾಲಿನಲ್ಲಿ ಸುತ್ತಿ ಮೊಲೆಯುಣಿಸಿ ರಮಿಸುವ ವೇಳೆಗೆಲ್ಲ ಮಗು ರಾಜ ನಿಧಾನವಾಗಿ ಮೊದಲು ಮಂಪರಿಗೆ ಅನಂತರ ನಿದ್ಧೆಗೆ ಜಾರಿರುತ್ತದೆ. 

ಇತ್ತ ಮೇಲೆ ಉಪ್ಪರಿಗೆಯಲ್ಲಿ ಇಷ್ಟಾಗುವಷ್ಟರಲ್ಲಿ ಬಾನಿಯ ಆ ಕೊಳೆ ನೀರನ್ನ ಮೋರಿಗೆಸೆದು ಹೊಸತಾಗಿ ಕುದಿನೀರು ಹಾಕಿ ತಣ್ಣನೆ ನೀರು ಬೆರೆಸಿ ಹದ ಮಾಡಿ ತಾನೂ ಅದರಲ್ಲಿಳಿದು ಚನ್ನಾಗಿ ಸೋಪು ಹಚ್ಚಿಕೊಂಡು ಸುಗಂಧಿತ ಸೊಗದೆ ಬೇರಿನ ಕತ್ತದಲ್ಲಿ ಮೈ ತಿಕ್ಕಿಕೊಂಡು ಸ್ನಾನ  ಮುಗಿಸುವ ಇವನು ಮೈ ಒರೆಸಿಕೊಂಡಾದ ಮೇಲೆ ಮತ್ತೆ ಯಥಾವತ್ ಆ ನೀರನ್ನೂ ಮೋರಿಗೆ ಚೆಲ್ಲಿ ಅವಳ ಸ್ನಾನಕ್ಕೆ ಎಲ್ಲಾ ಅಣಿ ಮಾಡಿಟ್ಟು ಮೇಲೆ ಹೋಗಿ ಈ ವಾರದ ಮನೆಯುಡುಪು ಬೆಚ್ಚನೆ ಬಟ್ಟೆ ಧರಿಸಿ ತಲೆಗೆ ಅಲೀವ್ ಎಣ್ಣೆಯಲ್ಲಿ ಕರಗಿಸಿದ ಹಿಮಕರಡಿ ಕೊಬ್ಬನ್ನ ತಿಕ್ಕಿಕೊಂಡು ಬೈತಲೆ ತೆಗೆದು ಬಾಚಿಕೊಂಡುˌ ನಾಳೆ ಮಠಕ್ಕೆ ಹೋಗುವಾಗ ಹಾಕಬೇಕಾದ ತಮ್ಮ ಮೂವರ ಚರ್ಮದ ಬೂಟುಗಳ ಹೊಳಪೇರಿಸಲು ಜಿಂಕೆ ಛರ್ಬಿಗೆ ಕರಿ ಮಸಿ ಬೆರಸಿ ತಾನೆ ತಯಾರಿಸಿಟ್ಟಿರೋ ಪಾಲೀಷನ್ನ ಹಚ್ಚಲು ಆರಂಭಿಸುತ್ತಾನೆ. 


ಅವನ ಗಮನ ಅತ್ತ ಹರಿಯುವ ಹೊತ್ತಿಗೆ ಇವಳು ಸ್ನಾನದ ಮರಿಗೆಗೆ ಇಳಿದಿರುತ್ತಾಳೆ. ಥತ್ ಈ ಹೆಂಗಸರ ಗೊಳೆ ಇದು! ಅಂತ ಕನಿಷ್ಠ ಒಂದು ತಾಸಾದರೂ ಕೂದಲು ತೊಳೆದು  ಅನಂತರವಷ್ಟೆ ಮೈ ತೊಳೆದುಕೊಳ್ಳುವ ಶಾಸ್ತ್ರಕ್ಕಿಳಿಯುವ ಅವಳನ್ನ ನೋಡಿ ಅಣಗಿಸುತ್ತಾನೆ. ಹದಿನೈದಿಪ್ಪತ್ತು ನಿಮಿಷಕ್ಕೆಲ್ಲ ಸ್ನಾನ ಮುಗಿಸಿ ಮೇಲೆದ್ದು ಬರೋದು ಕೊಟ್ಟಿಗೆಯಲ್ಲಿರೋ ಮಹಿಷಿಯ ಗಂಡ ಪಕ್ಕದ ಲೀಲಕ್ಕನ ತೋಟದ ಮನೆಯ ಕೊಟ್ಟಿಗೆಯಲ್ಲಿರೋ ಕೋಣ ಕರಿಯನಂತವರು ಮಾತ್ರ ಅಂತ ಅವಳೂ ಸೇರಿಗೆ ಸವ್ವಾ ಸೇರಿನಂತೆ ಮಾರುತ್ತರಿಸುತ್ತಾಳೆ. ಅಷ್ಟು ಬೇಗ ನೀರಲ್ಲಿಳಿದು ಕೆಸರಲ್ಲಿ ಕೋಣ ಹೊಡಕಾಡಿದಂತೆ ಮೀಯೋದೂ ಒಂದು ಸ್ನಾನವೆ? ವಾರದ ಕೊಳೆ ದೇಹದಿಂದ ಅಷ್ಟು ಬೇಗ ಬಿಟ್ಟು ತೊಲಗಲು ಸಾಧ್ಯವೆ? ಅನ್ನುವ ಅವಳ ಮೊದಲಿಕೆಗೆ ಇವನ ಮುಖದ ಫ್ರೇಮಿನ ತುಂಬ ದಂತಪಂಕ್ತಿಗಳು ಕಿರಿಯುತ್ತವೆ.


ಅವಳ ಸ್ನಾನ ಮುಗಿದ ಮೇಲೆ ಸ್ನಾನದ ಮರಿಗೆ ಉಳಿದ ನೀರಲ್ಲಿ ಸ್ವಚ್ಛಗೊಂಡು ಸೂರಿಗೆ ನೇತು ಹಾಕಿರುವ ಗೊಂತಿಗೆ ನೇತು ಬೀಳುತ್ತದೆ. ಅದನ್ನ ಮುಗಿಸಿದವನೆ ಆವರಣ ಸ್ವಚ್ಛಗೊಳಿಸಿ ಅಲ್ಲಿ ಗಂಧದ ಕಡ್ಡಿ ಹಚ್ಚಿಡುವಷ್ಟರಲ್ಲಿ ಅವಳಿಂದ ಊಟದ ಕರೆ ಬರುತ್ತದೆ. ವಾಸ್ತವದಲ್ಲಿ ಅವಳು ಸ್ನಾನಕ್ಕೂ ಮೊದಲೆ ಅಂದಿನ ಅಡುಗೆ ಅಣಿ ಮಾಡಿ ಒಲೆಯ ಮೇಲೆ ಬೇಯಲಿಟ್ಟಾಗಿರುತ್ತದೆ. ಮಿಂದು ಬಂದವಳು ಉಡುಪು ತೊಟ್ಟು ಅದಕ್ಕೆ ಒಗ್ಗರಣೆ ಹಾಕಿ ಊಟದ ಮೇಜನ್ನ ಸಜ್ಜುಗೊಳಿಸುವುದು ಮಾತ್ರ ಬಾಕಿ ಉಳಿದಿರುತ್ತದೆ. ಅಡುಗೆ ವಿಚಾರದಲ್ಲಿ ಅವಳು ಕಡು ಜಾಣೆ. ಖಾಲಿ ಪಾತ್ರೆ ಬರಿ ನೀರಿದ್ದರೂ ಸಾಕು ಸ್ವಾದಿಷ್ಟ ಖಾದ್ಯಗಳನ್ನ ಕ್ಷಣಮಾತ್ರದಲ್ಲಿ ತಯ್ಯಾರು ಮಾಡಿ ಬಡಿಸಬಲ್ಲ ಚಾಣಾಕ್ಷೆ. ರುಚಿಯಲ್ಲೂ ಸಹ ಉಪ್ಪು ಹುಳಿ ಖಾರಗಳ ಹದವಾದ ಪಾಕ ಪ್ರಾವಿಣ್ಯತೆ ಅವಳದು. ಈ ವಿಷಯದಲ್ಲಿ ಅವನು ಅದೃಷ್ಟವಂತ. 


ಸ್ವತಃ ಇವನೆ ಹುದುಗು ಬರಿಸಿ ಭಟ್ಟಿ ಇಳಿಸಿದ್ದ ವೈನಿನ ಜೊತೆಗೆ ಹುರಿದ ಜಿಂಕೆ ಮಾಂಸˌ ಬೆಂದ ಬಾತಿನ ಮೊಟ್ಟೆˌ ಮನೆಯ ಉಗ್ಗಷ್ಟಿಕೆಯಲ್ಲಿ ತಯಾರಾದ ತಾಜಾ ಕಂದು ರೊಟ್ಟಿˌ ನಂಚಿಕೊಳ್ಳಲು ಲ್ಯೂಟಸ್ ಎಲೆ ಕೊಚ್ಚಿ ಸೇರಿಸಿದ ಬೀಫ್ ಟೀˌ ಕುರಿ ಮಾಂಸದ ಹುರುಕಲುˌ ಬೇಯಿಸಿ ಒಗ್ಗರಿಸಿದ ಆಲೂಗೆಡ್ಡೆˌ ಜೊತೆಗೆ ಭಟ್ಟಿ ಇಳಿಸಿದ ಕಟು ಸ್ವಾದದ ದ್ರಾಕ್ಷಾರಸ! "ಬೆಚ್ಚನೆ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿತು ನಡಿವ ಸತಿಯಿರಲು" ಅವನು "ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸರ್ವಜ್ಞ"ನಾಗಿ ಅವಳೊಂದಿಗೆ ಮೊದಲಿಗೆ ರಾತ್ರಿಯ ಊಟ ಅದು ಮುಗಿದ ಮೇಲೆ ಮಂಚ ಎರಡನ್ನೂ ಸಂತೃಪ್ತನಾಗಿ ಹಂಚಿಕೊಳ್ಳುತ್ತಾನೆ. ಇದು ವಾರದ ಸ್ನಾನದ ದಿನದ ಏಕತಾನತೆ.


ಆದರೆ ಈ ಸಲ ಬಹುಶಃ ಈ ಪಾಟಿ ಹಿಮದ ಹಾವಳಿಯಿರುವಾಗ ಮಠಕ್ಕೆ ವಾರದ ಪೂಜೆಗೆ ಹೋಗಿ ಬರೋದು ಅಸಾಧ್ಯˌ ಅಲ್ಲದೆ ಪಕ್ಕದ ತೋಟದ ಮನೆಯ ತಿಮ್ಮಯ್ಯನ ಜೊತೆಗೆ ಸೇರಿ ಮೊನ್ನೆಯ ಕದ್ದಿಂಗಳಲ್ಲಿ ತೋಟದಿಂದ ಹತ್ತು ಮೈಲು ದೂರದಲ್ಲಿ ಸಾಗುತ್ತಿದ್ದ ಚುಕ್ಕಿ ಜಿಂಕೆಗಳ ಶಿಕಾರಿ ಮಾಡಿ ಇಬ್ಬರೂ ನಾಡ ಬಂದೂಕಿನಿಂದ ಗುರಿಯಿಟ್ಟು ಸುಮಾರು ಹನ್ನೆರಡು ಜಿಂಕೆಗಳನ್ನ ಹೊಡೆದುರುಳಿಸಲು ಸಫಲರಾಗಿದ್ದರು. ಅದರಲ್ಲಿ ಸರಿಪಾಲು ಸಿಕ್ಕಿದ್ದಷ್ಟೆ ಅಲ್ಲದೆ ದೊಡ್ಡ ಹಿಡುವಳಿದಾರ ತಿಮ್ಮಯ್ಯ ತನ್ನ ಪಾಲಿನ ಬಲಿಗಳ ಚರ್ಮ ಹಾಗೂ ಕೊಂಬುಗಳನ್ನೂ ಇವನಿಗೆ ಬಿಟ್ಟು ಕೊಟ್ಟಿದ್ದ. 


ಮರುದಿನ ಅಂದರೆ ನೆನ್ನೆ ಅದನ್ನೆಲ್ಲ ಸುಲಿದು ಉಪ್ಪು ಬಳಿದು ಹದ ಹಾಕುವಷ್ಟರಲ್ಲೆ ಕತ್ತಲಾವರಿಸಿತ್ತು. ಅಲ್ಲದೆ ನಾಳೆ ಬೇರೆ ಪಟ್ಟಣಕ್ಕೆ ಹೋಗಬೇಕು ಹೀಗಾಗಿ ಶನಿವಾರದ ನಿಯಮ ಮುರಿದು ಬುಧವಾರವೆ ವಾರದ ಸ್ನಾನಕ್ಕೆ ಅವನು ಎಲ್ಲಾ ಅಣಿಗೊಳಿಸಿಕೊಂಡು ನೆನ್ನೆ ಸಂಜೆಯೆ ಮಿಂದು ತಲೆಗೆ ಕರಡಿ ಕೊಬ್ದಿನ ಎಣ್ಣೆ ಹಚ್ಚಿಕೊಂಡು ಶುಭ್ರನಾಗಿದ್ದ. ಬೂಟು ಸಹ ಹೊಳೆಹೊಳೆಯುತ್ತಾ ಪಾಲೀಶು ಬಳಿಸಿಕೊಂಡು ಬೆಳಗಿನ ಪಟ್ಟಣದ ಪ್ರಯಾಣಕ್ಕೆ ತಯಾರಾಗಿತ್ತು.


************


ಮುಸ್ಸಂಜೆಯಲ್ಲಿ ಕವಿದಿದ್ದ ಮೌನ ಬಾನ ಭಿತ್ತಿಯಲಿ ಕಾಲನ ಲೇಖನಿ ಮತ್ತಿನ್ನೇನನ್ನೋ ಬರೆದ ಹಾಗೆಯೆ ಉಳಿದು ಹೋಗಿತ್ತುˌ ಕತ್ತಲ ಕಾಡಿಗೆ ತೀಡಿದ ಇಳೆಯ ಕಣ್ಗಳಲ್ಲಿ ಬೆಳದಿಂಗಳ ನಿರೀಕ್ಷೆಯ ಹೊಳಪು ಇನ್ನೂ ಮೂಡಿಯೆ ಇತ್ತು. ಆದರೆ ಎಡಬಿಡದ ಈ ಹಿಮದ ಮಳೆ ಜೊತೆಗೆ ಭೋರೆಂದು ಎದೆ ನಡುಗಿಸುವ ಹಾಗೆ ಬೀಸುತ್ತಿರುವ ತೆಂಕಣದ ಸುಳಿಗಾಳಿ ವಾತಾವರಣಕ್ಕೊಂದು ಭೀಭತ್ಸತೆಯ ಚಹರೆಪಟ್ಟಿ ಕಲ್ಪಿಸಿಕೊಟ್ಟ ಹಾಗಾಗಿತ್ತು. ಪೇಟೆಗೆ ಹೋಗಿ ಮಾರಿ ಬರುವ ಸಾಮಾನುಗಳಂತೆ ಪೇಟೆಯ ಅಂಗಡಿಗಳಿಂದ ತರಬೇಕಿದ್ದ ಅವಳ ಅಗತ್ಯದ ಕೆಲವು ಸಾಮಾನುಗಳ ಪಟ್ಟಿಯೂ ಅವನ ಕಿಸೆಯೊಳಗಿತ್ತು. ಉಪಹಾರ ಮುಗಿಸಿದವನೆ ಪೇಟೆಯ ದಿಕ್ಕಿಗೆ ಹೊರಡಲು ಉಧ್ಯುಕ್ತನಾದ. 


ಚಳಿಗಾಳಿಯ ಭೀಕರ ಹುಯ್ದಾಟದ ಸದ್ದಿಗೆ ಮಗು ರಾಜ ಎಚ್ಚರಗೊಂಡ. ಮಗ್ಗುಲಿನಲ್ಲಿ ತನ್ನ ಅಮ್ಮ ಇಲ್ಲದನ್ನ ಕಂಡೊಡನೆ ಕಂಗಾಲಾಗಿ ಜೋರಾಗಿ ಅಳ ತೊಡಗಿದ. ಇವಳು ಮಗನ ರಾಗಾಲಾಪ ಕೇಳಿ ಉಪ್ಪರಿಗೆಯ ಮಲಗುವ ಮನೆಗೆ ಹೋಗಿ ಮಗುವನ್ನ ಎತ್ತಿಕೊಂಡು ಬಂದಳು. ಇವ ಮರದ ಮರಿಗೆ ಇಳಿಸಿ ಹಿಮ ಕರಗಿಸಿ ಬಿಸಿನೀರಾಗಿಸಿದ್ದ ಕಡಾಯಿ ಬಳಿ ಇರಿಸಿ ಅವಳಿಗೆ ಸಹಕರಿಸಿದ. ಬಟ್ಟೆಯಲ್ಲಿ ಬೆಚ್ಚಗೆ ಸುತ್ತಿಡುವ ಮುನ್ನ ಅವನ ಶೌಚಕಾರ್ಯ ಮಾಡಿಸಿ ತೊಳೆದು ಶುಭ್ರವಾಗಿ ಒರೆಸಿಡಬೇಕಿತ್ತು. ಸಾಲದ್ದಕ್ಕೆ ಮಗು ಹಾಸಿಗೆಯಲ್ಲೆ ಹಲವು ಬಾರಿ ಉಚ್ಛೆ ಹೊಯ್ದು ಅವಾಂತರವಾಗಿತ್ತು. ರಬ್ಬರಿನ ಶೀಟು ಮೇಲೆ ಹಾಸಿರದಿರುತಿದ್ರೆ ಮಾತ್ರ ಮಗುವಿನ ಪುಟ್ಟ ಹಾಸಿಗೆ ಹೇಸಿಗೆಯಾಗಿ ಯಾವುದೋ ಕಾಲವಾಗಿರುತ್ತಿತ್ತು.

ಇನ್ನು ಇವನನ್ನ ಬೀಳ್ಕೊಟ್ಚ ಮೇಲೆ ಅವಳ ದಿನಚರಿ ಆರಂಭವಾಗುತ್ತಿತ್ತು. ಮಗುವಿಗೆ ಮತ್ತೆ ಮೊಲೆಯುಣಿಸಿ ಏನನ್ನಾದರೂ ತಿನ್ನಿಸಿ ತಾನೂ ಒಂದಷ್ಟು ತಿಂದು ಮುಸುರೆ ಪಾತ್ರೆಗಳನ್ನ ಮರಿಗೆಯಲ್ಲಿ ತೊಳೆದು ಬಿಸಿ ನೀರಾಗಿಸಲು ಹಿಮ ಹೊತ್ತು ತಂದು ಸುರಿದು ಅನಂತರ ಅವಳು ಮನೆವಾರ್ತೆಗೆ ಗಮನ ಹರಿಸಬೇಕಾಗುತ್ತಿತ್ತು. ಮೊದಲಿಗೆ ಕೊಟ್ಟಿಗೆಗೆ ಹೋಗಿ ಕೋಳಿಗಳಿಗೆ ಮೇವು ಹಾಕಬೇಕು ನೀರು ಇಡಬೇಕು. ಅವುಗಳದ್ದಾದ ಮೇಲೆ ಬಾತುಗಳ ಮುತುವರ್ಜಿ ವಹಿಸಬೇಕು. ಅವುಗಳದ್ದಾದ ಮೇಲೆ ಸೊಪ್ಪು ಕುರಿಗಳ ರೊಪ್ಪ ಗುಡಿಸಿ ಅವಕ್ಕೆ ಹುಲ್ಲು ನೀರು ಹಿಂಡಿ ಬೂಸ ಕಾಣಿಸಬೇಕು. ಅವುಗಳ ದೇಖಾರೇಖಿ ಮುಗಿಸಿದ ಕುಕ್ಕೂಡಲೆ ಹಂದಿಗಳ ಹಟ್ಟಿಗೆ ಹೋಗಿ ಹೊಲಸು ಗುಡಿಸಿ ತೆಗೆದು ಮೇವು ನೀರು ಇಡಬೇಕು. ಇಷ್ಟಾಗುವಾಗ ಮಧ್ಯಾಹ್ನವಾಗಿರುತ್ತದೆ.

ಅನಂತರ ಮನೆಯ ಅಗ್ಗಿಷ್ಟಿಕೆ ದೊಡ್ಡದಾಗಿಸಿ ಅದರ ಎದುರಿನ ಅರಾಮ ಕುರ್ಚಿಯಲ್ಲಿ ಮಗುವನ್ನ ತೊಡೆಯ ಮೇಲೆ ತೂಗಿಸುತ್ತಾ ಕೂತು ಮಲಗಿಸುತ್ತಾಳೆ. ಆಮೇಲೆ ತಾನೇನಾದರೂ ತುಸು ತಿಂದು ಅದೆ ಕುರ್ಚಿಯ ಮೇಲೆ ಕೂತು ಅಗ್ಗಿಷ್ಟಿಯ ಉರಿಯ ಬೆಳಕಲ್ಲಿ ಕಳೆದ ಸಾರಿ ಅವನು ಪೇಟೆಯಿಂದ ಮರಳಿ ಬರುವಾಗ ತಂದಿದ್ದ ರಾಜಧಾನಿಯ ವೃತ್ತ ಪತ್ರಿಕೆಗಳ ಪುಟ್ಟ ಕಟ್ಟನ್ನ ಬಿಚ್ಚಿ ಒಂದೊಂದಾಗಿ ಓದಿ ಪ್ರಪಂಚದ ಆಗುಹೋಗುಗಳನ್ನ ಅರಿತುಕೊಳ್ಳಲು ಪ್ರಯತ್ನಿಸುತ್ತಾಳೆ. ನಗರದಲ್ಲಿ ಬಂದಿರುವ ಹೊಸ ಫ್ಯಾಷನ್ನಿನ ತುಣುಕು ಅದರಲ್ಲಿ ಅವಳಿಗೆ ಓದಲು ಸಿಗುತ್ತದೆ. ಅವಳೇನೂ ಅವಿದ್ಯಾವಂತೆಯಲ್ಲ. ಇವನನ್ನ ಭೇಟಿಯಾಗುವ ಮುನ್ನ ಪಟ್ಟಣದ ಮಗ್ಗುಲಿನ ಅನಾಥಾಲಯದಲ್ಲಿ ಮೂರನೆ ಇಯತ್ತೆಯವರೆಗೂ ಓದಿದ್ದಾಳೆ. 


ಅವಳ ಏಕೈಕ ಪೋಷಕನಾಗಿದ್ದ ಸಹೋದರ ಮಾವ ಅಪ್ಪ ಅಮ್ಮನಿಲ್ಲದ ಕೂಸನ್ನ ಅನಾಥಾಲಯಕ್ಕೆ ಸೇರಿಸಿದ್ದ. ಅಲ್ಲಿ ಅವಳು ತಕ್ಕಮಟ್ಟಿಗೆ ಓದು ಬರಹˌ ಕಸೂತಿ ಕ್ರೋಷ ಹೊಲಿಗೆ ಹಾಡು ಹಸೆ ಅಡುಗೆ ಮುಂತಾದ ಕಲೆಗಳನ್ನ ಶಕ್ತ್ಯಾನುಸಾರ ಕಲಿತಿದ್ದಳು. ಕಾಲಿನಲ್ಲಿ ಪೆಡಲನ್ನ ಒತ್ತಿ ಪಿಯಾನೋ ನುಡಿಸಲು ಸಹ ಅವಳು ಕಲಿತಿದ್ದಳು ಅಂದರೆ ನೋಡಿ! ಇವನ ಪರಿಚಯವಾಗಿˌ ಪರಿಚಯ ಪ್ರೇಮಕ್ಕೆ ತಿರುಗಿ ಮದುವೆ ಸಂಸಾರ ಅಂತಾಗದಿದ್ದರೆ ಬಹುಶಃ ಮುಂದೆಯೂ ಇನ್ನಷ್ಟು ಓದಿ ಶೂಶ್ರುಷಕಿ ಅಥವಾ ಶಿಕ್ಷಕಿಯಾಗುವ ಕನಸನ್ನೂ ಅವಳು ಕಾಣುತ್ತಿದ್ದ ಕಾಲ ಒಂದಿತ್ತು.


ಆದರೆ ಕಾಲ ಸರಿದ ಹಾಗೆ ಒದಗಿ ಬಂದ ಅವಕಾಶ ಹಾಗೂ ಅನುಕೂಲತೆಗಳಿಗೆ ಅನುಸಾರವಾಗಿ ಬದುಕಿನ ಯೋಜನೆಗಳು ಬದಲಾಗುತ್ತಾ ಬಂದವು. ಇದೀಗ ಇಲ್ಲಿಗೆ ಬಂದು ಮುಟ್ಟಿದೆ. ಹಾಗೆ ನೋಡಿದರೆ ಇವಳಿಗಿಂತ ಕಡಿಮೆ ಶಾಲೆ ಕಲೆತವನವನು. ಪೂರ್ವದ ಊರಲ್ಲಿ ದೂರದ ವಲಸಿಗರ ನಾಡಿನಿಂದ ಹಡಗು ಹಿಡಿದು ಬಂದು ಇಳಿದವರ ಮೂರನೆ ತಲೆಮಾರು ಇವನದು. ಅಪ್ಪನಿಗೆ ಅಜ್ಜನಿಂದ ಬಂದಿದ್ದ ಬಳುವಳಿಯಲ್ಲಿ ಇವನಪ್ಪ ಸರಕಾರದ ಜೊತೆ ಒಪ್ಪಂದದಡಿ ನಾನೂರೆಕರೆ ಬೇಸಾಯಕ್ಕೆ ಗುತ್ತಿಗೆ ಮಾಡಿಕೊಂಡು ಕಡಲ ತಡಿಗೆ ಸಮೀಪ ಅನ್ನಿಸುವಷ್ಟು ದೂರದಲ್ಲಿದ್ದ ರಾಜಧಾನಿಯಿಂದ ಪಶ್ಚಿಮದ ದಿಕ್ಕಿಗೆ ಇನ್ನೂರರವತ್ತು ಮೈಲಿಯಾಚೆಯ ಕಾಡಿನಂಚಿನಲ್ಲೆ ಶಾಶ್ವತವಾಗಿ ನೆಲೆಸಿಬಿಟ್ಟಿದ್ದ. ಈ ಸರಕಾರಿ ಜಮೀನಿನ ಒಪ್ಪಂದದ್ದೆ ಒಂದು ದೊಡ್ಡ ಕಥೆ. ಮುಂದೆ ಯಾವತ್ತಾದರೂ ಅದರ ಮಹಾಭಾರತದ ಬಗ್ಗೆ ಹೇಳ್ತಿನಿ. ಸದ್ಯಕ್ಕೆ ದುಗ್ಗಾಣಿ ಕಾಸಿಗೆ ಮನುಷ್ಯ ಪ್ರಾಣಿ ವಾಸ ಮಾಡಲು ಏನೇನೂ ಅನುಕೂಲತೆಯಿಲ್ಲದ ವಿಶಾಲ ಭೂಮಿಯನ್ನ ಗುತ್ತಿಗೆಗೆ ಪಡೆದು ಅದನ್ನ ಹಸನುಗೊಳಿಸಿ ಕನಿಷ್ಠ ಹತ್ತು ವರ್ಷ ಕಂದಾಯವನ್ನೂ ಕಟ್ಟಿ ಸಕಲೆಂಟು ಹಾವಳಿಗಳನ್ನ ಮಟ್ಟ ಹಾಕಿ ಲಾಭವನ್ನೂ ಕಂಡವರಿಗೆ ಆ ಇಡಿ ಭೂಮಿಯ ಶಾಶ್ವತ ಮಾಲಕತ್ವ ಹತ್ತು ವರ್ಷಗಳ ನಂತರ ವರ್ಗಾವಣೆಯಾಗುವ ಒಂದು ಓಬಿರಾಯನ ಕಾಲದ ಸರಕಾರಿ ವ್ಯವಸ್ಥೆ ಅಂತ ಅರಿತುಕೊಂಡಿರಿ ಸಾಕು. 


ಇವನೂ ಸೇರಿ ಇವನಪ್ಪನಿಗೆ ಆರು ಮಕ್ಕಳುˌ ಇವ ಮೂರನೆಯವ. ಮುಂದಿಬ್ಬರು ಅಣ್ಣಂದಿರು ಹಿಂದೆ ಮೂವರು ತಂಗಿಯರಿವನಿಗಿದ್ದರು. ಮಗನಿಗೆ ರೈತಾಪಿ ಬದುಕಿನ ಚಾಕಚಾಕ್ಯತೆಗಳೆಲ್ಲವನ್ನೂ ಆತನ ಕಲಿಕೆಯ ಆಸಕ್ತಿ ಗಮನಿಸಿ ಕಲಿಸಿದ ಅಪ್ಪ ಮಗ ಹದಿಹರೆಯದವನಾದ ನಂತರ ರಾಜಿ ಮತ್ತವಳ ಗಂಡ ಮಾದೇವ ಕುದುರೆˌ ಸೀತೆ ದನ ಮತ್ತವಳ ಕರು ಲಕ್ಷ್ಮಿˌ ಇನ್ನೂ ಹಸುಗೂಸಾಗಿದ್ದ ಕರು ಮಹಿಷಿ ಮತ್ತವಳ ಅಮ್ಮನ ಜೊತೆ ಎರಡು ಡಝನ್ ಹಂದಿ ಹಾಗೂ ಹತ್ತು ಸೊಪ್ಪುಕುರಿಗಳ ಮಂದೆಯ ಜೊತೆಗೆ ಮುನ್ನೂರಾ ಎಂಬತ್ತು ರೂಪಾಯಿ ಕಾಸು ಬಂಡವಾಳ ಜೊತೆಗೊಂದು ಕುದುರೆ ಬಂಡಿ ಕೊಟ್ಟು ಅವನನ್ನ ಸ್ವತಂತ್ರರಾಗಿಸಿದ್ಧರು. ಜೀವನದಲ್ಲಿ ಬದ್ಧತೆಯಿರುವ ಈ ಮಧ್ಯದ ಮಗ ರೈತಾಪಿ ಬದುಕಿನಲ್ಲಿ ಖಂಡಿತವಾಗಿ ಯಶಸ್ಸು ಕಾಣುತ್ತಾನೆ ಅನ್ನುವ ಭರವಸೆ ಅವರಿಗಿತ್ತು. ಅಪ್ಪನ ಹಳೆ ಸ್ನೇಹಿತ ವಲಸೆಗಾರರ ಎರಡನೆ ತಲೆಮಾರಿನ ತಿಮ್ಮಯ್ಯ ಇಲ್ಲಿ ಜಮೀನು ಮನೆ ಮಾಡಿಕೊಂಡಿರುವ ವಿಚಾರ ತಿಳಿದುˌ ಅಪ್ಪನ ಶಿಫಾರಸ್ಸಿನ ಮೇಲೆಯೆ ಅವರಿಂದ ಇನ್ನಷ್ಟು ಬೇಸಾಯದ ಮರ್ಮ ಕಲಿತು ಅವರ ಸಹಾಯದಿಂದಲೆ ಸರಕಾರಿ ಒಪ್ಪಂದದಡಿ ಎಕರೆಗೆ ನಾಲ್ಕಾಣೆಯಂತೆ ಮುನ್ನೂರೈವತ್ತು ಎಕರೆಯ ಕಾಡು ಭೂಮಿಯ ಗುತ್ತಿಗೆ ಹಿಡಿದು ಹಟತೊಟ್ಟು ಹುಟ್ಟೂರಿಂದ ಸಾವಿರ ಮೈಲು ದೂರ ಪಶ್ಚಿಮಕ್ಕೆ ಬಂದು ನೆಲೆಸಿದ್ದ. ಅಭಿವೃದ್ಧಿ ಕಾರ್ಯಗಳು ಪೂರ್ವಕ್ಕೆ ಹೋಲಿಸಿದರೆ ಇಲ್ಲಿ ಈಗಿನ್ನೂ ಆಮೆಗತಿಯಲ್ಲಿತ್ತು. ನವ ನಾಗರೀಕತೆಯ ಥಳುಕು ಬಳುಕು ಇನ್ನೂ ಆ ಪ್ರದೇಶವನ್ನು ಪ್ರವೇಶಿಸಿರಲಿಲ್ಲ. ಪೂರ್ವ ತೀರದ ಜನವಸತಿಯ ನಗರಗಳನ್ನ ಪಶ್ಚಿಮ ತೀರಕ್ಕೆ ಬೆಸೆಯಲು ಸರಕಾರ ಸದ್ಯದಲ್ಲಿಯೆ ರೈಲು ರಸ್ತೆ ನಿರ್ಮಿಸುತ್ತದೆ ಅನ್ನುವ ವದಂತಿಗಳಿದ್ದವು. ಆ ರೈಲು ರಸ್ತೆಯ ಕಾಮಗಾರಿ ಪೂರ್ವದ ದಿಕ್ಕಿನಿಂದ ಆರಂಭವಾಗಿ ಸುಮಾರು ದೂರ ಈಗಾಗಲೆ ಬಂದು ಮುಟ್ಟಿರೋದನ್ನ ಸ್ವತಃ ಇವನೆ ಕಂಡಿದ್ದ. ಅದು ಇವರ ಸಮೀಪದ ಪಟ್ಟಣವನ್ನೂ ಹಾಯ್ದು ಹೋಗುವುದನ್ನೂ ಸಹ ರೈಲು ಕಾಮಗಾರಿ ಗುತ್ತಿಗೆದಾರರ ಬಳಿಯಿದ್ದ ನಕಾಶೆ ನೋಡಿ ಅರಿತಿದ್ದ. ಆದರೆ ಅದೆಲ್ಲ ಆಗುವುದು ಯಾವಾಗ ಅನ್ನುವ ಖಚಿತ ಅರಿವು ಮಾತ್ರ ಅವನಿಗಿರಲಿಲ್ಲ. ಒಟ್ಟಿನಲ್ಲಿ ಹಟತೊಟ್ಟು ನೆಲೆಸಿ ನೆಲವನ್ನ ಸ್ವಂತವಾಗಿಸಿಕೊಳ್ಳಬೇಕಿತ್ತು ಅಷ್ಟೆ.


ಲೀಲಕ್ಕನ ಗಂಡ ವಾಸಣ್ಣ ಹಾಗೂ ಅಪ್ಪನ ಗೆಳೆಯ ತಿಮ್ಮಯ್ಯ ಇವರಿಬ್ಬರೆ ಅವನ ಸಮೀಪದ ನೆರೆಕೆರೆ. ಅವರೂ ಸಹ ಕನಿಷ್ಠ ಆರೇಳು ಏಳು ಮೈಲಿ ದೂರದ ತಮ್ಮ ತಮ್ಮ ತೋಟದ ಮನೆಗಳಲ್ಲಿ ನೆಲೆ ನಿಂತಿದ್ದರು.


*************


ಆದ್ಯತೆಯಲ್ಲಿ ಮೊದಲು ಜಮೀನಿನ ತೆರೆದ ಭಾಗವೊಂದರಲ್ಲಿ ಸ್ಥಳ ಗುರುತಿಸಿ ಮನೆ ಕೊಟ್ಟಿಗೆ ರೊಪ್ಪ ಹಟ್ಟಿಗಳನ್ನ ಕಟ್ಟಿಕೊಂಡು ಅದರ ಸುತ್ತ ಬೇಲಿ ಹಾಕಬೇಕಿತ್ತು. ನೀರಿನಾಸರೆಗೊಂದು ಬಾವಿ ಕೊರೆಯಲೆಬೇಕಿತ್ತು. ಅಪ್ಫ ಕೊಟ್ಟಿದ್ದ ಮೂಲಧನದ ಮೂರನೆ ಒಂದು ಭಾಗ ಈಗಾಗಲೆ ಜಮೀನಿನ ಮುಂಗಡಕ್ಕೆˌ ಪಟ್ಟಣದಲ್ಲಿ ಕೊಂಡ ಅಗತ್ಯ ರೈತಾಪಿ ಸಲಕರಣೆಗಳ ಖರೀದಿಗೆˌ ಮುಂದಿನ ವರ್ಷದ ಬೆಳೆಗಾಗಿ ಕ್ಯಾರೆಟ್ˌ ಆಲೂಗೆಡ್ಡೆˌ ಬೀಟ್ರೂಟ್ˌ ಗೆಣಸುˌ ಓಟ್ಸ್ˌ ಜವೆಗೋಧಿˌ ರೈ ಮುಂತಾದವುಗಳ ಬೀಜ ಖರೀದಿಗಂತಲೆ ಖರ್ಚಾಗಿತ್ತು. ಕನಿಷ್ಠ ಈ ವರ್ಷವಾದರೂ ಬರಡು ಬಂಜರು ನೆಲ ಉತ್ತು ಬಿತ್ತಿ ಗೊಬ್ಬರ ಹಾಕಿ ಹಸನು ಮಾಡಲು ಕೂಲಿಗಳ ಅವಶ್ಯಕತೆ ಇದ್ದೆ ಇತ್ತು. 


ಮನೆ ಕಟ್ಟುವ ಆಲೋಚನೆಯೂ ಇದ್ದುದರಿಂದ ಒಬ್ಬಂಟಿಯಾಗಿ ಎಲ್ಲಾ ಕೆಲಸ ಮಾಡುವುದು ಅಸಾಧ್ಯವಾಗಿತ್ತು. ಜಾನುವಾರುಗಳಿಗೆ ಹಾಗೂ ಪಶುಗಳಿಗೆ ಸದ್ಯದ ಮೇವಿನ ಎರವಲು ತಿಮ್ಮಯ್ಯನಿಂದ ಸಿಕ್ಕಿದ್ದು ಒಂದು ಅದೃಷ್ಟ. ಇಲ್ಲದಿದ್ದರೆ ಅದನ್ನೂ ಕಾಸು ಕೊಟ್ಟೆ ಖರೀದಿಸಬೇಕಾದ ಸಂಕಟ ಎದುರಾಗುವ ಭೀತಿಯಿತ್ತು. ಜೊತೆಗಿಬ್ಬರು ಕೂಲಿಗಳನ್ನ ಹೊಂದಿಸಿಕೊಂಡು ಜಮೀನಿನ ಪಕ್ಕದ ಕಾಡಿನಿಂದ ಆಯ್ದು ಗುರುತಿಸಿದ ಹತ್ತು ಪೈನ್ ಹಾಗೂ ಓಕ್ ಮರಗಳನ್ನ ಕಡಿಸಿ ಅಲ್ಲೆ ನಾಟಾ ಕುಯ್ಯಿಸಿ ರಾಜಿ ಮತ್ತವಳ ಸಂಗಾತಿ ಮಾದೇವರನ್ನ ಜಮೀನಿನಿಂದ ಕಾಡಿಗೆ ಕಾಡಿನಿಂದ ಜಮೀನಿಗೆ ಓಡಿಸಿ ದಿಮ್ಮಿಗಳನ್ನˌ ನಾಟದ ಹಲಗೆಗಳನ್ನ ಸಾಗಿಸಿಯೆ ಬಿಟ್ಟ. ಅನುಭವಿ ತಿಮ್ಮಯ್ಯ ಹಾಕಿಕೊಟ್ಟ ನೀಲ ನಕಾಶೆಯಂತೆ ನಾಲ್ಕು ಕೋಣೆಗಳ ಉಪ್ಪರಿಗೆ ಸಹಿತವಾದ ವಿಶಾಲ ಮರದ ಮನೆ ಹಾಗೂ ಸಮೀಪದಲ್ಲಿಯೆ ಕೊಟ್ಟಿಗೆ ರೊಪ್ಪ ಹಟ್ಟಿ ಕಟ್ಟುವ ನಿರ್ಮಾಣ ಕಾರ್ಯವೂ ನೋಡ ನೋಡುತ್ತಿದ್ದಂತೆ ಆರಂಭವಾಗಿಯೆ ಬಿಟ್ಟಿತು!


ಮನೆಯ ಕೆಲಸದ ಜೊತೆಜೊತೆಗೆ ಜಲದ ಸೆಲೆ ಇದ್ದ ಕೊಟ್ಟಿಗೆಗೆ ಅಂಟಿಕೊಂಡಂತೆ ಬೆಳೆದಿದ್ದ ಪೈನ್ ಮರದ ಬುಡದಡಿ ಬಾವಿ ತೋಡುವುದು ಎಂದು ನಿರ್ಧಾರವಾಯಿತು. ಈಗಾಗಲೆ ಹತ್ತಾರು ಮನುಷ್ಯರ ತಲೆಮಾರು ಕಂಡಿದ್ದಿರಬಹುದಾದ ಈ ಪೈನ್ ಮರ ಸದ್ಯ ತನ್ನ ವಯೋ ವೃದ್ಧಾವಸ್ಥೆಯಲ್ಲಿದ್ದರೂ ತಕ್ಕಮಟ್ಟಿಗೆ ಗಟ್ಟಿಮುಟ್ಟಾಗಿಯೆ ಮೇಲ್ನೋಟಕ್ಕೆ ಕಾಣುತ್ತಿದ್ದರೂ ಒಳಗೊಳಗೆ ಗೆದ್ದಲು ಹಿಡಿದು ಪೊಳ್ಳಾಗಿದ್ದ ಕಾಂಡದ ದೆಸೆಯಿಂದ ಸುಲಭವಾಗಿ ಹೆಚ್ಚು ಶ್ರಮ ಬಲವಂತ ನಿರೀಕ್ಷಿಸದೆ ಧರೆಗುರುಳಿ ತನ್ನ ಬದುಕ ಲೆಕ್ಕಾಚಾರ ಮುಗಿಸಿತು. ಅದರ ಪೊಳ್ಳು ಕಾಂಡ ಮುಂದೆ ಸ್ನಾನದ ಮರಿಗೆˌ ಹಾಲಿನ ಬಕೇಟುˌ ವೈನಿನ ಪಿಪಾಯಿˌ ಹಿಕರಿ ಹೊಗೆ ಹಾಕಿ ಬಲಿಪ್ರಾಣಿಗಳ ಮಾಂಸಖಂಡ ಮಾಗಿಸಿ ಒಣಗಿಸುವ ಕೊಳವೆ ಮಾಡಲು ಹೀಗೆ ತರೇವಾರಿ ಉಪಯೋಗಕ್ಕೆ ಬಂತು. 



ಗೆದ್ದಲು ಹಿಡಿದು ಬಹುತೇಕ ಲಡ್ಡಾಗಿದ್ದ ಅದರ ಬುಡದ ಬೊಡ್ಜೆ ಹಾಗೂ ಬೇರು ಬಿಳಲುಗಳು ಇನ್ನೂ ಇವರ ಮನೆಯ ಅಗ್ಗಷ್ಟಿಕೆಯ ಇಂಧನ ಮೂಲವಾಗಿವೆ ಎಂದರೆ ಊಹಿಸಿಕೊಳ್ಳಿ. ವರ್ಷಕ್ಕೊಂದಾವರ್ತಿ ಕಡಿಯುವ ಹೋರಿಕರುˌ ಕೋಣಗಳ ಹಾಗೆ ಕನಿಷ್ಠ ಭಾಗಗಳನ್ನ ಮಾತ್ರ ಎಸೆದು ಅವುಗಳ ಬಹುತೇಕ ಎಲ್ಲಾ ಅಂಗೋಪಾಂಗಗಳನ್ನ ಮೂಳೆ ಅಸ್ಥಿಮಜ್ಜೆಯ ಸಹಿತ ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತಿದ್ದಂತೆ ಈ ಬಹುಪಯೋಗಿ ಪೈನ್ ಸಹ. ಇದರಲ್ಲಿ ಕಸವಾಗಿ ಎಸೆಯಲು ಬಹುತೇಕ ಏನೊಂದೂ ಇರುತ್ತಲೆ ಇರಲಿಲ್ಲ.


ಬೇರು ನೆಲಕ್ಕಿಳಿದಿದ್ದ ಕಡೆಯೆ ಅಗೆದು ಗುಂಡಿ ತೋಡಿ ಮೇಣದ ಬತ್ತಿ ಹಚ್ಚಿ ಹಗ್ಗ ಕಟ್ಟಿದ ಬಕೇಟಿನಲ್ಲಿ ಅದನ್ನ ಇರಿಸಿ ಒಳಗಿಳಿಸಿ ವಿಷಗಾಳಿ ಇರುವ ಆಳ ಖಚಿತ ಪಡಿಸಿಕೊಂಡ. ಸಿಡಿಮದ್ದು ಹಾಕಿ ಸಿಡಿಸಿ ಆ ವಿಷವಾಯುವೆಲ್ಲ ಬಾವಿ ಬಿಟ್ಟು ಹೋಗಲು ಅನವು ಮಾಡಿದ. ಅನಂತರ ಮತ್ತೆ ಮೇಣದಬತ್ತಿ ಕೆಳಗಿಳಿಸಿದಾಗ ಅದು ಪ್ರಕಾಶಮಾನವಾಗಿ ಬೆಳಗುತ್ತಲೆ ಇತ್ತು. ಅಲ್ಲಿಗೆ ಅದಕ್ಕೊಂದು ಹಲಗೆಯ ಮುಚ್ಚುಗೆ ಮಾಡಿಸಿ ಅಚ್ಚುಕಟ್ಟಾಗಿ ಮುಚ್ಚಿದೊಡನೆ ಬಾವಿ ಸಿದ್ಧವಾಗಿತ್ತು. ಕೇವಲ ಹನ್ನೆರಡಡಿ ಆಳದಲ್ಲಿ ಗಂಗೆ ಚಿಮ್ಮಿ ಬಂದಿದ್ದಳು.


ಇನ್ನು ಮನೆ ಕೆಲಸಕ್ಕೆ ಪೇಟೆಯಿಂದ ಕೂಲಿಗೆ ಬಂದಿದ್ದ ನಾಲ್ವರಲ್ಲಿ ಗೋಪಿ ಅನ್ನುವನೊಬ್ಬ ಪಡ್ಡೆಯೂ ಇದ್ದ. ಇವನಿಗಿಂತ ಹಿರಿಯರೆ ಒಡನಾಡುತ್ತಿದ್ದ ಪರಿಸರದಲ್ಲಿ ಸಮವಯಸ್ಕನಾಗಿ ಒಡನಾಡಲು ಸಿಕ್ಕವ ಈ ಬಡಗಿ ಸಹಾಯಕನಾಗಿ ಬಂದಿದ್ದ ಗೋಪಿ ಮಾತ್ರ. ಗೋಪಿ ಮೊದಲ ತಲೆಮಾರಿನ ವಲಸಿಗ. ಈ ಪ್ರದೇಶದ ಬಹುತೇಕರು ಮಾತನಾಡುವ ಭಾಷೆ ಅರಿಯದ ಪೂರ್ವದ ನಾಡೊಂದರಿಂದ ಉತ್ತಮ ಬದುಕಿನ ಆಸೆ ಹೊತ್ತು ಹಡಗೇರಿ ಬಂದಿದ್ದ. ಇಲ್ಲಿನವರ ಭಾಷೆ ಅವನಿಗೆ ಬರುತ್ತಿರಲಿಲ್ಲ. ಅವನ ಗ್ರಾಮ್ಯ ಭಾಷೆ ಮತ್ತದರ ಒರಟು ಉಚ್ಛಾರ ಕೇಳಿ ಇಲ್ಲಿನವರು ಅವನನ್ನ ಗೇಲಿ ಮಾಡುತ್ತಿದ್ದರು! ಅವನ ಮಾತಿನ ಕೆಲವೊಂದು ಪದಗಳು ಇವರ ಭಾಷೆಯಲ್ಲಿ ಬೇರೆಯೆ ಅರ್ಥ ಹೊಮ್ಮಿಸುತ್ತಿದ್ದುದೂ ಸಹ ಈ ತಮಾಷೆಗೆ ಸರಕಾಗಿತ್ತು ಅಂದರೂ ಸುಳ್ಳಲ್ಲ. 



ಈ ವಿಪರೀತ ಪರಿಸ್ಥಿತಿಯಲ್ಲೂ ಗೋಪಿಗೆ ಏನಾದರೂ ಕೈ ಕಸುಬು ಮಾಡಿ ದುಡಿದು ತನ್ನ ಬದುಕನ್ನ ತಾನು ಕಟ್ಟಿಕೊಳ್ಳುವುದು ಅನಿವಾರ್ಯವಾಗಿತ್ತು. ಹುಟ್ಟಿದ ನಾಡಿಗೆ ತಿರುಗಿ ಹೋಗುವ ಉಪಾಯವಿಲ್ಲದ ಅವನಿಗೆ ಈ ನವನಾಡೆ ಭವಿಷ್ಯವೂ ವರ್ತಮಾನವೂ ಒಟ್ಟೊಟ್ಟಿಗೆ ಆಗಿತ್ತು. ಅಂತಹ ಗೋಪಿಯನ್ನ ಆಡಿಕೊಳ್ಳದೆ ಸರಿಸಮಾನನಾಗಿ ಆತ್ಮಿಯತೆಯಿಂದ ಕಂಡವನು ಬಹುಶಃ ಈ ನಾಡಿನಲ್ಲೆ ಇವನೊಬ್ಬನೆ! ಹೀಗಾಗಿ ಸುಲಭವಾಗಿ ಇವನ ಹೊಲಮನೆಯ ಶ್ರಮಕ್ಕೆ ಹೆಗಲು ಕೊಡಲು ನಿರ್ಧರಿಸಿ ಆರಂಭದ ಬವಣೆಯ ಕಾಲದಲ್ಲಿ ಗೋಪಿ ಸಹಾಯಕನಾಗಿ ಅವನ ತೋಟದಲ್ಲೆ ನೆಲೆ ನಿಂತ. ಅವನಿಗೂ ತತ್ಕಾಲಿಕವಾಗಿ ಒಂದು ಬಿಡಾರ ಬೇಕಿತ್ತಲ್ಲ?


ಮೂರು ತಿಂಗಳ ಅವಧಿಯಲ್ಲಿ ಮನೆ ಎದ್ದು ನಿಂತಿತು. ಪೈನ್ ರೀಪುಗಳನ್ನ ಸಾಲಾಗಿ ಜೋಡಿಸಿದ್ದ ಮೇಲಿನ ಛಾವಣಿಯ ಮಾಡಿಗೆ ಓಕ್ ಹಲಗೆಗಳನ್ನ ಹೊದೆಸಿಸಿದರು. ಉಪ್ಪರಿಗೆ ಹಾಗೂ ನೆಲ ಮಹಡಿಗಳ ನಡುವಿನ ಅಂತಸ್ತಿಗೂ ಗಟ್ಟಿಮುಟ್ಟಾದ ಓಕ್ ಹಲಗೆಗಳೆ ಬಳಕೆಯಾಯಿತು. ಅದನ್ನೆ ನೆಲ ಮಹಡಿಗೂ ಹಾಸಲಾಯಿತು. ಮಳೆನೀರು ಒಳಗೆ ತೊಟ್ಟಿಕ್ಕದಂತೆ ಛಾವಣಿಗೆ ಟಾರು ಕಾಗದ ಮೊಳೆ ಹೊಡೆದು ಕೂರಿಸಲಾಯಿತು. ಗೋಡೆಯ ನಡುವೆ ಸ್ಥಳ ಗುರುತಿಸಿ ಧಿಮ್ಮಿ ಗೋಡೆಗಳ ಕೊರೆದು ಸುತ್ತಲೂ ಸರಿಯಾಗಿ ಗಾಳಿಯಾಡಲು ಎಂಟು ಕಿಟಕಿ ಮಾಡಲಾಯಿತು. ಅದರ ಫ್ರೇಮುಗಳನ್ನ ಪ್ರತ್ಯೇಕವಾಗಿ ಮಾಡಿ ಇತ್ತೀಚೆಗೆ ಜನಪ್ರಿಯವಾಗುತ್ತಿದ್ದ ಪಾರದರ್ಶಕ ಗಾಜುಗಳನ್ನ ತುಸು ದುಬಾರಿ ಅನಿಸಿದರೂ ಪೇಟೆಯ ಮರ್ತಪ್ಪಯ್ಯನ ಅಂಗಡಿಯಿಂದ ತಂದು ಅಳವಡಿಸಿದ. 


ಮಲಗುವ ಕೋಣೆಯನ್ನ ಒಂದು ಬದಿಯಿಂದ ಹಾದು ಹೋಗುವಂತೆ ತಳಮಹಡಿಯ ಅಗ್ಗಿಷ್ಟಿಕೆಯ ಹೊಗೆ ಕೊಳವೆಯನ್ನ ಅಳವಡಿಸಿದ. ಮೇಲುಪ್ಪರಿಗೆಯಲ್ಲೂ ಬಲಮೂಲೆಯಲ್ಲಿ ಸೋಮ ಸರೋವರದಿಂದ ಆಯ್ದು ತಂದ ಕಲ್ಲುಕಟ್ಟಿ ಅಗ್ಗಷ್ಟಿಕೆ ಹೊಗೆ ಕೊಳವೆ ಅಳವಡಿಸಿದ. ಎರಡೂ ಕಡೆಗಳಿಂದ ಚಳಿಗಾಲದಲ್ಲಿ ಮಲಗುವ ಮನೆ ಬೆಚ್ಚಗಾಗಿರಲಿ ಅನ್ನುವ ಉದ್ದೇಶ ಇದರ ಹಿಂದಿತ್ತು ಅಷ್ಟೆ. ಇಷ್ಟೆಲ್ಲ ಆಗುವಾಗ ಸಾಕಷ್ಟು ದುಡ್ಡು ಕೈ ಬಿಟ್ಟಿತ್ತಷ್ಟೆ ಅಲ್ಲˌ ಆದ ಖರ್ಚಿಗೆ ಬೇಸರಿಸಲಾಗದಂತೆ ಮನೆ ಎದ್ದು ನಿಂತಿತ್ತು.


ಇನ್ನು ಕೊಟ್ಟಿಗೆ ಹಟ್ಟಿ ರೊಪ್ಪ ಕೋಳಿಗೂಡು ಬೇಲಿ ಕಟ್ಟಲು ಕೂಲಿಗಾರರು ಬೇಡ ಅನಿಸಿತು. ಹೇಗೂ ಗೋಪಿ ಇದ್ದˌ ವಾಸಣ್ಣ ಮೈಯಾಳಿನಂತೆ ಬರಲು ತಯಾರಿದ್ದ. ಮೂವರೆ ಸೇರಿ ಅವನ್ನೆಲ್ಲ ಮಾಡಬಹುದಿತ್ತು. ಹೀಗೆ ಒಂದೊಂದಾಗಿ ಕೆಲಸ ಮುಗಿಸುವಾಗ ಸ್ವಲ್ಪ ನೆಲ ಹಸನುಗೊಳಿಸಿ ಬಿತ್ತಿದ್ದ ರೈ ಹಾಗೂ ಜವೆಗೋಧಿ ಕಟಾವಿಗೆ ಬಂದಿತ್ತು. ಆಲೂಗಡ್ಡೆ ಹಾಗೂ ಬೀಟ್ರೂಟುಗಳೂ ಬಂಪರ್ ಬೆಳೆ ಬಂದಿದ್ದವು. ಧಾನ್ಯಗಳ ಉತ್ಪತ್ತಿ ಹೇಳಿಕೊಳ್ಳುವಷ್ಟಿದ್ದಿರದಿದ್ದರೂ ಸಹˌ ಅವುಗಳ ಹುಲ್ಲು ಜಾನುವಾರುಗಳಿಗೆ ಮುಂದಿನ ಚಳಿಗಾಲದುದ್ದ ಸಾಕಾಗುವಷ್ಟು ಸಂಗ್ರಹವಾಗಿದ್ದವು. ಮೊದಲ ಬೆಳೆಯ ಧಾನ್ಯದ ಒಂದು ಪಾಲು ಪಟ್ಟಣಕ್ಕೆ ಹೋಗಿ ಅಂಚೆಯಲ್ಲಿ ಅಪ್ಪ ಅಮ್ಮನಿಗೆ ಕಳಿಸಿ ಬಂದ. ಧಾನ್ಯ ಒಕ್ಕಿ ಹುಲ್ಲು ಮೆದೆ ಹಾಕಿ ಮುಗಿಸುವಾಗಲೆ ಭೀಕರ ಚಳಿಗಾಲ ಒಕ್ಕರಿಸಿಯೆ ಬಿಟ್ಟಿತ್ತು.



************


ಗೋಪಿಗೂ ಆ ಚಳಿಗಾಲ ಇವನ ಮನೆಯೆ ನೆಲೆ. ಇಬ್ಬರು ಬ್ರಹ್ಮಚಾರಿಗಳು ಚಳಿಗಾಲದುದ್ದ ಕಳ್ದಿಂಗಳ ಬೇಟೆˌ ಕೂಡುಬೇಟೆˌ ಸರೋವರದಂಚಿನ ಕಾಡುಬಾತು ಬೇಟೆˌ ಹೆಪ್ಫುಗಟ್ಟಿದ ನೀರಿನಡಿಯ ಮೀನುಬೇಟೆ ಹೀಗೆ ಸಾಹಸಗಳನ್ನ ಮಾಡುತ್ತಲೆ ಆ ಚಳಿಗಾಲವನ್ನ ಕಳೆದರು. ಆ ಹಂಗಾಮಿನಲ್ಲಿ ಅವರು ಸುಮಾರು ಆರು ಹಿಮಕರಡಿˌ ಹತ್ತಿರ ಹತ್ತಿರ ಮೂರು ಡಝನ್ ಚುಕ್ಕಿ ಜಿಂಕೆಗಳು ಹಾಗೂ ಒಂದಿನ್ನೂರು ಕಾಡುಬಾತು ಶಿಕಾರಿ ಮಾಡಿದ್ದರು! ಹಿಡಿದ ಮೀನುಗಳಿಗಂತೂ ಲೆಕ್ಕವೆ ಇಲ್ಲ. ನಡುನಡುವೆ ಆಗಾಗ ಸಮೀಪದ ಪಟ್ಟಣಕ್ಕೆ ಹೋಗಿ ಜನರೊಂದಿಗೆ ಬೆರೆತು ಅರಿತು ಮನರಂಜನೆಯ ತಾಣಗಳಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಮಜವಾಗಿಯೆ ದಿನ ಕಳೆದರು. ಹಾಗೊಮ್ಮೆ ಅಲ್ಲಿ ಅವನ ಕಣ್ಣಿಗೆ ಅವಳು ಬಿದ್ದಳು.


ಇವನ ರಾಜಿ ಮತ್ತು ಮಾದೇವನಿಗೆ ಲಾಳ ಹೊಡೆಸುವ ಹಾಗೂ ಅವರೆಳೆಯುವ ಗಾಡಿಗೆ ಅವಧಿಗೊಮ್ಮೆ ಮರಮತ್ತು ಮಾಡಿಸುವ ಅವಶ್ಯಕತೆ ಇತ್ತೆ ಇತ್ತು. ಹಿಂದೆ ಹೊಡೆಸಿದ್ದ ಲಾಳದ ಸುತ್ತ ಹೊಸ ಚರ್ಮ ಬೆಳೆದು ಕಸ ಕಡ್ಡಿ ಸಂದಿಗೊಂದಿಗಳಲ್ಲಿ ಸೇರಿ ಇಬ್ಬರೂ ಚಳಿಗಾಲ ಬಂತೆಂದರೆ ಸರಾಗವಾಗಿ ನಡೆಯಲು ಯಾತನೆ ಪಡುತ್ತಿದ್ದರು. ಸಾಲದ್ದಕ್ಕೆ ಹಿಮದ ಮೇಲೆ ನಡೆಯುವಾಗ ಅವರ ಹಿಡಿತ ಬಲವಾಗಿರದೆ ಕಾಲು ಜಾರಲು ಸಹ ಆರಂಭವಾಯಿತು. ಹೀಗಿರೋವಾಗ ಪಟ್ಟಣದ ಪೇಟೆ ಬೀದಿಯಂಚಿಗೆ ಕುದುರೆ ಲಾಯದ ಆಚೆಗಿದ್ದ ಲಾಳ ಕಟ್ಟುವಲ್ಲಿಗೆ ಅವರಿಬ್ಬರನ್ನೂ ಗಾಡಿ ಸಹಿತ ಇವನು ಕರೆದೊಯ್ದ. ಅಲ್ಲಿ ಇವಳನ್ನ ಕಂಡˌ ವಾಸ್ತವವಾಗಿ ಮಠಕ್ಕೆ ಆಗೀಗ ವಾರದ ಪೂಜೆಗೆ ಹೋಗಿದ್ದಾಗ ಪ್ರಾರ್ಥನೆ ಹಾಡುವ ಹಾಡುಗ ಹುಡುಗಿಯರ ಗುಂಪಿನಲ್ಲಿ ಇವಳೂ ಇದ್ದದ್ದು ಹಿರಿಯ ಸನ್ಯಾಸಿನಿಯರ ಅನುಪಸ್ಥಿತಿಯಲ್ಲಿ ಸ್ವತಃ ಇವಳೆ ಪಿಯಾನೋ ನುಡಿಸುತ್ತಾ ಹಾಡುಗರನ್ನ ಹಾಡಿಸುತ್ತಿದ್ದುದು ಕಂಡಿದ್ದ. 


ಇವಳ ಸ್ವರ ಮಾಧುರ್ಯವನ್ನೂ ಮೆಚ್ಚಿದ್ದ. ಎಲ್ಲಾ ಹದಿಹರೆಯದ ಹುಡುಗರಿಗೆ ಚೆಂದುಳ್ಳಿ ಚೆಲುವೆಯರನ್ನ ಕಂಡಾಗ ಒಳಗಡೆ ಏನೇನಾಗುತ್ತದೋ ಅದೆಲ್ಲಾ ಅವನಿಗೂ ಅಂದು ಆಗಿತ್ತು. ಸಾಲದ್ದಕ್ಕೆ ಪದೆ ಪದೆ ಅವಳ ನೆನಪಾಗುವಷ್ಟು ಅವಳ ಬಿಂಬ ಮನದೊಳಗೆ ಇಳಿದು ಹೋಗಿತ್ತು. ಅಂತವಳನ್ನ ಸಂಜೆಯ ಈ ಹೊತ್ತಲ್ಲಿ ಅದೂ ಪಡಖಾನೆˌ ಲಾಳದ ಗಾಡಿಖಾನೆˌ ಚುಟ್ಟಾ ಸಿಗಾರಿನ ಅಂಗಡಿˌ ಅಗ್ಗದ ದರದ ಅನ್ನದ ಮನೆ ಎದುರಿನ ಬೀದಿಯ ಚರಂಡಿ ಯಾವುದು ರಸ್ತೆ ಯಾವುದು ತಿಳಿಯಲಾಗದಂತಹ ದುರ್ಗಂಧದ ಬಚ್ಚಲು ನೀರು ಹರಿವ ಕೊಚ್ಚೆˌ ಅದರಲ್ಲಿ ಉತ್ಪತ್ತಿಯಾಗಿ ಊರವರದೆಲ್ಲ ರಕ್ತದ ರುಚಿ ನೋಡುವ ಉಮೇದಿನಲ್ಲಿರುವ ಸೊಳ್ಳೆಗಳ ಹಾಗೂ ವಿಸರ್ಜಿತ ಮಲ ಅಡುಗೆಯ ಪರಿಮಳ ಎರಡರಲ್ಲೂ ಸಮಪಾಲು ಬಯಸುತ್ತಾ ಅಡುಗೆ ಮನೆ ಪಾಯಖಾನೆ ಎರಡರಲ್ಲೂ ಜೂಂಯ್ಗುಡುತ್ತಾ ರಸಸ್ವಾದನೆಗಿಳಿವ ನೀಲಿನೊಣಗಳ ತವರು ಮನೆ ಹೆಜ್ಜೆಗೆರಡರಂತಿರವ ತುಸು ಕೊಳಚೆ ಅನ್ನುವಂತಹ ಪರಿಸರವಿರುವ ಈ ಗಾಡಿಖಾನೆಯಲ್ಲಿ ಕಂಡಾಗ ಆಶ್ಚರ್ಯ ಚಕಿತನಾದ. ಅವನ ಅಗತ್ಯ ಹಾಗೂ ಅಹವಾಲು ವಿಚಾರಿಸಲು ಅವಳೆ ಮುಂದೆ ಬಂದಿದ್ದಳು. 


ವಾಸ್ತವವಾಗಿ ಅದು ಅವಳ ಮಾವನ ಗಾಡಿಖಾನೆ. ವಾಸದ ಮನೆ ಮುಂದಿನ ದಿವಾನಖಾನೆಯನ್ನೆ ಅವ ತನ್ನ ವ್ಯವಹಾರದ ಅಡ್ಡೆ ಮಾಡಿಕೊಂಡಿದ್ದ. ಅಂಗಳದಲ್ಲಿ ಕುಲುಮೆ ಹಾಕಿ ಮರದ ಬಕೇಟು ಪಿಪಾಯಿಗಳಿಗೆ ಸೀಸದ ಬೆಸುಗೆ ಹಾಕುವುದುˌ ಕುದುರೆ ದನ ಎಮ್ಮೆಗಳಿಗೆ ಲಾಳ ಹೊಡೆಯುವುದುˌ ಕುದುರೆ ಬಂಡಿಗಳ ಕೀಲು ರಿವೀಟು ಎಲ್ಲಾ ಬಿಚ್ಚಿ ತುಕ್ಕು ಕೆರೆದು ತೆಗೆದು ಸಂಪೂರ್ಣ ಗ್ರೀಸ್ ಹಚ್ಚಿ ಮರು ಜೋಡಿಸಿ ಅಗತ್ಯ ರಿಪೇರಿ ಕಾರ್ಯ ಮಾಡಿ ಅದನ್ನ ಸರಾಗವಾಗಿ ಚಲಿಸುವಂತೆ ಮಾಡುವುದು ಇವೆ ಮುಂತಾದ ಕೆಲಸ ಕಾರ್ಯಗಳನ್ನ ಅವನು ಮಾಡಿ ಕೊಡುತ್ತಿದ್ದ. ಅಲ್ಲೆ ಒಂದು ಮೂಲೆಯಲ್ಲಿ ಕುಂಬಾರಿಕೆಯ ಕೆಲಸವನ್ನೂ ಮಾಡುವ ಬಂಡಿ ಚಕ್ರ ಹಾಕಿದ್ದ. ಮನೆಯ ದಿನ ಬಳಕೆಯ ಮಣ್ಣಿನ ಪಾತ್ರೆ ಪಗಡ ಅನ್ನದ ಚಟ್ಟಿ ಮರಿಗೆ ಮೊಸರಿನ ಕುಡಿಕೆ ಸಾರಿನ ಮಡಿಕೆ ಹೀಗೆ ವಿವಿಧ ಗಾತ್ರಗಳ ಪಾತ್ರೋಪಕರಣಗಳನ್ನ ತಯಾರಿಸಿ ಪಕ್ಕದ ಮೂಲೆಯಲ್ಲಿ ಜೋಡಿಸಿಟ್ಟಿದ್ದ. ಅಂತಹ ಗಾಡಿಖಾನೆಗೆ ಇವನು ಮರಮತ್ತಿಗೆ ತನ್ನ ಗಾಡಿ ಮತ್ತು ಕುದುರೆಯನ್ನ ಕೊಂಡೊಯ್ದಾಗ ಅವಳು ಅಲ್ಲಿದ್ದಳುˌ ವಾಸ್ತವವಾಗಿ ಅವಳು ಸಂಜೆ ವೇಳೆ ಹೆಚ್ಚು ಕೆಲಸವಿರುವ ಹೊತ್ತಲ್ಲಿ ಮಾವನ ಸಹಾಯಕಿಯಾಗಿ ಅಲ್ಲಿ ಗೇಯುತ್ತಿದ್ದಳು.

ಹಾಗೆ ನೋಡಿದರೆ ಅದು ಅವಳ ಸ್ವಂತ ಮನೆˌ ಮಾವನೆ ಅಲ್ಲಿಗೆ ಅವಳಿನ್ನೂ ಪುಟ್ಟ ಹುಡುಗಿಯಾಗಿದ್ದಾಗ ಅತಿಥಿಯಾಗಿ ಬಂದು ಸೇರಿ ಮುಂದೆ ಯಜಮಾನಿಕೆ ಮಾಡುತ್ತಿರೋದು. ಕಳೆದ ಹಂಗಾಮಿನಲ್ಲಿ ಪಟ್ಟಣದಲ್ಲಿ ಹರಡಿದ್ದ ಪ್ಲೇಗಿಗೆ ಅವಳ ಅಪ್ಪ ಅಮ್ಮ ಹಾಗೂ ಅಣ್ಣ ಒಬ್ಬೊಬ್ಬರಾಗಿ ಬಲಿಯಾಗಿದ್ದರು. ಆಗ ಏನೂ ಕೆಲಸವಿದ್ದಿರದ ಈ ಸಹೋದರ ಮಾವ ಇವರ ಮನೆ ಬಂದು ಸೇರಿ ತಿಂಗಳು ಮೂರು ಕಳೆದಿತ್ತು. ಕಡೆಗೆ ಇವಳ ಆರೈಕೆಯ ನೆಪದಲ್ಲಿ ಅವನೂ ಅಲ್ಲೆ ಶಾಶ್ವತವಾಗಿ ನೆಲೆಸಿದ. ಮಠದ ಅಡುಗೆ ಕೆಲಸ ಮಾಡುವ ಚೊಟ್ಟ ಕಾಲಿನ ದಾಮೂ ಮಾಸ್ಟರನ ಮೂರನೆ ಮಗಳನ್ನ ಅದು ಹೇಗೋ ಪಟಾಯಿಸಿ ಮದುವೆಯಾಗಿ ಸಂಸಾರವಂದಿಗನೂ ಆದ. ಬೆಕ್ಕಿನ ಕಣ್ಣಿನ ಆ ಸರೋಜಾ ಅತ್ತೆ ವಿಪರೀತ ಬೆರಕೆ ಹೆಂಗಸು. ಎಂದಿದ್ದರೂ ಕಾನೂನಾತ್ಮಕವಾಗಿ ಈ ಆಸ್ತಿಯ ಹಕ್ಕು ತಮ್ಮದಾಗುವುದಿಲ್ಲ ಅನ್ನುವ ಅರಿವು ಅವಳಿಗಿದ್ದೆ ಇತ್ತು. ಹೀಗಾಗಿ ಇವಳನ್ನು ಕೂತಲ್ಲಿ ನಿಂತಲ್ಲಿ ಬೈದು ಹಂಗಿಸಿ ಮಾನಸಿಕವಾಗಿ ಹಿಂಸಿಸಿ ತನ್ನ ಹತಾಶೆಯನ್ನ ವ್ಯಕ್ತವಾಗಿಯೆ ತೋರಿಸುತ್ತಿದ್ದಳು. ಅವಳ ಇಂತಹ ಕಿರುಕುಳ ಹೆಚ್ಚಾದಾಗಲೆಲ್ಲಾ ಸುಮ್ಮನೆ ಮಲಗುವ ದಿಂಬನ್ನ ಒದ್ದೆ ಮಾಡುತ್ತಾ ನಿಶ್ಯಬ್ಧವಾಗಿ ಅಳುತ್ತಿದ್ದ ಇವಳು ಈ ನರಕದಿಂದ ತನಗೆ ಮುಕ್ತಿ ಕೊಡಿಸುವ ದೇವದೂತನಿಗಾಗಿ ಕಾದೆ ಇದ್ದಳು. 


ಮಠದ ಆದಿತ್ಯವಾರದ ಸಾಮೂಹಿಕ ಪೂಜೆಯ ಸಮಯ ನೆರೆದ ಭಕ್ತರ ಜಂಗುಳಿಯಲ್ಲಿ ಈ ಊರಿನಲ್ಲೆಂದೂ ಕಂಡು ನೆನಪಿಲ್ಲದ ಬಂಗಾರದ ಬಣ್ಣದ ಕೂದಲಿನ ಕುಡಿ ಮೀಸೆ ನವಿರು ಗಡ್ಡದ ಅಪ್ಪಟ ನೀಲಿ ಕಣ್ಣುಗಳ ಈ ಹೊಸಬ ಅವಳ ಕಣ್ಣಿಗೂ ಬಿದ್ದಿದ್ದ. ಆದರೆ ಅವನ ಗುರುತಿನ ಪತ್ತೆದಾರಿಕೆ ಮಾಡುವುದು ಅವಳ ಯೋಗ್ಯತೆಗೆ ಮೀರಿದ್ದಾಗಿತ್ತು. ಹಾಗೊಂದು ವೇಳೆ ವಿಪರೀತ ಕಾಳಜಿ ತೋರಿದಲ್ಲಿ ಏಕೆ? ಏನು? ಏನಕ್ಕಂತೆ? ಮುಂತಾದ ಅಸಂಖ್ಯ ಕೆಟ್ಟ ಕುತೂಹಲಿಗಳ ಕೌತುಕಕ್ಕೆ ಪುಗಸಟ್ಟೆ ಆಹಾರವಾಗುವ ಅಪಾಯ ಬೇರೆ ಇತ್ತು. ಹೀಗಾಗಿ ಅವಳು ಆ ನಿಟ್ಟಿನಲ್ಲಿ ತುಸುವೂ ಮುಂದುವರೆದಿರಲಿಲ್ಲ.

ಹೀಗಿರುವಾಗ ಒಂದು ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಅವರಿಬ್ಬರೂ ಮತ್ತೆ ಮುಖಾಮುಖಿಯಾಗಿದ್ದರು. ಅವಳ ಆಕರ್ಷಣೆಯ ಕಾರಣವೋ ಇಲ್ಲಾ ನಿಜವಾಗಲೂ ಅವನಿಗೆ ಅವಳ ಮಾವನ ಗಾಡಿಖಾನೆಗೆ ಹೋಗುವ ದರುದು ಒದಗಿ ಬಂದಿತ್ತೋ ಲಾಳ ಹೊಡೆಸಿ ಗಾಡಿ ರಿಪೇರಿ ಮಾಡಿಸಿದ ನಂತರವೂ ಹಟ್ಟಿಯ ಪಶುಗಳಿಗೆ ಗೊಂತಿಗೆ ಕಟ್ಟುವ ಹಗ್ಗ ತರಲುˌ ಅವುಗಳ ಮುರು ತುಂಬುವ ಬಕೀಟುಗಳಿಗೆ ಸೀಸದ ಬೆಸುಗೆ ಹಾಕಿಸಲುˌ ಸಣ್ಣಪುಟ್ಟ ರೈತಾಪಿ ಉಪಕರಣಗಳಿಗೆ ಸಾಣೆ ಹಿಡಿಸಲು ಪದೆ ಪದೆ ಅವನು ಅವಳಲ್ಲಿಗೆ ಸುಳಿದ. ಅವನ ಈ ಭೇಟಿಗಳ ಹಿಂದಿನ ಉದ್ದೇಶದ ವಾಸನೆ ಅದಾಗಲೆ ಅವಳ ಸಹೋದರ ಮಾವನ ಮೂಗಿಗೂ ತುಸು ಮುಟ್ಟಿತ್ತು ಅಂತ ಕಾಣ್ತದೆ. ಆದರೆ ಅವನಾಗಿಯೆ ವಿಷಯ ಪ್ರಸ್ತಾವಿಸಲಿ ಆಮೇಲೆ ತಮ್ಮ ಬಲವಾದ ಪಟ್ಟು ಹಾಕಿ ಸುಲಭವಾಗಿ ಕನ್ಯಾಸೆರೆ ಬಿಡಿಸಿಕೊಳ್ಳೋಣ ಅಂತ ಘಾಟಿ ಸರೋಜತ್ತೆ ಮಾವನೊಂದಿಗೆ ಸರಿಯಾದ ಸಮಯಕ್ಕಾಗಿ ಹೊಂಚು ಹಾಕಿ ಕಾದಿದ್ದಳು.

ಇವನು ಮೊದಲು ಈ ವಿಷಯವನ್ನ ಪ್ರಸ್ತಾವಿಸಿದ್ದು ಹೌದು. ಆದರೆ ಅವಳ ಮಾವನ ಬಳಿ ಅಲ್ಲˌˌ ಮಠದ ಹಿರಿಯ ಸನ್ಯಾಸಿನಿಯ ಬಳಿ. ಆಗ ಅವರ ಕರೆ ಇವಳ ಮಾವನಿಗೆ ಹೋಯಿತು. ಇದು ಹೀಗಾಗುತ್ತದೆ ಅನ್ನುವ ನಿರೀಕ್ಷೆ ಇದ್ದಿರದೆ ಸಹೋದರ ಮಾವ ತಲೆ ಕೆರೆದುಕೊಳ್ಳುತ್ತಾ ಗುರುಗಳ ಮುಂದೆ ಬಾಗಿ ನಿಂತ. ಅವರು ವಿಷಯ ಪ್ರಸ್ತಾಪ ಮಾಡಿ ಒಪ್ಪಿಗೆಯೆ ಅಂದರುˌ ತೋಟದ ಮನೆ ಮಾಡಿ ಕೃಷಿ ಸಾಹಸಕ್ಕಿಳಿದಿರುವ ಈ ಯುವಕ ಅವರ ದೃಷ್ಟಿಯಲ್ಲಿ ಯೋಗ್ಯನೂ ಅನುರೂಪನೂ ಆಗಿದ್ದ ಅವಳಿಗೆ. ಅವಳಾದರೋ ಅವರ ಅನಾಥಾಲಯದಲ್ಲೆ ಉಳಿದು ಬೆಳೆದಿದ್ದ ಮಗು ಬೇರೆ.



***********



ಅವಳ ಅಪ್ಪ ಅಮ್ಮ ತನ್ನಿಂದ ನೂರಾರು ರೂಪಾಯಿ ಸಾಲ ಮಾಡಿ ತೀರಿಸದೆ ಸತ್ತು ಹೋಗಿದ್ದಾರೆಂದೂˌ ಅದರ ವ್ಯವಸ್ಥೆ ಆಗುವುದಾದರೆ ಈ ಮದುವೆಗೆ ತನ್ನ ಅಭ್ಯಂತರ ಏನೇನೂ ಇಲ್ಲವೆಂದೂˌ ಆದರೆ ಸದ್ಯದ ಪರಿಸ್ಥಿತಿಯಲ್ಲಿ ತನ್ನ ಬಳಿ ಮದುವೆಗೆ ಖರ್ಚು ಮಾಡುವಷ್ಟು ಶಕ್ತಿ ಇಲ್ಲವೆಂದೂ ವರ ಮಹಾಶಯನೆ ಎರಡೂ ಕಡೆಯ ಔತಣೋಪಚಾರದ ಖರ್ಚು ವಹಿಸಿಕೊಳ್ಳೋದಾದರೆ ಮುಂದಿನ ವಾರದ ಮುಹೂರ್ತದಲ್ಲೆ ಮದುವೆ ಮಾಡಿಕೊಡಲು ತಾನು ತಯ್ಯಾರೆಂದೂ ಸಹೋದರ ಮಾವ ಗುರುಗಳ ಮುಂದೆ ಘಟವಾಣಿ ಸರೋಜತ್ತೆ ಬಾಯಿಪಾಠ ಮಾಡಿ ಕಳಿಸಿದ್ದ ಉರು ಹೊಡೆದ ಮಾತುಗಳನ್ನೆ ಉರುಟಿ ನಿಸೂರನಾದ.

ಮಠದ ಗುರುಗಳಿಗೆ ಅವನ ಕೃಪಣತೆ ಕಂಡು ಜಿಗುಪ್ಸೆಯಾಯಿತು. ವಾಸ್ತವವಾಗಿ ನೆಲೆಯರಿಸಿಕೊಂಡು ಬರಿಗೈಯಲ್ಲಿ ಈ ಊರಿಗೆ ಬಂದಿದ್ದವನು ಅವನೆ ಹೊರತುˌ ಅವನಿಂದ ಇವಳ ಅಪ್ಪ ಅಮ್ಮ ದುಗ್ಗಾಣಿ ಕಾಸನ್ನೂ ಸಾಲ ಪಡೆದಿರಲಿಲ್ಲ. ಹಾಗಂತ ಯಾವ ಸಾಲಪತ್ರವೂ ಅವನ ಬಳಿ ಇರಲಿಲ್ಲ. ಯಾರಾದರೂ ಗದ್ದರಿಸಿ ಕೇಳಿದ್ದರೆ ಎಲ್ಲವನ್ನೂ ಇದ್ದಂತೆಯೆ ಅವಳ ಸುಪರ್ದಿಗೊಪ್ಪಿಸಿ ಅವನಲ್ಲಿಂದ ಕಾಲು ಕೀಳಬೇಕಾಗುತ್ತಿತ್ತು. ಆದರೆ ಆರು ಸಂತಾನವಿರುವ ಸಂಸಾರವಂದಿಗನಾದ ಅವನ ಮೇಲಿನ ಕರುಣೆಯಿಂದ ಹೆಚ್ಚು ಪೀಡಿಸದೆ ಊರ ಅಂಚಿನಲ್ಲಿರುವ ಅವಳ ಅಪ್ಪನ ಹೆಸರಿನ ನಿವೇಶನವೊಂದನ್ನ ಹೊರತುಪಡಿಸಿ ಬಾಕಿ ಮನೆ ಹಿತ್ತಲು ಗಾಡಿಖಾನೆಯ ಸಹಿತ ಸಮಸ್ತ ಚರಾಚರ ಅವಳಪ್ಪನ ಸಂಪಾದನೆ ಅವನಿಗೆ ಸೇರತಕ್ಕದ್ದೆಂದೂˌ ಬದಲಾಗಿ ವಿವಾಹದ ಸಮಭಾಗ ಖರ್ಚು ಅವನೂ ಮಾಡಲೆಬೇಕೆಂದೂ ಅದಕ್ಕೆ ಬೇಕಾದರೆ ತನ್ನ ಜಾಮೀನಿನ ಮೇಲೆ ಊರ ಬಡ್ಡಿ ವ್ಯಾಪಾರಿ ಸುಂದರ ಶೆಟ್ಟರಿಂದ ಅವನು ಇಪ್ಪತ್ತೈದು ರೂಪಾಯಿ ಕೈಗಡ ಪಡೆಯಬಹುದೆಂದೂ ಗುರುಗಳು ತೀರ್ಪು ಕೊಟ್ಟರು. ಆರಂಭದಲ್ಲಿ ಕೊಂಚ ಕೊಸರಾಡಿದನಾದರೂ ಕಡೆಗೂ ಈ ವ್ಯವಸ್ಥೆಗೆ ಸಹೋದರ ಮಾವ ತನ್ನ ಒಪ್ಪಿಗೆ ಸೂಚಿಸಿದ. ಅಷ್ಟೆ ಅಲ್ಲದೆ ಈ ಸುಳ್ಳು ತಟವಟಗಳೇನೆ ಇದ್ದರೂ ಲಾಳ ಹೊಡೆಯುವುದರಲ್ಲಿ ಹಾಗೂ ಸಾಣೆ ಹಿಡಿಯುವಲ್ಲಿ ಅವನ ಸಾಮರ್ಥ್ಯ ಅದ್ವಿತೀಯವಾಗಿತ್ತು. ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದುˌ ಸಮೀಪದಲ್ಲಿ ಸುತ್ತಮುತ್ತಲು ತೋಟದ ಮನೆಗಳು ಒಂದೊಂದಾಗಿ ನೆಲೆಯೂರಲಾರಂಭಿಸಿದ್ದವು. ಅವರಿಗೆಲ್ಲ ಕೃಷಿ ಸಲಕರಣೆಗಳ ದುರಸ್ತಿಗೆ ಹತ್ತಿರದಲ್ಲಿ ಇವನನ್ನು ಬಿಟ್ಟರೆ ಬೇರೆ ವ್ಯವಸ್ಥೆ ಇರಲಿಲ್ಲ. ಈ ಲೌಖಿಕವೂ ಗುರುಗಳನ್ನ ಹೆಚ್ಚು ಕಟುವಾಗದಂತಾಗಿಸಿತು. ಅಲ್ಲಿಗೆ ಅವಳ ಅವನ ಮದುವೆ ನಿಕ್ಕಿಯಾಯಿತು. ಈ ವಾರದ ಕೂಡುಪೂಜೆಯಲ್ಲಿ ಮಠದ ಗುರುಗಳು ಈ ಬಗ್ಗೆ ಪ್ರಕಟಣೆ ಹೊರಡಿಸಿ ಯಾರಿಗಾದರೂ ಆಕ್ಷೇಪಣೆಗಳಿದ್ದಲ್ಲಿ ಮಠದ ಗುರುಗಳನ್ನ ಸಂಪರ್ಕಿಸಿ ಎಂದು ಸಾರಿದರು. ಹಾಗೆ ಅವರಿಬ್ಬರ ಜೀವನ ಸಾಂಗತ್ಯದ ಕಥೆ ಮೊದಲಾಯಿತು.


ಅದೆ ಹೊತ್ತಿಗೆ ಮಠದ ಜಾತ್ರೆಯಲ್ಲಿ ಮಕ್ಕಳ ಆಟಿಕೆ ಮಾರುವ ಬಾಬಯ್ಯನ ಮಗಳ ಮೇಲೆ ಗೋಪಿಗೂ ಮನಸಾಗಿತ್ತು. ಅದನ್ನವನು ಇವನಲ್ಲಿ ಅರುಹಿಯೂ ಇದ್ದ. ಬಾಬಯ್ಯನ ಮಗಳೂ ಮಠದ ಸಂಗೀತಗೋಷ್ಠಿಯ ಗಾಯಕಿಯರಲ್ಲೊಬ್ಬಳೆ. ಅವಳ ಜೊತೆ ಗೋಪಿ ಪ್ರಣಯ ನಿವೇದನೆ ಮಾಡಿ ಅವಳದನ್ನ ಒಪ್ಪಿಯೂ ಆಗಿತ್ತು. ಗೋಪಿಗೆ ಸ್ಥಳಿಯರ ಭಾಷೆ ಇನ್ನೂ ಅಷ್ಟಾಗಿ ಸರಿಯಾದ ಉಚ್ಛಾರಣೆಯಲ್ಲಿ ಮಾತನಾಡಲು ಬರುತ್ತಿರಲಿಲ್ಲ ಹೊರತುˌ ಉಳಿದಂತೆ ಅವನೂ ಸುಂದರಾಂಗನೆ. ಕೆಲಸಗಳಲ್ಲೂ ಶ್ರಮಜೀವಿ. ಬಾಬಯ್ಯನ ಹೆಂಡತಿ ತೀರಿ ಹೋದ ಮೇಲೆ ಹಿರಿ ಮಗನೂ ಮದುವೆಯಾಗಿ ಇನ್ನಷ್ಟು ಪಶ್ಚಿಮಕ್ಕೆ ವಲಸೆ ಹೋಗಿ ಅಲ್ಲೊಂದು ಪಟ್ಟಣದಲ್ಲಿ ಹೊಟೆಲ್ ವ್ಯಾಪಾರಕ್ಕಿಳಿದು ಹೆಂಡತಿಯೊಡನೆ ಪ್ರತ್ಯೇಕ ನೆಲೆಸಿದ ಮೇಲೆ ಇಲ್ಲಿ ಮನೆಯಲ್ಲಿ ಅಪ್ಪ ಮಗಳು ಇಬ್ಬರೆ ಆಗಿದ್ದರು. ಸ್ವಂತಕ್ಕೆ ಮನೆಯೇನೋ ಇತ್ತು. ಆದರೆ ಆಟಿಕೆಗಳ ವ್ಯಾಪಾರದಲ್ಲಿ ಅಂತಾ ಹೇಳಿಕೊಳ್ಳುವಂತ ಲಾಭ ಹುಟ್ಟುತ್ತಿರಲಿಲ್ಲ. ಗೋಪಿಯನ್ನ ಮನೆಯಳಿಯ ಮಾಡಿಕೊಳ್ಳಲು ಬಾಬಯ್ಯನಿಗೆ ಏನೇನೂ ಅಭ್ಯಂತರವಿರಲಿಲ್ಲ. 


ಮಗಳ ಮದುವೆಗೆ ಅವ ಹತ್ತು ರೂಪಾಯಿ ಉಳಿಸಿ ಕೂಡಿಟ್ಟಿದ್ದ. ವಧುವಿಗೆ ಕೊಡಬೇಕಾದ ತಾಳಿ ಉಂಗುರ ಕಾಲುಂಗರದ ಖರ್ಚಿಗೆ ಇವನೆ ಗೋಪಿಗೆ ಹತ್ತು ರೂಪಾಯಿ ಮುಂಗಡ ಕೊಟ್ಟ. ಅಲ್ಲದೆ ಗೋಪಿಯ ಸಂಬಳದ ಬಾಬ್ತು ಹೆಚ್ಚುವರಿ ಹತ್ತು ರೂಪಾಯಿಯೂ ಸೇರಿ ಈ ಮೊತ್ತ ದುಪ್ಪಟ್ಟಾಯಿತು. ಮಠಕ್ಕೆ  ಮದುವೆ ಶುಲ್ಕ ಎಂಟಾಣೆ ಒಂದು ಜೋಡಿಗೆ ನಿಗದಿಯಾಗಿತ್ತು. ಎರಡೂ ಜೋಡಿಗೆ ಸೇರಿ ಇವನೆ ಐದು ರೂಪಾಯಿ ಮದುವೆ ಕಾಣಿಕೆ ಕಟ್ಟಿದ. ಗುರುಗಳು ಇವನ ಧಾರಾಳತನದಿಂದ ಸಂತೃಪ್ತರಾದರು. ಅನಾಥಾಲಯದಲ್ಲೆ ಮದುವೆಯ ಔತಣಕ್ಕೂ ಏರ್ಪಾಡು ಮಾಡಿ ಅದರ ಬಾಬ್ತು ತಲಾ ಐದೈದು ರೂಪಾಯಿಗಳನ್ನು ಅವಳ ಮಾವನಿಂದಲೂ ಇವನಿಂದಲೂ  ಪ್ರತ್ಯೇಕವಾಗಿ ಕಟ್ಟಿಸಿಕೊಂಡರು. ಹೀಗೆ ಎರಡು ವರ್ಷಗಳ ಹಿಂದೆ ಚಳಿಗಾಲ ಮುಗಿದು ವಸಂತ ಕಾಲ ಮೂಡಲು ಇನ್ನೂ ಒಂದು ಋತು ಬಾಕಿ ಇದ್ದಂತೆಯೆ ಇವೆರಡು ಜೋಡಿಗಳು ಬಾಳಿನಲ್ಲಿ ಸತಿ ಪತಿಗಳಾಗಿ ಭಡ್ತಿ ಪಡೆದರು. ಮದುವೆಗೆ ಪತ್ರ ಬರೆದಿದ್ದರೂ ಬರಲಾಗಿರದಿದ್ದ ಅವನ ತಾಯಿ ಹಾಗೂ ತಂಗಿಯಂದರು ತಾವೆ ಕಸೂತಿ ಹಾಕಿ ಪೂರ್ವದ ಭಾರತದಿಂದ ತರಿಸಿದ್ದ ಮಸ್ಲಿನ್ ಬಟ್ಟೆಯಲ್ಲಿ ಲೇಸುಗಳನ್ನ ಕೂರಿಸಿ ತಾವೆ ಹೊಲಿದಿದ್ದ ವಧುವಿನ ಧಿರಿಸು ಹಾಗೂ ವರನಿಗೆ ಪಂಚೆ ಶಲ್ಯ ಉಲ್ಲಾನಿನ ಕೋಟು ಟೈ ಉಲ್ಲಾನ್ ಬಟ್ಟೆಯದ್ದೆ ಚೊಣ್ಣ ಕಳಿಸಿಕೊಟ್ಟಿದ್ದರು. ನೀಲಿಬಣ್ಣದ ಅದರ ಕಿಸೆಯಲ್ಲಿ ಬಿಳಿ ಕರವಸ್ತ್ರ ಕಾಣುವಂತೆ ಇಡಲಾಗಿದ್ದು ಅದರಲ್ಲಿ "ಶುಭ ವಿವಾಹ" ಎಂದು ಅಂದವಾಗಿ ಕಸೂತಿ ಹಾಕಲಾಗಿತ್ತು.

ಪೇಟೆಯ ಗಡಿಬಿಡಿ ಜನಜಂಗುಳಿ ಗಜಿಬಿಜಿ ಕೊಳಕು ವಾತಾವರಣವನ್ನಷ್ಟೆ ಕಂಡು ಬೆಳೆದಿದ್ದ ಅವಳಿಗೆ ಈ ಹಳ್ಳಿಯ ವಾತಾವರಣ ಹೊಸತು. ಮೊದಲಬಾರಿಗೆ ಗಾಡಿಯೇರಿ ಇವನ ಸಂಗಡ ಅತ್ತ ಬರುವಾಗ ಅತ್ತೆ ಮಾವ ವಾಡಿಕೆಯಂತೆ ಅತ್ತಂತೆ ನಟಿಸಿ ಒಂದು ಬುಟ್ಟಿಯನ್ನ ಅವಳ ಕೈ ದಾಟಿಸಿದರು. ಮಾವನ ಹಿರಿಮಗ ಅವಳ ಪುಸ್ತಕ ಹಾಗೂ ಬಟ್ಟೆ ಗಂಟನ್ನ ತಂದು ಬಂಡಿಯಲ್ಲಿಟ್ಟ. ಕೈ ಚೀಲದಲ್ಲಿ ರಾತ್ರಿಯೂಟಕ್ಕೆ ಪೇಸ್ಟಿˌ ಚೂರು ಕೇಕ್ˌ ಚೀಸ್ ಗೆಡ್ಡೆ ಹಾಗೂ ಬೆಣ್ಣೆಮುದ್ದೆಗಳಿದ್ದವು. ಅದಷ್ಟೆ ಅವಳಿಗೆ ಅವಳ ತವರಿನಿಂದ ಬಂದಿದ್ದ ಸ್ತ್ರೀಧನ! ಇನ್ನು ಅವಳ ಪಾಲಿಗೆ ಪಟ್ಟಣದಂಚಿಗೆ ಸಿಕ್ಕಿದ್ದ ಪಿತ್ರಾರ್ಜಿತದ ನಿವೇಶನ ವಿಶಾಲವಾಗಿದ್ದು ಅದರ ಎರಡೂ ಬದಿ ಹೊಸತಾಗಿ ಮನೆ ಕಟ್ಟುತ್ತಿದ್ದರು. ಆದಷ್ಟು ಬೇಗ ತಾನೂ ಸಹ ಅಲ್ಲೊಂದು ಮನೆ ಕೊಟ್ಟಿಗೆ ಕಟ್ಟಿ ಪೇಟೆಯಲ್ಲೂ ಒಂದು ತುರ್ತು ಅಗತ್ಯದ ಪುಟ್ಟ ಪಟ್ಟಣದ ಮನೆ ಮಾಡುವ ಆಲೋಚನೆ ಅವನಿಗೆ ಬಂತು.


ವಿಶಾಲ ಭೂಮಿˌ ದೂರದೂರವಿರುವ ತೋಟದ ಮನೆಗಳುˌ ಬೇಸಿಗೆಯಲ್ಲಿ ಕರಗಿ ನೀರಾದರೆ ಸುತ್ತಿ ಬಳಸಿ ಹೋಗುವಾಗ ಪಟ್ಟಣವನ್ನ ಮತ್ತೂ ಮೂರು ಮೈಲಿ ದೂರ ಮಾಡುವ ಸೋಮ ಸರೋವರದ ನೀರ್ಗಲ್ಲುಗಳ ಮೇಲೆಯೆ ಬಂಡಿ ಜಾರಿಕೊಂಡು ಗಮ್ಯ ಮುಟ್ಟಿದ್ದು. ಹಾದಿಯುದ್ದ ಹಿಮಪಾತವಾಗುವಾಗ ಎಲೆ ಉದುರಿಸಿಕೊಂಡು ಹಿಮ ಹೊದ್ದು ನಿಂತಿದ್ದ ಅಗಾಧ ಗಾತ್ರಗಳ ಪೈನ್ ಓಕ್ ಸಿಲ್ವರ್ ನೀಲಗಿರಿ ಮರಗಳ ಸಾಲುಗಳಿದ್ದ ಕಾಡು ಕಾಣ ಸಿಕ್ಕಿದ್ದುˌ ಅವಳಲ್ಲಿಗೆ ಹೋದ ವಾರವೆ ಬೆಳದಿಂಗಳ ರಾತ್ರಿಯೊಂದರಲ್ಲಿ ಪಶ್ಚಿಮದಿಂದ ಪೂರ್ವದೆಡೆಗೆ ಸಾಗಿ ಹೋಗುತ್ತಿದ್ದ ಕತ್ತೆ ಗಾತ್ರದ ತೋಳಗಳ ಹಿಂಡು ಇವರ ಮನೆ ಕೊಟ್ಟಿಗೆ ಇವೆಲ್ಲವನ್ನೂ ಹಾದು ಹೋದದ್ದು. ಹೋಗುವಾಗ ಅವುಗಳ ಅಸಂಖ್ಯ ಗುಂಪು ಬೆಳದಿಂಗಳಲ್ಲಿ ಕೊಟ್ಟಿಗೆ ಮನೆಯ ಗೋಡೆಯನ್ನ ತಮ್ಮ ಉಗುರಲ್ಲಿ ಕೆರೆದಿದ್ದ ಗುರುತು ಬೆಳಗ್ಯೆ ಕಂಡದ್ದು. ಇವರ ಹಜಾರದ ಗೋಡೆಯಾಚೆ ಕೊಂಚ ಕಾಲ ನಿಂತಿದ್ದ ಗಡವ ತೋಳವೊಂದು ಕಿಟಕಿಯೆತ್ತರ ನಿಂತು ಗಾಜಿನಲ್ಲಿ ಬೆಳಕಿದ್ದ ಒಳಾವರಣ ದಿಟ್ಟಿಸಿದ್ದು. ಗೋಡೆಯಾಚೆಯ ಅದರ ಉಸಿರಿನ ಬಿಸಿ ಈಚೆಗೂ ಅನುಭವಕ್ಕೆ ಬಂದದ್ಧು ಇವೆಲ್ಲವೂ ಅವಳ ಪಾಲಿಗೆ ತುಂಬಾ ಹೊಸದು. 


ರೈತಾಪಿ ಬಾಳ್ವೆಯಾದರೂ ಸರಿ ಸ್ವಂತದ ಮನೆಯಲ್ಲಿ ಚಿರಕಾಲ ಇರುವ ಅವಳ ಕನಸು ಈ ಮೂಲಕ ನನಸಾಗಿತ್ತು. ಜೊತೆಗೆ ಪ್ರೀತಿಯ ಉತ್ತುಂಗದಲ್ಲಿರಿಸಿದ್ದ ಅವನು ಜೊತೆಯಲ್ಲಿದ್ದ. ಅವಳಿಗೆ ಬೇಕಿದ್ದ ಬಾಳ್ವೆ ಇದೇನೆ.



( ಮುಂದುವರೆಯುವುದು.)

No comments: