28 January 2022

ಅವನ ಜೊತೆ ಅವಳ ಕಥೆ.....೩

ಅವಳ ಜೊತೆ ಅವನ ಕಥೆ.....೩



ಅವರಿಬ್ಬರ ಹಳ್ಳಿ ಮನೆಯ ರೈತಾಪಿ ಬಾಳ್ವೆಯ ಅಧ್ಯಾಯ ಆರಂಭವಾಗಿ ಆರು ತಿಂಗಳೊಳಗೆ ರಾಜ ಅವಳ ಹೊಟ್ಟೆಯೊಳಗಿಳಿದಿದ್ದ. ಅವನು ಭೂಮಿಯ ಬೆಳಕು ಕಾಣುವ ಮೊದಲೆ ಪಟ್ಟಣದ ಮನೆಯನ್ನ ಕಟ್ಟಿ ಮುಗಿಸಲು ಅವನು ಪಣ ತೊಟ್ಟ. ಕಷ್ಟವೊ ನಷ್ಟವೊ ಎರಡು ತಿಂಗಳ ಅವಧಿಯಲ್ಲಿ ತೋಟದ ಮನೆಯಿಂದ ಪೇಟೆಗೂ ಪೇಟೆಯಿಂದ ತೋಟದ ಮನೆಗೂ ಬಂಡಿಯೋಡಿಸಿ ತಕ್ಕ ಮಟ್ಟಿಗೆ  ಸುಸಜ್ಜಿತವಾದ ಅಗ್ಗಿಷ್ಟಿಕೆಯ ಸಹಿತವಾದ ಒಂದು ಅಂತಸ್ತಿನ ಉಪ್ಪರಿಗೆ ಮನೆˌ ಕೋಳಿಗೂಡು ಸಹಿತವಾದ ಜಾನುವಾರು ಕೊಟ್ಟಿಗೆ ಕಟ್ಟಿ ಮುಗಿಸಿದ. ಗೋಪಿ ಮತ್ತವನ ಮಡದಿಯ ಸಹಕಾರ ಅದಕ್ಕೆ ಒದಗಿಬಂತು. 


ಅದರ ಒಳಮನೆಯಲ್ಲೆ ರಾಜ ಕಳೆದ ಶಿಶಿರ ಋತುವಿನ ಆರಂಭದಲ್ಲಿ ಹುಟ್ಟಿ ಹೊರಬಂದದ್ದು. ಬಸುರಿಗೆ ಒಬ್ಬಂಟಿಯಾಗಿ ತೋಟದ ಮನೆಯಲ್ಲಿರಲು ತ್ರಾಸವಾಗಬಹುದು ಅಂತ ಆತಂಕಿತನಾಗಿ ಇನ್ನೂ ಹೆರಿಗೆಗೆ ಮೂರು ತಿಂಗಳು ಬಾಕಿ ಇರುವಾಗಲೆ ಅವಳನ್ನ ಅಲ್ಲಿಗೆ ಸ್ಥಳಾಂತರಿಸಿದˌ ಜಾನುವಾರುಗಳೂ ಅದರ ಹಿಂದೆಯೆ ಪೇಟೆಮನೆ ಸೇರಿದವು. ಮಾಂಸಕ್ಕೆ ಬೆಳಸುವ ಪ್ರಾಣಿಗಳು ಮಾತ್ರ ತೋಟದ ಮನೆಯ ರೊಪ್ಪ ಹಾಗೂ ದೊಡ್ಡಿಯಲ್ಲಿ ಉಳಿದವು. ದಿನ ಬಿಟ್ಟು ದಿನ ಗೋಪಿ ಮತ್ತಿವನು ತೋಟದ ಮನೆಗೆ ಬಂಡಿಯೋಡಿಸಿಕೊಂಡು ಬಂದು ಪಶುಗಳಿಗೆ ಮೇವು ನೀರು ಕಾಣಿಸಿ ಆವರಣ ಸ್ವಚ್ಛಗೊಳಿಸಿ ಹೋಗುತ್ತಿದ್ದರು. ಶ್ರಾವಣದ ನಂತರವೆ ಮಗುವಿನೊಂದಿಗೆ ಅವರು ಹಳ್ಳಿಮನೆಗೆ ಮರಳಿ ಬಂದುದಾಗಿತ್ತು.


ರೈತಾಪಿ ಕಸಬುದಾರಿಕೆಯ ಕಸುವು ಅವನಲ್ಲಿ ಸಹಜ ಪ್ರವೃತ್ತಿಯಂತೆ ಬಾಲ್ಯದಿಂದಲೆ ನೆಲೆಯಾಗಿತ್ತು. ಅವನ ಈ ಆಸಕ್ತಿಯನ್ನ ಸಕಾಲದಲ್ಲಿ ಗುರುತಿಸಿದ ಅವನ ತಂದೆ ಅಕ್ಷರಭ್ಯಾಸದಲ್ಲಿ ಅವನ ಅನಾಸಕ್ತಿಯನ್ನ ಗುರತರ ಅಪರಾಧವೆಂದು ಪರಿಗಣಿಸದೆ ಶಿಕ್ಷಕನಾಗಲು ಬಯಸಿ ಅದರತ್ತ ಲಕ್ಷ್ಯ ನೆಟ್ಟ ಹಿರಿಮಗನನ್ನು ಬೆನ್ನುತಟ್ಟಿದಂತೆಯೇˌ ಮಠ ಸೇರಲು ಅಧ್ಯಾತ್ಮದತ್ತ ಆಸಕ್ತಿ ತೋರಿದ ಎರಡನೆಯವನನ್ನು ಬೆಂಬಲಿಸಿದಂತೆಯೆ ಇವನನ್ನೂ ರೈತಾಪಿ ಬದುಕಿನತ್ತ ಪ್ರೋತ್ಸಾಹಿಸಿದರು. ಕೃಷಿಯ ಕಷ್ಟನಷ್ಟˌ ಬೇಸಾಯೇತರ ಆದರೆ ಕೃಷಿ ಪೂರಕ ಚಟುವಟಿಕೆಗಳನ್ನೂ ಜೊತೆಜೊತೆಗೆ ರೂಢಿಸಿಕೊಂಡು ಸಂಭವನೀಯ ಅನಿರೀಕ್ಷಿತ ನಷ್ಟಗಳನ್ನ ಸರಿದೂಗಿಸಿಕೊಂಡು ಹೋಗುವ ಸೂಕ್ಷ್ಮˌ ಕೃಷಿ ಸಲಕರಣೆಗಳ ಸಣ್ಣಪುಟ್ಟ ರಿಪೇರಿ ದುರಸ್ತಿˌ ಪಶು ಅಶ್ವಗಳ ಪರಿಪಾಲನೆಯ ರಹಸ್ಯˌ ಅವುಗಳನ್ನ ಕೆಡಿಸದಂತೆ ಪಳಗಿಸಿಕೊಳ್ಳುವ ಗುಟ್ಟುˌ ಜೇನುˌ ಉಣ್ಣೆ ಉತ್ಪತ್ತಿˌ ಉಪ್ಪು ಹಾಕಿ ಊರಿಟ್ಟು ಮಾಂಸದ ಮೌಲ್ಯವರ್ಧನೆ ಮಾಡೋದುˌ ಹಾಲು ಹೈನುಗಳ ಸಮರ್ಪಕ ಉತ್ಪನ್ನಗಳ ತಯಾರಿಕೆˌ ವರ್ಷಕ್ಕೊಮ್ಮೆ ಕಾಡಿಗೆ ಹೋಗಿ ಹಿಕರಿ ಚೆಕ್ಕೆˌ ಸೊಗದೆ ಲಾವಂಚದ ಬೇರುˌ ಜಾಯಿಕಾಯಿˌ ಮೇಪಲ್ ರಸ ಸಂಗ್ರಹಿಸಿ ಆಲೆಮನೆ ಹಾಕಿ ಸಕ್ಕರೆ ಮಾಡೋದುˌ ನೀಲಗಿರಿ ಎಣ್ಣೆ ತೆಗೆಯೋದುˌ ರಾಳ ಸಂಗ್ರಹಿಸೋದುˌ ಬೆಳೆದ ದ್ರಾಕ್ಷಿಯನ್ನ ಸರಿಯಾಗಿ ಪಿಪಾಯಿಗಳಲ್ಲಿ ಕೊಳೆ ಹಾಕಿ ಮಾಗಿದ ಮೇಲೆ ಅದರ ರಸ ಹಿಂಡಿ ಭಟ್ಟಿ ಇಳಿಸಿ ಗುಣಮಟ್ಟದ ದ್ರಾಕ್ಷಾರಸ ತಯಾರಿಸುವ ಸೂತ್ರˌ ಸರಿಯಾಗಿ ಹುದುಗು ಬರಿಸಿದ ಹುಳಿ ಹಿಟ್ಟಿನಿಂದ ಒಣಧಾನ್ಯಗಳ ರೊಟ್ಟಿ ಸುಡುವುದುˌ ಬಲಿಪ್ರಾಣಿಗಳ ಸಂಖ್ಯೆ ಕುಸಿಯದಂತೆ ಅದೆಕಾಲಕ್ಕೆ ಅಳತೆ ಮೀರಿ ಹೆಚ್ಚದಂತೆ ಅವುಗಳನ್ನ ನಿಯಂತ್ರಣದಲ್ಲಿಡಲು ಮಾತ್ರ ಹೇಗೆ ಶಿಕಾರಿ ಮಾಡುವುದು. ಇವೆಲ್ಲವನ್ನೂ ಒಂದೂ ಬಿಡದಂತೆ ಹೇಳಿಕೊಟ್ಟರು. 


ಅವನ ಹತ್ತನೆ ಪ್ರಾಯದಿಂದ ಹದಿನಾರನೆ ಪ್ರಾಯದವರೆಗೆ ಅವರ ಹೊಲದಲ್ಲಿ ದುಡಿಸಿಕೊಂಡರು. ಆರುನೂರು ಎಕರೆ ಜಮೀನಿನ ದೊಡ್ಡ ಹಿಡುವಳಿ ಹೊಂದಿದ್ದ ಅಪ್ಪನಿಗೆ ಆಳುಗಳನ್ನ ಇಟ್ಟುಕೊಳ್ಳುವುದು ಅನಿವಾರ್ಯವೂ ಆಗಿತ್ತು. ಹೀಗಾಗಿ ಕೆಲಸದ ವಿಷಯದಲ್ಲಿ ಮಗನನ್ನೂ ಆಳೆಂದೆ ಪರಿಗಣಿಸಿ ಬೇಧ-ಭಾವ ತೋರದೆ ದುಡಿಸಿಕೊಂಡದ್ದಷ್ಟೆ ಅಲ್ಲˌ ದಿನಕ್ಕೆ ಕಾಲಾಣೆಯಂತೆ ನಿಗದಿತ ಸಂಬಳವನ್ನೂ ಕೊಟ್ಟರು. ಅವೆಲ್ಲವನ್ನೂ ಅವರೆ ಪಟ್ಟಣದ ಬ್ಯಾಂಕಿನಲ್ಲಿ ಅವನ ಹೆಸರಿನಲ್ಲೆ ಉಳಿತಾಯ ಖಾತೆ ಮಾಡಿ ಕೂಡಿಡುವುದನ್ನೂ ಹೇಳಿಕೊಟ್ಟಿದ್ದರು. ಮೊದಲ ಬಾರಿ ಬ್ಯಾಂಕಿನ ಗುಮಾಸ್ತೆ ಶ್ರೀಯುತ ಅಂತ ಬರೆದಿರುವಲ್ಲಿ ತನ್ನ ಹೆಸರು ಬರೆದು ಹನ್ನೆರಡು ರೂಪಾಯಿ ಜಮೆ ನಮೂದಿಸಿ ಪಾಸುಬುಕ್ಕನ್ನ ಕೈಗಿತ್ತಾಗ ತಾನೂ ದೊಡ್ಡ ಮನುಷ್ಯನಾದೆ ಅನ್ನುವ ಹಾಗನಿಸಿತ್ತು ಅವನಿಗೆ. ತುಂಬಾ ವಿನಮ್ರನಾಗಿ ಆ ಪಾಸುಪುಸ್ತಕ ಗುಮಾಸ್ತೆಯಿಂದ ಪಡೆದವನೆ ಪಟ್ಟಣದ ನಾಗರೀಕರಂತೆ ಧನ್ಯವಾದಗಳು ಅಂತ ಹೇಳಿ ಅಪ್ಪನನ್ನೂ ಅಚ್ಚರಿಗೊಳಿಸಿದ್ದ. ವಾಸ್ತವವಾಗಿ ತನ್ನ ಪಟ್ಟಣದ ಪರಿಚಿತರೊಂದಿಗೆ ಅಪ್ಪ ಮಾತು ಮುಗಿಸುವಾಗ ಹಾಗಂದು ಮುಕ್ತಾಯಗೊಳಿಸೋದನ್ನ ಅವನು ಕಂಡಿದ್ದನಲ್ಲ? ಅದನ್ನೆ ಅವತ್ತು ಅನುಕರಿಸಿದ್ದ ಅಷ್ಟೆ. ಈ ಆರು ವರ್ಷಗಳ ದುಡಿಮೆಯ ಉಳಿತಾಯ ಹಬ್ಬದ ಬೋನಸ್ಸೂ ಸೇರಿ ವರ್ಷಕ್ಕೆ ಸುಮಾರು ಮೂವತ್ತು ರೂಪಾಯಿಗಳಂತೆ ನೂರೆಂಬತ್ತು ರೂಪಾಯಿಗಳ ಗಂಟಾಗಿತ್ತು. ಸ್ವತಂತ್ರನಾದಾಗ ಅಪ್ಪ ತನ್ನ ಮುಂದಿನ ಬದುಕಿಗೆ ಕೊಟ್ಟ ಮೂಲಧನವಷ್ಟೆ ಅಲ್ಲದೆ ಈ ಒಂದು ಮೊತ್ತಕ್ಕೆ ವರ್ಷಕ್ಕೆ ಐದು ಶೇಕಡ ಬಡ್ಡಿಯಂತೆ ಹೆಚ್ಚುವರಿ ಮೂವತ್ತೊಂದುವರೆ ರೂಪಾಯಿ ತನಗೆ ಬ್ಯಾಂಕ್ ಕೊಟ್ಟದ್ದನ್ನ ನೋಡಿ ಹಿರಿಹಿರಿ ಹಿಗ್ಗಿದ. ಅದು ಆಪದ್ಧನ ಅಂತಲೂˌ ವಿವೇಚನೆಯಿಂದ ಅದನ್ನ ಬಳಸುವಂತೆಯೂ ಅಪ್ಪ ಅಮ್ಮ ಇಬ್ಬರೂ ಇವನಿಗೆ ವಿವೇಕ ಹೇಳಿ ಹರಸಿ ಕಳುಹಿಸಿದ್ದರು. 



ಅವನ ಕಾಲ ಮೇಲೆ ಅವನೆ ನಿಲ್ಲಲು ಹೊರಡುತ್ತಿರುವ ಮಗನ ಬಗ್ಗೆ ಅವರಿಗೂ ಹೆಮ್ಮೆ ಇತ್ತು. ಒಂದೊಮ್ಮೆ ಅವನ ಸಾಹಸ ವಿಫಲವಾದರೆ ತಮ್ಮ ಜಮೀನನ್ನೆ ಅವನ ಸುಪರ್ದಿಗೆ ಒಪ್ಪಿಸುವುದು ಇದ್ದೆ ಇತ್ತು. ಆದರೆ ಅವನು ಇದರಲ್ಲಿ ವಿಫಲನಾಗಲಾರನು ಎಂಬ ಭರವಸೆ ಅವರಿಬ್ಬರಿಗೂ ಇದ್ದ ಹಾಗಿತ್ತು. ಹೊಸತಾಗಿ ಹುಟ್ಟುತ್ತಿರುವ ನವನಾಗರೀಕತೆಯ ದೇಶದಲ್ಲಿ ತಮ್ಮ ಮೂವರೂ ಗಂಡು ಮಕ್ಕಳು ಹೀಗೆ ವಿಭಿನ್ನ ವೃತ್ತಿಗಳನ್ನ ಆಯ್ಕೆ ಮಾಡಿಕೊಂಡು ದೇಶ ಕಟ್ಟುವಲ್ಲಿ  ಸಕ್ರಿಯರಾಗುತ್ತಿರುವ ಬಗ್ಗೆ ಅವರಿಬ್ಬರಿಗೂ ಸಂತೃಪ್ತಿ ಇತ್ತು. ಇದು ಅವನು ರೈತನಾದ ಹಿನ್ನೆಲೆಯ ಕಥೆ.


ಇವನ ತೋಟದ ಮನೆಯಿಂದ ಪಟ್ಟಣಕ್ಕೆ ಹೋಗುವ ದಾರಿಯಲ್ಲಿ ಸೋಮ ಸರೋವರ ದಾಟಿ ಆರು ಮೈಲಿಗಳಾಚೆ ರೈಲು ರಸ್ತೆಯ ಕಾಮಗಾರಿ ನಡೆಯುತ್ತಿತ್ತು. ಪೂರ್ವದ ರಾಜಧಾನಿಯಿಂದ ಶುರುವಾಗಿದ್ದ ಹಳಿಗಳನ್ನ ಹಾಸುವ ಕಾರ್ಯ ಈಗ ಇವರ ಪಟ್ಟಣದ ಸಮೀಪದವರೆಗೆ ಬಂದು ಮುಟ್ಟಿತ್ತು. ಸದ್ಯದಲ್ಲಿಯೆ ಅದು ಸಮರ್ಪಕವಾಗಿ ಮುಗಿದರೆ ಇನ್ನಷ್ಟು ವಲಸಿಗರು ಪೂರ್ವದಿಂದ ಸುಲಭವಾಗಿ ಉಗಿಬಂಡಿ ಏರಿ ಬಂದು ಸದ್ಯ ವಿರಳ ಜನವಸತಿಗಳಿರುವ ಆ ಪ್ರದೇಶದಲ್ಲೂ ಜನಸಂಖ್ಯೆ ಹೆಚ್ಚುವ ಸೂಚನೆಗಳು ಅವನಿಗೆ ಸಿಕ್ಕಿದ್ದವು. ರೈಲು ರಸ್ತೆಯ ಗುತ್ತಿಗೆದಾರ ಅಲ್ಲೆ ಸಮೀಪದಲ್ಲಿದ್ದ ಪಾಳುಬಿದ್ದಿದ್ದ ಹಳೆಯ ಹೊಲಮನೆಯೊಂದನ್ನ ಬಾಡಿಗೆಗೆ ಹಿಡಿದು ಚೂರು ದುರಸ್ತಿ ಮಾಡಿ ಪೂರ್ವದ ನಾಡುಗಳಿಂದ ತಾನು ಕರೆಸಿದ್ದ ಕೂಲಿಗಳಿಗೆ ಅಲ್ಲಿ ತಂಗಲು ವ್ಯವಸ್ಥೆ ಮಾಡಿದ್ದ. ಊರಿಟ್ಟ ಮಾಂಸ ಮೀನು ಒಣರೊಟ್ಟಿಗಳು ಅಗತ್ಯ ಮಸಾಲೆ ಪದಾರ್ಥಗಳು ಹಿಟ್ಟು ಸಕ್ಕರೆ ಧಾನ್ಯಗಳು ಚಹಾಪುಡಿ ಎಲ್ಲವನ್ನೂ ನೆಲಮಹಡಿಯ ಸ್ಟೋರ್ ರೂಮಿನಲ್ಲಿ ತಂದಿಟ್ಟು ಅವರ ಖಾನ ಪಾನದ ವ್ಯವಸ್ಥೆಯನ್ನೂ ಮಾಡಿದ್ದ. 



ಸ್ಥಳಿಯ ಭಾಷೆ ಹಾಗೂ ನಾಗರೀಕ ನಡುವಳಿಕೆ ಇವೆರಡೂ ಅಷ್ಟಾಗಿ ರೂಢಿಯಿದ್ದಿರದ ಅವರು ಶ್ರಮಜೀವಿಗಳು. ದಿನವಿಡಿ ಕಲ್ಲು ಒಡೆದುˌ ಸುರಂಗ ಕೊರೆದುˌ ರೈಲಿನ ಲೋಹದ ಪಟ್ಟಿ ಹೊತ್ತುˌ ಮರದ ಸ್ಲಿಪರ್ಗಳನ್ನ ಕೂಯ್ದು ಹಾಸಿ ವಿಪರೀತ ಶ್ರಮದಾಯಕ ಕೆಲಸಗಳನ್ನ ಬೆವರು ಸುರಿಸಿ ಗೆಯ್ದುˌ ಸಂಜೆ ವೇಳೆ ಪಟ್ಟಣದ ಪಡಖಾನೆಯಿಂದ ತಂದಿರುತ್ತಿದ್ದ ಮದ್ಯ ಸೇವಿಸಿ ವಿಪರೀತ ಗದ್ದಲ ಮಾಡುತ್ತಿದ್ದರು. ಅವರವರಲ್ಲೆ ಗಲಾಟೆ ಕೂಗಾಟ ಕೆಲವೊಮ್ಮೆ ತಾರಕಕ್ಕೇರಿ ಅವರಲ್ಲೆ ಇಬ್ಬರಲ್ಲಿ ಹೊಯ್ ಕೈ ಆಗುವುದೂ ಇತ್ತು. ಆದರೆ ಅದೇನೆ ಕೂಗಿ ಕಿರುಚಿ ಜಗಳವಾಡಿದರೂ ಅವರ ಆ ಕಾಟುಭಾಷೆ ಇಲ್ಲಿನವರಿಗೆ ಅರ್ಥವಾಗದ ಕಾರಣ ಅವರ ಜಗಳದ ಅಸಲಿ ಕಾರಣವನ್ನೆ ಕಂಡು ಹಿಡಿಯಲಾಗುತ್ತಿರಲಿಲ್ಲ.


************


ರಾತ್ರಿ ಅದೆಷ್ಟೆ ಶರಂಪರ ಕಿತ್ತಾಡಿಕೊಂಡರೂ ಬೆಳಗ್ಯೆ ಹಗಲಾಗುತ್ತಿದ್ದಂತೆ ಅದೊಂದನ್ನೂ ನೆನಪಿಟ್ಟುಕೊಳ್ಳದ ಅವರುˌ ಹಾಗೊಂದು ಕರಾಳ ರಾತ್ರಿ ಕಳೆದದ್ದೆ ಸುಳ್ಳೇನೋ ಅನ್ನುವಂತೆ ಮತ್ತೆ ಗುಂಪಾಗಿ ಪೂರ್ವದ ಅದ್ಯಾವುದೋ ಹಾಡನ್ನ ಹಾಡಿಕೊಂಡುˌ ಸೀಟಿ ಹೊಡೆದುಕೊಂಡು ತಮ್ಮ ನಿತ್ಯದ  ಪರಿಶ್ರಮದ ಕೂಲಿ ಕೆಲಸವನ್ನ ಯಥಾಪ್ರಕಾರ ಮುಂದುವರೆಸಿಕೊಂಡು ಹೋಗುತ್ತಿದ್ದರು. ಪ್ರತಿ ಶುಕ್ರವಾರ  ಅವರಿಗೆಲ್ಲ ವಾರದ ಸಂಬಳದ ಬಟವಾಡೆ ಆಗುತ್ತಿತ್ತು. ಸಹಜವಾಗಿ ಶನಿವಾರದ ಸಂಜೆ ಪಟ್ಟಣದ ಪಡಖಾನೆಯಲ್ಲಿ ಅವರೆ ಗಿಜುಗುಟ್ಟುತ್ತಿದ್ದರು. ಆದಿತ್ಯವಾರದ ರಜಾದಿನವೂ ಅವರಲ್ಲಿ ಕೆಲವರು ಪಡಖಾನೆಯಲ್ಲಿಯೆ ಬಿದ್ದುಕೊಂಡು ಸಂಜೆ ತೂರಾಡುತ್ತಾ ತಮ್ಮ ಕ್ಯಾಂಪಿನ ಮನೆಗೆ ಒಲ್ಲದ ಮನಸಿನಿಂದ ಸಾಗಿ ಹೋಗುವುದನ್ನು ಕಾಣಬಹುದಿತ್ತು. ಅವರೊಂದಿಗೆ ಆ ತೋಟದ ಹೊಲಮನೆಯ ಕ್ಯಾಂಪಿನಲ್ಲಿ ಹೆಂಗಸರೂ ಮಕ್ಕಳೂ ತಂಗಿದ್ದರು. ಒಟ್ಟಿನಲ್ಲಿ ಅದೊಂದು ಸಂತೆ.


ಆದರೆ ಈ ಸಲದ ಪ್ರಚಂಡ ಶೀತಗಾಳಿ ಅಂತಹ ಮಹಾ ಒರಟರ ಆತ್ಮಸ್ಥೈರ್ಯವನ್ನೂ ಅಲ್ಲಾಡಿಸಿ ಬಿಟ್ಟಿತ್ತು. ಈ ಖಂಡಾಂತರ ಸಾಗಿ ಬಂದಿರುವ ಸಾಹಸಿ ಹಾಗೂ ಕ್ರೂರಿ ವಲಸಿಗರಿಂದ ತನಗೆ ತನ್ನವರಿಗೆ ಪರಮ ಅನ್ಯಾಯವಾಗಿದ್ದರೂˌ ಇವರ ಬೇಟೆಯ ತೆವಲಿನ ಅಟ್ಟಹಾಸಕ್ಕೆ ಬಲಿಯಾಗಿ ತಮ್ಮೊಂದಿಗೆ ತಲೆಮಾರುಗಳಿಂದ  ಸಹಜೀವನ ನಡೆಸುತ್ತಿದ್ದ ಕತ್ತೆಮೊಲಗಳು - ಕಾಡೆಮ್ಮೆಗಳು ವಿನಾಶದ ಅಂಚಿಗೆ ತಲುಪಿರುವ ನೋವದೆಷ್ಟೆ ಇದ್ದರೂˌ ಅದೆಲ್ಲಿಂದಲೋ ಬಂದ ಇವನ ಹಾಗಿನ ನವ ನಾಗರೀಕತೆಯವರಿಂದ ತಮ್ಮ ಸ್ಥಳಿಯ ಸಂಸ್ಕೃತಿ ದಬ್ಬಾಳಿಕೆಗೊಳಗಾಗುತ್ತಿರೋದನ್ನ ಸಹಿಸಲಾರದೆ ಸ್ವತಃ ತಾವೆ ತಮ್ಮ ಹಾಡಿ ಕಾಡು ನೆಲ ಎಲ್ಲವನ್ನೂ ತ್ಯಜಿಸಿ ಇನ್ನೂ ಈ ಪರಕೀಯರ ಕಾಟ ಅಷ್ಟಾಗಿ ಹಬ್ಬಿರದಷ್ಟು ಪಶ್ಚಿಮಕ್ಕೆ ತಾವೆ ವಲಸೆ ಹೋಗುವ ಶೋಚನೀಯ ಪರಿಸ್ಥಿತಿ ಎದುರಾಗಿದ್ದರೂ ಸಹ ಆ ಸ್ಥಳದ ಅಲ್ಲಿನ ವಾತಾವರಣದ ಹಾಗೂ ಆಪತ್ತು ವಿಪತ್ತುಗಳ ಸಂಪೂರ್ಣ ಅರಿವಿದ್ದ ಸ್ಥಳಿಯರ ಬುಡಕಟ್ಟಿನ ಹಿರಿಯ ಈ ಚಳಿಗಾಲ ಹನ್ನೆರಡು ವರ್ಷಗಳಿಗೂ ಹಿಂದೆ ಕಾಡಿದ್ದ ವಿಪರೀತ ಶಿಶಿರಕ್ಕಿಂತ ಭೀಕರವಾಗಿರಲಿದೆ ಎಂದು ಪೇಟೆಗೆ ತಾನೆ ಖುದ್ದಾಗಿ ಬಂದು ಗಟ್ಟಿ ಧ್ವನಿಯಲ್ಲಿ ಘೋಷಿಸಿ ಸೂಚನೆ ಕೊಟ್ಟಿದ್ದರೂ ಸಹ ಈ ಬಗ್ಗೆ ಮುಂಜಾಗ್ರತೆ ವಹಿಸದೆ ಅದ್ಯಾವುದೋ ಹಕ್ಕಿಪುಕ್ಕ ತಲೆಯ ರುಮಾಲಿಗೆ ಸಿಕ್ಕಿಸಿಕೊಂಡು ವಿಚಿತ್ರ ಧಿರಿಸು ಧರಿಸಿ ಮಣಿ ಸರಗಳ ಮಾಲೆ ತೊಟ್ಟು ಕೈಯಲ್ಲೊಂದು ದೊಣ್ಣೆ ಊರಿಕೊಂಡು ಬಂದಿದ್ದ ಅವನನ್ನೆ "ಅನಾಗರೀಕ ಮುದುಕ" ಅಂತ ಗೇಲಿ ಮಾಡಿದ್ದವರೆಲ್ಲರೂ ಈಗ ಕಷ್ಟಕ್ಕೆ ಸಿಕ್ಕಿ ಹಾಕಿಕೊಂಡಿದ್ದರು. 


ಅವನ ಜೀವನಾನುಭವದ ಮುಂದೆ ಇವರ ನಾಗರೀಕತೆಯ ಲೆಕ್ಕಾಚಾರಗಳಲ್ಲ ತಲೆಕೆಳಗಾಗಿದ್ಢವು. ಕೇವಲ ಬಾನಿನಲ್ಲಿ ಕಳೆದ ಆರು ಹುಣ್ಣಿಮೆಗಳ ಪೂರ್ಣಚಂದ್ರ ಹಾಗೂ ನಕ್ಷತ್ರಗಳ ಚಲನೆಯನ್ನ ನೋಡಿ ಮನದಲ್ಲೆ ಗುಣಿಸಿ ಭಾಗಿಸಿ ಖಚಿತವಾಗಿ ಈ ಕಂಡರಿಯದ ಹಿಮಪಾತದ ಹವಾಮಾನದ ಬಗ್ಗೆ ಆ ಹಿರಿಕ ಸ್ಥಳಿಯ ಮುನ್ನೆಚ್ಚರಿಕೆ ನೀಡಿದ್ದ. ಅದರ ಆರಂಭಿಕ ಹೊಡೆತವೆ ಅದೆಷ್ಟು ಬಿಗಿಯಾಗಿತ್ತೆಂದರೆˌ ಸುಲಭವಾಗಿ ಯಾವ ಕಠಿಣ ಪರಿಸ್ಥಿತಿಗೂ ಜಗ್ಗದಂತಿದ್ದ ರೈಲು ರಸ್ತೆ ಹಾಸಲು ಬಂದಿದ್ದ ಈ ಒರಟರ ಗುಂಪು ಬಾಲ ಮುದುರಿಕೊಂಡು ಮತ್ತೆ ಪೂರ್ವದತ್ತ ಗಂಟು ಮೂಟೆ ಕಟ್ಟಿಕೊಂಡು ದೌಡಾಯಿಸಿದ್ದರು. ಗುತ್ತಿಗೆದಾರ ಅದೇನೆ ಅಮಿಷ ಒಡ್ಡಿ ಅದೆಷ್ಟೆ ಬೇಡಿಕೊಂಡರೂ ಅವರ್ಯಾರೂ ಅದಕ್ಕೆ ಕಿಂಚಿತ್ತೂ ಸೊಪ್ಪು ಹಾಕಲಿಲ್ಲ. 


ಆದರೆ ಅವರಂತೆ ಅಲೆಮಾರಿಗಳಾಗಿಲ್ಲದ ಹೊಲಮನೆ ಮಾಡಿ ಪರಿಶ್ರಮದಿಂದ ಹೋರಾಟದ ಬದುಕು ನಡೆಸುತ್ತಾ ಬಂದು ನೆಲೆಸಿರುವ ರೈತಾಪಿಗಳಿಗಾಗಲಿˌ ಹೊಸ ಪ್ರದೇಶಕ್ಕೆ ಬಂದು ಅಂಗಡಿˌ ಹೊಟೆಲುˌ ದರ್ಜಿಯಂಗಡಿˌ ಕುಂಬಾರಿಕೆˌ ಕಮ್ಮಾರಿಕೆˌ ಭಂಡಸಾಲೆ ಹೀಗೆ ನಾನಾ ತರಹದ ವ್ಯವಹಾರಗಳಿಗೆ ತಮ್ಮ ಜೀವಮಾನದ ಗಳಿಕೆಯನ್ನೆಲ್ಲಾ ಬಂಡವಾಳ ಹೂಡಿ ಅದನ್ನೆ ತಮ್ಮ ಭವಿಷ್ಯ ಅಂದುಕೊಂಡಿರುವವರಿಗೆಲ್ಲ ಹೀಗೆ ಏಕಾಏಕಿ ಇದ್ದದ್ದನ್ನು ಇದ್ದಲ್ಲಿಯೆ ಬಿಟ್ಟು ಬಂದಂತೆಯೆ ಬಂದಿದ್ದಲ್ಲಿಗೆ ಪಲಾಯನಗೈಯಲು ಸಾಧ್ಯವೆ ಇರಲಿಲ್ಲ. ಅಂತಹ ಅಸಹಾಯಕ ಸಾಹಸಿ ರೈತಾಪಿಗಳಲ್ಲಿ ಅವನೂ ಒಬ್ಬನಾಗಿದ್ದ. ಅಷ್ಟಕ್ಕೂ ಎಂದೆಂದಿಗೂ ಬದಲಾಗದ ಸತ್ಯ ಈ ವಾತಾವರಣದ ವೈಪರೀತ್ಯ. ಮುಂದೆಯೂ ಇದರೊಂದಿಗೆ ಗುದ್ದಾಡಿಕೊಂಡೆ ಹೊಂದಾಣಿಕೆಯ ಬದುಕನ್ನ ನಡೆಸಬೇಕಿರುವಾಗ ಶಾಶ್ವತವಾಗಿ ಅಲ್ಲಿ ನೆಲೆಸಿದವರ್ಯಾರೂ ಹಾಗೆ ತತ್ಕಾಲಿಕವಾಗಿಯಾದರೂ ಸರಿ ಪಲಾಯನ ಮಾಡುವುದು ಮರು ವಲಸೆ ಹೂಡುವುದು ವಾಸ್ತವವೂ ವಿವೇಕವೂ ಆಗಿರಲ್ಲ.


ರೈಲು ರಸ್ತೆಯ ಕಾರ್ಮಿಕರು ಖಾಲಿ ಮಾಡಿ ಹೋದ ತೋಟದ ಮನೆಯೂ ಈಗ ಹಿಮಪಾತದ ಚಳಿಗಾಲದುದ್ದ ಬಿಕೋ ಅನ್ನುತ್ತಿದ್ದುˌ ಈಗ ಅವರ ತೋಟದ ಮನೆಗೆ ಪಟ್ಟಣದ ಹಾದಿಯಲ್ಲಿ ಮೂವತ್ತು ಮೈಲಿ ದೂರ ಒಂದು ನರಪಿಳ್ಳೆಯೂ ಸಹಿತ ವಾಸವಿರಲಿಲ್ಲ. 


ಇವತ್ತು ಅವನು ಹಾಗೆ ನಸುಗತ್ತಲ ಮುಂಜಾವಿನಲ್ಲಿಯೆ ಅದೆಲ್ಲಿಗೋ ಹೊರಡುವ ಸೂಚನೆ ಸಿಕ್ಕೊಡನೆಯೆ ಅಗ್ಗಿಷ್ಟಿಕೆಯ ಹತ್ತಿರದ ಗೋಡೆಯ ಗೂಟಕ್ಕೆ ಬಿಗಿದಿದ್ದ ತನ್ನ ಕುತ್ತಿಗೆಯ ಹಗ್ಗ ಕಿತ್ತು ಬರುವಂತೆ ಎಳೆದುಕೊಳ್ಳುತ್ತಾ ನಾನೂ ಬರುತ್ತೇನೆಂದು ನಾಯಿ ಕರಿಯ ಎಗರಾಡ ತೊಡಗಿದ. ಅದರ ನಿರೀಕ್ಷೆ ಇದ್ದುದರಿಂದಲೆ ಮುಂಜಾಗ್ರತ ಕ್ರಮವಾಗಿ ಅವನನ್ನು ರಾತ್ರಿಯೆ ಉಪಾಯವಾಗಿ ಗೂಟಕ್ಕೆ ಬಿಗಿದು ಕಟ್ಟಿದ್ದರು. ಈ ಭೀಕರ ಚಳಿಗಾಲಕ್ಕೂ ಮೊದಲು ಬಹುತೇಕ ಕಾಣೆಯಾಗಿದ್ದ ಹಿಮಚಿರತೆಗಳು ಈಗ ಏಕಾಏಕಿ ಹವಾಮಾನ ವೇಪರೀತ್ಯದ ಕಾರಣದಿಂದಲೋ ಏನೋˌ ಪುನಃ ತೋಟದ ಮನೆಯ ಸುತ್ತಮುತ್ತ ಸುಳಿದಾಡಲು ಆರಂಭಿಸಿರೋದರಿಂದ ಹೀಗೆ ಕರಿಯನನ್ನು ರಾತ್ರಿ ಹೊತ್ತಿನಲ್ಲಿ ಮನೆಯೊಳಗೆ ಕೂಡಿ ಹಾಕುವುದು ಅನಿವಾರ್ಯವೂ ಆಗಿತ್ತು. ಇಲ್ಲದಿದ್ದಲ್ಲಿ ಶ್ವಾನಮಾಂಸ ಪ್ರಿಯ ಶ್ವಪಚ ಚಿರತೆಗಳು ಬಹಳ ಹಿಂದೆಯೆ ಕರಿಯನಿಗೊಂದು ಗತಿ ಕಾಣಿಸುತ್ತಿದ್ದುದರಲ್ಲಿ ಯಾವ ಸಂಶಯವೂ ಇರಲಿಲ್ಲ ಅಂತ ಇಟ್ಟುಕೊಳ್ಳಿ. ಅದೂ ಸಾಲದು ಅಂತ ಈ ಎಮ್ಮೆತೋಳಗಳ ಹಿಂಡುಗಳು ಬೇರೆ ಆಗೀಗ ತೋಟವನ್ನು ಬಳಸಿಕೊಂಡು ಗುಂಪು ಗುಂಪಾಗಿ ವಲಸೆ ಹೋಗಲಾರಂಭಿಸಿವೆ. ಬಹುಶಃ ತನ್ನ ತೋಟದ ಜಾಗ ಬೇಲಿ ಬಿಗಿದ ಜಮೀನು ಎಲ್ಲವೂ ಅವುಗಳ ಸುಶುಪ್ತಿಯಲ್ಲಿ ಅಚ್ಚಾಗಿರುವ ವಲಸೆ ಹಾದಿಯಲ್ಲೆ ಇದ್ದಿರಲೂಬಹುದು. ಕರಿಯನನ್ನೆಲ್ಲಾದರೂ ಸಡಿಲ ಬಿಟ್ಟರೆ ಅವನು ಅಂತಹ ಗುಂಪುಗಳ ಮೇಲೆ ಹಾರಿ ಹೋರಾಡಲೂ ಹೇಸುವವನಲ್ಲ. ತಾನು ಮನೆಯಲ್ಲಿಲ್ಲದ ಸಂದರ್ಭ ಕರಿಯನಾದರೂ ಅವಳˌ ಮಗ ರಾಜನ ಹಾಗೂ ಕೊಟ್ಟಿಗೆಯ ಬಂಧುಗಳ ಕಾವಲಿಗೆ ಅಲ್ಲಿಯೆ ಇರಬೇಕಾಗಿದ್ದುದು ಅನಿವಾರ್ಯವಾಗಿತ್ತು.


ಆದರೆ ಅವನ ವೇಷಭೂಷಣ ನೋಡಿ ತಡೆಯಲಾಗದೆ ಕರಿಯನೂ ತಕಥೈ ಕುಣಿಯಲಾರಂಭಿಸಿದ. ಅದರಲ್ಲೂ ಇವನ ಕೈಯಲ್ಲಿ ಒಂದೊಮ್ಮೆ ಕೋವಿಯನ್ನೇನಾದರೂ ಕಂಡಿದ್ದರೆ ಅವನನ್ನ ಸಂಭಾಳಿಸವುದೆ ಕಷ್ಟವಾಗುತ್ತಿತ್ತು. ಕೋವಿ ಅಂದರೆ ಶಿಕಾರಿ ಅನ್ನುವ ಕನಿಷ್ಠ ಅರಿವು ನಾಯಿ ಕರಿಯನಿಗೂ ಇದ್ದೆ ಇದೆ. ಬೇಟೆಯ ಹುಮ್ಮಸ್ಸಿನಲ್ಲಿ ಅವನು ಸದಾ ಮುಂದು. ಕೋವಿ ಕೈಲಿದ್ದವರ ಹಿಂದೆ ಅತ್ಯುತ್ಸಾಹದಿಂದ ಚಿಮ್ಮಿ ಮುಂದೋಡಿ ಹೋಗುವ ದುರ್ಬುದ್ಧಿ ಒಂದಿಲ್ಲದಿದ್ದಿದ್ದರೆ ಕರಿಯ ಎಂದಿಗೂ ತನ್ನ ಯಜಮಾನ ಹಾಗೂ ಯಜಮಾನತಿಗೆ ವಿಧೇಯನೆ. ಕೋವಿ ಕಂಡರೆ ಮಾತ್ರ ಅವನ ಸಕಲೇಂದ್ರಿಯಗಳಲ್ಲೂ ಎಂತಹ ವಿಪರೀತ ಪರಿಸ್ಥಿತಿಗಳಲ್ಲೂ ಜೀವಸಂಚಾರವಾಗುತ್ತಿತ್ತು ಅಷ್ಟೆ.


ಈಗಲೂ ಕೋವಿಯನ್ನ ಲೋಡು ಮಾಡಿ ಅದನ್ನಿವನು ಮೇಲುಪ್ಪರಿಗೆಯ ಕಡ ಮಾಡಿಗೆ ತೂಗು ಹಾಕಿ ಬಂದಿದ್ದ. ಅವಳಿಗೆ ತಾನು ಹಿಂದಿರುಗಿ ಬರುವ ಮೊದಲು ತೀರಾ ಅಗತ್ಯ ಬಿದ್ದಲ್ಲಿ ಸ್ವರಕ್ಷಣೆಗಾಗಿ ಅದನ್ನ ಬಳಸಲು ಸೂಚನೆಯನ್ನೂ ಕೊಟ್ಟಿದ್ದ. ಹಳ್ಳಿ ಮನೆ ಬದುಕು ಅದೂ ನಿರ್ಮಾನುಷ ಜಾಗದಲ್ಲಿ ಅಂದರೆ ಹೀಗೆಯೆ. ಯಾವಾಗ ಏನಾಗುತ್ತದೆ ಎಂದು ಹೇಳಲಾಗುವುದಿಲ್ಲ. ಎಲ್ಲಾ ಬಗೆಯ ಅನಿರೀಕ್ಷಿತ ಅನಿಷ್ಟಗಳ ವಿರುದ್ಧ ಕಾದಾಡಲು ಸದಾ ಕಣ್ಣು ಕಿವಿ ತೆರೆದಿಟ್ಟುಕೊಂಡು ಜಾಗ್ರತ ಸ್ಥಿತಿಯಲ್ಲಿಯೆ ಕಾಲ ಹಾಕಬೇಕಿರುತ್ತದೆ.




****************





"ಮಂಜು ಕವಿದ ಇಳೆಯೆದೆಯೊಳಗೆ ಹೊಳೆವ ಸೂರ್ಯನ ನಿರೀಕ್ಷೆ ನಿರಂತರˌ ವಸಂತ ಬೇರೆಯಲ್ಲ ಶಿಶಿರ ಅನ್ಯನಲ್ಲ ಇಬ್ಬರ ನಡುವೆ ಇರೋದು ಇನಿತೆ ಅಂತರ."


ಇವನಿಗೆ ಈ ಕರಿಯ ಸಿಕ್ಕಿದ್ದೂ ಸಹ ಒಂದು ಸ್ಮರಣಾರ್ಹ ಸಂಗತಿಯೆ. ಎರಡು ಚಳಿಗಾಲಗಳ ಹಿಂದೆ ಆಗಿನ್ನೂ ಬ್ರಹ್ಮಚಾರಿಯಾಗಿದ್ದ ತಾನು ಅಪ್ಪನ ಕರೆಯ ಕಾಗದ ತಲುಪಿದ್ದೆ ಹಿರಿಯ ತಂಗಿಯ ಮದುವೆಗೆ ಮನೆ ಕಡೆಗೆ ಹೋಗುವ ಪರಿಸ್ಥಿತಿ ಎದುರಾಗಿತ್ತು. ಅದು ಒಕ್ಕಣೆ ಮುಗಿದ ಸುಗ್ಗಿಯ ನಂತರದ ಸಮಯವಾಗಿದ್ದರಿಂದಲೂˌ ಆ ವರ್ಷ ಮನೆ ಕಟ್ಟುವ ಕೆಲಸ ಬಿಗಿಯಾಗಿದ್ದಿದ್ದರಿಂದ ಮೇವಿನ ಬೆಳೆಗಳ ಹೊರತು ಹೆಚ್ಚಿನ ಬೆಳೆಯದಿದ್ದುದರಿಂದಲೂ ಒಕ್ಕಣೆ ಬೇಗ ಮುಗಿದಿತ್ತು ಬೇರೆ. ವರ್ಷದ ನೆಲ ಕಂದಾಯ ಐದು ರೂಪಾಯಿಗೆ ಆಗ ಬಂದಿದ್ದ ಫಸಲು ಪುಟಗೋಸಿಗೂ ಸಾಕಾಗುತ್ತಿರಲಿಲ್ಲ. ಆದರೆ ಮೊದಲ ವರ್ಷದ ಬೇಸಾಯದಲ್ಲಿ ಈ ಬಗೆಯ ಏರುಪೇರು ಕಷ್ಟನಷ್ಟಗಳೆಲ್ಲ ಇದ್ದದ್ದೆˌ ಅದೆ ರೈತಾಪಿ ಬದುಕು. ಹೀಗಾಗಿ ಆಗ ಜೊತೆಯಲ್ಲಿಯೆ ವಾಸವಿದ್ದ ಗೋಪಿಗೆ ತಿಂಗಳುಗಳ ಕಾಲ ಹೊಲಮನೆಯ ಉಸ್ತುವರಿ ವಹಿಸಿ ತಾನು ಕುದುರೆ ಬಂಡಿಯೋಡಿಸಿಕೊಂಡು ತವರಿಗೆ ಮರಳಿದ್ದ. 


ಹಾಗೆ ಹೋಗಿದ್ದವ ಹಿಂದೆ ಬರುವ ಹಾದಿಯಲ್ಲಿ ನಡುವಿನ ಒಂದು ಪುಟ್ಟ ಪಟ್ಟಣದ ಊಟದ ಮನೆಯೊಂದರಲ್ಲಿ ರಾತ್ರಿ ತಂಗಬೇಕಾಗಿ ಬಂದಿತ್ತು. ತಾನು ಬಿಸಿಬಿಸಿ ರೊಟ್ಟಿ ಜೊತೆಗೆ ಮಾಂಸದ ಮೇಲೋಗರ ಮಲ್ಲುತ್ತಾ ಮೂಳೆ ಕೊರೆವ ಚಳಿಗೆ ಸುಡು ಮದ್ದಿನಂತಹ ಒಂದೊಂದೆ ಗುಟುಕು ದ್ರಾಕ್ಷಾರಸ ಹೀರುತ್ತಿದ್ದಾಗ ಅಸಹಾಯಕ ಕರಿ ನಾಯಿಮರಿಯೊಂದು ದೈನ್ಯತೆ ತುಂಬಿದ ಕಣ್ಣುಗಳಿಂದ ತನ್ನ ಕೈ ಬಾಯನ್ನೆ ನೋಡುತ್ತಾ ತನ್ನ ಊಟದ ಮೇಜಿಗೆ ಅನತಿ ದೂರ ಮೂಕಿ ಇಳಿಸಿದ್ದ ತನ್ನದೆ ಕುದುರೆ ಬಂಡಿಯ ಚಕ್ರದ ಬಳಿ ನಿಂತು ಪಿಳಿಪಿಳಿ ನೋಡುತ್ತಿದ್ದುದು ಅರಿವಿಗೆ ಬಂತು. ಕನಿಷ್ಠ ಕೂಂಯ್ಗುಡಲಾರದಷ್ಟೂ ಅದು ಹಸಿವಿನಿಂದ ಬಳಲಿದಂತಿತ್ತು. ಮರುಕದಿಂದ ಕರೆದˌ ಹತ್ತಿರ ಬರಲಿಲ್ಲ. ತಾನೆ ಒಂದು ತುಂಡು ರೊಟ್ಟಿಯನ್ನ ಅದರತ್ತ ಎಸೆದ. ಬರಲೋ ಬೇಡವೋ ಅಂತ ಅನುಮಾನಿಸುತ್ತಾ ಅದರ ಬಳಿ ಸಾರಿದ ಮರಿ ಗಬಗಬನೆ ಆ ರೊಟ್ಟಿ ತುಂಡನ್ನ ಜಗೆಯಲೂ ಮರೆತಂತೆ ನುಂಗಿ ಮುಗಿಸಿದು. ಇವ ಮತ್ತೊಂದು ತುಂಡೆಸದ. ಅದರದ್ದೂ ಅದೆ ಕಥೆ. ಹೀಗೆ ಎರಡು ರೊಟ್ಟಿಗೆ ಅದರ ಹಸಿವು ತೀರಿ ಜೀವಕಳೆ ಆ ಬಡಕಲು ಕುನ್ನಿಯ ದೇಹದಲ್ಲಾಡಿತು. ಅಷ್ಟಾಗಿಯೂ ಬಾಲ ಅಲ್ಲಾಡಿಸಿದ ಅದು ಹತ್ತಿರ ಬರುವ ಧೈರ್ಯವನ್ನ ಮಾತ್ರ ಮಾಡಲೆ ಇಲ್ಲ. 


ಬೆಳಗಾಗೆದ್ದು ಚಹಾ ಹೀರಿ ಮುಗಿಸಿದವ ಬಂಡಿ ಹೂಡಿ ತನ್ನ ತೋಟದ ಮನೆಯತ್ತ ದೌಡಾಯಿಸುವಾಗ ಮುಂದೆ ಸುಮಾರು ದೂರ ನಿರ್ಜನ ದಾರಿಯಲ್ಲಿ ಬಂಡಿ ನಡೆಸಿದವನೆ ಕುದುರೆಗಳಿಗೆ ಮೇವು ಹಾಕಿ ತುಸು ವಿಶ್ರಾಂತಿ ಕೊಟ್ಟು ಮತ್ತೆ ಮುಂದುವರೆಯುವ ದೃಷ್ಟಿಯಿಂದ ಪ್ರಶಸ್ತ ಸ್ಥಳದಲ್ಲಿ ಬಂಡಿ ನಿಲ್ಲಿಸಿದವ ಅದ್ಯಾಕೋ ತಿರುಗಿ ನೋಡಿದರೆ ಬಿಳಿ ಮಂಜಿನ ಹೊದಿಕೆಯ ಮೇಲೆ ಕರಿ ಚುಕ್ಕಿಯೊಂದು ತನ್ನತ್ತಲೆ ಓಡಿ ಬರುತ್ತಿದೆ! ಅದು ಅದೆ ಕರಿ ನಾಯಿ ಮರಿ ಅನ್ನೋದು ಖಚಿತವಾದ ನಂತರ ಹದಿನೆಂಟು  ಮೈಲಿ ಹೀಗೆ ದಾರಿಯುದ್ದ ತನ್ನನ್ನ  ಹಿಂಬಾಲಿಸಿಕೊಂಡು ಅದು ಬಂದಿರೋ ಬಗ್ಗೆಯೆ ಇವನು ಅಚ್ಚರಿಗೊಂಡ. ಈ ಸಾರಿ ಪ್ರೀತಿಯಿಂದ ಹತ್ತಿರ ಕರೆದಾಗ ಅನುಮಾನಿಸುತ್ತಲೆ ಮೆಲ್ಲಗೆ ಬಾಲವಾಡಿಸತ್ತಾ ಅದು ಹತ್ತಿರ ಬಂದಿತು. ಅಷ್ಟು ದೂರ ಓಡಿ ಬಂದು ಅದು ಬಳಲಿತ್ತುˌ ಆ ಚಳಿಯಲ್ಲೂ ಅದರ ಮೈ ಕೊಂಚ ಬೆವರಿತ್ತು. ಈ ಸಾರಿ ಅದಕ್ಕೆ ಮತ್ತೆ ಓಡಿ ಬರುವ ಅಗತ್ಯ ಬೀಳಲಿಲ್ಲ. ಅದನ್ನೂ ಇವ ಬಂಡಿಗೇರಿಸಿಕೊಂಡˌ ಬಳಲಿ ಬೆಂಡಾಗಿದ್ದ ನಾಯಿಕುನ್ನಿ ಬಂಡಿಯೊಳಗೆ ಕಾಲು ಇಡುವ ಜಾಗದಲ್ಲಿ ಮೈ ಚಾಚಿ ನಿಶ್ಚಿಂತವಾಗಿ ಮಲಗಿ ಬಂಡಿಯ ಕುಲುಕಾಟಕ್ಕೆ ತೊಟ್ಟಲಿನಲ್ಲಿ ತೂಗಿ ಮಲಗಿಸಿದ ಕಂದನಂತೆ ನಿದ್ರೆ ಹೋಯಿತುˌ ಮುಂದೆ ಅವನ ಬಣ್ಣವೆ ಅವನ ನಿಜ ನಾಮಧೇಯವೂ ಆಯಿತು. ಹೀಗೆ ಕರಿಯ ಇವನ ಕುಟುಂಬದ ಒಬ್ಬ ಸದಸ್ಯನಾಗಿ ಹೋಗಿದ್ದ.


ಇಂತಹ ಶಿಕಾರಿ ಪ್ರಿಯ ಕರಿಯನನ್ನ ಹಿಂದಿನ ರಾತ್ರಿಯೆ ಕಟ್ಟಿ ಬಿಗಿಯದಿರುತ್ತಿದ್ದಿದ್ದರೆ ಅದಾಗಲೆ ಅವನ ಸವಾರಿ ಗಾಡಿಖಾನೆಯತ್ತ ಸಾಗಿಯಾಗಿರುತ್ತಿತ್ತು. ಮನೆಯ ತಲೆಬಾಗಿಲನ್ನ ಬಾಗಿಲನ್ನ ತೆರೆದಿದ್ದೆ ತರ ಸಶಬ್ಧವಾಗಿ ಭೋರ್ರ್ ಎಂದು ಬೀಸುತ್ತಿದ್ದ ಹಿಮ ಮಾರುತ ಬೆಚ್ಚಗಿದ್ದ ಮನೆಯೊಳಗೆ ನುಗ್ಗಿ ಬಂತುˌ ಹೀಗಾಗಿ ತಾನು ಬಲ ಹಾಕಿ ತಡೆದುˌ ತನಗೆ ಹೊರ ನುಗ್ಗಲು ಬೇಕಾದಷ್ಟು ಎಡೆ ಸಿಕ್ಕೊಡನೆ ಹೊರ ಹಾರಿದ ಅವನು ಬಲ ಬಿಟ್ಟು ಎಳೆದು ಬಾಗಿಲನ್ನು ಹೊರಗಿನಿಂದ ಹಾಕಿಕೊಂಡˌ ಒಳಗಿನಿಂದ ಅವಳು ಚಿಲಕ ಜಡಿದುಕೊಂಡಳು. ಚಳಿಗಾಳಿಯ ಅರ್ಭಟ ಇವತ್ತು ಊಹೆಯನ್ನ ಮೀರಿಸಿದ್ದಾಗಿತ್ತು. ಕ್ಷಣಕ್ಷಣಕ್ಕೂ ಹಿಮದ ಆವರಣದ ಮಟ್ಟ ಇಂಚಿಂಚು ಏರುತ್ತಲೆ ಇತ್ತು. ಮೊದಲಿಗೆ ಇವನು ಇವತ್ತು ಬಗ್ಗಿ ಬಂಡಿಗೆ ಕುದುರೆ ಹೂಡಲು ನಿರ್ಧರಿಸಿದ್ದ. ಕಳೆದ ಸುಗ್ಗಿಯಲ್ಲಿ ಕಂಡಿದ್ದ ಲಾಭದ ಹಣದಲ್ಲಿ ಖರೀದಿಸಿದ ಹೊಸ ಗಾಡಿಯಾಗಿತ್ತು ಈ ಬಗ್ಗಿ. ಬಗ್ಗಿ ಬಂಡಿಗೆ ಚಕ್ರಗಳಿರುವುದಿಲ್ಲ. ಅದರ ಬದಲು ಕಬ್ಬಿಣದ ಪಟ್ಟಿ ಹೊಡೆದ ಪೈನ್ ಹಲಗೆಯನ್ನ ಅಡ್ಡಲಾಗಿ ಅಡಿಯಲ್ಲಿ ಎರಡೂ ಕಡೆ ಅಳವಡಿಸಲಾಗಿರುತ್ತದೆ. ರೈಲು ರಸ್ತೆಯ ಮರದ ಸ್ಲೀಪರಿನಂತಹ ಆ ಚಪ್ಪಟೆ ಹಲಗೆ ಎದುರಿಗೆ ಚೂರು ಅಗಲ ಕಡಿಮೆಯಿದ್ದು ಹಿಂದೆ ಅಗಲವಾಗಿರುತ್ತದೆ. ಹಿಮದ ರಾಶಿಯ ಮೇಲೆ ಚಕ್ರಗಳಿರುವ ಬಂಡಿಗಳು ಪದೆ ಪದೆ ಹೂತು ಹೋಗುವ ಸಂಭವ ಹೆಚ್ಚು. ಅಲ್ಲದೆ ಹಿಮಪಾತ ಏರು ತಗ್ಗಾಗಿ ಸೃಷ್ಟಿಸಿಬಿಡುವ ಸಕ್ಕರೆಯಂತಹ ಹಿಮದ ರಾಶಿ ಅವುಗಳ ಚಕ್ರಗಳನ್ನ ಸರಾಗವಾಗಿ ಚಲಿಸದಂತೆ ಮೈಲಿಗೆ ಮೂರು ಬಾರಿಯಾದರೂ ತಡೆಯುವ ಸಾಧ್ಯತೆಯಿರುತ್ತದೆ. ಹಾಗಾದಲ್ಲಿ ಬಂಡಿ ನಡೆಸುವವರು ಆ ಅಸಾಧ್ಯ ಕೊರೆಯುವ ಚಳಿಯಲ್ಲಿ ಬಂಡಿಯಿಂದ ಕೆಳಗಿಳಿದು ಬಂದು ಚಕ್ರವನ್ನ ಆ ಹಿಮರಾಶಿ ಬಿಡಿಸಿ ಪಾರು ಮಾಡಬೇಕು. ಅಷ್ಟರಲ್ಲಿ ಅಂಗೈ ಮರಗಟ್ಟುವಂತಾಗಿರುತ್ತದೆ. ಕೈಯಲ್ಲಿ ಹಿಡಿವ ಲಗಾಮಿನ ಅನುಭವ ಸಹ ಆಗದಷ್ಟು ಹತ್ತಕ್ಕೆ ಹತ್ತೂ ಬೆರಳುಗಳು ಸೆಟೆದುಕೊಂಡಿರುತ್ತವೆ. 


ಆದರೆ ಬಗ್ಗಿ ಬಂಡಿ ಹಾಗಲ್ಲ ಹಿಮದ ನೆಲದ ಮೇಲೆ ಸರಾಗವಾಗಿ ಜಾರುತ್ತದೆ. ತಳಕ್ಕೆ ಹೊಡೆದ ಮರದ ಪಟ್ಟಿಗಳು ಹೆಚ್ಚು ಶ್ರಮ ಬಯಸದೆ ಸುಲಭವಾಗಿ ಹಿಮದ ರಾಶಿಯ ಮೇಲೆ ಜಾರಿ ಬರುತ್ತದೆ. ಬಂಡಿಗೆ ಕಟ್ಟಿರುವ ಕುದುರೆಗಳಿಗೂ ಸಹ ಅಧಿಕ ಶಕ್ತಿ ವ್ಯಯಿಸದೆ ಅರಾಮವಾಗಿ ಮುಂದೋಡುತ್ತಾ ಭಾರವನ್ನೆಳೆಯಲು ಅನುಕೂಲಕರ. ಚಳಿಗಾಲದಲ್ಲಿ ಯಮಭಾರದ ಪೈನ್ ಹಾಗೂ ಓಕ್ ಧಿಮ್ಮಿಗಳನ್ನೂ ಸಹ ಜನ ಇಂತಹ ಬಗ್ಗಿ ಬಂಡಿಗಳಲ್ಲಿ ಹೇರಿಕೊಂಡೋ ಇಲ್ಲಾ ಬಲವಾಗಿ ಅವನ್ನ ಬಂಡಿಗಳ ಹಿಂದೆ ಕಟ್ಟಿಕೊಂಡೋ ತಮ್ಮ ಕುದುರೆಗಳಿಂದ ಅವನ್ನ ಮೈಲುಗಟ್ಟಲೆ ದೂರ ಎಳೆಸಿಕೊಂಡು ಆ ಮರಮಟ್ಟುಗಳನ್ನ ಕಡಿದಿಟ್ಟ ಕಾಡಿನಿಂದ ಮನೆಯಂಗಳಕ್ಕೆ ತರುತ್ತಾರೆಂದರೆ ಊಹಿಸಿ. 


ಹೀಗಾಗಿ ಸುಲ್ತಾನನಿವತ್ತು ಬಗ್ಗಿಬಂಡಿಗೆ ಬಿಗಿಸಿಕೊಳ್ಳುವವನಿದ್ದ. ಆದರೆ ಕಡೆಯ ಕ್ಷಣದಲ್ಲಿ ಯೋಜನೆ ಬದಲಿಸಿ ಅವನ ಬೆನ್ನೇರಿ ಹೋಗುವುದೆ ಸರಿ ಎಂದು ಇವನು ನಿರ್ಧರಿಸಿದ್ದ. ಮೊದಲನೆಯದಾಗಿ ದೂರ ಪ್ರಯಾಣಗಳಲ್ಲಿ ಸುಲ್ತಾನನಿನ್ನೂ ಪರಿಪೂರ್ಣವಾಗಿ ಪಳಗಿರಲಿಲ್ಲ. ಇಂತಹ ತೀವೃ ಹಿಮಪಾತದ ದಿನಮಾನಗಳಲ್ಲಿ ವಿಪರೀತ ಪರಿಸ್ಥಿತಿ ಎದುರಾದಾಗ ಅದನ್ನ ಸಮಾಧಾನದಿಂದ ಎದುರಿಸುವ ಸಮಯಾವಧಾನ ಅವನಿಗಿನ್ನೂ ಸಿದ್ಧಿಸಿರಲಿಲ್ಲ. ಹಾದಿಯಲ್ಲಿ ಕೊರಕಲಿನ ಮೇಲೆ ಕಾಲಿಟ್ಟು ಹಿಮದ ರಾಶಿಯೆಲ್ಲಾದರೂ ಕುಸಿದರೆ ರಾಜಿ ಅಥವಾ ಮಾದೇವ ಶಾಂತವಾಗಿರುತ್ತಿದ್ದರುˌ ಇವನು ಕೆಳಗಿಳಿದು ಬೆನ್ನಿಗೆ ಕಟ್ಟಿಕೊಂಡಿರುತ್ತಿದ್ದ ಕೈ ಹಾರೆಯಲ್ಲಿ ಅವರ ಕಾಲು ಕುಸಿದ ಕಡೆಯ ಹಿಮ ಮೇಲೆಳೆದು ಅವರಿಗೆ ಮೇಲೇರಲು ತಾನು ಅನುವು ಮಾಡಿ ಕೊಡುವ ತನಕ ತಾಳ್ಮೆಯಿಂದ ಅವರಿಬ್ಬರೂ ಕಾಯುತ್ತಿದ್ದರು. ಅಂತಹ ಅನುಭವ ಜನ್ಯ ನಡತೆಯ ಸೂಕ್ಷ್ಮತೆಯನ್ನ ಈ ಪಡ್ಡೆ ಹೈದನಿಂದ ನಿರೀಕ್ಷಿಸುವಂತೆಯೆ ಇರಲಿಲ್ಲ. ಹೀಗೆ ಹಲವಾರು ಸುದೀರ್ಘ ಪ್ರಯಾಣಗಳನ್ನˌ ಅದೂ ಇಂತಹ ವಿಪರೀತ ಹವೆಯಲ್ಲಿ ಮಾಡಿ ಕಲಿಯಬೇಕಿತ್ತವನು.



**************



"ಚಂದ್ರನಿರದ ಬಾನಿನಲ್ಲಿ ಬೆಳದಿಂಗಳ ಛಾಯೆ ಮಾತ್ರ ಮಾಸಿಲ್ಲˌ 
ಹಿಮಪಾತವಾಗುವ ಇಬ್ಬನಿಯೂ ಹೆದರುವ ಇರುಳಲ್ಲಿ ತಿಂಗಳ ಬೆಳಕು ಇಳೆಯ ಮೀಸಿಲ್ಲ."


ಹಾಗೆ ಮೇಲೆತ್ತಿದ ಮೇಲೆ ಅವರ ಮೂಗಿನ ಹೊಳ್ಳೆಗಳ ಹೊರಾವರಣದಲ್ಲಿ ಹಪ್ಪುಗಟ್ಟಿರುವ ಅವರದ್ದೆ ಉಸಿರನ್ನ ಕಿತ್ತು ಬಿಡಿಸಿ ಸರಾಗವಾಗಿ ಉಸಿರೆಳೆದುಕೊಳ್ಳಲು ಅನುವು ಮಾಡಿಕೊಟ್ಟುˌ ಅವರ ಕುತ್ತಿಗೆ ಕೆರೆದು ಮುಂದೊಗಲು ಚಪ್ಪರಿಸಿ ಅವಕ್ಕೆ ಉತ್ಸಾಹ ತುಂಬಿದರೆ ಸಾಕು ಮುಂದೆಲ್ಲೋ ಮೈಲಿ ದೂರದಲ್ಲಿ ಸಿಗಬಹುದಾದ ಅಂತದ್ದೆ ಮತ್ತೊಂದು ಕೊರಕಲಿನಲ್ಲಿ ಬೀಳುವ ತನಕ ಹುಮ್ಮಸ್ಸಿನಿಂದ ಅವರಿಬ್ಬರೂ ಮುನ್ನುಗ್ಗಿ ಓಡುತ್ತಿದ್ದರು. ಅವನ ಅಪ್ಪ ಅವುಗಳನ್ನ ಪಳಗಿಸಿ ಕೊಟ್ಟ ತರಬೇತಿ ಅಷ್ಟು ನಿಖರವಾಗಿತ್ತು. 


ಆದರೆ ಸುಲ್ತಾನನ ವಿಷಯ ಹಾಗಲ್ಲˌ ಮೊದಲನೆಯದಾಗಿ ಅವನಿನ್ನೂ ಎಳಸು ಪುಂಡˌ ಕೊನೆಯದಾಗಿ ಅವನಪ್ಪನಷ್ಟು ತಾಳ್ಮೆಯ ತರಬೇತುದಾರ ಅವನಾಗಿರಲೂ ಇಲ್ಲ. ಮನೆಯಿಂದ ನೇರ ಕೊಟ್ಟಿಗೆಗೆ ಹೋಗಿ ತಾನು ಕಣ್ಣಿಗೆ ಹಿಮ ಬೀಳದಂತೆ ಮುಂಗಾಪು ತೊಡಿಸಿˌ ಬೆನ್ನಿಗೆ ಜೀನು ಬಿಗಿದಿದ್ದ ಸುಲ್ತಾನನನ್ನ ಅವನ ಗೊಂತಿನಿಂದ ಹಿನ್ನಡೆಸಿ ಹೊರ ತೆಗೆದ. ಸಂಜೆ ಹಾಲು ಕರೆಯಲು ಅಸಾಧ್ಯವಾಗಿದ್ದರಿಂದ ಕರುಗಳನ್ನ ಅಂದು ಕಟ್ಟದೆ ಮನಸಾದಾಗ ಅವುಗಳ ಅಮ್ಮಂದಿರ ಮೊಲೆಯುಣ್ಣಲು ಅನುಕೂಲವಾಗುವಂತೆ ಕುಣಿಕೆ ಸಡಿಲಿಸಿ ಬಿಟ್ಟಿದ್ದ. ಇವನು ಹಟ್ಚಿಗೆ ಬರುವ ಮೊದಲು ಕುಣಿದಾಡಿ ಹಾರಾಡಿ ಕೊಟ್ಟಿಗೆ ತುಂಬಾ ಹುಡುಗಾಟದಿಂದ ತುಂಟಾಟ ಮಾಡಿಕೊಂಡಿದ್ದ ಅವು ಈಗ ಭಾರಿ ಮೈಯ ಸುಲ್ತಾನ ತನ್ನ ಗೊಂತಿನಿಂದ ಗುಟುರು ಹಾಕುತ್ತಾ ಹೊರ ಬರುತ್ತಿದ್ದಂತೆ ಬೆಚ್ಚಿ ಹುಲ್ಲೆಗಳಂತೆ ನಡುಗುತ್ತಾ ಬೆದರಿದ ನೋಟಗಳನ್ನ ಬೀರುತ್ತಾ ಇನ್ನೂ ಆಗಷ್ಟೆ ಉಂಡ ಮೇವನ್ನ ಮೆಲುಕು ಹಾಕುತ್ತಾ ನುರಿಸುತ್ತಾ ನಿಂತಿದ್ದ ತಮ್ಮ ತಮ್ಮ ತಾಯಂದಿರ ಕಾಲಡಿಗಳಲ್ಲಿ ಹೋಗಿ ಅಡಗಿಕೊಂಡವು. ಅಲ್ಲಿಂದಲೆ ಅಡಿಯಿಂದ ಮುಡಿಯವರೆಗೂ ಉಣ್ಣೆ ವಸ್ತ್ರಗಳಿಂದ ಅದರ ಮೇಲೆ ಶಾಲಿನಿಂದ ಆವೃತ್ತನಾಗಿˌ ತಲೆಗೆ ಉಣ್ಣೆಯ ಟೋಪಿ ಕಾಲಿಗೆ ಮಂಡಿವರಗಿನ ಗಂ ಬೂಟುˌ ಅಂಗೈಗೆ ಚರ್ಮದ ಕೈಗಾಪು ಹಾಕಿಕೊಂಡು ಅದರ ಮೇಲೆ ಉಣ್ಣೆಯ ಕೈ ಕವಚ ತೊಟ್ಚುಕೊಂಡ ಇವನುˌ ಜೀನು ಬಿಗಿದುˌ ಅದರ ಬೆನ್ನ ಮೇಲೆ ಚಳಿಗೆ ದಪ್ಪದ ಕಂಬಳಿ ಹೊಚ್ಚಿದ ಸುಲ್ತಾನನನ್ನು ಹೊರಗೆಳದುಕೊಂಡು ಹೋಗುವುದನ್ನೆ ತಬ್ಬಿಬ್ಬಾಗಿ ನೋಡುತ್ತಿದ್ದವು. ಮೇಲೆ ಮಾಡಿಗೆ ತೂಗು ಹಾಕಿರುವ ಬೊಂಬಿಗೆ ತೂಗುಬಿಟ್ಟಿದ್ದ ಲಾಟೀನಿನ ಜ್ವಾಲೆಯನ್ನ ಕುಗ್ಗಿಸಿ ಇವನು ಸುಲ್ತಾನನೊಂದಿಗೆ ಕೊಟ್ಟಿಗೆಯಿಂದ ಹೊರಬಿದ್ದ. 


ಬೆನ್ನಿಗೆ ಬಿಗಿದಿದ್ದ ಚೀಲದಲ್ಲಿ ಅವಳ ಕೈ ತಯಾರಿಕೆಯ ಮೇಣದಬತ್ತಿˌ ಸೋಪುಗಳುˌ ಕುಡಿಯಲು ನೀರು ಹಾಗೂ ಊಟದ ಬುತ್ತಿ ಇತ್ತು. ಹೆಗಲ ಪಕ್ಕ ಕೈ ಹಾರೆಯನ್ನ ಕಟ್ಟಿಕೊಂಡವ ಸುಲ್ತಾನನ ಬೆನ್ನೇರಿ ಅವನ ಕುತ್ತಿಗೆ ಚಪ್ಪರಿಸಿ ಲಗಾಮು ಒಮ್ಮೆ ಎಳೆದು ತಕ್ಷಣ ಸಡಿಲ ಬಿಟ್ಟ. ಕುದುರೆ ಬಿಲ್ಲಿನಿಂದ ಬಿಟ್ಟ ಬಾಣದಂತೆ ಮುಂದೋಡಿತು. ಅವಳು ಕಿಡಕಿಯ ಪಾರದರ್ಶಕ ಗಾಜಿನಿಂದ ಇದನ್ನೆಲ್ಲಾ ನೋಡುತ್ತಲೆ ಇದ್ದಳು. ಹಿಮಪಾತದ ನಡುವೆ ಮಬ್ಬುಮಬ್ಬಾಗಿ ಇವೆಲ್ಲಾ ಅವಳ ಕಣ್ಣಿಗೆ ಬೀಳುತ್ತಿತ್ತು. ಪ್ರಯಾಣಕ್ಕೆ ಜಾಗ್ರತೆಯ ನುಡಿಗಳು ಕೇಳಿಸಲಾರದಷ್ಟು ದೂರದಲ್ಲಿ ಅವನಿದ್ದ. ಕೂಗಿ ಹೇಳಿದರೂ ಸಹ ಈ ಹಿಮಗಾಳಿಯ ಅರ್ಭಟದಲ್ಲಿ ಅದು ಅವನನ್ನ ಮುಟ್ಟುವುದು ಅಷ್ಟರಲ್ಲ ಇತ್ತು. ಅವನು ಅಲ್ಲಿಂದಲೆ ಕೈಬೀಸಿ ಪ್ರಯಾಣ ಆರಂಭಿಸಿದ. ಇವಳು ಇದ್ದಲ್ಲಿಂದಲೆ ಕೈ ಬೀಸುತ್ತಲೆ ಮಾರುತ್ತರಿಸಿ ಅವನ ಶುಭ ಹಾಗೂ ಸುರಕ್ಷಿತ ಪ್ರಯಾಣವನ್ನ ಹಾರೈಸಿದಳು.


ಹೊರಳ ಬೇಕಾದ ಹಾದಿಯಾವುದು ಸೋಮ ಸರೋವರ ಯಾವ ದಿಕ್ಕಿನಲ್ಲಿದೆ ಅನ್ನುವುದನ್ನೂ ಅಂದಾಜು ಮಾಡಲಾಗಷ್ಟು ಬಿರುಸಿನಿಂದ ಹಿಮದ ಮಳೆ ಎಡೆಬಿಡದೆ ಸುರಿಯುತ್ತಲೆ ಇತ್ತು. ಆಗಾಗ ಮೈಮೇಲೆ ಬಿದ್ದು ಅಲ್ಲೆ ಹೆಪ್ಪುಗಟ್ಟಲು ಹವಣಿಸುವ ಹಿಮವನ್ನ ಕೊಡವಲು ಹೆಗಲು ಕುಣಿಸಿ ಪಾರಾಗಬೇಕಾಗಿ ಬರುತ್ತಿತ್ತು. ಜೇಬಿನಲ್ಲಿದ್ದ ದಿಕ್ಸೂಚಿಯೊಂದೆ ಈ ಸಮಯದಲ್ಲಿ ಅವನ ಆಪ್ತ ಮಿತ್ರ. ಮನೆಯಿಂದ ನೇರ ದಕ್ಷಿಣ ದಿಕ್ಕಿನತ್ತ ಎರಡು ಮೈಲಿ ಸಾಗಿದರೆ ಸಾಕು ಸೋಮ ಸರೋವರ ಸಿಗುತ್ತದೆ. ಅದರ ಹೆಪ್ಫುಗಟ್ಟಿದ ನೀರಿನ ಚಪ್ಪಡಿಯ ಮೇಲೆಯೆ ಸಾಗಿ ಹಾಗೆ ಆಚೆ ದಡದಿಂದ ಇನ್ನಷ್ಟು ದಕ್ಷಿಣಕ್ಕೆ ಹನ್ನೆರಡು ಮೈಲಿ ಮುಂದೆ ಸಾಗಿದರೆ ಸಾಕು ದಿಬ್ಬದ ಮೇಲಿಯರುವ ಆ ರೈಲು ರಸ್ತೆ ಕೂಲಿಗಳ ಕ್ಯಾಂಪಿನ ಮನೆ ಗೋಚರಿಸುತ್ತದೆ. ಅದನ್ನ ದಾಟಿ ಕರಾರುವಕ್ಕಾಗಿ ಎರಡು ಮೈಲಿ ದಾಟಿ ಪಶ್ಚಿಮಕ್ಕೆ ತಿರುಗಿದರೆ ಮುಂದಿನ ಹತ್ತು ಮೈಲು ಕಳೆಯುವಷ್ಟರಲ್ಲಿ ಪಟ್ಟಣದ ಮನೆಗಳ ಅಗ್ಗಿಷ್ಟಿಕೆಗಳ ಹೊಗೆ ಕೊಳವೆಗಳಲ್ಲಿ ಬೂದು ಬಣ್ಣದ ಹೊಗೆಯಾಡುವುದು ಕಾಣಿಸಲೆಬೇಕು. ಹಾಗೊಂದು ವೇಳೆ ಅದು ಕಾಣದಿದ್ದರೆ ತನ್ನ ಪ್ರಯಾಣ ಗುರಿ ತಪ್ಪಿ ಇನ್ಯಾವುದೋ ಹೊರಳು ಹಾದಿಯತ್ತ ತಾನು ದಾರಿ ತಪ್ಪಿರುವುದು ಖಾತ್ರಿ. ಇದನ್ನೆ ಯೋಚಿಸುತ್ತಾ ತಾನು ಮಗ್ನನಾಗಿ ಮುಂದೆ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಮುಂಗಾಲು ಮುಗ್ಗರಿಸಿ ಬಿದ್ದ ಸುಲ್ತಾನ ಇವನ ಆಲೋಚನಾ ಲಹರಿಗೆ ಭಂಗ ತಂದ.


ಸಣ್ಣ ಕೊರಕೊಲೊಂದರಲ್ಲಿ ಮೇಲೆ ಮಾತ್ರ ಪರದೆಯಂತೆ ಕಟ್ಟಿಕೊಂಡಿದ್ದ ಹಿಮರಾಶಿಯ ಪರದೆಗೆ ಏಮಾರಿ ಕಾಲಿಟ್ಟ ಪರಿಣಾಮ ಸುಲ್ತಾನನ ಕಾಲು ಜಾರಿ ಆ ಗುಂಡಿಯೊಳಗೆ ಇಳಿದು  ಅದರಲ್ಲಿ ಕುದುರೆ ಸಿಕ್ಕಿ ಹಾಕಿಕೊಂಡಿತ್ತು. ಇಂತವೆಲ್ಲ ಸುಲ್ತಾನನಿಗೆ ಹೊಸತಾಗಿರುವ ಕಾರಣ ಚೂರು ಗಾಬರಿ ಪ್ರಕಟವಾಗಿ ಅವನ ಮುಖದಲ್ಲಿ ಕಾಣುತ್ತಿತ್ತು. ಕುದುರೆ ಇನ್ನಷ್ಟು ಗಾಬರಿಗೊಳ್ಳದಂತೆ ನೆಗೆದು ಕೆಳಗಿಳಿದವನೆ ಅದರ ಕುತ್ತಿಗೆ ತಟ್ಟಿ ಸವರಿ ಧೈರ್ಯ ತುಂಬುತ್ತಾ ತನ್ನ ಕೈಗೊಡಲಿಯಿಂದ ಮೆಲ್ಲ ಮೆಲ್ಲಗೆ ಅವನ ಕಾಲಿನ ಸುತ್ತ ಗುಪ್ಪೆಯಾಗಿದ್ದ ಮಂಜನ್ನ ಸರಿಸಿ  ಗೊರಸಿಗೆ ತಾಗಿ ನೋವಾಗದಂತೆ ಕೆರೆದು ತೆಗೆದು ಹುಮ್ಮಸ್ಸು ತುಂಬುತ್ತಾ ಕುದುರೆಯನ್ನ ಅದರ ಮೂಗುದಾರ ಹಿಡಿದು ಮಾತಾಡಿಸುತ್ತಾ ಮೇಲೆಬ್ಬಿಸಿ ಮುನ್ನಡೆಸಿದ. ಗಾಬರಿ ಕಳೆಯಲಿ  ಅಂತ ಕೂಡಲೆ ಮೇಲೇರದೆ ಲಗಾಮು ಹಿಡಿದು ತಾನೂ ಜೊತೆಜೊತೆಗೆ ಕೊಂಚ ದೂರ ಹೆಜ್ಜೆ ಹಾಕಿದ. ಕುದುರೆ ಅವನ ಚರ್ಯೆಯನ್ನೆ ಅನುಸರಿಸುತ್ತಾ ಮಾತಾಡಿ ಕುತ್ತಿಗೆ ತಟ್ಟಿದಾಗ ಮಾರುತ್ತರ ಕೊಡುತ್ತಿದೆಯೇನೋ ಅನ್ನುವಂತೆ ಮೆಲುವಾಗಿ ಕೆನೆದು ಇವನ ಜೊತೆಗೆ ನಡೆದು ಬಂತು.


ಅದೂ ಅಲ್ಲದೆ ಸರೋವರವನ್ನೂ ದಾಟಿ ಅದಾಗಲೆ ಮೂರು ಮೈಲು ದೂರ ಒಂದೆ ಭಂಗಿಯಲ್ಲಿ ಜೀನಿನ ಮೇಲೆ ಕೂತು ಅವನಿಗೂ ಜೋಮು ಹಿಡಿದಂತಾಗಿತ್ತುˌ ಸ್ವಲ್ಪವಾದರೂ ಕೈ ಕಾಲನ್ನ ಆಡಿಸಿ ರಕ್ತ ಸಂಚಾರ ನರ ನಾಡಿಗಳಲ್ಲಿ ಆಡುವಂತೆ ಮಾಡದಿದ್ದರೆ ಸ್ವತಃ ತಾನೆ ಮರಗಟ್ಟಿ ಮಂಜಿನ ಕಲ್ಲಾಗಿ ಹೋದೇನು ಅಂತ ಅವನಿಗನಿಸಿತು. ಹೀಗಾಗಿ ಸ್ವಲ್ಪ ದೂರ ನಡೆದವ ಇನ್ನೇನು ಮತ್ತೆ ಕುದುರೆಯ ಬೆನ್ನ ಮೇಲೇರಲು ಉಧ್ಯುಕ್ತನಾದವನನ್ನ ಕಣ್ಣಿಗೆ ಅಯಾಚಿತವಾಗಿ ಬಿದ್ದ ದೃಷ್ಯ ಕ್ಷಣಕಾಲ ತಡೆಯಿತು. ಒಂದು ದಷ್ಟಪುಟ್ಟ ಸಾರಂಗ ಮೇಯಲು ಹುಲ್ಲಿನ ಪೊದರಿಗೆ ಬಾಯಿ ಹಾಕಿರುವ ಭಂಗಿಯಲ್ಲಿಯೆ ಮರಗಟ್ಟಿದಂತೆ ನಿಂತಿತ್ತು. ವಾಸ್ತವವಾಗಿ ತುಂಬು ಗರ್ಭಿಣಿಯಾಗಿದ್ದ ಆ ಹಿಮಸಾರಂಗ ಎಲ್ಲೆಲ್ಲೂ ಹಿಮದ ಹೊದಿಕೆಯೆ ಹಬ್ಬಿರುವ ಈ ವಿಪರೀತ ಹಿಮಪಾತದ ಕಾಲದಲ್ಲಿ ತನ್ನ ಗುಂಪಿನಿಂದ ಬೇರ್ಪಟ್ಟು ಹಸಿವಿನಿಂದ ಕೆಂಗೆಟ್ಟಿರಬೇಕು. ಹೀಗಾಗಿ ಮರುಭೂಮಿಯ ಒಯಸ್ಸಿಸ್ಸಿನಂತೆ ಹಿಮರಾಶಿಯ ನಡುವೆ ತುಸು ಹಸಿರು ಕಂಡ ಈ ಪೊದೆಗೆ ಬಾಯಿ ಹಾಕಿದೆ. ಆದರೆ ಅದರ ದುರದೃಷ್ಟಕ್ಕೆ ಏದುಸಿರು ಬಿಡುತ್ತಾ ಅವಸರಕ್ಕೆ ದಕ್ಕಿದ ನಾಲ್ಕೆಲೆ ಎಳೆದು ತಿನ್ನಲು ಹವಣಿಸುತ್ತಿದ್ದಾಗ ಅದರದೆ ಏದುರಿನ ನೀರಪಸೆ ಗಟ್ಟಿ ಹೆಪ್ಪಾಗಿ ಅದಕ್ಕೆ ಅರಿವಿಲ್ಲದಂತೆ ನೆಲಕ್ಕೂ ಮುಖಕ್ಕೂ ಗೋಂದು ಹಚ್ಚಿದಂತೆ ಮೆಲ್ಲ ಮೆಲ್ಲನೆ ಸುರಿಯತ್ತಿದ್ದ ಹಿಮಪಾತಕ್ಕೆ ಅದರ ಮುಖದ ಬಾಯಿಯ ಭಾಗ ನೆಲಕ್ಕೆ ಅಂಟಿಕೊಂಡಿತ್ತು.



https://youtu.be/S_agP6XyjKU



https://youtu.be/H2i4kdnIBng



https://youtu.be/pyXj7XItMNk


https://youtu.be/npcV206glS0

No comments: