22 January 2022

ಅವನ ಕಥೆ ಅವಳ ಜೊತೆ.... ೧

ಅವಳ ಕಥೆ ಅವನ ಜೊತೆ....



ಕಾರ್ಗತ್ತಲು ಕವಿದ ನೆಟ್ಟಿರುಳ ರಾತ್ರಿಯಲ್ಲಿ ಒಬ್ಬಂಟಿಯಾಗಿ ಏಕಾಂಗಿಯಾಗಿ ನಿಂತಿರುವ ಹಿಮಚ್ಛಾದಿತ ಊರಿನ ವಿಶಾಲ ಜಮೀನಿನ ಮಧ್ಯದ ತೋಟದ ಮನೆ. ಓಕ್ ಮತ್ತು ಪೈನ್ ಮರಗಳ ಹಲಗೆಗಳನ್ನೆ ನಯಗೊಳಿಸಿ ನೆಲಕ್ಕೂ ಹಾಸಿ ಅದರ ಮೇಲೆ ನೆಲಕಂಬಳಿ ಹೊಚ್ಚಿˌ ಮಾಡಿಗೂ ಅದನ್ನೆ ಹೊಸೆದು ಮೇಲೆ ನೀರು ಸಂದುಗಳಿಂದ ಒಳಗೆ ಸೋರದಂತೆ ಟಾರು ಕಾಗದ ಅಂಟಿಸಿˌ ಗೋಡೆಗಳೂ ಒಂದಕ್ಕೊಂದು ಬೆಸೆದ ಪೈನ್ ಮರದ ಧಿಮ್ಮಿಗಳೆ ಆಧಾರ. ನಡುವಿನ ನಾಲ್ಕು ಸರಳುಗಳಿಲ್ಲದ ಖಾಲಿ ಫ್ರೇಮಿನ ಕಿಟಕಿಗಳಿಗೆ ಮೇಲೆತ್ತುವ ಸೌಕರ್ಯವಿದ್ದು ಪಾರದರ್ಶಕ ಗಾಜು ಹಾಕಲಾಗಿದೆ. 


ಒಳಗೊಂದು ಮೊಂಬತ್ತಿಯ ಬೆಳಕಲ್ಲಿ ಅಗ್ಗಷ್ಟಿಕೆಯ ಹತ್ತಿರದ ಅತ್ತಿತ್ತ ವಾಲುವ ಆರಾಮ ಕುರ್ಚಿಯಿಂದೆದ್ದು ತಲೆಗೆ ಮುಂಗಾಪು ಕಾಲಿಗೆ ಕಾಲುಚೀಲ  ದೇಹಕ್ಕೆ ಸ್ವೆಟರ್ ಹಾಕಿರುವ ಅವಳು ಆಗಾಗ ಕಿಟಕಿಯಾಚಿನ ಕತ್ತಲಲ್ಲಿ ಹಣಕುತ್ತಾ ಲಾಟೀನಿನ ಮಿಣುಕು ಬೆಳಕು ನಿಡುಸುಯ್ಯುವ ಕುಳಿರ್ಗಾಳಿಗೆ ಅತ್ತಿಂದಿತ್ತ ಹೊಯ್ದಾಡುತ್ತಿರುವ ಕೊಂಚ ದೂರದ ಕೊಟ್ಚಿಗೆಯ ಕಡೆಗೊಮ್ಮೆˌ ಹಗಲಲ್ಲಿ ಪೇಟೆಗೆ ಹೋಗಿದ್ದ ಅವನು ತಿರುಗಿ ಬಂದಾನೆಯೆ ಎಂದು ದಾರಿಯ ಕಡೆಗೊಮ್ಮೆ ಆತಂಕದಲ್ಲಿ ದಿಟ್ಟಿಸುತ್ತಾ ನಿರೀಕ್ಷೆಯಲ್ಲಿ ಕಾಯುತ್ತಿದ್ದಾಳೆ. ಭೋರಿಟ್ಟು ಬೀಸುತ್ತಿರುವ ಹಿಮ ಸುರಿವ ಚಳಿಗಾಳಿಗೆ ಕಿಟಕಿ ಬಾಗಿಲುಗಳನ್ನ ತೆಗೆಯುವ ಹಾಗೆಯೂ ಇಲ್ಲ.


ಹೊರಬಿಟ್ಟ ಉಸಿರೂ ಹಿಮಗಟ್ಟುವ ಹಾಗಿರುವ ವಾತಾವರಣದಲ್ಲಿ ಮನೆಯೊಳಗಿನ ಅಗ್ಗಿಷ್ಟಿಕೆಯಲ್ಲಿ ಕೋಣೆ ಬೆಚ್ಚಗಿರಿಸಲು ಕಲ್ಲಿದ್ದಲು ಪೈನ್ ಬೇರಿನ ಬೊಡ್ಡೆಯೊಂದಿಗೆ ಉರಿಯುತ್ತಿದೆ. ಇದ್ದಿಲ ಮಸಿಕೊಳವೆಯಿಂದಲೂ ಕುಳಿರ್ಗಾಳಿ ಭೋರ್ಗೆರೆಯುತ್ತಾ ಒಳ ನುಗ್ಗಲು ಹವಣಿಸುತ್ತಿದೆ. ಅತಿ ಹತ್ತಿರದ ಇಂತದ್ದೆ ಇನ್ನೊಂದು ತೋಟದ ಮನೆ ಕೇವಲ ಹದಿನೈದು ಮೈಲಿ ದೂರದಲ್ಲಿದೆ.

ಅವನು ಈ ಚಳಿ ಸೀಳುತ್ತಾ ತನ್ನ ಕುದುರೆಯೇರಿ ಬಂದಾನೆಯೆ? ಕೊಟ್ಟಿಗೆಯಲ್ಲಿ ಗೊಂತಿಗೆ ಕುದುರೆ ಕಟ್ಟಿ ಅದಕ್ಕೆ ಹುರುಳಿ ಹಾಕಿ. ಮೈ ತಿಕ್ಕಿ ಮಾಲೀಷು ಮಾಡಿˌ ಪಕ್ಕದಲ್ಲೆ ಮುದುಡಿ ಮಲಗಿರಬಹುದಾದ ದನ ಲಕ್ಷ್ಮಿ ಮತ್ತವಳ ಪುಟ್ಟ ಕರುವಿಗೆ ಹುಲ್ಲು ಹಾಕಿ ನೀರಿಟ್ಟಾನೆಯೆ? ಅಗ್ಗಿಷ್ಟಿಕೆ ಸಮೀಪ ಬಿಸಿ ಅರಸಿ ಮುದುಡಿ ಮಲಗಿರೋ ನಾಯಿ ಕರಿಯ ಹಾಗೂ ಒಲೆಯ ಸಮೀಪ ಬೆಚ್ಚಗೆ ಮಲಗಿರೋ ಬೆಕ್ಕು ಲಿಲ್ಲಿ ಮತ್ತವಳ ಮರಿಗಳ ಮೈ ತಡವಿಯಾನೆಯೆ?

**********


ಸಂಜೆಗತ್ತಲು ಕವಿಯುವ ಮೊದಲು ತೋಟದ ಮನೆಯನ್ನ ಮರಳಿ ಬಂದು ಮುಟ್ಟಬೇಕು ಅಂತಲೆ ನಸುಕಿನ ಚುಮುಚುಮು ಚಳಿ ಆರುವ ಮೊದಲೆ ತನ್ನ ವಾಹನವಾಗಿರುವ ಅರೇಬಿಯನ್ ಕಂದು ಕುದುರೆ ಸುಲ್ತಾನನ ಬೆನ್ನಿಗೆ ಜೀನೇರಿಸಿ ತಾನು ಅದರ ಮೇಲೆ ಕೂತವನೆ ಪಟ್ಟಣದ ದಿಕ್ಕಿಗೆ ಪಯಣವನ್ನವನು ಆರಂಭಿಸಿದ್ದ. 

ಸಾಮಾನ್ಯವಾಗಿ ಸುಲ್ತಾನನ ತಾಯಿ ರಾಜಿಯ ಸವಾರಿ ಮಾಡುತ್ತಾ ಹೀಗೆ ಪಟ್ಟಣದ ಕಡೆಗಿನ ಕೆಲಸಗಳಿಗೆ ಹೋಗೋದು ರೂಢಿ. ಆದರೆ ರಾಜಿ ಈಗ ತುಂಬು ಗರ್ಭಿಣಿ. ಇನ್ನೊಂದು ವಾರದಲ್ಲಿ ಮರಿ ಹಾಕುವ ಹಾಗಿದ್ದಾಳೆ. ಇಂತಹ ಪರಿಸ್ಥಿತಿಯಲ್ಲಿ ಮೂವತ್ತು ಮೈಲಿ ಹೋಗಿ ಮೂವತ್ತು ಮೈಲಿ ತಿರುಗಿ ಬರಲು ಅವಳಿಗೆ ಪ್ರಯಾಸವಾದೀತು. ಹೀಗಾಗಿ ಅನನುಭವಿ ಪಡ್ಡೆ ಸುಲ್ತಾನನ್ನೆ ಅಣಿಗೊಳಿಸಿ ಸವಾರಿ ಹೊರಟಿದ್ದನಿವನು.

ಸುಲ್ತಾನನಿಗಿದು ಎರಡನೆ ಪಟ್ಟಣದೆಡೆಗಿನ ಪ್ರಯಾಣ. ಅವನ ಉತ್ಸಾಹ ಅದೇನೆ ಇದ್ದರೂ ಇನ್ನೂ ಅವನು ಸಾಕಷ್ಟು ಪಳಗಬೇಕಿರೋದು ಬಾಕಿ ಉಳಿದಿತ್ತು. ರಾಜಿಯಷ್ಟು ತಾಳ್ಮೆಯ ಸ್ವಭಾವ ಇವನದಾಗಿರಲಿಲ್ಲ. ಕಳೆದ ತಿಂಗಳು ಹದಮಾಡಿದ ಕಾಡುಬಾತುಗಳˌ ಕಾಡುಮೊಲಗಳ ಚರ್ಮಗಳಿದ್ದˌ ವರ್ಷಕ್ಕೊಂದಾವರ್ತಿ ಹೆರೆವ ಸಾಕಿದ ರೊಪ್ಪದ ಸೊಪ್ಪುಕುರಿಗಳ ಉಣ್ಣೆಯ ಕಟ್ಟಿದ್ದˌ ಹದ ಮಾಡಿ ಮಂಜುಗಟ್ಟಿಸಿದ್ದ ಸಾಕಿದ ಬಾತುಕೋಳಿಗಳ ಮಾಂಸದ ಪೊಟ್ಟಣಗಳಿದ್ದˌ ಹದವಾಗಿ ಕೆನೆಕಟ್ಟಿಸಿ ದನ ಲಕ್ಷ್ಮಿ ಹಾಗೂ ಸಾಕೆಮ್ಮೆ ಮಹಿಷಿಯ ಹಾಲಿಂದ ಮಾಡಿದ್ದ ಚೀಸುˌ ಬೆಣ್ಣೆˌ ತುಪ್ಪ ಹಾಗೂ ಗಿಣ್ಣಿನ ಭರಣಿಗಳನ್ನ ಹೇರಿದ್ಢˌ ವರ್ಷದ ಮಾಂಸಕ್ಕಾಗಿ ಕಡಿದಿದ್ದ ಮೂರು ಹಂದಿಗಳ ಮಾಂಸವನ್ನ ಉಪ್ಪು ಹಾಕಿ ಹದಗೊಳಿಸಿ ತುಂಬಿಟ್ಟಿದ್ದ ಸಾಸೇಜಿನ ಕಡಾಯಿಗಳಿದ್ದˌ ಪಕ್ಕದ ತೋಟದ ಮನೆಯ ಲೀಲಕ್ಕ ಎರಡು ವರ್ಷಗಳ ಹಿಂದೆ ಇವರಿಬ್ಬರು ಇಲ್ಲಿ ನೆಲೆಸಲು ಬಂದಿದ್ದ ಹೊಸತರಲ್ಲಿ ಮುತುವರ್ಜಿಯಿಂದ ತನ್ನ ಕೋಳಿಗಳನ್ನ ಕಾವಿಗೆ ಕೂರಿಸಿ ಹೆಣ್ಣು ಹೇಂಟೆಗಳನ್ನೆ ಆಯ್ದು ತಂದು ಕೊಟ್ಚಿದ್ದದು ಇಂದು ಎರಡು ಡಝನ್ ಇದ್ದದ್ದು ಇಪ್ಪತ್ತು ಡಝನ್ನಾಗಿ ಇಟ್ಟಿದ್ದ ನಾಟಿಮೊಟ್ಟೆಗಳೆ ತುಂಬಿದ್ದ ಬುಟ್ಟಿಗಳಿದ್ದˌ ಚಳಿಯ ರಾತ್ರಿಯಲ್ಲಿ ಬೇಟೆಗೆ ಬಲಿಯಾಗಿದ್ದ ಚುಕ್ಕಿ ಜಿಂಕೆಯ ಮಾಂಸವನ್ನ ಟೊಳ್ಳು ಕಾಂಡದಲ್ಲಿ ಮಾಡಿಗೆ ನೇತು ಹಾಕಿ ಹಿಕರಿಯ ಹೊಗೆ ಹಾಕಿ ಕಾಪಿಟ್ಟಿದ್ದ ಕಾಡುಮಾಂಸದ ಖಂಡಗಳ ಸರಗಳಿದ್ದ ಬುಟ್ಟಿಗಳಿದ್ದˌ ಸಾಕಿದ್ದ ಜೇನುಗಳ ಹಿಂಡಿದ ತುಪ್ಪ ಹಾಗೂ ಮೇಪಲ್ ರಸದ ಗಟ್ಟಿ ನೀರುಸಕ್ಕರೆ ತುಂಬಿದ್ದ ಜಾಡಿಗಳಿದ್ದ ಗಾಡಿಯನ್ನ ಎಳೆಯುತ್ತಾ ತೋಟದ ಮನೆಗೆ ಅನತಿ ದೂರದಲ್ಲಿದ್ದ ಚಳಿಗಾಲಕ್ಕೆ ಮಂಜುಗಟ್ಟುವ ಸೋಮ ಸರೋವರದ ನೀರ ಚಪ್ಪಡಿಗಳ ಮೇಲೆಯೆ ಸಾಗಿ ಅವೆಲ್ಲ ಸರಕು ಸರಂಜಾಮುಗಳನ್ನೂ ತನ್ನ ಚೊಚ್ಚಲ ಪಯಣದಲ್ಲಿಯೆ ಯಶಸ್ವಿಯಾಗಿ ಆ ವಿಲಾಸಪುರಿ ಪಟ್ಟಣದ ಪೇಟೆ ಬೀದಿಗಳಿಗೆ ತಂದು ಮುಟ್ಟಿಸಿದ್ದ.


ಆದರೆ ಇಂದು ಎಳೆಯಲು ಗಾಡಿಯಿರಲಿಲ್ಲ. ಅವನ ಬೆನ್ನೇರಿ ಯಜಮಾನ ಜೀನಿನ ಮೇಲೆ ಕೂತಿದ್ದ. ಹೀಗಾಗಿ ಸಹಜವಾಗೊಂದು ಗಾಬರಿ ಮನೆಮಾಡಿತ್ತು. ಇಬ್ಬರ ಮನದೊಳಗೂ.


ಪಟ್ಟಣದ ಪೇಟೆ ಬೀದಿಗಳಲ್ಲಿ ಇವರ ಹಳ್ಳಿಯ ತಾಜಾ ಮಾಲುಗಳಿಗೆ ಭಯಂಕರ ಬೇಡಿಕೆಯಿತ್ತು. ಆದರೆ ಕೊಳ್ಳುವ ವ್ಯವಹಾರಸ್ಥರು ಆ ಅಸಲು ಮಾಲಿಗೆ ತಾವು ಕೊಡಬೇಕಾದ ನಿಖರ ಮೌಲ್ಯಕ್ಕೆ ಮಾತ್ರ ವಿಪರೀತ ಚೌಕಾಸಿ ಮಾಡಿˌ ಕಂಜೂಸುತನವನ್ನ ಅನಾವರಣಗೊಳಿಸುತ್ತಿದ್ದರು. ಹಾಗೆ ಕೊಡುವ ಹಣವನ್ನೂ ಸಹ ಕೂಡಲೆ ಕೊಡದೆ ವಾಯಿದೆಯ ಮೇರೆಗೆ ಮಾಲನ್ನ ಇಳಿಸಿಕೊಳ್ಳುತ್ತಿದ್ದರು. ಅಂತಹ ಒಂದು ವಾಯಿದೆಯ ಮೇಲೆ ಮರು ವಸೂಲಿಯ ಉದ್ದೇಶದಿಂದ ಇವರಿಬ್ಬರ ಜಂಟಿ ಪಯಣ ಪಟ್ಟಣದ ದಿಕ್ಕಿನತ್ತ ಹೊರಟಿತ್ತು.


ಹೊರಗಿನ್ನೂ ಗಾಳಿ ಭೋರ್ಗರೆಯುತ್ತಲೆ ಇತ್ತು. ಅಸಾಧ್ಯ ಚಳಿ ಮೂಳೆಯ ಆಳವನ್ನೂ ಹೊಕ್ಕುವ ಹಾಗಿತ್ತು. ಹಿಮ ನೆನ್ನೆ ಸಂಜೆಗಿಂತ ಎರಡಡಿ ಹೆಚ್ಚು ಬಿದ್ದಿರುವ ಹಾಗಿತ್ತು. ಅದರ ಮೇಲೆಯೆ ಇವರ ಪಯಣ ಸಾಗಿತು. ಸಂಜೆಯೆ ಹಿಂದಿರುಗಿ ಬರುವ ಭರವಸೆಯ ಮೇಲೆ. ಬರಿ ಭರವಸೆಯ ಮೇಲೆ.


*********


ಹಿಮ ಸುರಿತದ ಕಾಲವಾಗಿರುವ ಕಾರಣ ಹಗಲು ಹಾಗೂ ಇರುಳನ್ನ ವಿಭಜಿಸುವ ಪ್ರಕೃತಿ ಸಹಜ ಕಲರವಗಳ ಸೂಚನೆ ಶರತ್ ಋತುವಿನಲ್ಲಿ ಕಾಣಲಾಗಲಿ ಕೇಳಲಾಗಲಿ ಸಿಗುತ್ತಿರಲಿಲ್ಲ. ಹಗಲು ತಡವಾಗಿ ಕಣ್ತೆರೆಯುತ್ತಿತ್ತೇನೋ ಅನ್ನುವ ಹಾಗೆ ಬೆಳಕು ಮೂಡುವಾಗ ಮುಂಜಾವು ಕಳೆದು ಘಳಿಗೆ ಎರಡಾಗಿರುತ್ತಿದ್ದರೆˌ ಮುಸ್ಸಂಜೆಗೆ ಎರಡು ಘಳಿಗೆಗೆ ಮೊದಲೆ ಕತ್ತಲ ಕಾವಳ ಎಲ್ಲೆಲ್ಲೂ ಕವಿದು ಸುಂಯ್ಗುಡುವ ಚಳಿ ಗಾಳಿ ಎಡೆಬಿಡದೆ ಸುರಿವ ಹಿಮ ಇವಷ್ಟೆ ಶಾಶ್ವತ ಸತ್ಯಗಳೇನೋ ಅನ್ನುವ ಭ್ರಮೆ ಮೂಡಿಸುತ್ತಿತ್ತು. 


ಒಳ್ಳೆಯ ಕಸುಬುದಾರ ರೈತಾಪಿಗಳು ತಮ್ಮ ಮನೆಯ ಹಾಗೂ ಕೊಟ್ಟಿಗೆಯ ಮುಂದಿನ ನಾಲ್ಕು ತಿಂಗಳುಗಳ ಖರ್ಚಿಗಾಗುವಷ್ಟು ದವಸ ಧಾನ್ಯ ಚಹಾಪುಡಿ ಸಕ್ಕರೆ ಉಪ್ಪು ಮಸಾಲೆ ಲ್ಯೂಟಸ್ ಎಲೆಗಳು ಕಾಳುಮೆಣಸು ತರಕಾರಿ ಹಣ್ಣು ಮಾಂಸ ಹುಲ್ಲು ಗೋಗ್ರಾಸ ಹುರುಳಿ ಇವನ್ನೆಲ್ಲ ಮೊದಲೆ ಸಂಗ್ರಹಿಸಿಟ್ಟುಕೊಳ್ಳುವ ಚತುರತೆ ಹೊಂದಿರುತ್ತಿದ್ದರು. ಅಂತಹ ಬುದ್ಧಿವಂತರಲ್ಲಿ ಇವನೂ ಒಬ್ಬನಾಗಿದ್ದ.


ಉಳಿದಂತೆ ಆ ನಾಲ್ಕು ತಿಂಗಳು ಮಾಡಲು ಹೆಚ್ಚಿನ ಕೆಲಸವಿರುತ್ತಿರಲಿಲ್ಲ ಎಂದೇನಲ್ಲ. ರೈತಾಪಿಗಳು ಭೂಮಿಯಲ್ಲಿ ದುಡಿಯದ ಕಾಲ ಭೂಮಿಯ ಮೇಲೆ ದುಡಿಯಲು ಬಳಸುವ ಸಾಧನ ಸರಂಜಾಮು ಹಗ್ಗ ಮಿಣಿ ಲಾಳ ಗಾಡಿ ರಿಪೇರಿ ಮಾಂಸ ಹದ ಹಾಕುವುದು ತಾಜಾ ಮಾಂಸ ಬೇಕಾದಾಗ ಕದ್ದಿಂಗಳ ರಾತ್ರಿಗಳಲ್ಲಿ ಹಿಮಕರಡಿ ಹಿಮಸಾರಂಗಗಳ ಬೇಟೆಯಾಡುವುದುˌ ಮುಂಜಾವಿನ ಹೊತ್ತಲ್ಲಿ ಅತಿ ಶೀತದ ಉತ್ತರದಿಂದ ಸುಖಶೀತೋಷ್ಣದ ದಕ್ಷಿಣಕ್ಕೆ ಸಾವಿರಾರು ಮೈಲುಗಟ್ಟಲೆ ವಂಶಾಭಿವೃದ್ಧಿ ಮಾಡಲೆ ಹಾರುವ ಕಾಡುಬಾತುಗಳು ದಾರಿಯ ನಡುವೆ ವಿಶ್ರಾಂತಿಗಾಗಿ ಕೊಂಚ ಕಾಲ ತಂಗುವ ಸೋಮ ಸರೋವರದ ಅಂಚುಗಳಲ್ಲಿ ಕಾದಿದ್ದು ಅದೃಷ್ಟವದ್ದಷ್ಟವನ್ನು ಹೊಡೆದುರುಳಿಸುವುದು. ಅಲ್ಲೆಲ್ಲಾದರೂ ಹೆಪ್ಪುಗಟ್ಟಿದ ಸರೋವರದ ಮೇಲ್ಪದರ ತೆಳುವಾಗಿದ್ದರೆ ಅದನ್ನ ಒಡೆದು ನಾಲ್ಕು ಹಿಡಿ ಓಟ್ಸ್ ಎಸೆದು ಅದರಾಸೆಗೆ ಬರುವ ಭಾರಿ ಗಾತ್ರದ ಮೀನುಗಳನ್ನ ಕಡಿದು ಮೇಲೆಳೆದುಕೊಳ್ಳೋದು. ಮುಂದಿನ ಕ್ರಿಸ್ಮಸ್ಸಿಗೆ ಬೇಕಾದ ಐಸ್ ಕ್ರೀಂ ತಯಾರಿಸಲು ಹಿಮಮಾನವನ ಮಾಡಲು ಅಗತ್ಯವಿರೋವಷ್ಟು ಮಂಜುಗಡ್ಡೆಗಳ ಕಲ್ಲುಹಾಸುಗಳನ್ನ ಸರೋವರದ ಮೇಲಿಂದ ಕೂಯ್ದು ತಂದು ಕೊಟ್ಟಿಗೆ ಪಕ್ಕ ಹೊಟ್ಟು ತುಂಬಿಸಿದ ಗೋಡೆಗಳ ನಡುವೆ ಆ ಶೀತದ ಇಟ್ಟಿಗೆಗಳನ್ನಿರಿಸಿ ಶೀತಗೃಹ ಕಟ್ಟೋದು. ಹರಿದ ಉಡೂಪುˌ ಜಾನುವಾರುಗಳಿಗೆ ತೊಡಿಸುವ ಚಳಿಗಾಪುˌ ನೆಲಹಾಸು ಇವಕ್ಕೆಲ್ಲ ತೇಪೆ ಹಾಕೋದುˌ ಇವಿಷ್ಟೆ ಸಾಲದು ಅಂತ ನಿತ್ಯದ ಮನೆವಗತನ ಹಾಲು ಕರೆಯೋದು ಹುಲ್ಲು ಹಾಕೋದು ಕೊಟ್ಟಿಗೆ ಬೆಚ್ಚಗಿರಿಸಲು ಮುರು ಬೇಯಿಸುವ ಅಲ್ಲಿನ ಒಲೆಗೆ ಪೈನ್ ಬೇರಿನ ಬೊಡ್ಡೆಗಳನ್ನ ತುರುಕುತ್ತಾ ಬೆಂಕಿಯಾರದಂತೆ ನಿಗಾ ವಹಿಸೋದುˌ ಗೊಬ್ಬರ ಎತ್ತಿ ಜಾನುವಾರುಗಳ ಉಚ್ಛೆ ಇಂಗಲು ಮಣ್ಣಿನ ಮೇಲ್ಪದರ ಹಾಕಿರುವ ಕೊಟ್ಟಿಗೆಯ ನೆಲವನ್ನ ಗುಡಿಸೋದು ಹೀಗೆ ದೀನ ನಿತ್ಯದ ಕೆಲಸಗಳಿಗೆ ಬರವಂತೂ ಇರುತ್ತಲೆ ಇರಲಿಲ್ಲ.


ಅದರ ನಡುನಡುವೆ ಹೀಗೆ ಪಟ್ಟಣಕ್ಕೆ ತಮ್ಮ ಕಾಡುತ್ಪತ್ತಿˌ ಬೇಟೆˌ ಕಸೂತಿˌ ಕರಕೌಶಲ್ಯˌ ಉಪ ರೈತಾಪಿ ಕಸುಬುಗಳ ಪದಾರ್ಥಗಳನ್ನ ಮಾರಿ ಖರ್ಚಿಗೆ ನಾಲ್ಕು ಕಾಸು ಮೇಲು ಸಂಪಾದನೆ ಮಾಡೋದು ಇದ್ದೆ ಇರುತ್ತಿತ್ತು. ಅವನು ಅವತ್ತು ಪಟ್ಟಣಕ್ಕೆ ಹೊರಟಿದ್ದನಾದರೂ ಕೊಟ್ಟಿಗೆಯ ಅವನ ನಿತ್ಯದ ನಿರ್ವಹಣೆಯನ್ನ ಮುಗಿಸಿಯೆ ಅದರತ್ತ ಗಮನ ಹರಿಸಬೇಕಿತ್ತು. ಹೀಗಾಗಿ ಒಂದು ಅಂದಾಜಿನ ಮೇಲೆ ತನ್ನ ಎದೆಯ ಮೇಲೆ ಇದ್ದ ಅವಳ ತೋಳನ್ನ ಮೆಲ್ಲಗೆ ಸರಿಸಿ ಮಂದರಿಯಿಂದ ಹೊರಬಿದ್ದ. ಕಟಕಟಿಸುವ ಚಳಿಯ ಘಾಟು ಅರಿವಿಗೆ ಬರುವ ಮೊದಲೆ ತನ್ನ ಒಳ ಉಡುಪು ಧರಿಸಿ ಮೇಲೆ ಮೈ ಬಿಗಿಯುವ ಚೊಣ್ಣ ಮತ್ತು ಅಂಗಿ ಹಾಕಿಕೊಂಡ. ಉಪ್ಪರಿಗೆಯ ಅಗ್ಗಿಷ್ಟಿಕೆ ಆರಿ ಹೋಗುವ ಹಾಗಾಗಿತ್ತುˌ ಅದಕ್ಕಷ್ಟು ಪೈನ್ ಬೊಡ್ಡೆ ಕಲ್ಲಿದ್ದಲು ಹಾಕಿ ಊದಿ ಉರಿಸಿ ಕಾಲುಚೀಲ ಹಾಗೂ ಪಾದರಕ್ಷೆ ಧರಿಸಿ ಕೆಳಗಿಳಿದು ಬಂದ. ಅಲ್ಲೂ ಅಗ್ಗಿಷ್ಟಿಕೆ ಆಗಲೋ ಈಗಲೋ ಅನ್ನುವಂತಿತ್ತು. ಅದಕ್ಕೂ ತಕ್ಕ ವ್ಯವಸ್ಥೆ ಮಾಡಿ ಅದರಲ್ಲೆ ಕ್ಯಾಟೆಲ್ಲಿನಲ್ಲಿ ನೀರು ಕುದಿಯಲಿಟ್ಟು ಹಾಲು ಕರೆದು ತರಲು ಕೊಟ್ಟಿಗೆಯತ್ತ ನಡೆದ. ಮುಂಬಾಗಿಲನ್ನ ತೆರೆದೊಡನೆಯೆ ಶೀತಲ ಸುಂಟರಗಾಳಿ ರಪ್ಪನೆ ಮುಖಕ್ಕೆ ರಾಚಿತು. ಕೊಟ್ಟಿಗೆ ಹಾಗೂ ಮನೆಯ ನಡುವೆ ಕಟ್ಟಿದ್ದ ಹಗ್ಗವನ್ನು ಹಿಡಿದವನೆ ಆ ಕತ್ತಲಲ್ಲಿ ಮನೆಯ ಬಾಗಿಲನ್ನ ಭದ್ರವಾಗಿ ಮುಚ್ಚಿ ಆದಷ್ಟು ಬೇಗ ಕೊಟ್ಟಿಗೆಯನ್ನ ಸೇರಿ ಅಸಾಧ್ಯ ಚಳಿಯ ಅರ್ಭಟಗಳಿಂದ ಪಾರಾದ. ಹೊರಗೆ ಎಡೆಬಿಡದೆ ಹಿಮ ಸುರಿಯುತ್ತಲೆ ಇತ್ತು. ಕೊಟ್ಟಿಗೆ ಕೊಂಚ ಮಟ್ಟಿಗೆ ಬೆಚ್ಚಗಿತ್ತು. ಬಾಗಿಲು ಸರಿಸಿ ಒಳ ಹೊಕ್ಕ ಇವನ ಕಾಲು ಹಜ್ಜೆಯ ಸಪ್ಪಳ ಕೇಳಿದ್ದೆ ತಡ ಲಕ್ಷ್ಮಿ ಆಕಳಿಸಿದಳುˌ ರಾಜಿ ಕೆನೆದಳುˌ ಮಹಿಷಿ ತಲೆ ಅಲ್ಲಾಡಿಸಿ ಟ್ರಾಂಯ್ಗುಟ್ಟಿದಳು. ಒಳಗಿನ ಗೋಡೆಗೆ ನೇತು ಹಾಕಿದ್ದ ಉಷ್ಣತಾ ಮಾಪಕದಲ್ಲಿ ಪಾದರಸದ ಮಟ್ಟ -೨೫ ತೋರಿಸುತ್ತಿತ್ತು. ಆದರೂ ಜಾನುವಾರುಗಳ ಮೈ ಶಾಖ ಹಾಗೂ ಮುಚ್ಚುಗೆಯಿರುವ ಕಾರಣ ಕೊಟ್ಟಿಗೆಯೊಳಗೆ ತಕ್ಕಮಟ್ಟಿನ ಬೆಚ್ಚಗಿನ ವಾತಾವರಣವಿತ್ತು. 



ಅದನ್ನ ಇನ್ನಷ್ಟು ಹೆಚ್ಚಿಸಲು ತಕ್ಷಣ ಅಲ್ಲಿನ ಒಲೆಗೆ ಪೈನ್ ಬೊಡ್ಡೆ ಹಾಗೂ ಕಲ್ಲಿದ್ದಲು ತುಂಬಿ ಊದಿ ಬೆಂಕಿಯನ್ನವ ದೊಡ್ಡದಾಗಿಸಿದ. ನೆಲದಲ್ಲಿದ್ದ ಬಕೆಟಿಗೆ ಕೊಂಚ ಹೊರಗಿನ ಹಿಮ ತುಂಬಿ ತಂದು ಕರಗಲು ಇಟ್ಟ. ಇನ್ನೊಂದು ಒಲೆಗೆ ಮತ್ತಷ್ಟು ಹಿಮ ತುಂಬಿಸಿದ ಕಡಾಯಿಯನ್ನೇರಿಸಿ ಅದಕ್ಕೆ ಬೂಸ ಹಿಂಡಿ ನೆನ್ನೆ ಅರಿದಿದ್ದ ಕ್ಯಾರೆಟ್ ಓಟ್ಸ್ ಒಣ ಹುಲ್ಲಿನ ಪುಡಿ ಸೇರಿಸಿ ಮುರು ಕುದಿಯಲು ಇಟ್ಟ. ಅಲ್ಲಿಗೆ ದಿನಕೃತ್ಯಗಳೊಂದಿಗೆ ಅವನ ಅವತ್ತಿನ ಹಗಲು ಹಾಗೆ ಕಣ್ತೆರೆದಿತ್ತು.


**********

ಹೊರಗೆ ಹಿಮ ಸುರಿತದ ನಿರಂತರತೆಯ ಜೊತೆಜೊತೆ ಜ್ಯುಯ್ಯೆನ್ನುವ ಸದ್ದನ್ನ ಹೊರಡಿಸುತ್ತಾ ಬೀಸುತ್ತಿದ್ದ ಚಳಿಗಾಳಿಯ ಪ್ರಕೋಪ ಮುಂದುವರೆದೆ ಇತ್ತು. ಇವ ಮೊದಲಿಗೆ ಮೂಲೆಯಲ್ಲಿದ್ದ ಸಗಣಿ ಎತ್ತುವ ಕೈ ಬುಟ್ಟಿಯನ್ನ ಎತ್ತಿಕೊಂಡ. ಇವನ ಆಗಮನವನ್ನ ಸ್ವಾಗತಿಸುತ್ತಾ ಕೊಟ್ಟಿಗೆಯ ಜಾನುವಾರುಗಳು ಎದ್ದು ನಿಂತು ಮೈಮುರಿದು ಇವನ ಬಟ್ಟೆಯ ವಾಸನೆಯನ್ನ ಅಘ್ರಾಣಿಸಿ ಪ್ರೀತಿ ಪ್ರಕಟಿಸಿದವು. ಅವುಗಳ ಕುತ್ತಿಗೆಗಳನ್ನ ಉಗುರಲ್ಲಿ ಮೆತ್ತಗೆ ಕೆರೆದು ಇವನೂ ಪ್ರತಿಸ್ಪಂದಿಸಿದ. ಕರುಗಳು ಏಕಾಏಕಿ ನಿದ್ದೆ ಕೆಟ್ಟು ಕಂಗಾಲಾಗಿ ತನ್ನ ಅಮ್ಮಂದಿರ ಕಾಲಡಿ ಹೋಗಿ ಒರಗಿ ನಿಂತವು. ತಾಯಂದಿರು ತಮ್ಮ ತಮ್ಮ ಕಂದಂದಿರನ್ನ ಸಂತೈಸುತ್ತಾ ತಮ್ಮ ತಮ್ಮ ಒರಟು ನಾಲಗೆಯಲ್ಲಿ ಅವುಗಳ ಮೈ ನಕ್ಕಿದವು. ಕಸಬರಿಕೆಯಿಂದ ಕೆಳ ಬಿದ್ದಿದ್ದ ಹುಲ್ಲು ಕಸ ಗುಡಿಸಿ ತೆಗೆದು ಬುಟ್ಟಿಗೆ ಹಿಂದೆ ಹರಡಿದ್ದ ಸಗಣಿಯ ರಾಶಿಯನ್ನ ತುಂಬಿಸಿ ಅದನ್ನ ಅಲ್ಲೆ ಮೂಲೆಯಲ್ಲಿ ರಾಶಿ ಹಾಕಿದ. ಅವಳು ಆಮೇಲೆ ಅದರ ಬೆರಣಿ ತಟ್ಟಲಿದ್ದಳು. ಅಷ್ಟರಲ್ಲಿ ಬಿಸಿನೀರಾಗಿದ್ದ ಕರಗಿದ ಹಿಮ ಹಿತವಾಗಿ ಹಬೆಯಾಡುತ್ತಿತ್ತು. ಒಲೆಯ ಮೇಲಿಂದ ಒಂದು ಚೊಂಬಿನಷ್ಟು ಎತ್ತಿಕೊಂಡು ಕೈತೊಳೆದು ಅದೆ ನೀರಲ್ಲಿ ಮುಖವನ್ನೂ ಮೂಲೆಯ ಬಚ್ಚಲಿನಲ್ಲಿ ಅವಳ ಕೈ ತಯಾರಿಕೆಯ ಸೋಪು ಹಾಕಿಕೊಂಡು ತೊಳೆದುಕೊಂಡ. ಹಲ್ಲು ಕಟಕರಿಸುತ್ತಿದ್ದರೂನು ಮೂಳೆ ಪುಡಿ ಕೂಪಿನ ಇದ್ದಲು ಸೇರಿಸಿ ಮಾಡಿದ್ದ ಹಲ್ಲುಪುಡಿಯಿಂದ ಉಜ್ಜಿ ಮುಖಮಾರ್ಜನ ಮುಗಿಸಿದ.


ಮತ್ತೊಂದು ಒಲೆಯಲ್ಲಿ ಕುದಿಯಲು ತೊಡಗಿದ್ದ ಮುರುವನ್ನ ದೊಡ್ಡ ಕೈಪಾತ್ರೆಯಲ್ಲಿ ತೆಗೆದು ಪಶುಗಳ ಬಾನಿಗಳಿಗೆ ತಂದು ಸುರಿದ. ಅಷ್ಟರಲ್ಲೆ ಆ ಅಸಾಧ್ಯ ಚಳಿಯ ಹೊಡೆತಕ್ಕೆ ಅವು ಅರ್ಧ ಬಿಸಿಯಾರಿರುತ್ತಿದ್ದವು. ಹಬೆಯಾಡುವ ಆ ಬೆಳಗಿನ ಊಟವನ್ನ ಕೊಟ್ಟಿಗೆಯ ಬಂಧುಗಳೆಲ್ಲ ಸಶಬ್ದ ಮೇಯಲಾರಂಭಿಸಿದರು. ಮಾಡಿನ ಅಟ್ಟದಿಂದ ನಾಲ್ಕು ಕಟ್ಟು ರೈ ಹುಲ್ಲನ್ನೂ ಎಳೆದು ಬಿಡಿಸಿ ಹಾಕಿ ಅವರೆಲ್ಲರ ಊಟದ ರುಚಿ ಇನ್ನಷ್ಟು ಹೆಚ್ಚಿಸಿದ. ಕಡೆಗೆ ಗೊಂತಿಗೆ ಸಮೀಪದ ಗೋಡೆಯ ಮೊಳೆಗೆ ತೂಗು ಹಾಕಿದ್ದ ಮರದ ಬಕೇಟಿನ ಜೊತೆ ಗೂಡಿನಲ್ಲಿಟ್ಟು ಗಟ್ಟಿಯಾಗಿದ್ದ ಅಲೀವ್ ಎಣ್ಣೆಯ ಮಿಳ್ಳಿಯನ್ನ ಒಲೆಯ ಬೆಂಕಿಗೆ ಹಿಡಿದು ಚೂರು ಕರಗಿಸಿ ತನ್ನ ಪುಟ್ಟ ಸ್ಟೂಲನ್ನ ಅವರ ಕೆಚ್ಚಲಿಗೆ ಸಮಾಂತರವಾಗಿರಿಸಿ ಕೂತು ಮೆಲ್ಲಗೆ ಚಳಿಗೆ ಸೆಟೆದ ಆ ಮೊಲೆ ತೊಟ್ಟುಗಳಿಗೆ ಬಕೇಟಿನಲ್ಲಿದ್ದ ಬಿಸಿನೀರನ್ನ ಚುಮುಕಿಸಿದˌ ಮರಗಟ್ಟಿದಂತಿದ್ದ ಕೆಚ್ಚಲಿನಲ್ಲಿ ಅದರಿಂದ ಜೀವ ಸಂಚಾರವಾದಂತಾಗಿ ಪಶುಗಳು ಹಿತಾನುಭಾವ ಅನುಭವಿಸಿದವು. ಅನಂತರ ಅದನ್ನ ಒರೆಸಿ ಮಿಳ್ಳಿಯೊಳಗೆ ಬೆರಳಿಳಿಸಿ ಎಣ್ಣೆ ಸೋಕಿದ ಬೆರಳನ್ನ ಅವುಗಳ ಕೆಚ್ಚಲ ಹಾಗೂ ಮೊಲೆ ತೊಟ್ಟಿನ ಸುತ್ತ ಹಚ್ಚಿ ಮೃದುವಾಗಿ ಒತ್ತುತ್ತಾ ಮಾಲೀಸು ಮಾಡುವವನಂತೆ ನೀವಿದ. ಪಶುಗಳು ಸುಖಾನುಭಾವದಲ್ಲಿ ಮೆಲುವಾಗಿ ಮುಲುಕುವಂತೆ ಧ್ವನಿ ಹೊರಡಿಸಿದವು. ಈಗ ಕರುಗಳ ಕುತ್ತಿಗೆಯ ಹಗ್ಗ ಕಳಚಿ ಎರಡು ಮೊಲೆ ತೊಟ್ಟುಗಳನ್ನ ಅವಕ್ಕೆ ಚೀಪಲು ಬಿಟ್ಟು ಉಳಿದೆರಡರಲ್ಲಿ ಸರಸರನೆ ಹಾಲೆಳೆದುಕೊಂಡು ನೊರೆ ಹಾಲಿಂದ ಬಕೇಟು ತುಂಬಿಸಿಕೊಂಡ. ನಾಲ್ಕು ಬಕೇಟುಗಳು ತುಂಬುತ್ತಲೆ ಎದ್ದು  ಮೇಲೆ ಕಟ್ಟೆಯ ಮೇಲೆ ಅವನ್ನಿಟ್ಟು ತನ್ನ ಕಾಲು ಸುತ್ತಿ ಸುತ್ತಿ ಬರುತ್ತಿದ್ದ ಹಟ್ಟಿಯ ಅಟ್ಟದ ಉಸ್ತುವರಿ ಹೊತ್ತ ಇಲಿ ಬೇಟೆ ನಿಪುಣೆ ಲಿಲ್ಲಿಯ ತಟ್ಟೆಗೊಂದಷ್ಟು ನೊರೆ ನೊರೆ ಹಾಲನ್ನ ಬಗ್ಗಿಸಿದ. ಬೆಚ್ಚನೆ ಹಾಲನ್ನ ತೃಪ್ತ ಭಾವದಿಂದ ಬಾಲ ಕುಣಿಸುತ್ತಾ ಬಾಣಂತಿ ಲಿಲ್ಲಿ ಸಶಬ್ದವಾಗಿ ಹೀರ ತೊಡಗಿದಳು.

ಈಗ ಹೊರಡುವ ತಯಾರಿ ಮಾಡಬೇಕಿತ್ತು. ಅಷ್ಟರಲ್ಲಿ ಹುರುಳಿಯ ಹಂಡೆಯಲ್ಲಿ ಹಬೆಯಾಡ ತೊಡಗಿತ್ತು. ರಾಜಿ ಮತ್ತವಳ ಮಗ ಸುಲ್ತಾನನಿಗೆ ಅದನ್ನ ಕೈ ಪಾತ್ರೆಯಿಂದೆತ್ತಿ ಬಾನಿಗೆ ಬಡಿಸಿದ. ಪಶುಗಳ ಖಾಲಿ ಬಾನಿಗಳಿಗೆ ಕುಡಿಯಲು ನೀರು ಸುರಿದ. ರಾಜಿಯ ಮೈ ಉಜ್ಜಿ ಮಾತನಾಡಿಸಿದ. ಸುಲ್ತಾನನಿಗೂ ಮೈ ತಿಕ್ಕಿ ಕಿವಿಗಾಪುˌ ಜೀನುˌ ಲಗಾಮು ಎಲ್ಲಾ ತೊಡಿಸಿದ. ಪೇಟೆಯಂಚಿನ ಮಠದ ಜಾತ್ರೆಯಲ್ಲಿ ಅವನಿಗಂತಲೆ ಆಯ್ದು ತಂದಿದ್ದ ಹೊಸ ಚರ್ಮದಂಚಿನ ಮೆತ್ತನೆ ಜೀನು ಅವನ ಬೆನ್ನಿಗೆ ಹೇಳಿ ಮಾಡಿಸಿದಂತಿತ್ತು. ಆದರೆ ಅದರ ಅನುಭವ ಇದ್ದಿರದ ಸುಲ್ತಾನ ಜೀನನ್ನ ಕೆಡವಲು ಬೆನ್ನು ಕುಣಿಸಿ ವಿಫಲನಾದ. ಬಿಗಿಯಾಗಿ ಬಿಗಿದಿದ್ದ ಅದು ತುಸುವೂ ಅಲುಗಾಡಲಿಲ್ಲ.


ಹಾಲು ತುಂಬಿದ್ದ ಬಕೇಟುಗಳನ್ನ ಸುಳಿಗಾಳಿಯ ಹೊಡೆತಕ್ಕೆ ಚೂರೂ ಚೆಲ್ಲದಂತೆ ಕೊಟ್ಟಿಗೆಯಿಂದ ಮನೆಗೆ ಕೊಂಡೊಯ್ಯುವುದು ಸವಾಲಿನ ಕೆಲಸವೆ ಸರಿ. ಅಡ್ಡಾದಿಡ್ಡಿ ಬೀಸುವ ಚಳಿಗಾಳಿ ಹಾಲನ್ನೆಲ್ಲ ಹಾರಿಸಿಕೊಂಡು ಹೋಗುತ್ತದೆ. ಇವನೋ ಕಷ್ಟದಿಂದ ಬಕೇಟುಗಳ ಮುಚ್ಚಳ ಹಾಕಿ ಮನೆಯತ್ತ ಬಾಗಿಲು ತೆರೆದು ಭದ್ರ ಪಡಿಸಿ ಒಂದು ಕೈಯಲ್ಲಿ ತಂತಿ ಮತ್ತೊಂದು ಕೈಯಲ್ಲಿ ಬಕೇಟುಗಳ ತೂಗಿದ್ದ ಸನಿಕೆ ಕೋಲನ್ನ ಹಿಡಿದು ಮುಂದುವರೆದ ಉತ್ತರದಿಂದ ಬೀಸಿ ಬರುತ್ತಿದ್ದ ಕುಳಿರ್ಗಾಳಿ ಅಳ್ಳೆದೆಯವರನ್ನೆಲ್ಲ ಕೆಂಗೆಡಿಸುವಂತೆ ಅರ್ಭಟಿಸುತ್ತಾ ಬೀಸುತ್ತಲೆ ಇತ್ತು. ಕಷ್ಟದಲ್ಲಿ ಮನೆ ಸೇರಿ ನೋಡಿದರೆ ಅರ್ಧ ಪಾಲು ಹಾಲು ಗಾಳಿಗೆ ನೈವೇದ್ಯವಾಗಿದ್ದು ಸ್ಪಷ್ಟವಾಯಿತು.


ಇವಳು ಅವನ ಹಿಂದೆಯೆ ಎದ್ದು ಒಳ ಉಡುಪು ಮೇಲು ಉಡುಪು ಉಣ್ಣೆಯ ಟೋಪಿ ಕಾಲ್ಚೀಲ ಬೂಟು ಕಿವಿಗಾಪು ಕೈ ಗವಸು ಎಲ್ಲಾ ಧರಿಸಿ ಬೆಚ್ಚಗಾಗಿˌ ಕೆಳಗಿಳಿದು ಬಂದು ಮೂಲೆಯ ಸಿಂಕಿನಲ್ಲಿ ಮುಖ ಹಾಗೂ ದಂತ ಮಾರ್ಜನ ಮುಗಿಸಿ ಇವನು ಕುದಿಯಲಿಟ್ಟಿದ್ದ ಕೆಟಲಿಗಷ್ಚು ಟೀ ಸೊಪ್ಪು ಸುರಿದು ಒಲೆ ಹೊತ್ತಿಸಿ ಆ ಹೊತ್ತಿಗೆಲ್ಲಾ ರೈ ರೊಟ್ಟಿ ಓಟ್ಸ್ ದೋಸೆ ಮಾಡಿ ಅವನ ಬುತ್ತಿ ಕಟ್ಟಿಟ್ಟುˌ ಅವ ಕರೆದು ತಂದ ತಾಜಾ ಹಾಲು ಬೆರೆಸಿದ ಚಹಾ ಸುರಿದು ಕುಡಿಯಲು ಕೊಟ್ಟಳು. ಚಳಿಗೆ ಬಿಸಿ ಚಹಾ ತುಂಬಾ ಹಿತವೆನಿಸಿ ಊಟದ ಟೇಬಲ್ಲಿನ ಪಕ್ಕದ ಕುರ್ಚಿಯಲ್ಲಿ ಕೂತು ಅವನದನ್ನ ಆಸ್ವಾದಿಸಿದ. ಕಾದ ಹಂಚಿಗೆ ಹಂದಿ ಕೊಬ್ಬು ಸವರಿ ಓಟ್ಸಿನ ದೋಸೆ ಎರೆದು ತಟ್ಟೆಗೆ ದಾಟಿಸಿ ಬೆಣ್ಣೆಮುದ್ದೆ ಹಾಗೂ ಮೇಪಲ್ ಸಕ್ಕರೆಯ ಅಲಂಕಾರ ಮಾಡಿ ಅದನ್ನವನಿಗೆ ತಿನ್ನಲು ತಂದಿಟ್ಟಳು. ಹೆಚ್ಚು ಮಾತುಕತೆಯಿಲ್ಲದೆ ಉಪಹಾರ ಮುಗಿಸಿದˌ ಈ ಓಟ್ಸ್ ದೋಸೆಯದೆ ಒಂದು ರಾಮಾಯಣ. ಹುದುಗು ಬಂದು ಒಂದು ಮಟ್ಟಿನ ಹುಳಿ ರುಚಿ ಅದಕ್ಕೆ ಬರಲಿ ಅಂತ ಹತ್ತು ದಿನಗಳ ಹಿಂದೆನೆ ಅದನ್ನ ರುಬ್ಬಿ ಹಿಟ್ಟು ಮಾಡಿ ನೆನೆ ಹಾಕಿಟ್ಟಿದ್ದಳು. ಯಿಸ್ಟ್ ಬೆರೆಸಿದ್ದರೂ ಸಹ ಈ ಅಸಾಧ್ಯ ಚಳಿಯಲ್ಲಿ ಅದು ಅಷ್ಟು ಹುದುಗಿದ್ದೆ ಹೆಚ್ಚು. ಜೊತೆಜೊತೆಗೆ ಅವನ ಮಧ್ಯಾಹ್ನದೂಟದ ಬುತ್ತಿಗೆ ರೈ ರೊಟ್ಟಿ ಬೇಯಿಸಿದ ಬೀನ್ಸ್ ಮತ್ತೆ ಹಂದಿ ಮಾಂಸದ ಬೇಕನ್ ಅಡುಗೆ ಮನೆಯಲ್ಲಿ ಮಸಾಲೆˌ ಉಪ್ಪುˌ ಒಗ್ಗರಣೆ ಹೀಗೆ ಒಂದೊಂದನ್ನೆ ಹಾಕಿಸಿಕೊಳ್ಳುತ್ತಾ ತಯಾರಾಗುತ್ತಿತ್ತು. 

ಸಂಜೆ ಅದೆಷ್ಟೆ ತಡವಾದರೂ ಸಹ ಮರಳಿ ಬಂದೆ ಬರುತ್ತೇನೆ ಅಂತ ಅವನಂದಿರೋದರಿಂದ ಅವಳು ರಾತ್ರಿಗೂ ಸೇರಿಸಿ ಬುತ್ತಿಗಂಟನ್ನ ಕಟ್ಟಲಿಲ್ಲ. ಕಳೆದ ಚಳಿಗಾಲದಲ್ಲಿ ಮಾಂಸಕ್ಕಾಗಿ ಕೊಂದಿದ್ದ ಹಂದಿಗಳ ಕೊಬ್ಬಿಗೆ ನೊರೆಕಾಯಿ ಹಾಗೂ ಒಲೆಯ ಬೂದಿ ಸೇರಿಸಿ ತಾನು ತಯಾರಿಸಿದ್ದ ಸೋಪಿನ ಕಟ್ಟುಗಳಿದ್ದˌ ಬೇಟೆಗೆ ಬಲಿಯಾಗಿದ್ದ ಮೂರು ಹಿಮಕರಡಿಗಳ ಕೊಬ್ಬಿನಿಂದ ತಯಾರಾಗಿದ್ದ ಮೇಣದಬತ್ತಿಯ ಕಟ್ಟುಗಳಿದ್ದ ಅವನ ಬೆನ್ನುಚೀಲದಲ್ಲಿ ಈ ರೊಟ್ಟಿಯ ಬುತ್ತಿ ಹಾಗೂ ನೀರಿನ ಶೀಶೆಯನ್ನೂ ಇಟ್ಟು ಅವಳು ಅದರ ಬಾಯಿ ಕಟ್ಟಿದಳು. ಅವಳ ತಯಾರಿಕೆಯ ಈ ವಸ್ತುಗಳಿಗೂ ಪಟ್ಟಣದ ಬಂಡಸಾಲೆಗಳಲ್ಲಿ ಬೇಡಿಕೆಯಿತ್ತು.

( ಮುಂದುವರೆಯವುದು.)


https://youtu.be/4OaDgHVkAQs


https://youtu.be/acTPdB5e-J0


https://youtu.be/-_zza7gqArs


https://youtu.be/3hI1xiPCoeQ

No comments: