ಕೃತಿ: ಪುನರ್ವಸು.
ಬಗೆ: ಕಾದಂಬರಿ.
ಲೇಖಕರು: ಗಜಾನನ ಶರ್ಮˌ ಹುಕ್ಕಲು.
ಪ್ರಕಾಶಕರು: ಅಂಕಿತ ಪುಸ್ತಕˌ ಗಾಂಧಿ ಬಜಾರು. ಬೆಂಗಳೂರು - ೫೬೦೦೦೪
ಕ್ರಯ: ₹೪೫೦/.
ಅರ್ಪಣೆ
ಮುಳುಗಡೆಯ ಮಹಾವಿಪತ್ತಿಗೆ ಸಿಲುಕಿ ಬಿಕ್ಕಳಿಸುತ್ತ ಬೇರಿನಿಂದ ಬೇರ್ಪಟ್ಟು ಊರುತೊರೆದ ಮುಳುಗಡೆ ಸಂತ್ರಸ್ಥರಿಗೆ
.
ಇಂದಿಗೂ ನೋವಿನ ನಡುಗುಡ್ಡೆಗಳಲ್ಲಿ ನವೆಯುತ್ತಿರುವ ಹಿನ್ನೀರಿನ ಹತಭಾಗ್ಯರಿಗೆ."
ಗಜಾನನ ಶರ್ಮ ಮೂಲತಃ ಸಾಗರದ ಮುಳುಗಡೆ ಸೀಮೆಯವರು. ಅವರ ಬರವಣಿಗೆಯ ಪರಿಚಯ ಕನ್ನಡಿಗರಿಗೆ ಮೊತ್ತ ಮೊದಲಿಗಾದದ್ದು ಅವರ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಕೃತಿ MEMORIES OF MY WORKING LIFEನ ಕನ್ನಡನುವಾದವಾದ "ನನ್ನ ವೃತ್ತಿ ಜೀವನದ ನೆನಪುಗಳು" ಪುಸ್ತಕದ ಮೂಲಕ. ಮುಳುಗಡೆಯ ಸಂತ್ರಸ್ತನಾಗಿದ್ದುಕೊಂಡು ಕಳೆದ ಬಾಲ್ಯ - ವೃತ್ತಿ ನಿರತ ಇಂಜಿನಿಯರನಾಗಿ ಅದೆ ಮುಳುಗಡೆಯಿಂದೆದ್ದ ಶರಾವತಿಯ ಜಲವಿದ್ಯುದಾಗರದ ಜೀವನಾನುಭವ ಈ ಎರಡೂ ದಿಕ್ಕಿನಿಂದ ವಿಸ್ತಾರಗೊಂಡ ಅವರ ಬದುಕಿನ ಸಾಂದ್ರವಾದ ಪರಿಚಯ ಈ ಕೃತಿಯಲ್ಲಾಗುತ್ತದೆ. "ಪುನರ್ವಸು" ಕಾಲ್ಪನಿಕ ಕಾದಂಬರಿಯಾದರೂ ಅದರ ಪಾತ್ರಗಳಲ್ಲಿನ ನೈಜತೆ ಓದುಗರಾದ ನಿಮ್ಮ ಮನಸನ್ನ ಆವರಿಸಿದರೆ ಅದಕ್ಕೆ ಆ ಪಾತ್ರಗಳಲ್ಲಿ ಜೀವಂತಿಕೆ ತುಂಬಿದ ಗಜಾನನ ಶರ್ಮರು ಅಂತಹ ವ್ಯಕ್ತಿಗಳೊಡನೆ ತನಗಿದ್ದ ಬಾಂಧವ್ಯವನ್ನು ಕಲ್ಪನೆಯ ಶಾಯಿಯಲ್ಲಿ ಅಕ್ಷರ ರೂಪಕ್ಕಿಳಿಸಿದ್ದೆ ಕಾರಣ. ಅವರ ಜೀವನದ ಒಡನಾಡಿಗಳೆ ಈ ಕಾದಂಬರಿಯ ಪಾತ್ರಗಳಲ್ಲಿ ಪ್ರತಿಫಲಿಸುತ್ತಾ ಓದುಗರ ಆಲೋಚನೆಯನ್ನೂ ಆವರಿಸಿ ಕಾಡುತ್ತಾರೆ.
ಪುನರ್ವಸು ಇಂದಿಗಿಂತ ಮುಕ್ಕಾಲು ಶತಮಾನ ಹಿಂದಿನ ಮಲೆನಾಡಿನ ಚಿತ್ರಣವನ್ನು ಸಶಕ್ತವಾಗಿ ಕಟ್ಟಿಕೊಡುತ್ತಾˌ ಪ್ರಸಕ್ತ ಕಾಲಮಾನದತ್ತ ಎಲ್ಲಾ ಆಗುಹೋಗುಗಳನ್ನ ಮೌನವಾಗಿ ಅನುಭವಿಸಿಕೊಂಡು ನಿರ್ಲಿಪ್ತಳಾಗಿ ಹರಿಯುವ ಶರಾವತಿಯ ಪ್ರವಾಹದಂತೆಯೆ ಓದುಗರ ಮನಸುಗಳ ಕಣಿವೆಯಲ್ಲಿ ಪ್ರವಹಿಸುತ್ತದೆ. ಈಗಾಗಲೆ ಆಗಿ ಹೋಗಿರುವ ಇಂತಹ ಮಾರಕ ಅನಾಹುತಗಳಿಂದ ನಿಸರ್ಗದ ಮೈ ಮನಸಿನ ಮೇಲೆ ನಾವು ಮಾಡಿರುವ ಮಾಯದ ಗಾಯವೆ ಇನ್ನೂ ಹಸಿಯಾಗಿರುವಾಗಲೆ ನಮ್ಮಲ್ಲೆ ಕೆಲವು ದುರಾಸೆಯ ಜೀವಿಗಳು "ಎತ್ತಿನ ಹೊಳೆ ತಿರುವು ಯೋಜನೆ" ಅನ್ನುವ ಮತ್ತೊಂದು ಘಾತಕ ಕಾರ್ಯಕ್ಕೆ ಕೈ ಹಾಕಿ ಅಲ್ಲಿಯೂ ಮತ್ತೊಂದಷ್ಟು ಮಾಡಬಾರದ ಅತ್ಯಾಚಾರಗಳನ್ನ ನಿಸರ್ಗದ ಮೇಲೆಸಗಿದರು.
ಹೋಗಲಿ ಆಮೇಲಾದರೂ ಆದ ತಪ್ಪಿನಿಂದˌ ಆ ತಪ್ಪು ತಂದ ಅಪರಿಮಿತ ನಷ್ಟದಿಂದ ಪಾಠ ಕಲಿತರ? ಅಂದರೆˌ ಅದೂ ಇಲ್ಲ. ಈಗ "ಮೇಕೆದಾಟು ಅಣೆಕಟ್ಟು ಯೋಜನೆ" ಅನ್ನುವ ಮತ್ತೊಂದು ಖಜಾನೆ ಕೊಳ್ಳೆ ಹೊಡೆಯುವ ಯೋಜನೆಯನ್ನ ಹಾಕಿಕೊಂಡು ಜನರ ತೆರಿಗೆಯ ದುಡ್ಡು ದೋಚಲು ಹಪಹಪಿಸುತ್ತಾ ಕೂತಿದ್ದಾರೆ. ಇವರ ದುರಾಸೆಯಿಂದ ಸರ್ವನಾಶವಾಗಿ ಸೊರಗುವ ಪ್ರಕೃತಿ ಮತ್ತೆಂದೆಂದೂ ಮೊದಲಿನಂತೆ ನಳನಳಿಸಲಾರಳು. ಇಂತಹ ಮುಗಿಯದ ಸಂದಿಗ್ಧದ ಕಾಲದಲ್ಲಿ "ಪುನರ್ವಸು"ವಿನ ಓದು ಸಕಾಲಿಕ.
ತಮ್ಮ ಈ ಕೃತಿಯ ಹಿನ್ನೆಲೆಯನ್ನ ಗಜಾನನ ಶರ್ಮರು ವಿವರಿಸುವುದು ಹೀಗೆ:-
"ಪ್ರಾಯಶಃ ಜೋಗದಷ್ಟು ನನ್ನ ಬದುಕನ್ನು ಪ್ರಭಾವಿಸಿದ ಇನ್ನೊಂದು ಸಂಗತಿಯಿಲ್ಲ. ಅದು ನನ್ನ ಬದುಕನ್ನು ಅರಳಿಸಿದ್ದೂ ಹೌದು, ನರಳಿಸಿದ್ದೂ ಹೌದು. ನಾನು ಹುಟ್ಟಿದ್ದು ಜೋಗದ ಸಮೀಪದ ತಲಕಳಲೆ ಹಿನ್ನೀರಿನ ಹುಕ್ಕಲು ಎಂಬ ಪುಟ್ಟಹಳ್ಳಿಯಲ್ಲಿ. ಅಕ್ಷರ ಕಲಿತದ್ದು ಲಿಂಗನಮಕ್ಕಿ ಹಿನ್ನೀರಿನಲ್ಲಿ ಮುಳುಗಡೆಯಾದ ಮೊದಲ ಹಳ್ಳಿ ಕರೂಮನೆಯಲ್ಲಿ. ನಾನು ಹದಿನೇಳು ತಿಂಗಳ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಳ್ಳಲು ಕಾರಣವಾದದ್ದು ಜೋಗ್ ಕಾಲೋನಿಯ ಆಸ್ಪತ್ರೆ. ಒಂದು ಕಾಲದಲ್ಲಿ ಸಾಕಷ್ಟು ಸಮೃದ್ಧವಾಗಿದ್ದ ನಮ್ಮ ಕುಟುಂಬ ಬಡತನದ ಬೇಗೆಯಲ್ಲಿ ಬೇಯುವಂತಾಗಿದ್ದು ಶರಾವತಿ ಯೋಜನೆಯಲ್ಲಿ ಜಮೀನು ಅರ್ಧ ಮುಳುಗಿದ್ದರಿಂದ.
ವಿಪರ್ಯಾಸವೆಂದರೆ ನನಗೆ ಬಾಲ್ಯದಲ್ಲಿ ವಿದ್ಯೆ ನೀಡಿದ್ದೂ ಜೋಗವೇ. ನನ್ನೊಳಗೊಂದು ವ್ಯಕ್ತಿತ್ವವನ್ನು ರೂಪಿಸಿದ್ದೂ ಜೋಗದ ಶಿಕ್ಷಣ. ಪಿಯೂಸಿಗೆ ಸೇರುವುದೇ ಕಷ್ಟವಾಗಿ ವಿದ್ಯಾಭ್ಯಾಸವನ್ನು ಕೊನೆಗೊಳಿಸಲಿದ್ದ ನನ್ನನ್ನು ಸ್ವತಃ ತಾವೇ ಶುಲ್ಕಕಟ್ಟಿ ಶಾಲೆಗೆ ಸೇರಿಸಿಕೊಂಡದ್ದು ಜೋಗದ ಪ್ರೌಢಶಾಲೆಯ ನನ್ನ ನೆಚ್ಚಿನ ಗುರುವೃಂದ. ಇಂಜಿನಿಯರಿಂಗ್ ಮಾಡಿ, ವಿದ್ಯುತ್ ಇಲಾಖೆಗೆ ಸೇರಿ ಜೋಗಕ್ಕೇ ಬಂದು, ಬಿದ್ದಲ್ಲೇ ಎದ್ದು ಬದುಕು ಕಟ್ಟಿಕೊಳ್ಳಲು ನನಗೆ ಪ್ರೇರಣೆ ನೀಡಿದ್ದು, ನನ್ನ ವೃತ್ತಿಜೀವನಕ್ಕೆ ಮೊದಲು ಆಸರೆ ನೀಡಿದ್ದು ಜೋಗವೇ!
ಆಂತರ್ಯದ ಆಂತರ್ಯದಲ್ಲಿ ನಾನು ಜೋಗವನ್ನು ಪ್ರೀತಿಸುತ್ತೇನೋ, ದ್ವೇಷಿಸುತ್ತೇನೋ ನನಗೆ ಗೊತ್ತಿಲ್ಲ. ಕೆಲವೊಮ್ಮೆ ಜೋಗದ ಕುರಿತು ಬೇಸರವಾದರೂ ಯಾರಾದರೂ ಜೋಗವನ್ನು ತೆಗಳಿದರೆ ನನಗೆ ನೋವಾಗುತ್ತದೆ. ಹೊಗಳಿದರೆ ಹರ್ಷವಾಗುತ್ತದೆ. ಜೋಗದ ಸುದ್ದಿ ಕೇಳುತ್ತಿದ್ದಂತೆ ಮೈಮನಸ್ಸುಗಳಲ್ಲಿ ಭಾವದ ಜಲಪಾತವೊಂದು ಧುಮುಧುಮಿಸುತ್ತದೆ.
ಹಾಗೆಯೇ ನಮ್ಮ ಹಳ್ಳಿಗರ ಬದುಕಿಗೆ ಶರಾವತಿ ಜಲವಿದ್ಯುತ್ ಯೋಜನೆ ಮಾಡಿದ ಹಾನಿಯನ್ನು ನೆನಪಿಸಿಕೊಳ್ಳುತ್ತಿದ್ದಂತೆ ಕಣ್ಣು ಒದ್ದೆಯಾಗುತ್ತದೆ. ನಮ್ಮ ಅರೆಹೊಟ್ಟೆಯ ಬಡತನದ ದಿನಗಳು ನೆನಪಾಗುತ್ತವೆ. ದೀನರಾಗಿ ನಿಂತ ನಮ್ಮ ಹಿರಿಯರೆದುರು ಮುಳುಗಡೆ ಅಧಿಕಾರಿಗಳು ತೋರುತ್ತಿದ್ದ ದರ್ಪ ಕಣ್ಣೆದುರು ಬರುತ್ತದೆ. ಮುಳುಗಡೆಯಿಂದಾಗಿ ಅಳುತ್ತ ಊರು ಬಿಟ್ಟ ಬಂಧುಮಿತ್ರರು, ಅನಾಥವಾದ ಕುಟುಂಬಗಳು, ಊರು ತೊರೆಯಲಾರದೇ ಮತಿಗೆಟ್ಟವರು, ಸತ್ತವರು, ಸಂತ್ರಸ್ತರಾದವರು ನೆನಪಾಗುತ್ತಾರೆ. ತೋಟಗದ್ದೆಗಳ ನಡುವಿನ ಕ್ವಾರಿಗಳಲ್ಲಿ ನಡೆಯುತ್ತಿದ್ದ ಸ್ಪೋಟಗಳ ಸದ್ದು ನೆನಪಾಗಿ ಮೈ ಕಂಪಿಸುತ್ತದೆ. ಹಳ್ಳಿಗರ ಕುರಿತು ಕಾಲೋನಿಯವರ ತಾರತಮ್ಯ ನೆನಪಾಗಿ ಆಕ್ರೋಶ ಪುಟಿದೇಳುತ್ತದೆ.
ವಿದ್ಯುತ್ ಇಲಾಖೆಯಲ್ಲಿ ಮೂರೂವರೆ ದಶಕಗಳ ಕಾಲ ಸೇವೆಗೈದ ನನಗೆ ಶರಾವತಿ ಪ್ರಾಜೆಕ್ಟಿನ ಮಹತ್ವ ತಿಳಿದಿಲ್ಲವೆಂದಲ್ಲ. ಇಂದಿಗೂ ದೇಶದಲ್ಲಿ ಅತ್ಯಂತ ಅಗ್ಗದಲ್ಲಿ ವಿದ್ಯುತ್ ಉತ್ಪಾದಿಸುವ ಯೋಜನೆಗಳಲ್ಲಿ ಶರಾವತಿಯೂ ಒಂದು. ಕರ್ನಾಟಕದ ವಿದ್ಯುತ್ ಕ್ಷೇತ್ರದಲ್ಲಿ ಇಂದಿಗೂ ಅದರ ಪ್ರಾಮುಖ್ಯತೆ ಅದ್ವಿತೀಯ. 1950ರಲ್ಲಿ ಜೋಗದ ಸಿರಿಬೆಳಕು ಬೆಂಗಳೂರಿಗೆ ಹರಿಯತೊಡಗಿದ ಮೇಲಷ್ಟೇ ಬೆಂಗಳೂರಿನಲ್ಲಿ ಹಲವು ಕೇಂದ್ರೋದ್ಯಮಗಳು ಪ್ರಾರಂಭವಾಗಿ ಬೆಂಗಳೂರಿನ ಬೆಳವಣಿಗೆ ವೇಗೋತ್ಕರ್ಷ ಪಡೆದದ್ದು.
ಹೌದು, ಆಧುನಿಕ ಬದುಕಿಗೆ ವಿದ್ಯುತ್ ಅನಿವಾರ್ಯ. ಇಂದು ವಿದ್ಯುತ್ ಇಲ್ಲದ ಬದುಕನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಅರೆಕ್ಷಣದ ವಿದ್ಯುತ್ ಅಡಚಣೆ ನಮ್ಮ ಬದುಕನ್ನೇ ಸ್ಥಗಿತಗೊಳಿಸಿಬಿಡುತ್ತದೆ. ಐವತ್ತು ವರ್ಷಗಳ ಹಿಂದೆ ಕೇವಲ ಒಂದೇ ಒಂದು ವರ್ಷದ ಕ್ಷಾಮ ಇಡೀ ದೇಶವನ್ನು ಹಸಿವಿನ ಹಾಹಾಕಾರಕ್ಕೆ ನೂಕುತ್ತಿದ್ದರೆ ಇಂದು ರೈತರ ಹೊಲಗಳಲ್ಲಿ ಚಾಲನೆಗೊಳ್ಳುವ ಕೋಟ್ಯಂತರ ನೀರಾವರಿ ಪಂಪುಗಳು ಅಂತಹ ಆತಂಕವನ್ನು ಬಹುತೇಕ ಇಲ್ಲವಾಗಿಸಿವೆ. ನೂರಿಪ್ಪತ್ತೈದು ಕೋಟಿ ಬಾಯಿಗಳಿಗೆ ಅನ್ನವಿಕ್ಕಬೇಕಾದ, ಇನ್ನೂರೈವತ್ತು ಕೋಟಿ ಕೈಗಳಿಗೆ ಉದ್ಯೋಗ ಒದಗಿಸಬೇಕಾದ ಭಾರತದಂತಹ ಬೃಹತ್ ದೇಶಕ್ಕೆ ಹೊಸ ಹೊಸ ವಿದ್ಯುತ್ ಯೋಜನೆಗಳು ಅನಿವಾರ್ಯ. ಇಂದಿಗೂ ಭಾರತದ ತಲಾವಾರು ವಿದ್ಯುತ್ ಬಳಕೆ ವಿಶ್ವದ ಸರಾಸರಿ ತಲಾವಾರು ಬಳಕೆಯ ಮೂರನೇ ಒಂದರಷ್ಟು ಮಾತ್ರ.
ಹಾಗೆಂದು ಹೊಸ ಹೊಸ ವಿದ್ಯುತ್ ಯೋಜನೆಗಳನ್ನು ಹುಟ್ಟುಹಾಕುತ್ತ ನಮ್ಮ ನದಿ, ವನ, ಗಿರಿ, ಕಣಿವೆಗಳನ್ನು ಹಾಳುಗೆಡವುತ್ತ ಸಾಗುವುದು ಎಷ್ಟು ಸರಿ? ನೆಲದ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸದೇ ಯೋಜನೆಗಳ ಮೇಲೆ ಯೋಜನೆಗಳನ್ನು ಹುಟ್ಟುಹಾಕಿ ಮಲೆನಾಡಿನಂತಹ ಸಮೃದ್ಧ ಭೂಮಿಯನ್ನು ಬಂಜರಾಗಿಸಬೇಕೇ? ಈಗಾಗಲೇ ಕಲುಷಿತಗೊಂಡ ಪರಿಸರ ಇನ್ನೆಷ್ಟು ಮಲಿನಗೊಳ್ಳಬೇಕು? ಇನ್ನೆಷ್ಟು ಮುಗ್ಧರ ಬದುಕು ಹದಗೆಡಬೇಕು?
ವಿದ್ಯುತ್ ಯೋಜನೆಗಳ ಕುರಿತು ಜನಮಾನಸದಲ್ಲಿ ಉದ್ಭವಿಸುವ ಇಂತಹ ಇಬ್ಬಂದಿತನವೇ ಈ ಕೃತಿಯ ಅಂತರಾಳ. 1916ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಜೋಗಕ್ಕೆ ಭೇಟಿ ನೀಡಿ ವಿದ್ಯುತ್ ಯೋಜನೆಗೆ ಸಮೀಕ್ಷೆ ನಡೆಸಲು ಆದೇಶಿಸಿದ ಘಟನೆಯೊಂದಿಗೆ ಶುರುವಾಗುವ ಕಥಾನಕ, ಲಿಂಗನಮಕ್ಕಿಯಲ್ಲಿ ನೀರು ಸಂಗ್ರಹ ಆರಂಭವಾಗುವಲ್ಲಿಗೆ ಮುಕ್ತಾಯಗೊಳ್ಳುತ್ತದೆ. ಜೋಗದ ಇತಿಹಾಸದೊಂದಿಗೆ ಮುಳುಗಡೆಯ ದಿನಗಳಲ್ಲಿ ಕಂಡು ಕೇಳಿ ಅನುಭವಿಸಿದ ಹಲವು ಘಟನೆಗಳನ್ನು ಪರಿಭಾವಿಸಿ ಹೆಣೆದ ಕಥಾನಕ ಈ ಪುನರ್ವಸು.
ಶರಾವತಿ ತೀರದ ಕಗ್ಗಾಡು ಕಣಿವೆಯ ನಡುವಲ್ಲಿ ಶತಶತಮಾನಗಳಿಂದ ಬದುಕನ್ನು ಕಟ್ಟಿಕೊಂಡು ನೆಮ್ಮದಿಯಾಗಿದ್ದವರ ಬದುಕು ಜೋಗ್ ಯೋಜನೆಯಿಂದ ಶಿಥಿಲಗೊಂಡ ಬಗೆಯನ್ನು ಚಿತ್ರಿಸುವುದು ಕೃತಿಯ ಪ್ರಧಾನ ಆಶಯವಾದರೆ ಪ್ರಾಜೆಕ್ಟೊಂದರ ಅನುಷ್ಠಾನದಲ್ಲಿ ವೃತ್ತಿನಿಷ್ಠೆ, ಮತ್ತು ಬದ್ಧತೆಯನ್ನು ಮೆರೆದು ನಾಡಿನ ಶ್ರೇಯೋಭಿವೃದ್ಧಿಗಾಗಿ ಸ್ವತಃ ಸಂಕಷ್ಟಗಳಿಗೆ ಒಳಗಾಗುವವರ ಕುರಿತು ಹೇಳುವುದು ಅದರ ಇನ್ನೊಂದು ಉದ್ದೇಶ.
- ಗಜಾನನ ಶರ್ಮ, ಹುಕ್ಕಲು."
ಕೃತಿಯ ಆಯ್ದ ಭಾಗ -
ಅಧ್ಯಾಯ - ೨
ಎರಡನೇ ಮಹಾಯುದ್ದ ಮುಗಿಯುವ ಹೊತ್ತಿಗೆ, ಹಿರೇಭಾಸ್ಕರ ಮತ್ತು ಜೋಗದಲ್ಲಿ ಕೆಲಸದ ರಭಸ ಉತ್ತುಂಗದಲ್ಲಿತ್ತು. ಯುದ್ದದಲ್ಲಿ ಮಿತ್ರಪಡೆ ಜಯ ಸಾಧಿಸಿದ್ದರಿಂದ ಭಾರತವೂ ಸೇರಿದಂತೆ ಬ್ರಿಟಿಷ್ ವಸಾಹತು ದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಸಾಕಷ್ಟು ಉತ್ತೇಜನ ದೊರೆತು, ಮೊದಲೇ ಹೆಚ್ಚುತ್ತಿದ್ದ ವಿದ್ಯುತ್ ಬೇಡಿಕೆಗೆ ಇನ್ನಷ್ಟು ಕಾವು ಮೂಡಿತ್ತು. ಮಡೇನೂರಿನ ಆಣೆಕಟ್ಟೆ ನೆಲಮಟ್ಟವನ್ನು ದಾಟಿ ಮೇಲೇಳತೊಡಗಿತ್ತು. ಕೃಷ್ಣರಾಯರು ಈಗ ಮಡೇನೂರಿನ ಡ್ಯಾಮಿನ ಕೆಲಸಕ್ಕಿಂತ ಹೆಚ್ಚು ಮುಳುಗಡೆ ಪರಿಹಾರ ನಿಷ್ಕರ್ಷಿಸುವ ಕಾರ್ಯದಲ್ಲಿ ಆಸಕ್ತಿ ವಹಿಸಿ ಮುಳುಗಡೆ ಜಮೀನುಗಳ ಸರ್ವೇಕಾರ್ಯದ ಉಸ್ತುವಾರಿಯಲ್ಲಿ ಮುಳುಗಿದ್ದರು. ಈ ನಡುವೆ ಒಂದು ದಿನ ಕಾಫರ್ ಡ್ಯಾಮ್ ಒಡೆದು ಸಂಭವಿಸಿದ ಪ್ರವಾಹದಲ್ಲಿ ಡ್ಯಾಮಿನ ಬಳಿ ಕಾರ್ಯನಿರತರಾಗಿದ್ದ ಐವರು ಕಾರ್ಮಿಕರು ಶರಾವತಿ ನದಿಗೆ ಆಹುತಿಯಾದ ದುರ್ಘಟನೆ ಸಂಭವಿಸಿತ್ತು. ಇಂತಹ ಅನಾಹುತಗಳು ಬೃಹತ್ ನಿರ್ಮಾಣಗಳ ಸಂದರ್ಭದಲ್ಲಿ ಸರ್ವೇಸಾಮಾನ್ಯವೆಂಬ ರೂಢಿಗತ ಧೋರಣೆಯಲ್ಲಿ ಅಧಿಕಾರಿಗಳು ತಮ್ಮ ಪಾಡಿಗೆ ತಾವು ಕಾಮಗಾರಿಗಳನ್ನು ಮುಂದುವರೆಸಿದ್ದರು.
ಕಾಫರ್ ಡ್ಯಾಂ ಒಡೆದು ಕಾರ್ಮಿಕರು ಬಲಿಯಾದ ಘಟನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಭವಿಸಿದ್ದು ಎಂಬ ಅನಾಮಧೇಯ ಪತ್ರವೊಂದು ದಿವಾನರ ಕಛೇರಿಗೆ ತಲುಪಿದ ಪರಿಣಾಮ ದಿವಾನರ ಸೂಚನೆಯ ಮೇರೆಗೆ ಹೈಡ್ರೋ ಎಲೆಕ್ಟ್ರಿಕ್ ಸಮಿತಿ ಹಿರೇಭಾಸ್ಕರಕ್ಕೆ ಧಿಡೀರ್ ಭೇಟಿ ನೀಡಿತ್ತು. ಹಿರೇಭಾಸ್ಕರದಲ್ಲಿ ನಡೆದಿದ್ದ ಕಾಮಗಾರಿಗಳ ಸುರಕ್ಷತೆಯನ್ನು ಪರಿಶೀಲಿಸಿದ ಸಮಿತಿ, ಮುಖ್ಯ ಡ್ಯಾಮಿನ ನಿರ್ಮಾಣದ ಸಂದರ್ಭದಲ್ಲಿ ನದೀಪಾತ್ರದ ನೀರಿನ ಮಟ್ಟ ಏರಿಳಿಯುವ ಸಂಭವ ಮತ್ತಷ್ಟು ಹೆಚ್ಚಾಗುವುದರಿಂದ ಕೂಡಲೇ ನದೀಪಾತ್ರದಲ್ಲಿ ಸೆಕ್ಯೂರಿಟಿಯನ್ನು ಹೆಚ್ಚಿಸಿ, ಸಾರ್ವಜನಿಕರ ಜೀವರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಆದೇಶಿಸಿತು. ಸಮಿತಿಯ ಸೂಚನೆಯಂತೆ ಸುಬ್ಬರಾಯರು ಆಣೆಕಟ್ಟೆ ಕೆಳಭಾಗದ ನದೀಪಾತ್ರದಲ್ಲಿ ಸಾರ್ವಜನಿಕರ ಸುರಕ್ಷತೆಗೆಂದು ಕೆಲವು ಸೆಕ್ಯೂರಿಟಿ ಗಾರ್ಡುಗಳನ್ನು ನೇಮಿಸಿದರು.
ಹೀಗೆ ನೇಮಕವಾದ ಒಬ್ಬ ಸೆಕ್ಯೂರಿಟಿ ಗಾರ್ಡ್ ಒಂದು ದಿನ ಭಾರಂಗಿಯ ಬಳಿ ಕಾರ್ಯನಿರತನಾಗಿದ್ದ ಸಮಯದಲ್ಲಿ, ಸಂಜೆಯಾಗುತ್ತ ಬಂದಿದ್ದರೂ ನದಿಯಲ್ಲಿ ದೋಣಿಯೊಂದು ಸಂಚರಿಸುತ್ತಿರುವುದನ್ನು ಕಂಡು, ಅದನ್ನು ತಡೆದು ವಿಚಾರಣೆ ನಡೆಸಿದ್ದ. ಅದರ ನಾವಿಕ ಗಣಪ, 'ಯಾಕೆ, ಏನು' ಎಂದು ಕೇಳಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್, ‘ಇನ್ನು ಮುಂದೆ ಹೊಳೆಯಲ್ಲಿ ದೋಣಿ ನಡೆಸಲು ಇಲಾಖೆಯ ಅನುಮತಿ ಪಡೆಯಬೇಕು. ಹೊಳೆಯಲ್ಲಿ ಅನಾಹುತ ಸಂಭವಿಸಿದರೆ ಅದಕ್ಕೆ ಇಲಾಖೆ ಉತ್ತರ ಕೊಡಬೇಕಾಗುತ್ತೆ. ಇನ್ನು ಮುಂದೆ ನಮ್ಮ ಅನುಮತಿಯಿಲ್ಲದೇ ದೋಣಿ ಚಲಾಯಿಸಕೂಡದು. ಹಾಗೆ ಮಾಡಿದರೆ ಸೂಕ್ತ ಕ್ರಮ ಜರುಗಿಸುತ್ತೇವೆ’ ಎಂದು ಗದರಿಸಿದ್ದ.
ಅವನ ಬೆದರಿಕೆಗೆ ಜಗ್ಗದ ಗಣಪ, ‘ತಲೆತಲಾಂತರದಿಂದ ಇಲ್ಲಿ ದೋಣಿ ನಡೆಸುತ್ತ ಬಂದಿರುವ ವಂಶ ನಮ್ಮದು. ಇದುವರೆಗೂ ಯಾವತ್ತೂ ನಾವು ಯಾರ ಅನಮತಿಯನ್ನೂ ಪಡೆದಿಲ್ಲ. ಅನುಮತಿ ಪಡೆಯಲು ಹೊಳೆ ಯಾರಪ್ಪನ ಸ್ವತ್ತೂ ಅಲ್ಲ. ಇಷ್ಟು ವರ್ಷವಿಲ್ಲದ ಈ ವ್ಯವಸ್ಥೆಗೆ ನಾವು ಸೊಪ್ಪು ಹಾಕಲ್ಲ’ ಎಂದು ಕಟುವಾಗಿ ಉತ್ತರಿಸಿದ್ದ. ಆ ತರುಣ ಸೆಕ್ಯೂರಿಟಿ ಗಾರ್ಡ್, ಇದು ಹಳ್ಳಿ ಗಮಾರನೊಬ್ಬ ತನ್ನ ಇಲಾಖೆಗೆ ಮತ್ತು ವೃತ್ತಿಗೆ ಮಾಡಿದ ಅವಮಾನವೆಂದು ಬಗೆದು ಗಣಪನನ್ನು ಮತ್ತಷ್ಟು ಒರಟಾಗಿ ತರಾಟೆಗೆ ತೆಗೆದುಕೊಂಡಿದ್ದ. ಇಬ್ಬರ ನಡುವೆ ಮಾತಿನ ಚಕಮಕಿಯೇ ಹೊತ್ತಿಕೊಂಡಿತ್ತು. ಗಣಪನೂ ಸಾಕಷ್ಟು ದಬಾಯಿಸಿದ್ದ. ಅಧಿಕಾರದ ಕೊಬ್ಬಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೂಡ ಅಗತ್ಯಕ್ಕಿಂತ ಹೆಚ್ಚಾಗಿಯೇ ಹಾರಾಡಿದ್ದ. ಗಲಾಟೆ ಕೇಳಿ ಅಲ್ಲಿಗೆ ಬಂದ ಊರಿನ ಕೆಲವರು,
'ಅಪಾಯವಾಗಬಾರದು ಅನ್ನೋ ಸದುದ್ದೇಶದಿಂದಲೇ ಸರ್ಕಾರ ಹೇಳಿದೆ ಅಂತಾದರೆ ಅನುಮತಿ ಪಡೆಯೋದ್ರಲ್ಲಿ ತಪ್ಪೇನಿದೆ? ಹೇಗೂ ಈಗ ಓಡಾಡಲು ಬಸ್ಸುಗಳು ಇವೆ. ಸಂಜೆಯ ಹೊತ್ತಿನಲ್ಲೂ ದೋಣಿ ನಡೆಸಲೇಬೇಕು ಅನ್ನುವ ಹಠ ಸರಿಯಲ್ಲ’ ಎಂದು ಉಪೇಕ್ಷೆಯ ಧ್ವನಿಯಲ್ಲಿ ಮಾತನಾಡಿದ್ದರು.
ಅವರ ಮಾತಿನಲ್ಲಿ ಅಡಗಿದ್ದ ಉಪೇಕ್ಷೆಯ ಧೋರಣೆ ಗಣಪನ ಮನಸ್ಸನ್ನು ಘಾಸಿಗೊಳಿಸಿತ್ತು. ಆತನಿಗೆ ತಡೆಯಲಾರದಷ್ಟು ಸಂಕಟವಾಗಿತ್ತು. ಅದು ತನ್ನ ವೃತ್ತಿಗೆ ಗೈದ ಅವಮಾನವೆಂದು ಭಾವಿಸಿ ಆತ ಕುಗ್ಗಿಹೋದ.
ಯಾವನೋ ಮೂರನೆಯವನ ಮುಂದೆ ತಮ್ಮೂರಿನ ಮಂದಿ ತನ್ನನ್ನು ಕಡೆಗೆಣಿಸಿದರೆಂದು ಆತ ಮರುಗಿದ. ಸೆಕ್ಯೂರಿಟಿ ಗಾರ್ಡ್ ಹೋದ ನಂತರ ಹೊಳೆಯಲ್ಲಿದ್ದ ತನ್ನ ದೋಣಿಯನ್ನು ಒಬ್ಬನೇ ಪರಿಶ್ರಮದಿಂದ ಎಳೆದುತಂದು ಎಂದಿನಂತೆ ಭರಣಿಗೆ ಮರಕ್ಕೆ ಕಟ್ಟಿ, ದೋಣಿಕಟ್ಟೆಯ ಮೇಲೆ ಹತಾಶೆಯ ಭಾವದಲ್ಲಿ ಮೌನವಾಗಿ ಕುಳಿತುಕೊಂಡ. ಆತನಿಗೆ ತನ್ನ ಅಸ್ತಿತ್ವವೇ ಅರ್ಥಕಳೆದುಕೊಳ್ಳುತ್ತಿದೆ ಎಂಬ ವಿಷಾದ ಕಾಡಿ ದುಃಖ ಉಮ್ಮಳಿಸಿ ಬರತೊಡಗಿತ್ತು. ಹಳೆಯ ದಿನಗಳ ನೆನಪಿನ ಹೊಳೆಯಲ್ಲಿ ಆತನ ಮನಸ್ಸು ಮುಳುಗೇಳತೊಡಗಿತ್ತು.
ಮೂರು ವರ್ಷಗಳ ಹಿಂದೆ ದತ್ತಪ್ಪ ಹೆಗಡೆಯವರ ಬಂಧನದಿಂದ ಉಂಟಾದ ಆಘಾತದಿಂದ ಧೃತಿಗೆಟ್ಟಿದ್ದ ಗಣಪ ಇದುವರೆಗೂ ಮರಳಿ ಚೇತರಿಸಿಕೊಂಡೇ ಇರಲಿಲ್ಲ. ಆತನ ಮನೆಯಲ್ಲೂ ಪರಿಸ್ಥಿತಿ ಉತ್ಸಾಹದಾಯಕವಾಗಿರಲಿಲ್ಲ. ಅಣ್ಣ ತಮ್ಮಂದಿರು ಹಿಸ್ಸೆಯಾಗಿ ಈಗ ಒಟ್ಟು ಕುಟುಂಬದ ದೊಡ್ಡಮನೆ ನಾಲ್ಕು ಪಾಲಾಗಿತ್ತು. ಈಗ ಗಣಪನ ಹೆಂಡತಿ ಚೆನ್ನಮ್ಮ, ತಮ್ಮಿಬ್ಬರಿಗೆ ಮಾತ್ರ ಅಡುಗೆ ಬೇಯಿಸುತ್ತಿದ್ದಳು. ಮದುವೆಯಾದಾಗಿನಿಂದ ಇಡೀ ಕುಟುಂಬಕ್ಕಾಗಿ ದೊಡ್ಡ ದೊಡ್ಡ ಚೆರಿಗೆಯಲ್ಲಿ ಅನ್ನ ಬೇಯಿಸಿ ಇಳಿಸುತ್ತಿದ್ದ ಚೆನ್ನಮ್ಮ ಈಗ ಪುಟ್ಟಪಾತ್ರೆಯಲ್ಲಿ ಅಡುಗೆ ಮಾಡಲು ಅಳತೆ ತಿಳಿಯದೇ ಪರಿತಪಿಸುತ್ತಿದ್ದಳು. ಆ ವೃದ್ದ ದಂಪತಿಗಳಿಗೆ ಇದ್ದೊಬ್ಬ ಮಗಳಿಗೆ ಮದುವೆಯಾಗಿತ್ತು. ಮಗ ಹೆಂಡತಿ ಮಗುವಿನ ಜೊತೆ ಸಾಗರದಲ್ಲಿದ್ದ. ಸೊಸೆ ಸಾಗರಕ್ಕೆ ಹತ್ತಿರದ ಊರಿಗೆ ಸೇರಿದವಳು. ನಾಲ್ಕಕ್ಷರ ಕಲಿತಿದ್ದರಿಂದಲೋ ಏನೋ ಭಾರಂಗಿಯೆಂದರೆ ಕುಗ್ರಾಮವೆಂದು ಆಕೆ ಮೂಗು ಮುರಿಯುತ್ತಿದ್ದಳು. ಇತ್ತೀಚೆಗೆ ಚೌಡನಾಯಕನೂ ಊರಿಗೆ ಬರುವುದು ಅಪರೂಪವಾಗಿತ್ತು. ಎಲ್ಲೋ ಗಣೇಶ ಹೆಗಡೆಯೊಂದಿಗೆ ವ್ಯವಹಾರಿಕ ಮಾತುಕತೆ ಇದ್ದಾಗಲಷ್ಟೇ ಊರಿಗೆ ಬರುತ್ತಿದ್ದ. ಬಂದರೂ ಅಪ್ಪ ಅಮ್ಮನೊಂದಿಗೆ ಉಂಡು ಉಳಿದು ಮಾಡುತ್ತಿರಲಿಲ್ಲ. ಕಾಟಾಚಾರಕ್ಕೆ ಕೆಲವು ಮಾತನಾಡಿ ಹಿಂತಿರುಗಿಬಿಡುತ್ತಿದ್ದ.
ಈಗ ಮೊದಲಿನಂತೆ ದೋಣಿ ದಾಟುವವರೂ ಇರಲಿಲ್ಲ, ಮನೆ ಬಾಗಿಲಲ್ಲಿ ಗಾಡಿ ತಂದು ನಿಲ್ಲಿಸಿ ಎರಡು ಮೂರು ದಿನ ಎತ್ತುಗಳ ಆರೈಕೆ ಮಾಡುವಂತೆ ಕೇಳುವವರೂ ಇರಲಿಲ್ಲ. ದೋಣಿ ಗಣಪ ಬೆಳಿಗ್ಗೆ ಎದ್ದು ದೋಣಿಕಟ್ಟೆಯ ಮೇಲೆ ಕುಳಿತರೆ, ಇಡೀ ದಿನಕ್ಕೆ ಒಬ್ಬರೋ ಇಬ್ಬರೋ ದೋಣಿ ದಾಟುವವರು ಬಂದರೆ ಉಂಟು, ಇಲ್ಲದಿದ್ದರೆ ಇಲ್ಲ. ಅವನು ಹುಟ್ಟಿದೂರಲ್ಲೇ ಅನಾಥನಾಗತೊಡಗಿದ್ದ. ತನ್ನವರ ನಡುವೆಯೇ ಒಬ್ಬೊಂಟಿಯಾಗತೊಡಗಿದ್ದ.
ಕೆಲವೇ ತಿಂಗಳ ಅವಧಿಯಲ್ಲಿ ಜನ ತಾವಿಲ್ಲಿ ದೋಣಿ ದಾಟುತ್ತಿದ್ದೆವು ಎಂಬುದನ್ನು ಮರೆತೇಬಿಟ್ಟಿದ್ದರು. ಹೊಳೆಯಪ್ಪನೂ ದೋಣಿ ಕೆಲಸಕ್ಕೆ ಬರುವುದನ್ನು ಬಿಟ್ಟು ಕಾರ್ಗಲ್ಲಿನಲ್ಲಿ ಪ್ರಾಜೆಕ್ಟ್ ಕೆಲಸಕ್ಕೆ ಹೋಗತೊಡಗಿದ್ದ. ಈಗ ಯಾರಾದರೂ ಹೊಳೆ ದಾಟಿಸಲು ಹೇಳಿದರೆ ಗಣಪನೇ ಕಷ್ಟಪಟ್ಟು ಹಗ್ಗ ಬಿಚ್ಚಿ ತನ್ನ ಮುದಿ ಕೈಗಳನ್ನು ಸೆಟೆಸಿ ದೋಣಿಯನ್ನು ಹೊಳೆಗೆ ದೂಡುತ್ತಿದ್ದ. ಕೇವಲ ಮೂರೇ ವರ್ಷದಲ್ಲಿ ಅವನನ್ನು ಮುಪ್ಪು ಆವರಿಸಿಕೊಂಡುಬಿಟ್ಟಿತ್ತು. ಆರು ಅಡಿ ಎತ್ತರದ ಆತನ ಸೈಂಧವ ಶರೀರವೀಗ ದುರ್ಬಲಗೊಂಡಿತ್ತು. ಮೂರು ವರ್ಷದ ಹಿಂದೆ ಅಮಲ್ದಾರನೊಡನೆ ದತ್ತಪ್ಪ ಹೆಗಡೆಯವರನ್ನು ಹೊಳೆದಾಟಿಸಿ ಬಿಟ್ಟುಬಂದ ನೋವು ಆತನನ್ನು ಮತ್ತೆ ಮತ್ತೆ ಕುಕ್ಕುತ್ತಿತ್ತು. ಆ ದಿನ ಅವರನ್ನು ಬಂಧಿಸಿ ಒಯ್ದಿದ್ದು ಎಂಬುದು ಗೊತ್ತಾದಮೇಲೆ ಅವನು ತಡೆಯಲಾರದ ಬೇಗುದಿಯಲ್ಲಿ ಬೆಂದಿದ್ದ. ಆ ವಿಷಯ ಕೇಳಿದ ರಾತ್ರಿ ಆತನಿಗೆ ನಿದ್ದೆ ಬಂದಿರಲಿಲ್ಲ. ಒಂದೆರಡು ದಿನ ಕಳೆಯುವಷ್ಟರಲ್ಲಿ ಭಾರಂಗಿ ಹೆಗಡೆಯವರನ್ನು ಬಂಧಿಸಿ ಬಹುದೂರ ಒಯ್ದಿದ್ದಾರಂತೆ, ದೇಶದ್ರೋಹದ ಆಪಾದನೆಯ ಮೇಲೆ ಮರಾಠಾದ ಯಾವುದೋ ಸೆರೆಮನೆಗೆ ನೂಕಿದ್ದಾರಂತೆ ಎಂದೆಲ್ಲ ವದಂತಿ ಕೇಳಿ ಆತ ತಲ್ಲಣಿಸಿಹೋಗಿದ್ದ. ಎಷ್ಟೋ ದಿನ ದೋಣಿಕಟ್ಟೆಯ ಮೇಲೆ ಒಬ್ಬನೇ ಕುಳಿತು ಗಳಗಳನೆ ಅತ್ತಿದ್ದ. ಸುದ್ದಿ ಕೇಳಿದ ದಿನ ಸಂಜೆ ಚೆನ್ನಮ್ಮ ಭಾರಂಗಿಮನೆಗೆ ಹೋಗಿ ತುಂಗಕ್ಕಯ್ಯನನ್ನು ಮಾತನಾಡಿಸಿಕೊಂಡು ಬಂದಿದ್ದಳು. ಬಂದವಳೇ ಭಾರಂಗಿ ಮನೆಯ ಅಂದವೇ ನಂದಿಹೋಯಿತೆಂದು ಅತ್ತುಕರೆದಿದ್ದಳು.
ದೋಣಿಕಟ್ಟೆಯ ಮೇಲೆ ಕುಳಿತಿದ್ದ ಗಣಪನಿಗೆ ಶರಾವತಿಯ ಒಡಲಿನಲ್ಲಿ ತಾನು ದತ್ತಪ್ಪ ಹೆಗಡೆಯೊಡನೆ ಈಜು ಕಲಿಯುತ್ತಿದ್ದ ಬಾಲ್ಯದ ದಿನಗಳು ನೆನಪಾಗತೊಡಗಿದ್ದವು. ತನ್ನ ತಂದೆ ರಾಮನಾಯಕನಿಗೆ ದತ್ತಪ್ಪ ಎಂದರೆ ಜೀವ. ಅವರನ್ನು ಆತನೇ ಎತ್ತಿಕೊಂಡು ಹೊಳೆಯ ಆಳದವರೆಗೂ ಹೋಗಿ, ಹೊಟ್ಟೆಯ ಅಡಿಗೆ ಕೈ ಇಟ್ಟು ಕಾಲುಬಡಿಯಲು ಹೇಳಿಕೊಡುತ್ತಿದ್ದ. ತನಗೋ ಈಜುವುದು ಸಹಜವಾಗಿ ಸಿದ್ಧಿಸಿತ್ತು. ತನಗಿಂತ ಮೂರು ವರ್ಷಕ್ಕೆ ಸಣ್ಣವರಾಗಿದ್ದ ದತ್ತಪ್ಪ ಆರಂಭದಲ್ಲಿ ಹೊಳೆಗಿಳಿಯಲು ಬಹಳ ಭಯಪಡುತ್ತಿದ್ದರು. ತನ್ನ ತಂದೆ ಅವರ ಅಂಜಿಕೆಯನ್ನು ಬಿಡಿಸಿ, ತನ್ನ ಸಮಸಮಕ್ಕೆ ಈಜುವುದನ್ನು ಕಲಿಸಿದ್ದ. ತನ್ನಪ್ಪ ಸಾಯುವವರೆಗೂ ತನಗೆ ಎಂದೇ, ಏನೇ ಸಮಸ್ಯೆ ಬಂದರೂ ದತ್ತಪ್ಪಾ ಎನ್ನುತ್ತಿದ್ದ. ಅವರು ಕೂಡ ಎಂದೂ ಸ್ಪಂದಿಸದೇ ನಿರಾಶೆಗೊಳಿಸಿದ್ದಿಲ್ಲ. ಅವರು ಗಾಂಧೀಜಿಯವರ ಬೆಂಬತ್ತಿ ಹೋದ ಕೆಲವೇ ದಿನಗಳಲ್ಲಿ ತನ್ನಪ್ಪ ತೀರಿಹೋದದ್ದು ಕಾಕತಾಳೀಯವೋ, ಅಗಲಿಕೆಯ ಆಘಾತವೋ ಗಣಪನಿಗೆ ಅರ್ಥವಾಗಿರಲಿಲ್ಲ. ತನ್ನ ಮೇಲಾದರೂ ಅದೆಷ್ಟು ಪ್ರೀತಿ ಹೆಗಡೆಯವರಿಗೆ? ಒಮ್ಮೆಯೂ ತನ್ನ ಮೇಲೆ ಸಿಡುಕಿದ್ದಿಲ್ಲ. ಈಗ ಕೆಲವು ವರ್ಷಗಳ ಹಿಂದೆ ತನ್ನ ಹೆಂಡತಿಯ ಓಲೆ ಬುಗುಡಿಗಳನ್ನು ಅಡವಿಟ್ಟುಕೊಂಡು ಸಾಲಕೊಡಿರೆಂದು ಹೋಗಿದ್ದ ದಿನ ಮಾತ್ರವೇ ಅವರು ತನ್ನನ್ನು ಗದರಿದ್ದು. ಅದೂ ಎಂತಹ ಸದಾಶಯದ ಗದರಿಕೆ?
ಸಜ್ಜನರೆಂದು ದತ್ತಪ್ಪ ಹೆಗಡೆಯವರು ಎಲ್ಲೆಡೆ ಒಳ್ಳೆಯ ಹೆಸರು ಗಳಿಸಿದ್ದರೆಂದು ಗಣಪನಿಗೆ ಹಿಗ್ಗು. ಎಂದೂ ಯಾರೊಬ್ಬರಿಗೂ ಕೇಡು ಬಗೆದವರಲ್ಲ ನಮ್ಮ ದತ್ತಪ್ಪ. ಧೂಪದ ಕೈ ಪಟೇಲ, ಕೊಲ್ಲೂರಯ್ಯ ಮತ್ತು ಚಿದಂಬರಯ್ಯ ಮೂರೂಜನ ಸೇರಿಕೊಂಡು ಅನ್ಯಾಯ ಮಾಡಿಬಿಟ್ಟರು ಎಂದು ಪದೇ ಪದೇ ಮರುಗುತ್ತಿದ್ದ. ಬಹುಹೊತ್ತಿನಿಂದ ಸುರಿಯುತ್ತಿದ್ದ ಕಣ್ಣೀರಿನಿಂದಾಗಿ ಆತನ ದೃಷ್ಟಿ ಮಂಜಾಗಿತ್ತು. ದೂರದಲ್ಲಿ ಯಾರೋ ತನ್ನತ್ತಲೇ ಬರುತ್ತಿರುವುದು ಮಸುಕು ಮಸುಕಾಗಿ ಕಾಣಿಸಿತು. ಯಾರಾದರಾಗಲಿ, ತಾನೀಗ ದೋಣಿಯನ್ನು ದಾಟಿಸಲಾರೆ ಎಂದು ಹೇಳಿಬಿಡಬೇಕು. ‘ಹಾಗೆ ಹೇಳುವುದು ತನ್ನ ರೂಡಿ ಅಲ್ಲವಾದರೂ ಇವತ್ತು ತಾನು ದಾಟಿಸಲಾರೆ. ತನ್ನ ಕಸುವೆಲ್ಲ ಕಣ್ಣೀರಾಗಿ ಕರಗಿ ಹರಿದುಹೋಗಿದೆ’.
‘ನನ್ನ ಕೈ ನಡುಗ್ತಿದೆ. ನೀವೇ ನೋಡಿ. ಕಣ್ಣೂ ಮಂಜಾಗಿದೆ. ನಾಳೆ ಬೆಳಿಗ್ಗೆ ಬನ್ನಿ. ನಿಮ್ಗೆ ಅಡ್ಡಿ ಇಲ್ದಿದ್ರೆ ನಮ್ಮ ಮನೇಲಿ ಉಳೀರಿ. ಇಲ್ಲ ಅಂದ್ರೆ ಅಬ್ಬಿಗದ್ದೆ ಭಟ್ಟರ ಮನೆಗೆ ನಾನೇ ಬಿಟ್ಟುಬರ್ತೀನಿ ‘ ಎಂದು ಹೇಳಿಬಿಡಬೇಕು ಎಂದುಕೊಂಡ.
ಅಷ್ಟರಲ್ಲಿ ಆ ವ್ಯಕ್ತಿ ಹತ್ತಿರ ಬಂದು, 'ಗಣಪ ನಾಯ್ಕ, ಚೆನ್ನಾಗೈದೀಯ?' ಎಂದಿತು.
ದೃಷ್ಟಿ ಮಂಜಾಗಿದ್ದರಿಂದಲೋ, ಕತ್ತಲೆ ಆವರಿಸುತ್ತಿದ್ದುದರಿಂದಲೋ ಬಂದವರು ಯಾರೆಂದು ಆತನಿಗೆ ತಿಳಿಯಲಿಲ್ಲ. ಧ್ವನಿಯೂ ಗುರುತಾಗಲಿಲ್ಲ.
'ಯಾರು? ' ಎಂದ.
'ನಾನೇ ಗಣಪ, ಮುರಾರಿ'
'ಓ ನಮ್ಮ ಮುರಾರಿ ಭಟ್ರು, ಇಷ್ಟು ಹೊತ್ತಲ್ಲಿ, ಎಲ್ಲಿಗೆ ಹೊಂಟ್ರಿ?’
'ಇನ್ನೆಲ್ಲಿಗೆ ಗಣಪ? ಭಾರಂಗಿ ಮನೆಗೆ ಹೋಗೋಣ ಅಂತ ಬಂದೆ, ಯಾಕೋ ಮನಸ್ಸೇ ಬರಲಿಲ್ಲ. ಅಬ್ಬಿಗದ್ದೆ ಭಟ್ರ ಮನೆಗಾದ್ರೂ ಹೋಗಿ ಬೆಳಗು ಮಾಡಿಕೊಂಡು ಊರಿಗೆ ಹೋಗ್ತೀನಿ. ನಿನ್ನನ್ನು ಕಾಣದೇ ಸಾಕಷ್ಟು ದಿನವಾಗಿಬಿಟ್ಟಿತ್ತು. ಕಂಡು ಮಾತಾಡಿಸಿಕೊಂಡು ಹೋಗೋಣ ಅನ್ನಿಸ್ತು. ಹಾಗಾಗಿ ಬಂದೆ'
ತಾನು ಕುಳಿತ ಜಾಗದ ಪಕ್ಕದ ನೆಲವನ್ನು ಬಾಯಲ್ಲಿ ಊದಿ, ಕೈಯ್ಯಲ್ಲಿ ಒರೆಸಿ,
'ಬನ್ನಿ ಭಟ್ರೇ, ನಂಗೂ ಮನಸ್ಸಿಗೆ ಬಾಳ ಬ್ಯಾಸ್ರಾಗಿತ್ತು. ಹಂಗೇ ಹರಿಯೋ ನೀರಲ್ಲಿ ನೆನಪುಗಳನ್ನು ತೇಲಿಬಿಡ್ತಾ ಕುಂತ್ಗಂಡಿದ್ದೆ' ಎಂದ ಗಣಪ. ಮುರಾರಿ ಕಟ್ಟೆಯೇರಿ ಅವನ ಪಕ್ಕದಲ್ಲಿ ಕುಳಿತುಕೊಂಡ. ಗಣಪ ಒಂದು ನಿಟ್ಟುಸಿರು ಬಿಟ್ಟು ಹೇಳತೊಡಗಿದ,
'ಭಟ್ರೇ, ಅಕಾ ಅಲ್ಲಿ, ಅಪ್ಪಯ್ಯ ನಂಗೂ ಹೆಗ್ಡೇರಿಗೂ ಒಟ್ಟಿಗೇ ಈಜು ಕಲ್ಸಿದ್ದು. ಒಟ್ಟಿಗೇ ಈಜ್ತ ಬೆಳದ್ವು. ಆದ್ರೆ ಈ ಬದ್ಕಿನ ಹಳ್ಳ ಈಜೋದ್ರಲ್ಲಿ ಇಬ್ರೂ ಸೋತ್ವಿ. ಕಡೇ ತನಕ ಒಟ್ಟಿಗೇ ಈಜ್ತಿರಬೇಕೂ ಅಂತ ನಮ್ಗೆ ಆಸೆ ಇತ್ತು. ಆದ್ರೆ ಆಗ್ಲಿಲ್ಲ ಭಟ್ರೇ, ಈಗಲೇ ಕೈ ಸೋಲ್ತ ಬಂದೈತೆ. ಇನ್ನು ಈಜೋದಿರ್ಲಿ, ದೋಣಿ ನಡ್ಸೋದಕ್ಕೂ ಆಗಾದಿಲ್ಲ. ಇಬ್ಬರೂ ದಡ ಮುಟ್ಟೋದ್ರಲ್ಲಿ ಸೋತೋದ್ವಿ. ಏನಂತೀರಿ?'
'ಇದೇನು ಗಣಪ, ಎಲ್ಲ ಮುಗ್ದು ಹೋದಾಂಗೆ ಮಾತಾಡ್ತೀಯಲ್ಲ. ಇನ್ನೇನು ಹೆಗಡೇರು ತಿರುಗಿ ಬರ್ತಾರೆ. ಎಷ್ಟು ದಿನ ಅಂತ ಜೈಲಲ್ಲಿ ಇಡ್ತಾರೆ. ಈಗ ಮಹಾಯುದ್ದವೂ ಮುಗೀತಂತೆ. ತಿಂಗಳೊಪ್ಪತ್ತಲ್ಲಿ ಬಂದೇ ಬರ್ತಾರೆ. ನೀನ್ಯಾಕೆ ಎಲ್ಲವೂ ಮುಗ್ದುಹೋದ ವಿಷಾದದ ಮಾತು ಆಡ್ತೀಯ?'
'ಮುಗ್ದುಹೋದ ಮಾತು ಅವರಿಗಾಗಿ ಅಲ್ಲ ಭಟ್ರೇ. ಅವರು ಬರ್ಲೀ, ಬಂದು ನೂರ್ಕಾಲ ಬಾಳ್ಲೀ. ಊರಿಗೆ ಬೆಳಕು ತೋರೋ ಅವರಂತೋರು ಬಾಳ್ಬೇಕು. ನೂರು ಮಂದಿಗೆ ಬೆಳಕಾಗಬೇಕು. ವಿಷಯ ಅವರ್ದಲ್ಲ, ನಂದು, ಭಟ್ರೇ. ನಾನು ಇನ್ನೆಷ್ಟು ಕಾಲ ಬಾಳ್ಬಲ್ಲೆ? ಹೋಗ್ಲಿ ಇನ್ನೆಷ್ಟು ಕಾಲ ಬಾಳ್ಬೇಕು? ಈಗ ನೀವೇ ನೋಡಿ ಭಟ್ರೆ, ಊರಲ್ಲಿ ಒಬ್ರಿಗಾದ್ರೂ ಈಗ ಈ ಗಣಪ ಬೇಕಾ? ಗಣಪನ ದೋಣೀಲಿ ಹೊಳೆ ದಾಟಿದ್ದು ಒಬ್ರಿಗಾದ್ರೂ ನೆನಪೈತ? ಇಲ್ಲಿ ನನ್ನೆದುರೇ ಬಸ್ಸು ಹತ್ತಿ ಹೋಗ್ತಿದ್ರೂ ಕನಿಷ್ಠ ಒಂದು ಮುಗಳ್ನಗು ತೋರ್ದೇ ಹೋಗ್ತಾರೆ. ಎಲ್ರಿಗೂ ಗಣಪ ಮರ್ತೇಹೋದ ಭಟ್ರೇ.
ಇವತ್ತು ಸಂಜೆ ಆ ದರಿದ್ರ ಸೆಕ್ರೀಟ್ರಿ ಗದುರ್ತಿದ್ರೆ ಮೊದ್ಲು ದೂರ್ದಲ್ಲಿ ಸುಮ್ಮನೆ ನಿಂತು ಚೆಂದ ನೋಡಿದ್ರು. ಕೊನೆಗೆ ಅವನ ಪರ ವಹಿಸೇ ಮಾತಾಡಿದ್ರು. ನನಗೆ ನನ್ನ ದೋಣಿಗೆ ಜನ ಕಮ್ಮಿ ಆದ್ರೂ ಅಂತ ನೋವಿಲ್ಲ. ಉತ್ಪತ್ತಿ ಕಮ್ಮಿ ಆತು ಅಂತ್ಲೂ ದುಃಖ ಇಲ್ಲ ಭಟ್ರೇ. ನನಗೆ ಈಗ ದುಡ್ಡು ಬ್ಯಾಡ. ಇರಾದು ನಮ್ಮದೆರಡು ಮುದಿಜೀಂವ. ನಮ್ಗೆ ಬೇಕಾದ್ದು ದುಡ್ಡಲ್ಲ, ಪ್ರೀತಿ ಅಷ್ಟೆ. ಭಟ್ರೇ, ಆವಾಗ ದುಡ್ಡು ಬೇಕಿತ್ತು, ಬದ್ಲಾಗಿ ಜನ್ರ ಪ್ರೀತಿ ಸಿಗ್ತು. ಸಾಕಷ್ಟು ದುಡ್ಡೂ ಸಿಗ್ತಿತ್ತು ಅನ್ನಿ. ಈಗ ದುಡ್ಡೂ ಇಲ್ಲ, ಪ್ರೀತ್ಯೂ ಇಲ್ಲ. ಒಂದೇ ಒಂದು ಪ್ರೀತಿ ಮಾತು, ಒಂದು ಸಣ್ಣ ನಗು, ಗಣಪಾ ನೀನೇ ಸೈ ಅನ್ನೋ ಒಂದು ಪುಟ್ಟ ಭರವಸೆ, ಅರ್ಧ ರಾತ್ರಿಯಾಗಿರ್ಲೀ, ಬೆಳಗಿನ ಝಾಂವ ಆಗಿರ್ಲಿ ದೋಣಿ ಹೊಳೆಗಿಳಿಸೋ ಧೈರ್ಯ ಕೊಡ್ತಿತ್ತು. ಈಗ ಯಾರ್ಗೂ ನನ್ನ ಅವಶ್ಯಕತೆ ಇಲ್ಲ ಅನ್ನೋ ಕೊರಗೇ ನನ್ನ ಕೊಲ್ತ ಐತೆ’.
ಗಣಪ ನೋವಿನಲ್ಲಿ ನಲುಗಿ ಹೋಗಿದ್ದ. ಕಣ್ಣಂಚಲ್ಲಿ ನೀರಿಳಿಯುತ್ತಿತ್ತು. ಮುರಾರಿ ಅವನ ಕುರಿತೇ ಯೋಚಿಸುತ್ತ ಮೌನವಾಗಿದ್ದ. ತುಸು ಹೊತ್ತು ತಡೆದು ಗಣಪನೇ ಮಾತು ಮುಂದುವರೆಸಿದ್ದ,
'ಆ ಕಾಲ್ದಲ್ಲಿ ಅದೆಷ್ಟು ಉಮೇದು ಭಟ್ರೇ? ದಿಬ್ಬಣಕ್ಕೂ ಗಣಪ. ಆಸ್ಪತ್ರೆಗೂ ಗಣಪ. ಅಡಕೆ ಒಯ್ಯಾಕೂ ಗಣಪ, ದಿನಸಿ ತರಾಕೂ ಗಣಪ. ಬೆಳ್ಗೂ ಗಣಪ, ಬೈಗೂ ಗಣಪ. ನಕ್ಕ ನಕ್ಕಂತ ಹೊಸ ಜೋಡಿಗಳು ಬರ್ತಿದ್ವು. ಹೆಣ್ಣುಮಕ್ಕಳು ಪ್ರೀತಿಯಿಂದ ಗಣಪಾ ಅಂತ ನಕ್ಯಂತ ಹಬ್ಬಕ್ಕೆ ತವ್ರಿಗೆ ಬರ್ತಿದ್ವು. ಗಂಡನ ಮನೆಗೆ ಹೋಗ್ತಿದ್ವು. ಬಸ್ರೇರೂ, ಬಾಣಂತೇರೂ, ಮುದ್ಕ್ರೂ ಮುತ್ತೈದೇರೂ ಅಷ್ಟೇ ಯಾಕೆ ಭಟ್ರೇ ಹೆಣ ಕೂಡ ದಾಟತಿದ್ವು. ಆಗ ಹೆಣ ದಾಟ್ಸುವಾಗ ಇದ್ದ ಜೀಂವಂತಿಕೆ ಈಗ ಜೀಂವಂತ ಮನುಷ್ಯರನ್ನು ದಾಟ್ಸುವಾಗ್ಲೂ ಇಲ್ಲ! ದೊಡ್ಡೋರ ಕಣ್ತಪ್ಪಿಸಿ ಹೊಳೇಲಿ ಈಜ್ತಿದ್ದ ನಿಮ್ಮೋರ ಹುಡುಗ್ರಿಗೂ ಕರ್ದು ಬುದ್ದಿ ಹೇಳಿ ಬೈತಿದ್ದೆ. ನದಿಯಲ್ಲಿ ಅಂಡು ತೊಳ್ಯಾದು ಕಂಡ್ರೆ ಬರ್ಲು ಮುರ್ಕೊಂಡು ಬಾಸುಂಡೆ ಬರಾ ಹಾಂಗೆ ಬಾರಿಸ್ತಿದ್ದೆ. ಅವರು ಜೈನ್ರ ಹುಡುಗ್ರಾದ್ರೂ ಆಗ್ಲಿ, ಬ್ರಾಹ್ಮಣ್ರ ಹುಡುಗ್ರಾದ್ರೂ ಆಗ್ಲಿ. ಆದ್ರೆ ಒಬ್ರೂ ನನಗೆ ಅಂದೋರಿಲ್ಲ, ಆಡ್ದೋರಿಲ್ಲ. ದೋಣಿ ದಾಟ್ತ ಹೊಳೆಗೆ ಎಂಜಲು ತುಪ್ಪಿದ್ರೆ, ‘ನಿನ್ನ ತಾಯಿ ಬಾಯಿಗೆ ಹೀಂಗೇ ತುಪ್ತೀಯ’ ಅಂತ ಬೈತಿದ್ದೆ. ಯಾರೂ ಚಕಾರ ಎತ್ತಿ ಆಡಿದ್ದಿಲ್ಲ. ಹಾಂಗಿತ್ತು ಆ ಕಾಲ. ಹೊಳೆ ದಾಟಿದ ಮ್ಯಾಲೂ ಜನ ಅಂಬಿಗನ ನಂಬ್ತಿದ್ದ ಕಾಲ, ಅದು.
ಭಟ್ರೇ, ಈ ನನ್ನ ದೋಣಿ ಅದೆಷ್ಟು ಪುಣ್ಯ ಮಾಡಿತ್ತು ಅಂತೀರ? ಎಂತೆಂತೋರು ಕುಂತ್ರು ಇದ್ರಲ್ಲಿ ಭಟ್ರೇ!? ವಿಶ್ವೇಶ್ವರಯ್ಯ, ಕಡಾಂಬಿ, ಫೋರ್ಬ್ಸೂ, ರಾಮರಾಯರು, ಕೃಷ್ಣರಾಯರು, ಇನ್ನೂ ಎಂತೆಂತವರೋ. ಈಗ ಆಗಿನ ಸಂತೋಷ, ಸಂಭ್ರಮ, ಉತ್ಸಾಹ, ನಗು, ವಿನೋದ ಯಾವ್ದೂ ಇಲ್ಲ. ಎಲ್ಲ ಶರಾವತೀ ಹೊಳೇಲಿ ತೊಳೆದು ಹೋದ್ವು. ದರಿದ್ರ ಫುಡ್ಡಾಫೀಸಿನೋರು, ಪೋಲೀಸ್ರು, ಸೈನಿಕರು, ನಂಬ್ಸಿ ಕತ್ತುಕೊಯ್ಯೋ ಶಾನುಭೋಗ್ರೂ, ಪಟೇಲ್ರೂ ನನ್ನ ದೋಣಿ ಮೈಲಿಗೆ ಮಾಡ್ಬುಟ್ರು. ಅಷ್ಟು ಸಾಲ್ದು ಅಂತ ಕೊನೀಗೆ ನಮ್ಮ ಹೆಗಡೇರನ್ನೇ ದಸ್ತಗಿರಿ ಮಾಡಿ ಒಯ್ದ ಅಮಲ್ದಾರ ಕೂಡ ಇದೇ ದೋಣೀಲಿ ದಾಟಿಬಿಟ್ಟ. ಆವತ್ತು ಹೆಗಡೇರ್ನ ಬಂಧಿಸಿ ಒಯ್ತಿದ್ದಾಗ, ವಿಷ್ಯ ಹೀಂಗೇ ಅಂತ ಒಂದು ಸಣ್ಣ ಸುಳಿವು ಗೊತ್ತಾಗಿದ್ರೂ ನಡೂ ಹೊಳೇಲಿ ದೋಣಿ ಮಗಚೇಬಿಡ್ತಿದ್ದೆ. ಹ್ಯಂಗೂ ಹೆಗಡೇರಿಗೆ ಈಜು ಬರ್ತಿತ್ತು. ಕೊನೇವರ್ಗೂ ಈ ದಡ್ಡಂಗೆ ಗೊತ್ತೇ ಆಗ್ನಿಲ್ಲ. ಜೀಂವಕ್ಕೆ ಮಾತ್ರ ಅನ್ನಿಸ್ತಲೇ ಇತ್ತು ಭಟ್ರೇ, ಏನೋ ನಡೀಬಾರ್ದ್ದು ನಡೀತಾ ಐತೇ ಅಂತ. ಆದ್ರೆ ಏನೂ ಅಂತ ಹೊಳೀದೇ ಎಲ್ಲ ಹೊಳೇಲಿ ಹುಳೀ ತೊಳ್ದಾಂಗಾತು'
ಆತ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದ್ದ. ಅತ್ತೇ ಸಮಾಧಾನ ಆಗುವುದಾದರೆ ಹಾಗೇ ಆಗಲೆಂದು ಮುರಾರಿ ಸಂತೈಸಲು ಹೋಗಲಿಲ್ಲ. ಕೆಲವು ಹೊತ್ತು ಅತ್ತು ಕೊನೆಗೆ ಗಣಪನೇ,
'ಭಟ್ರೇ, ಮಧ್ಯ ಮಳೆಗಾಲ್ದ ಒಂದಿನ ಏನಾಗಿತ್ತು ಗೊತ್ತೈತ? ನಮ್ಮ ಕಂಚಿಕೈ ದ್ಯಾವಪ್ಪಯ್ಯನ ಮಗ್ಳಿಗೆ ಅಸಾಧ್ಯ ಹೆರಿಗೆ ನೋವು, ಉಳಿಯಾದೇ ಕಷ್ಟವಾಗಿತ್ತು. ಕಡೇ ಪ್ರಯತ್ನ ಅಂತ ಸಾಗರದ ಆಸ್ಪತ್ರೆಗೆ ಹೋಗಾಕೆ ಕಂಬಳಿ ಜೋಲಿ ಮಾಡಿ ತೆಂಕೋಡುಮನೆ ಗಾಡಪ್ಪಯ್ಯನ ಗಾಡಿಯಲ್ಲಿ ಹಾಕ್ಯಂಡು ತಂದಿದ್ರು. ಅರ್ಧರಾತ್ರಿ. ಜೋರು ಮಳೆ. ಹೊಳೆ ತುಂಬಿ ಜಬರ್ದಸ್ತಿನಿಂದ ಹರೀತಿದ್ದ ಕಾಲ. 'ಗಣಪಾ ಏನಾದ್ರೂ ಮಾಡಾದೇ ಸೈ' ಅಂದ್ರು. ಸರಿ ನನ್ನ ತಮ್ಮ ಕೆರಿಯಪ್ಪನ್ನ ಕರ್ಕೊಂಡು, ಅವರನ್ನೆಲ್ಲ ದೋಣೀಲಿ ಕೂರಿಸ್ಕ್ಯಂಡು ಶರಾವತಿ ತಾಯಿಗೆ ಕೈ ಮುಗ್ದು ದೋಣಿ ಹೊಳೆಗೆ ಇಳಸ್ದೆ. ದ್ಯಾವಪ್ಪಯ್ಯನ ಕೈಗೆ ಲಾಟೀನು ಕೊಟ್ಟೆ. ಗಾಳೀ ಮಳೇಲಿ ಹಾಳಾದ್ದು ಲಾಟೀನು ಒಂದೇ ನಂಬಾಕಾಗ್ದು ಅಂತ ಎರಡು ದೊಂದೀನು ಕಟ್ಟಿ ಹೊತ್ತಿಸಿ ಹಿಡ್ಕಳಾಕೆ ಹೇಳಿ, ದೊಂದಿ ಮುಚ್ಚಲಿಕ್ಕೆ ಒಂದು ಗೊರಬು ಕೊಟ್ಟೆ. ದೋಣಿ ನನ್ನ ಹಿಡಿತಕ್ಕೆ ಸಿಗ್ದೇ ನೀರಿನ ಜೊತೆ ಕೆಳಗೇ ಓಡ್ತಿತ್ತು. ಕೆರಿಯಪ್ಪಂಗೆ ಗಳದಲ್ಲೇ ಕೆಳಮುಖ ಒತ್ತಿ ಹಿಡಿಯಕ್ಕೆ ಹೇಳ್ತ ಸ್ವಲ್ಪ ಸ್ವಲ್ಪವೇ ದೋಣಿ ಮುಂದೆ ಬಿಟ್ಟೆ. ಹಾಂಗೂ ಹೀಂಗೂ ಅರ್ಧಗಂಟೆ ಜಟಾಪಟಿ ಮಾಡಿ ಮೆಣಸುಗಾರು ತಲುಪಿ, ಹೋಗಿ ಹೆರಿಗೆ ಸುಶೀಲಮ್ಮನ ಕರ್ದೆ. ಆಯಮ್ಮ ಬಂದು ಎಂತದೋ ಔಷ್ಧ ಕೊಟ್ಟು ಮರ್ದಿನ ಬೆಳಿಗ್ಗೆ ಸಾಗರದ ಆಸ್ಪತ್ರೆಗೆ ಕಳಿಸ್ತು. ಕೊನೆಗೆ ಹೆರಿಗ್ಯಾಗಿ ಮಗೂನೂ ಬದುಕ್ತು. ತಾಯೀನೂ ಬದುಕ್ತು. ಹೋದ್ವರ್ಷ ಮೊಮ್ಮಗಳ ಮದ್ವೆಗೆ ದ್ಯಾವಪ್ಪಯ್ಯ ಬಂದು ಕರ್ದಿದ್ರು, ಹೋಗಿದ್ದೆ. ಶರಾವತಿ ತಾಯೇ ಮೈತಳ್ದು ಬಂದಂಗಿತ್ತು ಅರಿಷಿನ ಹಚ್ಚಿದ್ದ ಆ ಮದುವಾಣಗಿತ್ತಿ ಮಖ. ಅದನ್ನು ಕಂಡು ಮನಸ್ಸು ಅರಳಬಿಡ್ತು ಭಟ್ರೇ. ದ್ಯಾವಪ್ಪಯ್ಯ ನನ್ನ ಅಪ್ಗಂಡು ಕಣ್ಣೀರು ಹಾಕಿದ್ರು. ಆನಂದದ ಕಣ್ಣೀರು.
ಖಾಯಿಲೆ ಹೆಚ್ಚಾಗಿ ನನ್ನ ದೋಣೀಲೇ ಪ್ರಾಣ ಬಿಟ್ಟವ್ರೂ ಇದ್ರು. ಪ್ರಾಣ ಉಳಿಸ್ಕಂಡೋರೂ ಇದ್ರು. ಈಗ ಅವೆಲ್ಲ ಕನ್ಸು. ಭಟ್ರೇ, ನಿಮ್ಗೊಂದು ವಿಷ್ಯ ಗೊತ್ತಾತ? ಇವತ್ತು ಆ ಸೆಕ್ರೆಟ್ರಿಯವ್ನು ಹೇಳ್ದ, ‘ಇನ್ಮುಂದೆ ದೋಣಿ ನಡ್ಸಾದಕ್ಕೆ ಪರವಾಂಗಿ ತಗಾಬೇಕಂತೆ! ಮೇಲ್ಗಡೆ ಡ್ಯಾಮಿನಿಂದ ಇದ್ದಕ್ಕಿದ್ದ ಹಾಗೇ ನೀರು ಬಿಟ್ಟು ಅಪಾಯ ಆದ್ರೆ ಅವ್ರು ಜವಾಬ್ದಾರಿ ಅಂತೆ. ಅಲ್ಲ, ಆವತ್ತು ದ್ಯಾವಪ್ಪಯ್ಯನ ಮಗಳು ಪ್ರಾಣ ಉಳ್ಸದಕ್ಕೆ ಇವ್ರು ಬಂದಿದ್ರಾ? ಪರವಾಂಗಿ ತಗಾಬೇಕಂತೆ!’ ಗಣಪ ವಿಷಾದದಲ್ಲಿ ನಕ್ಕಿದ್ದ.
‘ಪರವಾನಗಿ ವಿಚಾರಕ್ಕೆ ನೀನೇನು ತಲೆ ಕೆಡಿಸ್ಕೋ ಬೇಡ, ಗಣಪ. ಕೃಷ್ಣರಾವ್ ಸಾಹೇಬರಿಗೆ ನಮ್ಮ ತುಂಗಕ್ಕಯ್ಯನ ಹತ್ರ ಹೇಳ್ಸನ'
ಮುರಾರಿಯ ಮಾತು ಕೇಳಿ, ಅವನನ್ನು ನೋಡಿ ಮುಗಳ್ನಗುತ್ತ ಗಣಪ ಹೇಳಿದ, 'ನಿಮಗೊಂದು ಭ್ರಾಂತು ಭಟ್ರೆ, ಡ್ಯಾಮು ಕಟ್ಟಿ ಮುಗ್ಸೋ ತನಕ ಯಾರು ಇರೋವ್ರೋ,ಯಾರು ಸಾಯೋವ್ರೋ, ಯಾರ್ಬಲ್ರು? ಒಂದು ವಿಷ್ಯ ಹೇಳಿ ಭಟ್ರೇ. ರಾಮಾಯಣದಲ್ಲಿ ಗುಹನ ದೋಣೀಲಿ ಯಾವತ್ತಾದ್ರೂ ರಾವಣ ದಾಟಿದ್ನಾ?
ಗಣಪ ಗಂಭೀರವಾಗಿ ಕೇಳಿದ್ದ. ಅಂತಹದ್ದೊಂದು ಪ್ರಶ್ನೆಯನ್ನು ಮುರಾರಿ ಅವನಿಂದ ನಿರೀಕ್ಷಿಸಿರಲಿಲ್ಲ. ಅವನಿಗೆ ಆಶ್ಚರ್ಯವಾದರೂ ತೋರಗೊಡದೆ,
'ಇಲ್ಲ ಗಣಪ, ಯಾವತ್ತೂ ಅದ್ರಲ್ಲಿ ರಾವಣ ದಾಟಿರಲಿಲ್ಲ. ರಾಮನ ಪರಿವಾರವಷ್ಟೇ ದಾಟಿದ್ದು'
'ಆದ್ರೆ ನನ್ನ ದೋಣೀಲಿ ರಾವಣಾನೂ ದಾಟ್ಬಿಟ್ಟ. ಬರೀ ರಾವಣ ಅಲ್ಲ, ರಾಕ್ಷಸರ ದಂಡಿಗೆ ದಂಡೇ ನನ್ನ ದೋಣೀಲಿ ದಾಟ್ಬಿಡ್ತು. ನಾನು ಭಾರಂಗೀನ ರಾಕ್ಷಸರಿಗೆ ಒಪ್ಪುಸ್ಬಿಟ್ಟೆ'. ಬಹುಹೊತ್ತು ಹೊಳೆಯನ್ನೇ ನೋಡುತ್ತ ಗಣಪ ಉಮ್ಮಳಿಸಿ ಅಳುತ್ತಲೇ ಕುಳಿತಿದ್ದ. ಮುರಾರಿಯ ಕಣ್ಣೂ ಒದ್ದೆಯಾಗಿತ್ತು. ಕೊನೆಗೆ ಗಣಪ ತಲೆಯೆತ್ತಿ ಮುರಾರಿಯನ್ನೇ ದಿಟ್ಟಿಸಿ,
'ನನಗಿನ್ನು ಎಂತದ್ದೂ ಉಳ್ದಿಲ್ಲ ಭಟ್ರೇ. ಮಗಳು ಮದ್ವೆಯಾಗಿ ಗಂಡನ ಮನೇಲಿ ಸುಖವಾಗೈತೆ. ಇಷ್ಟವೋ ಅನಿಷ್ಟವೋ ಮಗನೂ ಒಂದು ಕೆಲ್ಸ ಮಾಡ್ತ ಐದಾನೆ. ತಮ್ಮದೀರು ಬ್ಯಾರೆಯಾಗಿ ಅವರವರ ಬಾಳ್ವೆ ಅವರವರು ನಡೆಸ್ತ ಐದಾರೆ. ಇನ್ನು ಉಳ್ದಿರೋದು ಎರಡೇ. ಒಂದು ಈ ದೋಣಿ, ಇನ್ನೊಂದು ನನ್ನ ಹೆಂಡ್ತಿ ಚೆನ್ನಮ್ಮ. ಈ ದೋಣೀನಾದ್ರೂ ಮೈಗೆ ಕಟ್ಟಿಗ್ಯಂಡು ಸಾಯ್ಬೋದು. ಆದ್ರೆ ನನ್ನ ಹೆಂಡ್ತಿ? ನನಗೆ ಅವಳದ್ದೇ ಚಿಂತೆ. ನನ್ನ ಸೊಸೆ ಅವಳನ್ನು ಮುಟ್ಟಿಸ್ಕಳ್ಳಾದಿಲ್ಲ. ಯಾಕೇ ಅಂದ್ರೆ ಪ್ಯಾಟೇಲೇ ಇದ್ದು ಅದರ ಮೈ ಚರ್ಮವೂ ತುಸು ಬೆಳ್ಗಾಗಿದೆ. ಈ ಹಳ್ಳಿ ಮುದುಕಿ ತನ್ನತ್ತೆ ಅನ್ನೋದಕ್ಕೆ ಅದಕ್ಕೆ ನಾಚ್ಕೆ ಅಂತೆ! ಚೆನ್ನಿ, ಕಷ್ಟವೋ ಸುಖವೋ ಕಳೆದೈವತ್ತು ವರ್ಷ ನನ್ನ ಕಟ್ಟಿಗ್ಯಂಡು ಏಗಿದ್ಲು. ಈಗ ಏನ್ಮಾಡಾದು? ದತ್ತಪ್ಪ ಹೆಗಡೆಯವರಿದ್ರೆ ತಮ್ಮನ ಹೆಂಡ್ತೀ ಅಂತ ಅನಾಥವಾಗಕ್ಕೆ ಬಿಡ್ತಿರ್ಲಿಲ್ಲ. ಈಗ ಅವ್ರೂ ಇಲ್ಲ. ತುಂಗಮ್ಮ ಐದಾರೆ ಅನ್ನದೊಂದೇ ಸಮಾಧಾನ, ಅಷ್ಟೆ'
ಆತ ಮಾತು ಮುಗಿಸುವ ಹೊತ್ತಿಗೆ ಮುರಾರಿಗೆ ಅವನೊಳಗಿನ ವಿಷಾದ ಅರ್ಥವಾಗಿತ್ತು. ಆತನನ್ನು ಸಮಾಧಾನ ಪಡಿಸಲು ಸ್ವಲ್ಪ ಗಟ್ಟಿಯಾಗಿ ಹೇಳಿದ,
‘ಗಣಪ ನಿನ್ನ ಮನಸ್ಸು ಯಾವ ಕಡೆಗೆ ಎಳೀತಿದೆ ಅಂತ ನನಗೆ ಅರ್ಥವಾಗ್ತಿದೆ. ಆದ್ರೆ ನಿನ್ನ ಯೋಚನೆ ಎಷ್ಟು ಮಾತ್ರಕ್ಕೂ ಸರಿಯಿಲ್ಲ. ಆ ಯೋಚ್ನೆ ಬಿಟ್ಬಿಡು. ನೋಡು, ಹೆಗಡೆಯವರು ಹೆಚ್ಚೂ ಅಂದ್ರೆ ಇನ್ನು ನಾಲ್ಕೆಂಟು ದಿನಗಳಲ್ಲಿ ಬರ್ತಾರೆ. ಅವರು ತಿರುಗಿ ಬಂದ್ಮೇಲೆ ನಿನ್ನಂತ ಗೆಳೆಯರು ಜೊತೆಗಿಲ್ದಿದ್ರೆ ಅವರಿಗೆ ಸಂಕಟವಾಗೋದಿಲ್ವಾ? ಹುಚ್ಚುಚ್ಚಾಗಿ ಯೋಚಿಸ್ಬೇಡ. ಮಾತು ಸಾಕು. ಮನೇಗೆ ಹೋಗಿ ಊಟ ಮಾಡಿ ನೆಮ್ಮದಿಯಿಂದ ಮಲಗು. ನಾನು ಬೆಳಿಗ್ಗೆ ಬರ್ತೀನಿ. ಮೆಣಸುಗಾರಿಗೆ ಹೋಗ್ಬೇಕು. ಈಗ ಅಬ್ಬಿಗದ್ದೆಗೆ ಹೋಗ್ತೀನಿ. ನಾಳೆ ಮಾತಾಡೋಣ, ಏನಂತೀಯ?'
ಗಣಪ ಉತ್ತರಿಸಲಿಲ್ಲ. ಮುರಾರಿ ಆತನ ತೋಳು ಹಿಡಿದು ಎಬ್ಬಿಸಿ, ತುಸುದೂರ ತೋಳು ಹಿಡಿದೇ ಜೊತೆಯಾಗಿ ನಡೆದ.
ಆತನಿಂದ ಬಿಡಿಸಿಕೊಂಡ ಗಣಪ,
'ಯಾಕೆ ಹೆದರ್ತೀರಿ ಭಟ್ರೇ, ಏನೂ ಆಗಲ್ಲ. ನಾನೇನು ಜೀಂವ ತೆಕ್ಕಳಾದಿಲ್ಲ. ನೀವು ಹೋಗ್ಬನ್ನಿ, ಸುಮ್ಮನೆ ಮನಸ್ಸಿನ ನೋವನ್ನು ನಿಮ್ಮ ಹತ್ರ ತೋಡಿಕ್ಯಂಡೆ ಅಷ್ಟೆ' ಎಂದ.
ತನ್ನ ಮಾತಿನಿಂದ ಆತನಿಗೆ ಸಮಾಧಾನವಾಗಿದೆ ಎಂದು ಭಾವಿಸಿದ ಮುರಾರಿ, ‘ಗಣಪ, ಹಾಗಾದರೆ ನಾನು ಬೆಳಿಗ್ಗೆ ಸಿಕ್ತೀನಿ. ನೀನು ಒಬ್ಬನೇ ಇಲ್ಲಿ ಕೂತಿರ್ಬೇಡ. ಮನೆಗೆ ಹೋಗಿ ಊಟ ಮಾಡಿ ಮಲಗು’ ಎಂದು ಹೇಳಿ ತಾನು ಅಬ್ಬಿಗದ್ದೆಯತ್ತ ಹೊರಟ.
ಮುರಾರಿ ಮರೆಯಾಗುವವರೆಗೂ ಅವನತ್ತಲೇ ನೋಡುತ್ತ ಅಲ್ಲೇ ನಿಂತಿದ್ದ ಗಣಪ, ನಂತರ ಮನೆಯತ್ತ ಹೋಗುವ ಬದಲು ಹೊಳೆಯ ಕಡೆಗೆ ತಿರುಗಿದ. ಇತ್ತ ಮುರಾರಿ ತನ್ನ ರೂಢಿಯಂತೆ ನಕ್ಷತ್ರದ ಬೆಳಕನ್ನೇ ಅನುಸರಿಸಿ ಗಟ್ಟಿಯಾಗಿ ಹಾಡಿಕೊಳ್ಳುತ್ತ ನಡೆಯತೊಡಗಿದ್ದ.
'ದಂಡೆಗಳೆರಡೂ ಒಂದಾಗಿ ಕೂಡಿರಲು
ಕೊಂಡೊಯ್ದ ಅಂಬಿಗನು ಯಾರಿಗೆ ನಂಟೋ?
ಕಂಡ ಮೊಲೆಗಳ ಹಿಂದೆ ದಿಂಡೆದ್ದು ಹೊರಟಿರಲು
ಉಂಡಮೊಲೆ ನೆನಪು ಯಾರಿಗೆ ಉಂಟೋ'
ಗಣಪ ಹೇಳಿದಂತೆ ಈಗ ಯಾರೂ ಆತನ ದೋಣಿಗೆ ಕಾಯುತ್ತಿರಲಿಲ್ಲ. ಇತ್ತೀಚೆಗೆ ಎಣ್ಣೆಹೊಳೆ, ಮಳಲಿ, ಕೆಂಚಗದ್ದೆ ಹೊಳೆಗಳಿಗೆ ಸೇತುವೆಯಾಗಿತ್ತು. ಜೋಗ - ಭಟ್ಕಳ ರಸ್ತೆಯಿಂದ ಎಣ್ಣೆಹೊಳೆ ಸೇತುವೆಯ ಮೂಲಕ ಕರೂರಿಗೆ ಮತ್ತು ವಳಗೆರೆ ಮಾರ್ಗದಲ್ಲಿ ಮಡೇನೂರಿಗೆ ರಸ್ತೆ ಸಿದ್ಧವಾಗಿತ್ತು. ಮಡೇನೂರಿನಲ್ಲಿ ಕಾಸ್ವೇ ನಿರ್ಮಾಣವಾಗಿ ಹೊಳೆ ದಾಟುವುದು ಸುಲಭವಾಗಿತ್ತು. ಇತ್ತೀಚಿನವರೆಗೂ ಕೆಳಮನೆ ಸಮೀಪ ದೋಣಿ ದಾಟಿಸುತ್ತಿದ್ದ ತಿಮ್ಮೇಗೌಡ ಈಗ ದೋಣಿ ದಾಟಿಸುವ ಉದ್ಯೋಗ ಕೈ ಬಿಟ್ಟು, ಆಣೆಕಟ್ಟು ನಿರ್ಮಾಣಕ್ಕೆ ಇಟ್ಟಿಗೆ ಸಾಗಿಸುವ ಉದ್ಯೋಗ ಆರಂಭಿಸಿದ್ದ. ಸಾಗರದಿಂದ ಜೋಗಕ್ಕೆ ಎರಡು ಬಸ್ಸುಗಳು ಓಡಾಡತೊಡಗಿದ್ದವು. ಕಾರ್ಗಲ್ಲಿನಲ್ಲೂ ಕಾಸ್ವೇ ಸಿದ್ಧವಾಗಿತ್ತು. ಇಡುವಾಣಿಯಿಂದ ಮೆಣಸುಗಾರು ಮಾರ್ಗದಲ್ಲಿ ಮಡೇನೂರಿಗೆ ಒಂದು ಬಸ್ಸು, ಹಾಗೆಯೇ ಅರಳುಗೋಡು-ಕಂಚಿಕೈ-ಭಾರಂಗಿ ಮಾರ್ಗದಲ್ಲಿ ಮೆಣಸುಗಾರು-ತಾಳಗುಪ್ಪ ಬಸ್ಸಿಗೆ ಸಂಪರ್ಕ ಕೊಡುವ ಇನ್ನೊಂದು ಬಸ್ಸು ಓಡತೊಡಗಿದ್ದವು. ಚಾರ್ಕೋಲ್ ಉರಿಸಿದ ಉಗಿಯಿಂದ ಓಡುತ್ತಿದ್ದ ಆ ಬಸ್ಸುಗಳು ತಮ್ಮ ಗಮ್ಯವನ್ನು ನಿಶ್ಚಿತವಾಗಿ ತಲುಪುವ ಭರವಸೆ ಇಲ್ಲದಿದ್ದರೂ ಹತ್ತೆಂಟು ಮೈಲು ನಡೆಯುವ ಶ್ರಮ ಮತ್ತು ಸಮಯವನ್ನು ಉಳಿಸುವ ಕಾರಣದಿಂದ ಜನ ಅವುಗಳನ್ನೇ ಅವಲಂಬಿಸತೊಡಗಿದ್ದರು. ಬಸ್ಸನ್ನು ಗಂಟೆಗಟ್ಟಲೇ ಕಾದರೂ ಅದರಲ್ಲಿ ಹೋಗುವುದು ಅವರಿಗೆ ಕುತೂಹಲ, ಸೌಲಭ್ಯ ಮತ್ತು ಪ್ರತಿಷ್ಟೆಯ ಸಂಗತಿಯಾಗಿತ್ತು. ಮಹಾರಾಜರು ಹೇಳಿದಂತೆ ತಮ್ಮ ಭಾಗ್ಯದ ಬಾಗಿಲೇ ತೆರೆದಿದೆಯೆಂದು ಭಾವಿಸಿ ಹಳ್ಳಿಯ ಜನ ಅಗತ್ಯಕ್ಕಿಂತ ಹೆಚ್ಚು ಓಡಾಡತೊಡಗಿದ್ದರು. ಕಾಲೋನಿ ನಿರ್ಮಾಣದ ಕಾಮಗಾರಿ ಆರಂಭವಾದ ಮೇಲೆ ಹಣದ ಚಲಾವಣೆಯೂ ಹಿಂದಿಗಿಂತ ಅಧಿಕವಾಗಿ ಕ್ರಮೇಣ ಜನಗಳ ಕೈಯ್ಯಲ್ಲಿ ಹಣ ಹರಿದಾಡತೊಡಗಿತ್ತು.
ಸೇತುವೆಗಳು ದಂಡೆಗಳನ್ನು ಜೋಡಿಸಿ ದೋಣಿಗಳನ್ನು ಮುಳುಗಿಸತೊಡಗಿದ್ದವು. ಹಳ್ಳಿಗಳ ಹಾದಿ ರಸ್ತೆಗಳಾಗಿ ವಿಸ್ತರಿಸತೊಡಗಿದ್ದವು. ಗ್ರಾಮಗಳ ಗಾಡಿರಸ್ತೆಗಳಲ್ಲಿ ಯೋಜನೆಗಳ ವಾಹನಗಳು ಓಡತೊಡಗಿದ್ದವು. ಧನಿಕರ ದೌಲತ್ತು ಹೊಸಕಾರುಗಳಲ್ಲಿ ಸವಾರಿ ಹೊರಟಿದ್ದವು. ಮಲೆನಾಡಿನ ಹಳ್ಳಿಗಳು ಮೆಲ್ಲಗೆ ಕಾಲೋನಿಗಳ ಮಾದಕತೆಗೆ ಮನಸೋಲತೊಡಗಿದ್ದವು.
**********
ಅಧ್ಯಾಯ - ೩
ಮಹಾತ್ಮಾಗಾಂಧಿ ವಿದ್ಯುದಾಗಾರದ ಲೋಕಾರ್ಪಣಾ ಕಾರ್ಯಕ್ರಮ ಮುಗಿಸಿ ಭಾರಂಗಿಗೆ ಬಂದು ಊಟ ಮಾಡಿ ಮಲಗಿ ಎದ್ದ ವಸುಧಾ, ಸುಬ್ರಾಯನ ಹೆಂಡತಿಯ ಒತ್ತಾಯಕ್ಕೆ ಮಣಿದು ತುಂಬಳ್ಳಿಗೆ ಹೋಗಿ ಬಂದರೂ ಕೃಷ್ಣರಾವ್ ಬಂದೇ ಇರಲಿಲ್ಲ. ರಾತ್ರಿ ಇನ್ನೇನು ಊಟಕ್ಕೆ ಎಲೆಹಾಕಬೇಕು ಎನ್ನುವ ಹೊತ್ತಿಗೆ ಬಂದ ಕೃಷ್ಣರಾವ್, ಕೊನೇ ಘಳಿಗೆಯಲ್ಲಿ ಮುಖ್ಯಮಂತ್ರಿಗಳು ಹಿರೇಭಾಸ್ಕರಕ್ಕೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ ಕಾರಣ ಹಯಾತ್ ಸಾಹೇಬರು ತನ್ನನ್ನೂ ಒತ್ತಾಯಿಸಿದರು, ಹಾಗಾಗಿ ತಾನು ಹಿರೇಭಾಸ್ಕರಕ್ಕೆ ಹೋಗಲೇಬೇಕಾಗಿ ಬಂದಿದ್ದರಿಂದ ತಡವಾಯಿತು ಎಂದು ಸಮಜಾಯಿಷಿ ಕೊಟ್ಟರು.
ಊಟ ಮುಗಿದು ರಾತ್ರಿ ಜಗುಲಿಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಮಾತನಾಡುತ್ತಿದ್ದಾಗ ದತ್ತಪ್ಪ ಜೋಗದ ಸಮೀಕ್ಷೆಯ ವಿಚಾರವನ್ನು ಪುನಃ ಪ್ರಸ್ತಾಪಿಸಿದರು,
‘ಹೊಸದೊಂದು ಡ್ಯಾಮಿನ ಸಮೀಕ್ಷೆ ನಿಜವಾ? ಅದು ಯಾರ ಆಲೋಚನೆ? ನಿಜವಾಗಿ ಅದರ ಅವಶ್ಯಕತೆ ಇದೆಯಾ?’
'ಅದೇ ವಿಚಾರದ ಮೀಟಿಂಗಿನಲ್ಲಿ ಇಷ್ಟು ಹೊತ್ತಾಯಿತು, ಮಾವ. ನೀವೆಲ್ಲ ಹೊರಟ ಮೇಲೆ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ಕರೆದರು. ಆ ಸಭೆಯಲ್ಲೂ ಅವರು ಮತ್ತೆ ಸಮೀಕ್ಷೆಯ ಕುರಿತೇ ಹೇಳಿದರು. 'ಸ್ವಾತಂತ್ರ್ಯ ಗಳಿಸಿದ ಹುರುಪಿನಲ್ಲಿ ದೇಶದ ಉದ್ದಗಲಕ್ಕೂ ಹೊಸ ಆಶೋತ್ತರಗಳು ಗರಿಗೆದರಿವೆ. ಅದನ್ನು ಈಡೇರಿಸುವುದು ಸರ್ಕಾರದ ಮೊದಲ ಕರ್ತವ್ಯ. ಮತ್ತೆ ದಾಸ್ಯದ ಶೃಂಖಲೆಗೆ ಸಿಲುಕದಂತೆ ಆರ್ಥಿಕ ಸಧೃಢ ಭಾರತವನ್ನು ನಾವೀಗ ಕಟ್ಟಬೇಕಿದೆ. ಅದಕ್ಕಾಗಿ ನಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಲು ನಿಮ್ಮಂತಹ ಇಂಜಿನಿಯರುಗಳು ಸಂಕಲ್ಪ ತೊಡಬೇಕು. ಇಂತಹ ದುರ್ಗಮ ಪರಿಸರದಲ್ಲಿ ಅದ್ಭುತ ಸ್ಥಾವರವನ್ನು ಕಟ್ಟಿನಿಲ್ಲಿಸಿದ ನೀವು ಇಷ್ಟಕ್ಕೇ ತೃಪ್ತರಾಗಬಾರದು. ಮೈಸೂರು ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಸಮೃದ್ದಿ ಇರುವುದರಿಂದ ಬೆಂಗಳೂರಿನಲ್ಲಿ ಹಲವು ಬೃಹತ್ ಉದ್ಯಮಗಳನ್ನು ಸ್ಥಾಪಿಸಲು ನಮ್ಮ ನೆಚ್ಚಿನ ಪ್ರಧಾನಿ ಜವಹರಲಾಲ್ ನೆಹರು ಉದ್ದೇಶಿಸಿದ್ದಾರೆ. ಬೃಹತ್ ಕಾರ್ಖಾನೆಗಳು ಮತ್ತು ಆಣೆಕಟ್ಟುಗಳೇ ನವಭಾರತದ ದೇವಾಲಯಗಳೆಂಬುದು ಅವರ ಹೇಳಿಕೆ. ಅವುಗಳ ನಿರ್ಮಾಣಕ್ಕಾಗಿ ನಾವು ಪಂಚವಾರ್ಷಿಕ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದ್ದೇವೆ ಎಂದಿದ್ದಾರೆ. ನಮ್ಮ ದೇಶಬಾಂಧವರ ಬದುಕು ಬೆಳಕಾಗಲು, ನೀವೀಗ ಶರಾವತಿಯ ಪೂರ್ಣಶಕ್ತಿಯನ್ನು ಪಳಗಿಸುವ ಪಣತೊಡಬೇಕು. ಅದಕ್ಕಾಗಿ ಅಗತ್ಯ ಸಮೀಕ್ಷೆ ಕೈಗೊಳ್ಳಲು ಈಗಿಂದೀಗ ಸಿದ್ಧರಾಗಬೇಕು' ಎಂದು ಮತ್ತೆ ಉದ್ದದ ಭಾಷಣ ಮಾಡಿದರು. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲೆಂದೇ ಸಾಹೇಬರು ನನ್ನನ್ನು ಹಿರೇಭಾಸ್ಕರಕ್ಕೆ ಕರೆದುಕೊಂಡು ಹೋಗಿದ್ದು. ನನ್ನ ಅನ್ನಿಸಿಕೆಯನ್ನೇ ಹೇಳುವುದಾದರೆ ಹೊಸ ಸಮೀಕ್ಷೆ ಗ್ಯಾರಂಟಿ. ಇವತ್ತಿನ ಸಂದರ್ಭದಲ್ಲಿ ಹೊಸ ಯೋಜನೆ ಅತ್ಯವಶ್ಯಕ ಮಾವ' ಎಂದರು.
‘ಅಂದ್ರೆ ಹಿರೇಭಾಸ್ಕರವನ್ನೇ ವಿಸ್ತರಿಸುತ್ತೀರೋ ಅಥವಾ ಹೊಸ ಆಣೆಕಟ್ಟನ್ನೇ ಕಟ್ತೀರೋ'
'ಅದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ ಮಾವ. ಆದರೆ ಒಂದು ಮಾತು ಸತ್ಯ. ಶರಾವತಿ ವಿಶಾಲ ಮೈಸೂರು ರಾಜ್ಯದ ಶಕ್ತಿವಾಹಿನಿಯಾಗಿ ಇಡೀ ನಾಡನ್ನು ಬೆಳಗಲಿದ್ದಾಳೆ. ದೇಶದ ಆರ್ಥಿಕ ಸ್ವಾವಲಂಬನೆಯನ್ನು ಸಾಕಾರಗೊಳಿಸುವ ಇಂತಹದ್ದೊಂದು ಬೃಹತ್ ಯೋಜನೆಯನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಿಮ್ಮಂತ ಹಿರಿಯರು ತೋಳ್ತೆರೆದು ಸ್ವಾಗತಿಸಬೇಕು. ಮಾವ, ಕೆಲವು ಊರು ಸೀಮೆಗಳು ಮುಳುಗುವುದು ಸತ್ಯ. ಒಂದಿಷ್ಟು ಜನಕ್ಕೆ ಸಣ್ಣಪುಟ್ಟ ತೊಂದರೆ ಆಗುವುದೂ ನಿಜ. ಆದರೆ ದೇಶದಲ್ಲಿ ಹಬ್ಬಿರೋ ಅನಕ್ಷರತೆ, ಅನಾರೋಗ್ಯ, ಹಸಿವು, ಬಡತನಗಳನ್ನು ಬಡಿದೋಡಿಸಿ ಬಲಿಷ್ಠ ಭಾರತ ನಿರ್ಮಾಣವಾಗಬೇಕು ಅನ್ನೋದಾದ್ರೆ ಇಂತಹ ಯೋಜನೆಗಳು ಅನುಷ್ಠಾನಗೊಳ್ಳಲೇಬೇಕು. ಇನ್ನೂ ಎಷ್ಟು ದಿನ ಈ ನಮ್ಮ ಹಳ್ಳಿಗಳು ಕತ್ತಲಲ್ಲೇ ಇರಬೇಕು ಮಾವ? ಇನ್ನೂ ಎಷ್ಟು ದಿನ ತಿಗಳರ, ಕುಣುಬಿಯರ, ಹಸಲರ, ಹೊಲೆಯರ, ಉಪ್ಪಾರರ ಕೇರಿಗಳು ಈ ದಟ್ಟದರಿದ್ರ ಸ್ಥಿತಿಯಲ್ಲೇ ಮುಂದುವರೆಯಬೇಕು ಹೇಳಿ? ಅವರ ಉದ್ದಾರವೂ ನಮ್ಮ ಆದ್ಯತೆಯಾಗಬೇಕಲ್ವಾ?'
'ಅದು ಬೇರೆ ವಿಚಾರ, ಇದು ಬೇರೆ ವಿಚಾರ. ನಮ್ಮ ಗ್ರಾಮಸ್ಥರೂ ದೇಶದ ಅಭಿವೃದ್ಧಿ ಬೇಡ ಅನ್ನುವಷ್ಟು ಮೂರ್ಖರಲ್ಲ ಕೃಷ್ಣರಾವ್. ನಮಗೂ ಬಡವರ, ದೀನ ದಲಿತರ ಸಂಕಷ್ಟಗಳು ಒಂದಿಷ್ಟು ಅರ್ಥವಾಗುತ್ತೆ. ನೀವು ಎಲ್ಲ ಯೋಜನೆಗಳನ್ನು ಒಂದೇ ಪ್ರದೇಶದಲ್ಲಿ ತಂದರೆ ಅದು ಪ್ರಾದೇಶಿಕ ಅಸಮತೋಲನೆಗೆ, ಅಲ್ಲಿಯ ಪರಿಸರದ ನಾಶಕ್ಕೆ ಕಾರಣವಾಗೋದಿಲ್ವಾ? ಜೋಗದ ಜಲಪಾತದ ಕುರಿತು ಲಾರ್ಡ್ ಕರ್ಜನ್ ಸಾಹೇಬ ಏನು ಹೇಳಿದ್ದ ಅನ್ನೋದನ್ನು ನೀವೇ ಹೇಳಿದ್ರಿ. ಆಗ ನೀವು ಹೇಳಿದ್ದು ನಾವು ಕೇವಲ ಪ್ರತಿಶತ ಇಪ್ಪತ್ತರಷ್ಟು ನೀರನ್ನು ಮಾತ್ರ ಬಳಸ್ತಿದ್ದೀವಿ, ಅದರಿಂದ ಜಲಪಾತಕ್ಕೆ ಹಾನಿಯಾಗೋಲ್ಲ ಅಂತ ತಾನೇ? ಈಗ ನೀವು ಸಂಪೂರ್ಣ ನೀರು ಬಳಸಿದ್ರೆ ಆತ ಹೇಳಿದ ಹಾಗೆ ಜಲಪಾತವನ್ನು ಯಾರದೋ ಸ್ವಾರ್ಥಕ್ಕೆ ಬಲಿಕೊಟ್ಟ ಹಾಗೆ ಆಗಲ್ವ?
ಅದುವರೆಗೂ ಸುಮ್ಮನೆ ಕುಳಿತು ಮಾತು ಕೇಳಿಸಿಕೊಳ್ಳುತ್ತಿದ್ದ ಮುರಾರಿ ಭಟ್ಟ ಹೇಳಿದ,
'ಸಾಹೇಬ್ರೇ, ನಮ್ಮಲ್ಲಿ ಒಂದು ಆಕಳು ಹಾಲು ಕರೆಯುವಾಗ ಕೂಡ ನಾಲ್ಕೂ ಮೊಲೆಗಳನ್ನು ಕರೆಯೋಲ್ಲ. ಒಂದು ಮೊಲೆ ಹಾಲನ್ನು ಕರುವಿಗೆ ಅಂತ ಬಿಡ್ತೀವಿ. ಅದೆಷ್ಟು ಬಡವರಾದ್ರೂ ಸರಿ. ಆದರೆ ನಿಮ್ಮ ಮುಖ್ಯಮಂತ್ರಿಗಳು ಶರಾವತಿಯನ್ನು ಪೂರ್ತಿ ಪಳಗಿಸಬೇಕು ಅಂತಾರೆ. ಅಂದ್ರೆ ನಮ್ಮ ಜೋಗ ಜಲಪಾತ ಪೂರ್ಣ ನಾಶವಾಗಬೇಕಾ? ಮಲೆನಾಡು ಪೂರ್ತಿ ಪ್ರಳಯವಾಗಬೇಕಾ? ಮರಬಿಡಿ, ಕರೂರು, ಹನ್ನಾರ ಸೀಮೆಗಳು ಹೇಳಹೆಸರಿಲ್ಲದಂತಾಗಬೇಕಾ? ನೀವು, ಕಟ್ಟಿದ ಡ್ಯಾಮನ್ನೇ ಮುಳುಗ್ಸಿ ಮತ್ತೆ ಹೊಸ ಡ್ಯಾಮು ಕಟ್ತಾ ಇರ್ತೀರಿ. ನಾವು, ನಿಮ್ಮ ಪುಣ್ಯನಾಮಸ್ಮರಣೆ ಮಾಡ್ತ ಜಲಾಶಯಗಳಲ್ಲಿ ಮುಳುಗಿ ಮುಕ್ತರಾಗ್ಬೇಕು, ಈ ನಿಮ್ಮ ಶೋಷಣೆಗೆ ತ್ಯಾಗ ಅನ್ನೋ ಪವಿತ್ರ ಹೆಸರು ಬೇರೆ!?’ ಆತನ ಧ್ವನಿಯಲ್ಲಿ ಬೆರೆತಿದ್ದ ವ್ಯಂಗ್ಯ ಕೃಷ್ಣರಾಯರನ್ನು ಕೆರಳಿಸಿತು.
'ಮುರಾರಿ ಭಟ್ರೇ, ಮಾತಾಡಲು ಬರುತ್ತೆ ಅಂತ ಮಾತಾಡಬೇಡಿ. ನಾವೇನು ದೇಶದ ನಾಶಕ್ಕೆ ಸಂಕಲ್ಪ ತೊಟ್ಟ ವಿದ್ವಂಸಕರಲ್ಲ, ಯಾರನ್ನೋ ಮುಳುಗಿಸಿ ಸಂತೋಷಪಡೋ ವಿಘ್ನಸಂತೋಷಿಗಳೂ ಅಲ್ಲ. ನೀವೂ ಸ್ವಲ್ಪ ಯೋಚನೆ ಮಾಡಿ. ಇಷ್ಟು ದಿನವಂತೂ ಬ್ರಿಟಿಷರ ದಾಸ್ಯದಲ್ಲಿ ದಟ್ಟದರಿದ್ರರಾಗಿ ಬದುಕಿದ್ವಿ. ಇನ್ನೂ ಹಾಗೇ ಇರ್ಬೇಕಾ? ಈಗ ನಿಮ್ಮ ಪ್ರದೇಶವನ್ನೇ ನೋಡಿ. ಇಲ್ಲಿ ನೆಟ್ಟಗೆ ಒಂದು ರಸ್ತೆ ಇತ್ತಾ? ಸಂಚರಿಸೋದಕ್ಕೆ ವಾಹನಗಳು ಇದ್ವಾ? ಶಿಕ್ಷಣಕ್ಕೆ ಶಾಲೆಗಳು ಇದ್ವಾ? ರೋಗ ರುಜಿನಗಳಿಗೆ ಆಸ್ಪತ್ರೆ ಇತ್ತಾ? ಏನಿತ್ತು ಈ ಕಗ್ಗಾಡಿನ ಕುಗ್ರಾಮಗಳಲ್ಲಿ?’ ಕೃಷ್ಣರಾವ್ ತುಸು ಒರಟಾಗಿ ಹೇಳಿದರು.
ಇದುವರೆಗೂ ಚರ್ಚೆಯನ್ನು ಕೇಳಿಸಿಕೊಳ್ಳುತ್ತ ಸುಮ್ಮನೆ ಕೂತಿದ್ದ ವಸುಧಾ ಆಸ್ಪತ್ರೆಯ ವಿಚಾರದಿಂದ ವಿಚಲಿತಳಾದಳು.
'ಪ್ಲೀಸ್ ಕೃಷ್ಣಾ, ಆಸ್ಪತ್ರೆಯ ವಿಷಯ ಎತ್ತಬೇಡ. ಬೆಂಗಳೂರಲ್ಲಿ ವಾಣಿವಿಲಾಸ,ವಿಕ್ಟೋರಿಯಾದಂತ ದೊಡ್ಡ ಆಸ್ಪತ್ರೆಗಳು ಇದ್ವು. ದೊಡ್ಡ ದೊಡ್ಡ ಖಾಸಗಿ ವೈದ್ಯರೂ ಇದ್ರು. ಅಷ್ಟಿದ್ದೂ ನಿನ್ನ ಹೆಂಡ್ತಿ ಮತ್ತೆ ಬಸಿರಾದ್ರೆ ಸತ್ತೇ ಹೋಗ್ತಾಳೆ ಅಂತ ಭಯ ಬಿತ್ತಿ ವಂಶಾಭಿವೃದ್ಧಿಗೇ ಪೂರ್ಣವಿರಾಮ ಹಾಕಿದ್ರು. ನೀನು ಹೇಳ್ತಿರೂದು ನಿಜ. ದೇಶ ಅಭಿವೃದ್ಧಿಯಾಗಬೇಕು. ಬಡವರ ಉದ್ದಾರವಾಗಬೇಕು. ಹಾಗಂತ ಭಾರಂಗಿಯಂತಹ ಸಮೃದ್ದ ನೆಲ ಉಳೀಬಾರ್ದಾ? ಇಲ್ಲಿಯ ಸಂಸ್ಕೃತಿ, ಪರಂಪರೆ, ಪದ್ದತಿಗಳು ನಾಶವಾಗಬೇಕಾ? ಎಲ್ಲ ಯೋಜನೆಗಳೂ ಇಲ್ಲೇ ಅವತರಿಸಬೇಕಾ?’
ಆಕೆಯ ಪ್ರಶ್ನೆ ಕಟುವಾಗಿತ್ತು. ಧ್ವನಿಯೂ ಗಡುಸಾಗಿತ್ತು. ತಮ್ಮ ಚರ್ಚೆಯ ನಡುವೆ ವಸುಧಾ ಮಧ್ಯ ಪ್ರವೇಶಿಸುವಳೆಂದು ಕೃಷ್ಣರಾವ್ ಊಹಿಸಿರಲಿಲ್ಲ. ಅವರು ಒಂದು ಕ್ಷಣ ದಂಗಾದರು. ಆಕೆಯ ಮಾತು ಮುರಾರಿಯನ್ನು ಉತ್ತೇಜಿಸಿತು. ಆತ ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳತೊಡಗಿದ.
'ನಮ್ಮಲ್ಲಿ ರಸ್ತೆಗಳಿರಲಿಲ್ಲ, ನಿಜ. ಆದ್ರೆ ದಾರಿಗಳಿದ್ವು. ನಮ್ಮಲ್ಲಿ ಶಾಲೆಗಳಿರಲಿಲ್ಲ, ಆದ್ರೆ ಶಿಕ್ಷಣ ಇತ್ತು. ನಮ್ಮಲ್ಲಿ ಆಸ್ಪತ್ರೆ ಇರಲಿಲ್ಲ, ಆದರೆ ವೈದ್ಯೋಪಚಾರ ಇತ್ತು. ನಮ್ಮಲ್ಲಿ ಸೇತುವೆ ಇರಲಿಲ್ಲ, ಆದ್ರೆ ಸಂಪರ್ಕ ಇತ್ತು. ವಿದ್ಯುತ್ ಇರಲಿಲ್ಲ, ಆದ್ರೆ ಬೆಳಕಿತ್ತು. ಸೌಲಭ್ಯಗಳು ಇರಲಿಲ್ಲ, ಆದ್ರೆ ನೆಮ್ಮದಿ ಇತ್ತು. ನಮ್ಮಲ್ಲಿ ದೋಣಿಯಿತ್ತು. ದೋಣಿಗಣಪನಂತಹ ಗುಣವಂತರು ಇದ್ದರು. ಈಗ ನಿಮ್ಮಿಂದಾಗಿ ದೋಣಿಯೂ ಇಲ್ಲ, ಗಣಪನೂ ಇಲ್ಲ' ಎಂದವನೇ ಗಟ್ಟಿಯಾಗಿ ಅಳುತ್ತ,
'ಯಾಕೆ ಹೇಳಿ? ನೀವು ಅವನನ್ನು ಕೊಂದ್ರಿ. ನಿಮ್ಮ ಪ್ರಾಜೆಕ್ಟ್ ಅವನನ್ನು ಕೊಂದು ಹಾಕ್ತು. ನಾಳೆ, ನೀವು ಉಪ್ಸದ ಗಣೇಶಯ್ಯನನ್ನು ಕೊಲ್ತೀರಿ. ವಟ್ಟಕ್ಕಿ ನ್ಯಾಮಯ್ಯನನ್ನು ಕೊಲ್ತೀರಿ, ಐತೂಮನೆ ಪುಟ್ಟಯ್ಯನನ್ನು ಕೊಲ್ತೀರಿ. ಕೊನೆಗೆ ನಮ್ಮ ಭಾರಂಗಿ ದತ್ತ…..ಬೇಡ. ಹೌದು, ನೀವು ವಿದ್ವಂಸಕರೇ. ನಮ್ಮ ಸಂಸ್ಕೃತಿಯನ್ನು ನಾಶಮಾಡಲೆಂದೇ ಬಂದವರು. ಅನುಮಾನವೇ ಇಲ್ಲ. ನಮ್ಮ ಕಾನಲ್ಲಿರೋ ಇಂಬಳಗಳಾದರೂ ತಮ್ಮ ಹೊಟ್ಟೆ ತುಂಬಿದಮೇಲೆ ನೆತ್ತರು ಹೀರೋದನ್ನು ಬಿಟ್ಟು ಉದುರಿ ಬೀಳ್ತಾವೇ. ಆದ್ರೆ ನೀವು? ಮತ್ತೆ ಮತ್ತೆ ನೆತ್ತರು ಹೀರಲು ಹೊಸ ಸಮೀಕ್ಷೆ ಹುಟ್ಟು ಹಾಕ್ತೀರಿ. ನಮ್ಮ ರಕ್ತ ಪೂರ್ತಿ ಇಂಗಿ, ನಾವು ಸಾಯೋ ತನಕ ಹೀರ್ತಾನೇ ಇರ್ತೀರಿ, ನಿಮ್ಮ ಹೊಟ್ಟೆ ಯಾವತ್ತೂ ತುಂಬೋದಿಲ್ಲ. ಅದಕ್ಕೆ ತೀರದ ರಕ್ತದಾಹ’ ಆವೇಶದಲ್ಲಿ ಕುಸಿದು ಕುಳಿತು ನೆಲವನ್ನು ಗುದ್ದಿ ಅಳುತ್ತ ಹೆಗಡೆಯವರತ್ತ ತಿರುಗಿ,
'ಹೆಗಡೇರೇ ನೀವು ತಪ್ಪು ಮಾಡಿಬಿಟ್ರಿ. ಇವರನ್ನೆಲ್ಲ ಆದರಿಸಿ ಒಳಗೆ ಬಿಟ್ಟುಕೊಂಡ್ರಿ. ಅಳೆಯೋಕೆ ಬಂದ ಈ ಜನ ಆಳೋದಕ್ಕೆ ಶುರುಮಾಡ್ದ. ನಮ್ಮನ್ನು ಅಳಿಸೋದಕ್ಕೆ ಶುರುಮಾಡ್ದ. ನಿಮಗೇ ದೇಶೋದ್ಧಾರದ ಉಪದೇಶ ಕೊಡೋ ಮಟ್ಟಕ್ಕೆ ಬೆಳೆದ. ಇವರದ್ದು ಕಬಂಧ ಬಾಹು. ಯೋಜನ ಬಾಹು. ಸಿಕ್ಕಿದ್ದನ್ನು ಸ್ವಾಹಾ ಮಾಡುವ ಸ್ವಾರ್ಥ ಇವರಿಗೆ. ಜೋಗ ಪಟ್ಟಣವಾದಾಗ ಜಗತ್ಪ್ರಳಯ ಅಂತ ಆನು ಅಂದಿನಿಂದ ಹೇಳ್ತಾ ಬಂದಿ. ನೀವು ನಂಬಿದ್ರಿಲ್ಲೆ. ಈಗ ನೋಡಿ, ನಮ್ಮ ಜೋಗಕ್ಕೆ ನಾವು ಹೋಗೋದಕ್ಕೆ ಇವರಪ್ಪನ ಅಪ್ಪಣೆ ತಗಳಕ್ಕು. ಹುಟ್ಟಿದ ಊರನ್ನು ಬಿಟ್ಟುಹೋಗೋ ಸಂಕಟ ಇವರಿಗೆಂತ ಗೊತ್ತಿದ್ದು? ಮುಳುಗಡೆ ಆದೋರು ಕಣ್ಣೀರು ಸುರಿಸ್ತ ಊರು ತೊರೆಯೋದನ್ನ ನೆನೆಸಿಕ್ಯಂಡ್ರೆ ಹೊಟ್ಟೆಯಲ್ಲಿ ಬೆಂಕಿ ಬೀಳ್ತು. ಕಣ್ಣಲ್ಲಿ ರಕ್ತ ಸುರೀತು. ಇನ್ನು ಈಗ ಮತ್ತೊಂದು ಡ್ಯಾಮು, ಮತ್ತಷ್ಟು ಮುಳುಗಡೆ. ಇದು ಹುಲಿ ಸವಾರಿ ಹೆಗಡೇರೇ, ಹಸಿದ ಹುಲಿ ಸವಾರಿ! ಸವಾರಿ ಹೊರಟ ಮ್ಯಾಲೆ ಇಳಿಯೋ ಹಾಂಗಿಲ್ಲೆ. ಇದು ಸತ್ಯ, ಪರಮ ಸತ್ಯ’ ಎಂದು ಮತ್ತಷ್ಟು ಜೋರಾಗಿ ಅಳತೊಡಗಿದ.
ಕೃಷ್ಣರಾವ್ ದಿಗ್ಭ್ರಾಂತರಾಗಿ ಅವನನ್ನೇ ನೋಡುತ್ತ ಕೂತಿದ್ದರು. ಅವನ ಅವತಾರ ಕಂಡು ಅವರಿಗೆ ಆಘಾತವಾಗಿ, ಏನು ಮಾಡಬೇಕೆಂದು ತಿಳಿಯದೇ ಅಪ್ರತಿಭರಾಗಿ ಕುಳಿತುಬಿಟ್ಟರು. ಯಾವತ್ತೂ ಅವನನ್ನು ತಡೆಯುತ್ತಿದ್ದ ತುಂಗಕ್ಕಯ್ಯ ಕೂಡ ಇವತ್ತು ಸುಮ್ಮನಾಗಿದ್ದಳು. ಅವಳಿಗೂ ಉರಿ ತಟ್ಟಿತ್ತು. ಕೊನೆಗೆ ಗಣೇಶ ರತ್ನಕ್ಕನಿಗೆ ಹೇಳಿ ಒಂದು ಚೊಂಬು ನೀರು ತರಿಸಿ ಆತನಿಗೆ ಕುಡಿಯಲು ಕೊಟ್ಟು ಮೆತ್ತಿಗೆ ಕರೆದುಕೊಂಡು ಹೋಗಲು ಭೀಮಯ್ಯನಿಗೆ ಹೇಳಿದ. ಅವನು ಹೊರಟಮೇಲೆ ದತ್ತಪ್ಪ ಹೇಳಿದರು,
ಕೃಷ್ಣರಾಯರೇ, ಇವತ್ತು ನಿಮಗೆ ಸಂತೋಷದ ದಿನವಾಗಬೇಕಿತ್ತು. ನಿಮಗೆ ಸನ್ಮಾನವಾಗಿತ್ತು. ನಿಮ್ಮದೇ ವಿದ್ಯುತ್ ಸ್ಥಾವರದ ಲೋಕಾರ್ಪಣೆಯೂ ಆಗಿತ್ತು. ಆದರೆ ಸರ್ಕಾರ ಇಂದೇ ನಮ್ಮ ಸರ್ವನಾಶದ ಯೋಜನೆ ಘೋಷಣೆ ಮಾಡಿಬಿಡ್ತು. ಉತ್ತರೆಯ ವಿವಾಹೋತ್ಸವದ ಸಂಭ್ರಮದ ಘಳಿಗೆಯಲ್ಲೇ ಮಹಾಯುದ್ದದ ಮುಹೂರ್ತವೂ ನಿಶ್ಚಯವಾದಂತಾಯಿತು. ಇರಲಿ ಮುಂದೇನಾಗುತ್ತೋ, ಅದು ನಿಮ್ಮ ಕೈಯ್ಯಲ್ಲೂ ಇಲ್ಲ, ನಮ್ಮ ಕೈಯ್ಯಲ್ಲೂ ಇಲ್ಲ. ನಾಳೆ ಮಾತನಾಡೋಣ, ಮಲಗಿ. ವಸುಧಾ, ಮಲಗಮ್ಮ' ಎಂದು ಹೇಳಿ ತಾವು ಮಲಗಲು ಹೊರಟರು.
ಎಲ್ಲರೂ ಮಲಗಿ ದೀಪವನ್ನು ಆರಿಸುತ್ತಿದ್ದಂತೆ ವಸುಧಾ ಕೃಷ್ಣರಾವ್ ಬಳಿ ತಗ್ಗಿದ ಸ್ವರದಲ್ಲಿ ಕೇಳಿದಳು,
'ಕೃಷ್ಣಾ, ಹಾಗೇಕೆ ಮಾತಾಡಿದೆ? ಪಾಪ, ಅವರಿಗೆ ತಮ್ಮ ನೆಲ, ನೆಲೆ, ಪರಂಪರೆ, ಪರಿಸರ ನಾಶವಾಗುತ್ತೆ ಅಂತ ತುಂಬಾ ಸಂಕಟವಾಗಿತ್ತು. ಅದು ಸಹಜ. ನೀವೂ ಪ್ರಾಜೆಕ್ಟ್ ಮಾಡೋದು ನಿಮ್ಮ ಸ್ವಂತಕ್ಕಲ್ಲ, ದೇಶದ ಅಭಿವೃದ್ಧಿಗಾಗಿ ಅನ್ನೋದೂ ಸುಳ್ಳಲ್ಲ. ಆದ್ರೆ ನಿಮ್ಮ ಪ್ರಾಜೆಕ್ಟುಗಳಿಂದ ದುಷ್ಪರಿಣಾಮಗಳೇ ಇಲ್ಲ ಅಂತ ಹಠ ತೊಡೋದು ಎಷ್ಟು ಸರಿ? ತೊಂದರೆಗೀಡಾದೋರು ಅದನ್ನು ವಿರೋಧಿಸುವುದು ಸಹಜ. ಅದು ಅವರ ಹಕ್ಕು. ತಮ್ಮ ಬದುಕೇ ನಾಶವಾಗುತ್ತೆ ಅನ್ನೋ ಸಂದರ್ಭದಲ್ಲೂ ದೇಶಾಭಿವೃದ್ಧಿಯ ದೃಷ್ಟಿಯಿಂದ ಅದನ್ನು ಸಹಿಸಿಕೊಳ್ಳಬೇಕು ಅನ್ನೋದು ನನ್ನ ದೃಷ್ಟಿಯಲ್ಲಿ ಕ್ರೌರ್ಯ. ಅದನ್ನೇ ತಾನೆ ನಾವು ಶೋಷಣೆ ಅನ್ನೋದು. ದೇಶದಲ್ಲಿ ನಿಮ್ಮಂತ ನಿಃಸ್ವಾರ್ಥಿಗಳೂ ಇರಬಹುದು, ಕೃಷ್ಣಾ. ತಮ್ಮದೆಲ್ಲವನ್ನೂ ತ್ಯಾಗ ಮಾಡಿ ದೇಶ ಕಟ್ಟುವ ನಿರ್ಲಿಪ್ತರೂ ಇರಬಹುದು. ಆದರೆ ಎಲ್ಲರೂ ಕಡ್ಡಾಯವಾಗಿ ತ್ಯಾಗ ಮಾಡಲೇಬೇಕು ಅಂದ್ರೆ, ಅದು ಅನ್ಯಾಯ ಅಲ್ವಾ? ಈ ಯೋಜನೆಗೆ ನೀನೊಬ್ಬನೇ ಹೊಣೆಗಾರ ಅನ್ನೋ ದಾಟಿಯಲ್ಲಿ ಯಾಕೆ ವಾದಮಾಡಬೇಕು? ದೇಶದ ಪ್ರಗತಿ ಅನ್ನೋದು ನಿನ್ನೊಬ್ಬನ ಸ್ವತ್ತ?'
ಕೃಷ್ಣರಾವ್ ಸ್ವಲ್ಪ ಹಿಂದಕ್ಕೆ ಜಾರಿ ದಿಂಬಿಗೆ ಒರಗಿ ಕುಳಿತು ಹೇಳಿದರು,
'ಮತ್ತೆ ಆ ಮೂರ್ಖ, ಅರೆಮರಳು ಭಟ್ಟ, ನಾವು ಜಗತ್ತಿನ ನಾಶಕ್ಕಾಗಿ ಜನ್ಮ ತಾಳಿದ ರಾಕ್ಷಸರು ಅನ್ನೋ ಹಾಗೆ ಮಾತಾಡಿದರೆ? ನಾವು ರಕ್ತ ಹೀರೋ ಇಂಬಳಗಳಂತೆ! ದೇಶದ ಕಷ್ಟ ಆತನಿಗೇನು ಗೊತ್ತು. ಸುಮ್ಮನೇ ಪೂಜೆ ಮಾಡಿಕೊಂಡು ಊರೂರು ತಿರುಗಿ ಬಾಯಿಗೆ ಬಂದಿದ್ದನ್ನು ಬೊಗಳಿದರೆ ಅದು ಸಮಾಜ ಸೇವೆಯಲ್ಲ’. ಪಿಸುಮಾತಿನಲ್ಲಿ ಹೇಳಿದರೂ ಸ್ವರ ಗಡುಸಾಗಿತ್ತು. ಅವರ ಒರಟು ಮಾತಿಗೆ ವಸುಧಾ ಕೆರಳಿದಳು.
'ಕೃಷ್ಣಾ ಪ್ಲೀಸ್, ಏನಾಗಿದೆ, ನಿನಗೆ? ಸನ್ಮಾನ ಸಿಕ್ಕಿದ ಪ್ರತಿಷ್ಟೆಗೋ ಅಥವಾ ಸರ್ ಎಂ ವಿಯಂತವರ ಕನಸು ನನಸು ಮಾಡಿದೆ ಅನ್ನೋ ಗರ್ವಕ್ಕೋ ನಿನ್ನ ಅಹಂಕಾರ ನೆತ್ತಿಗೆ ಹತ್ತಿದೆ. ನಿನ್ನ ಗರ್ವ ಸೌಜನ್ಯದ ಗಡಿ ದಾಟ್ತಿದೆ. ನೀನು ಮುರಾರಿ ಭಟ್ಟರನ್ನು ಮೂರ್ಖ, ಅರೆಹುಚ್ಚ ಅಂದ್ಯ? ಅವರ ಬಗ್ಗೆ ನಿನಗೇನು ಗೊತ್ತು? ಕೃಷ್ಣ, ನಿನ್ನ ಸಹನೆ, ವಿವೇಚನೆ, ಸಂಯಮಗಳೆಲ್ಲ ಎಲ್ಲಿ ಕಳೆದು ಹೋದ್ವು? ನಾನು ಎಷ್ಟು ದಿನ ದೇವ್ರೇ ಕೃಷ್ಣನ ಸಹನೆಯನ್ನು ನನಗ್ಯಾಕೆ ಕೊಟ್ಟಿಲ್ಲ ಅಂತ ಕೇಳ್ತಿದ್ದೆ. ಆದ್ರೆ ಇವತ್ತು ನಿನ್ನ ವರ್ತನೆ ನನಗೆ ಜಿಗುಪ್ಸೆ ತರ್ತಿದೆ. ನಿನ್ನ ಅಸಹನೆ ಅಸಹ್ಯ ಅನ್ನಿಸ್ತಿದೆ. ಬೆಳಿಗ್ಗೆ ಸಭೆ ಮುಗಿದ ತಕ್ಷಣ ದತ್ತಪ್ಪ ಮಾವನೊಡನೆ ನಿನ್ನ ವರ್ತನೆ ಎಷ್ಟು ಬಾಲಿಶವಾಗಿತ್ತು, ಗೊತ್ತಾ? ಕೃಷ್ಣಾ, ನೀನು ಮುರಾರಿ ಭಟ್ಟರನ್ನು ಏನಂದ್ಕೊಂಡಿದ್ದೀಯ? ಅವರಿಗೆ ಕಷ್ಟ, ಹಸಿವು, ಯಾತನೆ ಗೊತ್ತಿಲ್ಲ ಅನ್ಕೊಂಡಿದ್ದೀಯ? ನೀನು ಇಂಜಿನಿಯರಿಂಗ್ ಓದುವ ಕಾಲದಲ್ಲೇ ಮುರಾರಿ ಭಟ್ಟರು ಡ್ಯಾಮನ್ನು ಕಂಡವರು! ಯಾಕೆ ಕೃಷ್ಣಾ, ಈ ಕಲ್ಲು, ಕಟ್ಟೆ, ಕ್ವಾರಿ,ಲಾರಿಗಳ ಜೊತೆಗಿದ್ದೂ ಇದ್ದು ನಿನ್ನ ಹೃದಯವೂ ಕಲ್ಲಾಗ್ತಿದೆಯೋ ಹೇಗೆ?'
ಕೃಷ್ಣರಾವ್ ಮುಂದೆ ಮಾತಾಡಲಿಲ್ಲ. ಅವರು ಧನ್ಯತೆಯ ಭಾವದಲ್ಲಿ ಬೀಗುತ್ತಿದ್ದದ್ದು ನಿಜ. ಉನ್ಮಾದದ ಅಲೆಯಲ್ಲಿ ತೇಲುತ್ತಿದ್ದುದೂ ಸತ್ಯ. ಶರಾವತಿ ಯೋಜನೆಯ ಮುಂದಿನ ಹಂತ ಆರಂಭವಾಗುತ್ತಿದೆಯೆಂಬುದು ಅವರಿಗೊಂದು ಹೆಗ್ಗಳಿಕೆಯ ವಿಚಾರವಾಗಿತ್ತು. ಅದರಿಂದ ಇಡೀ ಮೈಸೂರು ರಾಜ್ಯ ಅಭಿವೃದ್ಧಿಯ ನವಮನ್ವಂತರಕ್ಕೆ ತೆರೆದುಕೊಳ್ಳುವುದೆಂಬ ಗರ್ವ ಅವರದಾಗಿತ್ತು.
ವಿಶ್ರಾಂತರಾಗುವ ಮುನ್ನ ಫೋರ್ಬ್ಸ್ ಹೇಳಿದ್ದ ಮಾತು ಅವರಿಗೆ ಮತ್ತೆ ಮತ್ತೆ ನೆನಪಾಗುತ್ತಿತ್ತು. ‘ಮಿಸ್ಟರ್ ರಾವ್ ಹಿಯರ್ ಆಫ್ಟರ್ ಜೋಗ್ ವಿಲ್ ಬಿ ಇವರ್ ಚೈಲ್ಡ್. ಯು ಹ್ಯಾವ್ ಟು ಟೇಕ್ ಇಟ್ ಫಾರ್ವಾರ್ಡ್ ವಿತ್ ಕೇರ್ ಅಂಡ್ ಲವ್’. ಹೌದು, ತಾನಿದನ್ನು ಮುಂದುವರೆಸಬೇಕು. ಇದು ತನ್ನ ಶಿಶು. ಇದು ತನಗೆ ಸರ್ ಎಂ ವಿ, ಕಡಾಂಬಿ, ಫೋರ್ಬ್ಸ್ ಮುಂತಾದ ಹಿರಿಯರು ನೀಡಿದ ದತ್ತು. ಇದಕ್ಕೆ ತಾನೇ ವಾರಸುದಾರ!
‘ಶರಾವತಿಯ ಎರಡನೆಯ ಹಂತ ಅನುಷ್ಠಾನಕ್ಕಿಳಿದರೆ ಸರ್ ಎಂ ವಿಯಂತಹ ಹಿರಿಯರ ದೂರದೃಷ್ಟಿ ಕೃತಿಗಿಳಿದು ಅವರ ಕನಸು ಕೈಗೂಡಿದಂತಾಗುವುದು. ಅಂತಹ ಅನುಪಮ ಸಾಧನೆಗೆ ಎಲ್ಲರೂ ಎಲ್ಲ ಬಗೆಯ ತ್ಯಾಗಕ್ಕೂ ಸಿದ್ಧರಾಗಲೇಬೇಕು. ಅದರಲ್ಲಿ ತಪ್ಪೇನು? ಒಬ್ಬ ಮುರಾರಿ ಭಟ್ಟ ಕೂಗಾಡಿದರೇನು? ಒಬ್ಬರು ದತ್ತಪ್ಪ ಹೆಗಡೆ ಕೊರಗಿದರೇನು? ಒಂದೆರಡು ಸೀಮೆ ಮುಳುಗಿದರೇನು? ಎಂಬುದು ಕೃಷ್ಣರಾವ್ ಯೋಚನೆಯಾಗಿತ್ತು.
ವಸುಧಾಳಿಗೆ ನಿಜಕ್ಕೂ ನೋವಾಗಿತ್ತು. ಅವಳು ಕೃಷ್ಣರಾಯರ ಮನಸ್ಥಿತಿಯ ಕುರಿತು ಯೋಚಿಸಿದಷ್ಟೂ ಆಕೆಯ ಸಂಕಟ ಹೆಚ್ಚುತ್ತಲೇ ಹೋಗತೊಡಗಿತ್ತು. ಸರ್ ಎಂ ವಿ, ಕಡಾಂಬಿ, ಮಿರ್ಜಾರಂತಹ ಮಹನೀಯರ ಆದರ್ಶಪಾಲನೆಗಾಗಿ ತನ್ನ ವೈಯುಕ್ತಿಕ ಬದುಕಿನ ಕಷ್ಟನಷ್ಟಗಳನ್ನು ಲೆಕ್ಕಿಸದೇ ಶ್ರದ್ಧೆ, ಮತ್ತು ಪ್ರಾಮಾಣಿಕತೆಯಿಂದ ಮೂರು ದಶಕಗಳ ಕಾಲ ಜೋಗದಂತಹ ಕಠಿಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಕೃಷ್ಣ ಈ ಸಂದರ್ಭದಲ್ಲಿ ಒಂದಿಷ್ಟು ಗರ್ವ ಪಡುವುದು ಸಹಜವೇನೋ? ಅಪೂರ್ವ ಸಾಧನೆಯ ಸಾರ್ಥಕ ಘಳಿಗೆಯಲ್ಲಿ ತುಸು ಹೆಮ್ಮೆಯಿಂದ ಬೀಗುವುದು ದೊಡ್ಡ ತಪ್ಪಲ್ಲ. ಆದರೂ ಈ ಮಟ್ಟದ ಉದ್ದಟತನದ ಅಗತ್ಯವಿತ್ತೇ? ತಮ್ಮ ಬದುಕಿಗೆ ಮರುಜೀವ ಕೊಟ್ಟ ಭಾರಂಗಿ ಅವನಿಗೆ ಏನೂ ಅಲ್ಲವೇ? ಮುರಾರಿ ಭಟ್ಟರು ಹೇಳಿದಂತೆ ಈ ಯೋಜನೆಗಳು ಇಲ್ಲಿನ ಪರಂಪರೆ, ಪರಿಸರಗಳನ್ನು ನುಂಗಿ ನೀರು ಕುಡಿಯುವುದೇ ಹೌದಾದರೆ ಅದು ಪ್ರಗತಿಯೇ? ದೋಣಿಗಣಪ ಸಾಯಲು ಈ ಯೋಜನೆಯೇ ಕಾರಣ ಎಂಬುದು ಒಂದರ್ಥದಲ್ಲಿ ನಿಜವಲ್ಲವೇ? ಅವರು ಹೇಳಿದಂತೆ ಗಣಪ, ನ್ಯಾಮಯ್ಯ, ಪುಟ್ಟಯ್ಯ ಗಣೇಶಯ್ಯ, ದತ್ತಪ್ಪ ಹೆಗಡೆ...ಹೀಗೆ ಈ ನೆಲದ ಗಟ್ಟಿಬೀಜಗಳೆಲ್ಲ ನಾಶಗೊಂಡರೆ ಈ ಮಣ್ಣು ಬಂಜೆಯಾಗುವುದಿಲ್ಲವೇ? ತನಗೆ ಪುನರ್ಜನ್ಮ ಕೊಟ್ಟ ಈ ಪುಣ್ಯಭೂಮಿ ಬಂಜರಾಗಬೇಕೇ? ಇಲ್ಲಿಯ ಸಂಸ್ಕೃತಿ ನಾಶವಾಗಬೇಕೇ?
ಆಕೆಗೆ ತನ್ನ ಬಂಜೆತನದ ದಿನಗಳು ನೆನಪಾದವು. ತುಂಗಕ್ಕಯ್ಯನ ಅಕ್ಕರೆ, ದತ್ತಪ್ಪ ಹೆಗಡೆಯವರ ವಾತ್ಸಲ್ಯ, ಶರಾವತಿಯ ಅಕಳಂಕ ಪ್ರೇಮ, ರತ್ನಕ್ಕನ ಸಹಜ ಪ್ರೀತಿ ಒಂದೊಂದೂ ನೆನಪಾದವು. ಪಕ್ಕಕ್ಕೆ ತಿರುಗಿ ಮಗಳ ಮುಖ ಸವರಿದಳು. ವಸುಧೆ ರಸ,ಗಂಧ, ಫಲಪುಷ್ಪಗಳಿಲ್ಲದ ಬಂಜರು ಬದುಕಿನಿಂದ ಮರಳಿ ಸಮೃದ್ದಿಗೆ ಮರಳಬೇಕೆಂದರೆ ಇಂತಹ ಪರಂಪರೆ ಉಳಿಯಬೇಕಲ್ಲವೇ?
ಛೇ! ಈ ಕಗ್ಗಾಡಿನ ಕುಗ್ರಾಮಗಳಲ್ಲಿ ಏನಿತ್ತು ಅಂದುಬಿಟ್ಟನಲ್ಲ, ಕೃಷ್ಣ? ಏನಿರಲಿಲ್ಲ ಇಲ್ಲಿ? ಈ ನೆಲದ ನೆಮ್ಮದಿ ನಾಶವಾಗಲು ತಮ್ಮ ಪ್ರಾಜೆಕ್ಟ್ ಕಾರಣವೆಂಬ ಕಿಂಚಿತ್ ಪಶ್ಚಾತ್ತಾಪ ಇವನಿಗಿಲ್ಲವಲ್ಲ ಎಂದಾಕೆ ತುಂಬ ನೊಂದುಕೊಂಡಳು. ಆತನ ಮಾನಸಿಕ ಸ್ವಾಸ್ಥ್ಯ ಕದಡಿಹೋಗಿದೆ. ಆತ ಉನ್ಮತ್ತನಾಗಿದ್ದಾನೆ. ಇವತ್ತು ಆತನೊಡನೆ ಮಾತನಾಡಬಾರದು. ಇದು ವಾದ ಮಾಡುವ ಸಂದರ್ಭವಲ್ಲ ಎಂದು ಯೋಚಿಸಿ, ಪುನರ್ವಸುವಿನ ಹಣೆಗೊಂದು ಮುತ್ತುಕೊಟ್ಟು, ಹೊದಿಕೆ ಎಳೆದುಕೊಂಡು ಮಲಗಿಬಿಟ್ಟಳು.
No comments:
Post a Comment