ಬರುವ ವಾರ ಬಗ್ಗಿ ಬಂಡಿಗೆ ಸುಲ್ತಾನನನ್ನೆ ಕಟ್ಟಿಕೊಂಡು ಈ ಕ್ಯಾಂಪಿನ ಮನೆಗೆ ಬಂದು ತನಗೆ ಇನ್ನು ಮೂರು ತಿಂಗಳಿಗೆ ಬಳಕೆಗೆ ಬೇಕಾಗುವ ಸಾಮಾನು ಸರಂಜಾಮುಗಳನ್ನ ಅಲ್ಲಿಂದ ಸಾಗಿಸಿಬಿಡಲು ನಿರ್ಧರಿಸಿದ. ಇದರಿಂದ ಆ ಸಾಮಾನುಗಳು ಹಾಳಾಗಿ ಕೊಳೆತು ವ್ಯರ್ಥವಾಗಿ ಮಣ್ಣು ಸೇರೂದೂ ಸಹ ತಪ್ಪುತ್ತದೆˌ ಜೊತೆಗೆ ತನಗೆ ಈ ಭೀಕರ ವಾತಾವರಣದಲ್ಲಿ ಅಪಾಯವನ್ನ ಮೈಮೇಲೆಳೆದುಕೊಳ್ಳುತ್ತಾ ಅಲ್ಲಿಂದ ಇನ್ನೂ ಹದಿನೇಳು ಮೈಲಿ ಪಟ್ಟಣಕ್ಕೆ ಹೋಗಿ ಮತ್ತೆ ಅಷ್ಟೆ ದೂರ ಮರುಪ್ರಯಾಣ ಮಾಡಿಯೂ ಸಹ ಗುಲಗಂಜಿಯಷ್ಟು ಸಾಮಾನು ಸರಂಜಾಮುಗಳನ್ನ ಅಲ್ಲಿಂದ ಪದೆ ಪದೆ ಹೊತ್ತು ತರುವ ಸಂಕಷ್ಟವೂ ತಪ್ಪುತ್ತದೆ. ಇನ್ನು ಬಳಸಿದ ವಸ್ತುಗಳ ಸೂಕ್ತ ಮೌಲ್ಯವನ್ನ ಪರಿಸ್ಥಿತಿಯನ್ನ ಅರುಹಿ ಅನಂತರ ಗುತ್ತಿಗೆದಾರನಿಗೆ ನೇರವಾಗಿ ಪಾವತಿಸಿದರಾಯಿತು. ಬರುವ ವಾರ ಪಟ್ಟಣದಲ್ಲಿ ಕೊಂಡ ಸಾಮಾನುಗಳನ್ನ ಮನೆ ಬಾಗಿಲಿಗೆ ಮುಟ್ಟಿಸಲು ಬರುವ ಗೋಪಿಗೆ ಕಟ್ಟು ಬಿಚ್ಚದೆ ಅವೆಲ್ಲವನ್ನೂ ಹಿಂದೆ ಕೊಂಡೊಯ್ದು ಸ್ವಂತಕ್ಕೆ ಉಪಯೋಗಿಸಲು ಹೇಳಬೇಕು. ಇಲ್ಲಿರುವ ಹೆಚ್ಚುವರಿ ವಸ್ತುಗಳಲ್ಲಿ ಕೆಲವನ್ನು ಅವನ ಕುಟುಂಬದವರ ಬಳಕೆಗೂ ಕಟ್ಟಿ ಕೊಟ್ಟು ಕಳಿಸಬೇಕು ಎಂದು ಮನದೊಳಗೆ ಹಂಚಿಕೆ ಹಾಕಿದ. ಅವರಿಬ್ಬರು ಹಾಗೆ ಕೊಂಡೊಯ್ದರೂ ಸಹ ಇನ್ನಷ್ಟು ಆಹಾರ ಪದಾರ್ಥ ಖಂಡಿತವಾಗಿ ಅಲ್ಲೆ ಉಳಿದು ವ್ಯರ್ಥವಾಗಲಿತ್ತು. ಅಷ್ಟೊಂದು ಅಸಾಧ್ಯ ದಿನಸಿಯ ದಾಸ್ತಾನು ಅಲ್ಲಿತ್ತು.
ಹಾಳಾಗಬಹದಾಗಿದ್ದ ಆಹಾರ ಖಾದ್ಯಗಳನ್ನ ಕೊಂಡು ಬಳಸಿದ ಬಗ್ಗೆ ಹಣ ಪಾವತಿಸಿ ಸಮಜಾಯಷಿ ಕೊಟ್ಟರೆ ಗುತ್ತಿಗೆದಾರನೂ ಸಹ ಗೊಣಗುಟ್ಟಲಾರ. ಅಲ್ಲಿಗೆ ಸ್ವಾಮಿ ಕಾರ್ಯ ಸ್ವಕಾರ್ಯ ಎರಡೂ ಸಾಧಿಸಿದಂತಾಗುತ್ತದೆˌ ಎಂದವನು ಹಂಚಿಕೆ ಹೂಡಿದ. ಸದ್ಯ ಅವನಿಗೆ ಬೇಕಾಗಿದ್ದುದು ಚಹಾ ಕಾಯಿಸಲು ಕೈ ಪಾತ್ರೆˌ ಆದರದು ಅಲ್ಲಿರಲಿಲ್ಲ. ಹೀಗಾಗಿ ಹಸಿಯುತ್ತಿದ್ದ ಹೊಟ್ಟೆಯನ್ನ ತಣಿಸಲು ಚಹಾದ ಜೊತೆಗೆ ತಿನ್ನಲು ನಾಲ್ಕಾರು ಉಪ್ಪು ಬಿಸ್ಕತ್ತುಗಳನ್ನ ನಂಚಿಕೊಳ್ಳಲು ತೆಗೆದುಕೊಂಡು ಮೊದಲಿನಂತೆ ಆ ನೆಲಮಾಳಿಗೆಯ ಬಾಗಿಲನ್ನ ಭದ್ರ ಪಡಿಸಿ ಮೇಲೆ ಬಂದು ಮತ್ತೆರಡು ಕೋಣೆಯನ್ನ ಹುಡುಕಾಡಿದ. ಪುಣ್ಯಕ್ಕೆ ಅಲ್ಲಿ ಕೆಲವು ಪಾತ್ರೆ ಪಗಡಗಳು ಸಿಕ್ಕವು. ಅದರಲ್ಲೊಂದನ್ನ ತಂದವನೆ ಇನ್ನೂ ಹಿಮಪಾತ ನಿಲ್ಲದಿದ್ದ ಹೊರಾವರಣದ ಬಾಗಿಲನ್ನ ಚೂರೆಚೂರು ಸರಿಸಿ ಕೊಂಚವೆ ಹಿಮವನ್ನ ಕೈ ಪಾತ್ರೆಯಲ್ಲಿ ಗೋರಿ ತಂದು ಬೆನ್ನ ಚೀಲದ ಅರೆಯಿಂದ ತೆಗೆದ ಚಹಾಪುಡಿಯನ್ನ ಅದಕ್ಕಿಷ್ಟು ಸುರಿದು ಅಗ್ಗಿಷ್ಟಿಕೆಯ ಉರಿಯ ಮೇಲಿಟ್ಟ. ಪಕ್ಕದಲ್ಲಿಯೆ ಬೆಚ್ಚನೆ ವಾತಾವರಣದ ಆನಂದ ಅನುಭವಿಸುತ್ತಾ ಸುಲ್ತಾನ ಮಂಡಿಯೂರಿ ಕೂತಿದ್ದ.
ಹುಟ್ಟಿದ ದೇಶ ತೊರೆದು ಈ ನವನಾಡಿಗೆ ಹೊಸ ಬದುಕನ್ನ ಅರಸಿ ವಲಸೆ ಹೂಡುವ ಪ್ರವೃತ್ತಿ ತೀರಾ ಹೊಸತೇನಲ್ಲ. ಮೊತ್ತಮೊದಲಿಗೆ ಹಾಗೆ ಈ ನಾಡಿಗೆ ಕಾಲಿಟ್ಟವರ ನಾಲ್ಕನೆಯದೋ ಐದನೆಯದೋ ತಲೆಮಾರು ಪೂರ್ವದಂಚಿನ ತೀರ ಪ್ರದೇಶದುದ್ದ ಈಗ ತಲೆಯೆತ್ತಿ ನಿಂತಿದ್ದವು. ಆದರೆ ಈ ಕಳೆದ ಐದಾರು ವರ್ಷಗಳಿಂದ ಖಂಡಾಂತರದ ದೇಶಗಳಲ್ಲಿ ರಾಜಕೀಯ ಪರಿಸ್ಥಿತಿ ಹದಗೆಟ್ಟು ಹಣಕಾಸಿನ ಜಾಗತಿಕ ಪರಿಸ್ಥಿತಿ ನೆಲಕಚ್ಚಿ ಪರಸ್ಪರ ಯುದ್ಧ ಹೂಡಲು ದೇಶ ದೇಶಗಳ ಚುಕ್ಕಾಣಿ ಹಿಡಿದವರು ಸಂಚು ಹೂಡಲು ಆರಂಭಿಸುತ್ತಿದ್ದಂತೆ ಏಕಾಏಕಿ ಈ ವಲಸೆಯ ಪ್ರಕ್ರಿಯೆ ಹಲವು ಪಟ್ಟು ಹಚ್ಚಿತ್ತು. ಹಗೆˌ ಯುದ್ಧˌ ಹೋರಾಟದ ಕಾರಣ ಕೊನೆಗಾಣದ ಕಷ್ಟ ಕಾರ್ಪಣ್ಯಗಳಿಗೆ ಬಲಿಯಾದ ಸಮಾಜದ ಕೆಳಸ್ತರದ ದುಡಿಯುವ ವರ್ಗದ ಮಂದಿಯ ಕೈಗಳಿಗೆ ಸಾಕಷ್ಟು ಕೆಲಸವೂ ಸಿಗದೆ ಬಡತನದ ರಸಾತಳ ಮುಟ್ಟಿ ಕಂಗಾಲಾದವರು ಹೀಗೆ ಜೀವಮಾನದ ದುಡಿಮೆಯನ್ನೆಲ್ಲ ಪಣಕ್ಕಿಟ್ಟು ಹುಳುಗಳಂತೆ ಸಿಕ್ಕ ಹಡಗುಗಳನ್ನೇರಿ ಹೇಗಾದರೂ ಸರಿ ಬದುಕುವ ಅವಕಾಶವೊಂದು ಸಿಕ್ಕರೆ ಸಾಕು ಎಂಬ ಸದಾಶಯದಲ್ಲಿ ಈ ನೆಲಕ್ಕೆ ಬಂದಿಳಿಯುತ್ತಿದ್ದಾರಂತೆ.
ಅವರಿಗೆಲ್ಲರಿಗೂ ನೆಲೆ ನಿಲ್ಲಲು ಹಾಗೂ ದುಡಿಯಲು ಸಾಕಾಗುವಷ್ಟು ನೆಲ ಪೂರ್ವದಲ್ಲಿಲ್ಲ. ಈಗಾಗಲೆ ಪೂರ್ವ ತೀರದ ಪಟ್ಟಣ ಪ್ರದೇಶಗಳ ಜನ ವಸತಿಗಳು ಜನ ಸಾಂದ್ರತೆಯಿಂದ ಬಿರಿದು ಹೋಗುತ್ತಿವೆ. ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಕಾಡಿನ ಹೊದಿಕೆಯ ಮೇಲೆ ಅಸಾಧ್ಯ ಒತ್ತಡ ಬಿದ್ದು ಸಾಮಾಜಿಕ ವ್ಯವಸ್ಥೆಯೆ ಏರುಪೇರಾಗುವ ಸ್ಥಿತಿ ಬರಲಿರುವದನ್ನ ಅಂದಾಜಿಸಿದ ಆಳುವ ವರ್ಗ ಈಗ ಅವರೆಲ್ಲರ ಕಣ್ಣುಗಳಿಗೂ ಸಮೃದ್ಧತೆಯ ಕನಸುಗಳನ್ನ ತುಂಬಿ ಸಾಧ್ಯವಾದಷ್ಟು ಪಶ್ಚಿಮದ ನೆಲೆಗಳತ್ತ ಅಟ್ಟುತ್ತಿದೆ.
ಈ ಮೂಲಕ ಒಂದೆ ಕಲ್ಲಿಗೆ ಎರಡು ಹಕ್ಕಿಗಳನ್ನ ಉರುಳಿಸುವ ಜಾಣ್ಮೆ ರಾಜಧಾನಿಯಲ್ಲಿ ಆಳಲು ಕೂತ ರಾಜಕಾರಣಿಗಳದ್ದು. ಒಂದುˌ ಭೂಮಿ ಮಂಜೂರು ಮಾಡಿ ಕಂದಾಯ ವಸೂಲಿ ಮಾಡಿಕೊಂಡು ಅರಾಮವಾಗಿ ತಾವು ಕೂತಿದ್ದರೂ ಸಾಕುˌ ಸ್ಥಳಿಯ ಬುಡಕಟ್ಟಿನವರ ಜೊತೆ ಈ ವಲಸಿಗರೆ ಹೋರಾಡಿ ತಮ್ಮ ಹಕ್ಕುಗಳನ್ನ ಸ್ಥಾಪಿಸಿಕೊಳ್ಳುತ್ತಾರೆ. ಮೂಲದವರನ್ನ ಅಲ್ಲಿಂದ ಒಕ್ಕಲೆಬ್ಬಿಸುವ ಸಂಕಟ ಸರಕಾರಕ್ಕಿರೋದಿಲ್ಲ. ಕೇವಲ ಎರಡೂವರೆ ದಶಕದ ಹಿಂದೆಯಷ್ಟೆ ಎರಡು ವಲಸಿಗ ಜನಾಂಗಗಳ ನಡುವೆ ನಡೆದಿದ್ದ ನಾಗರೀಕ ಯುದ್ಧವನ್ನ ಕೊನೆಗಾಣಿಸಲು ಹೆಣಗಿ ಹೈರಾಣಾಗಿದ್ದ ಸರಕಾರಕ್ಕೆ ಈಗ ಮತ್ತೊಂದು ತಲೆನೋವಿನ ಕಾರ್ಯಾಚರಣೆ ಮಾಡುವ ಹಮ್ಮಸ್ಸೂ ಇರಲಿಲ್ಲˌ ಅದಕ್ಕೆ ಸಾಲುವಷ್ಟು ಸಂಪನ್ಮೂಲಗಳೂ ಅದರ ಬೊಕ್ಕಸದಲ್ಲಿರಲಿಲ್ಲ. ಎರಡನೆಯದಾಗಿˌ ಕಾಡು ಕಡಿದು ನಾಡು ಕಟ್ಟುವ ವಲಸಿಗ ಮಂದಿ ಪಶ್ಚಿಮದ ಬರಡು ನೆಲವನ್ನೆಲ್ಲ ಫಲವತ್ತಾಗಿಸಿ ದೇಶವನ್ನ ಸಹಜವಾಗಿ ವಿಸ್ತರಿಸುತ್ತಾರೆ. ದೇಶದ ಆದಾಯ ಹೆಚ್ಚಿ ಸಿರಿ ಸಂಪತ್ತು ಶ್ರಮವಿಲ್ಲದೆ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಹೂಡಿದ ಹಂಚಿಕೆಯ ಫಲವೆ ಈ ಮಹಾವಲಸೆ ಅನ್ನುವುದು ಸ್ವಲ್ಪವಾದರೂ ಆಲೋಚನಾ ಶಕ್ತಿಯಿರುವ ಯಾವ ಮಡ್ಡ ಮಂಡೆಗಾದರೂ ಹೊಳೆದೆ ಹೊಳಿಯುತ್ತಿತ್ತು.
"ದೇಶವೊಂದನ್ನ ಒಂದೆ ರಾತ್ರಿಯಲ್ಲಿ ಕಟ್ಟಲಕ್ಕಾಗುವದಿಲ್ಲ. ಅಪಾರ ಶ್ರಮ ಬೇಡುವ ಅನವರತ ದುಡಿಮೆ ದೇಶವೊಂದು ಸ್ವಾವಲಂಬಿಯಾಗಿ ತನ್ನ ಸುತ್ತಮುತ್ತಲ ನಾಡುಗಳ ನಡುವೆ ಸ್ವಾಭಿಮಾನದಿಂದ ತಲೆಯೆತ್ತಿ ನಿಲ್ಲುವಂತೆ ಮಾಡುತ್ತದೆ. ದೇಶವೊಂದು ಬಲಿಷ್ಠವಾಗಿ ಬೆಳೆದು ನಿಂತು ತನ್ನ ನಾಗರೀಕರಿಗೆ ಇತರರ ಕಣ್ಣಲ್ಲಿ ಹೊಟ್ಟೆಕಿಚ್ಚು ಹುಟ್ಟಿಸುವ ವಿಸ್ಮಯ ಹಾಗೂ ಬೆರಗು ಹೊತ್ತ ಮೆಚ್ಚುಗೆ ಬರಿಸಬೇಕಿದ್ದಲ್ಲಿ ಅದರ ಏಳ್ಗೆಗೆ ವಿವಿಧ ಸ್ತರಗಳಲ್ಲಿ ವೈವಿಧ್ಯಮಯವಾಗಿ ಪಳಗಿದ ಕುಶಲ ಕರ್ಮಿಗಳ ಶ್ರಮವೂ ಸಹ ಉನ್ನತ ಸ್ತರದ ಘನತೆ ಹೊತ್ತ ಕಸುಬು ಮಾಡುವ ವರ್ಗದವರಷ್ಟೆ ಮುಖ್ಯವಾಗುತ್ತದೆ. ನಾಡೊಂದು ಸಶಕ್ತವಾಗಲು ರೈತಾಪಿಗಳಷ್ಟೆ ಕಾರ್ಮಿಕರಿಗೂ ಕಾರ್ಮಿಕರಷ್ಟೆ ನಿರ್ವಾಹಕರಿಗೂ ನಿರ್ವಾಹಕರಷ್ಟೆ ವೈದ್ಯರಿಗೂ ವೈದ್ಯರಷ್ಟೆ ರಾಜಕಾರಣಿಗಳಿಗೂ ರಾಜಕಾರಣಿಗಳಷ್ಟೆ ವ್ಯಾಪಾರಿಗಳಿಗೂ ವ್ಯಾಪಾರಿಗಳಷ್ಟೆ ಕೂಲಿಗಳಿಗೂ ಕೂಲಿಗಳಷ್ಟೆ ವಲಸೆಗಾರರಿಗೂ ಪ್ರಮುಖ ಪಾತ್ರವಿರುತ್ತದೆ" ಅನ್ನುತ್ತಿದ್ದ ಅಪ್ಪನ ದೃಢ ವಿಶ್ವಾಸದ ನುಡಿಗಳು ಆಗಾಗ ಅವನಿಗೆ ನೆನಪಾಗುತ್ತಿದ್ದವು.
ಬಾಲ್ಯದಲ್ಲಿ ಅವನು ಈ ಮಾತುಗಳನ್ನ ಕೇಳಿಕೊಂಡೆ ಬೆಳೆದಿದ್ದ. ದಿನ ಕಳೆದಂತೆ ಹೆಚ್ಚುತ್ತಿರುವ ವಲಸೆ. ಆ ವಲಸೆಗಾರರ ಒತ್ತಡದಿಂದ ತಾವಿರುವ ವಠಾರದ ಸುತ್ತಮತ್ತಲೂ ದಿನ ಕಳೆದಂತೆ ಹೆಚ್ಚುತ್ತಿರುವ ಜನ ದಟ್ಟಣೆ ಅವನ ಅಮ್ಮನಿಗೆ ಕಿರಿಕಿರಿ ಹುಟ್ಟಿಸುತ್ತಿತ್ತು. ಮೊದಲಿನಷ್ಟು ಸೊಗಸಾಗಿಲ್ಲದೆ ನಾಡು ಸೊರಗುತ್ತಿದೆ. ಅದಕ್ಕೆ ಈ ಅಪರಾ ತಪರಾ ದೇಶದ ಒಳ ನುಗ್ಗುತ್ತಿರುವ ವಲಸಿಗರೆ ನೇರ ಕಾರಣ ಎಂದವಳು ಅಸಹನೆಯಿಂದ ಪೇಚಾಡುತ್ತಿದ್ದಳು. ಒಟ್ಟಿನಲ್ಲಿ ಅವಳಿಗೆ ಹೀಗೆ ಹೆಚ್ಚುತ್ತಿರುವ ಜನಸಂಖ್ಯೆ ಹಿತಕಾರಿಯಾಗಿರಲಿಲ್ಲ. ಹಾಗೆಲ್ಲ ಅವಳು ವಲಸೆಗಾರರನ್ನ ಮೊದಲಿಸಿ ಮಾತನಾಡುವ ಸಂದರ್ಭಗಳಲ್ಲಿ ಅಪ್ಪ ಮೇಲಿನ ಮಾತುಗಳನ್ನ ಹೇಳಿˌ ಸೂಕ್ಷ್ಮವಾಗಿ ಮಾತಿನ ನಡುನಡುವೆ ನಾವೂ ವಲಸಿಗರ ಸಂತಾನವೆ ತಾನೇ? ಹೀಗೆ ವಿರೋಧಿಸಲು ನೈತಿಕ ಅಧಿಕಾರ ನಮಗಿಲ್ಲ ಎನ್ನುವುದನ್ನೂ ಅವಳಿಗೆ ನೆನಪಿಸುತ್ತಿದ್ದ.
***********
"ಐದು ಬೆರಳು ಸರಿಸಮವಲ್ಲˌ
ಪ್ರಾಪಂಚಿಕರೆಲ್ಲರೂ ಒಂದೆ ತರಹ ಆಲೋಚಿಸಲ್ಲ"
ಈ ಪ್ರಪಂಚವೆ ವಿಚಿತ್ರ. ಇಲ್ಲಿ ಅಸಮಾನತೆಯೆ ಬದುಕಿನ ಮೂಲಮಂತ್ರ. ತಾನು ಮಾಡಿದ್ದು ಸರಿಯೆನ್ನುವ ನಾವು ಅದೆ ಕೃತ್ಯವನ್ನು ತನಗಾಗದವರ್ಯಾರಾದರು ಮಾಡಿದ ತಕ್ಷಣ ಟೀಕಿಸುತ್ತೇವೆ. ಕೈಯೆತ್ತಿ ಕೊಡುವ ಅವಕಾಶವಿದ್ದರೂ ಕೃಪಣತೆ ತೋರಿದವರನ್ನ ಸ್ತುತಿಸುತ್ತೇವೆ. ಕೂಲಿ ಕೆಲಸ ಮಾಡುವ ಶ್ರಮಿಕರನ್ನ ಕೀಳಾಗಿ ಕಾಣುತ್ತೇವೆˌ ವಿದ್ಯಾವಂತ ಜೀತದಾಳುಗಳನ್ನ ಗೌರವಾದರಗಳಿಂದ ನೋಡುತ್ತೇವೆ. ಕಷ್ಟಪಟ್ಟು ಗೇಯ್ದು ಬೆಳೆವ ರೈತನಿಗೆ ಸಲ್ಲದ ಮರ್ಯಾದೆ ಅದೆ ಬೆಳೆಯನ್ನ ಮಧ್ಯವರ್ತಿಯಾಗಿ ಮಾರಿ ದಳ್ಳಾಳಿ ಸಂಪಾದಿಸುವ ವ್ಯಾಪಾರಿಗೆ ಸಲ್ಲುತ್ತದೆ. ತಾವೆ ವಲಸೆ ಬಂದಿದ್ದವರ ಮತ್ತೊಂದು ತಲೆಮಾರಿನ ಅಮ್ಮ ತನ್ನಂತದ್ದೆ ಮತ್ತೊಂದು ಕುಟುಂಬ ನೆಮ್ಮದಿಯ ನಾಳೆಯನ್ನ ಕಟ್ಟಿಕೊಳ್ಳಲು ಬಂದ ತಕ್ಷಣ ಸಿಡುಕಿದಳುˌ ಕೂಡಿಟ್ಟ ದಿನಸಿಯನ್ನ ತಿಂಗಳಾನುಗಟ್ಟಲೆ ಹಾಗೆ ಬಿಟ್ಟರೆ ಹುಳ ಬಂದುˌ ಬೂಷ್ಟು ಹಿಡಿದುˌ ಕಡೆಗೆ ಕೊಳೆತು ಹೋಗುವ ಅದೆಲ್ಲವನ್ನೂ ನೆಲದಲ್ಲಿ ಗುಂಡಿ ತೋಡಿ ಮಣ್ಣುಪಾಲು ಮಾಡಬೇಕಾಗಿ ಬರುತ್ತೆ ಅನ್ನುವ ಅರಿವಿದ್ದರೂ ಆ ರೈಲ್ವೆ ಗುತ್ತಿಗೆದಾರನಿಗೆ ಉಟ್ಟ ಬಟ್ಟೆಯಲ್ಲೆ ಚಳಿಯ ಪ್ರಕೋಪಕ್ಕೆ ಹೆದರಿ ಹಿಂದಿರುಗಿ ಹೊರಟಿದ್ದ ಕಾರ್ಮಿಕರಿಗೆ ಕೈಯೆತ್ತಿ ಹಂಚಿಯಾದರೂ ಅವೆಲ್ಲವನ್ನ ಖಾಲಿ ಮಾಡುವ ಅಂತನಿಸಲಿಲ್ಲ! ಒಟ್ಟಿನಲ್ಲಿ ಸಮಾನತೆ ಒಂದು ಸುಂದರ ಕಲ್ಪನೆಯಷ್ಟೆ. ಎಲ್ಲರೂ ಸರಿಸಮಾನರಾಗಿˌ ತಮ್ಮ ಬಣ್ಣˌ ವೃತ್ತಿ ಹಾಗೂ ಲಿಂಗದ ಹೊರತೂ ಸಹ ಉಳಿದೆಲ್ಲರಿಗೂ ಸಮಾನರಾಗಿ ಗೌರವಾದರ ಗಿಟ್ಟಿಸುವ ದೇಶ ಇಂದಲ್ಲ ನಾಳೆಯಾದರೂ ತಮ್ಮದಾದೀತೆ? ಎಂದವನು ಯೋಚಿಸುತ್ತಿದ್ದ.
ಚಹಾ ಕುದಿಯಲಿಟ್ಟ ಕೈಪಾತ್ರೆಯೊಳಗೆ ನೀರು ಚಹಾ ಸೊಪ್ಪಿನೊಡನೆ ಮರಳುತ್ತಾ ಕುದಿಯುತ್ತಿರುವದನ್ನೆ ತದೇಕ ಚಿತ್ತನಾಗಿ ನೋಡುತ್ತಾ ಇರುವಂತೆ ಅವನ ಮನೋವ್ಯಾಪಾರ ಈ ದಿಕ್ಕಿನಲ್ಲಿ ಸಾಗುತ್ತಿತ್ತು. ಕೊರೆವ ಚಳಿಗೆ ಕುದ್ದ ಚಹಾ ಮತ್ತೆ ಉಪ್ಪು ಬಿಸ್ಕತ್ತುಗಳು ಚೇತೋಹಾರಿ ಅನುಭವ ನೀಡಿದವು. ದೇಹದ ನರನಾಡಿಗಳಲೆಲ್ಲಾ ಒಂಥರಾ ಬೆಚ್ಚನೆ ಭಾವ ಹರಿದಾಡಿದಂತಾಯಿತು. ಸುಲ್ತಾನ ಮಂಡಿಯೂರಿ ಸುಸ್ತನ್ನ ಸುಧಾರಿಸಿಕೊಳ್ಳುತ್ತಿದ್ದ. ಅವನ ಕುತ್ತಿಗೆಯ ಜೋಳಿಗೆಯಲ್ಲಿದ್ದ ಮೇವು ಬಹುತೇಕ ತೀರಿ ಹೋಗಿತ್ತು. ಇಲ್ಲಿ ಅವನಿಗೆ ತಿನ್ನಿಸುವ ಆಹಾರ ಪದಾರ್ಥವೇನೂ ಇರಲಿಲ್ಲ. ಬೆಚ್ಚನೆ ವಾತಾವರಣದ ಹೊರತು ಮತ್ತಿನ್ನೇನೂ ಅವನಿಗೆ ಲಭ್ಯವಿರಲಿಲ್ಲ.
ಹಿಮ ಮಳೆಯ ಪ್ರಕೋಪ ಕೊಂಚ ಕಡಿಮೆಯಾದ ಹಾಗಿತ್ತು. ಒಂದೆ ಸಮನೆ ಏಕತಾನದಂತೆ ಸೂರಿಗೆ ಬಡಿದು ಸದ್ದೆಬ್ಬಿಸುತ್ತಿದ್ದ ಹಿಮದ ಹನಿಗಳ ಸದ್ದು ಕೊಂಚ ಕೊಂಚವಾಗಿ ಕಡಿಮೆಯಾಗುತ್ತಾ ಬಂದು ಕ್ರಮೇಣ ಇಲ್ಲವಾಯಿತು. ಆದರೆ ಗಾಳಿ ಬೀಸುವ ವೇಗವೇನೂ ಸೋತು ನಿಂತಿರಲಿಲ್ಲ. ಅಗ್ಗಿಷ್ಟಿಯ ಚುಮಣಿಯೊಳಗಿಂದಲೂ ಸಹ ಮನೆಯೊಳಗೆ ನುಗ್ಗಲು ಅದು ಹುಯ್ಯಲಿಡುತ್ತಾ ಹವಣಿಸುತ್ತಿತ್ತು. ಒಂದರೆ ಘಳಿಗೆ ಅವನಿಗೆ ಈ ಬೆಚ್ಚನೆ ಆವರಣದಾಚೆ ಕಾಲಿಡುವುದೆ ಬೇಡˌ ಹಾಗೆಯೆ ಕೊಂಚ ಅಗ್ಗಿಷ್ಟಿಕೆಯ ಉರಿ ಹೆಚ್ಚಿಸಿ ಅದರ ಉರಿಗೆ ಬೆಂಕಿ ಕಾಯಿಸಿಕೊಳ್ಳುತ್ತಾ ಹಾಗೆಯೆ ಸುಖವಾಗಿ ಮಲಗಿ ನಿದ್ರಿಸೋಣ ಅನ್ನಿಸಿತು. ಮರುಕ್ಷಣವೆ ತನ್ನ ಸುಖಲೋಲುಪ ಮನಸಿನ ಸೋಮಾರಿ ಆಲೋಚನೆಗೆ ಅವನೆ ನಾಚಿಕೊಂಡ. ಕರ್ತವ್ಯದ ಕರೆಯನ್ನ ಮೀರುವಂತಿರಲಿಲ್ಲ. ಎಲ್ಲೆಂದರಲ್ಲಿ ಮಲಗಿ ನಿಶ್ಚಿಂತೆಯಿಂದ ಕಾಲ ಹಾಕಲು ಈಗ ನಾನು ಒಂಟಿಯಲ್ಲ. ತನಗೂ ಸಂಸಾರವಿದೆˌ ಸಾಂಸಾರಿಕ ಜವಬ್ದಾರಿಗಳಿವೆ ಅನ್ನುವ ವಾಸ್ತವ ಅವನನ್ನು ಎಚ್ಚರಿಸಿತು. ಅವಳಿಗೆ ಬೇರೆ ಅದೇನೆ ಆದರೂ ಈ ರಾತ್ರಿಯೆ ಮರಳಿ ಬರುತ್ತೇನೆ ಅನ್ನುವ ಭರವಸೆ ಕೊಟ್ಟು ಬಂದಿದ್ದ. ಸಾಲದ್ದಕ್ಕೆˌ ಕುದುರೆ ಕಳ್ಳರ ಅವ್ಯಕ್ತ ಭಯˌ ಎಮ್ಮೆ ತೋಳಗಳ ದಾಳಿಯ ಕಲ್ಪಿತ ಗುಮ್ಮ ಇವೆಲ್ಲವೂ ಅವನ ಮನೆಯೆಡೆಗಿನ ಸೆಳೆತವನ್ನು ಮತ್ತಷ್ಟು ಉದ್ದೀಪಿಸಿದವು. ಆಗಿದ್ದಾಗಲಿ ಹೊರಡೋದೆ ಸರಿ ಎಂದು ನಿರ್ಧರಿಸಿ ಮರು ಆಲೋಚನೆಗೆ ಆಸ್ಪದ ಕೊಡದವನಂತೆ ಕೈ ಪಾತ್ರೆ ತುಂಬ ಹೊರಗಿನ ಹಿಮ ಗೋರಿಕೊಂಡು ತಂದು ಅಗ್ಗಿಷ್ಟಿಕೆಯಿಂದೇಳುತ್ತಿದ್ದ ದೇದೀಪ್ಯಮಾನ ಉರಿಯ ಮೇಲೆ ಸುರಿದು ಅದನ್ನ ನಂದಿಸಿದ.
ಇನ್ನೊಂಚೂರು ಚಳಿ ಕಾಯಿಸುತ್ತಾ ಹಾಗೆ ಕೂತರೆ ಮತ್ತೆ ಜಡ ಆವರಿಸಬಹುದು ಅನ್ನುವ ಹೆದರಿಕೆ ಅವನನ್ನ ಕಾಡಿತ್ತು. ಅಲ್ಲದೆ ಹಾಗೆಲ್ಲ ಅರೆಬರೆ ಬೆಂಕಿ ಉಳಿಸಿ ಹೋಗುವುದು ಅಪಾಯಕಾರಿ. ಒಂದೊಮ್ಮೆ ಚುಮಣಿ ದಾರಿಯಲ್ಲಿ ಒಳ ನುಗ್ಗುವ ಗಾಳಿ ಒಂದೆ ಕಿಡಿಯನ್ನ ನೆಲಕ್ಕೆ ದಾಟಿಸಿದರೂ ಸಾಕು ಇಡಿ ಮನೆಗೆ ಉರಿ ವ್ಯಾಪಿಸಿಕೊಂಡು ಅನಾಹುತವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿರಲಿಲ್ಲ. ಮಂದರಿಯಡಿ ಮುದುಡಿ ಮಂಡಿ ಹಾಕಿಕೊಂಡು ಕೂತಿದ್ದ ಸುಲ್ತಾನನ ಬೆನ್ನು ಚಪ್ಪರಿಸಿ ಮೇಲೆಬ್ಬಿಸಿದ. ಬಿಗಿದ ಜೀನು ಸರಿಯಾಗಿದೆಯೆ ಎಂದು ಪರಿಕ್ಷಿಸಿ ತನ್ನ ಕೈಗವಸು ತೊಟ್ಟು ಮೂಗುದಾರ ಹಿಡಿದು ಕುದುರೆಯನ್ನ ಹೊರ ನಡೆಸಿಕೊಂಡು ಬಂದ. ಔಷಧೋಪಚಾರದ ಕಾರಣ ಕುದುರೆಯ ಶೀತ ಬಾಧೆ ಕಾಡದೆ ನಿಂತು ಹೋಗಿತ್ತು. ಹತ್ತು ಹದಿನಾಲ್ಕು ಮೈಲಿಯಾಚೆ ಮನೆ. ಇನ್ನೇನು ಮುಟ್ಟಿ ಬಿಟ್ಟೆವು. ಅನಂತರ ಅದೇನೆ ಶೀತ ಇದ್ದರೂ ಅದರಿಂದ ಹಯ ಹೈರಾಣಾಗದಂತೆ ಕಾಪಾಡಿಕೊಳ್ಳುವ ಆತ್ಮವಿಶ್ವಾಸ ಅವನಲ್ಲಿತ್ತು. ಕ್ಯಾಂಪು ಮನೆಯ ಬಾಗಿಲು ಭದ್ರ ಪಡಿಸಿˌ ಒಳಗಿಂದಲೆ ತಂದಿದ್ದ ಹಗ್ಗವೊಂದನ್ನ ಚಿಲಕಕ್ಕೆ ಕಟ್ಟಿ ಬಿಗಿದು ಕುದುರೆಯನ್ನೇರಿದ.
ಹಾಗೆಯೆ ದಿಕ್ಸೂಚಿಯ ಸೂಚನೆ ಅನುಸರಿಸುತ್ತಾ ಮುಂದಕ್ಕೆ ಇಬ್ಬರೂ ಚಲಿಸಿದರು. ಮಳೆಯೇನೋ ನಿಂತಿತ್ತು ಸರಿˌ ಆದರೆ ಚಳಿ ಮಾತ್ರ ಗಾಳಿಯೊಡನೆ ಕೂಡಿ ಕಾಡುತ್ತಲೆ ಇತ್ತು. ಒಂದೆರಡು ಮೈಲಿ ದೂರ ಅವರ ಪಯಣ ಸಾಗಿರಬಹುದುˌ ಆಗಸದಲ್ಲಿ ಮೋಡ ಕ್ರಮೇಣ ಕಾಣೆಯಾಗಿ ಬೆಳದಿಂಗಳ ಬೂದು ಬೆಳಕು ಸೂಸುತ್ತಾ ಚಂದ್ರ ಹೊಳೆಯುವದು ಗೋಚರವಾಗುತ್ತಿತ್ತು. ಆಕಾಶಕ್ಕಂಟಿಸಿದ ಮಂದ ಬೆಳಕಿನ ದೊಂದಿಯ ಹಾಗೆ ಚಂದ್ರ ಸುರಿಯುತ್ತಿದ್ದ ಬೆಳದಿಂಗಳಲ್ಲಿ ಭೂಮಿಯನ್ನ ಆವರಿಸಿದ್ದ ಮಂಜು ಬೆಳ್ಳಗೆ ಹೊಳೆಯತ್ತಿತ್ತು. ಆ ಬೆಳ್ಳನೆ ಮಂಜಿನ ಮೇಲಿಂದ ಒಂದು ಕಪ್ಪು ತೆರೆ ಇವರತ್ತಲೆ ಸಾಗಿ ಬರುತ್ತಿರವಂತೆ ಇವನಿಗೆ ಕಂಡಿತು. ಅದೊಂದು ಭ್ರಮೆಯಾಗಿರಬಹುದೆ? ಎಂದು ಯೋಚಿಸುವ ಹೊತ್ತಿಗೆಲ್ಲ ಆ ಅಲೆ ಮುಖಾಮಖಿಯಾಗಿ ಒಂದೈನೂರು ಗಜದಷ್ಟು ಸನಿಹ ಬಂದಾಗಿತ್ತು.
ಓ ದೇವರೆ ಎಮ್ಮೆತೋಳಗಳ ಹಿಂಡು! ಈಗಿರುವ ಪರಿಸ್ಥಿತಿಯಲ್ಲಿ ಸಮಯಾವಧಾನದಿಂದ ಶಾಂತ ಚಿತ್ತರಾಗಿ ಅವುಗಳನ್ನ ಕೆರಳಿಸದಂತೆ ಮುಂದುವರಿಯದೆ ಬೇರೆ ಉಪಾಯವೆ ಇಲ್ಲ. ಹಿಂತಿರುಗಿ ದೌಡಾಯಿಸಲೂ ಸಹ ಅಸಾಧ್ಯ ಅನ್ನುವ ಪರಿಸ್ಥಿತಿ. ಹಾಗೊಮ್ಮೆ ಹುಚ್ಚು ಸಾಹಸಕ್ಕಿಳಿದರೆ ಅಟ್ಟಿಸಿಕೊಂಡು ಬಂದು ತಮ್ಮಿಬ್ಬರನ್ನೂ ಹರಿದು ಹಂಚಿ ತಿನ್ನಲು ಅವಕ್ಯಾವ ತಡೆ? ಇಂತಹ ಪರಿಸ್ಥಿತಿ ವಿಪರೀತ ಎದುರಾದರೆ ಶಾಂತವಾಗಿ ಅದನ್ನ ಎದುರಿಸಬೇಕು ಅಂತ ಅಪ್ಪ ಹೇಳುತ್ತಿದ್ದ ಮಾತು ನೆನಪಾಯಿತು. ಅಲ್ಲದೆ ಅಂತಹ ಅನುಭವ ಬಾಳಲ್ಲೆ ಮೊದಲ ಬಾರಿ ಆಗುತ್ತಿದೆ. ಹಿಂಡು ತೀರಾ ಹತ್ತಿರಕ್ಕೆ ಬಂತು.
ಗುಂಪಿನ ನಾಯಕಿ ಇಪ್ಪತ್ತೋ ಮೂವತ್ತೋ ಎಮ್ಮೆತೋಳಗಳನ್ನ ಮುನ್ನಡೆಸಿಕೊಂಡು ಶಾಂತವಾಗಿ ಹೋಗುತ್ತಿದೆ. ರಸ್ತೆಯ ಎಡ ಅಂಚಿಗೆ ಇವರಿಬ್ಬರ ಇರುವನ್ನ ಅದು ಗಮನಿಸಿತಾದರೂ ಅಲಕ್ಷ್ಯಿಸಿ ಮುನ್ನಡೆಯಿತು. ಅದರ ಬಾಯಲ್ಲಿನ ರಕ್ತ ಅಂಟಿದ ಕಲೆ ಬೆಳದಿಂಗಳಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಅಂದರೆ ಹತ್ತಿರದಲ್ಲೆ ಎಲ್ಲೋ ಭರ್ಜರಿ ಬೇಟೆಯಾಡಿ ಭೂರಿ ಭೋಜನ ಮುಗಿಸಿವೆ. ಹಸಿದ ಹೊಟ್ಚೆಯಲ್ಲಿಲ್ಲದ ಕಾರಣ ಆಕ್ರಮಣದ ಭಯವಿರಲಿಲ್ಲ. ಹಿಂಡು ಅವರ ಪಕ್ಕದಲ್ಲಿಯೆ ಒಂದೆ ಗುರಿಯಟ್ಟಂತೆ ತಮ್ಮ ನಾಯಕರ ಹಿಂದೆ ಶಿಸ್ತಿನಿಂದ ಸಾಗಿ ಹೋಗುವಾಗ ಅವುಗಳ ಪುಟ್ಟ ವಯಸ್ಕ ಪುಂಡ ತೋಳಗಳನ್ನೆಲ್ಲ ಗುಂಪಿನ ಮಧ್ಯದಲ್ಲಿದ್ದವು. ಹಿರಿಯ ಅನುಭವಿ ಪ್ರಾಯಸ್ಥ ಮಾಗಿದವುಗಳು ಗುಂಪಿನ ಸುತ್ತಲೂ ಸಾಗಿ ಮಂದುವರೆಯುತ್ತಿದ್ದವು. ಅವುಗಳಲ್ಲೂ ಒಂದು ರೀತಿಯ ಶಿಸ್ತಿದೆ!
*************
ಎಮ್ಮೆತೋಳಗಳ ಉಸಿರು ಸೋಕುವಷ್ಟು ದೂರದಲ್ಲಿ ಅವುಗಳು ಗುಟುರು ಹಾಕುತ್ತಾ ಸಾಗುತ್ತಿದ್ದಾಗ ಮಿಸುಕಾಡದಂತೆ ಸುಲ್ತಾನನ ಲಗಾಮನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದ. ಇವನ ಎದೆ ಬಡಿತ ನಗಾರಿಯಂತಾಗಿ ಸ್ವತಃ ಇವನಿಗೆ ಅದರ ಸದ್ದು ಕೇಳುತ್ತಿತ್ತು. ಅಂತೂ ಗಂಡಾಂತರ ಕಳೆಯಿತು. ಇವರ ವಿರುದ್ಧ ದಿಕ್ಕಿಗೆ ಮತ್ತೊಂದು ಐನೂರು ಗಜ ಆ ಹಿಂಡು ಸಾಗಿ ಹೋದ ಮೇಲೆ ಇವ ಬಿಗಿಯಾಗಿ ಎಳೆದು ಲಗಾಮನ್ನ ಸಡಿಲ ಬಿಟ್ಟ. ಬದುಕಿದೆಯ ಬಡಜೀವವೆ ಅನ್ನುವಂತೆ ಕುದುರೆ ಒಂದೆ ನೆಗೆತಕ್ಕೆ ಚಿಮ್ಮಿ ಮನೆಯ ದಿಕ್ಕಿಗೆ ದೌಡಾಯಿಸುತ್ತಾ ಓಡಿತು. ಆ ರಣಭೀಕರ ಚಳಿಯಲ್ಲಿಯೂ ಸುಲ್ತಾನ ಹೆದರಿ ಬೆವರಿ ತೊಪ್ಪೆಯಾಗಿದ್ದುದು ಅವನ ಅನುಭವಕ್ಕೆ ಬಂತು. ಪರವಾಗಿಲ್ಲ ಅವನಿಗೆ ಒಡೆಯನ ಅಣತಿಗೆ ತಕ್ಕಂತೆ ವರ್ತಿಸುವ ಗುಣ ತನ್ನ ತಂದೆ ತಾಯಿಂದಲೆ ಬಳುವಳಿಯಾಗಿ ಬಂದಿದೆ. ಅವನೇನಾದರೂ ಹೆದರಿಕೆಯಲ್ಲಿ ಕೆನೆದಾಡಿ ಹಾರಿ ರಂಪ ಮಾಡಿದ್ದಿದ್ದರೆ ಎಡವಟ್ಟಾಗುವ ಸಂಭವವಿತ್ತು. ಮೆಚ್ಚುಗೆಯಿಂದ ಅವನು ಸುಲ್ತಾನನ ಕುತ್ತಿಗೆ ಚಪ್ಪರಿಸಿದ.
ಸೋಮ ಸರೋವರಕ್ಕೆ ಇನ್ನೂ ಮೈಲು ದೂರದಲ್ಲಿರವ ಹಾಗೆ ಚಂದ್ರನ ತಂಪು ಬೆಳಕಿನಲ್ಲಿ ಎಡಕ್ಕೆ ಒಂದು ಮುನ್ನೂರು ಗಜ ದೂರದಲ್ಲಿದ್ದ ದಿಬ್ಬದ ಮೇಲೆ ಗಡವ ಎಮ್ಮೆತೋಳವೊಂದು ಒಬ್ಬಂಟಿಯಾಗಿ ತನ್ನ ಹಿಂಗಾಲಗಳ ಮೇಲೆ ಚಂದ್ರನನ್ನ ಒಮ್ಮೆ ಆ ಹಿಂಡು ಸಾಗಿ ಬಂದ ದಾರಿಯನ್ನೊಮ್ಮೆ ಅವಲೋಕಿಸುತ್ತಾ ಶಾಂತವಾಗಿ ಕೂತಿದ್ದು ಕಂಡಿತು. ಬಹುಶಃ ಆ ಪ್ರದೇಶದಲ್ಲೆ ಅಳಿದುಳಿದು ಹೋಗಿರುವ ಕಡೆಯ ಕಂತಿನ ತೋಳಗಳಿವು. ದಿನದಿಂದ ದಿನಕ್ಕೆ ಮಾನವರ ಅತಿಕ್ರಮಣದಿಂದ ಕುಗ್ಗುತ್ತಿರುವ ತಮ್ಮ ನೆಲೆಯನ್ನ ತ್ಯಜಿಸಿ ಶಾಶ್ವತವಾಗಿ ಅವು ಉತ್ತರದಿಂದ ದೂರದ ದಕ್ಷಿಣಕ್ಕೆ ಆ ಹಾಡಿಯ ಮಂದಿಯಂತೆ ಗುಳೆ ಹೋಗುತ್ತಿರಬಹುದು. ಇನ್ನು ಮುಂದೆ ಅವು ಇಲ್ಲಿಂದ ಶಾಶ್ವತವಾಗಿ ಕಣ್ಮರೆಯಾಗಬಹುದು ಅನಿಸಿ ಪೆಚ್ಚಾದನವನು. ತಮ್ಮ ದುರಾದೃಷ್ಟವನ್ನ ನೆನೆದುಕೊಂಡು ಹಿಂದೊಮ್ಮೆ ತಾವು ನೆಲೆಸಿದ್ದ ತಾಣವನ್ನ ಆ ಒಂಟಿತೋಳ ಕಣ್ತುಂಬಿಸಿ ಕೊಳ್ಳುತ್ತಿರುವಂತೆ ಅವನಿಗೆ ಭಾಸವಾಯಿತು. ಅದೂ ಸಹ ಅವನನ್ನ ಕ್ಷಣಕಾಲ ದಿಟ್ಟಿಸಿ ಅನಂತರ ಅಲಕ್ಷ್ಯಿಸಿ ಚಂದ್ರನಿಗೆ ಮುಖ ಮಾಡಿ ಸುದೀರ್ಘವಾಗಿ ಬಾಯೆತ್ತಿ ಊಳಿಟ್ಟಿತು. ಅದೊಂದು ವಿಷಾದದ ಅರ್ತನಾದದಂತೆ ಅದೆ ವೇಗದಲ್ಲಿ ಸಾಗಿ ಹೋಗುತ್ತಿದ್ದ ಅವನ ಕಿವಿಗೆ ಅಲೆಯಲೆಯಾಗಿ ಕೇಳಿಸಿತು.
ಸೋಮ ಸರೋವರ ಮತ್ತಷ್ಟು ಗಡುಸಾಗಿ ತಣ್ಣಗೆ ಮಲಗಿತ್ತು. ಸರೋವರದ ಮೇಲೆ ಸಾಗಿಯೆ ಅವರು ಆಚೆ ದಡ ಮಟ್ಟಿದರು. ಮನೆಗಿನ್ನು ಮೂರೆ ಮೈಲಿ ಅಂತರ! ಬೆಳಗ್ಗಿನಂತೆ ಮತ್ತೆ ಕುದುರೆ ಮಗ್ಗರಿಸದಿರಲಿ ಎಂದು ಹಾರೈಸುತ್ತಲೆ ನಾಗಲೋಟ ಮಂದುವರೆಸಿದ. ಗಮ್ಯ ದೃಗ್ಗೋಚರವಾದದ್ದೆ ನೆಮ್ಮದಿಯ ಸುಳಿಗಾಳಿ ಸೋಕಿದಂತಾಗಿ ಪಟ್ಟ ಪ್ರಯಾಣದ ಕಷ್ಟ ಕಾರ್ಪಣ್ಯಗಳೆಲ್ಲ ಮರೆತು ಹೋಯಿತು. ಮತ್ತೊಂದು ಹಿಮದ ಮಳೆ ಬೀಳುವ ಮೊದಲು ಮನೆಯ ಬೇಲಿಯನ್ನವನು ದಾಟಿಯಾಗಿತ್ತು. ಸುಲ್ತಾನನ ಬೆನ್ನಿಂದ ಹಾರಿ ಕೆಳಗಿಳಿದು ಮನೆಯೆಡೆಗೆ ದಿಟ್ಟಿಸಿದವನಿಗೆ ಲಾಟೀನಿನ ಹಾಗೂ ಅಗ್ಗಿಷ್ಟಿಕೆಯ ಬೆಳಕು ದೂರದಿಂದಲೆ ಮನೆಯೊಳಗೆ ಬೆಳಕಾಗಿರಿಸಿರುವುದು ಕಂಡಿಯ ಗಾಜಿನ ಮೂಲಕ ಮಂದವಾಗಿ ಕಾಣಿಸಿತು. ಹಟ್ಟಿಯ ಬಾಗಿಲು ಸರಿಸಿದಾಗ ಒಂದರೆ ಕ್ಷಣ ಶೀತಗಾಳಿ ಒಳನುಗ್ಗಿ ಒಳಗಿನ ಬೆಚ್ಚನೆ ಹವೆ ಮತ್ತೆ ಚಳಿಯ ತಕ್ಕೆಗೆ ಜಾರಿದ ಕಾರಣ ಒಂದರೆಕ್ಷಣ ಕೊಟ್ಟಿಗೆಯ ಸಹವಾಸಿಗಳು ನವಿರಾಗಿ ನಡುಗಿದವು. ಹೊತ್ತಲ್ಲದ ಹೊತ್ತಿನಲ್ಲಿ ಕೊಟ್ಟಿಗೆಯ ಮುಖದ್ವಾರ ತೆಗೆದದ್ದಕ್ಕೊ ಏನೋ ಕ್ಷಣಕಾಲ ಗಾಬರಿಯಾದ ಜಾನುವಾರುಗಳು ಒಳಗೆ ಬಂದದ್ದು ತಮ್ಮೆಜಮಾನ ಹಾಗೂ ಸುಲ್ತಾನನೆಂದು ಅರಿವಾಗುತ್ತಲೆ ನಿರಾಳವಾದವು. ಅವರಿಬ್ಬರ ಪರಿಚಿತ ಮೈ ಗಂಧ ಅವುಗಳ ಮೂಗಿಗೆ ಆ ಮಂದ ಬೆಳಕಿನಲ್ಲಿ ಕಣ್ಣ ದೃಷ್ಟಿಗಿಂತ ಮೊದಲು ಮುಟ್ಟಿತ್ತು. ಇವನ ಆಗಮನ ಕಂಡು ನೆಮ್ಮದಿಯಿಂದ ಮೆಲುವಾಗಿ ಕೂಗಿದವು. ಅವುಗಳ ಗೊಂತಿಗಳಲ್ಲಿ ಅವಳು ಸಂಜೆ ಸುರಿದಿರಬಹುದಾದ ಮೇವು ಹಲ್ಲು ತುಂಬಿದ್ದವುˌ ಸುಲ್ತಾನನ್ನ ಅವನ ಲಾಯದ ಗೊಂತಿಗೆ ಮುನ್ನಡೆಸಿ ಕಟ್ಟಿ ಚೂರು ಹುಲ್ಲು ನೀರಿಟ್ಟು ಉಪಚರಿಸಿ ಜೀನು ಬಿಚ್ಚಿ ಬ್ರೆಷ್ಷಿನಿಂದ ಕುದುರೆಯ ದಣಿದ ಮೈಯುಜ್ಜಿ ಆರೈಕೆ ಮಾಡಿದ. ಬೆಳಗ್ಯೆ ಎಣ್ಣೆ ಮಾಲೀಸು ಮಾಡಲು ನಿರ್ಧರಿಸಿದವ ಒಂದೊಂದೆ ದನ ಕರು ಎಮ್ಮೆಗಳ ಮುಖಕ್ಕೆ ಮುಖ ತಾಗಿಸಿ ಅವುಗಳ ಗಂಗೆದೊಗಲ ಮೆಲುವಾಗಿ ಕೆರೆದು ನೇವರಿಸಿ ಜಾನುವಾರುಗಳಿಗೆ ಶುಭರಾತ್ರಿ ಹೇಳಿˌ ಗೋಡೆಗೆ ನೇತು ಬಿದ್ದಿದ್ದ ಲಾಟೀನಿನ ಉರಿ ಚೂರು ಕುಗ್ಗಿಸಿ ಕೊಟ್ಟಿಗೆಯಿಂದ ಹೊರ ಬಿದ್ದ. ಆ ಸಂಜೆ ಹಾಲು ಹಿಂಡಲಾಗದು ಅನ್ನುವ ಅರಿವಿದ್ದಿದ್ದರಿಂದಲೆ ಕರುಗಳನ್ನ ಕಟ್ಟಿರಲಿಲ್ಲ. ಈಗ ಕೊಟ್ಟಿಗೆಯಿಂದ ಹೊರಬೀಳುವ ಮುನ್ನ ಅವುಗಳನ್ನ ಗೂಟದ ಹಗ್ಗಕ್ಕೆ ಬಿಗಿಯದಿದ್ದರೆ ಬೆಳಗಿನ ಹಾಲಿಗೆ ಸೊನ್ನೆಯಾಗುವ ಸಂಭವವಿತ್ತು. ಅವುಗಳ ಅಮ್ಮಂದಿರಿಗೆ ಒರಗಿ ಮಲಗಿದ್ದ ಆ ಎಳೆ ಬೊಮ್ಮಟೆಗಳ ನಿದ್ರಾ ಸುಖಕ್ಕೆ ಅಡ್ಡಿಯಾಗದಂತೆ ಮೆಲ್ಲನೆ ಅವುಗಳ ಕುತ್ತಿಗೆ ಎತ್ತಿ ಕುಣಿಕೆಯೊಳಗೆ ಮುಖ ತೂರಿಸಿ ಅವಕ್ಕೆ ಅರಿವಾಗದ ಹಾಗೆ ಅವುಗಳನ್ನ ಕಟ್ಟಿ ಹಾಕಿಯೆ ಅವನು ಹೊರಗೆ ಬಂದಿದ್ದ.
ಹಿಮಮಳೆಯ ಪ್ರಕೋಪ ಮತ್ತೆ ಮರುಕಳಿಸಲಾರಂಭಿಸಿತ್ತು. ಕೊಟ್ಟಿಗೆಯಿಂದ ಮನೆ ಮುಟ್ಟಲು ಕಟ್ಟಿದ್ದ ಹಗ್ಗವಿಲ್ಲದಿದ್ದರೆ ಕಷ್ಟವಿತ್ತು. ಅಲ್ಲಿಂದ ಮನೆಯ ಬಾಗಿಲ ತನಕ ಕಟ್ಟಿದ್ದ ಹಗ್ಗ ಹಿಡಿದು ಬಂದವ ಬಾಗಿಲು ತಟ್ಟಿದ. ಇವನ ದಾರಿಯನ್ನೆ ನಿರೀಕ್ಷಿಸುತ್ತಾ ಊಟವನ್ನೂ ಮಾಡದೆ ಆರಾಮ ಕುರ್ಚಿಯಲ್ಲಿ ಮಗುವನ್ನ ತಬ್ಬಿ ಮಲಗಿಸಿಕೊಂಡಿದ್ದವಳಿಗೆ ಮೆಲ್ಲನೆ ಹತ್ತಿದ್ದ ಮಂಪರು ಈ ಸದ್ದಿನಿಂದ ಕಳಿಯಿತು. ಶಬರಿಯಂತೆ ಅವನಾಗಮನ ಕಾದಿದ್ದವಳು ಓಡೋಡಿ ಬಂದು ಬಾಗಿಲು ತೆಗೆದಳು. ಸೋತ ಇವನು ಮನೆಗೆ ನುಗ್ಗಿ ಚಳಿಗಾಳಿ ಹಿಂಬಾಲಿಸದಂತೆ ತಲೆ ಬಾಗಿಲು ಜಡಿದ. ಅವನನ್ನ ಚಳಿಗೆ ಬೆಚ್ಚಗಾಗಿಸಲು ಎಮ್ಮೆ ಮಾಂಸದ ಸೂಪು ಕುದಿಸಲು ಅವಳು ಅಡುಗೆ ಮನೆಯತ್ತ ಓಡದಳು. ಇವನು ಹಾಕಿದ್ದ ಬಟ್ಟೆ ಕಳಚಿ ಮುಖ ಕೈ ಕಾಲು ತೊಳೆದುಕೊಳ್ಳಲು ಉದ್ಯುಕ್ತನಾದ. ಕೇಳಿಕೊಳ್ಳಲು ಹೇಳಿಕೊಳ್ಳಲು ಇಬ್ಬರಿಗೂ ಸುಮಾರು ವಿಚಾರಗಳಿದ್ದವು. ಗೋಡೆಗೆ ಜಡಿದಿದ್ದ ಗಡಿಯಾರ ಹನ್ನೆರಡು ಸಲ ಘಂಟೆ ಬಾರಿಸಿ ಸುಮ್ಮನಾಯಿತು. ಅವನು ಕಡೆಗೂ ಮನೆಗೆ ಬಂದು ಮುಟ್ಟಿದ್ದ.
( ನಾನು ಮೂಲತಃ ಲಾರಾ ಇಂಗಲ್ಸ್ ವೈಲ್ಡರ್ರ ಅಭಿಮಾನಿ. ಪುಸ್ತಕ ಪ್ರಕಾಶನˌ ಮೈಸೂರು ಇವರು ಪ್ರಕಟಿಸಿದ್ದ ಅವರು ತಾನು ಚಾರ್ಲ್ಸ್ ಇಂಗಲ್ಸನ ಮಗಳಾಗಿ ಅನಂತರ ಅಲ್ಮಾಂಜೋ ವೈಲ್ಡರನ ಹೆಂಡತಿಯಾಗಿ ಸರಿಯಾಗಿ ಒಂದೂಕಾಲು ಶತಮಾನದ ಹಿಂದಿನ ಅಮೇರಿಕಾದ ಪರಿಸರ - ಬದುಕು ವಿವರಿಸಿ ಬರೆದಿರುವ ಕೇವಲ ಒಂಬತ್ತು ಡೈರಿಗಳ ಕನ್ನಡನುವಾದ ಓದಿ ಸಣ್ಣಂದಿನಂದೆ ಅವರತ್ತ ಆಕರ್ಷಿತನಾಗಿದ್ದೆ. ಮುಂದೆ ಬುದ್ಧಿ ಬೆಳದ ಮೇಲೆ ಕಷ್ಟಪಟ್ಟು ಹುಡುಕಿ ಮೂಲ ಆಂಗ್ಲದಲ್ಲಿಯೆ ಅವರ ಬರಹ ಓದಿದ ನಂತರ ಲಾರಾ ನನ್ನ ಮನಸಿಗೆ ಮತ್ತಷ್ಟು ಆಪ್ತರಾಗಿದ್ದರು.
ಅವರ ಬಾಳು ಸವೆದ ಊರುಗಳನ್ನ ಸ್ವತಃ ಹೋಗಿ ನೋಡುವುದು ಅಂದಿನಿಂದಲೆ ನನ್ನ ಬದುಕಿನ ಆದ್ಯತೆಯಾಗಿತ್ತು. ಅವರ ಬದುಕು ಸಂದ ಜಾಗಗಳನ್ನ ಹೋಗಿ ನೋಡುವ ಅವಕಾಶ ಹತ್ತು ವರ್ಷಗಳ ಹಿಂದೆ ಬಾಳಿನಲ್ಲಿ ಬಂದದ್ದು ನನ್ನ ಸುಕೃತ. ಆ ಪ್ರವಾಸದಲ್ಲಿ ಕಂಡ ಮತ್ತೊಂದು ಸ್ಥಳ ಡೆಟ್ರಾಯಿಟ್ ನಗರ. ಅಲ್ಲಿ ಭೇಟಿಯಾಗಿದ್ದ ಬಿಳಿಯ ಹಿರಿಯರೊಬ್ಬರು ಹೇಳಿದ್ದ ಅವರ ಹಿರಿಯರ ವಲಸೆಯ ಮೆಲುಕನ್ನ ನೆನಪಿಸಿಕೊಂಡು ಈ ಕಥೆಯನ್ನ ಬರೆದಿದ್ದೇನೆ. ನನ್ನ ಅನುಭವಕ್ಕೆ ಬಂದ ಇಂದಿನ ಮಿಚಿಗನ್ ರಾಜ್ಯದ ಅಂದಿನ ದಿನಗಳ ಕಲ್ಪನೆ ಇದರಲ್ಲಿದೆ. ಈ ಮೂಲಕ ನನ್ನ ಐಡಲ್ ಲೇಖಕಿ ಲಾರಾಳ ಶೈಲಿಯಲ್ಲಿ ಬರೆಯುವ ಬಹು ದಿನಗಳ ಮನದಾಸೆಯನ್ನ ಈಡೇರಿಸಿಕೊಂಡಿದ್ದೇನೆ. ಶೈಲಿ ಮಾತ್ರ ಲಾರಾರದ್ದು. ಕಥೆ ನನ್ನದೆ.
ಇಲ್ಲಿ ಮೂಲ ನಿವಾಸಿಗಳು ರೆಡ್ ಇಂಡಿಯನ್ನರುˌ ಸ್ಥಳಿಯ ವಲಸಿಗರ ಭಾಷೆ ಆಂಗ್ಲˌ ಗೋಪಿಯ ಭಾಷೆ ಫ್ರೆಂಚ್ ಅನ್ನುವುದು ನಿಮ್ಮ ಮಾಹಿತಿಗೆ.🙏)
https://youtu.be/Gs57exxcs5g
https://youtu.be/jtFQrXIsfps
https://youtu.be/6vVJZiWOHSA
No comments:
Post a Comment