29 November 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫ 👊
 


ಊರ ಪ್ರಮುಖ ನೀರು ಸರಬರಾಜು ತೊಟ್ಟಿಯಲ್ಲಿ ನಾಲ್ಕಾರು ತಿಂಗಳ ಹಿಂದೆ ಜಾರಿಬಿದ್ದ ಗಡವ ಮಂಗವೊಂದು ಅಲ್ಲೆ ಮುಳುಗಿ ಸತ್ತು ಕೊಳೆತು ನಾರಿ ಅದೆ ನೀರನ್ನ ನಿತ್ಯ ಸೇವಿಸಿದ ಎಲ್ಲರಿಗೂ ಕಾಯಿಲೆ ಆಗಿದೆ ಅನ್ನುವ ಪುಕಾರೆಬ್ಬಿಸಿದರು ಕೆಲವರು. ಇಲ್ಲಾˌ ಊರಿನ ನೀರು ಸರಬರಾಜು ಕೇಂದ್ರದ ಪ್ರಮುಖ ಸಂಗ್ರಹ ತೊಟ್ಟಿ ದಶಕಗಳಿಂದ ಸ್ವಚ್ಛತೆ ಕಾಣದೆ ಹೂಳು ಕೆಸರು ಪಾಚಿ ಕಟ್ಟಿಕೊಂಡು ನಾರುತ್ತಿದೆ. ಸದ್ಯದ ಕಾಯಿಲೆ ಹುಟ್ಟಿನ ಮೂಲ ಅದೆ. ಮಂಗನ ಕಥೆಯಲ್ಲಾ ಸುಳ್ಳು ಅಂತ ಒಂದಷ್ಟು ಜನ ಗುಲ್ಲೆಬ್ಬಿಸಿದರು. 

ಮಂಗನ ಹೆಣವೋ ಇಲ್ಲಾ ಕೊಳೆತ ಕೆಸರಿನ ಪಾಚಿಯ ಋಣವೋ ಊರಿಗೆ ಊರೆ ವಾಂತಿ ಬೇಧಿಗೆ ಬಲಿಯಾದದ್ದು ಮಾತ್ರ ವಾಸ್ತವ ಹಾಗೂ ದುರಂತ. ಈ ಇಬ್ಬದಿಯ ವಿತಂಡವಾದದ ಪುಕಾರುಗಳೆಲ್ಲ ರಾಜಕೀಯ ಪ್ರೇರಿತ ಅನ್ನೋದು ಖಚಿತವಾಯ್ತು. ಪುರಸಭೆಯಲ್ಲಿ ಈ ಬಾಬ್ತು ಅನುದಾನವನ್ನ ದಾಖಲೆಗಳಲ್ಲಿ ಮಾತ್ರ ತೋರಿಸಿ ಆ ಹಣವನ್ನೆಲ್ಲಾ ನುಂಗಿ ನೀರು ಕುಡಿದಿದ್ದ ಸರದಿ ಪ್ರಕಾರ ಅಧಿಕಾರ ಅನುಭವಿಸಿದ್ದ ರಾಜಕೀಯ ಪಕ್ಷಗಳ ಪುಢಾರಿಗಳು ತಮ್ಮ ನೀಚತನವನ್ನ ಮರೆಮಾಚಲು ಹೀಗೆ ಕೆಸರೆರಚಾಟಕ್ಕಿಳಿದು ಊರಿನ ನಾಗರೀಕರನ್ನಂತೂ ಮಂಗ ಮಾಡಿದ್ದರು ಅನ್ನೋದು ಮಾತ್ರ ಕಣ್ಣಿಗೆ ರಾಚುತ್ತಿದ್ದ ಸತ್ಯ. 

ಅಂತಹ ವಿಷಮ ಪರಿಸ್ಥಿತಿಯಲ್ಲೂ ಸಹ ಸೋಂಕಿಗೆ ಬಲಿಯಾಗಿರದಿದ್ದ ಊರಿನ ಕೆಲವೆ ಗಟ್ಟಿ ಪಿಂಡಗಳ ಪೈಕಿ ಅವನೂ ಒಬ್ಬನಾಗಿದ್ದ.

*****

ಇವನ ತಾಯಿ ಊರಿನ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಆಯ ಆಗಿದ್ದ ಕಾಲ ಅದು. ಬಹುತೇಕರು ರೋಗಿಗಳೆ ಆಗಿದ್ದು ಆರೋಗ್ಯವಂತರು ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರˌ ಅವರಲ್ಲೂ ಬಹುಪಾಲು ಸಂಕ್ರಮಣಕ್ಕೆ ಹೆದರಿ ಇಂತಹ ವಿಷಮ ಹೊತ್ತಲ್ಲಿ ಬೆನ್ನು ತಿರುಗಿಸಿ ತಲೆಮರೆಸಿಕೊಂಡು ಪರಾರಿಯಾಗಲು ಹವಣಿಸುತ್ತಿದ್ದ ಹೊತ್ತಲ್ಲಿˌ ಇವನಂತಹ ಸ್ವಯಂ ಸೇವಕರ ತುರ್ತು ಅಗತ್ಯ ಆಸ್ಪತ್ರೆಗೂ ಇತ್ತು ಹಾಗೂ ಚಿಂತಾಜನಕ ಸ್ಥಿತಿ ತಲುಪಿದ್ದ ಊರಿಗೂ ಇವನಂತವರ ಅಗತ್ಯವಿತ್ತು. 

ಸರಕಾರಿ ಆಸ್ಪತ್ರೆಯ ಮೂಲಕ ಇವರ ಖಾಸಗಿ ಆಸ್ಪತ್ರೆಗೆ ನಿಗದಿಯಾಗಿರುತ್ತಿದ್ದ ಸಲೈನ್ ಬಾಟಲಿಗಳನ್ನ ಹೊತ್ತು ತರೋದುˌ ಒಳರೋಗಿಗಳಿಗೆ ಎಳನೀರು ಕೆತ್ತಿಸಿ ತಂದು ಕುಡಿಸೋದುˌ ಡ್ರಿಪ್ ಹಾಕೋದು - ಖಾಲಿ ಡ್ರಿಪ್ ಬಾಟಲಿಗಳನ್ನ ತೆಗೆಯೋದು. ಆಸ್ಪತ್ರೆಯ ಶೌಚಾಲಯ ತೊಳೆಯೋದು ಹೀಗೆ ಅದೂ ಇದು ಮೇಲು ಕೀಳು ಅಂತ ಪರಿಗಣಿಸದೆ ಎಲ್ಲಾ ಕೆಲಸಗಳಲ್ಲೂ ಅವನು ತೊಡಗಿಕೊಂಡಿದ್ದ ಕಾಲ ಅದು. ಹೀಗಾಗಿ ಅವನ ಆಸ್ಪತ್ರೆಯ ಒಡನಾಡ ಓಡಾಟ ಸಹಜವಾಗಿಯೆ ಹೆಚ್ಚಿತ್ತು.

ಸರಿಸುಮಾರು ಎರಡೂವರೆ ದಶಕದ ಹಿಂದಿನ ಕಥೆ ಇದು. ಆ ದಿನಮಾನಗಳಲ್ಲಿ ನಡೆದಿದ್ದ ಘಟನೆಯೊಂದು ಅವರ ಮನೆಯ ಮಂಕಾದ ವಾತಾವರಣದಲ್ಲಿ ಮತ್ತೆ ಮಿಣುಕು ದೀಪ ಹೊತ್ತಿಸಿತ್ತು. ಅವರೂರಿಂದ ಕರಾವಳಿಗೆ ಸಾಗುವ ರಾಜರಸ್ತೆಯ ಪಕ್ಕದಲ್ಲಿರುವ ಹಳ್ಳಿಯೊಂದರ ಹೆಸರು ಬೆಟ್ಟದಕೇರಿ. ಕಾಲೇಜಿನಲ್ಲಿ ಓದುತ್ತಿದ್ದ ಅಲ್ಲಿನ ಸಿರಿವಂತ ಒಕ್ಕಲಿಗರ ಮನೆಯ ಹುಡುಗಿಯೊಂದು ಪ್ರೀತಿ ಪ್ರೇಮದ ಅಮಲಿಗೆ ಬಲಿಯಾಗಿ ತನ್ನ ಬ್ರಾಹ್ಮಣ ಪ್ರಿಯಕರನ ಪಿಂಡ ಹೊತ್ತು ಗರ್ಭಿಣಿಯಾಗಿ ನಿಂತಳು. ಆರಂಭದಲ್ಲಿ ಗರ್ಭ ಜಾರಿಸಲು ಲಭ್ಯವಿದ್ದ ಎಲ್ಲಾ ಔಷಧಿ ಮಾಡಿಯೂ ಈ ಗಟ್ಟಿಪಿಂಡ ಜಾರದೆ ಭದ್ರವಾಗಿ ಉಳಿದಾಗ ಚಿಂತಾಕ್ರಾಂತವಾದ ಅವಿವಾಹಿತ ಬಸುರಿ ಹುಡುಗಿಯ ಕುಟುಂಬ ಸಣ್ಣ ಪುಟ್ಟದಕ್ಕೂ ತಾವು ಧಾವಿಸಿ ಬಂದು ಚಿಕಿತ್ಸೆ ಪಡಿಯುತ್ತಿದ್ದ ವೈದ್ಯರ ಮೊರೆಬಂತು. ಅಂತೂ ಅಲ್ಲೆ ಇರಿಸಿ ಹುಡುಗಿಗೆ ಹೆರಿಗೆ ಮಾಡಿಸುವ ಏರ್ಪಾಡಾಯಿತು. ಏಳು ತಿಂಗಳಿಗೆ ಪ್ರಸವಪೂರ್ವ ದಿನದಲ್ಲಿ ಹುಟ್ಟಿದ ಮಗುವಿನ ಮುಖ ಸಹ ನೋಡದೆ ಹೆತ್ತವಳಿಗೂ ನೋಡಗೊಡದೆ ಸಿರಿವಂತ ಸಾಹುಕಾರರು ನೋಟಿನ ಕಂತೆಗಳೊಂದಿಷ್ಟನ್ನ ವೈದ್ಯರ ಕೈಗೆ ತುರುಕಿ ತಾವು ಬಾಣಂತಿ ಮಗಳನ್ನ ಕಾರಿಗೆ ಒಟ್ಟಿ ಸುಖವಾಗಿ ಊರಿನ ಹಾದಿ ಹಿಡಿದರು. 


ಎರಡು ತಿಂಗಳು ಆಸ್ಪತ್ರೆಯ ಆರೈಕೆಯಲ್ಲೆ ಉಳಿದಿದ್ದ ಅನಾಥ ಮಗುವಿಗೆ ಒಂದು ಮನೆ ಹುಡುಕುವುದು ಅನಿವಾರ್ಯವಾಗಿತ್ತು. ಹೇಳಿ ಕೇಳಿ ಕಳ್ಳ ಬಸುರಿನ ಕಥೆ. ಸರಕಾರಿ ಆಶ್ರಯಕ್ಕೆ ಕಳಿಸುವಂತೆಯೂ ಇರಲಿಲ್ಲ! ಹೀಗಾಗಿ ಇವನ ಆಯಾ ತಾಯಿಯ ಮನವಿಗೆ ಮಣಿದ ವೈದ್ಯರು ಮಗುವನ್ನ ಇವನ ಅತ್ತೆಗೆ ದಯಪಾಲಿಸಿ ಕೈತೊಳೆದುಕೊಂಡರು. ಎರಡೆರಡು ಎಳೆ ಮಕ್ಕಳ ಸಾವಿನಿಂದ ಕೆಂಗೆಟ್ಟಿದ್ದ ಇವನ ಅತ್ತೆ ಈ ಎಳೆಬೊಮ್ಮಟೆ ಮಡಿಲು ತುಂಬುತ್ತಲೆ ನಾಟಕೀಯವಾಗಿ ಚೇತರಿಸಿಕೊಂಡಳು. ಯಾರೂ ಇಲ್ಲ ಅನ್ನುವಂತಿದ್ದ ಕೂಸಿಗೆ ಎಲ್ಲರೂ ಇರುವ ಒಂದು ಮನೆ ಹಣೆಬರಹದಲ್ಲಿತ್ತು ಅಂತ ಕಾಣ್ತದೆ. ಸ್ವಸ್ತಿಕ ಅನ್ನೋ ಹೆಸರಿಡಿಸಿಕೊಂಡು ಇವನತ್ತೆಯ ಮಗಳಾಗಿ ಆ ಮಗು ಇವರ ಮನೆಯವರಲ್ಲೆ ಒಬ್ಬಳಾಗಿ ಸೇರಿ ಹೋಯಿತು.


*****

ಬಹುಶಃ ಕಾಙಂನಗಾಡಿನಲ್ಲಿ ಅದವನ ಮೂರನೆ ದಿನ. ಆ ಸಂಜೆ ಹಾಗೆ ಅಡ್ಡಾಡುತ್ತಾ ಕುಶಾಲನಗರದ ಕಡಲ ತಡಿ ಹೋಗಿ ನಿತ್ಯ ಕೂರುವ ಮರಳ ದಿಬ್ಬದ ಮೇಲೆ ಕೂತ. ಇನ್ನೂ ಸಂಜೆ ಐದರ ಆಸುಪಾಸು. ಸೂರ್ಯ ಇನ್ನೇನು ಮುಳುಗುವ ತಯಾರಿಯಲ್ಲಿದ್ದ. ಝಳ ಕಡಿಮೆಯಾಗಿದ್ದರೂ ಬಿಸಿಲಿನ್ನೂ ಪೂರ್ತಿ ಇಳಿದಿರಲಿಲ್ಲ. ಇನ್ನೇನು ಅರ್ಧ ತಾಸಿನೊಳಗೆ ನಾಟಕೀಯವಾಗಿ ರವಿ ಜಾರಿ ಕತ್ತಲು ಸುತ್ತಲೂ ಸಾರಿ ಪರಿಸರದ ಚಹರೆಪಟ್ಟಿಯೆ ಬದಲಾಗಲಿತ್ತು. ಚಳಿಗಾಲದಲ್ಲಿ ಹಗಲಿಗೆ ಆಯುಷ್ಯ ಕಡಿಮೆ. ಇರುಳಿನದ್ದೆ ಅಧಿಪತ್ಯ ಇರುವ ಕಾಲ ಅದು.

ಒಬ್ಬ ಸಣ್ಣ ಹುಡುಗ ಹತ್ತಿರ ಬರಲೋ ಬೇಡವೋ ಅನ್ನುವ ಅನುಮಾನದಿಂದ ಇವನ ಬಳಿ ಬಂದ. ಅಪರಿಚಿತನನ್ನ ಕಾಣವಾಗಿನ ಭಯ ಮಾತನಾಡಿಸುವಾಗಿನ ಹಿಂಜರಿತದ ನಾಚಿಕೆ ಸಹಜವಾಗಿದ್ದ ಎಳೆಯನ ದ್ವಂದ್ವ ಇವನಿಗೆ ಅರ್ಥವಾಗಿ ಇವನೆ ಮುಂದಾಗಿ ಅವನನ್ನ ಮಾತನಾಡಿಸಿದ. ಇವನ ಬಾಯಿಯಿಂದ ಉದುರಿದ ಕನ್ನಡ ಆ ಮಗುವಿನ ಮಖ ಮೊರದಗಲವಾಗಿಸಿತು. "ನೀವು ಕನ್ನಡ ಮಾತಾಡುದ!" ಅಂದ ಅವ. "ಹೌದು ನೀನು?". "ನಾನೂ ಸಾ ಕನ್ನಡವೆ" ಅಂದವನ ಧ್ವನಿಯಲ್ಲಿ ಅದೊಂತರಾ ಆಪ್ತಭಾವ ಕೇಳಿದಂತಾಯಿತು.

ಹೀಗೆ ಅವರ ಸ್ನೇಹ ಆರಂಭವಾಯಿತು. ಸುಭಾಶ ಸ್ಥಳಿಯ ಕನ್ನಡ ಶಾಲೆಯಲ್ಲಿ ಐದನೆ ತರಗತಿಯ ವಿದ್ಯಾರ್ಥಿ. ಮಂಗಳೂರು ಮಹಾನಗರವನ್ನ ಮೊನ್ನೆ ಶಾಲಾ ಪ್ರವಾಸದಲ್ಲಿ ಕಂಡು ಬೆರಗಾಗಿ ಬಂದಿದ್ದಾನೆ. ಬೆಂಗಳೂರಿನ ಬಗ್ಗೆ ಅವರಿವರಿಂದ ಕೇಳಿದ್ದಾನೆ. ಇವನು ಬೆಂಗಳೂರಿಂದಲೆ ಬಂದಿರೋದು ಅಂತ ತಿಳಿದ ಮೇಲೆ ಆ ಊರಿನ ಬಗ್ಗೆ ಕೇಳಲು ಅವನ ಕುತೂಹಲದ ಮನಸಲ್ಲಿ ಸಾವಿರ ಪ್ರಶ್ನೆಗಳಿವೆ. ಎಲ್ಲರೂ ಎಲ್ಲರನ್ನ ಆಂಟಿ ಅಂಕಲ್ ಅಂತನೆ ಸಂಬೋಧಿಸಿ ಮಾತನಾಡುವ ವಿಪರೀತ ಕಾಲದಲ್ಲಿ ಮುಗ್ಧತೆ ಇನ್ನೂ ಮರೆಯಾಗದಿರುವ ಧ್ವನಿಯಲ್ಲಿ ಮಾತು ಮಾತಿಗೂ ಅಣ್ಣ ಅಂತ ಕರೆಯುತ್ತಾ ಸಂವಹಿಸುತ್ತಾನೆ.

ದೊಡ್ಡ ಪ್ರಾಯದವರೇನಾದರೂ ಹೀಗೆ ಒಟಗುಟ್ಟಲಾರಂಭಿಸಿದರೆ ಕಿರಿಕಿರಿ ಅಂತ ಎದ್ದು ಹೋಗುತ್ತಿದ್ದನೇನೋ. ಆದರೆ ಪುಟ್ಟ ಪ್ರಾಯದ ಈ ಪೋರನ ಅಮಾಯಕತೆಗೆ ಮಾರು ಹೋಗಿ ಅವನ ಸಕಲೆಂಟು ಕುತೂಹಲದ ಕಣ್ಗಳ ಪ್ರಶ್ನಾವಳಿಗಳಿಗೆ ಸಾಧ್ಯವಾದಷ್ಟು ಸಮಧಾನಕರ ಉತ್ತರ ಕೊಡುತ್ತಾ ಕೂತ.

ಅಮ್ಮ ಇದಾಳೆˌ ಅಪ್ಪ ಇಲ್ಲ. ಮರದ ಕೆಲಸ ಮಾಡ್ತಿದ್ದವ ಕುಡಿದು ಕುಡಿದೆ ಎಲುಬಿನ ಹಂದರವಾಗಿದ್ದ. ಕೊರೋನದ ಮಾರಿ ಅವನ ಉಳಿದಿದ್ದ ಜೀವದ ಪಸೆ ನೆಕ್ಕಿಕೊಂಡು ಹೋಯಿತು. ಈಗ ಇಲ್ಲೆ ಕಡಲ ತಡಿಯ ಸ್ವಂತ ಮನೆಯಲ್ಲಿ ಅಮ್ಮ ಪುಟ್ಟ ತಂಗಿಯ ಜೊತೆ ಸುಭಾಶ ಇದಾನೆ. ಕಡಲ ತಡಿಯಲ್ಲಿ ಬಿದ್ದಿರೋ ಕಾಯಿˌ ಮಡಲು ಆರಿಸಿಕೊಳ್ಳಲು ಪ್ರತಿ ಸಂಜೆ ಶಾಲೆ ಮುಗಿಸಿ ಬಂದಾದ ಮೇಲೆ ಬರುವ ಅವ ಇವನನ್ನ ಕಳೆದೆರಡು ಮೂರು ದಿನಗಳಿಂದ ಗಮನಿಸಿದ್ದಾನೆ. ಅಪರಿಚಿತ. ಪರದೇಸಿ ಅನ್ನುವ ಅನುಮಾನ ಮೂಡಿದೆ. ಮನೆಯಲ್ಯಾರೂ ಅವನ ಮಾತುಗಳಿಗೆ ಕಿವಿಯಾಗುವವರಿಲ್ಲ. ಧೈರ್ಯ ಮಾಡಿ ಇವನ ಜೊತೆ ಮಾತನಾಡಲು ಹವಣಿಸಿದ್ದಾನೆ. ಅದರಲ್ಲಿ ಯಶಸ್ವಿಯೂ ಆಗಿದ್ದಾನೆ. ಅಪರಿಚಿತ ಪರಿಸರದಲ್ಲಿ ಹೀಗೆ ಯಾವುದೆ ಉದ್ದೇಶಗಳೆ ಇದ್ದಿರದ ಸ್ನೇಹವೊಂದರ ಅಗತ್ಯ ಇವನಿಗೂ ಇತ್ತು.

( ಇನ್ನೂ ಇದೆ.)


https://youtu.be/ZsAGtBje3k0

No comments: