ಒಲಿಯ ಬೇಕಿದ್ದ ಪ್ರಾಯದಲ್ಲಿ ಅವಳು ಒಲಿದು ಜೊತೆಗೆ ಬಂದಿದ್ದರೆ. ಆಗಬೇಕಿದ್ದ ವಯಸ್ಸಿನಲ್ಲಿ ತನ್ನದೂ ಮದುವೆಯಾಗಿದ್ದರೆ ಬಹುಶಃ ಇಷ್ಟೆ ದೊಡ್ಡ ಮಗ ಈಗ ತನಗೂ ಇದ್ದಿರುತ್ತಿದ್ದನಲ್ಲ!ˌ ಅವನೂ ಕೂಡ ಹೀಗೆಯೆ ತರಾವರಿ ಪ್ರಶ್ನಾವಳಿಗಳಿಂದ ತನ್ನನ್ನ ಕಂಗಾಲುಗೊಳಿಸುತ್ತಿದ್ದನಲ್ಲ ಅನ್ನುವ ಆಲೋಚನೆ ಅಚಾನಕ್ಕಾಗಿ ಮನಸೊಳಗೆ ಮೂಡುತ್ತಲೆˌ ವಿಷಾದಕ್ಕೋ ಕುಚೋದ್ಯಕ್ಕೋ ಒಂದು ಮಾಸಲು ನಗುವಿನ ಸೆಲೆಯೊಂದು ಅವನ ಮುಖದ ಮೇಲೆ ಹಾದು ಹೋಯಿತು.
ಯಾವುದೆ ಒಂದು ಅರೆಬರೆ ಹಳ್ಳಿಯಂತಹ ಪಟ್ಟಣ ಪ್ರದೇಶದಿಂದ ಬರುವ ಸರಾಸರಿ ಮಕ್ಕಳ ಮನದಲ್ಲಿರುವ ಕುತೂಹಲ ಸುಭಾಶನ ಮನಸಲ್ಲೂ ಇತ್ತು. ಇಪ್ಪತ್ತೈದು ವರ್ಷಗಳ ಹಿಂದೆ ಇದ್ದ ತನ್ನನ್ನೆ ತಾನು ಕಾಲಯಾನದ ಕನ್ನಡಿಯಲ್ಲಿ ಸ್ವಲ್ಪ ಹಿಂದೆ ಸರಿದು ಕಾಣುತ್ತಿರುವ ಭ್ರಮೆಗೆ ಬಿದ್ದನವ.
ಆ ಕಾಲಕ್ಕೂ ಈ ಕಾಲಕ್ಕೂ ಇರುವ ಸಣ್ಣಪುಟ್ಟ ವ್ಯತ್ಯಾಸಗಳೆಂದರೆ ಬಡತನ ಬಹುತೇಕ ಸಾರ್ವತ್ರಿಕವಾಗಿದ್ದ ಆ ಕಾಲದಲ್ಲಿ ಕೆಳ ಮಧ್ಯಮ ವರ್ಗದವರ ಸಂಖ್ಯೆಯೆ ಅಪಾರವಾಗಿತ್ತು. ಇವತ್ತಿನ ಪೀಳಿಗೆ ಸಹಜವಾಗಿ ಬದುಕಿನ ಅಂಗಗಳೆಂದೆ ಪರಿಗಣಿಸುವ ಟಿವಿˌ ಫ್ಯಾನುˌ ಮಿಕ್ಸರುˌ ಅಡುಗೆ ಅನಿಲದ ಬಳಕೆಯೂ ಸಹ ಐಶಾರಾಮದ ಸಾಲಿನಲ್ಲಿ ಅಂದಿತ್ತು. ಖಾಸಗಿಯಾಗಿ ವಾಹನಗಳನ್ನ ಕೊಂಡುಕೊಳ್ಳುವ ಸಾಮರ್ಥ್ಯ ಇದ್ದವರು ಆಗೆಲ್ಲ ವಿರಳಾತಿ ವಿರಳ. ಹೀಗಾಗಿ ಸಮೂಹ ಸಾರಿಗೆಗಳಿಗೆ ಬಹಳ ಬೇಡಿಕೆ ಹಾಗೂ ಮರ್ಯಾದೆ ಇತ್ತು. ಹೇಗಾದರೂ ಬೆಳೆದು ದುಡ್ಡು ಮಾಡಬೇಕು ಅನ್ನೋ ಮನಸ್ಥಿತಿಯ ಮಂದಿ ಕನಿಷ್ಠ ಗ್ರಾಮೀಣ ಭಾರತದಲ್ಲಾದರೂ ಕಡಿಮೆ ಸಂಖ್ಯೆಯಲ್ಲಿದ್ಢರುˌ ಹೀಗಾಗಿ ಹಣವಂತಿಗೆಗಿಂತ ನೈತಿಕತೆಗೆ ಜನ ಗೌರವಕೊಡುವ ಕಾಲ ಅದಾಗಿತ್ತು.
ಸಿನೆಮಾ ಆಗಿನ್ನೂ ಬೀದಿಗೆ ಬಂದಿಲ್ಲದ ಕಾರಣ ಸಿನೆಮಾ ತಯಾರಕರು ಹಾಗೂ ನಟಿಸುವವರು ನಿಜವಾಗಿಯೂ ಕೈಗೆಟುಕದ ನಕ್ಷತ್ರಗಳೆ ಆಗಿರುತ್ತಿದ್ಢರುˌ ಈಗಿನ ಬೀದಿಗೆ ಬಿದ್ದು ಗಠಾರ ಸೇರಿರುವ ತಾರೆಗಳ ಕಥೆ ಬಿಡಿ. ಮಾರುತಿ ಕಾರುಗಳು ಆಗಷ್ಟೆ ಮಾರುಕಟ್ಟೆಗೆ ಲಗ್ಗೆ ಇಡಲಾರಂಭಿಸಿದ್ದರೂ ಸಹ ಅಂಬಾಸಡರ್ ಇನ್ನೂ ತನ್ನ ಪಟ್ಟ ಕಳೆದುಕೊಳ್ಳದೆ ನಗರವಷ್ಟೆ ಅಲ್ಲದೆ ಗ್ರಾಮೀಣ ಭಾರತದ ರಸ್ತೆಗಳಲ್ಲೂ ಅಧಿಪತಿಯಾಗಿಯೆ ಮೆರೆಯುತ್ತಿತ್ತು. ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳೆಲ್ಲ ನಿಜವೆಂದೆ ಜನ ನಂಬುತ್ತಿದ್ದರು ಹಾಗೂ ಬಹುತೇಕ ಅದು ಸತ್ಯಸಂಗತಿಯೂ ಆಗಿತ್ತುˌ ಇವತ್ತಿನ ಬಿಕರಿಗಿಟ್ಟಿರುವ ಬರಗೆಟ್ಟ ಪತ್ರಿಕೋದ್ಯಮದ ಬಗ್ಗೆ ಮಾತಾಡೋದು ಬೇಡ ಬಿಡಿ. ಇನ್ನೂ ಜನ ಪರಸ್ಪರರ ಕ್ಷೇಮ ವಿಚಾರಣೆಗೆ ಪತ್ರ ಬರೆಯುವ ತಾಳ್ಮೆ ಇಟ್ಟುಕೊಂಡಿದ್ದರು. ಕಳಿಸಿರುವ ಕಾರಣವದೇನೆ ಇದ್ದರೂ ಕೂಡ ತಂತಿ ಬಂತೆಂದರೆ ಎಲ್ಲರೂ ಆತಂಕಿತರಾಗುತ್ತಿದ್ದರು! ಮನೆಯೂಟಕ್ಕೆ ಮಹತ್ವವಿತ್ತು. ಕೂಡು ಕುಟುಂಬಗಳು ಹೇರಳವಾಗಿದ್ದವು. ತಮ್ಮ ಮನೆಯ ರೇಡಿಯೋದಿಂದಲೋ ಅಥವಾ ಅಕ್ಕಪಕ್ಕದ ಮನೆಯವರದಲಿಂದಲೋ ಬಹುತೇಕ ಎಲ್ಲರ ಕಿವಿಗೂ ಪ್ರದೇಶ ಸಮಾಚಾರˌ ಚಿತ್ರಗೀತೆಗಳು ಹಾಗೂ ಕೃಷಿ ವಾಣಿ ಎಲ್ಲರ ಕಿವಿಗೂ ಬೀಳುತ್ತಿತ್ತು. ಸಿನೆಮಾಗಳನ್ನ ಚಿತ್ರಮಂದಿರಗಳಿಗೆ ಹೋಗಿಯೆ ನೋಡುವ ಸಂಸ್ಕೃತಿ ಆಗಿನ್ನೂ ಇತ್ತು ಹಾಗೂ ಹಾಗೆ ಹೋಗುವ ದಿನ ದಿಬ್ಬಣ ಹೊರಟ ಕಳೆ ಹೋಗುವವರ ಮನೆಯಲ್ಲಿರುತ್ತಿತ್ತು. ಹಬ್ಬ ಹರಿದಿನಗಳಿಗೆ ಮಾತ್ರ ಹೊಸ ಬಟ್ಟೆ ಹಣೆಬರಹದಲ್ಲಿ ಬರೆದಿರುತ್ತಿತ್ತು. ಶಾಲೆಗೆ ಮಕ್ಕಳು ಪಾಠಿ ಚೀಲದಲ್ಲಿ ಸ್ಲೇಟು ಬಳಪ ಕೊಂಡೊಯ್ಯುವ ಕ್ರಮವಿತ್ತು.
ನಾಲ್ಕನೆ ತರಗತಿಯವರೆಗೆ ಪೆನ್ನು ಬಳಸಲು ನಿರ್ಬಂಧವಿತ್ತು. ಕೆಲವೊಂದು ಕಡೆಗಳಲ್ಲಂತೂ ಐದರಿಂದ ಏಳರವರಗೆ ಇಂಕು ಹಾಕುವ ಮಸಿ ಪೆನ್ನುಗಳನ್ನೆ ಬಳಸಬೇಕಿತ್ತು. ಜನರಲ್ಲಿ ಲೋಲುಪತೆ ಈಗಿನಷ್ಟಿರಲಿಲ್ಲ. ದುಡ್ಡಿಗೆ ನಿಜವಾಗಲೂ ಬೆಲೆಯಿತ್ತು. ಕೊಳ್ಳುಬಾಕತನ ಅಷ್ಟಾಗಿ ಸಾಂಕ್ರಾಮಿಕವಾಗಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಭೂಮಿ ಇನ್ನೂ ಹೆಚ್ಚು ಹಸುರ್ಹಸಿರಾಗಿತ್ತು. ಜಲ ನೆಲ ಹಾಗೂ ಗಾಳಿಯಲ್ಲಿ ಮಾಲಿನ್ಯದ ಪ್ರಮಾಣ ಇಂದಿಗಿಂತ ತುಂಬಾ ಕಡಿಮೆಯಿತ್ತು.
ಒಟ್ಟಿನಲ್ಲಿ ಆಗಿನ ಕಾಲದಲ್ಲಿ ಒಳಗೂ ಹೊರಗೂ ಸ್ವಚ್ಛತೆಗೆ ಆದ್ಯತೆ ಮುಗ್ಧತೆಗೆ ಮಾನ್ಯತೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಯೋಗ್ಯತೆಗೆ ಗೌರವ ಇವೆಲ್ಲಾ ಇತ್ತು. ರಾಜಕೀಯದ ಕ್ರಿಮಿಗಳು ಆಗಷ್ಟೆ ಜಾತಿ ಧರ್ಮಗಳ ಹೆಸರಲ್ಲಿ ಜನರ ಮನಸೊಳಗೆ ವಿಷದ ಬೀಜ ಬಿತ್ತಲು ಆರಂಭಿಸಿದ್ದ ಕಾರಣˌ ಸಾಮಾಜಿಕ ಸ್ವಾಸ್ಥ್ಯ ಇಂದಿನಷ್ಟು ಹದಗೆಟ್ಟಿರಲಿಲ್ಲ. ಸುಭಾಶನಂತಹ ಈ ಕಾಲದ ಮಕ್ಕಳಿಗೆ ಎಳೆಯ ಪ್ರಾಯದಲ್ಲಿ ಇವನ್ನೆಲ್ಲ ಬರಿ ಮಾತುಗಳಲ್ಲಷ್ಟೆ ಹೇಳಿ ಮನದಟ್ಟು ಮಾಡಿಸುವುದು ಕಷ್ಟ. ಅವರೆ ಬೆಳೆದ ನಂತರ ಮುಂದೆ ಕುತೂಹಲವಿದ್ದರೆ ಇದನ್ನ ಅರಸಿ ಅರಿತುಕೊಂಡಾರು ಅಂದುಕೊಂಡ.
*******
ಸುಭಾಶ ಇವತ್ತು ಸ್ವಲ್ಪ ಬೇಗ ಮನೆಗೆ ಮರಳುವ ತವಕದಲ್ಲಿದ್ದಂತೆ ಕಂಡ. "ಯಾಕೋ ಅವಸರ?" ಅಂದರೆ "ಮತ್ತೆಂತಸಾ ಇಲ್ಲˌ ಇವತ್ತು ಕೆಳಬೆಟ್ಟಿನ ತರವಾಡಿನಲ್ಲಿ ಮುತ್ತಪ್ಪ ಮತ್ತೆ ವಿಷ್ಣುಮೂರ್ತಿಯ ಕೋಲ ಉಂಟು! ನನ್ಗೆ ಹೋಗಿ ಕೋಲ ನೋಡ್ಲಿಕ್ಕುಂಟು." ಅಂದ. ಕೋಲ ಅಂದ ಕೂಡಲೆ ಇವನ ಕುತೂಹಲ ಗರಿಗೆದರಿತು. "ಅದೆಲ್ಲಿನ ಕೆಳಬೆಟ್ಟು?" ಅಂದ. "ನೀವು ಸಾ ಬರ್ತಿರ್ಯಾ! ನಿಮ್ಮ ಈ ಕ್ಯಾಮರಾದಿಂದ ಫೋಟೊ ತೆಗಿತಿರಾದ್ರೆ ಕರ್ಕೊಂಡು ಹೋಗ್ತೆ! ನನ್ದೂ ಚೆಂದಗೆ ಫೋಟೋ ತೆಗಿಬೇಕು ಮತ್ತೆ?!" ಅನ್ನುವ ಕಂಡಿಷನ್ನನ್ನ ಅವನೆ ಹಾಕಿ ಕೇಳುವ ಮೊದಲೆ ಅವನೆ ಇವನಿಗೆ ಆಹ್ವಾನವಿತ್ತ. "ಆಯ್ತು ಮಾರಾಯ! ಆದ್ರೆ ನನ್ಗೆ ಸ್ವಲ್ಪ ರೂಮಿಗೆ ಹೋಗಿ ಬರ್ಲಿಕ್ಕುಂಟ. ಆಮೇಲೆ ಬರ್ತಿನಿ ಆದಿತಲ್ಲ?" ಅಂದ.
"ಆಯ್ತಾಯ್ತುˌ ನೀವು ನಿಮ್ಮ ಹೊಟೆಲಿನ ಕೋಣೆಗೆ ಹೋಗಿ ಬನ್ನಿ ಅಡ್ಡಿಲ್ಲ. ಕೋಲ ಊಟ ಮಾಡಿ ಹೋದ ನಂತರ. ನೀವು ಊಟ ಮಾಡಿ ಆಮೇಲೆ ಆ ಮೇಲ್ಕಾವು ಭಗವತಿ ಕ್ಷೇತ್ರದ ಹತ್ರ ಬನ್ನಿ ಆಯ್ತˌ ನಾವು ಕೋಲ ನೋಡಕ್ಕೆ ಹೋಗುವ. ಕ್ಯಾಮೆರಾ ಮರಿಬೇಡಿ ಮತ್ತೆ ಆಯ್ತ? ಫೋಟೋ ತೆಗಿ ಬೇಕಲ್ಲ!" ಅಂತ ಒತ್ತಿ ಒತ್ತಿ ಸ್ವಕಾರ್ಯವನ್ನ ನೆನಪಿಸಿದ. "ಆಯ್ತೋ ಮಾರಾಯ ಯಾವುದು ಮರೆತರೂ ಕ್ಯಾಮರಾ ಮರೆಯಲ್ಲ ಬಿಡು! ನಿನ್ನ ಫೋಟೋ ತೆಗಿದಿದ್ರೆ ಮುತ್ತಪ್ಪನಿಗೆ ಸಿಟ್ಟು ಬಂದು ಶಾಪ ಗೀಪ ಕೊಡ್ತಾನೇನೋ!" ಅಂದರೆ ಮಗು ಕಿಸಿಕಿಸಿ ಸದ್ದು ಹೊರಡಿಸುತ್ತಾ ಹಲ್ಲು ಬಿಟ್ಟು ನಕ್ಕಿತು. ಪರವಾಗಿಲ್ಲ! ಜೋಕು ಇವನಿಗೂ ಅರ್ಥವಾಗುತ್ತದೆ ಅಂದುಕೊಂಡ ಇವನ ಮುಖದಲ್ಲೂ ತುಂಟನಗು ಅರಳಿತು.
*******
ಬ್ಯಾಂಡು ಚೆಂಡೆ ತ್ರಾಸೆ ಗಂಟೆಮಣಿ ದುಡಿ ನಾದಸ್ವರ ಕೊಳಲು ಹೀಗೆ ಅಲ್ಲಿ ಹಲವಾರು ವಾದ್ಯಗಳ ಸಂತೆಯೆ ನೆರೆದಂತಿತ್ತು. ಮುತ್ತಪ್ಪನ ಕೋಲ ಬಹುತೇಕ ಸಂಜೆ ಸೂರ್ಯ ಕಂತುವಾಗಲೆ ಆರಂಭವಾಗಿ ಎರಡು ಹಂತಗಳಲ್ಲಿ ಸಾಗಿ ರಾತ್ರಿ ಮಾಗುವ ಹೊತ್ತಿಗೆ ಮುಗಿಯುತ್ತದಂತೆ. ಮುತ್ತಪ್ಪ ಭೂತಕ್ಕೆ ವೇಷ ಕಟ್ಟುವವರ ವೇಷವೂ ಸಹ ಅಷ್ಟೇನೂ ವಿಶೇಷ ಅಲಂಕಾರ ಇಲ್ಲದ ಸಾಕಷ್ಟು ಸರಳ ವೇಷಗಾರಿಕೆ ಅಷ್ಟೆ. ಇವನು ರೂಮಿಗೆ ಮರಳಿ ಮಿಂದುˌ ಕೆಳಗಿನ ನಾಯರನ ಕ್ಯಾಂಟೀನಿನಲ್ಲಿ ಮೀನೂಟ ಮಾಡಿ ಮೇಲ್ಕಾವಿಗೆ ಬರುವಾಗಲೆ ಘಂಟೆ ಎಂಟೂವರೆಯಾಗಿತ್ತು.
ಕ್ಯಾಮರಾ ತಂದು ಫೊಟೋ ತೆಗೆಯುವ ಮಾತು ಕೊಟ್ಟ ಈ ಬೆಂಗಳೂರಣ್ಣ ಕೈಕೊಟ್ಟನೇನೋ ಎನ್ನುವ ಆತಂಕ ಹೊತ್ತ ಮುಖದಲ್ಲಿ ಚಡ್ಡಿ ಪೈಲ್ವಾನ ಸುಭಾಶ ಆಗಲೆ ಬಂದು ಚಡಪಡಿಸುತ್ತಾ ಇವನ ಬರುವನ್ನೆ ಕಾಯುತ್ತಾ ನಿಂತಿದ್ದ. ಅನಿರೀಕ್ಷಿತವಾಗಿ ಒದಗಿ ಬಂದ ಕೋಲದ ಸಾಂಸ್ಕೃತಿಕ ಪ್ರದರ್ಶನ ನೋಡುವ ಸದಾವಕಾಶ ತಪ್ಪಿಸಿಕೊಳ್ಳಲು ಇವನೇನು ಮೂರ್ಖನೆ? ಇವನ ತಲೆ ಕಂಡದ್ದೆ ದೊಡ್ಡ ಯಜಮಾನನಂತೆ ಮಂಡೆಗೆ ಉಲ್ಲಾನಿನ ಟೊಪ್ಪಿ ಏರಿಸಿಕೊಂಡು ಮಫ್ಲರ್ ಕುತ್ತಿಗೆಗೆ ಸುತ್ತಿಕೊಂಡು ಒಂದು ಕೈಯಲ್ಲಿ ಮಿಣುಕು ಬ್ಯಾಟರಿ ಹಿಡಿದುಕೊಂಡು ಮತ್ತೊಂದರಲ್ಲಿ ಚೀಲವೊಂದನ್ನ ಹಿಡಿದುಕೊಂಡು ಕಾಯುತ್ತಾ ನಿಂತಿದ್ದ ಸುಭಾಶನ ಮುಖದಲ್ಲೊಂದು ಗೆಲುವಿನ ನಗೆ ಮೂಡಿತು.
( ಇನ್ನೂ ಇದೆ.)
https://youtu.be/RLl01d6tRcc
No comments:
Post a Comment