01 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೭ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೭ 👊



"ಬನ್ನಿ ಬಿಸ ಬಿಸ ಹೋಗುವˌ ಕೋಲ ಮುಗಿಬಹುದು ಇಲ್ಂದ್ರೆ" ಅಂತ ಅವಸರವಸರವಾಗಿ ಹೆಜ್ಜೆ ಹಾಕುತ್ತಾ ಓಡೋಡುವನಂತೆ ಅವ ಮುಂದುವರೆದ. "ನಿಲ್ಲೋ ಮಾರಾಯ! ನನಗೆ ದಾರಿ ಗೊತ್ತಿಲ್ಲ ಬೇರೆ. ನಿಂಗೆ ಪಟ ಬೇಕ ಬೇಡ್ವಾ" ಅಂತ ಬ್ರಹ್ಮಾಸ್ತ್ರ ಪ್ರಯೋಗಿಸಿ ಗದರಿದ ಇವನ ಧ್ವನಿ ಕೇಳಿ ಅವನ ನಡುಗೆ ನಿಧಾನಿಸಿತುˌ. ಅವನ ಕೈಲಿದ್ದ ಚೀಲದಲ್ಲೇನೋ ಮಿಸುಕಾಡಿದಂತಾಯಿತು. "ಎಂತದ ಅದು ಚೀಲದಲ್ಲಿ?" ಅಂದರೆ "ಓ ಅದಾ ಪರಕೆ ಕೋಳಿ. ಕಳೆದ ಸಾರಿ ಕೊರೋನಾ ಹೇಳಿ ಕೋಲ ಇರಲಿಲ್ಲ. ಅಪ್ಪನಿಗೆ ಕಾಯಿಲೆಯಾದಾಗ ಹೇಳಿದ್ದ ಹರಕೆ ಇದು. ಅಮ್ಮ ಕೊಟ್ಟು ಕಳಿಸಿದಾರೆ." ಅಂತು ಮಗು.

ಅಯ್ಯೋ ವಿಧಿಯೆˌ ಹೇಳಿದ ಹರಕೆ ಪೂರೈಸಲು ಕೋಳಿ ಕಳಿಸಿದಾರೆ. ಆ ಹೊತ್ತ ಹರಕೆ ಫಲಿಸದೆ ಆಗಲೆ ಒಂದು ಜೀವ ಬಲಿಯಾಗಿ ಹೋಗಿಯಾಗಿದೆ. ಈಗ ಮತ್ತೆ ಧರ್ಮಕ್ಕೆ ಕೋಳಿಯೊಂದರ ಕುತ್ತಿಗೆಗೆ ಕುತ್ತು ಬರಲಿಕ್ಕಿದೆ. ಒಟ್ಟಿನಲ್ಲಿ ಬೇಡಿದ್ದನ್ನ ದಯಪಾಲಿಸಿರದಿದ್ರೂ ಮುತ್ತಪ್ಪನಿಗೆ ಲಾಟರಿ ಹೊಡೆದಿದೆ ಅಂತ ಅನಿಸಿ ಮುಗುಳ್ನಕ್ಕ. ತನ್ನ ಚೀಲದಲ್ಲಿ ಕೋಳಿ ಇರೋದಕ್ಕೂˌ ಈ ಬೆಂಗಳೂರಣ್ಣ ಮುಗುಳ್ನಗಕ್ಕೂ ಸಂಬಂಧ ಅರಿವಾಗದೆ ಸುಭಾಶ ಇವನ ಮುಖವನ್ನೆ ನೋಡಿ ನಡುಗೆ ಮುಂದುವರೆಸಿದ. ದೂರದಿಂದ ಚಂಡೆಯ ನಾದಸ್ವರದ ನಾದ ಕತ್ತಲೆಯ ಮೌನವನ್ನ ಸೀಳಿಕೊಂಡು ಮೆಲುವಾಗಿ ಇವರ ಕರ್ಣಪಟಲ ಮುಟ್ಟುತ್ತಿತ್ತು. ಇಬ್ಬರೂ ನಡುಗೆ ಮುಂದುವರೆಸಿದರು.

ಹಾದಿ ಸಾಗಲು ಮಾತು ಆರಂಭಿಸಿ "ಅಲ್ಲನ ನಿಮ್ಮ ಮುತ್ತಪ್ಪನ ಕೋಲ ನೋಡಕ್ಕೆ ಬೇರೆ ಊರಿನ ಜನ ಬಂದ್ರೆ ಅಡ್ಡಿಲ್ವ" ಅಂದ. "ಯೇ ಹಂಗೆತನೂ ಇಲ್ಲಯˌ ಯಾರು ಸಾ ಬರಬಹುದು. ಮುತ್ತಪ್ಪ ಭೂತ ಬರಿ ಪಾಪದ ಜನಯ!" ಅಂದನವನು. ಎಲಾ ಎಲಾ! ಪಾಪದ ಜನ ಭೂತವ ಇಲ್ಲ ಭೂತ ಕಟ್ಟುವ ನಲಿಕೆಯವನ? ಅಂದುಕೊಂಡು ನಗುವಿನ ಪ್ರತಿಕ್ರಿಯೆ ನೀಡಿದನಿವ. "ಅಲ್ಲಾ ಮತ್ತೆ ನಿಮಗೆ ಮಲಯಾಳ ಬರ್ತದ? ಮುತ್ತಪ್ಪ ಭೂತ ಮಲಯಾಳದಲ್ಲೆ ಮಾತಾಡದು ಮತ್ತೆ! ಹೂವು ಗಂಧ ಪ್ರಸಾದ ಕೊಡುವಾಗ್ಲೂ ಮಲಯಾಳನೆ." ಅಂದ ಸುಭಾಶ. "ಹಾಂˌ ಹಾಗಿದ್ರೆ ಪಡ್ಚ ಆಯ್ತಲ ಮಾರಾಯ. ನಂಗೆ ಮಲಯಾಳ ಗೊತ್ತಿಲಲ! ಈಗ ಈ ವಿಷಯ ಗೊತ್ತಾಗಿ ಮುತ್ತಪ್ಪ ನನ್ನ ಅಲ್ಲಿಂದ ಓಡಿಸಿದ್ರೆ ಎಂಥ ಮಾಡದ!" ಅಂತ ಇವ ಚುಡಾಯಿಸಿದ. ಆದರೆ ಈ ಸಾರಿ ತಮಾಷೆ ಕಿರಿಯನ ಮಂಡೆಗೆ ಅರ್ಥ ಆಗಲಿಲ್ಲ. ಅವನಿಗೂ ಇಂತಹ ಬಿಕ್ಕಟ್ಟು ಬಹುಶಃ ಹೊಸತು. ಅವನೂ ಗಂಭೀರ ಧ್ವನಿಯಲ್ಲಿ "ಹೌದಲ! ಎಂತ ಮಾಡದಿಯ? ಮಲಯಾಳ ಬರದವರಿಗೆ ಮುತ್ತಪ್ಪ ಮಾತಾಡ್ಸುದು ಹೂವು ಕೊಡದು ಮಾಡದಿದ್ರೆ ಎಂತ ಮಾಡದಪ್ಪ ದೇವೆರೆ!" ಅಂತ ದೈವದ ಸಂಭವನೀಯ ತಕರಾರಿನ ವಿರುದ್ಧ ನ್ಯಾಯ ಪಂಚಾಯತಿಕೆಗೆ ದೇವರನ್ನ ಎಳೆದು ತಂದ. ಇದ್ಯಾಕೋ ತನಗೆ ತಿರುಗಿ ಬಾರಿಸುವ ಸೂಚನೆ ಸಿಕ್ಕ ಕೂಡಲೆ "ಹೇ ಪರವಾಗಿಲ್ಲನˌ ನೀನಿದಿಯಲ್ಲ ಮಾರಾಯ. ನಿನಗೆ ಮಲಯಾಳ ಕನ್ನಡ ಎಲ್ಲಾ ಬರ್ತದಲ. ನಾನು ಕನ್ನಡದಲ್ಲಿ ಮಾತನಾಡಿದ್ದನ್ನ ಮುತ್ತಪ್ಪನಿಗೆ ನೀನೆ ಮಲಯಾಳದಲ್ಲಿ ಹೇಳು. ಮುತ್ತಪ್ಪ ಮಲಯಾಳದಲ್ಲಿ ಕೊಡುವ ಪ್ರಸಾದನ ನನಗೆ ನೀನೆ ಕನ್ನಡದಲ್ಲಿ ಕೊಡು ಆಯ್ತ. ಅಲ್ಲಿಗೆ ಸಮಸ್ಯೆ ಮುಗಿತ್ ಬಿಡು." ಅಂತ ಪರಿಸ್ಥಿತಿಯನ್ನ ತಿಳಿಗೊಳಿಸಲು ಒಂದು ಪಟ್ಟು ಹಾಕಿ ಅವನ ಹೆಗಲ ಮೇಲಿದ್ದ ಕೈ ಸರಿಸಿ ಮೆಲ್ಲಗೆ ಎರಡು ಸಲ ಬೆನ್ನು ತಟ್ಟಿದ. ಬಹುಭಾಷಾ ಕೋವಿದ ಅಂತ ತನ್ನನ್ನ ಹೊಗಳಿದಕ್ಕೆ ಚೂರು ಉಬ್ಬಿದ ಕಿರಿಯ "ಆಯ್ತಾಯ್ತು ಹಂಗಿದ್ರೆ ಚಿಂತೆ ಇಲ್ಲಯ." ಅಂತ ಮಹತ್ತರ ಜವಬ್ದಾರಿ ತನ್ನ ಹೆಗಲಿಗೇರಿದ ಧ್ವನಿಯಲ್ಲಿ ಉತ್ತರಿಸುತ್ತಾ ಇದ್ದಂತೆ ಕೋಲ ನಡೆಯುತ್ತಿದ್ದ ಕೆಳಬೆಟ್ಟು ತರವಾಡಿನ ಅಂಗಳಕ್ಕೆ ಅವರಿಬ್ಬರೂ ಸಮೀಪಿಸಿದರು. ಇವರು ದಣಪೆಯಿದ್ದ ಅಡ್ಡದಾರಿ ಹಿಡಿದು ಬಂದ ಕಾರಣ ದಣಪೆ ಹತ್ತಿಳಿದು ದಾಟಿ ಅಂಗಳ ಸೇರಬೇಕಾಯಿತು.

ಒಂದು ಯಕಶ್ಚಿತ್ ಭಾಷಾ ಗಲಾಟೆ ಮನುಷ್ಯರನ್ನ ದಾಟಿ ದೈವ ದೇವರು ಭೂತಗಳನ್ನೂ ಬಿಟ್ಟೂ ಬಿಡದಂತೆ ಆವರಿಸಿಕೊಂಡಿರುವ ಶೋಚನೀಯ ಗಡಿ ಗಲಾಟೆಯ ಮತ್ತೊಂದು ಮಗ್ಗುಲಿನ ದರ್ಶನ ಅರಿವಿರದೆ ಅನಿರೀಕ್ಷಿತವಾಗಿ ಮಗುವೊಂದರ ಗೊಂದಲದಿಂದ ಅವನ ಮುಂದೆ ಅನಾವರಣವಾಗಿತ್ತು. ನರ ಮನುಷ್ಯರ ಕ್ಷುಲ್ಲಕ ಕೋಳಿ ಜಗಳಗಳೆಲ್ಲ ಪರಮಾರ್ಥದ ದೈವ ದೇವರಿಗೂ ಸೋಂಕಾಗಿ ಹರಡಿರುವ ಬಗ್ಗೆ ಅವನಿಗೆ ಒಳಗೊಳಗೆ ಖೇದವಾಯಿತು.
ಇವರು ಅಂಗಳಕ್ಕಿಳಿಯುವ ಹೊತ್ತಲ್ಲಿ ಕೋಲ ಉಚ್ಛ ಘಟ್ಟ ಮುಟ್ಟಿ ತಾರಕದಲ್ಲಿ ಮೊಳಗುತ್ತಿದ್ದ ವಾದ್ಯಾಲಾಪಗಳ ಮಧ್ಯೆ ಮುತ್ತಪ್ಪನ ವೇಷಧಾರಿ ನಲಿಕೆಯವ ಆವೇಶದ ಭರದಲ್ಲಿ ನಡುಗುತ್ತಾ ಉಚ್ಛ ಸ್ವರದಲ್ಲಿ ಸ್ಥಳಿಯ ತುಳು ಕನ್ನಡ ಕಲಬೆರಕೆಯಾಗಿರುವ ಕಾಸರಗೋಡಿನ ಪೊಟ್ಟು ಮಲಯಾಳಂ ಭಾಷೆಯಲ್ಲಿ ಊರೊಟ್ಟಿನ ಹತ್ತು ಸಮಸ್ತರ ಸಮಸ್ಯೆಗಳ ಬಗ್ಗೆ ಏನೋ ಪರಿಹಾರ ಕೂಗುತ್ತಿದ್ದ. ಇವನ ಕ್ಯಾಮರಾ ಕಣ್ಣಿಗೆ ಭರಪೂರ ಕೆಲಸ. ನಡುನಡುವೆ ಸುಭಾಶನ ಕೆಲವು ಫೊಟೋಗಳನ್ನೂ ಕ್ಲಿಕ್ಕಿಸುತ್ತಾ ಕೋಲದ ವೈಭವˌ ನೆರೆದ ಮಂದಿಯ ಭಕ್ತಿಯೋನ್ಮಾದˌ ಭೂತಸ್ಥಾನದ ಅಲಂಕಾರˌ ಭೂತ ವೇಷ ಕಟ್ಟಿದವನ ಉನ್ಮಾದˌ ವಾದ್ಯಗೋಷ್ಠಿಯವರ ತನ್ಮಯತೆˌ ಮುಂದಿನ ವಿಷ್ಣುಮೂರ್ತಿ ಕೋಲಕ್ಕೆ ವೇಷಧಾರಿಯ ಸಿದ್ಧತೆ ಇವನ್ನೆಲ್ಲಾ ಸಾಧ್ಯವಾದಷ್ಟು ಹಿಮ್ಮೇಳದ ಗದ್ದಲದ ಮಧ್ಯೆಯೆ ಸೆರೆ ಹಿಡಿದ. ಡಿಎಸ್ಎಲ್ಆರ್ ಕ್ಯಾಮೆರಾ ಆಗಿದ್ದರಿಂದ ಲೆನ್ಸ್ ಪದೆ ಪದೆ ಲೆನ್ಸ್ ಬದಲಾಯಿಸುವ ತಾಪತ್ರಯವಿಲ್ಲದೆ ಕೋಲದ ಕೆಲವು ಪ್ರಮುಖ ಘಟ್ಟಗಳ ವಿಡಿಯೋಗಳನ್ನೂ ಮುದ್ರಿಸಿಕೊಳ್ಳಲು ಸಹಾಯವಾಯ್ತು. ಭೂತ ಕುಣಿಯುವವನ ಸಹಿತ ಯಾರೂ ಯಾವುದಕ್ಕೂ ಅಡ್ಡಿ ಮಾಡದೆˌ ಉಲ್ಟಾ ಇವನ ಕ್ಯಾಮೆರಾ ಕಣ್ಣು ಕಂಡದ್ದೆ ಒಂಥರಾ ಅಪ್ರಚೋದಿತವಾಗಿ ಸ್ವಯಂಸ್ಪೂರ್ತಿಯಿಂದ ಫೋಝು ಕೊಡುತ್ತಿರುವಂತೆ ಅಭಿನಯಿಸಿ ಇವನ ಛಾಯಾಚಿತ್ರಗಾರಿಕೆಗೆ ಅವಕಾಶ ಮಾಡಿಕೊಟ್ಟರು.

ಮುತ್ತಪ್ಪನ ನುಡಿ ಮುಗಿದುˌ ಎಳನೀರು - ಬಾಯಲ್ಲೆ ಕಡಿದ ಕೋಳಿಯ ಕುತ್ತಿಗೆಯಿಂದ ಚಿಮ್ಮಿದ ರಕ್ತ ಬೆರೆತ ಕುಡು ಅರಳು - ಬೊಂಡ ಬಾರಣೆಯಾಗಿ ನೆರೆದ ಭಕ್ತಾದಿಗಳಿಗೆ ಹೂವು ಅರಳು ಪ್ರಸಾದ ವಿತರಣೆಯಾಗಿ ಆ ಕೋಲ ಮುಗಿಯುವಾಗ ಘಂಟೆ ಹನ್ನೊಂದೂವರೆ ದಾಟಿತ್ತು. ಸುಭಾಶನ ಪರಕೆ ಕೋಳಿ ತನ್ನ ಇಹಲೋಕದ ವ್ಯಾಪಾರ ಮುಗಿಸಿ ಅದರ ಮಂಡೆ ಮುತ್ತಪ್ಪನ ಸನ್ನಿಧಾನ ಸೇರಿ ಉಳಿದ ಮುಂಡದ ಕೆಳಗಿನ ಭಾಗ ಮತ್ತೆ ಅವನ ಕೈಚೀಲ ಸೇರಿತ್ತು.

ಊರೊಟ್ಟಿನ ಗೆರೋಡಿಗಳಲ್ಲಿ ಇರುವ ಮತ್ತಪ್ಪ ದೈವಕ್ಕೆ ಖಾಲಿ ಬೊಂಡ ಕುಡು ಪನಿವಾರ ಅಂತೆ ಬಾರಣೆಗೆ. ಆದರೆ ತರವಾಡು ಮನೆಯಲ್ಲಿರೋ ಅದೆ ಮುತ್ತಪ್ಪನಿಗೆ ಮಾತ್ರ ಕೋಳಿಯ ರಕ್ತ ಆಗಲೆ ಬೇಕಂತೆ! ಹಾಗಂತ ಇವನಿಗೆ ವೀಕ್ಷಕ ವಿವರಣೆ ಕೊಡುತ್ತಿದ್ದ ಸುಭಾಶ ಇವನ ಕಿವಿಯಲ್ಲಿ ಉಸರಿದ್ದ. ಕೋಳಿಗಳ ಕುತ್ತಿಗೆ ಕೊಯ್ದ ಮುತ್ತಪ್ಪನ ಕಲ್ಲಿನ ಹತ್ತಿರ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಹರಕೆ ತೀರಿಕೆಗಾಗಿ ತಂದು ಅರ್ಪಿಸಿದ್ದ ಅನೇಕ ಕೋಳಿ ತಲೆಗಳ ಪುಟ್ಟ ರಾಶಿ ಎದ್ದಿತ್ತು. ಕಲ್ಲಿನ ಕೆಳ ಪೀಠದಂತಹ ಹಾಸುಗಲ್ಲಿನ ಮೇಲೆ ಕೆಂಪು ರಕ್ತದ ಕೋಡಿ ಹರಿದು ಅಲ್ಲೆಲ್ಲಾ ಒಂಥರಾ ನೆತ್ತರ ಕಮಟು ವಾಸನೆ ಆವರಿಸಿತ್ತು.

******

ಮುತ್ತಪ್ಪನ ಕೋಲದ ಬೆನ್ನಿಗೇನೆ ಭಾರಿ ಗೌಜಿ ಗದ್ದಲದಿಂದ ಶುರುವಾದ ವಿಷ್ಣುಮೂರ್ತಿಯ ಕೋಲ ಕಳೆ ಕಟ್ಟಿತ್ತು. ಭೂತದ ವೇಷ ಭವ್ಯವಾಗಿ ಕಟ್ಟಿದ್ದರು. ಅದರ ಪ್ರಭಾವಳಿಗಳಂತೂ ಅದ್ಭುತವಾಗಿತ್ತು. ಮೇಳದವರು ಸ್ಥಳಿಯರ ಆಡುಭಾಷೆ ತುಳವಿನಲ್ಲೆ ಪಾಡ್ದನ ಹಾಡುತ್ತಿದ್ದರು. ಭೂತವೂ ಸಹ ತುಳುವಿನಲ್ಲೆ ನುಡಿ ಹೇಳಿ ಅಭಯ ಕೊಟ್ಟು ನ್ಯಾಯ ತೀರ್ಮಾನ ಹೇಳಿ ತರವಾಡಿನ ಯಜಮಾನರನ್ನ ಮುಂದೆ ಕರೆದು ಅವರಿಗೆ ರಕ್ಷಣೆಯ ಭರವಸೆಯಿತ್ತು ಗಂಧ ಪ್ರಸಾದ ಇತ್ತಿತು. ಹೆಸರು ಹಿಂಗಿದ್ದ ಮಾತ್ರಕ್ಕೆ ಈ ದೈವ ವಿಷ್ಣುಮೂರ್ತಿಗೂ ವೈದಿಕರ ದೇವರಾದ ವಿಷ್ಣುವಿಗೂ ಏನೂ ಆಂತರಿಕ ನೆಂಟಸ್ತನ ಏನೇನೂ ಇಲ್ಲ ಅಂತ ಇಟ್ಕಳಿ.

ಊರೊಂದು ಸ್ವಸ್ಥವಾಗಿರಬೇಕಿದ್ದರೆˌ ಊರಿನ ಸಾಮಾಜಿಕ ಆರೋಗ್ಯ ಕೆಡದಂತಿರಲು ಇಂತಹ ಅದೃಶ್ಯ ಶಕ್ತಿಗಳು ಅತ್ಯವಶ್ಯ.

( ಇನ್ನೂ ಇದೆ.)

https://youtu.be/MpTW5fXhtNA

No comments: