29 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೦.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೦.👊


ಈ ಆನಂದಾಶ್ರಮ ಸ್ಥಾಪಿಸುವ ಮೊದಲುˌ ತನ್ನ ಮಡದಿ ಮಗಳನ್ನ ತ್ಯಜಿಸಿ ಸಂಪೂರ್ಣ ವಿರಾಗಿಯಾಗುವ ಮುನ್ನ ಪೂರ್ವಾಶ್ರಮದ ವಿಠ್ಠಲರಾಯರು ಪರಿವ್ರಾಜಕರಾಗಿ ಭಕ್ತಿಮಾರ್ಗದ ಅನ್ವೇಷಣೆಯಲ್ಲಿ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೂ ಭಾರತದ ಉದ್ದಗಲ ಸುತ್ತಿದ್ದಾರೆ. ಅದೂ ಸಹ ಕೈಯಲ್ಲಿ ದುಗ್ಗಾಣಿಯನ್ನೂ ಇಟ್ಟುಕೊಳ್ಳದೆ! ಯಾವುದೆ ಐಶಾರಾಮ ಬಯಸದೆ. ಈಗಿನಷ್ಟು ಸಾರಿಗೆ ಸಂಪರ್ಕದ ಅನುಕೂಲವಿದ್ದಿರದಿದ್ದ ಶತಮಾನದ ಹಿಂದೆ ಈ ದೈವಭಕ್ತಿಯಿಂದ ಪರವಶರಾಗಿದ್ದ ಜೀವ ಈ ಗುರಿಯಿಲ್ಲದ ಪಯಣದ ಹಾದಿಯಲ್ಲಿ ಅದೆಂತೆಂತಹ ಕಷ್ಟ-ನಷ್ಟಗಳನ್ನು ಎದುರಿಸಿರಬಹುದೋ ಏನೋ? ಎಂದು ಯೋಚಿಸಿಯೆ ಇವನು ಅಳುಕಿದ.

ವಾಸ್ತವದಲ್ಲಿ ಬಾಲಕೃಷ್ಣರಾಯರದ್ದು ಒಂಬತ್ತು ಗಂಡು ಹಾಗೂ ಮೂರು ಹೆಣ್ಣು ಕೂಸುಗಳಿದ್ದ ತುಂಬು ಸಂಸಾರ. ಅದರಲ್ಲಿ ಅಧ್ಯಾತ್ಮದ ಹಾದಿ ಹಿಡಿದದ್ದು ವಿಠ್ಠಲರಾಯರು ಮಾತ್ರ. ತಮ್ಮ ಕಪಟವಿಲ್ಲದ ವ್ಯಕ್ತಿತ್ವದಿಂದ ಸುಲಭವಾಗಿ ಮೋಸಗಾರರ ಬಲೆಗೆ ಸಿಲುಕಿದ ಅವರು ತಮ್ಮ ಜವಳಿ ಉದ್ಯಮದಲ್ಲಿ ವಿಫಲವಾದರೇನಂತೆ? ಅವರಂದು ಬಿತ್ತಿದ್ದ ಅಧ್ಯಾತ್ಮದ ಹಾದಿಯಲ್ಲಿ ಅವರಿತ್ತಿರುವ ನಾಮ-ಧ್ಯಾನ-ಸೇವಾದ ಮೇಲ್ಪಂಕ್ತಿಯನ್ನ ಅನುಸರಿಸಿ ಶುದ್ಧ ಚಾರಿತ್ರ್ಯದಿಂದ ಬದುಕಲು ಕಲಿಯುತ್ತಿರುವವರ ಸಂಖ್ಯೆ ವಿಫುಲವಾಗಿದೆ. ಇದೊಂದೆ ಸಾಧನೆ ಸಾಕಲ್ಲ ಅವರ ಪ್ರಭಾವಳಿಯನ್ನ ಗ್ರಹಿಸಲು. ಆರರಿಂದ ಅರವತ್ತರವರೆಗೂ ಅನ್ನುತ್ತಾರಲ್ಲ ಹಾಗೆ ಎಲ್ಲಾ ಪ್ರಾಯದವರೂ ಅವರ ಬೋಧನೆಗಳಿಂದ ಪ್ರಭಾವಿತರಾಗಿದ್ದಾರೆ.

ಯಾರಿಗೆ ತಾನೆ ಗೊತ್ತಿತ್ತು ೧೮೮೪ಕ್ಕೆ ಬಾಲಕೃಷ್ಣರಾಯರ ಮಡದಿ ಲಲಿತಾಬಾಯಿಗೆ ಹುಟ್ಟಿದ್ದ ಈ ಆರನೆ ಕೂಸು ಮುಂದೊಂದು ದಿನ ಬಹಳಷ್ಟು ಪಥಭ್ರಷ್ಟರಿಗೆ ಮಾರ್ಗದರ್ಶಕನಾಗುತ್ತಾನಂತ? ಸ್ವಂತ ಬದುಕಿನಲ್ಲಿ ಅವರೆದುರಿಸಿದ ಆ ವೈಫಲ್ಯಗಳ ಸರಣಿಯೆ ಸಾರ್ವತ್ರಿಕ ಬದುಕಿನಲ್ಲಿ ಅಘೋಷಿತ ಗೆಲುವನ್ನವರು ಕೈವಶ ಮಾಡಿಕೊಳ್ಳಲು ಕಾರಣವಾದದ್ದು ಮಾತ್ರ ಕಾಕತಾಳೀಯವಲ್ಲದೆ ಮತ್ತಿನ್ನೇನೂ ಅಲ್ಲ  ಅನಿಸಿತವನಿಗೆ.

ಅವರ ಆರ್ಥಿಕ ನಷ್ಟದ ಕೊನೆಯಲ್ಲಿ ಅವರ ಬಟ್ಟೆಗೆ ಬಣ್ಣ ಹಾಕುವ ಉದ್ಯಮದ ಹಾಗೂ ಜವಳಿಯಂಗಡಿಯ ಸಂಪೂರ್ಣ ಮಾಲಕತ್ವ ವಹಿಸಿಕೊಳ್ಳಲು ಮನಸು ಮಾಡಿದ ಸಹೃದಯಿ ಗೆಳೆಯನ ಕೃಪೆಯಿಂದ ಅವರ ಸಾಲಗಳೆಲ್ಲಾ ತೀರಿˌ ಮಡದಿ ಮಗಳಿಗೂ ಒಂದು ದಿಕ್ಕು ತೋರಿಸಿˌ ಮುಂದಿನ ಅಧ್ಯಾತ್ಮದ ಹಾದಿ ಹುಡುಕುವ ಈ ಆನಂದಾಶ್ರಮದ ಸ್ಥಾಪನೆಗೂ ಅಗತ್ಯವಿರುವಷ್ಟು ಹಣ ಉಳಿಸಲು ಅವರಿಗೆ ಸಾಧ್ಯವಾಯ್ತು.

ಪತ್ನಿಗೆ ತನ್ನ ನಿರ್ಧಾರ ತಿಳಿಸಿ ಅವರ ಜೀವನೋಪಾಯಕ್ಕೆ ಒಂದು ವ್ಯವಸ್ಥೆ ಮಾಡಿದ ವಿಠ್ಠಲರಾಯರು ಕಡೆಗೂ ೧೯೨೨ರ ಡಿಸೆಂಬರ್ ೨೮ರಂದು ಮನೆ ಬಿಟ್ಟು ಇಂದಿನ ತಮಿಳುನಾಡಿನ ಶ್ರೀರಂಗಂ ತಲುಪಿದರು. ಅಲ್ಲಿ ಕಾವೇರಿಯಲ್ಲಿ ಮಿಂದು ಅಂದಿನಿಂದ ಬಣ್ಣಬಣ್ಣದ ವಸ್ತ್ರಗಳನ್ನೂ ತ್ಯಜಿಸಿ ಕೇವಲ ಬಿಳಿಯನ್ನುಟ್ಟುˌ ತನ್ನ ಹೆಸರನ್ನೂ ಕೈಬಿಟ್ಟು ಅಂದಿನಿಂದ ಸಂಪೂರ್ಣವಾಗಿ ಭಗವಂತ ಶ್ರೀರಾಮಚಂದ್ರನ ಸೇವೆಗೆ ತನ್ನನ್ನ ತಾನು ಒಪ್ಪಿಸಿಕೊಂಡು ವಿಠ್ಠಲರಾಯನ ಗುರುತಿನಿಂದ ಬಿಡುಗಡೆಯಾಗಿ ಶಾಶ್ವತವಾಗಿ ಸ್ವಾಮಿ ರಾಮದಾಸರಾಗಿ ತಮ್ಮನ್ನ ಗುರುತಿಸಿಕೊಂಡರು.

*****

ಸ್ವಾಮಿ ರಾಮದಾಸರ ಆರಂಭದ ಶಿಷ್ಯೆಯಾಗಿದ್ದ ಕೃಷ್ಣಾಬಾಯಿಯವರದ್ದು ಇನ್ನೊಂದು ಕಥೆ. ತನ್ನ ಸನ್ಯಾಸ ಸ್ವೀಕಾರದ ನಂತರ ಪರಿವ್ರಾಜನೆ ಮುಗಿಸಿ ಮಂಗಳೂರಿನ ತನ್ನ ಸಹೋದರನ ಮನೆಗೆ ಹಿಂದಿರುಗಿದ ರಾಮದಾಸರು ಅಲ್ಲಿ ತಂಗದೆ ಕದ್ರಿಯಲ್ಲಿರುವ ಪಾಂಡವರ ಗುಹೆಗೆ ಹೋಗಿ ಅಧ್ಯಾತ್ಮ ಸಾಧನೆಗೆ ತೊಡಗಿದರು. ಅಲ್ಲಿದ್ದಷ್ಟೂ ಕಾಲ ಕೇವಲ ದಿನಕ್ಕೆರಡು ಸಲ ಹಾಲು ಹಣ್ಣು ಮಾತ್ರ ಸ್ವೀಕರಿಸುತ್ತಾ ಬೆಳ್ಳಂಬೆಳಗ್ಯೆ ಮೂರೂವರೆಗೆ ಎದ್ದು ಅತಃರ್ಮನನದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತಿದ್ದ ಅವರು ಮತ್ತೊಂದು ಸುತ್ತು ತೀರ್ಥಯಾತ್ರೆ ಕೈಗೊಳ್ಳಲು ರಾಮೇಶ್ವರದಿಂದ ಹೊರಟು ಹೃಷಿಕೇಶದವರೆಗೂ ಅನೇಕ ಪುಣ್ಯಕ್ಷೇತ್ರಗಳನ್ನ ಸುತ್ತಿ ಮರಳಿ ಮಂಗಳೂರಿಗೆ ಬಂದವರು ಪುನಃ ಅದೆ ಪಾಂಡವರ ಗುಹೆಯಲ್ಲಿ ಮತ್ತೆರಡು ತಿಂಗಳು ತಂಗಿದರು. "ನಾನು" "ನನ್ನದು" ಅನ್ನುವ ಭಾವದಿಂದ ಸಂಪೂರ್ಣ ವಿಮಖರಾಗಿದ್ದ ಅವರೀಗ ಬೇರೆಯದೆ ಮನಸ್ಥಿತಿಗೆ ಪಕ್ಕಾಗಿದ್ದದ್ದು ಸ್ಪಷ್ಟವಾಗಿತ್ತು.

ಅದರ ಫಲವಾಗಿ ೧೯೨೮ರ ಜೂನ್ ಮೂರಕ್ಕೆ ಮೊದಲೆ ಹೇಳಿದ ಹಾಗೆ ಕಾಸರಗೋಡಿನಲ್ಲಿ ಆರಂಭದಲ್ಲಿದ್ದ ಆನಂದಾಶ್ರಮವನ್ನ ಪ್ರಾರಂಭಿಸಿದ್ದು. ಅಲ್ಲಿಯೆ ಅವರನ್ನ ಮಾತೆ ಕೃಷ್ಣಾಬಾಯಿ ಪ್ರಥಮವಾಗಿ ಅದೆ ವರ್ಷ ಭೇಟಿಯಾಗುವಾಗ ಅವರ ಪ್ರಾಯ ಕೇವಲ ೨೫ ವರ್ಷಗಳು ಮಾತ್ರವಾಗಿತ್ತು. ಅಂದಿನ ಪದ್ಧತಿಯಂತೆ ತನ್ನ ಹನ್ನೆರಡರ ಪ್ರಾಯದಲ್ಲೆ ಬಾಲ್ಯ ವಿವಾಹವಾಗಿದ್ದ ಕೃಷ್ಣಾಬಾಯಿ ಕೇವಲ ಇಪ್ಪತ್ತರ ಪ್ರಾಯದಲ್ಲೆ ಇಬ್ಬರು ಗಂಡು ಮಕ್ಕಳ ತಾಯಿಯೂ ಆಗಿ ಗಂಡನನ್ನೂ ಸಹ ಕಳೆದುಕೊಂಡು ವೈಧವ್ಯವನ್ನ ಅನುಭವಿಸುತ್ತಿದ್ದ ಕಾಲ ಅದು.

ಮುಂಬೈಯಲ್ಲಿ ನೆಲೆಸಿದ್ದ ಕೃಷ್ಣಾಬಾಯಿ ಬದುಕಿನ ಏರುಪೇರುಗಳಿಂದ ವಿಚಲಿತಳಾಗಿ ಒಮ್ಮೆ ವಿಫಲ ಆತ್ಮಹತ್ಯಾ ಯತ್ನವನ್ನೂ ಸಹ ನಡೆಸಿದ್ದರು! ಆದರೂ ಬದುಕುಳಿದ ನಂತರ ಗೃಹಸ್ಥ ಜೀವನದಿಂದ ದೂರಾಗಲು ನಿರ್ಧರಿಸಿ ಧಾರವಾಡದ ತನ್ನ ಸಂಬಂಧಿಕರ ಮನೆಗೆ ಬಂದಿದ್ದಾಗ ಹುಬ್ಬಳ್ಳಿಯಲ್ಲಿ ಸಿದ್ಧಾರೂಢರನ್ನ ಕಂಡು ಅವರಿಂದ ಮಂತ್ರದೀಕ್ಷಿತರಾದರು. ಸ್ವಾಮಿ ರಾಮದಾಸರ ಬಗ್ಗೆ ಕೇಳಿದ್ದ ಅವರು ಕಾಸರಗೋಡಿಗೆ ಬಂದು ಅವರನ್ನ ಭೇಟಿಯಾಗಿ ತನ್ನ ಮನೋಭಿಲಾಶೆಯನ್ನ ತೋಡಿಕೊಂಡರು. ಆದರೆ ಆಗವರಿಗೆ ಆಶ್ರಮವಾಸದ ಅನುಮತಿ ಸಿಗದೆ ಮರಳಿ ಮುಂಬೈಗೆ ಹೋಗುವಂತೆ ರಾಮದಾಸರು ಇತ್ತ ಸೂಚನೆ ಪಾಲಿಸಿದರು.

ಆದರೆ ಅಲ್ಲೂ ಇರಲಾರದೆ ಮರಳಿ ಕಾಸರಗೋಡಿನ ಆನಂದಾಶ್ರಮಕ್ಕೇನೆ ಮರಳಿ ಬಂದರಂತೆ. ಆದರೆ ಕೆಲಕಾಲ ಅಲ್ಲಿ ರಾಮದಾಸರˌ ಅವರ ಅಸ್ತಮಾ ಪೀಡಿತ ತಂದೆ ಹಾಗೂ ಪೂರ್ವಾಶ್ರಮದ ಮಡದಿಯೊಂದಿಗೆ ತಂಗಿದ್ದರೂ ಸಹ ಶಾಶ್ವತ ಸನ್ಯಾಸಿನಿಯಾಗಲು ರಾಮದಾಸರು ಅನುಮತಿಸಲಿಲ್ಲ. ಬದಲಿಗೆ ಅವರ ಪುಟ್ಟ ಮಕ್ಕಳ ಜವಬ್ದಾರಿಯನ್ನ ನೆನಪಿಸಿದ ಗುರುಗಳು ಮರಳಿ ಅವರನ್ನ ಮುಂಬೈಗೇನೆ ಕಳಿಸಿದರಂತೆ. ಒಲ್ಲದ ಮನಸಿನಿಂದ ಮುಂಬೈಗೆ ಮರಳಲಿಚ್ಚಿಸದ ಕೃಷ್ಣಾಬಾಯಿ  ಒಂದು ಸಂಜೆ ಆಶ್ರಮದಿಂದಲೂ ಕಾಣೆಯಾಗಿ ಬಳಿಯ ಕಾಡಿನ ಬೆಟ್ಟದಲ್ಲಿ ಅಳುತ್ತಾ ರಾತ್ರಿ ಕಳೆದರು. ಬೆಳ್ಳಂಬೆಳಗ್ಯೆ ಅವರಿಗೆ ಹಾವೊಂದು ಕಚ್ಚಿ ಪ್ರಾಣಾಪಾಯಕ್ಕೂ ಒಳಗಾದರು. ಈ ವಿಷಯ ತಿಳಿದು ಹೌಹಾರಿದ ರಾಮದಾಸರು ಅವರನ್ನ ಆಶ್ರಮಕ್ಕೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಿ ಉಳಿಸಿಕೊಂಡರು. ಚೇತರಿಕೆಯ ನಂತರ ಅವರ ಸಾಂಸಾರಿಕ ಜವಬ್ದಾರಿಯನ್ನ ನೆನಪಿಸಿದ ಅಧ್ಯಾತ್ಮಿಕ ಗುರುಗಳು ಮೊದಲು ಅದನ್ನ ಪೂರೈಸಿ ಬರುವಂತೆ ನಿರ್ದೇಶನವನ್ನಿತ್ತು ಅವರಿಗೆ ರಾಮನಾಮದ ಮಂತ್ರ ದೀಕ್ಷೆ ಇತ್ತರು.

ಅವರ ಆಜ್ಞೆಯಂತೆ ಮುಂಬೈ ಮರಳಿದ ಕೃಷ್ಣಾಬಾಯಿ ಮಕ್ಕಳಿಬ್ಬರಿಗೂ ತನ್ನ ನಿರ್ಧಾರ ತಿಳಿಸಿˌ ಅವರ ಒಪ್ಪಿಗೆ ಪಡೆದುˌ ಅವರ ದೇಖಾರೇಖಿಯ ಜವಬ್ದಾರಿಯನ್ನ ಸಮೀಪದ ಬಂಧುಗಳಿಗೆ ಒಪ್ಪಿಸಿ ಸನ್ಯಾಸಿನಿಯಾಗಿರುವ ದೃಢ ನಿಶ್ಚಯದೊಂದಿಗೆ ಕಾಸರಗೋಡಿನಲ್ಲಿದ್ದ ಆನಂದಾಶ್ರಮಕ್ಕೆ ಮರಳಿ ಬಂದರು. ಅಲ್ಲಿಂದ ಅವರೂ ಸಹ ಆಶ್ರಮದ ಖಾಯಂ ನಿವಾಸಿಗಳಾಗಿ ಹೋದರು. ಆದರೆ ಸಹಜವಾಗಿ ಒಬ್ಬ ಯುವ ವಿಧವೆ ಹೀಗೆ ಅಜ್ಞಾತ ಗಂಡಸಿನೊಂದಿಗೆ ವಾಸಿಸುವುದು ಆಶ್ರಮದ ಭಕ್ತಾದಿಗಳ ಜೊತೆಜೊತೆಗೆ ಸುತ್ತಮತ್ತಲಿನ ಸ್ಥಳಿಯರ ವದಂತಿಗಳಿಗೆ ಕಾರಣವಾಯ್ತು.

ಆಗ ನಡೆದದ್ದೆ ಈ ದಾಳಿಯ ಪ್ರಕರಣ. ಕೆಲವರ ಪ್ರಕಾರ ಅದನ್ನ ನಡೆಸಿದ್ದು ಆಶ್ರಮದ ಒಬ್ಬ ನೌಕರ. ಮತ್ತೆ ಕೆಲವರನ್ನುವ ಮಾತನ್ನ ನಂಬವದಾದರೆ ಆಶ್ರಮಕ್ಕೆ ಒಂದು ರಾತ್ರಿ ನುಗ್ಗಿದ ಕಳ್ಳರಿಬ್ಬರು ಹರೆಯದ ಕೃಷ್ಣಾಬಾಯಿಯವರನ್ನ ಕೆಡಿಸಲು ನೋಡಿದರುˌ ಗಟ್ಟಿಯಾಗಿ ಆಗವರು ಉಚ್ಛರಿಸಿದ ರಾಮನಾಮ ಸ್ಮರಣೆ ಅವರ ಮಾನ ಉಳಿಸಿತು. ಕಳ್ಳರು ಪರಾರಿಯಾದರು. ಕಾಸರಗೋಡಿನ ಬಂಧ ಹಾಗೆ ಕಳಚಿತು.

( ಇನ್ನೂ ಇದೆ.)

https://youtu.be/D3OL3ayuQuU

No comments: