ಎದ್ದಿರುವ ಅಷ್ಟೂ ಹೊತ್ತು ಎಡೆಬಿಡದೆ ಎಲೆ ಅಡಿಕೆಯನ್ನ ಎಮ್ಮೆ ಮೆಲುಕು ಹಾಕಿದಂತೆ ಹಾಕಿ ಹಾಕಿ ಕರೆಗಟ್ಟಿರುವ ತನ್ನ ಹಲ್ಲುಗಳೆಲ್ಲ ಕಾಣುವ ಹಾಗೆ ಬಾಯಿ ಕಿಸಿದ ನಾಯರ್ "ವರು ವರುˌ ಭಕ್ಷಣಂ ಞಾನ್ ಎಡುತ್ತು ವೆಚ್ಚು" ಅನ್ನುತ್ತಲೆ ಮೂಲೆಯ ಮೇಜಿನ ಮೇಲೆ ಬಾಳೆಎಲೆ ಹಾಸಿದ. ಅನ್ನದ ಮೇಲೆ ಕೋಳಿ ಗಸಿ ಬಡಿಸಲು ಬಂದವನಿಗೆ "ಞಾನ್ ಕೋಳಿ ಕಳಿಕ್ಯಾನಿಲ್ಲಲ್ಲೋ ನಾಯರೆˌ ವೆರುಂ ಮತ್ಸ್ಯಂಗಳ್ ತನ್ನೆ" ಎಂದು ತಡೆದ. ಅಚ್ಚರಿಯಿಂದೆಂಬಂತೆ ನಾಯರ್ "ಅದಾಣೋ!" ಅನ್ನುತ್ತಾ ಕೋಳಿ ಸಾರಿನ ಬೋಗುಣಿಯನ್ನವ ಹಾಗೆಯೆ ಹಿಂದೊಯ್ದ.
"ಅದೆˌ ಪಕ್ಷೆ ತಾರಾವಿಂಡೆ ಕರಿ ಆಯಿರಂಗಿಲ್ ಒನ್ನುಂ ಕೊಳಪಂಮಿಲ್ಲ. ಇಲ್ಲಂಗಿಲ್ ಆಟ್ಟಿಂಡೆ ಲಿವರ್ ಆನಾಲುಂ ಪ್ರಶ್ನಂ ಇಲ್ಲಿಯಾ. ಅದು ರೆಂಡು ಕರಿಕ್ಕಳ್ ಮಾತ್ರಮಾಣ್ ಞಾನ್ ಇಷ್ಟಂಪೆಟ್ಟು ಕಳಿಕ್ಯುನ್ನದು. ಪಿನ್ನೆ ಏದುಂ ಅಲ್ಲ" ಅಂದ. "ಅದು ಶರಿ" ಅಂತ ಹೆಗಲ ಮೇಲೆ ಇಳಿ ಬಿಟ್ಟುಕೊಂಡಿದ್ದ ಬೈರಾಸಿನಿಂದ ಕೈ ಒರೆಸಿಕೊಳ್ಳುತ್ತಾ ನಾಯರ್ ಮತ್ತೆ ತನ್ನ ಕೊಳಕು ಹಲ್ಲುಬಿಡುತ್ತಾ ನಕ್ಕ.
ಇವ ಬಾಕಿ ಬಡಿಸಿದ ಖಾದ್ಯಗಳನ್ನ ಒಂದೊಂದಾಗಿ ರುಚಿ ನೋಡುತ್ತಾ "ಉವ್ವ" ಅಂದ. ಕೋಳಿ ಸಾರಿನ ಬದಲಿಗೆ ಬಡಿಸಿದ ಬೂತಾಯಿ ಗಸಿˌ ಹುರಿದ ಬಂಗುಡೆˌ ಬೊಂಡಾಸು ಪುಳಿಮುಂಚಿˌ ಬೇಯಿಸಿದ ಕಡಲೆ ಹಾಕಿದ ಎಳೆಕಾಯಿ ನಾಟ್ಟನ್ ಚಕ್ಕನ್ ಪಲ್ಯˌ ಪಪ್ಪಡಂˌ ನೆಲ್ಲಿ ಉಪ್ಪಡುˌ ಮೋರು ಹಾಗೂ ಕುಚ್ಚಲಕ್ಕಿಯ ಅನ್ನವಿದ್ದ ನಾಯರನ ಪರಮಾಯಿಷಿ ಚೋರು ಹಸಿವಾಗಿದ್ದಕ್ಕೋ ಏನೋ ಸಿಕ್ಕಾಪಟ್ಟೆ ರುಚಿಯೆನಿಸಿ ಭರ್ಜರಿ ತೇಗು ಬರುವಂತೆ ಉಂಡೆದ್ದ. ಮೆಟ್ಟಿಲೇರಿ ಕೋಣೆಗೆ ಹೋಗಿ ಇನ್ನೂ ಬಾಡಿರದ ಬಿಸಿಲಿನಿಂದ ಪಾರಾಗಲು ತಂಪುಗನ್ನಡಕˌ ತುಂಬು ಕೈಯ ಹಸಿರು ಟೀ ಶರ್ಟ್ ಹಾಗೂ ಬರ್ಮುಡಾ ಏರಿಸಿ ಕ್ಯಾಮೆರಾದ ಸೊಂಟಪಟ್ಟಿ ಬಿಗಿದುಕೊಂಡವನೆ ಕುಶಾಲನಗರದ ಬೀಚಿನೆಡೆಗೆ ಹೊರಡಲು ಅನುವಾಗಲು ತೊಡಗಿದ. ಸಂಜೆಯಾದರೆ ಸಾಕು ಹಾವಾಡಿಗನ ಪುಂಗಿ ಹಾವನ್ನ ಆಕರ್ಷಿಸುವಂತೆ ಕಡಲಲೆಗಳ ಆರ್ದ್ರ ಕರೆ ಅವನನ್ನ ತನ್ನತ್ತ ಸೆಳೆಯ ತೊಡಗುತ್ತದೆ.
*****
ಕಡಲತೀರ ಇಂದಷ್ಟು ಹೆಚ್ಚು ಉಗ್ರವಾಗಿರದೆ ನೆನ್ನೆಗಿಂತ ಚೂರು ಶಾಂತವಾಗಿದ್ದಂತ್ತಿತ್ತು. ಬಹುಶಃ ಇಳಿತದ ಕಾಲ ಹತ್ತಿರ ಬರುತ್ತಿದೆಯೇನೋ. ಆಗಲೆ ಇಲ್ಲಿಗೆ ಬಂದು ಐದು ದಿನ ಕಳೆದಿದೆˌ ಸಂಜೆ ಹೋಗಿ ಮುಂದಿನ ಪಯಣದ ಟಿಕೇಟನ್ನ ಕಾಯ್ದಿರಿಸಬೇಕು ಅಂತಂದುಕೊಂಡ. ಆದರೆ ಹೋಗುವುದೆಲ್ಲಿಗೆ ಅನ್ನುವ ಗೊಂದಲ ಬಗೆಹರೆಯಲಿಲ್ಲ. ದಾರಿಯಲ್ಲಿ ನಡೆದು ಬರುತ್ತಿದ್ದಷ್ಟೂ ಉದ್ದಕ್ಕೆ ಅನೇಕ ದಿನನಿತ್ಯದ ಜೀವಂತ ಚಿತ್ರಗಳನ್ನ ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದವು.
ಯಾರದ್ದೊ ಹಿತ್ತಲಿನಲ್ಲಿ ಹೊತ್ತೊಯ್ಯಲು ಹೊಂಚು ಹಾಕುತ್ತಿದ್ದ ಗಿಡುಗನಿಂದ ಕಾಪಾಡಿಕೊಂಡು ತನ್ನ ಮರಿಗಳನ್ನ ಮೇಯಿಸುತ್ತಿರುವ ತಾಯಿಕೋಳಿˌ ಆಗಷ್ಟೆ ಹೇತ ಅಂಗಿ ಮಾತ್ರ ಹಾಕಿಕೊಂಡಿರುವ ಉಡಿದಾರದ ಪುಟ್ಟನ ಮನೆ ಮುಂದಿನ ನಲ್ಲಿಯಡಿಯ ಕಲ್ಲ ಮೇಲೆ ಕುಕ್ಕರಗಾಲಲ್ಲಿ ಕೂರಿಸಿ ಕುಂಡೆ ತೊಳೆಯುತ್ತಿರುವ ಅವನಮ್ಮˌ ಅಂಗಡಿ ಪಕ್ಕ ಹೊಗೆ ಬಿಡುತ್ತಾ ಬೀಡಿ ಸೇಯುತ್ತಿದ್ದ ಕಾಕ. ಸೈಕಲ್ಲಿನಲ್ಲಿ ಟ್ರಿಪಲ್ ರೈಡ್ ಹೋಗುತ್ತಿರುವ ಚಿಣ್ಣರುˌ ಶಾಲೆಯಿಂದ ಮರಳುವ ಹಾದಿಯಲ್ಲಿ ಗಹನ ಚರ್ಚೆಯಲ್ಲಿ ಮುಳುಗಿದ್ದ ಶಾಲಾ ಚೀಲದ ಹೊರೆ ಹೊತ್ತಿದ್ದ ಮಕ್ಕಳುˌ ಮುಂದಿನ "ಸಮರಂ" ಗೋಡೆ ಬರಹ ಬರೆಯುತ್ತಿರೋ ಪೈಂಟರ್ ಹೀಗೆ ಜೀವಂತಿಕೆಯ ಅಭಿವ್ಯಕ್ತಿಗಳಿಗೇನೂ ಅಲ್ಲಿ ಕೊರತೆಯಿರಲಿಲ್ಲ. ಬೇಕಿದ್ದದ್ಧು ದಿಟ್ಟಿಸಿ ನೋಡುವ ಕಣ್ಗಳಷ್ಟೆ.
ಸುಭಾಶ ಸಂಜೆ ಇವನ ಖಾಯಂ ಠಿಕಾಣಿಗೆ ಬರೋದು ಖಾತ್ರಿಯಿತ್ತು. ಅವನ ಬರುವನ್ನೆ ಕಾಯುತ್ತಾ ಮರಳ ದಿಬ್ಬದ ಅದೆ ಸ್ಥಳದಲ್ಲಿ ಸಮುದ್ರಭಿಮುಖವಾಗಿ ಕುಕ್ಕರಿಸಿದ. ಇನ್ನೇನು ತಾಸಿನಲ್ಲಿ ಈಗ ಇಷ್ಟು ಪ್ರತಾಪ ಬೀರುತ್ತಾ ಉರಿಯುತ್ತಿರುವ ಸೂರ್ಯ ಪಡುಗಡಲಲ್ಲಿ ಮುಚ್ಚಿಕೊಂಡು ಮುಳುಗಿ ನಾಟಕೀಯವಾಗಿ ಆವರಿಸಿಕೊಳ್ಳಲಿರುವ ಕತ್ತಲಿನಲ್ಲಿ ಇರುಳ ರಾಜ್ಯಭಾರ ಮರಳಿ ಆರಂಭವಾಗಲಿತ್ತು. ದೂರದಿಂದ ಸುಭಾಶನ ಸವಾರಿ ಕುಣಕೊಂಡು ಬರುತ್ತಿರೋದು ಕಾಣಿಸಿತು. ಕೈಯಲ್ಲೊಂದು ಗಂಟಿನಂತದ್ದನ್ನ ಹಿಡಿದುಕೊಂಡು ನಡೆಯುತ್ತಿದ್ದಾನೋ ಇಲ್ಲಾ ಇಲ್ಲದ ಕುದುರೆಯನ್ನ ಕಲ್ಪಿಸಿಕೊಂಡು ತಾನೆ ಅದರ ಪರವಾಗಿ ಕೆನೆಯುತ್ತಾ ಸವಾರಿ ಮಾಡಿಕೊಂಡು ಬರುತ್ತಿದ್ದಾನೋ ಅರ್ಥವಾಗಲಿಲ್ಲ.
ಹತ್ತಿರ ಬಂದವ ಏದುಸಿರು ಬಿಡುತ್ತಾˌ "ಬೇಗ ಬಂದ್ರಿಯಾ!" ಅಂತ ಆಶ್ಚರ್ಯಪೂರ್ವಕವಾಗಿ ಪ್ರಶ್ನಿಸುತ್ತಾ ಪಕ್ಕಕ್ಕೆ ಬಂದು ಕೂತ. ಅವನಿಗೆ ನೆನ್ನೆಯ ತನ್ನ ಫೋಟೊಗಳನ್ನ ನೋಡುವ ಕಾತರ ಇದ್ದಂತಿತ್ತು. ಕ್ಯಾಮರಾದ ಪರದೆಯ ಮೇಲೆ ಒಂದೊಂದಾಗಿ ಕೋಲದ ಹಿನ್ನೆಲೆಯಲ್ಲಿ ತನ್ನ ಮುಖಾರವಿಂದ ಸೆರೆಯಾಗಿದ್ದನ್ನ ಕಾಣುತ್ತಿದ್ದಂತೆ ಹಲ್ಲು ಬಿಟ್ಟು ನಗಾಡಿಕೊಂಡು ಆಸ್ವಾದಿಸಹತ್ತಿದ. ಅವನ ಒಂದೂವರೆ ಕಾಲಿನ ಕಂಭಾಶ್ರಿತ ನಿದ್ರಾ ಭಂಗಿಗಳ ಸರದಿ ಬಂದಾಗ "ಇಶ್ಶೀ ಇದೆಲ್ಲ ಎಂತಯ! ಇಂತದೆಲ್ಲ ತೆಗೆಯದ ನೀವು? ನನ್ ಮರ್ಯಾದೆ ಹೋಯ್ತು ಮಾರ್ರೆ" ಅಂತ ಮುಖ ಹಿಂಡಿಕೊಂಡ. "ಮುಚ್ಚˌ ಭಾರಿ ಮರ್ಯಾದಸ್ತ ಕುಳ ಅಹಹ! ಅಲ್ಲನ ಅಷ್ಟು ಮಾನಸ್ತನಾಗಿದ್ರೆ ಕದ್ದು ಕುಗುರ್ತಾ ಬೆಲ್ಲ ತೂಗಿದ್ದು ಯಾಕನ?" ಅಂತ ಇವ ನಗುನಗುತ್ತಲೆ ದಬಾಯಿಸಿದ. ಆದರೂ ಅವನ ಮುಖದ ಮೇಲಿ ಕಸಿವಿಸಿ ಕಡಿಮೆಯಾಗಲಿಲ್ಲ.
"ಅಲ್ಲಾ ಅವನ್ನ ಮಾತ್ರ ಯಾರಿಗೂ ತೋರಿಸಬೇಡಿ ಆಯ್ತ! ನಿಮ್ಮ ದಮ್ಮಯ್ಯ?!" ಅಂದ. ಅಲ್ಲಾ ನಾನ್ಯಾರಿಗೆ ತೋರಿಸಿದರೆ ಇವನಿಗೆಂತ ನಷ್ಟ? ನೋಡುವ ತನ್ನ ಇಷ್ಟಮಿತ್ರರಿಗೆ ಇವನ ಪರಿಚಯವೆ ಇಲ್ಲದಿರುವಾಗˌ ಯಾವುದೋ ಸಹಜ ಜೀವನದ ಚಿತ್ರಸರಣಿ ನೋಡುವ ಉಮೇದಿನಲ್ಲಿರೋ ಅವರ್ಯಾಕಾದರೂ ಇವನನ್ನ ಇಲ್ಲಿಯವರೆಗೂ ಹುಡುಕಿಕೊಂಡು ಬಂದು ಕಿಚಾಯಿಸಿ ಈ ಭಾರಿ ಮರ್ಯಾದಸ್ತನ ಮಾನ ಮರ್ಯಾದೆಯನ್ನ ಕಳೆದಾರು? ಅಂತ ಯೋಚಿಸಿ ಗಟ್ಟಿಯಾಗಿ ನಗುಬಂತು. ಅದನ್ನವ ಏನಂತ ಗ್ರಹಿಸಿದನೋ ಏನೋ "ಪ್ಲೀಸ್ ತೋರಿಸಬೇಡಿˌ ಪ್ಲೀಸ್ ಆಯ್ತ" ಅಂತ ಪದೆ ಪದೆ ಬೇಡಿದ. "ಆಯ್ತು ಮಾರಾಯˌ ತೋರ್ಸಲ್ಲ ಚಿಂತೆ ಮಾಡ್ಬೇಡ ಆಯ್ತ" ಅಂದಾಗ ಅದಕ್ಕಷ್ಟು ಸಮಾಧಾನವಾದಂತಾಗಿ ಮಗು ಪ್ಯಾಲಿನಗೆ ಬೀರಿತು.
"ಆಯ್ತಾಯ್ತ್ ಈಗ ನಿಂಗೆ ಫೋಟೋ ಕಾಪಿ ಬೇಕಂತಿದ್ರೆ ಪ್ರಿಂಟ್ ಹಾಕಿಸಬೇಕಲ್ಲ ಮಾರಾಯಾˌ ಬಾ ಪೇಟೆ ಕಡೆಗೆ ಹೋಗಿ ಬರಣ" ಅಂತ ಅಂಡಿಗಂಟಿದ ಮರಳ ಕಣಗಳನ್ನ ಕೊಡವಿಕೊಳ್ಳುತ್ತಾ ಮೇಲೆದ್ದ ಸುಭಾಶನೂ ಕುಣಿಯುತ್ತ ತಯಾರಾದ. ಎಡಗೈಯನ್ನ ಕಿರಿಯನ ಹೆಗಲ ಮೇಲೆ ಹಾಕಿ ತೀರದ ಪಕ್ಕದ ಸಮಾಂತರ ರಸ್ತೆ ಹಿಡಿದು ಅವರಿಬ್ಬರೂ ರೈಲ್ವೆ ಹಳಿ ದಾಟಿ ಸ್ಟೇಷನ್ನಿನ ಮುಖ್ಯದ್ವಾರದಿಂದಾಚೆ ಇರುವ ಹಳೆ ಬಸ್ಟ್ಯಾಂಡಿನ ಹಾದಿ ಹಿಡಿಯಲು ಹೊರಟರು. ದಾರಿಯುದ್ದ ಬೆಂಗಳೂರಿನˌ ಫೊಟೊಗ್ರಫಿಯˌ ರೈಲಿನ ಹೀಗೆ ಮೊದಲದರ ಉತ್ತರ ಸಿಗುವ ಮೊದಲೆ ಕ್ಷಣಕ್ಕೊಂದು ಹೊಸ ಪ್ರಶ್ನೆ ಎಸೆಯುತ್ತಿದ್ದ ಸುಭಾಶನ ಪ್ರಶ್ನಾ ಸರಣಿಗಳಿಗೆ ಸಮಾಧಾನದಿಂದ ಉತ್ತರಿಸುತ್ತಾ ಅವನ ದಾರಿ ಸುಲಭವಾಗಿ ಸವೆಯುತ್ತಿತ್ತು.
ಕಾಙಂನಗಾಡಿಗೊಂದು ಹೊಸ ಬಸ್ ನಿಲ್ದಾಣ ತಯಾರಾಗಿದ್ದರೂ ಹಳೆ ಚಾಳಿ ಬಿಡಲೊಲ್ಲದ ಬಸ್ಸುಗಳೆಲ್ಲ ಒಮ್ಮೆ ಇಕ್ಕಟ್ಟಾದ ಈ ಹಳೆ ನಿಲ್ದಾಣವನ್ನ ಹೊಕ್ಕ ಶಾಸ್ತ್ರ ಮಾಡಿಯೆ ಅಲ್ಲಿಂದ ಒಂದೂವರೆ ಕಿಲೋಮೀಟರು ದೂರದಲ್ಲಿರುವ ಹೊಸ ನಿಲ್ದಾಣದತ್ತ ದೌಡಾಯಿಸುತ್ತಿದ್ದವು. ಆ ಹಳೆ ನಿಲ್ದಾಣದ ಸಂದಿಗೊಂದಿಯ ನಡುವೆ ಇತ್ತು ಮೊಯಿದ್ದಿಯ ಬದ್ರಿಯಾ ಕಲರ್ ಲ್ಯಾಬ್. ಮಿಷನ್ ಕೆಟ್ಟಿದೆ. ಹೀಗಾಗಿˌ ಚಿತ್ರಗಳನ್ನ ಪ್ರಿಂಟ್ ಹಾಕಲು ಸಾಧ್ಯವಿಲ್ಲ. ಬೇಕಿದ್ದರೆ ನಾಳೆ ಕಾಸರಗೋಡಿಂದ ಹಾಕಿಸಿ ತರುವೆ ಅಂತಲೂ ಅಂದ ಮೊಯಿದ್ದಿ. ಬೇರೆ ದಾರಿ ಇರಲಿಲ್ಲ. ಕ್ಯಾಮರಾದ ಮೆಮೊರಿ ಕಾರ್ಡನ್ನ ಅವನಿಗೊಪ್ಪಿಸಿ ಚೂರು ಅಡ್ವಾನ್ಸ್ ಕೊಟ್ಟು ಅವರಿಬ್ಬರ ಸವಾರಿ ಹತ್ತಿರದಲ್ಲಿದ್ದ ಉಡುಪಿ ಶ್ಯಾನುಭೋಗರ "ಮೈಸೂರು ರಿಫ್ರೆಶ್ಮೆಂಟ್" ಕಡೆಗೆ ತಿರುಗಿತು.
( ಇನ್ನೂ ಇದೆ.)
https://youtu.be/AzTZVLxcwwM
No comments:
Post a Comment