16 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೪.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೪.👊


ಹೇಳಿ ಕೇಳಿ ಅದು ಡಿಸ್ಕೋ ಸಂಗೀತದ ಜನಪ್ರಿಯತೆ ಮಗಿಲು ಮುಟ್ಚಿದ್ದ ಕಾಲ ಅದು. ಎಲ್ಲೆಲ್ಲೂ ಒಂದೊಂದು ಹೊಸ ಸಿನೆಮಾದಲ್ಲೂ ಹಿಂದೆಂದೂ ಕೇಳಿರದ ಧಾಟಿಯ ಬೀಟ್ ಮೇಲೆ ಬೀಟ್ ಸಿಡಿಸುತ್ತಿದ್ದ ಬಪ್ಪಿ ಲಾಹಿರಿ ಹಾಗೂ ಚಿತ್ರ-ವಿಚಿತ್ರ ವಾದ್ಯದಿಂದೆಲ್ಲಾ ನಾದ ಹೊರಡಿಸುತ್ತಾ ಕೇಳುಗರೂ ಸಹ ಅದರಿಂದ ಪ್ರಚೋದಿತರಾಗಿ ಕೂತ ಕೂತಲ್ಲೆ ಮೇಜುˌ ನೆಲˌ ಗೋಡೆ ಹೀಗೆ ಸಿಕ್ಕ ಸಾಮಾನು ಸರಂಜಾಮುಗಳ ಮೇಲೆಲ್ಲಾ ಕೈ ಕಾಲುಗಳ ಬೆರಳುಗಳಿಂದಲೆ ತಾಳ ಕುಟ್ಟುವಂತೆ ಮಾಡುತ್ತಿದ್ದ ಆರ್ ಡಿ ಬರ್ಮನ್ರದ್ದೆ ಹವಾ. 


ಅಂತಹ ತಾಳಕ್ಕೆ ತಕ್ಕಂತೆ ಕುಣಿಸುವ ಸಂಗೀತ ದಿಗ್ಗಜರೆ ಅಂದಿನ ಯುವ ಪೀಳಿಗೆಯ ಆರಾಧ್ಯ ದೈವವಾಗಿದ್ದ ಸಮಯವದು. ತೆರೆಯ ಮೇಲೆ ಈ ಹಾಡುಗಳಿಗೆ ಮೈ ಚಳಿ ಬಿಟ್ಟು ತಮ್ಮ ತಮ್ಮ ನಾಯಕಿಯರ ಸೊಂಟ ಹಿಡಿದು ನುಲಿಯತ್ತಾˌ ಮಧ್ಯ ಮಧ್ಯ ಸಾಧ್ಯವಾದಾಗಲೆಲ್ಲಾ ಮೆಲ್ಲಗೆ ಬೆರಳುಗಳಿಂದ ಅವರ ತೆರೆದ ಹೊಟ್ಟೆಯ ಹೊಕ್ಕುಳ ಗುಳಿಗೊಂದು ಚನ್ನೇಟನ್ನ ಹೊಡೆದು ಅವರೊಂದಿಗೆ ಜೋಡಿಯಾಗಿ ಥರೇವಾರಿ ಡಿಸ್ಕೋ ಸ್ಟೆಪ್ಪುಗಳನ್ನ ಹಾಕಿಕೊಂಡು ಮಿಣಿಮಿಣಿ ಮಿಂಚುವ ವಸ್ತ್ರಾಲಂಕಾರ ಮಾಡಿಕೊಂಡು ಥಕ ಥೈ ಎಂದು ಕುಣಿಯುತ್ತಿದ್ದ ಮಿಥುನ್ ಚಕ್ರವರ್ತಿˌ ವಿಷ್ಣುವರ್ಧನ್ˌ ಜಿತೇಂದ್ರˌ ಅಮಿತಾಭ್ ಬಚ್ಚನ್ˌ ಚಿರಂಜೀವಿ ಮುಂತಾದವರೆ ಆಗ ಅವರ ಪಾಲಿಗೆ ಆದರ್ಶ ಪುರುಷರು. 


ಅಂದು ತಯಾರಾಗಿದ್ದ ಯಾವ ಭಾಷೆಯ ಯಾವುದೆ ಸಿನೆಮಾವನ್ನ ಬೇಕಾದರೂ ಇವತ್ತು ಹಾಕಿಕೊಂಡು ನೋಡಿˌ ಹೆಚ್ಚು-ಕಡಿಮೆ ಒಂದೆ ಧಾಟಿಯ ಏರಿಳತವಿಲ್ಲದ ಕಥಾ ನಿರೂಪಣೆ. ನಾಯಕ ಒಂದೋ ಹುಟ್ಟು ಬಡವˌ ಇಲ್ಲದಿದ್ದರೆ ಮಧ್ಯಮವರ್ಗದ ನಿರುದ್ಯೋಗಿˌ ಅದೂ ಅಲ್ಲಂತಾದರೆ ಫೊಟೋಗ್ರಾಫರ್ˌ ಕ್ಲಬ್ ಡ್ಯಾನ್ಸರ್ ಥರದ ಆದಾಯದ ಅನಿಶ್ಚಿತತೆ ಇರುವ ಎಂಥದೋ ಒಂದು ಉದ್ಯೋಗ ಹಿಡಿದವ. ಅದೂ ಇಲ್ಲ ಅಂತಾದರೆˌ ಇನ್ನೇನು ಮುಚ್ಚಿ ಹೋಗಲು ತಯಾರಾಗಿಟ್ಟಿರುವ ಭಯಂಕರ ಜಂಬದ ಕೋಳಿ ನಾಯಕಿಯ ಅಪ್ಪನ ಮಾಲಕತ್ವದಲ್ಲಿರುವ ಯಾವ ಉತ್ಪನ್ನ ತಯಾರಾಗುತ್ತದೆ ಅಲ್ಲಿ ಅಂತನೆ ಕೊನೆವರೆಗೂ ನೋಡುಗರಿಗೆ ಗೊತ್ತೆ ಆಗದ ಅದೆಂತದೋ ಬಗೆಯ ಕಾರ್ಖಾನೆಯಲ್ಲಿ ಖಾಕಿ ತೊಟ್ಟು ಸುಮ್ಮನೆ ಒಂದು ಕಟಿಂಗ್ ಪ್ಲೆಯರ್ ಹಾಗೂ ಸ್ಕ್ರೂ ಡ್ರೈವರ್ ಹಿಡಿದೆ ಬೆವರುತ್ತಾ ನಿಂತ ಯೂನಿಯನ್ ಲೀಡರ್. ಇದೆಲ್ಲ ಬೇಡ ಅಂತಾದರೆ ಒಬ್ಬ ಸಾಮಾನ್ಯ ಕೂಲಿ. ಇದರಲ್ಲಿ ಯಾವುದಾದರೂ ಒಂದಾಗಿರುತ್ತಿದ್ದ. ಒಟ್ಟಾರೆ ಉಢಾಳ ಅಷ್ಟೆ. 



ಚಿತ್ರದ ಮೊದಲರ್ಧ ಬರಿ ನಾಯಕನ ಬಡತನˌ ಬಡವನಾದ ನಾಯಕನನ್ನ ಎಲ್ಲರೂ ನಾಲಾಯಕ ಅಂತ ಹೀಯಾಳಿಸುವ ದೃಶ್ಯಗಳುˌ ಕಾಲೇಜು ಕನ್ಯೆಯಾಗಿರುವ ಅಥವಾ ಆಗಿನ್ನೂ ವಿದೇಶದಿಂದ ಮರಳಿ ಬಂದ ಸಿಕ್ಕಾಪಟ್ಟೆ ಪೊಗರಿನ ನಾಯಕಿಯ ಸೊಕ್ಕಿನ ನಡುವಳಿಕೆಯ ದರ್ಶನˌ ಅದರ ಮೂಲಕ ನಾಯಕ ನಾಯಕಿ ನಡುವೆ ಹುಟ್ಟುವ ತಿಕ್ಕಾಟˌ ಬಹಿರಂಗವಾಗಿ ನಾಯಕಿಯ ಕೊಬ್ಬಿಳಿಸಿ ಚಪ್ಪಾಳೆ ಗಿಟ್ಟಿಸುವ ನಾಯಕˌ ಅಂತಹ ಶರಂಪರ ಕಿತ್ತಾಟದ ಮಧ್ಯ ಮಧ್ಯ ಇದ್ದ ಬದ್ದ ಕೆಲಸಗಳನ್ನೆಲ್ಲ ಅಲ್ಲಲ್ಲೆ ಬಿಟ್ಟು ಧಡೀರನೆ ಊಟಿ ಅಥವಾ ಶಿಮ್ಲಾದ ಲೋಕೇಶನ್ನುಗಳಲ್ಲಿ ದೃಶ್ಯಕ್ಕೊಂದು ಧಿರಿಸು ತೊಟ್ಟು ಈ ಹಾಡುಗಳಿಗೆ ನಕ್ಕು ನಲಿಯುವ ಆ ನಾಯಕ ನಾಯಕಿಯ ಜೋಡಿ. ಅವರೊಂದಿಗೆ ಅಲ್ಲಲ್ಲೆ ಅರಳಿದ ಹೂವುಗಳಂತೆ ಕೋರಸ್ ಹಾಡಿಕೊಂಡು ರಂಗುರಂಗಿನ ಬಟ್ಟೆ ತೊಟ್ಟು ಕುಣಿದರೂ ಚೂರೂ ಅವರ ಖಾಸಗಿತನಕ್ಕೆ ಧಕ್ಕೆ ತಾರದ ನೃತ್ಯಗಾತಿಯರ ಗುಂಪು. ಆ ಹಾಡು ಹಾಡಲ್ಲೆ ಅವರಿಬ್ಬರ ಮಧ್ಯೆ ಪ್ರೀತಿ ಅರಳಿˌ ಅದು ಉತ್ಕಟ ಒಲವಾಗಿ ಕೆರಳಿˌ ಹುಟ್ಟಾ ಸೊಕ್ಕಿನ ನಡುವಳಿಕೆಯ ನಾಯಕಿಯ ಸೊಕ್ಕಡಗಿˌ ಅವಳು ಅವನ ಮಗುವಿಗೆ ತಾಯಿಯಾಗ್ತಿದೀನಿ ಅನ್ನೋ ಸಂಭಾಷಣೆ ಬರುವ ಹೊತ್ತಿಗೆ ಪ್ರೇಕ್ಷಕ ಪ್ರಭುಗಳಿಗೆ ಚುರಮುರಿ ತಿಂದು ಸೋಡ ಕುಡಿದು ಬೀಡಿ ಸೇಯ್ದು ಉಚ್ಛೆ ಹೊಯ್ದು ಬರಲು ಕೊಡುವ ಮಧ್ಯಂತರ! 


ಅನಂತರ ಕಾರ್ಖಾನೆಯಲ್ಲೂ ಜಗಳ ತೆಗೆದು ಮುಷ್ಕರ ಹೂಡಿರುವ ಯೂನಿಯನ್ ಲೀಡರ್ ಆಗಿರುವ ನಾಯಕˌ ಗಾಯದ ಮೇಲೆ ಉಪ್ಪು ಸುರಿವಂತೆ ತನ್ನ ಮುದ್ದಿನ ಮಗಳನ್ನೂ ಪಟಾಯಿಸಿದ ಸಿಟ್ಟಿನಲ್ಲಿ ಕುದಿಯುವ ಅವಳಪ್ಪ ಹಾಗೂ ನಾಯಕನ ನಡುವಿನ ಘನಘೋರ ತಿಕ್ಕಾಟ. ಇದಕ್ಕೆ ತುಪ್ಪ ಸುರಿವ ವಿಲನ್ಗಳಾದ ನಾಯಕಿಯ ಸಹೋದರ ಮಾವ ಅಥವಾ ಅವಳ ಅತೃಪ್ತ ಪ್ರೇಮಿ. ಪದೆ ಪದೆ ನಾಯಕನ ಸ್ವಾಭಿಮಾನ ಕೆಣಕುವ ಅವರ ಪ್ರಚೋದನೆ. ನಾಯಕನ ಪೌರುಷ ಹೊರ ಹಾಕಿಸುವಂತಹ ಅವರ ನಡುವಿನ ಗುದ್ದಾಟ. ಇದಕ್ಕೆಲ್ಲ ಕಳಶವಿಟ್ಟಂತೆ ಸ್ವಭಾವತಃ ದುಷ್ಟನಾದ ಖಳನಾಯಕನಿಗೊಬ್ಬಳು ವ್ಯಾಂಪ್ ಗೆಳತಿ. 


ನಾಯಕನ ಜೊತೆಗಿನ ಫೈಟಿಂಗಿನಲ್ಲಿ ಒದೆ ತಿಂದು ಬರುವ ವಿಲನ್ನಿನ ಮನ ತಣಿಸಲು ಕನಿಷ್ಠ ಒಂದಾದರೂ ಡಿಸ್ಕೋ ಶಾಂತಿ - ಜಯಮಾಲಿನಿ - ಹೆಲನ್ - ಹಲಂ - ಸಿಲ್ಕ್ ಸ್ಮಿತಾ ಕರ್ಚೀಫಿಗಿಂತ ಕಿರಿದಾದ ಬಟ್ಟೆಯಲ್ಲಿ ಹೊಲಿಸಿದ "ಕಾಸ್ಟ್ಯೂಮು" ತೊಟ್ಟುಕೊಂಡು ಅಂಡು ತೊಡೆ ಎದೆ ತುಟಿ ಕುಣಿಸಿ ಪ್ರೇಕ್ಷಕರನ್ನ ಉನ್ಮತ್ತರನ್ನಾಗಿಸಲು ಮಾಡುವ ಕ್ಲಬ್ ಡ್ಯಾನ್ಸ್ ಅಥವಾ ಕ್ಯಾಬರೆˌ ಎರಡು ರೇಪ್ˌ ನಾಲ್ಕು ಫೈಟ್ˌ ಎಂಟು ಹಾಡು. ಕಡೆಗೊಮ್ಮೆ ಎಲ್ಲ ದುಷ್ಟರ ಮನಪರಿವರ್ತನೆಯಾಗಿ ಒಂದಾದ ಮೇಲೆ ಶುಭಂ. ಇಷ್ಟೆ ಕಥಾ ಹಂದರ. ಎಂಬತ್ತರ ದಶಕದ ಬಹುತೇಕ ಚಿತ್ರಗಳದ್ದು ಇದೆ ಹಣೆಬರಹ. 


ಇದನ್ನೆ ಎರಡೂವರೆ ತಾಸು ಎಳೆದೆಳೆದು ತೋರಿಸುವ ಕಸರತ್ತಿನ ಮುಖ್ಯಾಂಶವೆ ಈ ಸಂಗೀತ. ಅದರ ಮೋಡಿಗೆ ಯುವಜನರು ಸಹಜವಾಗಿ ತಲೆದೂಗಿ ಸನ್ಮೋಹಕ್ಕೆ ಒಳಗಾಗುತ್ತಿದ್ದರು. ಇದೆ ಕಥಾ ಹಂದರವನ್ನ ತಿರುವಿ ಮುರುವಿ ಮತ್ತೊಂದು "ಹೊಚ್ಚ ಹೊಸ ಸಿನೆಮಾ ಸ್ಕೋಪ್" ಚಿತ್ರ ಮಾಡಿ ತೆರೆಗೆ ತಂದು ರಾಚುತ್ತಿದ್ದರು. ಪ್ರೇಕ್ಷಕರೂ ಒಗ್ಗರಣೆ ಹಾಕಿರೋ ಅದೆ ಹಳೆಯ ತಂಗಳನ್ನದ ಹೊಸ "ಚಿತ್ರಾ"ನ್ನ ಸವೆಯಲು ಕಾತರರಾಗಿರುತ್ತಿದ್ದರು. ಕ್ರಮೇಣ ಈ ಹಳಸಲು ಚಿತ್ರಾನ್ನದಲ್ಲೂ ಅನ್ನದ ಅಗುಳುಗಳು ಕಡಿಮೆಯಾಗುತ್ತಾ ಬಂದುˌ ಪದೆ ಪದೆ ಸೇರಿಸಲಾಗುತ್ತಿದ್ದ ಒಗ್ಗರಣೆಯ ಜಿಗುಟೆ ಅತಿಯಾಗಿ ಅದನ್ನ ತಿನ್ನಲು ವಾಕರಿಕೆ ಬರುತ್ತಿದ್ದ ಪ್ರೇಕ್ಷಕ ಬದಲಾವಣೆಗೆ ಒಳಗೊಳಗೆ ಕಾತರಿಸಲಾರಂಭಿಸಿದ್ದ.


ಆಂತಹ ವಿಷಮ ವಾತಾವರಣದಲ್ಲಿಯೂ ಸಿನೆಮಾವನ್ನ ಒಂದು ಮಟ್ಟಿಗೆ ಎತ್ತಿ ಹಿಡಿದು ತಥಾಥಿತ ನಿರೂಪಣೆಯಿದ್ದರೂ ಚಿತ್ರಕ್ಕೆ ಜೀವದಾನ ನೀಡುತ್ತಿದ್ದುದು ಅದರ ಸಂಗೀತ. ಚಿತ್ರದ ಬಿಡುಗಡೆಗೂ ಅರ್ಧ ವರ್ಷ ಮೊದಲೆ ಬಿಡುಗಡೆಯಾಗುತ್ತಿದ್ದ ಚಿತ್ರದ ಹಾಡುಗಳ ಕ್ಯಾಸೆಟ್ಟುಗಳಿಗೆ ಭಾರಿ ಬೇಡಿಕೆ ಇದ್ದ ಕಾಲ ಬೇರೆ. ಹೆಚ್ಎಂವಿˌ ಸಂಗೀತಾˌ ವೀನಸ್ˌ ಲಹರಿ ಹೀಗೆ ಹೊಸ ಹಳೆಯ ಕಂಪನಿಗಳ ಲೇಬಲ್ ಹೊತ್ತ ಕ್ಯಾಸೆಟ್ಟುಗಳನ್ನ ಎಲ್ಲಾ ಸಂಗೀತಪ್ರೇಮಿ ಯುವಕರಂತೆ ಇವನ ಮಾವನೂ ಗೋರಿ ಗೋರಿ ಗುಡ್ಡೆ ಹಾಕಿಕೊಂಡಿದ್ದ. ಈ ಮೂಲಕ ಹಾಡುಗಳನ್ನ ಕೇಳುವ ವ್ಯಸನ ಇವನಿಗೂ ಸಣ್ಣಂದಿನಿಂದಲೆ ಅಂಟಿಕೊಂಡಿತು. ಆದರೆ ಕೇಳುವ ಹಾಡುಗಳೆಲ್ಲವೂ ಇಷ್ಟವಾಗುತ್ತಿರಲಿಲ್ಲ. ಮಾಧುರ್ಯಕ್ಕೆ ಮಾರು ಹೋಗಿದ್ದ ಅವನನ್ನ ಆವರಿಸಿ ಬುಟ್ಟಿಗೆ ಹಾಕಿಕೊಳ್ಳಲು ಮದನ್ ಮೋಹನ ಸಾಬರ ಹಾಗೂ ಇಳಯರಾಜರ ಸಂಯೋಜನೆಯ ಹಾಡುಗಳಿಗೆ ಹೆಚ್ಚು ಕಷ್ಟವಾಗಲಿಲ್ಲ.

*****

ಅರಿವು ಅನ್ನುವ ಪ್ರಭೆ ಇವನ ಮಡ್ಡ ಮಂಡೆಯೊಳಗೂ ಮೂಡಿˌ ಮೇಲೆ ಕಾಣುತ್ತಿರುವಷ್ಟೇನೂ ಸರಳವಲ್ಲ ಈ ಪ್ರಪಂಚ ಅನ್ನುವ ವಾಸ್ತವದ ಬೋಧೆ ಆಗುವ ಹೊತ್ತಿಗೆ ಸಿನೆಮಾರಂಗದಲ್ಲಿ ಬೆಲ್ ಬಾಟಮ್ ಪ್ಯಾಂಟಿನ ಯುಗ ಮರೆಯಾಗಿ ಬ್ಯಾಗಿ ಪ್ಯಾಂಟಿನ ಅಬ್ಬರ ಆರಂಭವಾಗಿತ್ತು. ಹಳೆಯ ಹಳಸಲು ಮುಖದ ಮುದಿ ನಾಯಕ ನಾಯಕಿಯರ ಜಾಗಕ್ಕೆ ಎಳೆಯ ಕುಡಿ ಮೀಸೆಯ ತರುಣರು ಹಾಗೂ ಬಳುಕುವ ಬಳ್ಳಿಯಂತಹ ನವ ತರುಣಿಯರು ಆಗಮಿಸಿದ್ದರು. ಅಬ್ಬರದ ಡಿಸ್ಕೋ ಜಮಾನ ಕ್ರಮೇಣ ಮರೆಯಾಗಲಾರಂಭಿಸಿ ಬ್ರೇಕ್ ಡ್ಯಾನ್ಸ್ ಆ ಕಾಲದ ಯುವಕರ ಮೆಚ್ಚುಗೆ ಗಿಟ್ಟಿಸುವ ಕಾಲ ಕಣ್ತೆರೆದಿತ್ತು.

ಸಿನೆಮಾ ಸಂಗೀತವೂ ಸಹ ಕಾಲದ ಅಗತ್ಯಕ್ಕೆ ತಕ್ಕಂತೆ ಬದಲಾವಣೆಯಾಗ ತೊಡಗಿತು. ನವಯುಗದ ಸಂಯೋಜಕರ ಸ್ಪೂರ್ತಿ ಬದಲಾಗ ತೊಡಗಿತು.


( ಇನ್ನೂ ಇದೆ.)



https://youtu.be/xeoTaRQsls0

No comments: