17 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೫.👊ೌ

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೫.👊





ಅಲ್ಲಿಯವರೆಗೆ ಮೆಲ್ಲಗೆ ಎಲ್ಟನ್ ಜಾನ್ˌ ಸ್ಟೀವ್ ವೂಂಡರ್ˌ ಅರೆತ ಫ್ರಾಂಕ್ಲಿನ್ˌ ಲಿಯೋನಲ್ ರಿಚಿಯನ್ನ ಮಳ್ಳರಂತೆ ನಕಲು ಹೊಡೆದು ಭಾರತೀಯ ಸಿನೆಮಾಗಳ ಸಂಗೀತ ಸಿರಿ ಹೆಚ್ಚಿಸುತ್ತಿದ್ದ ಸಂಯೋಜಕರಿಗೆ ಮೆಡೋನ್ನˌ ಜಾನೆಟ್ ಜಾಕ್ಸನ್ˌ ಮೈಖೆಲ್ ಜಾಕ್ಸನ್ˌ ಪ್ರಿನ್ಸ್ˌ ವಿಟ್ಟಿ ಹ್ಯೂಸ್ಟನ್ˌ ಬ್ರಿಟ್ನಿ ಸ್ಪಿಯರ್ಸ್ ಹಾಗೂ ರಿಕಿ ಮಾರ್ಟನಿನಂತಹ ಪಾಶ್ಚಿಮಾತ್ಯ ಸಂಗೀತದ ತಾರೆಗಳಲ್ಲಿ ತಮ್ಮ ಭವಿಷ್ಯದ ಆಶಾಕಿರಣ ಗೋಚರಿಸಲಾರಂಭಿಸಿತು. 


ಕನ್ನಡ ಬಿಟ್ಟರೆ ಹಿಂದಿ ಹಾಡುಗಳೆ ಹೆಚ್ಚು ಕಿವಿಗೆ ಬೀಳುವ ವಾತಾವರಣದಲ್ಲಿದ್ದ ಅವನಿಗೆ ಅವರಲ್ಲಿ ಆನಂದ್ - ಮಿಲಂದ್ ಶೈಲಿ ಅದೇಕೋ ಬಹಳ ಇಷ್ಟವಾಗಲಾರಂಭಿಸಿತು. ಹೆಚ್ಚು-ಕಡಿಮೆ ಜೊತೆಜೊತೆಯಲ್ಲೆ ತೆರೆಕಂಡಿದ್ದ ಅವರ "ಖಯಾಮತ್ ಸೇ ಖಯಾಮತ್ ತಕ್" ಹಾಗೂ ರಾಮ್-ಲಕ್ಷ್ಮಣ್ ಜೋಡಿಯ "ಮೈನೇ ಪ್ಯಾರ್ ಕಿಆ" ಅಬ್ಬರದಿಂದ ಚಿತ್ರಪ್ರೇಮಿಗಳ ಮನೆಮಾತಾಗಿದ್ದ ಕಾಲ ಅದು. ಒಂದೆ ಬಗೆಯ ಕಥಾಹಂದರ ಹಾಗೂ ತಥಾಕಥಿತ ನಿರೂಪಣೆಯಿಂದ ದಶಕಗಳಿಂದ ನಿಂತ ನೀರಾಗಿ ಕೊಳೆತು ಮೆಲ್ಲಗೆ ದುರ್ವಾಸನೆ ಬೀರಲಾರಂಭಿಸಿದ್ದ ಸಿನೆಮಾಗಳ ಚಿತ್ರಕಥೆಗಳಲ್ಲೂ ಬದಲಾವಣೆಯ ಕಳೆ ಕ್ರಮೇಣ ಕಾಣಲಾರಂಭಿಸಿತು. 


ಅದೂವರೆಗೂ ಊಟಿ ಸೆಟ್ಟಿನಲ್ಲಿನ ಡ್ರೀಮ್ ಸಾಂಗ್ ಬಿಟ್ಟರೆ ಬಾಕಿ ಉಳಿದಂತೆ ಸಿನೆಮಾ ಪೂರ್ತಿ ಬದಲಾವಣೆಯನ್ನೆ ಕಾಣದ ಖಾಕಿ ಕಾಸ್ಟ್ಯೂಮು ಮಾತ್ರ ತೊಟ್ಟುˌ ಒಂದೆ ಒಂದು ದಿನ ಸಹ ಬೆವರು ಸುರಿಸಿ ದುಡಿಯದಿದ್ದರೂ ಸಹ ನಾಯಕಿಯನ್ನ ಮಾತ್ರ ನಿಯತ್ತಾಗಿ ಎದುರು ಹಾಕಿಕೊಂಡುˌ ಆಮೇಲೆ ಅವಳನ್ನೆ ಒಲಿಸಿಕೊಂಡು ಪ್ರೀತಿಸಿ ಕ್ಲೈಮಾಕ್ಸಿನ ಮಾರಾಮಾರಿಯಲ್ಲಿ ಅವಳನ್ನ ಅವಳ ಸಂಸಾರ ಸಮೇತ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೈಗಳೆರಡನ್ನೂ ಮೇಲೆತ್ತಿ ತೂಗು ಹಾಕಲಾಗಿರುವ ಯಾವುದೋ ಹಳೆಯ ಕಾರ್ಖಾನೆಯ ರಟ್ಟಿನ ಡಬ್ಬಗಳು ಹಾಗೂ ಖಾಲಿ ಪೀಪಾಯಿಗಳನ್ನೆ ಜೋಡಿಸಿಟ್ಟಿರುವ ಗೊಡೌನಿನಲ್ಲೋˌ ಇಲ್ಲಾ ಬೆಟ್ಟದ ತುದಿಯಲ್ಲಿರೋ ಒಂಟಿ ಬಂಡೆಯ ಮೇಲೆಯೋ ಹಂಗೇನೆ ಕಟ್ಟಿ ಹಾಕಿ ಬೆದರಿಸುವ ಖಳ ನಾಯಕನ ಗ್ಯಾಂಗನ್ನೆಲ್ಲಾ ಬರಿ ಕೈಯಲ್ಲೆ "ಡಿಶುಂ ಡಿಶುಂ" ಶಬ್ದ ವೈಭವದಲ್ಲಿ ಮಟ್ಟ ಹಾಕುತ್ತಿದ್ದ ತೋಳ್ಬಲ ಶೂರ ಸದಾ ಅಂಗಿಯ ಮೇಲಿನೆರಡು ಗುಂಡಿಗಳನ್ನ ಬೇಕಂತಲೆ ತೆಗೆದಿಟ್ಟುಕೊಂಡು ತನ್ನೆದೆ ಮೇಲೆ ವಿಫುಲವಾಗಿ ಬೆಳೆದಿರೋ ಪೊದೆ ಸದೃಶ ರೋಮ ಬಂಢಾರವನ್ನು ಭಂಡತನದಿಂದ ಪ್ರದರ್ಶಿಸಿಕೊಂಡೆ ಇರುತ್ತಿದ್ದ ನಾಯಕನ ಜಾಗಕ್ಕೆ ಮೀಸೆ ಸಹಿತ ಮುಖವನ್ನ ನುಣ್ಣಗೆ ಬೋಳಿಸಿ ಮುಖಕ್ಕೆ ಪೌಡರುˌ ಹುಡುಗಿಯರಂತೆ ತೆಳುವಾಗಿ ತುಟಿಗೆ ಬಣ್ಣ ಲೇಪಿಸಿಕೊಂಡ ಇನ್ ಷರ್ಟ್ ಮಾಡಿ ಟಿಪ್ ಟಾಪಾಗಿ ಕಂಗೊಳಿಸುತ್ತಿದ್ದ ಬ್ಯಾಗಿ ಪ್ಯಾಂಟ್-ಕ್ಯಾನ್ವಾಸ್ ಶೂ ಧರಿಸಿದ್ದ "ಚಾಕಲೆಟ್ ಹೀರೋ" ಬ್ರಾಂಡಿನ ಹೀರೋ ಪ್ರವೇಶವಾಗಿತ್ತು. 



ಇನ್ನವನ ಅವನಿಗಿಂತ ತುಸುವೆ ಹೆಚ್ಚು ಮೇಕಪ್ ಬಳಿದುಕೊಂಡ ಕಾಲೇಜು ಕನ್ಯೆ ನಾಯಕಿಗಂತೂ ಆ ಕಾಲದಿಂದಲೆ ಅವನ ಮೇಲೆ "ಲೌ" ಆಗಿ ಅದನ್ನ ಇಬ್ಬರ ಮನೆಯವರೂ ಶರಂಪರ ವಿರೋಧಿಸಿˌ ಕಡೆಗೆ ವಿರಹ ವೇದನೆಯಲ್ಲಿ ನರಳಿ ಉಪವಾಸವಿದ್ದು ಮನೆಯ ಬೆಡ್ರೂಮಿನಿಂದಲೆ ಮಂಚಕ್ಕೆ ತಲೆ ಚೆಚ್ಚಿಕೊಂಡು ಹಾಡಿˌ ಪರಸ್ಪರರ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಗೊತ್ತಿದ್ದರೂ ಎಂದೂ ಒಂದೆ ಒಂದೂ ಕಾಗದ ಬರೆಯದೆˌ ಅಡ್ರಾಸನ್ನೆ ಅರಿಯದ ನಿಶ್ಪಾಪಿ ಪಾರಿವಾಳ - ಗಿಳಿಗಳನ್ನೆ ಪೋಸ್ಟ್ ಮ್ಯಾನ್ ಆಗಿಸಿಕೊಂಡು ಪರಸ್ಪರರ ನೋವು ನಲಿವನ್ನ ಹಂಚಿಕೊಂಡುˌ ಕೊನೆಗೊಮ್ಮೆ "ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು!" ಅಂತಲೋ ಇಲ್ಲಾ "ಪ್ಯಾರ್ ಕರನೇವಾಲೇ ಕಭೀ ಢರತೇ ನಹೀಂˌ ಜೋ ಢರತೇ ಹೈಂ ವಹಂ ಪ್ಯಾರ್ ಕರತೇ ನಹೀಂ" ಅಂತ ಆಲಾಪಿಸುತ್ತಲೆ ತಮ್ಮ ಅಮರ ಪ್ರೇಮವನ್ನ ಮುರಿಯಲೆತ್ನಿಸಿದ ದುಷ್ಟ ಜಗತ್ತನ್ನ ಎದುರಿಸಿ ನಿಂತು ಒಂದಾಗುವ ಪ್ರೇಮಿಗಳ ಪವಿತ್ರ ಪ್ರೇಮವೆ ಜಯಿಸುವಲ್ಲಿ ಸುಖಾಂತ್ಯ ಅನ್ನುವಂತ ಸಾಲು ಸಾಲು ಸಿನೆಮಾಗಳು ತಯಾರಾಗಿದ್ದವು. ಮದುವೆಯಾದ ನಂತರ ಈ ಪ್ರೇಮದ ಪಾವಿತ್ರ್ಯ ಏನಾಗುತ್ತಿತ್ತೋ! ಅನ್ನೋ ಕುತೂಹಲದ ಸಂಶಯ ಯಾವಾಗಲೂ ಅವನಿಗೆ ಏಳುವಂತೆ ಬಹುತೇಕ ಸಿನೆಮಾಗಳು ಅಂತ್ಯವಾಗುತ್ತಿದ್ದವು. ಅವರಿಬ್ಬರ ಆಳವಾದ ಪ್ರೇಮವನ್ನ ಇನ್ನಷ್ಟು ಗಟ್ಟಿಗೊಳಿಸಲು ಆ ಕಾಲದ ಸಿನೆಮಾ ಸ್ವರ ಸಂಯೋಜಕರು ಅಬ್ಬರದ ಹಾದಿಯನ್ನ ಅರ್ಧದಲ್ಲೆ ಕೈಬಿಟ್ಟವರಂತೆ ಮೆಲುರಾಗದ ಪ್ರೇಮಗೀತೆಗಳನ್ನ ಸಂಯೋಜಿಸಿದ್ದೆ ಸಂಯೋಜಿಸಿದ್ದು.


ಹಿಂದಿಯಲ್ಲಿ ನದೀಂ - ಶ್ರವಣ್ˌ ಆನಂದ್ - ಮಿಲಿಂದ್ˌ ರಾಮ್ - ಲಕ್ಷ್ಮಣ್ˌ ಜತಿನ್ - ಲಲಿತ್ˌ ಸಾಜಿದ್ - ವಾಜಿದ್ˌ ನಿಖಿಲ್ - ವಿನಯ್ˌ ವಿಶಾಲ್ - ಶೇಖರ್ˌ ವಿಶಾಲ್ ಭಾರಧ್ವಜ್ˌ ಅನು ಮಲಿಕ್ˌ ಆದೇಶ್ ಶ್ರೀವಾಸ್ತವˌ ಭೂಷಣ್ ದುವಾˌ ಸಂದೇಶ್ ಶಾಂಡಿಲ್ಯˌ ಆನಂದರಾಜ್ ಆನಂದ್ˌ ಉತ್ತಮ್ ಸಿಂಗ್ˌ ಹಿಮೇಶ ರೇಷಮಿಯಾ ಹೀಗೆ ಒಬ್ಬೊಬ್ಬರಾಗಿ ಹೊಸ ಹೊಸ ಮುಖಗಳು ಬಂದು ಆವರಿಸಿಕೊಳ್ಳತೊಡಗಿದರು.


ಇದು ಹಿಂದಿಗೆ ಮಾತ್ರ ಸೀಮಿತವಾಗುಳಿಯದೆ ವಿವಿಧ ಭಾಷೆಗಳ ಮನೋರಂಜನೋದ್ಯಮಗಳಿಗೂ ಈ ಗಾಳಿ ಸಹಜವಾಗಿ ಬೀಸಿತು. ಕನ್ನಡದಲ್ಲಂತೂ ಆತನಕ ಅಧಿಪತ್ಯ ನಡೆಸುತ್ತಿದ್ದ ಎಂ ರಂಗರಾವ್ˌ ಎಲ್ ವೈದ್ಯನಾಥನ್ˌ ವಿಜಯಭಾಸ್ಕರ್ˌ ಜಿ ಕೆ ವೆಂಕಟೇಶ್ˌ ಉಪೇಂದ್ರಕುಮಾರ್ ಮುಂತಾದವರೆಲ್ಲ ನಿವೃತ್ತಿಯಂಚಿಗೆ ಸರಿದುˌ ಹಂಸಲೇಖˌ ವಿ ಮನೋಹರ್ˌ ಸಾಧು ಕೋಕಿಲˌ ಗುರುಕಿರಣ್ˌ ರಾಜೇಶ್ ರಾಮನಾಥ್ˌ ಎಲ್ ಎನ್ ಶಾಸ್ತ್ರಿˌ ಎಸ್ ಎ ರಾಜಕುಮಾರ್ˌ ರಾಜ್ - ಕೋಟಿ ಮುಂತಾದ ಹೊಸ ಪ್ರತಿಭೆಗಳ ರಾಜ್ಯಭಾರ ನಿಧಾನವಾಗಿ ಆರಂಭವಾಗುತ್ತಿತ್ತು. 


ಹಿಂದಿ ಹಾಗೂ ಕನ್ನಡ ಚಿತ್ರರಂಗದ ಈ ಬದಲಾವಣೆ ಪರ್ವದಲ್ಲಾದ ಮುಖ್ಯ ವ್ಯತ್ಯಾಸವೇನೆಂದರೆˌ ಅಲ್ಲಿ ಅದೂವರೆಗೂ ಅವರ ಮಟ್ಟುಗಳಿಗೆ ಹಾಡುಗಳನ್ನ ಹೊಸೆಯುತ್ತಿದ್ದ ಕವಿಗಳಲ್ಲಿ ರಾಜೇಂದ್ರಕೃಷ್ಣˌ ಶೈಲೇಂದ್ರˌ ಹಸ್ರತ್ ಜೈಪುರಿˌ ರಾಜಾ ಮೆಹ್ದಿ ಅಲಿಖಾನ್ˌ ಅಂಝಾನ್ˌ ಇಂದೀವರ್ ತರದವರ ಕಾಲ ಮುಗಿದು ಆ ಕಾಲದ ಅವಶೇಷಗಳಂತೆ ಉಳಿದಿದ್ದ ಯೋಗೀಶ ಗೌಡˌ ಆನಂದ ಬಕ್ಷಿˌ ಗುಲ್ಝಾರ್ˌ ಮಾಜ್ರೂಹ್ ಸುಲ್ತಾನಪುರಿಯವರಿಗೆ ಪೈಪೋಟಿ ಕೊಡಲು ನವಯುಗದ ಜಾವೇದ್ ಅಖ್ತರ್ˌ ಅನ್ವರ್ ಸಾಗರ್ˌ ರಾಣಿ ಮಲಿಕ್ˌ ಸಮೀರ್ˌ ದೇವ್ ಕೋಹ್ಲಿತರದವರು ತಿಣುಕಾಡುತ್ತಿದ್ದರೆˌ ಇತ್ತ ಇಲ್ಲಿ ಕನ್ನಡದ ವಿಜಯನಾರಸಿಂಹˌ ಆರ್ ಎನ್ ಜಯಗೋಪಾಲ್ˌ ಹುಣಸೂರು ಕೃಷ್ಣಮೂರ್ತಿˌ ಶ್ಯಾಮಸುಂದರ ಕುಲಕರ್ಣಿˌ ಚಿ ಉದಯಶಂಕರˌ ದೊಡ್ಡರಂಗೇ ಗೌಡರಂತಹ ಕವಿವರ್ಯರ ಜಾಗಕ್ಕೆ ಹಂಸಲೇಖˌ ವಿ ಮನೋಹರ್ˌ ಉಪೇಂದ್ರˌ ಪಾಟೀಲ್ˌ ಕೆ ಕಲ್ಯಾಣ್ˌ ಎಸ್ ನಾರಾಯಣ್ ಹಾಗೂ ವಿ ನಾಗೇಂದ್ರಪ್ರಸಾದರಂತಹ ನವಯುಗದ ಕವಿವರ್ಯರು ತಮ್ಮ ತಮ್ಮ ಟವಲು ಹಾಸಿ ಸ್ಥಾನ ಗಟ್ಟಿ ಮಾಡಿಕೊಂಡಾಗಿತ್ತು.


ಸಹಜವಾಗಿ ಅದೂವರೆಗೆ "ಇಂಕ್ವಿಲಾಬ್" "ಕೂಲಿ" "ನ್ಯಾಯವೆ ದೇವರು" "ನ್ಯಾಯಕ್ಕಾಗಿ ನಾನು" "ನ್ಯಾಯ ಎಲ್ಲಿದೆ?" "ಆಟೋ ರಾಜಾ" "ಅಂತ" "ಕಾರ್ಮಿಕ ಕಳ್ಳನಲ್ಲ" ಅನ್ನುತ್ತಿದ್ದ ಬಂಡಾಯ ಹೂಡಿದ್ದ ನಾಯಕರೆಲ್ಲಾ ಇದ್ದಕ್ಕಿದ್ದಂತೆ "ಲವ್" "ಮೈನೇ ಪ್ಯಾರ್ ಕಿಆ" "ಖಯಾಮತ್ ಸೇ ಖಯಾಮತ್" "ಪ್ರೇಮಲೋಕ" "ರಾಮಾಚಾರಿ" "ಮಿಡಿದ ಶೃತಿ" "ಕೃಷ್ಣ ನೀ ಕುಣಿದಾಗ" "ಗೌರಿ ಗಣೇಶ" "ಗಣೇಶನ ಮದುವೆ" "ಹಾಲುಂಡ ತವರು" "ಮುತ್ತಿನ ಹಾರ" "ಸ್ವಾತಿ" "ಶೃತಿ" "ಜೀವನದಿ" "ಕದನ" "ಮೈಸೂರು ಜಾಣ" "ಕರುಳಿನ ಕೂಗು" "ಜೈ ಕರ್ನಾಟಕ" ರೇಂಜಿಗೆ ಏಕಾಏಕಿ ಬದಲಾದ ಕಾರಣ ಅವರ ಅನುಕೂಲಕ್ಕೆ ತಕ್ಕಂತ ಯುಗಳಗೀತೆಗಳನ್ನೆ ರಚಿಸಿ ಈಗವರನ್ನ ಫಾರೆನನಿನಲ್ಲಿ ಫುಟಪಾತಿನ ಮೇಲೆ ಕುಣಿಯವ ಕನಸಿನಲ್ಲಷ್ಟೆ ಅಲ್ಲದೆ ನನಸಿನಲ್ಲೂ ಕುಣಿಸಬೇಕಾದ ಅನಿವಾರ್ಯತೆ ಹೊಸಯುಗದ ಸ್ವರ ಸಂಯೋಜಕರಿಗೂ ಅನಿವಾರ್ಯವಾಯಿತು.


ಅಂತಹ ಪರ್ವಕಾಲದಲ್ಲಿ ಅವನ ಕಿವಿಗೆ ಬಿದ್ದದ್ದೆ ಬೆಂಗಳೂರಿನಿಂದ ಮಾವ ತಂದಿದ್ದ "ಸಾಗರ ಸಂಗಮಂ" "ಸ್ವಾತಿ ಮುತ್ಯಂ" ಹಾಗೂ "ಶಂಕರಾಭರಣಂ"ಗೀತೆಗಳು. ಸಂಗೀತ ಅಂದರೆ ಹೀಗೆಯೂ ಇರಬಹುದು ಅನ್ನುವ ಅನುಭೂತಿ ಮೊದಲಬಾರಿ ಆಯಿತು.


( ಇನ್ನೂ ಇದೆ.)


https://youtu.be/s1CyP6EvQ3s

No comments: