31 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೨.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೨.👊


ಆಶ್ರಮದ ಕಛೇರಿಯಲ್ಲಿ ನಾಲ್ಕು ತಿಂಗಳ ನಂತರದ ತನ್ನ ಕಾರ್ಯನಿಮಿತ್ತ ಕೇರಳದ ಭೇಟಿಯ ದಿನವನ್ನ ಗುರುತು ಹಾಕಿಕೊಂಡುˌ ಅದರ ಕೊನೆಯಲ್ಲಿ ಇಲ್ಲಿಗೆ ಬಂದು ಮೂರುದಿನ ತಂಗಲು ಕೋಣೆ ಕಾಯ್ದಿರಿಸಿದ. ಯಾವುದೆ ಚಿಂತೆಯಿಲ್ಲದೆ ಸುಸೂತ್ರವಾಗಿ ಕೆಲಸ ಆಯಿತು. ಆಶ್ರಮದ ಆವರಣದಲ್ಲಿ ಕೊಂಚ ಅಡ್ಡಾಡಿ ತನ್ನ ಕೋಣೆಯತ್ತ ಮರಳಿ ಹೊರಟ. ಅಲ್ಲಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರ ಅವನಿಗೆ ನಡೆಯಲಿಕ್ಕಿತ್ತು. ಚಳಿಗಾಲವಾದರೂ ಹಗಲಿನ ಸೂರ್ಯ ಮಾತ್ರ ತುಂಬಾ ಪ್ರಬಲನಾಗಿದ್ದ. ಬಿಸಿಲ ಝ಼ಳ ಕಾಡಿಸುವಂತೆಯೆ ಇತ್ತು. ಬಿಸಿಲಿನ ಧವವನ್ನ ಪ್ರತಿಫಲಿಸಿ ನೇರ ಮುಖಕ್ಕೇನೆ ರಾಚುತ್ತಿದ್ದ ಕರಿಕಪ್ಪು ಡಾಮರಿನ ಹಾದಿಯಲ್ಲಿ ಬಿಸಬಿಸ ಹೆಜ್ಜೆ ಹಾಕುತ್ತಾ ಅವನ ಸವಾರಿ ಹಿಂದಿರುಗಿ ಹೊರಟಿತು.

ಹಗಲ ಉರಿ ಬಿಸಿಲುˌ ಇರುಳ ಕೊರೆವ ಚಳಿ ಒಟ್ಟಿನಲ್ಲಿ ಎರಡು ವಿಪರೀತಗಳ ವಿಪರೀತ ಸಂಗಮದಂತಾಗಿತ್ತು ಈ ಹಂಗಾಮಿನ ಚಳಿಗಾಲ. ಅಭಿವೃದ್ಧಿಯ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ನೈಸರ್ಗಿಕ ಹಸಿರ ಸಿರಿಯನ್ನ ದರೋಡೆಕೋರನಂತೆ ದೋಚಲು ಗರಗಸ ಹಿರಿದಿರುವ ಹಾದಿ ತಪ್ಪಿದ ಮಗನಂತಹ ನೀಚ ಮಾನವ ಕುಲಕ್ಕೆ ಪ್ರಕೃತಿ ಮಾತೆ ಸರಿಯಾಗಿ ಬರೆಯಿಟ್ಟು ಬುದ್ಧಿ ಕಲಿಸಲು ನಿರ್ಧರಿಸಿದಂತಿತ್ತು. ಕೋಣೆಗೆ ಆದಷ್ಟು ಬೇಗ ಮುಟ್ಟಿ ಒಂದರೆ ತಾಸು ಸುಧಾರಿಸಿಕೊಂಡು ಕುಶಾಲನಗರದ ಕಡಲ ತೀರಕ್ಕೆ ಅಡ್ಡಾಡಲು ಹೋಗಿ ಬರಲು ನಿರ್ಧರಿಸಿದ್ದ. ಸಂಜೆಗತ್ತಲ ಹಿನ್ನೆಲೆಯಲ್ಲಿ ಬದಲಾಗುವ ಬಾನಿನ ಬಣ್ಣ ಕಡಲಲ್ಲಿ ಕ್ಷಣಕ್ಕೊಂದು ತರ ಕರಗುವ ಹೊತ್ತನ್ನ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯುವ ಉಮೇದಿನಲ್ಲಿ ಅವನಿದ್ದ. ಮುಂದಿನ ಪ್ರಯಾಣದ ತಾಣ ಕನ್ಯಾಕುಮಾರಿ ಎಂದು ನಿರ್ಧರಿಸಿದ್ದ. 


ಹದಿನೆಂಟು ವರ್ಷಗಳ ಹಿಂದೆ ಮೊದಲ ಸಲ ಅವನು ನೊಂದ ಮನಸ ಹೊತ್ತು ಅಮಾಯಕನಂತೆ ಹೋಗಿದ್ದ ಊರು ಭಾರತದ ದಕ್ಷಿಣ ಭೂಶಿರ ಕನ್ಯಾಕುಮಾರಿ. ಅದಾದ ಮೇಲೆ ಪ್ರತಿ ವರ್ಷವೂ ಅಲ್ಲಿಗೆ ತೆರಳಿ ಕನಿಷ್ಠ ವಾರವಾದರೂ ಅಲ್ಲಿನ ವಿವೇಕಾನಂದಪುರಂನಲ್ಲಿ ಉಳಿದು ಬರುವ ಪದ್ಧತಿಯನ್ನಿಟ್ಟುಕೊಂಡಿದ್ದ. ಆದರೆ ಬದಲಾದ ಕೆಲಸದ ಕಾರಣ ಕಳೆದ ಎಂಟು ವರ್ಷಗಳಲ್ಲಿ ನಿರಂತರ ವಾರ್ಷಿಕ  ಭೇಟಿಗಳು ಅವನಿಂದ ಅಸಾಧ್ಯವಾಗಿˌ ಕೇವಲ ಎರಡು ಸಲ ಮಾತ್ರ ಅದೂ ಮೂರ್ನಾಲ್ಕು ದಿನಗಳ ಮಟ್ಟಿಗೆ ಹೋಗಿದ್ದು ಬರಲು ಸಾಧ್ಯವಾಗಿತ್ತು. ಅದರಿಂದ ಏನೋ ಕಳೆದುಕೊಂಡ ಹಳಹಳಿಕೆಯಲ್ಲಿ ವರ್ಷವೂ ಬಳಲುತ್ತಿದ್ದ. ನಾಲ್ಕು ಸಲ ಇವನೆ ಕೆಲಸದ ಒತ್ತಡದಿಂದ ಅಲ್ಲಿಗೆ ಹೋಗಿ ಬರಲಾರದ ಪರಿಸ್ಥಿತಿಯಲ್ಲಿದ್ದಿದ್ದರೆˌ ಈ ಮಧ್ಯೆ ಕಾಡಿದ್ದ ಕರೋನಾದ ಕೃಪೆಯಿಂದ ಮತ್ತೆರಡು ವರ್ಷ ಹೋಗಲಾಗಿರಲಿಲ್ಲ. ಹೀಗಾಗಿ ಈ ಸಲ ಪೂರ್ವಯೋಜನೆ ಹಾಕಿಕೊಂಡಿರದಿದ್ದರೂ ಹೋಗಿ ಬರಲು ನಿರ್ಧರಿಸಿದ್ದ. ಸಂಜೆ ಕುಶಾಲನಗರದಿಂದ ಮರಳಿ ಬಂದ ನಂತರ ಟಿಕೇಟನ್ನ ಮುಂಗಡ ಕಾಯ್ದಿರಿಸಲು ನಿರ್ಧರಿಸಿದ್ದ. 

ರೈಲ್ವೆ ನಿಲ್ದಾಣದ ರಸ್ತೆಗೆ ಇನ್ನೇನು ತಿರುಗಿಕೊಳ್ಳಬೇಕು ಅನ್ನುವಷ್ಟರಲ್ಲಿ "ಡೂ ಯೂ ನೋ ಇಂಗ್ಲಿಷ್?" ಹಿಂದಿಂದ ಒಂದು ಕ್ಷೀಣ ಧ್ವನಿ ಕೇಳಿದಂತಾಗಿ ತಿರುಗಿ ನೋಡಿದ. ಕಾವಿ ಪಂಚೆಯುಟ್ಟುˌ ಕಾವಿ ಜುಬ್ಬ ಹಾಕಿಕೊಂಡು ತಲೆಗೊಂದು ಕಾವಿ ಕರವಸ್ತ್ರದಂತದೊಂದನ್ನ ಕಟ್ಟಿಕೊಂಡಿದ್ದ ಪೇಲವ ಆಕೃತಿಯೊಂದರಿಂದ ಆ ಧ್ವನಿ ಹೊರಟು ಬಂದಿತ್ತು. ನೀಲಿ ಕಣ್ಣುˌ ತಲೆವಸ್ತ್ರದ ನಡುವಿನಿಂದ ಇಣುಕುತ್ತಿದ್ದ ಬಂಗಾರದ ಬಣ್ಣದ  ಕೂದಲು ಹಾಗೂ ತ್ವಜೆಯ ಬಿಳಿಬಣ್ಣ ಆತನ ವಿದೇಶಿ ಮೂಲವನ್ನ ಸಾರಿ ಹೇಳುತ್ತಿದ್ದವು. 

"ಎಸ್ˌ ವಾಟಿಸ್ ಇಟ್?" ಅಂದು ಇವ ಮಾರುತ್ತರಿಸಿದ. "ಐ ಆಮ್ ಎರ್ರಿಕ್ˌ ಐ ನೀಡ್ ಅ ಹೆಲ್ಪ್ ಪ್ಲೀಸ್!" ಅನ್ನುವ ಉತ್ತರ ಬಂತು. "ಯಾ ಟೆಲ್ ಮಿ." ಅಂದ. "ಬೈದ ವೇ ಐ ಅರೈವ್ಡ್ ಫ್ರಂ ಮುಂಬೈ ಬೈ ಟ್ರೈನ್ˌ ಐ ಯಾಮ್ ಇನ್ ಸರ್ಚ್ ಆಫ್ ಆನ್ ಅಕಾಮಿಡೇಶನ್. ಆಸ್ ಐ ಹ್ಯಾವ್ ನೋ ಮನಿ! ಐ ಶುಡ್ ಫೈಂಡ್ ಎನಿ ಚಾರಿಟೇಬಲ್ ಇನ್ಸ್ಟಿಟ್ಯೂಶನ್. ಇಸ್ ದೇರ್ ಎನಿ?" ಅಂದ ಆ ಬಿಳಿಯ.

"ವಿದೌಟ್ ಮನಿ! ಹೌ ಡು ಯು ಮ್ಯಾನೇಜ್?! ವೇರ್ ಆರ್ ಯು ಫ್ರಂ?" ಅಂದನಿವ. "ಐ ಯಾಮ್ ಫ್ರಂ ಯುಎಸ್ಎ! ಮೈನ್ ಇಸ್ ಎ ಬಿಗ್ ಸ್ಟೋರಿ..." ಅಂತ ಅವ ಅವನ ಹಡಪ ಬಿಚ್ಚಲು ತಯಾರಾದ. ಇವನ ಮನಸಲ್ಲಿ ಬಂದ ಪ್ರಶ್ನೆ ಮಾತ್ರ ಒಂದೆˌ ಅದನ್ನೆ ಪ್ರಶ್ನೆಯನ್ನಾಗಿಸಿ "ಡಿಡ್ ಯು ಎಟ್ ಎನಿ ಥಿಂಗ್?" ಅಂದ. "ನೋ ಸರ್ˌ ಐ ನೀಡ್ ಟು ಈಟ್ ಆಸ್ ಐ ಶುಡ್ ಟೇಕ್ ಅ ಶಾಟ್ ಆಫ್ ಇನ್ಸುಲಿನ್!" ಅಂದನವ. ಇವ ಕೈ ಫೋನಿನಲ್ಲಿ ಸಮಯ ನೋಡಿದ. ಹತ್ತಿರದಲ್ಲಿದ್ದುದು ನಿತ್ಯಾನಂದಾಶ್ರಮ. ಊಟದ ಹೊತ್ತಾಗಿ ತಾಸು ಕಳೆದಿದ್ದರೂ ಅಜ್ಜನ ಮನೆಯಲ್ಲಿ ಹಸಿದ ಹೊಟ್ಟೆಯ ಈ ಅಪರಿಚಿತನಿಗೆ ಅನ್ನ ಸಿಗುವ ಖಚಿತತೆಯಂತೂ ಇವನಿಗಿತ್ತು. 


ಆದರೆˌ ವಸತಿ ವ್ಯವಸ್ಥೆ ಅಲ್ಲಾಗಬಹುದೋ? ಇಲ್ಲವೋ? ಅನ್ನುವ ಬಗ್ಗೆ ಮಾತ್ರ ಸಂದೇಹಗಳಿದ್ದವು. ಅವತ್ತು ಆದಿತ್ಯವಾರವಾಗಿರುವ ಕಾರಣ ಆಶ್ರಮದ ಆ ಉಸ್ತುವರಿ ವಹಿಸಿರುವವರು ಮಧ್ಯಾಹ್ನದ ಮೇಲೆ ರಜೆ ಮಾಡುವ ಸಂಭವವಿತ್ತು. ಆದರೂ ಅವನ ಹಣೆಬರಹ ಪ್ರಯತ್ನಿಸುವ ಅಂದಂದುಕೊಂಡು ಬಿಸಿಲಿನಲ್ಲಿ ತನ್ನ ಕೋಣೆಯ ವಿರುದ್ಧ ದಿಕ್ಕಿನಲ್ಲಿದ್ದ ಹೊಸದುರ್ಗ ಕೋಟೆ ಸಮೀಪದ ನಿತ್ಯಾನಂದಾಶ್ರಮದಷ್ಟು ದೂರ ನಡೆಯುವ ಮನಸಿಲ್ಲದಿದ್ದರೂ ಒಬ್ಬನ ಅಸಹಾಯಕತೆ ಅವನನ್ನು ಅತ್ತ ಹೋಗುವಂತೆ ಪ್ರೇರೇಪಿಸಿತು.


ಎರ್ರಿಕ್ ಇಪ್ಪತ್ತೆರಡು ವರ್ಷ ಪ್ರಾಯದ ಅಮೇರಿಕನ್ ನವ ತರುಣ. ಮೂರು ತಲೆಮಾರುಗಳ ಹಿಂದೆ ಹಿಟ್ಲರನ ಹಾಲೋಕಾಸ್ಟ್ ಕಾಲದಲ್ಲಿ ಯುರೋಪಿನ ಅಸ್ಟ್ರಿಯಾದಿಂದ ಮನೆ ಮಠ ತೊರೆದು ಜೀವ ಉಳಿಸಿಕೊಳ್ಳಲು ಅಮೇರಿಕಾ ವಲಸೆಯನ್ನ ಆಯ್ದುಕೊಂಡಿದ್ದ ಯಹೂದಿ ಕುಟುಂಬದವ. ಅದು ಹೇಗೋ ಹಿಂದೂ ಧರ್ಮದ ಆಕರ್ಷಣೆಗೆ ಸಿಲುಕಿದ್ದ. ಹುಟ್ಟು ಹಿಂದೂವಾಗಿರುವ ಇವನಿಗಿಂತ ದೊಡ್ಡದಾಗಿ ಉತ್ತರ ಭಾರತದ ಸಾಧುಗಳು ಹಚ್ಚಿಕೊಳ್ಳುವ ಹಾಗೆ ಹಣೆಯ ತುಂಬಾ ಹಳದಿ ಪಟ್ಟಿ ಬಳಿದುಕೊಂಡು ಹಣೆಯ ಮಧ್ಯ ಉದ್ದಕ್ಕೆ ಕುಂಕುಮ ಬಳಿದುಕೊಂಡಿದ್ದ! ಆ ಸಣ್ಣಪ್ರಾಯದಲ್ಲೆ ಮಧುಮೇಹಿಯಾಗಿದ್ದ ಎರ್ರಿಕ್ಕನ ತಾಯಿಗೆ ಇವನನ್ನೂ ಸೇರಿ ಮೂರು ಮಕ್ಕಳು. ಇವನ ಹಿರಿಯಕ್ಕ ಕ್ಯಾಥೋಲಿಕ್ ಧರ್ಮದತ್ತ ಆಕರ್ಷಿತಳಾಗಿ ಏಸುವಿನ ಪರಮ ಆರಾಧಕಿಯಾಗಿ ನಮ್ಮಲ್ಲಿ ಹಳ್ಳಿಗಳಲ್ಲಿ ಕೆಲವರಿಗೆ ಹಿರಿ ಮರಿ ಕಿರಿ ಹಾಗೂ ಕಿರಿಕಿರಿ ದೇವರು ಮೈಮೇಲೆ ಬಂದು ಉಳಿದವರನ್ನ ಕುರಿ ಮಾಡುವ ಹಾಗೆˌ ಅವಳಿಗೂ ಆಗಾಗ ಆವೇಶ ಬಂದು ಸಾಕ್ಷಾತ್ ದೇವಪುತ್ರ ಏಸುವೆ ಅವಳೊಳಗೆ ಗಣವಾಗಿ ಇಳಿದು ಬರುತ್ತಿದ್ದನಂತೆ!

ಅವಳ ಆ ದೈವಪಾತ್ರಿ ಅವತಾರದ ನಂತರ ಅವರ ಮನೆಯಲ್ಲಿ ಎಲ್ಲರೂ ಕ್ರೈಸ್ತರಾಗಿ ಮತಾಂತರವಾಗಿ ಶನಿವಾರ ಸಬ್ಬತ್ ಮಾಡುವ ತಮ್ಮ ಧಾರ್ಮಿಕಾಚರಣೆಗೆ ತಿಲಾಂಜಲಿಯಿತ್ತುˌ ಸಂಡೆ ಮಾಸ್ ಮಾಡಲು ಕ್ಯಾಥೋಲಿಕ್ ಇಗರ್ಜಿಯ ಭಾನುವಾರದ ಪ್ರಾರ್ಥನಾ ಸಮಾವೇಶಗಳಿಗೆ ಹೋಗ ತೊಡಗಿದರಂತೆ. "ಬಟ್ ಇಟ್ ನೆವರ್ ಇಂಪ್ರೆಸ್ಡ್ ಮಿˌ ಇಟ್ ಟುಕ್ ಟೂ ಸಂಡೇಸ್ ಆಫ್ಟರ್ ಅ ಬ್ಯಾಪ್ಟಿಸಂ ಆಫ್ ಮೈನ್ˌ ಟು ಡಿಸ್ ಓನ್ ದ್ಯಾಟ್ ರಿಲಿಜ಼ನ್ ಆಫ್ ಕ್ರೈಸ್ಟ್ ಯೂ ನೋ" ಅಂದ ಎರ್ರಿಕ್. ಆಗವನಿಗೆ ಇನ್ನೂ ಹತ್ತು ವರ್ಷವಷ್ಟೆ ಪ್ರಾಯವಾಗಿತ್ತಂತೆ. ಅಷ್ಟು ಸಣ್ಣ ವಯಸ್ಸಿಗೆ ಮತಾಂತರವಾಗೋದುˌ ಮತಾಂತರವಾದ ಎರಡೆ ವಾರಕ್ಕೆ ಹೊಸಧರ್ಮ ಹೇವರಿಕೆ ತರಿಸಿ ಅದರಿಂದ ದೂರಾಗೋದು ಇದೆಲ್ಲ ಸಾಧ್ಯವೆ? ಅಂತನ್ನಿಸಿ ಇವನಿಗೆ ಕೆಟ್ಟ ಕುತೂಹಲ ಹುಟ್ಟಿತುˌ ವಿಕ್ರಮನ ಬೆನ್ನೆರಿದ ಬೇತಾಳನಂತೆ ಹಾದಿಯ ಏಕತಾನತೆ ಕಳೆಯಲು ಇವನು ಎರ್ರಿಕ್ಕನ ವಯಕ್ತಿಕ ಬದುಕನ್ನ ಮತ್ತಷ್ಟು ಕೆದಕಿದ.

ಶಾಲೆ ಕಲಿಯುವಲ್ಲಿ ತುಂಬಾ ಹಿಂದುಳಿದ ವಿದ್ಯಾರ್ಥಿ ಅನ್ನುವ ಹಣೆಪಟ್ಟಿಯಿದ್ದ ಎರ್ರಿಕ್ ಗಣಿತದಲ್ಲಿ ಮಾತ್ರ ಆಸಕ್ತನಾಗಿರುತ್ತಿದ್ದನಂತೆ. ಗಣಿತ ಅರ್ಥವಾಗುವಷ್ಟು ಸುಲಭವಾಗಿ ಶಾಲೆಯಲ್ಲಿ ಕಲಿಸುವ ಬೇರೆ ಯಾವೊಂದು ವಿಷಯಗಳೂ ಸಹ  ಸರಿಯಾಗಿ ತಲೆಗೆ ಹತ್ತದೆ ಅನುತ್ತಿರ್ಣನಾಗುತ್ತಿದ್ದನಂತೆ.


( ಇನ್ನೂ ಇದೆ.)


https://youtu.be/qc8ewM4egz8

No comments: