23 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೨.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೨.👊

ಮಲಯಾಳಿಗಳು ತಮ್ಮ ನಾಡಿನಾದ್ಯಂತ ನಿರ್ಮಿಸಿರುವ ಇಂತಹ ವಿಷ್ಣು ದೇವಸ್ಥಾನಗಳ ಮೂಲ ಬಿಂಬವನ್ನ ಕಡುಶರ್ಕರ ಪಾಕದಲ್ಲಿ ಕೆಲವು ಗಿಡಮೂಲಿಕೆಗಳನ್ನ ಬಳಸಿ ನಿರ್ಮಿಸುತ್ತಾರೆ. ಹೀಗಾಗಿ ಆರಾಧನೆಯ ಮೂಲಬಿಂಬಕ್ಕೆ ಅಭಿಷೇಕ ಮಾಡಲು ಅವಕಾಶವಿರೋದಿಲ್ಲ. ಕೇವಲ ಆಯ್ದ ಕೆಲವು ಹೂಗಳಿಂದ ಅಲಂಕಾರವನ್ನು ಮಾತ್ರ ಈ ಮೂಲಬಿಂಬಗಳಿಗೆ ಮಾಡುತ್ತಾರೆ. ಆ ಹೂವುಗಳ ನೈರ್ಮಾಲ್ಯವನ್ನೂ ಸಹ ನವಿಲುಗರಿಗಳ ಕುಂಚದಲ್ಲಿ ಮೃದುವಾಗಿ ಸರಿಸಿ ತೆಗೆಯಲಾಗುತ್ತದೆ. ಅರ್ಚನೆ ಅಭಿಷೇಕ ಹಾಗೂ ನೈವೇದ್ಯಕ್ಕೆ ಅದೆ ದೇವರ ಪ್ರತ್ಯೇಕ ಸ್ವರ್ಣಬಿಂಬವೊಂದನ್ನೂˌ ಉತ್ಸವ ಮೂರ್ತಿಯಾಗಿ ಮತ್ತೊಂದು ಬೆಳ್ಳಿಬಿಂಬವನ್ನೂ ಇಟ್ಟುಕೊಂಡಿರೋದು ಅಲ್ಲಿನ ದೇವಸ್ಥಾನಗಳ ಕ್ರಮ. 


ಕಡುಶರ್ಕರಪಾಕದೊಂದಿಗೆ ಮೂಲಿಕೆಗಳನ್ನ ಬಳಸಿಯೆ ನಿರ್ಮಿಸಲಾಗಿರುವ ತಿರುವನಂತಪುರದ ಶ್ರೀಅನಂತಪದ್ಮನಾಭಸ್ವಾಮಿಯ ಬಿಂಬದಲ್ಲಿ ನೇಪಾಳದ ಗಂಡಕಿ ನದಿಯಿಂದ ತರಿಸಿರುವ ಹನ್ನೆರಡು ಸಾವಿರದ ಎಂಟು ಸಾಲಿಗ್ರಾಮಗಳನ್ನ ಹುದುಗಿಸಿಡಲಾಗಿದೆ. ಯೋಗನಿದ್ರೆಯಲ್ಲಿ ಮಲಗಿದ ಭಂಗಿಯಲ್ಲಿರುವ ಅದಕ್ಕೂ ಅಭಿಷೇಕ ಇಲ್ಲ. ಕೇವಲ ಪುಷ್ಪಾಲಂಕಾರ ಮಾತ್ರ ಮಾಡಿ ಅದನ್ನ ನವಿಲುಗರಿಯ ಪುಚ್ಛದಿಂದ ಸ್ವಚ್ಛಗೊಳಿಸೋದು ಅಲ್ಲಿನ ನಿತ್ಯದ ಕ್ರಮ. ಅಭಿಷೇಕ ಹಾಗೂ ಆರತಿಗೆ ತನ್ನಿಬ್ಬರು ಮಡದಿಯರ ಜೊತೆಗೆ ನಿಂತಿರುವ ವಿಷ್ಣುವಿನ ಸ್ವರ್ಣಪುತ್ಥಳಿ ಅಲ್ಲಿದೆ. ಉತ್ಸವಕ್ಕಾಗಿ ಮಾತ್ರ ಕೂತ ಭಂಗಿಯಲ್ಲಿ ಒಂದು ಬೆಳ್ಳಿಯ ಅನಂತಪದ್ಮನಾಭನನ್ನ ಮಾಡಿಸಿಟ್ಟಿದ್ದಾರೆ. ತಮ್ಮ ಪೂರ್ವಜ ಮಹಾಬಲಿಯನ್ನೆ ದಮನಿಸಿದ ಸುರ ಕುಲದ ಮಹಾವಿಷ್ಣು ಇಂದು ಕೇರಳದ ಮಲಯಾಳಿಗಳ ಕುಲದೈವವಾಗಿರುವುದು ವ್ಯಂಗ್ಯ ವಾಸ್ತವ.


*****


ಇಂತಿಪ್ಪ ದ್ವಂದ್ವದಲ್ಲೆ ಉಳಿದು ಬೆಳೆದಿರುವ ಕೇರಳದ ಸಮಾಜದಲ್ಲಿ ಪ್ರಮುಖವಾಗಿ ಅವನ ಮನ ಸೆಳೆದ ಎರಡಂಶಗಳೆಂದರೆ ಮಲಯಾಳಿಗಳ ಅಕ್ಷರ ಪ್ರೀತಿ ಹಾಗೂ ಅವರಲ್ಲಿನ ಲಿಂಗಾನುಪಾತ. ಪ್ರತಿಯೊಬ್ಬರು ಅಕ್ಷರಸ್ಥರಾಗಬೇಕು ಅನ್ನುವ ಅಲ್ಲಿನವರ ಆಶಯ ಇತ್ತೀಚಿನ ಆಳುವವರ ಕಾರ್ಯತತ್ಪರತೆಯಿಂದ ಸಾಧ್ಯವಾಗಿದ್ದರೂ ಕೂಡˌ ಅದಕ್ಕೆ ಒತ್ತಾಸೆಯನ್ನ ರಾಜಾಳ್ವಿಕೆಯ ಕಾಲದಿಂದಲೂ ಆಳರಸರು ನಿಯತ್ತಾಗಿ ಕೊಡುತ್ತಾ ಬಂದಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಟ್ಟ ಸ್ವಾತಂತ್ರ್ಯಪೂರ್ವ ಭಾರತದ ಕೆಲವೆ ಕೆಲವು ರಾಜ್ಯಗಳಲ್ಲಿ ತಿರುವಾಂಕೂರು-ಕೊಚ್ಚಿನ್ ಜಂಟಿ ಸಂಸ್ಥಾನವೂ ಸಹ ಒಂದು. ಅದೆ ಮೇಲ್ಪಂಕ್ತಿಯನ್ನ ಅನುಸರಿಸಿರುವ ಪ್ರಜಾಪ್ರಭುತ್ವಕಾಲದ ಸ್ವತಂತ್ರ್ಯೋತ್ತರ ಜನಪ್ರತಿನಿಧಿಗಳು ಶಿಕ್ಷಣ ಅದು ಪ್ರಾಥಮಿಕವೆ ಇರಲಿ ಅಥವಾ ಸ್ನಾತಕೋತ್ತರವೆ ಆಗಿರಲಿ ಅದರ ಗುಣಮಟ್ಟ ಕಾಯ್ದುಕೊಳ್ಳಲು ಪರಿಶ್ರಮಿಸಿದ್ದಾರೆ.

ಇನ್ನು ಅಲ್ಲಿನ ಲಿಂಗಾನುಪಾತ. ಇಡಿ ದೇಶದಲ್ಲೆ ಈ ಮಲಯಾಳಿಗಳನ್ನ ಬಿಟ್ಟರೆ ಈಶಾನ್ಯ ರಾಜ್ಯಗಳ ಗುಡ್ಡಗಾಡಿನ ಬುಡಕಟ್ಟಿನವರಲ್ಲಿ ಮಾತ್ರ ಸರಾಸರಿ ಅನುಪಾತದಲ್ಲಿ ಹುಡುಗಿಯರ ಸಂಖ್ಯೆ ಹುಡುಗರಿಗಿಂತ ಹೆಚ್ಚಿದೆ. ಸಂಪೂರ್ಣ ಸಾಕ್ಷರ ರಾಜ್ಯವಾಗಿರುವ ಕೇರಳದಲ್ಲಿ ಇಂದು ಪ್ರತಿ ಸಾವಿರ ಪುರುಷರಿಗೆ ಸಾವಿರದ ನೂರು ಚಿಲ್ಲರೆ ಮಹಿಳೆಯರಿದ್ದಾರೆ! ಇದಕ್ಕೆ ಬಹುಶಃ ಅವರಲ್ಲಿ ಮತಾತೀತವಾಗಿ ಬಹುಪಾಲು ಮಲಯಾಳಿಗಳು ಅನುಸರಿಸುವ ಕೌಟುಂಬಿಕ ಪದ್ಧತಿಯೂ ಸಹ ಕಾರಣವಾಗಿರಬಹುದು.

ತುಳುನಾಡಿನಂತೆ ಅಳಿಯ ಕಟ್ಟು ಪದ್ಧತಿಯನ್ನ ಕೌಟುಂಬಿಕ ವ್ಯವಹಾರಗಳಿಗೆ ಬಳಸುವ ಪದ್ಧತಿ ಕೇರಳದಲ್ಲೂ ಇದೆ. "ಮರಿಮಕ್ಕತ್ತಾಯ" ಅಂತ ಅಲ್ಲಿನವರು ಕರೆಯುವ ಈ ಪದ್ಧತಿಯಲ್ಲಿ ಮನೆಯ ಯಜಮಾನಿಕೆ ಹಿರಿಯ ಹೆಣ್ಣು ಕೂಸಿನದ್ದೆ ಹೊರತು ಅವಳ ಗಂಡನದ್ದಲ್ಲ. ಅವಳ ಹಾಗೂ ಅವಳ ಮಕ್ಕಳ ದೇಖಾರೇಕಿಯ ಜವಬ್ದಾರಿಯೂ ಸಹ ಅವಳ ಗಂಡನಿಗಿರೋದಿಲ್ಲ. ಅವಳ ಹಿರಿಯ ಸಹೋದರನೆ ಮನೆಯ ಹೊರಗಿನ ವ್ಯವಹಾರಗಳನ್ನ ಅವಳ ಹೆಸರಲ್ಲಿ ನಡೆಸುತ್ತಾನೆ. ಅವ ಸತ್ತರೆ ಅವನ ಶವ ಸಂಸ್ಕಾರ ನಡೆಸುವ ಹಕ್ಕು ಸಹ ಅವನ ಮಕ್ಕಳಿಗಿಲ್ಲ. ಅದು ಅವನ ಲಾಲನೆ ಪಾಲನೆಯಲ್ಲಿ ಬೆಳೆಯುವ ಸಹೋದರಳಿಯರ ಬಾಧ್ಯತೆ.


*****


"ತುಮ್ಹಾರೇ ಸಹಾರೇ
ನಿಕಲ್ ಥೋ ಪಡೇ ಹೈಂ.
ಹೈಂ ಮಂಜಿ಼ಲ್ ಕಹಾಂ? 
ಯಹಂ ನಾ ಜಾನೇˌ/
ಜೋ ತುಮ್ ಸಾಥ್ ದೋಗೇ
ಥೋ ಆಏಗೀ ಏಕ್ ದಿನ್ˌ
ಮಂಜಿ಼ಲ್ ಗಲೇ ಸೇ ಲಗಾನೇ!
ಇತನಾ ಥೋ ದಿಲ್ ಕೋ ಯಕೀನ್ ಹೈಂ.
ಹಮೇ ತುಮ್ ಧಗಾ ಥೋ ನಾ ದೋಗೇˌ
ಅಗರ್ ಹಮ್ ಯಹಂ ಪೂಛೇ ಕೇ ದಿಲ್ ಮೈ.
ಬಸಾಕೇ ಭುಲಾ ಥೋ ನಾ ದೋಗೇ!//"


ಎಡೆ ಸಿಕ್ಕರೆ ಸಾಕು ಒಳಗೆ ನುಗ್ಗಿ ಬರಲು ಹವಣಿಸುವ ಬೆಳಕ ಪ್ರವಾಹಕ್ಕೆ ಕಿಟಕಿ ಪರದೆಯ ಬಾಂಧನ್ನ ಬಿಗಿದು ನಡುವೇಗದಲ್ಲಿ ಪಂಖವನ್ನ ಚಾಲನೆಯಲ್ಲಿಟ್ಟು ಹಾಗೆಯೆ ಹಾಡನ್ನ ಕೇಳುತ್ತಲೆ ಅರೆಬತ್ತಲೆಯಾಗಿ ಹಾಸಿಗೆಯ ಮೇಲೆ ಅಡ್ಡಾದ.


ಕಣ್ಣು ಮುಚ್ಚಿ ನಿದ್ರೆಯನ್ನ ಆಹ್ವಾನಿಸಿದರೂ ಅದೇಕೋ ಅದರ ಅಪ್ಪುಗೆ ಅಷ್ಟು ಸುಲಭದಲ್ಲಿ ಸಿಗಲಿಲ್ಲ. ಮೊದಲಿನಿಂದಲೂ ಸಂಬಂಧಗಳನ್ನ ಬೆಳೆಸುವ ಹಾಗೂ ಮುರಿದುಕೊಳ್ಳುವ ವಿಚಾರದಲ್ಲಿ ಕಡು ನಿಷ್ಠುರನಾಗಿದ್ದ ಅವ. ಸುಲಭವಾಗಿ ಯಾರನ್ನೂ ಇಷ್ಟಪಡಲೊಲ್ಲ. ಆದರೆ ಯಾರನ್ನಾದರೂ ಪ್ರೀತಿಸಲಾರಂಭಿಸಿದರೆ ಬಯಸಿದರೂ ಅವರನ್ನ ಬಿಡಲೊಲ್ಲ. ಪ್ರೀತಿ ಹಾಗೂ ಅವಜ್ಞೆ ಎರಡೂ ವಿಪರೀತದ ಹಂತಕ್ಕೆ ಒಯ್ಯುವ ಅವನ ಮನಸ್ಥಿತಿ ಹಾಗೆ ಬೆಳೆದು ಬರಲು ಬಾಲ್ಯದಿಂದ ಅವನನ್ನ ಕಾಡಿ ಕೆಂಗೆಡಿಸಿ ಹಿಪ್ಪೆ ಮಾಡಿ ಹಾಕಿದ್ದ ಒಂಟಿತನವೂ ಪ್ರಮುಖ ಕಾರಣವಾಗಿದ್ದಿರಲಿಕ್ಕೆ ಸಾಕು.


ಈ ಒಂದು ವಿಷಯದಲ್ಲಿ ಅವನು ಒಮ್ಮೆ ಒಲಿದು ಬಂದಾದ ಮೇಲೆ ಕೇವಲ ತನ್ನ ಸಂಗಾತಿಯನ್ನ ಮಾತ್ರ ಬಲವಾಗಿ ನಂಬಿ ಗೂಡನ್ನ ತಾನೆ ಪೂರ್ತಿಯಾಗಿ ಮುಚ್ಚಿ ಒಲವಿನ ತುತ್ತಿಗೆ ಕೇವಲ ಕೊಕ್ಕನಷ್ಟೆ ಹೊರ ಬಿಟ್ಟುಕೊಂಡು ನಾಳೆಯ ನಿರೀಕ್ಷೆಗಳ ತತ್ತಿಗಳಿಗೆ ಕಾವು ಕೊಡಲು ಕೂತ ಮಂಗಟ್ಟೆ ಹಕ್ಕಿಯ ಹಾಗೆ. ಒಂದೊಮ್ಮೆ ಅವನ ಸಂಗಾತಿಗೆ ಇನ್ಯಾರದ್ದೋ ಆಕರ್ಷಣೆಯ ಗುಂಡು ತಗುಲಿ ಅದವನನ್ನ ಮರೆತು ತ್ಯಜಿಸಿ ಹೋದರೆˌ ಸಂಗಾತಿಯ ಬರುವಿಗಾಗಿ ಸದಾ ಕನವರಿಸುತ್ತಾ ಉಪವಾಸ ಉಳಿದು ಹಾಗೆಯೆ ಆ ಒಲವಿನ ಗೂಡೊಳಗೆ ಬಂಧಿಯಾಗಿಯೆ ಸತ್ತಾನೆಯೆ ಹೊರತುˌ ಮರೆ ಸರಿಸಿ ಎಂದೂ ಹೊರಬರಲರಿಯ. ಭಾವನೆಯ ಬೇಲಿ ದಟ್ಟವಾಗಿದ್ದರಷ್ಟೆ ಅವನಿಗೆ ಉತ್ಕಟವಾಗಿ ಸಂಬಂಧದ ನೀಲಿ ಹೂವನ್ನ ಅದರ ಮೇಲೆ ಹಬ್ಬಿಸುತ್ತಾ ಬದುಕುಳಿಯಲು ಸಾಧ್ಯ. ಇದವನ ದೌರ್ಬಲ್ಯ.

"ಜ಼ಮೀನ್ ಸೇ ಹಮೇಂ
ಆಸಮಾನ್ ಪರ್.
ಬಿಠಾ ಕೇ ಗಿರಾ ಥೋ ನಾ ದೋಗೇ?ˌ/
ಅಗರ್ ಹಮ್ ಯಹಂ ಪೂಛೇ 
ಕೇ ದಿಲ್ ಮೈ.
ಬಸಾ ಕೇ ಭುಲಾ ಥೋ ನಾ ದೋಗೇ?//

ಹಾಡು ಮುಗಿದರೂ ಪ್ರಯತ್ನ ಮೀರಿ ಕಣ್ರೆಪ್ಪೆ ತೋಯಿಸಿ ನಾಡಿಯತ್ತ ಹರಿದ ಕಂಬನಿ ನಿಂತಿರಲಿಲ್ಲ. ಹಾಗೆಯೆ ದಣಿದ ಮನಸಿಗೆ ನಿದ್ರೆಯ ಅಮಲು ಹತ್ತಿತು. ದೇಹದ ಸುಸ್ತು ಕಳೆಯಲವನಿಗೊಂದು ನೆಮ್ಮದಿಯ ನಿದಿರೆಯ ಅವಶ್ಯಕತೆಯಿತ್ತು.

ಎಚ್ಚರವಾದಾಗ ಬೆಳಗ್ಯೆ ಪೂರ್ವದ ಕಿಡಕಿಯಿಂದ ಧುಮುಕಲು ಕಾತರಿಸುತ್ತಿದ್ದ ಬಿಸಿಲ ಧಗೆ ಪಶ್ಚಿಮದ ಕಿಟಕಿಯ ಪರದೆಯನ್ನ ಉರಿಸುತ್ತಿದ್ದುದು ಗೋಚರಿಸಿತು. ಘಂಟೆ ಮೂರಾದದ್ದನ್ನ ಕೈಫೋನಿನ ಪರದೆ ಖಾತ್ರಿ ಪಡಿಸಿತು. ಆಲಸ್ಯದಿಂದ ಮಲಗಿದಲ್ಲೆ ಮೈಯಲ್ಲಿದ್ದ ಕೀಲುಗಳಿಂದೆಲ್ಲಾ ಸದ್ದೇಳುವಂತೆ ಸಶಬ್ದವಾಗಿ ಮೈಮುರಿದ. ತಾನಿಂದು ಕೋಣೆಯಲ್ಲೆ ಮಲಗಿರುವುದು ಗೊತ್ತಿರುವ ನಾಯರ್ ಖಂಡಿತವಾಗಿ ತನ್ನ ಪಾಲಿನ ಊಟ ತೆಗೆದಿಟ್ಟು ಕಾದಿರುತ್ತಾರೆ ಅನ್ನುವುದು ನೆನಪಾಗಿ ದೊಡ್ಡದಾಗಿ ಬಾಯಿ ಹರಿದು ಹೋಗುವಂತೆ ಆಕಳಿಸುತ್ತಾ ಮೇಲೆದ್ದು ಸ್ನಾನದ ಕೋಣೆಗೆ ತೆರಳಿ ಮುಖಕ್ಕೆ ನೀರೆರಚಿಕೊಂಡು ಜಿಡ್ಡುಗಟ್ಟಿದ್ದ ಗಲ್ಲ ಹಣೆ ಮೂಗು ಕೆನ್ನೆ ತಿಕ್ಕಿ ತೊಳೆದುಕೊಂಡ. ಹೊರಗಿನ ಧಗೆ ಅಧಿಕವಾಗಿದ್ದಿದ್ದಕ್ಕೋ ಏನೋ ತಣ್ಣೀರ ಮುಖ ಮಾರ್ಜನ ಹಿತಕಾರಿ ಅನಿಸಿತು.

ಬಾಗಿಲನ್ನ ತೆರೆದ ಕೂಡಲೆ ಹೊರಗಿನ ಬಿಸಿಗಾಳಿ ಮುಖಕ್ಕೆ ರಪ್ಪನೆ ರಾಚಿತು. ಬಿಸಿಲಿನ್ನೂ ಬಾಡಿರಲಿಲ್ಲ. ಮೆಟ್ಟಿಲಿಳಿದು ಹೋದವನಿಗೆ ನಿರೀಕ್ಷೆಯಂತೆ ನಾಯರನ ಅಕ್ಕರೆಯ ಭೋಜನ ಕಾದಿತ್ತು. 

( ಇನ್ನೂ ಇದೆ.)



https://youtu.be/245b6zE7IIc

No comments: