15 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೨.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೨.👊


ಎಲ್ಲರೂ ಅರ್ಥೈಸುವಂತೆ ಭಾರತಕ್ಕೆ ವಿದೇಶಿ ವ್ಯಾಪಾರಿ ವರ್ಗದ ಆಗಮನ ವಸಾಹಾತುಶಾಹಿ ಕಾಲದಿಂದಷ್ಟೆ ಆರಂಭವಾದದ್ದೇನಲ್ಲ. ಅದಕ್ಕೂ ಬಹಳ ಹಿಂದಿನಿಂದಲೆ ಕೇರಳ - ಸೌರಾಷ್ಟ್ರ - ಗೋಮಾಂತಕ - ತುಳುನಾಡು - ಪಾಂಡ್ಯರಾಜ್ಯ ವಿಫುಲ ವ್ಯಾಪಾರಿ ಸಂಬಂಧಗಳನ್ನ ವಿದೇಶಿ ವ್ಯಾಪಾರಿಗಳೊಡನೆ ಹಾಗೂ ಅವರ ದಳ್ಳಾಳಿಗಳೊಡನೆ ಹೊಂದಿತ್ತು. ಇದು ಇಸ್ಲಾಂ ಅನ್ನುವ ಧರ್ಮ ಹುಟ್ಟುವ ಮುಂಚಿನಿಂದಲೂˌ ಅಷ್ಟೆ ಏಕೆ? ಕ್ರೈಸ್ತ ಧರ್ಮ ಆರಂಭವಾಗಿ ಸಂಪೂರ್ಣ ಯುರೋಪನ್ನ ರೋಮನ್ ಸಾಮ್ರಾಜ್ಯದ ರಾಜಧರ್ಮವಾದ ನಂತರ ಇಂದಿನ ಇಟಲಿಯಿಂದ ಆರಂಭಿಸಿ ಸಂಪೂರ್ಣ ಯುರೋಪನ್ನೆ ಅದು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕಿಂತಲೂ ಮೊದಲೆ ಆಗಿತ್ತು. 

ಕೇವಲ ಆಗಿನ ವ್ಯವಸ್ಥೆಯಲ್ಲಿ ಧಾರ್ಮಿಕ ದೃಷ್ಟಿಕೋನವಿಟ್ಟುಕೊಂಡು ನೋಡುವುದಾದರೆ ಬಹುತೇಕ ಕ್ಯಾಪ್ಟಿಕ್ ಕ್ರೈಸ್ತರೋˌ ಮೂರ್ತಿ ಪೂಜಕ ಬುಡಕಟ್ಟಿನವರೋ ಅಥವಾ ಯಹೂದ್ಯರೋ ಆಗಿದ್ದ ಇಂದಿನ ಇಸ್ಲಾಮಿಕ್ ಮಧ್ಯಪ್ರಾಚ್ಯದ ಅರಬಿಯನ್ ದಳ್ಳಾಳಿಗಳು ಇಲ್ಲಿಂದ ಸರಕು ಸರಂಜಾಮುಗಳನ್ನ ಖರೀದಿಸಿ ಕೊಂಡು ಹೋಗಿ ಅಂದು ಕಾನ್ಸ್ಟೆಂಟಿನೋಪೋಲ್ ಎಂದೆ ಬೆಜಂಟೈನ್ ಗ್ರೀಕ್ ಹಾಗೂ ರೋಮನ್ನರಿಂದ ಕರೆಯಲ್ಪಡುತ್ತಿದ್ದ ಇಂದಿನ ಇಸ್ತಾಂಬುಲ್ಲಿನಲ್ಲಿ ಮುಂದಿನ ಗ್ರಾಹಕರಿಗೆ ಅದನ್ನ ಮುಟ್ಟಿಸುವ ಕಕೇಶಿಯನ್ ಯುರೋಪಿಯನ್ ವ್ಯಾಪಾರಿಗಳಿಗೆ ಅದನ್ನ ವಿಕ್ರಯಿಸುತ್ತಿದ್ದರು. ಯಾವುದೆ ಉತ್ಖನನಗಳು ಅವನ ಅಸ್ತಿತ್ವವನ್ನು ಸಾಬೀತು ಪಡಿಸಿರದಿದ್ದರೂˌ ಮುಸಲ್ಮಾನರು ಇದ್ದಾನೆಂದೆ ಶ್ರದ್ಧೆಯಿಟ್ಟು ನಂಬುವ ಸ್ವತಃ ಇಸ್ಲಾಮಿನ ಸ್ವಘೋಷಿತ ಪ್ರವಾದಿ ಮಹಮದ್ ಹುಟ್ಟು ಯಹೂದ್ಯ ಹಾಗೂ ಮೂರ್ತಿಪೂಜಕ ಬುಡಕಟ್ಟು ಆಚರಣೆ ಎರಡೂ ಅನುಸರಿಸುತ್ತಿದ್ದ ಹಾಶಿಂ ಕುಲದ ಖುರೈಷಿ ಬುಡಕಟ್ಟಿನಲ್ಲಿ ಜನಿಸಿದ್ದ. ಅವನನ್ನ ಮೆಚ್ಚಿ ಮದುವೆಯಾಗಿದ್ದ ಪ್ರಭಾವಿ ವ್ಯಾಪಾರಿ ಮಹಿಳೆ ಖದೀಜಾ ಕ್ಯಾಪ್ಟ್ ಕ್ರೈಸ್ತಧರ್ಮೀಯಳಾಗಿದ್ದಳು. ಸುಮಾರು ಶತಮಾನಗಳವರೆಗೆ ಈ ವ್ಯಾಪಾರಿ ವ್ಯವಸ್ಥೆ ನಿರಾತಂಕವಾಗಿ ನಡೆದಿತ್ತು.

ಆದರೆˌ ಅರಬ್ಬರ ಹಾಗೂ ಯುರೋಪಿಯನ್ನರ ಮಧ್ಯೆ ಲಾಭಾಂಶಕ್ಕಾಗಿ ಎದ್ದ ತಕರಾರು ಅನಂತರ ವಿಕೋಪಕ್ಕೆ ಹೋಗಿ ನಾನ? ನೀನ? ಅನ್ನುವ ಮೇಲಾಟ ಮೊದಲಾಗಿˌ ಅದಕ್ಕೆ ಅವಾಗಷ್ಟೆ ಹುಟ್ಟಿ ಬಲಿಯಲಾರಂಭಿಸಿದ್ದ ಇಸ್ಲಾಂ ಧರ್ಮದ ಜೊತೆಗೆ ಕ್ರೈಸ್ತರ ತಿಕ್ಕಾಟ ಧರ್ಮಯುದ್ಧದ ರೂಪದಲ್ಲೂ ಹಿಂಸಾತ್ಮಕವಾಗಿ ಆರಂಭವಾದ ಕಾಲಘಟ್ಟದಲ್ಲಿ ಮೊದಲಿನ ವ್ಯಾಪಾರಿ ಸಮೀಕರಣಗಳೆಲ್ಲ ಏಕಾಏಕಿ ಬದಲಾದವು. ಅರಬ್ಬರು ನೇರ ಮಾರ್ಗವಾಗಿ ಬಿಳಿಯರು ಸಾಂಪ್ರದಾಯಿಕ ಭೂಮಾರ್ಗವನ್ನ ಬಳಸಿಯೆ ಭಾರತಕ್ಕೆ ಹೋಗಿ ವ್ಯಾಪಾರ ಮಾಡದಂತೆ ತಡೆದ ಕಾರಣ ಬಿಳಿಯ ಕ್ರೈಸ್ತರು ಭಾರತಕ್ಕೆ ನೆಲಮಾರ್ಗದಿಂದಲ್ಲದಿದ್ದರೆ ಜಲಮಾರ್ಗವನ್ನ ಅನ್ವೇಷಿಸಿಯಾದರೂ ಸರಿ ಮಧ್ಯವರ್ತಿಗಳ ಹಂಗಿಲ್ಲದೆ ನೇರ ವ್ಯಾಪಾರ ನಡೆಸುವ ಪಣ ತೊಟ್ಟರು. ಈ ಮೂಲಕ ಭಾರತದ ಇತಿಹಾಸ ಶಾಶ್ವತವಾಗಿ ಬದಲಾಗುತ್ತಾ ಹೋಯಿತು. ಇದರಲ್ಲಿ ಕೇರಳ ಸಹ ಪ್ರಮುಖ ಪಾತ್ರವನ್ನ ವಹಿಸಿತು.

ಇಂದು ಕೊಡಂಗಲ್ಲೂರು ಎಂದು ಕರೆಯಲಾಗುವ ತೃಶೂರು ಜಿಲ್ಲೆಯಲ್ಲಿರುವ ತೀರ ಪ್ರದೇಶದಲ್ಲಿರುವ ಅಂದಿನ ಚೇರ ಸಾಮ್ರಾಜ್ಯದ ರಾಜಧಾನಿಯಾಗಿದ್ದ "ಮಚ್ಚೇರಿ ಪಟ್ಟಣ"ದ ರೇವಿನಲ್ಲಿ ವಿವಿಧ ದೇಶಗಳ ವ್ಯಾಪಾರಿ ಹಡಗುಗಳು ಇಸ್ಲಾಮಿಕ್ ಪೂರ್ವ ಕಾಲದ ವಿದೇಶಿ ವಾಣಿಜ್ಯ ವ್ಯವಹಾರ ಉಛ್ರಾಯದಲ್ಲಿದ್ದ ಕಾಲದಲ್ಲಿ ಲಂಗರು ಹಾಕುತ್ತಿದ್ದವು. ಇಲ್ಲಿಗೆ ಅಪರೂಪವಾದ ಚೀನಾದ ರೇಷಿಮೆˌ ಮದ್ಯˌ ಅಫೀಮುˌ ಕುದುರೆˌ ಕತ್ತೆˌ ಹೊಗೆಸೊಪ್ಪುˌ ಒಣಹಣ್ಣುಗಳನ್ನ ಇಲ್ಲಿಗೂˌ ಸಾಂಬಾರˌ ಮೋಪುˌ ದಂತˌ ಹತ್ತಿಬಟ್ಟೆಗಳುˌ ಖಾದ್ಯತೈಲˌ ರತ್ನˌ ಬಂಗಾರˌ ಬೆಳ್ಳಿˌ ಕೆತ್ತಿದ ವಜ್ರˌ ತಾಮ್ರˌ ಕಬ್ಬಿಣ ಸಹಿತ ಹಲವು ಲೋಹದ ಸಲಕರಣೆಗಳು ಹಾಗೂ ಅಕ್ಕಿಗಳನ್ನ ಮಧ್ಯವರ್ತಿ ಅರಬರು ಇಲ್ಲಿಂದಲ್ಲಿಗೂ ಸಾಗಿಸಿ ಅಪಾರ ಲಾಭಾಂಶವನ್ನ ಕೊಳ್ಳೆ ಹೊಡೆಯುತ್ತಿದ್ದರು. 

*****

ತುಂಬಿದ ಹಡಗೊಂದು ಇಲ್ಲಿಂದ ಯುರೋಪಿಗೆ ಹೊರಟರೆ ಮಧ್ಯದ ಜಲ ಹಾಗೂ ನೆಲಮಾರ್ಗದ ಸುಂಕದ ಕಟ್ಟೆಗಳಲ್ಲೆಲ್ಲಾ ಕೇವಲ ಸರಕುಗಳಲ್ಲೊಂದಾಗಿದ್ದ ಕಾಳುಮೆಣಸನ್ನೆ ಅಷ್ಟಿಷ್ಟು ಪ್ರಮಾಣದಲ್ಲಿ ಕರವಾಗಿ ಪಾವತಿಸಿ ಮುಂದುವರೆದರೂ ಅಂತಿಮವಾಗಿ ಯುರೋಪಿನ ಮಾರುಕಟ್ಟೆ ತಲುಪಿ ಅಲ್ಲಿನ ಗ್ರಾಹಕರಿಗೆ ಅಳಿದುಳಿದ ಕಾಳುಮೆಣಸಿನ ದಾಸ್ತಾನನ್ನ ಮಾರಿದರೂ ಸಾಕುˌ ಇಲ್ಲಿಂದ ಅಲ್ಲಿ ಹೋಗುವಾಗ ಹತ್ತಾರು ಪಟ್ಟು ಹೆಚ್ಚಿಗೆ ಆಗಿರುತ್ತಿದ್ದ ಅದೊಂದರ ಮೌಲ್ಯದಿಂದಲೆ ಸಕಲ ಸುಂಕದಕಟ್ಟೆಗಳಲ್ಲಾದ ನಷ್ಟವೂ ಕಳೆದು ಲಾಭದ ಹೊಳೆ ಹರಿದು ಬರತ್ತಿದ್ದ ಕಾಲ ಅದಾಗಿದ್ದರಿಂದ ಸಹಜವಾಗಿ ಭಾರತದ ಈ ದಕ್ಷಿಣ ಭಾಗದ ಕಡಲ ತೀರ ವಿದೇಶಿ ವ್ಯಾಪಾರಿಗಳ ನೆಚ್ಚಿನ ಮಾರುಕಟ್ಟೆಗಳಲ್ಲಿ ಒಂದಾಗಿತ್ತು.


ಹೀಗಾಗಿ ಕೇರಳಕ್ಕೆ ವಿದೇಶಿಯರಾಗಲಿˌ ವಿದೇಶಿಯರಿಗೆ ಕೇರಳವಾಗಲಿ ಯಾವತ್ತಿಗೂ ಪರಸ್ಪರ ಅಪರಿಚಿತವಾಗಿರಲೆ ಇಲ್ಲ. ಅದರ ಪರಿಣಾಮವಾಗಿಯೆ ಯಹೂದ್ಯವಾಗಿರಲಿˌ ಬಹಾಯಿಯಾಗಿರಲಿˌ ಜೊರಾಸ್ಟ್ರಯನ್ ಆಗಿರಲಿˌ ಕ್ರೈಸ್ತವಾಗಿರಲಿ ಇಲ್ಲಾ ಇಸ್ಲಾಮೆ ಆಗಿರಲಿ ಮಧ್ಯಪ್ರಾಚ್ಯದಲ್ಲಿ ಆರಂಭವಾದ ಪ್ರತಿಯೊಂದು ಹೊಸ ಧರ್ಮಗಳ ಮೊತ್ತಮೊದಲ ಮತಾಂತರಿತ ಭಾರತೀಯ ಮಲಯಾಳಿಯೆ ಆಗಿರೋದು ಹಾಗೂ ಅವೆಲ್ಲ ಧರ್ಮದ ಪ್ರಪ್ರಥಮ ಭಾರತೀಯ ನೆಲದಲ್ಲಿ ಆರಂಭವಾದ ಆರಾಧನಾಲಯಗಳು ಕೇರಳದಲ್ಲೆ ಕಣ್ತೆರೆದಿರುವದು ಕೇವಲ ಆಕಸ್ಮಿಕದಿಂದ ಘಟಿಸಿದ ವಿದ್ಯಮಾನವೇನಲ್ಲ. 


ವ್ಯಾಪಾರದ ನಿಮಿತ್ತ ಬಹುಕಾಲ ಭಾರತದಲ್ಲೆ ನೆಲೆಸಬೇಕಾದ ಅನಿವಾರ್ಯತೆ ಇದ್ದ ಅರಬ್ಬರು ಮೊದಮೊದಲು ತಮ್ಮ ತಮ್ಮ ವಯಕ್ತಿಕ ಧಾರ್ಮಿಕ ಅಗತ್ಯಗಳನ್ನ ತಮ್ಮ ತಮ್ಮ ಬಿಡಾರಗಳಲ್ಲೆ ಪೂರೈಸಿಕೊಳ್ಳುತ್ತಿದ್ದರೇನೋ. ಆದರೆ ಬರುಬರುತ್ತಾ ಅಂತಹ ವ್ಯವಹಾರಸ್ಥರ ಭೇಟಿ ಅಧಿಕವಾದಂತೆ - ತಮ್ಮ ಲೈಂಗಿಕ ಅಗತ್ಯಗಳ ಪೂರೈಕೆಗಾಗಿ ಸ್ಥಳಿಯ ಅದರಲ್ಲೂ ಮುಖ್ಯವಾಗಿ ಕೆಳ ಜಾತಿಯ ಹೆಣ್ಣುಗಳನ್ನ ತಮ್ಮ ತತ್ಕಾಲಿಕ ಉಪ ಸಂಸಾರವನ್ನಾಗಿ ಅವರು ಕಟ್ಟಿಕೊಳ್ಳಲು ಆರಂಭಿಸಿದ ಅನಂತರದ ಕಾಲದಲ್ಲಿ ಅವರಿಗೂ ಸ್ಥಳಿಯ ಮಹಿಳೆಯರಿಗೂ ಹುಟ್ಟಿದ ಸಂತಾನಗಳು ತಂದೆಯ ಧರ್ಮದಲ್ಲೆ ಮುಂದುವರೆದು ಆ ಭಾರತಕ್ಕೆ ಪರಧರ್ಮವನಿಸಿದ್ದ ಧಾರ್ಮಿಕ ಅಸ್ಥೆಯನ್ನ ಅವರು ಒಪ್ಪಿಕೊಂಡಾಗ ಅವರಿಗೂ ಸ್ಥಳಿಯವಾಗಿ ತಮ್ಮ ಆರಾಧನಾಲಯಗಳನ್ನ ಕಟ್ಟಿಕೊಳ್ಳುವುದು ಅನಿವಾರ್ಯವಾಯಿತು. ಇದಕ್ಕೆ ಪೂರಕವಾಗಿ ಕಳೆದ ಶತಮಾನದ ಎರಡನೆ ದಶಕದ ಅಂತ್ಯದಲ್ಲಾಗಿದ್ದ ಮಾಪಿಳ್ಳಾ ದಂಗೆ ಅನ್ನುವ ಬರ್ಬರತೆಯೂ ತನ್ನ ಪಾಲಿನ ಕಾಣಿಕೆ ನೀಡಿˌ ಇದ್ದಕ್ಕಿದ್ದಂತೆ ಮಲಬಾರಿನ ಧಾರ್ಮಿಕ ಜನಸಂಖ್ಯೆಯ ಸಮೀಕರಣವೆ ಬದಲಾದಾಗ ಇನ್ನಷ್ಟು ಮಸೀದಿˌ ಚರ್ಚು ಹಾಗೂ ಸಿನಿಗಾಗುಗಳು ಕೇರಳದಾದ್ಯಂತ ಕಣ್ತೆರೆದವು. 


ಅನಂತರ ಸುಮಾರು ಐನೂರಾ ಇಪ್ಪತ್ತೈದು ವರ್ಷಗಳ ಹಿಂದೆ ಪೋರ್ತುಗೀಜ಼ ವಾಸ್ಕೋ-ಡ-ಗಾಮ ಮಲಬಾರು  ತೀರದ ಕೊಯಿಲಾಂಡಿಯಲ್ಲಿರುವ ಕಪ್ಪಡ ಕಡಲ ತೀರಕ್ಕೆ ೧೪೯೮ರಲ್ಲಿ ಬಂದಿಳಿದದ್ದು. ನಾಯರ್ ಆಳ್ವಿಕೆಯಲ್ಲಿದ್ದ ಸ್ಥಳಿಯ ಜ಼ಮೋರಿನ್ ರಾಜವಂಶದ ಜೊತೆ ವ್ಯಾಪಾರಿ ಹಿತಾಸಕ್ತಿ ಸಾಧಿಸಿ ಅವರನ್ನ ಸಾಮೂದರಿಗಳೆಂದು ಕರೆದದ್ದುˌ ಅನಂತರ ಅವರಿಗೇನೆ ವ್ಯವಹಾರದಲ್ಲಿ ತಿರುಮಂತ್ರ ಹಾಕಿದ್ದು. ಪೋರ್ತುಗೀಜ಼ರ ಹೆಜ್ಜೆಗುರುತನ್ನ ಅನುಸರಿಸಿ ಮೊದಲಿಗೆ ಡಚ್ಚರು ಬಂದು ತಿರುವನಂತಪುರದ ವರ್ಮನ್ಗಳ ಜೊತೆ ಆರಂಭವಾದ ಅವರ ವ್ಯವಹಾರವೂ ಕೊನೆಗೆ ಇಂತಹ ಕಚ್ಚಾಟದಲ್ಲೆ ಕೊನೆಯಾದದ್ದು. ಇವರನ್ನ ಅನುಸರಿಸಿಕೊಂಡೆ ಬಂದಿದ್ದ ಫ್ರಂಚರು ಮಲಬಾರಿನ ಮಾಹೆಯಲ್ಲಿ ಶಾಶ್ವತ ಠಿಕಾಣಿ ಹೂಡಿದ್ದುˌ ಅವರ ನಂತರ ಒಕ್ಕರಿಸಿದ ಬ್ರಿಟಿಷರು ಇಡಿ ಭಾರತವನ್ನೆ ನುಂಗಿ ನೊಣೆದು ಅಪೋಷನ ತೆಗೆದುಕೊಂಡಿದ್ದು ಇವೆಲ್ಲಾ ಇಂದು ನಮಗೆಲ್ಲರಿಗೂ ಅರಿವಿರುವ ಅಳಿಸಿ ಬದಲಿಸಲಾಗದ ಇತಿಹಾಸ.


ಕಾಲಾಂತರದಲ್ಲಿ ಆಗಿರುವ ಈ ಎಲ್ಲಾ ಬದಲಾವಣೆಗಳಿಂದ ಕೇರಳದ ಅದೃಷ್ಟವೂ ಬದಲಾಗಿದೆ.


( ಇನ್ನೂ ಇದೆ.)



https://youtu.be/zNdphmQo1CQ

No comments: