28 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೯.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೯.👊

ಮೂಲತಃ ಮಲಯಾಳಿಗಳು ಶ್ರಮಜೀವಿಗಳು. ತಮ್ಮ ಸ್ವಂತ ನೆಲ ಕೇರಳದಲ್ಲಿ ಕೆಲಸಕ್ಕಿಂತ ಹೆಚ್ಚು ಪ್ರತಿಭಟನೆಗಳಲ್ಲಿ ವ್ಯಸ್ತವಾಗಿರುವ ಚಾಳಿಯಿರುವ ಮಲಯಾಳಿಗಳು ಹೊರಗಡೆ ದುಡಿಯಲು ಹೋದಾಗ ಮಾತ್ರ ಮೈ ಮುರಿದು ಕಾಲದ ಪರಿವೆಯಿಲ್ಲದೆ ದುಡಿಯುತ್ತಾರೆ. ಕೇರಳದಲ್ಲಿ ಅವರ ಟ್ರೇಡ್ ಯೂನಿಯನ್ ಕಿತಾಪತಿಗಳಿಗೆ ಹೆದರಿ ಉದ್ಯಮಿಗಳು ತಮ್ಮ ಉತ್ಪಾದನಾ ಕಾರ್ಖಾನೆಗಳನ್ನ ಸ್ಥಾಪಿಸಲು ಹಿಂದೇಟು ಹಾಕುವುದು ಎಷ್ಟು ನಿಜವೋˌ ಪರ ರಾಜ್ಯ ಹಾಗೂ ದೇಶಗಳಲ್ಲಿ ಅನೇಕ ಕಾರ್ಖಾನೆಗಳು ಸ್ಥಾಪನೆಯಾಗಲು ಹಾಗೂ ಯಶಸ್ವಿಯಾಗಿ ಬೆಳೆದುಳಿಯಲು ಇದೆ ಮಲಯಾಳಿಗಳ ಕೊಡುಗೆ ವಿಪರೀತವಾಗಿರೋದು ಕಾಕತಾಳೀಯ. 


ಬೇರೆ ಇನ್ನೇನಲ್ಲದಿದ್ದರೂ ಒಂದು ಸ್ವಂತದ "ಚಾ ಕಡ" ತೆರೆದು ಬದುಕುವ ಕೆಚ್ಚೆದೆ ಅವರಲ್ಲಿದೆ. ಚಂದ್ರಲೋಕಕ್ಕೆ ಕಾಲಿಟ್ಟ ಮೊದಲ ಮಾನವನಿಗೆ ಅಲ್ಲಿ ಮೊಟ್ಟಮೊದಲಿಗೆ ಎದುರಾದದ್ದು ಮಲಯಾಳಿಯ ಚಾ ಅಂಗಡಿ ಅನ್ನುವ ಜೋಕು ಕೇರಳದಲ್ಲೂ ಜನಜನಿತ. ಈ ನಾಯರನಾದರೋ ತೆಕ್ಕು ನಾಡಿನಿಂದ ಬಂದು ವಡಕ್ಕು ನಾಡಿನಲ್ಲೆ ತನ್ನ ಹೊಟೆಲನ್ನ ನಡೆಸುತ್ತಿದ್ದಾನೆ. ಆದರೆ ಬಹುತೇಕ ಮಲಯಾಳಿಗಳು ಏಳು ಸಾಗರ ದಾಟಿ ಹೋಗಿ ದುಡಿಯಲೂ ಸಹ ಹಿಂಜರಿಯರು. ವರ್ಷಗಟ್ಟಲೆ ಒಂಟಿಯಾಗಿ ವಾಸಿಸುತ್ತಾ ಕೇರಳದಲ್ಲಿರುವ ಗಂಡನನ್ನೋ - ಹೆಂಡತಿಯನ್ನೊˌ ಹೆತ್ತವರನ್ನೋ - ಮಕ್ಕಳನ್ನೋ ವರ್ಷದಲ್ಲೋ ಎರಡು ವರ್ಷದಲ್ಲೋ ಹೋಗಿ ಕಂಡು ಬರುವ ಗಾಣದೆತ್ತಿನಂತೆ ಅನವರತ ದುಡಿಯುವ ಮಲಯಾಳಿಗಳ ಹಿಂಡೆ ವಿದೇಶಗಳಲ್ಲಿದೆ.


ಅಂದಹಾಗೆˌ ಕೇರಳದ ಹೊಟೆಲ್ಲುಗಳಲ್ಲಿ ತಿಂಡಿಗಳೊಂದಿಗೆ ಮೇಲೋಗರ ಕೊಡುವ ಕ್ರಮ ಇಲ್ಲ. ನೀವು ಪುಟ್ಟು ಅಥವಾ ಪೂರಿ ಖರೀದಿಸಿದರೆ ಅದಕ್ಕೆ ಕಡಲ ಕರಿಯನ್ನೋ ಅಥವಾ ಮೊಟ್ಟ ಕರಿಯನ್ನೋ ಇಲ್ಲವೆ ಕೋಳಿ - ಬೀಫ್ ಕರಿಯನ್ನೊ ಪ್ರತ್ಯೇಕವಾಗಿ ಕೊಳ್ಳಬೇಕು. ಎರಡಕ್ಕೂ ಬೇರೆ ಬೇರೆ ಕ್ರಯ ವಿಧಿಸಲಾಗುತ್ತೆ. ಉಚಿತವಾಗಿ ಅಲ್ಲಿ ಸಿಗೋದು ಸಸ್ಯಹಾರಿ ಹೊಟೆಲ್ಲುಗಳಲ್ಲಿ ಅಲ್ಲಿನ ಕಡಲತೀರದ ತೇವಾಂಶ ಭರಿತ ಬೆಚ್ಚಗಿನ ವಾತಾವರಣದಲ್ಲಿ ದೇಹವನ್ನ ತಂಪಾಗಿಡುವ ಮೂಲಿಕೆ ಬೆರೆಸಿದ ಕೆಂಪು ವರ್ಣದ ಕುಡಿಯುವ ನೀರು ಹಾಗೂ ಕೆಲವು ಮಾಂಸಾಹಾರಿ ಹೊಟೆಲ್ಲುಗಳಲ್ಲಿ ಈ ನೀರಿನ ಜೊತೆಗೆ ಗ್ರಾಹಕರ ಲಿವರಿನ ಹಿತಾಸಕ್ತಿ ಕಾಪಾಡಲು ಕೊಡುವ ಲಿಂಬೆರಸದ ಶರಬತ್ತು ಮಾತ್ರ.


*****

ಅಂದು ಅವನಿಗೆ ಆನಂದಾಶ್ರಮಕ್ಕೆ ಹೋಗಲಿಕ್ಕಿತ್ತು. ಕಾಙಂನಗಾಡಿನ ಮತ್ತೊಂದು ಪವಿತ್ರ ಸ್ಥಳ ಮಾವುಂಗಲ್ಲಿನಲ್ಲಿರುವ ಆಸ್ತಿಕರ ಆಕರ್ಷಣೆಯ ಕೇಂದ್ರ ಆನಂದಾಶ್ರಮ. ಮಾವುಂಗಲ್ ಹಿಂದೆ ಕಾಙಂನಗಾಡು ಪೇಟೆಯಿಂದ ಮೂರು ಕಿಲೋಮೀಟರ್ ಹೊರಗಿದ್ದ ಗ್ರಾಮ. ಈಗ ಬೆಳೆದ ಪೇಟೆಯ ವಿಸ್ತರಣದಂತಾಗಿ ಹೋಗಿದೆ. ಸ್ವಾಮಿ ರಾಮದಾಸರು ಕಟ್ಟಿರುವ ಆನಂದಾಶ್ರಮ ಅಲ್ಲಿದೆ. 


ಬೇಕಲದಿಂದ ಕೋಟೆ ಸುತ್ತಿ ಕೋಣೆಗೆ ಮರಳಿದವನ ಹೊಟ್ಟೆ ವಿಪರೀತ ಹಸಿಯುತ್ತಿತ್ತು. ಮೂರು ದಿನದ ಕೊಳೆ ಬಟ್ಟೆಗಳನ್ನೆಲ್ಲ ಒಗೆದು ಹಾಕಿ ಸ್ನಾನ ಮುಗಿಸುವಾಗ ಘಂಟೆ ಹತ್ತಾಗಿತ್ತು. ನಾಯರ್ ಕ್ಯಾಂಟೀನಿನ ಇಡಿಯಪ್ಪಂ ಕಡಲ ಕರಿಯ ಜೊತೆ ಚಹಾ ಹೊಟ್ಟೆಗೆ ಹಾಕಿಕೊಂಡು ಪೇಟೆಯತ್ತ ನಡೆದ. ಬಸ್ಟ್ಯಾಂಡಿನ ಮೊಯಿದ್ದಿಯ ಬದ್ರಿಯಾ ಕಲರ್ ಲ್ಯಾಬ್ ತೆರೆದಿತ್ತು. "ಕಾಸರಗೋಡಿಂದ ಬಸ್ಸಲ್ಲಿ ಕಳಿಸಿದಾರಂತೆˌ ಇನ್ನು ಅರ್ಧಘಂಟೆಲಿ ಸಿಗ್ತದೆ ಸಾರ್ ಆಯ್ತ?" ಅಂದ ಮೊಯಿದ್ದಿ ಮೆಮೊರಿ ಕಾರ್ಡನ್ನ ಮರಳಿಸಿದ. "ಆಯ್ತು" ಅಂದವ ಪೇಟೆ ಬೀದಿಯಲ್ಲಿ ಕೊಂಚ ಸುತ್ತು ಹಾಕಿ ಕೊಗ್ಗ ಕಾಮತರ ದಿನಸಿ ಅಂಗಡಿಯಲ್ಲಿ ನಾಲ್ಕು ಕಾಯಿˌ ಮೂರು ಲೀಟರ್ ಕಾಯೆಣ್ಣೆˌ ಎರಡು ಕಿಲೋ ಮಧುರೈ ಆಣಿಬೆಲ್ಲ ಆಶ್ರಮಕ್ಕೆ ಕೊಡಲು ಖರೀದಿಸಿದ. 


ಮರಳಿ ಬರುವಾಗ ಫೊಟೋಗಳು ಬಂದಿದ್ದವು. ಯಥಾಪ್ರಕಾರ ಸ್ಟೂಡಿಯೋದವರು ಉಚಿತವಾಗಿ ಕೊಡುವ ಅಗ್ಗದ ಆಲ್ಬಂನಲ್ಲಿ ಎಲ್ಲಾ ಫೊಟೋಗಳನ್ನ ಲಕೋಟೆಯಿಂದ ತೆಗೆದು ತುಂಬಿಸಿಟ್ಟ. ಫೊಟೋ ಪಾಸಿಟಿವಿಗೆ ಹಾಕಿದ್ದ ರಾಸಾಯನಿಕದ ವಾಸನೆ ಬಹುದಿನಗಳ ನಂತರ ಮೂಗಿಗಡರಿ ಒಂಥರಾ ಖುಷಿಯಾಯಿತು. ಎಲ್ಲಾ ಡಿಜಿಟಲಾಟವಾಗಿರುವ ಈ ಕಾಲಮಾನದಲ್ಲಿ ಅವನೂ ಸಹ ಹೊಸ ಫೊಟೋಗಳನ್ನ ಹಿಂದಿನ ಅನಲಾಗ್ ರೀಲು ಕ್ಯಾಮರಾದ ಕಾಲದಂತೆ ತೊಳೆಸುವುದನ್ನೆ ಬಿಟ್ಟು ಬಿಟ್ಟಿದ್ದ. ಅಲ್ಲವನಿದ್ದ ಅಷ್ಟೂ ಹೊತ್ತುˌ ಹಾಳು ಮೊಬೈಲು ಫೋನು ಬಂದು ತನ್ನಂತವರ ವ್ಯಾಪಾರಕ್ಕೆ ಅದರಿಂದಾದ ನಷ್ಟದ ಕುರಿತು ಮೊಯಿದ್ದಿ ಕೊರೆದೆ ಕೊರೆದ. 


ಈ ನಡುವೆ ಫೊಟೋ ತೆಗೆಸಿಕೊಳ್ಳುವವರು ಹಾಗೂ ತೊಳೆಸಿ ಪ್ರಿಂಟ್ ಹಾಕಿಸಿಕೊಳ್ಳುವವರು ಗಣನೀಯ ಸಂಖ್ಯೆಯಲ್ಲಿ ಕುಸಿದು ಫೊಟೋ ಲ್ಯಾಬ್ ನಡೆಸುವುದುˌ ಅದೂ ಕಾಙಂನಗಾಡಿನಂತಹ ಪುಟ್ಟ ಪಟ್ಟಣದಲ್ಲಿ ಮೊಯಿದ್ದಿಯಂತವರಿಗೆ ನಷ್ಟದ ಬಾಬ್ತಾಗಿ ಪರಿಣಮಿಸಲಾರಂಭಿಸಿತ್ತು. "ಆಗುವ ವ್ಯಾಪಾರ ಅಲ್ಲಲ್ಲಿಗೆ ಸರಿಯಾಗ್ತಿದೆ ಸಾರ್" ಅಂತ ಮೊಯಿದ್ದಿ ಅವಲತ್ತುಕೊಂಡ. ಹೀಗಾಗಿ ಇವನು ಏನೊಂದೂ ಚೌಕಾಸಿ ಮಾಡದೆ ಪರಿತಾಪದಿಂದ ಅವನು ಹೇಳಿದ ಬೆಲೆಗೆ ಮೆಮೊರಿ ಕಾರ್ಡೊಂದನ್ನ ಖರೀದಿಸಿˌ ಬಿಲ್ ಪಾವತಿಸಿ ಅಲ್ಲಿಂದ ಕಾಲ್ಕಿತ್ತ. ಪ್ರಪಂಚ ಅನೇಕ ರಂಗಗಳಲ್ಲಿ ಅನಿರೀಕ್ಷಿತ ಬದಲಾವಣೆ ಕಾಣುತ್ತಿರೋದು ಸತ್ಯ. ನಾವೂ ಸಹ ಅದರ ವೇಗಕ್ಕೆ ನಮ್ಮನ್ನ ಹೊಂದಿಸಿಕೊಂಡು ಬೆಳೆಯದಿದ್ದರೆ ಕೊಳೆಯುವುದು ಖಚಿತ ಅನ್ನುವ ವಾತಾವರಣ ಎಲ್ಲೆಲ್ಲಿಯೂ ಇದೆ. ಇದರ ಬಲಿಪಶುವಾದವರಲ್ಲಿ ಮೊಯಿದ್ದಿ ಮೊದಲನೆಯವನೂ ಅಲ್ಲ. ಬಹುಶಃ ಕೊನೆಯವನೂ ಆಗಿರೊಲ್ಲ.


*****


ಆನಂದಾಶ್ರಮದ ಭಕ್ತರ ಪಾಲಿಗೆ ಪ್ರೀತಿಯ "ಪಪ್ಪ" ಆಗಿರುವ ಸ್ವಾಮಿ ರಾಮದಾಸರು ಮೂಲತಃ ಕಾಙಂನಗಾಡಿನವರೆ. ಆದರೆ ಯವ್ವನದಲ್ಲಿ ಮಂಗಳೂರಿನಲ್ಲಿ ತಮ್ಮದೆ ಸ್ವಂತ ಬಟ್ಟೆ ಅಂಗಡಿ ನಡೆಸಿಕೊಂಡಿದ್ದ ವಿಠ್ಠಲ ರಾವ್ ಎನ್ನುವ ಪೂರ್ವಾಶ್ರಮದ ಹೆಸರಿದ್ದ ಒಬ್ಬ ಗೌಡ ಸಾರಸ್ವತ ಗೃಹಸ್ಥ. ತಮ್ಮ ವ್ಯಾಪಾರದ ಏಳುಬೀಳುಗಳ ನಡುವೆ ವ್ಯವಹಾರದಲ್ಲಿ ಅವರು ಕೊಂಚ ನಷ್ಟವನ್ನ ಅನುಭವಿಸಿದರು. ಅವರನ್ನ ಅಧ್ಯಾತ್ಮದ ಹಾದಿಗೆ ಹೊರಳಿಸಿದವರು ಅವರ ತಂದೆ ಬಾಲಕೃಷ್ಣ ರಾಯರು. ಅವರಿತ್ತ ಮಂತ್ರದೀಕ್ಷೆ "ಶ್ರೀರಾಮ ಜಯರಾಮ ಜಯಜಯ ರಾಮ್ˌ ಶ್ರೀರಾಮ ಜಯರಾಮ ಜಯಜಯ ರಾಮ್" ಅವರನ್ನ ಸಂತತ್ವದ ಕಡೆಗೆ ತಿರುಗಿಸಿತು. ೧೯೨೨ರಲ್ಲಿ ಇದೆ ದಿನ ಡಿಸೆಂಬರ್ ಇಪ್ಪತ್ತೆಂಟರಂದು ಶಾಶ್ವತವಾಗಿ ತಮ್ಮ ಸಂಸಾರವನ್ನ ಮಡದಿ ರುಕ್ಮಾಬಾಯಿ ಹಾಗೂ ಮಗಳು ರಮಾಬಾಯಿಯನ್ನ ತೊರೆದ ವಿಠ್ಠಲರಾಯರು ಸ್ವಾಮಿ ರಾಮದಾಸರಾದ ಆರಂಭದ ಕಥೆ ಇದು. 


ಅನಂತರ ಕ್ರಮೇಣ ತಮ್ಮ ಜೀವನದಲ್ಲಿ ವೈರಾಗ್ಯದತ್ತ ಹೊರಳಿದ ಪಪ್ಪ ರಮಣಮಹರ್ಷಿಯಾದಿಯಾಗಿ ಅನೇಕ ಸಾಧು ಸಂತರ ಸಂಪರ್ಕಕ್ಕೆ ಬಂದರು. ಮೊದಲಿಗೆ ೧೯೨೦ರ ದಶಕದಲ್ಲಿ ಕಾಸರಗೋಡಿನ ಹತ್ತಿರದ ಚಂದ್ರಗಿರಿ ತೀರದಲ್ಲಿ ಜಾಗವನ್ನ ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ಸರ್ವರನ್ನೂ ಸಮಾನವಾಗಿ ಕಾಣುವ - ಸರ್ವರಿಗೂ ತೆರೆದಿರುವಂತಹ ಅಧ್ಯಾತ್ಮಿಕ ಕೇಂದ್ರವೊಂದನ್ನ ತೆರೆದಿದ್ದರು. ತಾಯಿ ಕೃಷ್ಣಾಬಾಯಿಯವರು ಮುಂಬೈಯಿಂದ ಕಾಸರಗೋಡಿನ ಆಶ್ರಮಕ್ಕೆ ಸ್ಥಳಾಂತರವಾದ ಪಪ್ಪನಿಗೆ ಈ ವಿಷಯದಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದರು.


ಆದರೆ ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಆಶ್ರಮದ ದೈನಂದಿನ ವ್ಯವಹಾರಗಳಲ್ಲಿ ಕೃಷ್ಣಾಬಾಯಿಯವರ ಉಪಸ್ಥಿತಿಯನ್ನ ಯಜಮಾನಿಕೆಯೆಂದು ಬಗೆದು ಸಹಿಸದೆ ಅವರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದ ಎಂದು ಹೇಳಲಾಗುತ್ತದೆ. ಈ ಘಟನೆಯಾದ ನಂತರˌ ಅಲ್ಲಿದ್ದ ಆಶ್ರಮವನ್ನ ಮುಚ್ಚಿ ಈಗಿರುವ ಮಾವಂಗಲ್ಲಿನ ಆಶ್ರಮವನ್ನ ಸ್ಥಾಪಿಸಲಾಯಿತು. ಭಗವಾನ್ ನಿತ್ಯಾನಂದರೂ ಸಹ ಇದರ ಉದ್ಘಾಟನೆಯ ದಿನ ಇಲ್ಲಿಗೆ ಭೇಟಿ ನೀಡಿ ಕೃಷ್ಣಾಬಾಯಿಯವರು ನೀಡಿದ್ದ ಹಾಲು ಹಣ್ಣು ಸೇವಿಸಿ ಹರಸಿದ್ದರಂತೆ. ಪಪ್ಪ ಹಾಗೂ ಕೃಷ್ಣಾಬಾಯಿಯವರ ಪರಿಶ್ರಮದಿಂದ ಆರಂಭವಾದ ಆನಂದಾಶ್ರಮ ಮುಂದಿನ ದಿನಮಾನಗಳಲ್ಲಿ ಸ್ವಾಮಿ ಸತ್ ಚಿದಾನಂದರ ಮಾರ್ಗದರ್ಶನದಲ್ಲಿ ಬೆಳೆದು ಇಂದು ದೇಶದಾದ್ಯಂತ ಅಪಾರ ಭಕ್ತವರ್ಗವನ್ನ ಹೊಂದಿದೆ.


( ಇನ್ನೂ ಇದೆ.)



https://youtu.be/xBlRwO0ILKI

No comments: