ಅಲ್ಲಿ ನೆರೆದಿದ್ದ ಪ್ರಾಯದಲ್ಲೋ ಗಾತ್ರದಲ್ಲೋ ದೊಡ್ಡ ದೊಡ್ಜದಾಗಿ ಕಂಗೊಳಿಸುತ್ತಿದ್ದ ಕುಂಟೆ ಕೋಣಂದಿರಿಗೆಲ್ಲ ಚಹಾ ಹಂಚುತ್ತಿದ್ದವರಿಗೆ ಬಹುಶಃ ಸುಭಾಶನ ಪ್ರಾಯದ ಮಕ್ಕಳಿಗೂ ಹೊಟ್ಟೆ ಅನ್ನುವುದೊಂದಿದೆ ಅನ್ನೋದೆ ಮರೆತು ಹೋದಂತಿತ್ತು. ಹೇಳಿ ಕೇಳಿ ಆ ಎಳೆಯ ತನ್ನ ಮಾರ್ಗದರ್ಶಕ. ಇಂದಿನ ಈ ಅಪೂರ್ವ ಪ್ರದರ್ಶನಕ್ಕೆ ಕರೆದು ಬಂದಿದ್ದವ. ಅವನ ಬಿಟ್ಟು ಚಹಾ ಕುಡಿಯುವುದೆ? ರಾತ್ರಿ ಊಟದ ನಂತರ ಅವನ ಹೊಟ್ಟೆಗೂ ಏನೂ ಬಿದ್ದಿರುವ ಸಾಧ್ಯತೆಯಂತೂ ಇಲ್ಲ. ಅಲ್ಲದೆ ಹವಾಯಿ ಚಪ್ಪಲಿ ಸಾಧಾರಣ ದರ್ಜೆಯ ಅಂಗಿ ತೊಟ್ಟ ಚಡ್ಡಿ ಪೈಲ್ವಾನ ಚಹಾ ಕುಡಿಯವಷ್ಟು ವಯಸ್ಕ ಅಂತ ಅವರಲ್ಲಿ ಯಾರೊಬ್ಬರ ಪೊಟ್ಟು ದೃಷ್ಟಿಯೂ ಪರಿಗಣಿಸಿರಲಿಲ್ಲವೋ? ಏನೋ? ಗೊತ್ತಿಲ್ಲ. ಆದರೆ ಇವನು ಕರೆಸಿ ಕುಡಿಸದಿದ್ಧರೆ ಅಲ್ಲೆ ಅವನು ಕಂಭಕ್ಕೊರಗಿ ಕಂಡವರು ಸೊರಪರ ಚಹಾ ಹೀರುವ ಶಬ್ದ ಕೇಳುತ್ತಲೆ ತೃಪ್ತಿ ಪಡಬೇಕಿತ್ತೇನೋ.
ಮುತ್ತಪ್ಪನ ದೈವಸ್ಥಾನದ ಕಲ್ಲಿಗೆ ಅಗೆಲು ಬಡಿಸಿ ಕೋಲ ಮುಗಿದ ನಂತರ ಅಲ್ಲಿದ್ದ ಕಿರಿ ವಯಸ್ಸಿನ ಮಕ್ಕಳಿಗೆ ಅದರಲ್ಲಿ ಬಹುಪಾಲು ಕೋಳಿ ಗಸಿ - ಅಡ್ಯೆಯಿದ್ದ ಎಲೆಗಳನ್ನ ಹಂಚಿದ್ದರು. ಅದೆಲ್ಲ ಅವನ ಕ್ಯಾಮರಾದ ಕಣ್ಣಲ್ಲಿ ಸೆರೆಯಾಗಿತ್ತು. ಸುಭಾಶನೂ ಆ ಮಕ್ಕಳ ಗುಂಪಿನಲ್ಲಿದ್ದರಬಹುದು ಅಂತ ತಪ್ಪಾಗಿ ಭಾವಿಸಿದ್ದ. ಇವ ನೋಡಿದರೆ ನಿದ್ರೆಯ ಸೆಳೆತ ತಾಳಲಾರದೆ ಅಂತಹ ಗಲಭೆ ಗದ್ದಲದ ಮಧ್ಯೆಯೂ ಕಂಭಕ್ಕೊರಗಿ ಕುಗುರುತ್ತಾ ನಿಂತಿದ್ದಾನೆ! ವಿಷ್ಣುಮೂರ್ತಿ ಕೋಲದ ಅಗೆಲು ಬಡಿಸುವಾಗ ಇವನನ್ನ ಎಬ್ಬಿಸಿ ಪ್ರಸಾದದ ಅಡ್ಯೆ - ಹರಕೆ ಕೋಳಿಮಾಂಸದ ಪುಳಿಮುಂಚಿ ತಿನ್ನಲು ಮುಂದೆ ತಳ್ಳಬೇಕೆಂದು ನಿರ್ಧರಿಸಿದ. ನಿಧಾನವಾಗಿ ವಾದ್ಯಗಳಾಲಾಪ ರಂಗೇರ ತೊಡಗಿತ್ತು. ವಿಷ್ಣುಮೂರ್ತಿ ಕೋಲದ ಸರದಿ ಆರಂಭದ ಘಟ್ಟದಲ್ಲಿತ್ತು.
*****
ಕೇರಳದ ಕೆಲವು ಖಾಸಾ ವಿಶೇಷತೆಗಳು ಆ ರಾಜ್ಯಕ್ಕಷ್ಟೆ ಅನನ್ಯ. ಅರಣ್ಮುಳ ಕನ್ನಾಡಿ ಅನ್ನಲಾಗುವ ಪಂಚಲೋಹವಿರುವ ಕಂಚಿನ ಕನ್ನಡಿ ಅಂತಹ ಅದ್ಭುತಗಳಲ್ಲೊಂದು. ದಕ್ಷಿಣ ಕೇರಳದ ಪಟ್ಟಣಂತಿಟ್ಟ ಮೂಲದ ಆ ಕಲಾಗಾರಿಕೆಯಲ್ಲಿ ಕೇವಲ ಲೋಹದ ಮೇಲ್ಮೈಯನ್ನೆ ತಿಕ್ಕಿ ತಿಕ್ಕಿ ಹೊಳಪು ತಂದು ಸಪಾಟುಗೊಳಿಸಿ ಅದರಲ್ಲಿ ಥೇಟು ಗಾಜಿನ ಕನ್ನಡಿಯಲ್ಲಿ ಮೂಡುವಂತೆಯೆ ಪ್ರತಿಬಿಂಬ ಮೂಡುವಂತೆ ಮಾಡಲಾಗುತ್ತದೆ. ಆ ಕನ್ನಡಿಗೆ ಕಂಚಿನ ಫ್ರೇಮು ಇರುವ ಕೆತ್ತನೆ ಸಹಿತದ ಕೈ ಹಿಡಿಯನ್ನೂ ಕೂಡಿಸಿ ಇನ್ನಷ್ಟು ಆಕರ್ಷಕಗೊಳಿಸಲಾಗುತ್ತೆ. ಕೇರಳದ ಹೆಂಗೆಳೆಯರಿಗೆ ಈ ಅರುಣ್ಮುಳ ಕನ್ನಾಡಿ ಅಂದರೆ ಅಚ್ಚುಮೆಚ್ಚು. ಯಾರಾದರೂ ತಿಳಿಸಿ ಹೇಳದ ಹೊರತು ಅದೊಂದು ಸಂಪೂರ್ಣ ಲೋಹದ ಕರಕುಶಲದ ಕೆಲಸ ಅನ್ನೋದೆ ಅರಿವಾಗದಷ್ಟು ತನ್ಮಯತೆಯಿಂದ ಅದನ್ನ ತಯಾರಿಸಿರುತ್ತಾರೆ.
ಕೇರಳದ ಉದ್ದಗಲ ಇರುವ ವಾಸ್ತುಶಿಲ್ಪದ ಮೂಲ ಸಹ ತುಳುನಾಡೆ. ಮರ ಹಾಗೂ ಓಡು ಹೆಂಚಿನ ಇಳಿಸಿದ ಮಾಡೆ ಮುಖ್ಯವಾಗಿರುವ ಅಲ್ಲಿನ ಮನೆಗಳಾಗಲಿˌ ದೇವಾಲಯಗಳಾಗಲಿ ಅಥವಾ ಸಮುದಾಯ ಭವನದಂತಹ ಕಟ್ಟಟಗಳೆ ಆಗಲಿ ಕರಾವಳಿ ಹಾಗೂ ಮಲೆನಾಡಿನ ಅವ್ಯಾಹತ ಮಳೆಗೆ ಸವಾಲೊಡ್ಡಿ ನಿಲ್ಲಲು ಅನುಕೂಲವಾಗುವಂತೆ ನಿರ್ಮಿಸಲಾಗುತ್ತದೆ. ಕಾಲಾಂತರದಲ್ಲಿ ಕೈ ಹಂಚು ಅಥವಾ ಓಡು ಹಂಚಿನ ಜಾಗಕ್ಕೆ ಮಾಟವಾದ ಮಂಗಳೂರು ಹಂಚು ಹಾಕುವ ಪದ್ಧತಿ ಆರಂಭವಾಗಿದೆ. ಗಾಜಿನ ಹಂಚೊಂದನ್ನ ನಡುನಡುವೆ ಸೇರಿಸಿ ಸೂರ್ಯನ ಬೆಳಕು ಕಟ್ಟಡದ ಒಳಗೂ ಚೆಲ್ಲುವಂತೆ ವ್ಯವಸ್ಥೆ ಮಾಡುವ ಅನುಕೂಲತೆ ಈ ಹೊಸ ಕಾರ್ಖಾನೆ ನಿರ್ಮಿತ ಹಂಚುಗಳಲ್ಲಿರುವುದೊಂದು ಧನಾತ್ಮಕ ಅಂಶ. ಮಲಯಾಳಿಗಳ ಮಧ್ಯೆ "ನಾಲಕೆಟ್ಟು" ವಾಸ್ತು ಶೈಲಿಯೆಂದೆ ಇದು ಜನಪ್ರಿಯ. ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ನಾಗರ ಶೈಲಿ ಅನುಸರಿಸಲಾಗುತ್ತದೆ.
ಯಾವುದೆ ಕಟ್ಟಡವಾದರೂ ಸರಿˌ ಕಟ್ಟಡವಿರುವ ಜಾಗದಲ್ಲಿನ ಅನುಕೂಲಕ್ಕೆ ತಕ್ಕಂತೆ ನಲವತ್ತೈದರಿಂದ ಅರವತ್ತು ಡಿಗ್ರಿ ಬಾಗಿಸಿದಂತೆ ರಚಿಸಲಾಗುವ ಮರದ ದಳಿಗಳಿಗೆ ಈಚಲ ಪರದೆಗಳನ್ನ ಇಳಿಬಿಡುವ ಸಂಪ್ರದಾಯವಿದ್ದುˌ ಕಾಲಮಾನಕ್ಕೆ ತಕ್ಕಂತೆ ಅವನ್ನ ಎತ್ತಿ ಮೇಲೆ ಕಟ್ಟಿಯೋˌ ಇಲ್ಲಾ ಇಳಿಬಿಟ್ಟೋ ಕಟ್ಟಡದೊಳಗಿನ ವಾತಾವರಣದಲ್ಲಿ ಗಾಳಿಯ ಹರಿವನ್ನ ನಿಯಂತ್ರಿಸಬಹುದು. ಅಡ್ಡಮಳೆ ಹೊಡೆಯುವ ಸಾಧ್ಯತೆ ವಿಫುಲವಾಗಿರುವ ಕೇರಳದಲ್ಲಿ ಬಾಗಿದ ತೆರೆದ ಕಿಟಕಿಯ ದಾರಂದಗಳು ಮಳೆಯ ಇರಚಲು ಮನೆಯೊಳಗೆ ರಾಚದಂತೆ ತಡೆಯುತ್ತದೆ. ತುಳುನಾಡಿನ ಕಟ್ಟಡಗಳ ಪಡಿಯಚ್ಚಿನಂತೆ ಇಲ್ಲಿಯೂ ಸಹ ಕಟ್ಟಡದ ಹೊರ ಹಜಾರಕ್ಕೆ ಹೊರಗೋಡೆ ಕಟ್ಟಿ ಮರೆ ಮಾಡುವ ಪದ್ಧತಿ ಇದ್ದಿರಲಿಲ್ಲ. ಹೀಗಾಗಿ ಚಾವಡಿ ಅಥವಾ ಜಗಲಿ ಸದಾ ತೆರೆದ ಸ್ಥಿತಿಯಲ್ಲೆ ಇರುತ್ತಿತ್ತು. ಸಾಮಾನ್ಯವಾಗಿ ಹೆಬ್ಬಾಗಿಲಿನಿಂದ ಹಿಡಿದು ಹಿಂಬಾಗಿಲ ತನಕ ಬಾಗಿಲುಗಳೆಲ್ಲ ನಾಲ್ಕರಿಂದ ಐದಡಿಯ ಒಳಗೆ ಇರುತ್ತವೆ. ಹೀಗಾಗಿ ಎತ್ತರದಲ್ಲಿ ಕಡಿಮೆ ಇರುವವರೂ ಸಹ ತಗ್ಗಿಬಗ್ಗಿಯೆ ಮನೆಯೊಳಗೂ ಹೊರಗೂ ಹೋಗಬೇಕು. ಮರದ ದಾರಂದಗಳು ಮಾತ್ರ ಕೆತ್ತನೆಗಳನ್ನ ಹೊಂದಿರುತ್ತವೆ. ಉಳಿದಂತೆ ದಳಿಗಳೆಲ್ಲ ಸಾದಾಸೀದ ಅಷ್ಟೆ. ಮನೆಯ ಮುಂದಾದರೆ ತುಳಸಿಕಟ್ಟೆ ಕಟ್ಟಿರುತ್ತಾರೆ. ದೇವಸ್ಥಾನವಾದರೆ ದೊಡ್ಡ ದೀಪಸ್ಥಂಭವಿರುತ್ತದೆ ಅನ್ನುವುದಷ್ಟೆ ಇವೆರಡರ ನಡುವಿನ ಮೂಲಭೂತ ವ್ಯತ್ಯಾಸ. ಇತ್ತೀಚೆಗೆ ಇಂತಹ ಪಾರಂಪರಿಕ ಶೈಲಿಯ ಮನೆಗಳು ಮರೆಯಾಗುತ್ತಿದ್ದುˌ ಸಿಮೆಂಟಿನ ಕಟ್ಟಡಗಳನ್ನ ಬಾಕಿ ಇನ್ನುಳಿದ ಊರುಗಳಂತೆಯೆ ಕಟ್ಟುವ ಹಾಗೂ ಅಲಂಕಾರಕ್ಕೆ ಮಾತ್ರ ಒಂದೋ ಮಹಡಿಯ ವರಾಂಡದಲ್ಲೋ ಇಲ್ಲಾ ನೆಲಮಹಡಿಯ ಹಜಾರದಲ್ಲೋ ಹಳೆಯ ಶೈಲಿಯ ಕಿಡಕಿಯನ್ನ ತೋರಿಕೆಗಾಗಿ ಆಲಂಕಾರಿಕವಾಗಿ ಮಾತ್ರ ಇಡಿಸುವ ಹೊಸ ಚಾಳಿ ಆರಂಭವಾಗಿದೆ.
ಮತ ಪರಿವರ್ತಿತನಾಗಿ ಮುಸಲ್ಮಾನ ಅಥವಾ ಕ್ರೈಸ್ತನಾಗಿದ್ದರೂ ಮಲಯಾಳಿ ತನ್ನ ಒಡೆತನದ ಜಾಗದಲ್ಲಿರುವ ಆದಿಯ ಕಲ್ಲುˌ ನಾಗರಕಲ್ಲುˌ ಭೂತದ ಕಲ್ಲು ಇವೆಲ್ಲವನ್ನೂ ತೆರವುಗೊಳಿಸದೆ ಉಳಿಸಿಕೊಂಡಿದ್ದರೆ ಅದವನ ದೈವಿಕ ಪ್ರಜ್ಞೆಗಿಂತ ಹೆಚ್ಚಾಗಿ ಪರಂಪರೆಯ ಪ್ರೇರಣೆಯ ಕುಮ್ಮಕ್ಕಿನಿಂದ ಆಗಿರುತ್ತದೆ. ಆ ಜಾಗವನ್ನ ಮಾರಿದ್ದರೂ ಮೂಲ ಮಾಲಿಕರು ಆಗಾಗ ವಿಶೇಷ ದಿನಮಾನಗಳಲ್ಲಿ ತಮ್ಮ ಭೂತ ಹಾಗೂ ನಾಗನನ್ನ ನೆನಪಿಸಿಕೊಂಡು ಬಂದು ಅಗೆಲು ಬಡಿಸಿ ಕೈ ಮುಗಿಯುವುದಿದೆ. ಇದಂತೂ ಅಪ್ಪಟ ತುಳುನಾಡಿನ ಪದ್ಧತಿಗಳಲ್ಲೊಂದು. ಜಾತಿ ಮತ ಯಾವುದಾಗಿದ್ದರೂ ಸಹ ಸ್ಥಳದ ಸದ್ಯದ ಒಡೆತನ ಹೊಂದಿರುವವರು ಇದಕ್ಕೆಲ್ಲ ಅಡ್ಡಿ ಪಡಿಸುವುದಿಲ್ಲ.
*****
ಬಹು ಕಾಳಿದಾಸ ಸಿದ್ಧಾಂತವೊಂದಿದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ದಿಗ್ಗಜನಾಗಿದ್ದ ಕಾವ್ಯ ಚತುರ ಕಾಳಿದಾಸ ತಮ್ಮವನಾಗಿದ್ದ ಅನ್ನುವ ಹೆಮ್ಮೆ ಮಲಯಾಳಿಗಳಿಗಿದೆ. ಮೇಘದೂತ ಬರೆದಿದ್ದ ಭೋಜರಾಜನ ಆಸ್ಥಾನ ಕವಿಯಾಗಿದ್ದವ ಆತನೆ ಅಂತ ಈ ಮಲಯಾಳಿಗಳು ನಂಬುತ್ತಾರೆ. ಇನ್ನು ತೃಶೂರಿನ ಕಾಲಡಿಯಲ್ಲಿ ಹುಟ್ಟಿ ಸನಾತನ ಧರ್ಮದ ಪುನರುತ್ಥಾನ ಮಾಡಿದ - ಅದಕ್ಕಾಗಿ ಭಾರತ ಭೂಮಿಯ ಉದ್ದಗಲ ಬರಿ ಕಾಲ್ನಡಿಗೆಯಲ್ಲೆˌ ಅದೂ ಇಂದಿನಂತೆ ಯಾವೊಂದು ಸುಖ ಸೌಲಭ್ಯಗಳಿಲ್ಲದ ಕಾಲದಲ್ಲಿ ಮಾಡಿರುವ ಖ್ಯಾತಿಯಿರುವ ಶ್ರೀಶಂಕರಾಚಾರ್ಯರ ಬಗ್ಗೆ ತಿಳಿದಿರದವರಾದರೂ ಯಾರಿದ್ದಾರು?
ಶಂಕರಾಚಾರ್ಯರು ಸಹ ತತ್ವ ಮೀಮಾಂಸೆಯನ್ನˌ ಭಾರತೀಯ ತತ್ವಶಾಸ್ತ್ರದ ಬಗ್ಗೆ ಜಿಜ್ಞಾಸುವಾಗಿ ರಚಿಸಿರುವ ಟೀಕೆ ಟಿಪ್ಪಣಿಗಳ ಭಾಷ್ಯಗಳನ್ನ ಹಾಗೂ ಸ್ತುತಿಗಳಾಗಿರುವ ಅನೇಕ ಕೃತಿಗಳನ್ನ ರಚಿಸಿದ್ದಾರೆ. ಆ ದೃಷ್ಟಿಯಿಂದ ಅವರೂ ಸಾಹಿತಿಯೆ. ಆದರೆ ಶಂಕರಾಚಾರ್ಯರಾಗಲಿ ಅಥವಾ ಕಾಳಿದಾಸನೆ ಆಗಿರಲಿ ತಮ್ಮ ಯಾವೊಂದು ಕೃತಿಯನ್ನೂ ಸಹ ಮಾತೃಭಾಷೆ ಮಲಯಾಳಂನಲ್ಲಿ ರಚಿಸಿಲ್ಲ ಅನ್ನುವುದು ಗಮನಾರ್ಹ ಅಂಶ. ಅವರಿಬ್ಬರೂ ಸಹ ಸಂಸ್ಕೃತವನ್ನೆ ತಮ್ಮ ವಿದ್ವತ್ತಿನ ಅಭಿವ್ಯಕ್ತಿಗೆ ಭಾಷಾ ಮಾಧ್ಯಮವಾಗಿ ಆಯ್ದುಕೊಂಡಿದ್ದರು. ಅವರ ಕಾಲದಲ್ಲಿ ಕೇವಲ ಆಡುಭಾಷೆಯಾಗಿದ್ದ ಮಲಯಾಳಂಗೆ ಇನ್ನೂ ಲಿಪಿ ಹೊಂದುವ ಭಾಗ್ಯವಿಲ್ಲದಿದ್ದದ್ದು ಇದಕ್ಕೆ ಕಾರಣವಾಗಿದ್ದೀತು.
( ಇನ್ನೂ ಇದೆ.)
https://youtu.be/VVLfeKIHpj4
No comments:
Post a Comment