ಹೊಟೆಲಿನಿಂದ ಹೊರಬಿದ್ದವರು ಬಸ್ಟ್ಯಾಂಡಿನ ವಿರುದ್ಧ ಸಾಲಿನಲ್ಲಿದ್ದ ಪುಟ್ಟಪಥದ ಮೇಲೆ ರೈಲ್ವೆ ನಿಲ್ದಾಣದತ್ತ ಹೆಜ್ಜೆ ಹಾಕಲಾರಂಭಿಸಿದ್ದರು. ಸುಭಾಶನ ಹವಾಯಿಯ ಬಾರು ಹೆಜ್ಜೆಯೊಂದನ್ನ ಕಿತ್ತಿಡುವಾಗ ಹೆಬ್ಬೆಟ್ಟಿನ ಬಳಿ ಕಿತ್ತುಬಂತು. ತಿಂಡಿಯ ಪೊಟ್ಚಣಗಳನ್ನ ಇವನಿಗೆ ದಾಟಿಸಿ ಅವ ಚಪ್ಪಲಿಯ ಬಾರನ್ನ ಮತ್ತೆ ಸವೆದು ಬಿರಿದು ಹೋಗಿದ್ದ ಅಟ್ಟೆಯ ಮುಮ್ಮುಡಿಯ ತೂತಿಗೆ ತನಗಿದು ಹೊಸತೇನಲ್ಲ ಅನ್ನುವ ನಿರ್ಲಿಪ್ತತೆಯಲ್ಲಿ ತೂರ ತೊಡಗಿದ. ಪಾಪ ಅನಿಸಿತವನಿಗೆ. ಮುಂದೆ ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ಸಂಜೆಗತ್ತಲ ಹಾವಳಿಯಿಂದ ಪಾರಾಗಲು ಆಗಷ್ಟೆ ಬೋರ್ಡಿನ ದೀಪ ಹೊತ್ತಿಸುತ್ತಿದ್ದ ಚಪ್ಪಲಿಯಂಗಡಿ ಬಾಟಾ ಪಕ್ಕದಲ್ಲೊಂದು ಕಟ್ಟಡದ ಕೆಳ ಮಹಡಿಯಲ್ಲಿ ಕಂಡಿತು.
ಹಾಗೆಯೆ ಕರೆದರೆ ಅವನ ಆತ್ಮಗೌರವಕ್ಕೆ ಧಕ್ಕೆಯಾಗಬಹುದು ಎಂದು ಗ್ರಹಿಸಿ "ಬಾರಾ ನನಗೊಂದು ಚಪ್ಪಲಿ ತಗೋಬೇಕನ" ಅಂತ ಅವನನ್ನ ಅತ್ತ ತಿರುಗಿಸಿದ. ವಯಸ್ಸಿನಲ್ಲಿ ಕಿರಿಯರಾದರೇನು ಆತ್ಮಗೌರವ ಎಲ್ಲರಿಗೂ ಇದ್ದೆ ಇರುತ್ತೆ. ನಮ್ಮ ಚಿಲ್ಲರೆ ಅಹಂಕಾರಗಳನ್ನ ವಿಜೃಂಭಿಸಿಕೊಳ್ಳಲು ಮಕ್ಕಳದ್ದೆ ಆಗಲಿ ಮನಕ್ಕೆ ಕೀಳರಿಮೆಯ ಭಾವ ದಾಟಿಸಕೂಡದು. ಬೆಣ್ಣೆ ಮಾತುಗಳನ್ನಾಡುತ್ತಲೆ ನಮ್ಮಿಂದಾಗುವ ಸಹಾಯವನ್ನ ಮಾಡಿದಾಗ ಅವರ ಅವಶ್ಯಕತೆಯೂ ಪೂರೈಸೋದರ ಜೊತೆಜೊತೆಗೆ ನಮ್ಮ ಉದ್ದೇಶವನ್ನೂ ಈಡೇರಿಸಿಕೊಳ್ಳಬಹುದು. ಕೇವಲ ಮಕ್ಕಳೊಂದಿಗೆ ಮಾತ್ರ ಅಂತಲ್ಲ ದೀನರು ದಲಿತರು ಭಿಕ್ಷುಕರು ಹೀಗೆ ನಮ್ಮಿಂದ ಸಹಾಯದ ಅಪೇಕ್ಷೆ ಇರುವ ಹಾಗೆಯೆ ಇಲ್ಲದಿರುವ ಯಾರೊಂದಿಗಾದರೂ ಹೀಗೆಯೆ ವರ್ತಿಸಬೇಕು. ಅದೆ ಔದಾರ್ಯವನ್ನ ಮುಕ್ತವಾಗಿ ಪ್ರಕಟಿಸುವ ಸರಳ ಬಗೆ. ಅದನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಅವ ಈಗ ಅದೆ ಬಗೆಯಲ್ಲಿ ವರ್ತಿಸಲಾರಂಭಿಸಿದ್ದ. ಸ್ವತಃ ನಾವೆ ಹೆತ್ತ ಮಕ್ಕಳಾದರೂ ಸರಿ ಹದಿಹರೆಯ ದಾಟಿದ ನಂತರ ನಿಧಾನವಾಗಿ ಅವರನ್ನ ನಮ್ಮ ಸರಿಸಮವಾಗಿ ನಡೆಸಿಕೊಳ್ಳೋದು ವಿವೇಕ. ಆಗ ಅವರಲ್ಲೂ ಸಹ ಒಂದು ಆತ್ಮವಿಶ್ವಾಸದ ಸೆಲೆ ಉಕ್ಕಲು ಅನುವಾಗುತ್ತೆ.
ಚಪ್ಪಲಿ ಅಂಗಡಿಯಲ್ಲಿ ತನಗೊಂದು ಫ್ಲಿಫ್ ಫ್ಲಾಪ್ ಅಗತ್ಯವಿತ್ತು. ಹಾಗೆಯೆ ಸುಭಾಶನಿಗೂ "ಚಪ್ಲಿ ಬೇಕನ? ನೋಡು ತೆಗೋ" ಅಂದ. ಅವ ಅನಿರೀಕ್ಷಿತ ಕೊಡುಗೆಗೆ ವಿಸ್ಮಿತನಾಗಿ ನಾಚಿಕೆಯಿಂದ ಕುಗ್ಗಿ ಹೋದವನಂತೆ "ಬೇಡನಿಯ" ಅಂದ. ಆದರೆ ಕಷ್ಟಪಟ್ಟು ವೈರಾಗ್ಯ ನಟಿಸುತ್ತಾ ಈ ದಾಕ್ಷಿಣ್ಯದ ಮಾತುಗಳನ್ನ ಉಚ್ಛರಿಸುವಾಗ ಅಲ್ಲಿದ್ದ ಹೊಳೆಯುವ ಚಪ್ಪಲಿ ಸಾಲುಗಳಿಂದ ಅವನ ಚಂಚಲಚಿತ್ತ ದೃಷ್ಚಿ ಬೇರೆಡೆ ಹರಿಯಲು ಮಾತ್ರ ವಿಫಲವಾಗಿತ್ತು. "ಇರಲಿ ತೆಗೋ ಅಡ್ಡಿಯಿಲ್ಲ" ಅಂದವನೆ ಅಂಗಡಿಯವನಿಗೆ ಅವನ ಸೈಜಿನ ಒಳ್ಳೆಯ ಸ್ಯಾಂಡೆಕ್ಸ್ ಚಪ್ಪಲಿಯನ್ನ ತೋರಿಸಲು ಹೇಳಿದ. ದಾಕ್ಷಿಣ್ಯದಿಂದಲೆ ನಾಲ್ಕಾರು ಜೊತೆ ಚಪ್ಪಲಿಗಳನ್ನ ಕಾಲಿಗೆ ತೂರಿಸಿ ಇಷ್ಟವಾದದ್ದೊಂದನ್ನ ಖರೀದಿಸುವಾಗ ಅವನ ಮೈ ನಿಜವಾಗಿಯೂ ಅಚ್ಚರಿಯಲ್ಲಿ ನಡುಗುತ್ತಿದ್ದಂತಿತ್ತು. ಉತ್ಕಂಟತೆಯಲ್ಲಿ ಅವನ ಎದೆ ಬಡಿತ ನಗಾರಿಯಂತೆ ಬಡಿದುಕೊಳ್ಳುತ್ತಿತ್ತು ಅನ್ನಿಸುವಂತೆ ನಂಬಲಾರದ ಘಟನೆಗೆ ಸಾಕ್ಷಿಯಾದವನಂತೆ ದೊಡ್ಡ ಕಣ್ಣುಗಳನ್ನ ಬಿಟ್ಟುಕೊಂಡು ನೋಡುತ್ತಿದ್ದ.
ಅದನ್ನ ನೋಡಿಯೂ ನೋಡದಂತೆ ನಟಿಸುತ್ತಾ ಫ್ಲಿಫ್ ಫ್ಲಾಫ್ ಪರಿಕ್ಷಿಸುತ್ತಿದ್ದವನನ್ನ ಯಾರೋ ತಿವಿದು ಕರೆದಂತಾಯಿತು. ನೋಡಿದರೆ ಸುಭಾಶನೆ. "ಏನ?" ಅಂದರೆ "ಮತ್ತೆಂತದಿಲ್ಲˌ ಶಾಲೆಯಲ್ಲಿ ನಾನು ಈ ಸಾರಿ ಸ್ಕೌಟು ಸೇರಲು ಆಸೆ. ಆದ್ರೆ ಶೂ ಇಲ್ಲದೆ ಸೇರ್ಸಿಕೊಳ್ಳೋದಿಲ್ಲ ಅಂದ್ರು ಟೀಚರು. ನನಗೆ ಚಪ್ಲಿ ಬೇಡ ಬದಲಿಗೆ ಒಂದು ಕಪ್ಪು ಶೂವೆ ತೆಗೊಳ್ಳಲ?" ಅಂತ ಬೇಡಿದ. "ಅಲ್ಲ ಮಾರೆಯ ಸ್ಕೌಟಿಂದ ಬಂದ ಮೇಲೆನೂ ಅದೆ ಶೂ ಹಾಕಿಕೊಂಡು ಊರಲಿಯಕ್ಕಾಗ್ತದೇನ? ಹೂಂˌ ಇರಲಿ ನೀನು ಆ ಚಪ್ಪಲಿನೂ ಇಟ್ಕೊ." "ಜೊತೆಗೊಂದು ಕಪ್ಪು ಶೂಸಹ ತೋರಿಸಿ ಇವನಿಗೆ. ಚೂರು ದೊಡ್ಡ ಸೈಜಾದ್ರೂ ಅಡ್ಡಿಯಿಲ್ಲ. ಬೆಳೆಯುವ ಹುಡುಗ ಜಾಸ್ತಿ ಸಮಯ ಉಪಯೋಗಕ್ಕೆ ಬರ್ತದೆ" ಅಂತ ಇವರ ವಿಚಾರ ವಿನಿಮಯವನ್ನೆ ದಿಟ್ಟಿಸುತ್ತಿದ್ದ ಅಂಗಡಿಯವನಿಗೆ ಅಂದು ತನ್ನ ಆಯ್ಕೆಯಲ್ಲಿ ಮತ್ತೆ ತಾನು ಮಗ್ನನಾದ.
ಇವನ ಆಯ್ಕೆ ಮುಗಿದಾಗ ಸುಭಾಶನ ವ್ಯಾಪಾರವೂ ಸಂಪನ್ನವಾಗಿತ್ತು. ಆ ಶೂಗೊಂದು ಬಿಳಿ ಸಾಕ್ಸನ್ನೂ ಕೊಡಿಸಿ "ಅಲ್ಲನ ನಿನ್ನ ತಂಗಿಗೆಷ್ಟು ಪ್ರಾಯ?" ಅಂದವನಿಗೆ "ನಾಲ್ಕು" ಅಂತ ಉತ್ತರ ಬಂತು. ಒಂದು ಅಂದಾಜಿನ ಮೇಲೆ ಅವಳಿಗೂ ಒಂದು ಮಕ್ಕಳ ಚಪ್ಪಲಿ ಪ್ಯಾಕ್ ಮಾಡಲು ಹೇಳಿದ. ಒಂದು ವೇಳೆ ಅದೇನಾದರೂ ಸರಿಯಾದ ಗಾತ್ರದಲ್ಲಿರದಿದ್ದರೆ ನಾಳೆ ಬದಲಿಸಿಕೊಡುವ ನಿಬಂಧನೆ ಹಾಕಿ ವ್ಯಾಪಾರ ಮುಗಿಸಿ ಬಿಲ್ ಮೊತ್ತ ಪಾವತಿಗೆ ತನ್ನ ಕಾರ್ಡ್ ನೀಡಿದ. ಮನೆಯಲ್ಲಿ ಒಂದಕ್ಕಿಂದ ಹೆಚ್ಚು ಕಿರಿಯರಿದ್ದರೆ ಅವರ ನಡುವೆ ಎಂದೂ ಬೇಧಭಾವ ಮಾಡಬಾರದು ಅನ್ನೋದು ಅವನ ನೀತಿ. ಚಪ್ಪಲಿ ವ್ಯಾಪಾರ ಮುಗಿಸಿ ಹೊರಬಂದ ಎಳೆಯನ ಮುಖ ಖುಷಿಯಿಂದ ಮೊರದಗಲವಾಗಿತ್ತು. ಮಾತನಾಡಲು ಬಹುಶಃ ಭಾವಪರವಶನಾಗಿದ್ದ ಅವನಲ್ಲಿ ಪದಗಳಿರಲಿಲ್ಲ. ಅದನ್ನರಿತವನಂತೆ ಹೆಗಲ ಮೇಲೆ ಕೈ ಹಾಕಿಕೊಂಡು ಹಾಗೆಯೆ ಮೌನವಾಗಿ ಅವನೊಂದಿಗೆ ಹೆಜ್ಜೆ ಹಾಕಿದ.
ಅಲ್ಲೆ ಪಕ್ಕದ ಒಂದು ಜ್ಯೂಸು ಸೆಂಟರಲ್ಲಿ ಮಾರುತ್ತಿದ್ದ ಕುಲ್ಫಿಗಳೆರಡನ್ನ ಖರೀದಿಸಿ ತಿನ್ನುತ್ತಾ ಸಾಗಿದವರಿಗೆ ರೈಲ್ವೆ ಸ್ಟೇಷನ್ನಿನ ರಸ್ತೆ ಎದುರಾಯಿತು. ಅವನ ಕಲೋನಿಗೆ ತಿರುಗುವ ರಸ್ತೆಯಲ್ಲಿ ಸುಭಾಶನನ್ನ ಬೀಳ್ಕೊಂಡು ಅವನಿತ್ತಿದ್ದ ಬುತ್ತಿ ಚೀಲವನ್ನ ಹಿಡಿದುಕೊಂಡು ಇವ ತನ್ನ ಕೋಣೆಯ ದಿಕ್ಕಿನತ್ತ ಹೆಜ್ಜೆ ಹಾಕತೊಡಗಿದ. ಕತ್ತಲೆ ಸಾಕಷ್ಟು ಆವರಿಸಿತ್ತು. ಕ್ಯಾಂಟೀನಿನ ನಾಯರನಿಗೆ "ಇನಿಕ್ಯಿ ಞಾನ್ ಇವಿಡೆ ರಾತ್ರಿ ಭಕ್ಷಣಂ ಕಳಿಕ್ಯಾನಿಲ್ಲ ನಾಯರೆˌ ವಿಶಪ್ಪೊನ್ನೂಂ ಇಲ್ಲಿಯಾˌ ವೇರುಂ ಚಾಯ ಮಾತ್ರಂ ಮದಿ ಕೇಟ್ಟೋ" ಅಂದವನುˌ ನಾಯರನ ಸುಟ್ಟರೂ ಬಿಟ್ಟಗಲದ ಚಾಳಿ ನೆನಪಿಸಿಕೊಂಡು "ಮಧುರಂ ಕೊರಚ್ಚಿ ತನ್ನೆˌ ಒರುಪಾಡು ಶರ್ಕರ ಪೋಡಾನ್ ಪಾಡಿಲ್ಲಿಯಾ" ಅನ್ನಲು ಮರೆಯಲಿಲ್ಲ. ನಾಯರ "ಶರಿ ಮಾಶೆ" ಅಂದವನೆ ಚಹಾದೊಂದಿಗೆ "ಕೂಡೆ ಚುಡ ಚುಡ ಪಣಂಪೂರಿಯೊನ್ನು ಕಳ್ಯಿಕಟ್ಟೆ" ಅಂತ ಬಿಸಿ ಬಿಸಿ ಕರಿದ ಬಾಳೆಹಣ್ಣಿನ ಪಣಂಪೂರಿಯೊದನ್ನ ಮುಂದಿರಿಸಿದಾಗ ಸಣ್ಣಗೆ ಆರಂಭವಾದ ಚಳಿಗೆ ಅದನ್ನ ಬೇಡವೆನ್ನಲು ಮನಸಾಗದೆˌ ಒಂದೊಂದೆ ಹಬೆಯಾಡುವ ಅದರ ತುಂಡುಗಳನ್ನ ಬಾಯಿಗೆಸೆದು ಗುಟುಕು ಗುಟುಕಾಗಿ ಚಹಾ ಹೀರ ತೊಡಗಿದ.
ಸುಭಾಶನ ಕಣ್ಣಲ್ಲಿ ಚಪ್ಪಲಿ ಖರೀದಿಸಿದಾಗ ಇದ್ದ ಖುಷಿಯ ಬೆಳಕು ಮತ್ತೆ ನೆನಪಾಯಿತು. ಇಷ್ಟು ಎಳೆ ಪ್ರಾಯದಲ್ಲಿ ಅನಾಥನಾದ ಅವನ ಬಗ್ಗೆ ಮರುಗುವ ಹೊರತು ಇವನಿಗೆ ಇನ್ನೇನು ತಾನೆ ಮಾಡಲು ಸಾಧ್ಯವಿತ್ತು? ಕ್ಷಣಕಾಲವಾದರೂ ಅವನ ಜೀವನದ ಖುಷಿ ಹೆಚ್ಚಿಸಿದ ಕಾರಣಕ್ಕೊಂದು ಆತ್ಮ ಸಂತೃಪ್ತ ಭಾವ ಇವನೊಳಗರಳಿತ್ತು. ಚಹಾ ಮುಗಿಸಿ ಚಪ್ಪಲಿ ಹಾಗೂ ಬುತ್ತಿ ಚೀಲ ಹೊತ್ತು ಮಹಡಿ ಹತ್ತಿದ. ತಡವಾಗಿ ಮಧ್ಯಾಹ್ನದ ಊಟ ಮಾಡಿದ್ದಕ್ಕೋ ಇಲ್ಲಾ ಮಸಾಲೆದೋಸೆಯ ಪ್ರಭಾವವೋ ಒಟ್ಟಿನಲ್ಲಿ ಹೊಟ್ಟೆ ಬಹುತೇಕ ತುಂಬಿಹೋಗಿತ್ತು.
ಗೀಜ಼ರ್ನಿಂದ ಹೊರ ಹರಿದ ಹದ ಬಿಸಿ ನೀರಲ್ಲಿ ಮಿಂದು ಬೆವರು ಮುಕ್ತನಾದವನಿಗೆ ಪಂಡಿತ ಶಿವಕುಮಾರ ಶರ್ಮರ ಸಂತೂರ್ ನಾದದ ಸರಣಿ ಕೈಫೋನಿನಲ್ಲಿ ಹಾಕಿಕೊಂಡು ಚೂರು ಬೆನ್ನುನೋವು ಕಳೆಯಲು ಹಾಸಿಗೆಯ ಮೇಲೆ ಹಾಗೆಯೆ ಅರೆಬತ್ತಲೆ ಅಂಗಾತ ಮಲಗಿದ್ದಷ್ಟೆ ಗೊತ್ತು. ಮರಳಿ. ಎಚ್ಚರವಾದಾಗ ಗಡಿಯಾರ ನಡುರಾತ್ರಿಯ ಹನ್ನೆರಡುವರೆ ತೋರಿಸುತ್ತಿತ್ತು!
*****
ಸಂತೂರು ನಾದ ಮುಗಿದು ಅದೆಷ್ಟೋ ಹೊತ್ತಾಗಿತ್ತು. ವಿವಿಧ ಭಾರತಿಯತ್ತ ಕೈಫೋನಿನ ರೇಡಿಯೋ ತಿರುಗಿಸಿ ಜಿಡ್ಡುಗಟ್ಟಿದ್ದ ಮುಖ ತೊಳೆಯಲು ಎದ್ದ. ಆ ನಿಶ್ಯಬ್ಧ ರಾತ್ರಿಯಲ್ಲೂ ರೇಡಿಯೋದಲ್ಲಿ ಪ್ರಸಾರವಾಗುವ ಹಳೆಯ ಭಾವಪೂರ್ಣ ಗೀತೆಗಳಿಗೆ ಅದರದ್ದೆ ಆದ ಒಂದು ಚುಂಬಕ ಶಕ್ತಿ ಇದೆ. ಅದಕ್ಕವ ಮರುಳಾಗಿದ್ದಾನೆ.
( ಇನ್ನೂ ಇದೆ.)
https://youtu.be/xUNPGuiILXM
No comments:
Post a Comment