20 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೮.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೮.👊







"ವೀರ್ - ಝಾರಾ" ಮೂಲಕ ಯಶ್ ಛೋಪ್ರಾ ಸಿನೆಮಾ ಬಳಗದಲ್ಲಿ ಮೊದಲಿನಿಂದಲೂ ಇದ್ದ ಮದನ್ ಮೋಹನಸಾಬರ ಮಗ ಸಂಜೀವ ಕೋಹ್ಲಿ ಯಶಸ್ವಿಯಾಗಿ ಅವರಪ್ಪನ ಆ ಅಮೂಲ್ಯ ರತ್ನದಂತಹ ಹಾಡುಗಳನ್ನ ಹೊಸತಾಗಿ ಸಿನೆಮಾವೊಂದರಲ್ಲಿ ಅಳವಡಿಸಿ ಗೆದ್ದಿದ್ದರು. ಅದೂ ಸಹ ಸರಿಸುಮಾರು ಸಂಯೋಜನೆಯಾದ ದಿನಕ್ಕಿಂತ ಮೂವತ್ತು ವರ್ಷಗಳ ನಂತರ. ಇದಕ್ಕಿಂತ ಒಳ್ಳೆಯ ಸಕಾಲಿಕ ಉದಾಹರಣೆಯನ್ನ ಕೊಟ್ಟು ಅವರ ಸಂಗೀತದ ಸಮೃದ್ಧಿಯನ್ನ ವಿವರಿಸಲು ಅವನಿಂದಂತೂ ಸಾಧ್ಯವಿಲ್ಲ. ಅಷ್ಟು ಕಾಲಾತೀತ ಹಾಡುಗಳವರವು.


ಎಲ್ಲಿಯ ಅರವತ್ತರ ದಶಕದ ಮದನ ಮೋಹನ್ ಗೀತೆಗಳು? ಅದೆಲ್ಲಿಯ ತೊಂಬತ್ತರ ದಶಕದಲ್ಲಿ ನಿಧಾನವಾಗಿ ಹೊರ ಪ್ರಪಂಚಕ್ಕೆ ಕಣ್ತೆರೆಯತ್ತಿದ್ದ ಪ್ರಸಾದಪುರವೆನ್ನುವ ಪುಟ್ಟ ಊರಿನ ಯಕಶ್ಚಿತ್ ಇವನು? ಒಟ್ಟಿನಲ್ಲಿ ತನ್ನ ಪ್ರಾಯಕ್ಕಿಂತ ಕನಿಷ್ಠ ಕಾಲು ಶತಮಾನ ಹಿಂದಿನ ಹಿಂದಿ ಹಾಡುಗಳ ಮನಮೋಹಕತೆಗೆ ಮದನ್ ಮೋಹನ್ ಸಾಬರ ಮಾಧುರ್ಯಭರಿತ ಹಾಡುಗಳ ಮೂಲಕ ಇವನ ಅರಿವಿನ ಕಣ್ಣುಗಳು ಮೆಲ್ಲಗೆ ತೆರೆದುಕೊಳ್ಳಲಾರಂಭಿಸಿತ್ತು. ದೇಹ ಹೊಸತಾಗಿದ್ದರೂ ಮನಸು ಮಾತ್ರ ಪುರಾತನ ಕಾಲದಲ್ಲಿದ್ದ ವಿಚಿತ್ರ ಮನಸ್ಥಿತಿಯಲ್ಲಿ ಅಂದೂ ಇದ್ದˌ ಇಂದೂ ಇದ್ದಾನೆ.


ಕೆ ಪಿ ಸೈಗಲ್ˌ ಸರ್ದಾರ್ ಮಲಿಕ್ˌ ಹೇಮಂತಕುಮಾರ್ˌ ಚಿತ್ರಗುಪ್ತˌ ಸಿ ರಾಮಚಂದ್ರˌ ಖಯ್ಯಾಂˌ ರವಿˌ ಜೈದೇವ್ˌ ವಸಂತ ದೇಸಾಯಿˌ ಸಚಿನದೇವ ಬರ್ಮನ್ˌ ನೌಷಾದ್ˌ ಶಂಕರ್ - ಜೈಕಿಶನ್ˌ ರವೀಂದ್ರ ಜೈನ್ˌ ಒ ಪಿ ನಯ್ಯರ್ˌ ಮದನಮೋಹನ ಸಾಬ್ ಇವರದ್ದೆಲ್ಲಾ ಸಹ ಬೇರೆಯೆ ಕೌಶಲ್ಯದ ಸಂಗೀತ. ಒಬ್ಬೊಬ್ಬರದೂ ವಿಭಿನ್ನ ಶೈಲಿ. ಅದನ್ನ ನಿರಂತರವಾಗಿ ಕೇಳುವ ಹವ್ಯಾಸವಿಲ್ಲದಿದ್ದರೆ ಗ್ರಹಿಸೋದು ಕಷ್ಟ. ಗ್ರಹಿಕೆಯ ಪರಿಧಿ ವಿಸ್ತರಿಸಿದ ಮದನಮೋಹನ ಸಾಬರ ಹಾಡುಗಳಿಗೆ ಅವನು ಎಷ್ಟು ಋಣಿಯಾಗಿದ್ದರೂ ಸಾಲದು. ಸಿನೆಮಾ ಸಂಗೀತದ ವಿಷಯದಲ್ಲಿ ಅವನ ಆಸಕ್ತಿ ಇನ್ನಷ್ಟು ಆಳವಾಗಿಸಿದ್ದು ಅವರ ಗೀತೆಗಳ ಲಾಲಿತ್ಯವಲ್ಲದೆ ಮತ್ತಿನ್ನೇನೂ ಅಲ್ಲ.

ಬೆಳೆದು ನಿಂತ ಮೇಲೆ ಇಷ್ಟವಾಗಬೇಕಿದ್ದ ಹಾಡುಗಳು ಎಳವೆಯಲ್ಲೆ ಆಪ್ತವೆನಿಸೋದು ಒಂದು ವಿಶೇಷ ಗುಣವೋ ಇಲ್ಲಾ ಅದೊಂದು ಮಾನಸಿಕ ಊನವೋ ಅವನಿಗೆ ಖಚಿತವಿಲ್ಲ. ಆದರೆ ಅವನ ಸಮಕಾಲೀನವಲ್ಲದ ಆ ಹಳೆಯ ಸೊಗಡಿನ ಅರ್ಥಗರ್ಭಿತ ಹಾಡುಗಳನ್ನ ಆಲಿಸುವಾಗಲೆಲ್ಲಾ ಪೂರ್ವಜನ್ಮದ ಪ್ರತಿಧ್ವನಿಯೊಂದು ಮನಸಿನಾಳದಿಂದ ಅನುರಣಿಸಿ ಬರುವ ಭಾವದಲ್ಲಿ ಹುದುಗಿ ಹೋಗುತ್ತಿದ್ದ. ಅವುಗಳ ಭಾವ ಲಹರಿಗೆ ಸಹಜವಾಗಿ ಅವನ ಮನದ ಭಾವತರಂಗಗಳು ಅನುರಣಿಸುತ್ತಿದ್ದವು. ಒಂಥರಾ ಮಧುರ ಪ್ರಚೋದನೆಯನ್ನ ಮೌನದಲ್ಲವು ಅವನೊಳಗೆ ಹುಟ್ಟಿಸುತ್ತಿದ್ದವು.


*****

ಹುಟ್ಟಾ ಪುಂಡನೆಂದೆ ಮನೆ ಮಂದಿಯೆಲ್ಲಾ ತೀರ್ಮಾನಿಸಿದ್ದ ಕಾರಣˌ ಅಷ್ಟೆಲ್ಲಾ ಹಾಡಿನ ಹುಚ್ಚಿದ್ದರೂ ಸಹ ಮನೆಯ ಅಮೂಲ್ಯ ವಸ್ತುಗಳೆಂದೆ ಪರಿಗಣಿತವಾಗಿದ್ದ ರೇಡಿಯೋವನ್ನಾಗಲಿˌ ಕಾಯಿಲ್ ಇರುವ ವಿದ್ಯುತ್ ಸ್ಟವನ್ನಾಗಲಿˌ ಟೂ ಇನ್ ವನ್ನನ್ನಾಗಲಿˌ ಅದರ ಹಿಂದೆ ಹಿಂದೆಯೆ ತರಲಾಗಿದ್ದ ಡಯನೋರಾ ಟಿವಿˌ ಸುಮಿತ್ ಮಿಕ್ಸರ್ˌ ರ್ಯಾಲಿ ಟೇಬಲ್ ಫ್ಯಾನು ಅಥವಾ ಮಾವಂದಿರು ಬಿಟ್ಟು ಹೋಗಿದ್ದ ಹರ್ಕ್ಯುಲಸ್ ಸೈಕಲ್ಲನ್ನಾಗಲಿ ಇದ್ಯಾವುದನ್ನೂ ಮುಟ್ಟಲು ಅಥವಾ ಚಲಾಯಿಸಲು ಅವನಿಗೆ ಅನುಮತಿ ಇರಲಿಲ್ಲ. ಇದರಲ್ಲಿ ಯಾವುದೆ ವಸ್ತುವನ್ನ ಇವನು ಮುಟ್ಟಿದರೆ ಸಾಕು ಅವು ಕೂಡಲೆ ಕೆಟ್ಟು ಬಿಡುತ್ತವೆ ಅಂತ ಮನೆಮಂದಿಯೆಲ್ಲ ಬಲವಾಗಿ ನಂಬಿದ್ದಷ್ಟೆ ಅಲ್ಲದೆ ಇವನನ್ನೂ ನಂಬಿಸಿಬಿಟ್ಟಿದ್ದರು! ಹೀಗಾಗಿ ಕದ್ದುಮುಚ್ಚಿ ಯಾರೂ ನೋಡದ ಹೊತ್ತಲ್ಲಿ ಮಾತ್ರ ವಯೋಸಹಜ ಪ್ರಚೋದನೆಗೊಳಗಾಗಿ ಅವುಗಳನ್ನ ಮುಟ್ಟಿಯೋ ಇಲ್ಲಾ ಸವರಿಯೋ ತೃಪ್ತಿ ಪಟ್ಟುಕೊಳ್ಳೋದಷ್ಟೆ ಅವನಿಗೆ ಸಾಧ್ಯವಾಗುತ್ತಿದ್ದುದು. ಹಾಗೆ ಕಳ್ಳತನದಲ್ಲಿ ಮುಟ್ಟಿದವುಗಳು ಬಹುಶಃ ತನ್ನ ಸ್ಪರ್ಷದಿಂದ ಕೆಟ್ಟು ಹೋಗಿರಬಹುದುˌ ಮನೆಯವರಿಗೆ ಈ ವಿಷಯ ಗೊತ್ತಾದರೆ ತನ್ನ ಪರಿಸ್ಥಿತಿ ಹದಗೆಡಬಹುದು ಅನ್ನುವ ಭೀತಿಯಿಂದಲೆ ಅವುಗಳನ್ನ ಮನೆಯ ಹಿರಿಯರ್ಯಾರಾದರೂ ಮರಳಿ ಚಲಾಯಿಸುವವರೆಗೆ ಮಳ್ಳನಂತೆ ಕಾಯುತ್ತಿದ್ದ. ಯಾವುದೆ ತಕರಾರಿಲ್ಲದೆ ಎಂದಿನಂತೆ ಅವು ಚಾಲನೆಗೊಂಡಾಗ ದೊಡ್ಡ ಗಂಡಾಂತರವೊಂದರಿಂದ ಪಾರಾದ ಒಂದು ನೆಮ್ಮದಿಯ ನಿಟ್ಟುಸಿರು ಅರಿವಿಲ್ಲದಂತೆಯೆ ಅವನಿಂದ ಹೊರಹೊಮ್ಮುತ್ತಿತ್ತು.

ಅವರೆಲ್ಲರ ಆ ಗಟ್ಟಿ ನಿಲುವು ಪೂರ್ತಿ ಸುಳ್ಳೇನೂ ಆಗಿರಲಿಲ್ಲ. ದೀಪಾವಳಿಯ ಒಂದು ದಿನ ಪಟಾಕಿ ಹಚ್ಚಲು ಸುರುಸುರುಬತ್ತಿಯೊಂದನ್ನ ಉರಿಸಿ ತರಲು ವಿದ್ಯುತ್ ಒಲೆ ಹಚ್ಚಿ ಅದರ ಕಾಯಿಲ್ ಕೆಂಡದಂತೆ ಕೆಂಪಾದಾಗ ನೇರವಾಗಿ ಆ ಸುರುಸುರುಬತ್ತಿಯನ್ನ ಅದಕ್ಕಿಟ್ಟಿದ್ದ! ಹೊಡೆದ ವಿದ್ಯುದಘಾತ ಎತ್ತಿ ಅಡುಗೆ ಕೋಣೆಯ ಮತ್ತೊಂದು ಮೂಲೆಗೆ ಹೋಗಿ ಬೀಳುವಂತೆ ಬಿಸಾಡಿತು ನೋಡಿ! ಕೆಟ್ಟ ಮೇಲೆ ಬುದ್ಧಿ ತಾನೆ ತಾನಾಗಿ ಬಂತವನಿಗೆ. ಮುಟ್ಟಬಾರದು ಅಂತ ಹೇಳಿದ ಮೇಲೂ ಕದ್ದುಮುಚ್ಚಿ ಮಾಡಿದ್ದ ಅಪರಾಧ ಅದಾಗಿದ್ದರಿಂದ ಯಾರೊಂದಿಗೂ ಆದ ನೋವನ್ನ ಹೇಳಿಕೊಳ್ಳುವಂತೆಯೂ ಇರಲಿಲ್ಲ. ಅವಡುಗಚ್ಚಿಕೊಂಡು ಆದ ಸಂಕಟವನ್ನ ಕಮಕ್-ಕಿಮಕ್ ಅನ್ನದೆ ಸಹಿಸಿಕೊಂಡ. 

ಆದರೂ ಒಂಥರಾ ಕೈಕಟ್ಟಿದಂತಹ ಈ ಕಠಿಣ ನಿರ್ಬಂಧಗಳು ಅವನಿಗೆ ಚೂರೆಚೂರೂ ಇಷ್ಟವಾಗುತ್ತಿರಲಿಲ್ಲ. ಬೇರೆ ಇನ್ಯಾವ ವಸ್ತುಗಳಲ್ಲೂ ಅವನಿಗೆ ಆಸಕ್ತಿ ಮೊಳೆತಿರಲಿಲ್ಲ. ಆದರೆ ತಾನೂ ರೇಡಿಯೋ ಕಿವಿ ಹಿಂಡಿ ಧಾರವಾಡˌ ಮಂಗಳೂರುˌ ಬೆಂಗಳೂರುˌ ಭದ್ರಾವತಿ ಅಂತ ಅದನ್ನ ಸರ್ಕೀಟು ಹೊರಡಿಸಬೇಕು ಅನ್ನುವ ಆಸೆ ಅವನಿಗೂ ಇತ್ತು. ಆದರೆ ಅದಕ್ಕೆ ಮುಕ್ತ ಅವಕಾಶವಿರಲಿಲ್ಲ ಅಷ್ಟೆ. ಅವನ ಆಸಕ್ತಿಯಿದ್ದದ್ದೂ ಸೀಮಿತ ವಸ್ತುಗಳ ಮೇಲೆ ಮಾತ್ರ. ಮುಖ್ಯವಾಗಿ ರೇಡಿಯೋ ಹಾಗೂ ಸೈಕಲ್. ಅದರಲ್ಲೂ ಉಪಯೋಗಿಸುವವರಿಲ್ಲದೆ ಸೈಕಲ್ ಮಾರಿದ ನಂತರ ಆ ಮನೆಯಲ್ಲಿ ರೇಡಿಯೋ ಒಂದೆ ಅಲ್ಲುಳಿದಿದ್ದ ಅವನ ಪಾಲಿನ ಕಣ್ಮಣಿ. 


ಕದ್ದುಮುಚ್ಚಿಯಷ್ಟೆ ಚೂರುಪಾರು ಮುಟ್ಟಿಯೋ ಸವರಿಯೋ ಆಗಾಗ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಮನದಾಸೆಯನ್ನ ಈಡೇರಿಸಿಕೊಳ್ಳಲು ಸೆಣೆಸುತ್ತಿದ್ದ. ಅಪ್ಪಿತಪ್ಪಿ ಈ ಕ್ರೈಮು ಅವನ ಚಿಕ್ಕಮ್ಮಂದಿರ ಗೃಧ್ರ ದೃಷ್ಟಿಗೇನಾದರೂ ರೆಡ್ ಹ್ಯಾಂಡಾಗಿ ಸಿಕ್ಕಿ ಹಾಕಿಕೊಂಡು ಬಿಟ್ಟರೆ ದೊಡ್ಡ ಪ್ರಹಸನವೆ ನಡೆದುˌ ಯಾವ ನ್ಯಾಯವಾದ ವಿಚಾರಣೆಯನ್ನೂ ನಡೆಸದೆ ಸರ್ವಾನಮತದಿಂದ ಅಪರಾಧಿಯೆಂದು ತೀರ್ಮಾನಿಸಲಾಗುತ್ತಿದ್ದ ಅವನನ್ನ ಮುಲಾಜಿಲ್ಲದೆ ಮನೆಮಂದಿಯೆಲ್ಲ ತಮ್ಮ ತಮ್ಮ ಮೊನಚು ಮಾತಿನಿಂದಲೆ ಶೂಲಕ್ಕೇರಿಸಿ ತಲೆಯನ್ನ ಮೊಟಕಿ ಮೊಟಕಿಯೆ ಬುದ್ಧಿ ಕಲಿಸಲು ಹವಣಿಸುವುದು ಖಾತ್ರಿಯಿತ್ತು.


*****

ಕಾಲಾಂತರದಲ್ಲಿ ತನ್ನ ಭವಿಷ್ಯ ಬದಲಾದಂತೆಯೆˌ ಕೇರಳ ಜೊತೆಜೊತೆಗೆ ಭಾರತದ ಭವಿಷ್ಯವನ್ನೂ ಸಹ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಂದೊಮ್ಮೆ ಕೇರಳದ ದಕ್ಷಿಣ ತೀರ ಕುಲಚೆಲ್ಲಿನಲ್ಲಿ ಬರೊಬ್ಬರಿ ಇಪ್ಪತ್ತೊಂದು ದಿನ ನಡೆದ ನಿರ್ಣಾಯಕ ಯುದ್ಧದಲ್ಲಿ ಅಂದಿನ ಜಾಗತಿಕ ನೌಕಾದಳಗಳಲ್ಲೆ ಅತ್ಯಾಧುನಿಕವೆನಿಸಿದ್ದ ಡಚ್ ಈಸ್ಟ್ ಇಂಡಿಯಾ ಕಂಪನಿಯ ಸೇನೆಯನ್ನ ಆಗ ತಿರುವಾಂಕೂರನ್ನ ಆಳುತ್ತಿದ್ದ ರಾಜ ಮಾರ್ತಾಂಡ ವರ್ಮ ನಿರ್ಣಾಯಕವಾಗಿ ಮಣಿಸಿ ಕೇರಳದಿಂದ ಶಾಶ್ವತವಾಗಿ ನೆಲೆ ಕಿತ್ತು ಅವರು ಸಿಲೋನಿಗೆ ಪಲಾಯನ ಮಾಡುವಂತೆ ಮಾಡಿರದಿರುತ್ತಿದ್ದರೆ ಬಹುಶಃ ಭಾರತ ಇಂದು ಬ್ರಿಟಿಷ್ ವಸಾಹತಾಗಿರದೆ ಡಚ್ ವಸಾಹತಾಗಿರುತ್ತಿತ್ತು. ಹಾಗೂˌ ನಾವು ಭಾರತೀಯರೆಲ್ಲ ಇಂದು ಇಂಗ್ಲೀಷಿನ ಮೋಹಕ್ಕೆ ಮರುಳಾದಂತೆ ಬಹುಶಃ ಡಚ್ ಭಾಷೆಯ ಮೋಹದ ಗೀಳಿಗೆ ಸಿಕ್ಕುಹಾಕಿಕೊಂಡು ಮಾತು ಮಾತಿನ ನಡುವೆ ಇಂಗ್ಲಿಷ್ ಬಳಸುವಂತೆ ಡಚ್ ಬಳಸುವ ಎಲ್ಲಾ ಅಪಾಯಗಳೂ ಇದ್ದವು. 

೧೭೪೧ರ ಅಗೋಸ್ತು ತಿಂಗಳಿನ ಮುಂಗಾರು ಮಳೆಯ ಕಾಲದಲ್ಲಿ ಡಚ್ಚರ ಹೆಡೆಮುರಿ ಕಟ್ಟಿ ಮಾರ್ತಾಂಡ ವರ್ಮ ಅವರನ್ನ ಸಿಲೋನಿಗೆ ಅಟ್ಟಿದ್ದˌ ಅವನ ಬೆದರಿಕೆ ಹೇಗಿತ್ತೆಂದರೆ ಮತ್ತೆಂದೂ ಡಚ್ಚರು ಭಾರತದತ್ತ ತಿರುಗಿ ನೋಡಲಿಲ್ಲ.

( ಇನ್ನೂ ಇದೆ.)


https://youtu.be/zqDSHFG9Xm8

No comments: