"ಪಾಸ್ ಆಈಏ ಕೇ ಹಮ್ ನಹೀಂ ಆಏಂಗೇ ಬಾರ್ ಬಾರ್ˌ
ಬಾಹೇಂ ಗಲೇಂ ಮೈ ಡಾಲ್ ಕೇ
ಹಮ್ ರೋಲೇಂ ಜಾ಼ರ್ ಜಾ಼ರ್./
ಆಂಖೋಂ ಸೇ ಫಿರ್ ಯಹಂ ಪ್ಯಾರ್ ಕೀ ಬರಸಾತ್ ಹೋ ನಾ ಹೋˌ
ಶಾಯದ್ ಫಿರ್ ಇಸ್ ಜನಂ ಮೈ
ಮುಲಾಕಾತ್ ಹೋ ನಾ ಹೋ.//"
ಇನ್ನೇನು ಬೆಳಕು ಹರಿಯಲು ಬಾಕಿಯಿದ್ದದ್ದು ಒಂದೆರಡು ಘಳಿಗೆಯಷ್ಟೆ. ಕೋಲ ನೋಡಿ ಮುಗಿಸಿ ಅರೆನಿದ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಹುಡುಗನನ್ನು ಅವನ ಮನೆಗೆ ಮುಟ್ಟಿಸಿˌ ಮತ್ತಷ್ಟೆ ದೂರದ ಮರು ಹಾದಿಯನ್ನ ಅನಿವಾರ್ಯವಾಗಿ ಸವೆಸಿ ಕೋಣೆಗೆ ಮರಳಿದವನಿಗೆ ಅಷ್ಟು ದೂರ ನಡೆದದ್ದಕ್ಕೋ ಏನೋ ಈ ನಸು ಚಳಿಯ ವಾತಾವರಣದಲ್ಲೂ ತಾನು ತುಸು ಬೆವರಿರುವುದು ಅರಿವಾಯಿತು. ಮೈ ಅಂಟಂಟಾಗಿದೆ ಅನ್ನಿಸಿ ಅರೆಬೆಚ್ಚಗೆ ಗೀಸರಿನಾಚೆ ಚಿಮ್ಮಿದ ನೀರಲ್ಲಿ ಹಿತವೆನಿಸುವಷ್ಟು ಮಿಂದ. ಮೊಬೈಲಿನಿಂದ ಆಲಿಂಡಿಯಾ ರೇಡಿಯೋದ ಯಾವುದೋ ಕೇಂದ್ರವೊಂದು ಆ ಹೊತ್ತಿನಲ್ಲೂ "ಲಗ್ ಜಾ ಗಲೇ" ಉಲಿಯುತ್ತಿತ್ತು. ಕೇಳುತ್ತಿದ್ದಂತೆ ಮನಸಿಗೆ ಅನಿರೀಕ್ಷಿತ ಮುದದ ಗಾಳಿ ಸೋಕಿದಂತಾಗಿ ತಾನೂ ಸಹ ಜೊತೆಜೊತೆಗೆ ಗುನುಗಿಕೊಳ್ಳ ತೊಡಗಿದ.
ಬಹಳ ದಿನಗಳ ನಂತರ ಭಾವಗಳ ದಭದಭೆ ಮನಸಿನೊಳಗಿಂದ ಧುಮುಕಲಾರಂಭಿಸಿ ಅವಕ್ಕೆಲ್ಲಾ ಅಕ್ಷರಗಳ ಅಂಗಿ ತೊಡಿಸಿ ಉಕ್ಕುತ್ತಿರುವ ಮನೋಲಹರಿಯನ್ನ ಬರೆದಿಡಲು ಕೂತ. ಈ ಹೊತ್ತಲ್ಲಿ ಪ್ರಪಂಚದ ಆ ಭಾಗದಲ್ಲಿ ಎಷ್ಟು ಹೊತ್ತಾಗಿರಬಹುದು? ಅವಳಲ್ಲಿ ಈ ಹೊತ್ತು ಏನು ಮಾಡುತ್ತಿರಬಹುದು? ಪದೆ ಪದೆ ನನಗಾಗುವಂತೆ ಬಿಟ್ಟು ಹೋಗಿರೋ ಜೀವಕ್ಕೂ ಇಷ್ಟೆ ತೀವೃವಾಗಿ ನನ್ನ ನೆನಪಾಗುತ್ತದೆಯೆ? ಅಥವಾ ನನ್ನ ನೆನಪುಗಳ ಜಾತ್ರೆಯಲ್ಲಿ ನಾನೊಬ್ಬನೆ ಅಂಡಲೆಯುತ್ತಿದ್ದೇನೆಯೆ! ಹೀಗೆಲ್ಲ ಅನಿಸಿ ಹಿಡಿತ ಮೀರಿ ಕಣ್ಣು ತುಂಬಿ ಬಂತು. ಬಹುಶಃ ಅವಳ ನೆನ್ನೆಗಳಲ್ಲಷ್ಟೆ ಹಾಜರಿದ್ದ ನನ್ನ ಉಪಸ್ಥಿತಿ ಅವಳದ್ದೆ ಬದಲಾಗಿರುವ ಇಂದಿನಲ್ಲಿಲ್ಲ ಅನ್ನುವ ವಾಸ್ತವ ಎದುರಾದಾಗಲೆಲ್ಲಾ ಮನಸು ಹಿಂಡಿದಂತಾಗುತ್ತದೆ. ಪ್ರಪಂಚದಲ್ಲಿ ಅತ್ಯಂತ ಹೇಯ ವೇದನೆ ತರುವ ಭಾವವೊಂದೆ. ತನಗಿಂತಲೂ ಹೆಚ್ಚಾಗಿ ತಾನು ಪ್ರೀತಿಸಿದ್ದ ಜೀವದ ಇಂತಹ ನಿರ್ದಯ ನಡುವಳಿಕೆ ಹಾಗೂ ಶಾಶ್ವತ ತಿರಸ್ಕಾರ. ಅವನ ಪಾಲಿನ ಕಠೋರ ಸತ್ಯ ಅದೆ ತಾನೆ? ಅಂತ ಸಮಯದಲ್ಲೆಲ್ಲಾ ಆಗುವಂತೆ ಅವಳ ಉಪಸ್ಥಿತಿಯನ್ನ ಪರಿಭಾವಿಸಿಕೊಂಡು ಮನದಾಳದ ದುಗುಡಗಳೆನ್ನೆಲ್ಲಾ ನಿವೇದಿಸಿಕೊಳ್ಳುವಂತೆ ಮಾತಾಡ ತೊಡಗಿದ. ಪಕ್ಕದಲ್ಲೆ ಅವಳಿದ್ದಾಳೆ ಹಾಗೂ ಅವೆಲ್ಲವನ್ನೂ ತನ್ಮಯಳಾಗಿ ಕಿವಿಗೊಟ್ಟು ಕೇಳಿಸಿಕೊಳ್ಳುತ್ತಿದ್ದಾಳೆ ಅನ್ನುವ ಹಾಗಿತ್ತು ಆ ಮಾತುಕಥೆಯ ಧಾಟಿ. ಅತಿ ಭಾವುಕನಾದಾಗ ಒಬ್ಬೊಬ್ಬನೆ ಇಬ್ಬರಿರುವೆವೆಂದೆ ಭಾವಿಸಿಕೊಂಡು ಮಾತನಾಡುವುದು ಅವನ ಮನೋವೈಕಲ್ಯ. ಹಾಗೆ ಮಾತನಾಡಿಯಾದರೂ ಮನದ ಭಾರಗಳನ್ನ ಇಳಿಸಿಕೊಳ್ಳದೆ ಒಳಗೊಳಗೆ ಅದುಮಿಟ್ಟರೆˌ ಅವನ ಮಾನಸಿಕ ಸ್ವಾಸ್ಥ್ಯ ಕೆಡುವ ಅಪಾಯವಿತ್ತು.
ಹೊರಗಡೆ ಹಕ್ಕಿಗಳ ದಿನದಾರಂಭದ ಚಿಲಿಪಿಲಿ ನಿನಾದ ಶುರುವಾಗ ತೊಡಗಿದಂತೆ ಕತ್ತಲ ಕಸ ಗುಡಿಸುತ್ತಾ ಸೂರ್ಯ ರಶ್ಮಿ ನೆಲವನ್ನೆಲ್ಲಾ ಆವರಿಸಿಕೊಂಡು ಬರಲಾರಂಭಿಸಿತು. ಈಗ ಸ್ಪಲ್ಪ ಚಳಿಯ ಅನುಭವವಾಯಿತು ಅವನಿಗೆ. ಕೆಳಗಡೆ ನಾಯರ್ ಕ್ಯಾಂಟೀನ್ ತೆರೆದಿರಬಹುದುˌ ಹೋಗಿ ಒಂದು ಪ್ಲೇಟ್ ಅಪ್ಪ ಮೊಟ್ಟೆಕರಿ ತಿಂದುˌ ಸಕ್ಕರೆಯ ರಾಶಿ ಸುರಿದರೇನೆ ಅದು "ಸ್ಟ್ರಾಂಗ್ ಚಾಯ" ಅಂತ ಬಲವಾಗಿ ನಂಬಿರುವ ನಾಯರನಿಗೆ ಮತ್ತೆ ಮತ್ತೆ "ನಾಯರೆ ಮಧುರಂ ಕೊರಚ್ಚಿ" ಅಂತ ಒತ್ತಿ ಹೇಳಿ ಮಾಡಿಸುವ ಚಹಾ ಹೀರಿ ಬಂದು ಮಧ್ಯಾಹ್ನದ ತನಕ ಹಾಸಿಗೆ ಮೇಲೆ ಬಿದ್ದುಕೊಂಡು ಸುಧಾರಿಸಿಕೊಳ್ಳಬೇಕೆಂದು ನಿರ್ಧರಿಸಿದ. ರಾತ್ರಿಯಿಡಿ ನಿಶಾಚರನಾಗಿ ಎದ್ದಿದ್ದರಿಂದ ಹಗಲಲ್ಲಿ ಮಲಗಿ ಏಳದೆ ವಿಧಿಯಿರಲಿಲ್ಲ.
*****
ಈ ಮಲಯಾಳಿಗಳ ಬಂಪರ್ ಬೆಳೆ ತೆಗೆಯುವ ತಿಕ್ಕಲಾಟದಿಂದ ಅವರದ್ದೆ ಕಾಲುಬುಡಕ್ಕೆ ಅವರವರವೆ ಕೊಡಲಿಯ ಪೆಟ್ಟು ಬಲವಾಗಿ ಬಿದ್ದಿದೆ. ಇದು ಅರಿವಾಗುವಾಗ ಮಾತ್ರ ತಡವಾಗಿರುವುದು ದುರಂತ.
ಇವತ್ತು ತಲಾವಾರು ಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತ ಹೆಚ್ಚು ಅರ್ಬುದ ರೋಗಿಗಳಿರೋ ದಕ್ಷಿಣದ ಅಗ್ರಗಣ್ಯ ರಾಜ್ಯ ಕೇರಳ! ಪೂರ್ತಿ ಭಾರತದ ಲೆಕ್ಖ ಹಿಡಿದರೆ ಪಂಜಾಬಿಗಳಷ್ಟೆ ಇವರಿಗೆ ಈ ವಿಷಯದಲ್ಲಿ ಪೈಪೋಟಿ ಕೊಡುವ ಸಾಮರ್ಥ್ಯ ಹೊಂದಿರುವವರು. ಪಂಜಾಬಿಗೆ ಕ್ಯಾನ್ಸರಿನ ಶಾಪ ತಗುಲಿಸಿದ್ದು ಹಸಿರು ಕ್ರಾಂತಿಯೆನ್ನುವ ಸರಕಾರಿ ಭ್ರಾಂತಿಯ ಹಿನ್ನೆಲೆಯಲ್ಲಿ ಸುರಿಯಲಾದ ರಾಸಾಯನಿಕಗಳ ರಾಶಿ. ಅದೆ ಕೇರಳದ ವಿಷಯಕ್ಕೆ ಬಂದರೆ ಇಲ್ಲೂ ಹೆಚ್ಚು ಕಡಿಮೆ ಅದೆ ಕಥೆˌ ಆದರೆ ಇಲ್ಲಿ ಸರಕಾರದ್ದೇನಿದ್ದರೂ ಕೇವಲ ಕೆಡಲು ಪರೋಕ್ಷ ಕುಮ್ಮಕ್ಕು ಮಾತ್ರ ಇದ್ದದ್ದು. ಪ್ರತ್ಯಕ್ಷವಾಗಿ ಹಾಳಾಗಲು ಕಾತರಿಸಿ ಹಗಲು ಕಂಡ ಹೊಂಡಕ್ಕೆ ಹೋಗಿ ಹಗಲೆ ಬಿದ್ದು ಅಸು ನೀಗುತ್ತಿರುವ ಅತಿಬುದ್ಧಿವಂತ ಪ್ರಾಣಿಗಳು ಇದೆ ಮಲಯಾಳಿಗಳು.
ಎರಡೂ ರಾಜ್ಯಗಳಲ್ಲಿ ಸರಿಸಮಾನವಾಗಿ ಕ್ಯಾನ್ಸರಿನ ಅನಿಷ್ಟ ಹೊತ್ತು ತಂದ ಕ್ಷೇತ್ರ ಕೃಷಿಗೆ ಸಂಬಂಧಿಸಿದ್ದು ಅನ್ನೋದು ಮಾತ್ರ ಇಲ್ಲಿ ಗಮನಾರ್ಹ ಹಾಗೂ ಸಮಾನ ಅಂಶ. ಮತ್ತಿದು ಆತಂಕಕಾರಿ ವಿಷಯ ಸಹ. ನ್ಯಾಯವಾಗಿ ನೋಡಿದರೆˌ ಯಾವುದೋ ಒಂದನ್ನ ಸಾಧಿಸುವ ಭರದಲ್ಲಿ ಮತ್ಯಾವುದೋ ಅಮೂಲ್ಯವಾದ ಇನ್ನೊಂದನ್ನ ಕಳೆದುಕೊಂಡು ನರಳುವುದು ಜಾಣತನವ? ಅನ್ನುವ ಆತ್ಮಾವಲೋಕನಕ್ಕೆ ಇದು ಮಲಯಾಳಿಗಳನ್ನ ನೂಕಬೇಕಿತ್ತು. ಆದರೆ ಇಂದಿಗೂ ಇಲ್ಲಾಗುತ್ತಿರುವುದು ಮಾತ್ರ ಇದಕ್ಕೆ ತದ್ವಿರುದ್ಧ! ಮಲಯಾಳಿಗಳಿಗೆ ಆಗಿರುವ ಅನಾಹುತಗಳಿಂದ ಇನ್ನೂ ಬುದ್ಧಿ ಬಂದ ಹಾಗಿಲ್ಲ.
ಅರಿತೂ ಅರಿತೂ ಹೀಗೆ ಹಾಳಾಗಲು ತಮ್ಮ ವಿರುದ್ಧ ತಾವೆ ಹಿಕಮತ್ತು ಮಾಡುವವರ ಹಿತ ಕಾಯಲು ಬಹುಶಃ ಯಾವ ಮುತ್ತಪ್ಪನಿಂದಲೂ ಸಾಧ್ಯವಿಲ್ಲ. ಅದಿನ್ಯಾವ ಪಿಲಿಚಾಮುಂಡಿˌ ವಿಷ್ಣುಮೂರ್ತಿˌ ತಂಬುರಾನ್ˌ ಕುಟ್ಟಿಚ್ಚಾತ್ತಾನ್ ಬಂದರೂ ಇಂತಹ ಆತ್ಮಘಾತುಕ ಸಮುದಾಯವನ್ನ ವಿನಾಶದಿಂದ ಕಾಪಾಡಿ ಉಳಿಸಲು ಸಾಧ್ಯವಾಗುವುದಿಲ್ಲ. ಮಲಯಾಳಿಗಳ ಭವಿಷ್ಯ ಅವರ ಬುದ್ಧಿವಂತಿಕೆಯಲ್ಲೆ ಅಡಗಿದೆ ಬೇರೆ ಇನ್ನೆಲ್ಲೂ ಇಲ್ಲ.
*****
ಕೇರಳದ ಭೌಗೋಳಿಕ ಸ್ಥಾನಮಾನ ಅದರ ಸಾಮಾಜಿಕ ಸ್ಥಿತ್ಯಂತರದಲ್ಲಿ ಪ್ರಮುಖ ಪಾತ್ರವನ್ನ ಸಹಜವಾಗಿ ಕಾಲಕಾಲಕ್ಕೆ ರೂಪಿಸಿದೆ. ಈಗಲೂ ಸಹ ಭೌಗೋಳಿಕತೆಯ ಪ್ರಾಮುಖ್ಯತೆಯೆ ಅದರ ಹಣೆಬರಹವನ್ನು ನಿರ್ದೇಶಿಸುತ್ತಲೂ ಇದೆ. ಇದರಲ್ಲಿ ಮಲಯಾಳಿಗಳಿಗೆ ಲಾಭವಾದಷ್ಟೆ ನಷ್ಟವೂ ಆಗಿರುವುದು ಸುಸ್ಪಷ್ಟ.
ನೈಋತ್ಯ ಭಾರತದ ಹೆಬ್ಬಾಗಿಲಾಗಿರುವ ಕೇರಳದ ವಿಶಾಲ ಕರಾವಳಿ ತೀರಗಳನ್ನ ಬಳಸಿಕೊಂಡೆ ವ್ಯಾಪಾರಿ ನೌಕೆಗಳು ಪೂರ್ವ ಏಷ್ಯಾದ ನಾಡುಗಳ ಹಾಗೂ ಯುರೋಪು - ಆಫ್ರಿಕಾಗಳ ನಡುವಿನ ವಾಣಿಜ್ಯ ವ್ಯವಹಾರ ನಡೆಸಬೇಕಿತ್ತು. ಸಹಜವಾಗಿ ಅವು ಕೇರಳದ ರೇವು ಪಟ್ಟಣಗಳಲ್ಲಿ ಹಲವಾರು ಕಾರಣಗಳಿಂದ ಲಂಗರು ಹಾಕುವುದು ಪದ್ಧತಿಯಾಗಿತ್ತು. ಅಷ್ಟಲ್ಲದೆˌ ಪಶ್ಚಿಮ ದೇಶಗಳಲ್ಲಿ ಅಪಾರ ಬೇಡಿಕೆಯಿದ್ದ ಆದರೆ ಅಲ್ಲಿ ಬೆಳೆಯಲಾಗದ ಅಕ್ಕಿಯಂತಹ ಆಹಾರ ಧಾನ್ಯಗಳುˌ ದಾಲ್ಚಿನ್ನಿˌ ಏಲಕ್ಕಿˌ ಲವಂಗˌ ಕಾಳುಮೆಣಸಿನಂತಹ ಸಾಂಬಾರ ಪದಾರ್ಥಗಳು - ಶ್ರೀಗಂಧˌ ಚಂದನˌ ದಂತದಂತಹ ಆಲಂಕಾರಿಕ ಐಶಾರಾಮಿ ಉತ್ಪನ್ನಗಳು ಧಾರಾಳವಾಗಿ ಸಿಗುತ್ತಿದ್ದ ಕೇರಳ ಈ ವ್ಯಾಪಾರಿ ಸಮುದಾಯದ ಗಮನ ಸೆಳೆಯಲು ಅದೊಂದೆ ಕಾರಣ ಸಾಕಿತ್ತಲ್ಲ. ಹೀಗಾಗಿ ಅದರ ಅಸಲು ಗ್ರಾಹಕರಾಗಿದ್ದ ಯುರೋಪಿನ ಬಿಳಿಯರು ಹಾಗೂ ಅವರ ಮಾರುಕಟ್ಟೆಗೆ ಇಲ್ಲಿಂದ ಇದನ್ನ ಖರೀದಿಸಿ ಸಾಗಿಸಿ ಮಾರುತ್ತಿದ್ದ ಮಧ್ಯವರ್ತಿ ಪಾತ್ರದ ಅರಬ್ಬರಿಗೆ ಕೇರಳ ಅನ್ನುವ ಅಕ್ಷಯ ಪಾತ್ರೆ ಲಾಭದ ಗಣಿಯಾಗಿ ಗೋಚರಿಸಿದ್ದು ಸಹಜ ಪ್ರಕ್ರಿಯೆ.
ಇದರಿಂದಲೆ ಆ ಕಾಲದಿಂದಲೂ ಕರಿ ಬಿಳಿ ಕಂದು ಬಣ್ಣದ ವಿದೇಶಿಯರ ಭೇಟಿ ಇಲ್ಲಿ ಸಹಜವಾಗಿ ಹೆಚ್ಚಿತ್ತು. ಮಲಬಾರು ತೀರಗಳಿಂದ ಹಿಡಿದು ಕನ್ಯಾಕುಮಾರಿಯವರೆಗೆ ಸ್ಥಳಿಯವಾಗಿ ಲಭ್ಯವಿರುತ್ತಿದ್ದ ಸರಕು ಸರಂಜಾಮುಗಳ ಪೂರೈಕೆಗೆ ಪೈಪೋಟಿಯಿತ್ತು.
( ಇನ್ನೂ ಇದೆ.)
https://youtu.be/nfzctlRLFsU
No comments:
Post a Comment