18 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೬.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೬.👊


ಅಗವನಿಗೆ ಐದೋ ಆರೋ ವರ್ಷ ಮಾತ್ರ ಪ್ರಾಯವಾಗಿತ್ತು. ಮನೆಯ ಹಟ್ಟಿಯಲ್ಲಿ ದನ - ಎಮ್ಮೆ ಸಾಕಿ ಅವುಗಳ ಹಾಲು ಮಾರಿ ಅವರೆಲ್ಲಾ ಬದುಕು ನಡೆಸುತ್ತಿದ್ದ ಕಾಲ ಅದು. ಭಾನು ಅನ್ನೋ ದನ ಕರು ಹಾಕಿ ವಾರವೂ ಕಳೆದಿರಲಿಲ್ಲ. ಮುದ್ದಾದ ಹೆಣ್ಣು ಕರು ತಾಯಿಯ ಹಾಲು ಹೀರಿದ ನಂತರ ಲವಲವಿಕೆಯಿಂದ ಹಿತ್ತಲ ಅಂಗಳದಲ್ಲೆಲ್ಲಾ ಕುಣಿದಾಡುತ್ತಿತ್ತು. ಇವನಿಗವತ್ತು ಶಾಲೆಗೆ ರಜ. ಹೀಗಾಗಿ ಅಜ್ಜಿಯ ಜೊತೆ ಹಟ್ಟಿಯ ತೊಳೆಯುವ ದಿನ. ಮನೆಯ ಹಿಂಭಾಗದಲ್ಲಿದ್ದ ದೊಡ್ಡ ನೀರಿನ ತೊಟ್ಟಿಯಿಂದ ನೀರನ್ನ ಇವ ಗೋರಿ ಗೋರಿ ಕೊಟ್ಟರೆ ಅಜ್ಜಿ ಹಿಡಿಸೂಡಿಯಲ್ಲಿ ಕಲ್ಲು ಹಾಸಿನ ಕೊಟ್ಟಿಗೆಯ ನೆಲವನ್ನˌ ಅದರ ಸಂದಿಗೊಂದಿಗಳಲ್ಲಿ ಸಿಲುಕಿರೋ ಸಗಣಿಯ ಅವಶೇಷ ಸರಿಸಿ ಸರಿಸಿ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದರು. ಜೊತೆಜೊತೆಗೆ ಮಾಡುತ್ತಿದ್ದ ಕೆಲಸಕ್ಕಿಂತ ಜಾಸ್ತಿ ನೀರಾಡುತ್ತಿದ್ದ ಇವನನ್ನೂˌ ಅತ್ತಿಂದಿತ್ತ ಇತ್ತಿಂದತ್ತ ಕಿವಿಗೆ ಗಾಳಿ ಹೊಕ್ಕಾಗ ಕಚಗುಳಿ ಇಟ್ಟಂತಾಗಿ ಕುಣಿದಾಡುತ್ತಿದ್ದ ಕರು ಲಕ್ಷ್ಮಿಯನ್ನೂ ಇಬ್ಬರ ಕೀಟಲೆಗೂ ರೋಸತ್ತವರಂತೆ ಹೀನಾಮಾನ ಬೈಯುತ್ತಿದ್ದರು. 


ಆಗ ಬಿತ್ತು ನೋಡಿ ಆ ಮಾಂತ್ರಿಕ ಸ್ವರ ಅವನ ಕಿವಿಗೆ 
"ಗ..... ಮ..... ನಿ.....
ಗಮಗಸ
ಮಗಸ
ಗಸ ನಿ...ಸ... 
ನಿದಮಗ
ಗಮಗ ಮಗ
ಸರಿ...ಸನಿ... ಗಮಗ...ನಿ
ಗಮಗ ಮದಮ
ದನಿದ ನಿಸನಿರಿ" ಒಂದು ಕ್ಷಣ ರೋಮಾಂಚನಕ್ಕೂ ಮೀರಿದ ಭಾವವೊಂದರ ಮೋಡಿಗೆ ಸಿಲುಕಿದಂತಾಗಿ ಇಹಪರವೆ ಮರೆತು ಹೋದಂತೆ ಪುಂಡಾಟವನ್ನೆಲ್ಲ ನಿಲ್ಲಿಸಿ ಹಾಡನ್ನ ಹಾಕಿದ್ದ ಅಜ್ಜನ ಕೋಣೆಯತ್ತ ಓಟಕ್ಕಿತ್ತ. ಅವನನ್ನ ಅನುಸರಿಸಿಯೆ ಓಡಿ ಬಂದ ಲಕ್ಷ್ಮಿಯೂ ಕೀಟಲೆ ಮರೆತು ಕಿವಿ ನಿಗಿರಿಸಿಕೊಂಡುˌ ಕಣ್ಣನರಳಿಸಿಟ್ಟು ಗಮನಕೊಟ್ಟು ಆ ಹಾಡಿನ ನಾದವನ್ನಾಲಿಸಿ ಮಚ್ಚಿಕೊಂಡವಳಂತೆ ನಿಂತಳು. ಹಾಡು ಮುಗಿಯುವ ತನಕ ಅವರಿಬ್ಬರೂ ಅಲ್ಲಿಂದ ಕದಲಿದ್ದರೆ ಕೇಳಿ! 


ಹೀಗೆ ಅವನನ್ನ ಇಳಯರಾಜಾ ಮೊತ್ತಮೊದಲ ಬಾರಿಗೆ ಸೆರೆ ಹಿಡಿದಿದ್ದರು. ಅಜ್ಜ ಆ ಹೊಸ ಡಬಲ್ ಡೆಕ್ಕಿನ ಟೂ ಇನ್ ವನ್ನಿನಲ್ಲಿ ಹಾಕಿದ್ದ ಹಾಡು "ವೇದಂ ಅಣುಅಣುವುನ ನಾದಂ" ಅದಿದ್ದ ಸಿನೆಮಾದ ಹೆಸರು "ಸಾಗರ ಸಂಗಮಂ"ˌ ಚೂರೆ ಚೂರು ಭಾಷೆ ಅರ್ಥವಾಗದಿದ್ದರೂ ಅವನಿಗೆ "ನಾದ ವಿನೋದಮು" "ಓ ವೇಲಾ ಗೋಪೆಮ್ಮಾಲ" ಅದೆ ಕ್ಯಾಸೆಟ್ಟಿನ ಮತ್ತೊಂದು ಬದಿಯಲ್ಲಿದ್ದ "ಶಂಕರಾಭರಣಂ" ಸಿನೆಮಾದ "ಶಂಕರಾ ನಾದ ಶರೀರಾಪರ" ಅರಿಯದ ಇನ್ಯಾವುದೋ ಅದ್ಭುತ ಲೋಕದ ಪ್ರಯಾಣ ಮಾಡಿಸಿದವು. 

ಅವನ್ನ ಹಾಡಿದ ಎಸ್ಪಿಬಿ - ಶೈಲಜಾ ಅವತ್ತಿಂದಲೆ ಅವನ ನೆಚ್ಚಿನವರಾಗಿ ಬಿಟ್ಟರು. ಸಂಗೀತದ ಸಪಸ ಗೊತ್ತಿಲ್ಲದ ಪುಟ್ಟ ಪ್ರಾಯದ ಅವನನ್ನ ಇಳಯರಾಜರ ಮಠಕ್ಕೆ ಅಜನ್ಮ ಭಕ್ತಾದಿಯನ್ನಾಗಿಸಿದ್ದ ದಿನ ಅದು. ಇಂದಿಗೂ ಆ ಅದ್ಭುತ ಕ್ಷಣಕ್ಕವನು ಚಿರಋಣಿಯೆ.

ಅದಾದ ಮೇಲೆ ಅದೆಷ್ಟು ಸಲ ಆ ಹಾಡನ್ನ ಮರಳಿ ಮತ್ತೆ ಕೇಳಿದ್ದಾನೋ ಅವನಿಗೆ ಅರಿವಿಲ್ಲ. ಇಂದು ಕನಸಿನಲ್ಲಿ ಎಬ್ಬಿಸಿ ಕೇಳಿದರೂ ಕೂಡ ಅದರ ಒಂದೊಂದು ಏರಿಳಿತದ ಸಹಿತ ತಪ್ಪಿಲ್ಲದಂತೆ ಕೇವಲ ನೆನಪಿನ ಶಕ್ತಿಯಿಂದಲೆ ಅದನ್ನ ಹಾಡಬಲ್ಲ ಸಾಮರ್ಥ್ಯ ಅವನಿಗಿದೆ. ಸಂಗೀತದ ಮಾಂತ್ರಿಕತೆ ಎಂದರೆ ಮತ್ತಿನ್ನೇನು? ಹಾಡೊಂದು ಹೀಗೂ ಇರಬಹುದೆ ಅನ್ನುವ ಅಚ್ಚರಿ ಅವನೊಳಗೆ ಹುಟ್ಟು ಹಾಕಿದ್ದ ರೋಮಾಂಚಕಾರಿ ಕ್ಷಣ ಅದಾಗಿತ್ತು.

ಬರಿ ನರಮನುಷ್ಯನಾಗಿದ್ದ ಅವನನ್ನ ಆವರಿಸಿದ್ದು ಅತ್ತಲಾಗಿರಲಿ ಮೂಕಜೀವ ಆ ಪುಟ್ಟ ಕರು ಲಕ್ಷ್ಮಿಗೂ ಮೋಡಿ ಹಾಕಿದ್ದ ಹಾಡದು. ತನ್ನ ತುಂಟಾಟ ಮರೆತು ವಯೋಸಹಜ ತಂಟೆ ಬದಿಗಿಟ್ಟು ಅವಳು ಮೊದಲಿನಿಂದ ಕೊನೆಯವರೆಗೂ ಆಲಿಸಿದ್ದ ಹಾಡು ಬಹುಶಃ ಅದೊಂದೆ!


*****

ಸಂಗೀತದ ರಸಸ್ವಾದನೆ ಎಂದರೇನೆಂದೆ ಅರಿವಿದ್ದಿರದ ಆ ಪ್ರಾಯದಲ್ಲಿ "ಸಾಗರ ಸಂಗಮಂ"ನಲ್ಲಿದ್ದ ಸಕಲ ರಸಗಳ ಸಾರ ಹೊತ್ತ ಅಷ್ಟೂ ಹಾಡುಗಳೂ ಇಷ್ಟವಾಗಿದ್ದಷ್ಟೆˌ ಆತ್ಮೀಯತೆಯ ಸೊಗಡಿನ ಶೈಲಿಯಲ್ಲಿದ್ಧ "ಸ್ವಾತಿಮುತ್ಯಂ" ಹಾಡುಗಳೂ ಭಯಂಕರ ಇಷ್ಟವಾಗಿದ್ದವು. ಬಾರದ ತೆಲುಗಿನ ಸಾಹಿತ್ಯವನ್ನು ಮನಸಿಗೆ ತೋಚಿದಂತೆ ಬರಿಸಿಕೊಂಡು ಸಿಕ್ಕ ಸಿಕ್ಕ ಶೃತಿಯಲ್ಲೆಲ್ಲಾ ಲಯವೆ ಇಲ್ಲದೆ ತಾಳ ಬೇತಾಳವಾಗಿಸಿಕೊಂಡು ಮೂಗು ರಾಗದಲ್ಲಿ ಎಸ್ಪಿಬಿˌ ಎಸ್ ಜಾನಕಿˌ ಪಿ ಸುಶೀಲಾರನ್ನ ಅನುಕರಿಸಿ ಹೊತ್ತುಗೊತ್ತಿಲ್ಲದವನಂತೆ ಕಂಡಕಂಡಲ್ಲಿ ಹಾಡಿಯೆ ಹಾಡುತ್ತಿದ್ದ. ಹಾಗಿದ್ದಾಗಲೊಮ್ಮೆ, ಅದು ಆಟಿ ಅಮವಾಸ್ಯೆಯ ದಿನ ಅಂತ ಅವನಿಗೆ ಸರಿಯಾಗಿ ನೆನಪಿದೆˌ ಮತ್ತೊಂದು ಮಧುರಾಘಾತಕ್ಕೆ ಅವನು ಬಲಿಯಾಗಿಬಿಟ್ಟ.

ಮಲೆನಾಡಿನಲ್ಲಿ ಬದುಕುತ್ತಿದ್ದರೂ ತಮ್ಮ ಮೂಲವಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಆಚರಣೆಗಳನ್ನ ಬಿಡಲೊಲ್ಲದ ಕುಟುಂಬಗಳಲ್ಲಿ ಅವರದ್ಧೂ ಒಂದು. ಆಟಿ ಅಮವಾಸ್ಯೆಯ ದಿನ ಬೆಳ್ಳಂಬೆಳಗ್ಯೆ ಎದ್ದದ್ದೆ ಪಾಲೆ ಮರದ ಕೆತ್ತೆ ಕುಟ್ಟಿ ತೆಗೆದ ಕಾರ್ಕೋಟಕ ಕಹಿ ರುಚಿಯ ಕಷಾಯ ಕುಡಿಯಬೇಕೆಂಬ ಕಟ್ಟಳೆಯಿದೆ. ಜ಼ಡಿಮಳೆಗಾಲದಲ್ಲಿ ಹಾಗೂ ಅದರ ಹಿಂದೆಹಿಂದೆಯೆ ಧಿಗಣ ಹಾಕುತ್ತಾ ಬರೀವ ಕಡು ಚಳಿಗಾಲದಲ್ಲಿ ಆ ಪರಿಸರದ ವಾತಾವರಣದಲ್ಲಿ ಕಾಡಬಹುದಾದ ಅನೇಕ ಸಂಭವನೀಯ ಸೀಕುಗಳಿಗೆ ಒಂದಿಡಿ ವರ್ಷ ನಾಟಿ ಔಷಧಿಯ ಮುಂಗಡ ಲಸಿಕೆಯಂತೆ ಅದಂತೆ. 

ಅಜ್ಜ ಹಿಂದಿನ ರಾತ್ರಿಯೆ ಶೆಟ್ಟರ ಗದ್ದೆಯ ನಾಗಬನದಾಚೆಗಿದ್ದ ಪಾಲೆಮರಕ್ಕೆ ಹೋಗಿ ನಮಗೂ ಸುತ್ತಮುತ್ತಲಿನ ಮನೆಯವರಿಗೂ ಸಾಕಾಗುವಷ್ಟು ಕೆತ್ತೆ ತರುತ್ತಿದ್ದರು. ಈ ಕೆತ್ತೆ ಕಿತ್ತು ತರಲೂ ಸಹ ಅದರದ್ದೆ ಆದ ನಿಯಮಗಳಿವೆ. ಒಂದು ಯಾವದೆ ಲೋಹದ ಆಯುಧದಿಂದ ಕೆತ್ತೆ ಕೀಳುವಂತಿಲ್ಲˌ ಚೂಪುಕಲ್ಲಲ್ಲೆ ಕೆತ್ತೆ ತೆಗೆಯಬೇಕು. ಇನ್ನು ಮುಖ್ಯವಾದ ನಿಯಮವೆಂದರೆ ಕೆತ್ತೆ ಕೀಳುವವ ಕೀಳುವ ಹೊತ್ತಲ್ಲಿ ಬರಿ ಬತ್ತಲೆಯಾಗಿರಬೇಕು! ಇಲ್ಲದಿದ್ದರೆ ಬಟ್ಟೆ ಹಾಕಿಕೊಂಡೆ ಅದೆಷ್ಟೆ ಕಿತ್ತು ತಂದಿದ್ದರೂ ಅದರಲ್ಲಿ ಔಷಧಿ ಅಂಶ ಇಂಗಿ ಮಾಯವಾಗುತ್ತಿತ್ತಂತೆ! ಹೀಗಾಗಿ ಮರದವರೆಗೂ ಭಯಂಕರ ಮಳೆ ರಾಚುತ್ತಿದ್ದರೂ ಕತ್ತಲಲ್ಲಿ ಕೇವಲ ಬನಿಯನ್ ಹಾಗೂ ಪಂಚೆಯಲ್ಲಿ ಹೋಗುತ್ತಿದ್ದ ಅಜ್ಜˌ ಮರದ ಮುಂದೆ ಮಾತ್ರ ನಿಯತ್ತಾಗಿ ನಿಯಮ ಪಾಲಿಸುತ್ತಾ ಮರಕ್ಕೆ ಕೈ ಮುಗಿದು ಕೆತ್ತೆ ಕೀಳುವ ಹೊತ್ತಿಗೆ ಉಟ್ಟ ಲಂಗೋಟಿಯನ್ನೂ ಕಿತ್ತೆಸೆದು ಕಾರ್ಲದ ಗೊಮ್ಮಟನವತಾರದಲ್ಲಿ ಕಿತ್ತು ಅನಂತರವೆ ಬಟ್ಟೆ ಉಟ್ಟು ಮರಳಿ ಬರುತ್ತಿದ್ದರಂತೆ!

ಅವತ್ತೂ ಸಹ ಅದೆ ರೀತಿ ಅವರು ತಂದಿಟ್ಟಿದ್ದ ಕೆತ್ತೆಯನ್ನ ಕಡೆಯುವ ಕಲ್ಲಿನಲ್ಲಿ ಹಾಕಿ ಚೆನ್ನಾಗಿ ಜೆಜ್ಜಿ ಅಜ್ಜಿ ಅದರ ರಸ ತೆಗೆದಿರಿಸಿದ್ದರು. ಸಾಮಾನ್ಯವಾಗಿ ಅವರ ಮನೆಯಲ್ಲಿ ಬೆಳಗಿನ ಪಾಳಿಯಲ್ಲಿ ರೇಡಿಯೋದ ಸವಾರಿ ಹೊರಡುತ್ತಿದ್ದುದು ಒಂದಾ ಧಾರವಾಡ ಸುತ್ತಲಿಕ್ಕೆˌ ಅದಿಲ್ಲದಿದ್ದರೆ ಮಂಗಳೂರು ಆಕಾಶವಾಣಿ ಕೇಂದ್ರದ ಸರ್ಕೀಟಿಗೆ. ಆದರೆ ಹಿಂದಿನ ಸಂಜೆ  ಮುಂಬೈ ವಿವಿಧ ಭಾರತಿ ಕೇಂದ್ರದಿಂದ ಪ್ರಸಾರವಾಗಿದ್ದ ಅದ್ಯಾವುದೋ ಹೊಸ ಕಾರ್ಯಕ್ರಮ ಕೇಳಲು ಎರಡನೆ ಬ್ಯಾಂಡಿನ ಶಾರ್ಟ್ ವೇವಿಗೆ ಅದನ್ನ ಟ್ಯೂನ್ ಮಾಡಿಟ್ಟಿದ್ದನ್ನ ಮರಳಿ ಮತ್ತೆ ಧಾರವಾಡ - ಮಂಗಳೂರು ಮೊಳಗುವ ಮೊದಲ ಬ್ಯಾಂಡಿನ ಮೀಡಿಯಂ ವೇವಿಗೆ ಹೊಂದಿಸಿಕೊಳ್ಳಲು ಅಜ್ಜಿಗೆ ಬರುತ್ತಿರಲಿಲ್ಲ. ಝಡಿಮಳೆಯ ಕಾರಣ ಚಿಕ್ಕಮ್ಮಂದಿರಿನ್ನೂ ಎದ್ದಿರಲೆ ಇಲ್ಲ. ಹೀಗಾಗಿ ಬರುತ್ತಿದ್ದದ್ದನ್ನೆ ಕೇಳಿಸಿಕೊಳ್ಳುವ ಅನಿವಾರ್ಯತೆ ಇತ್ತು.

ಕಿರಿಯರಲ್ಲಿ ಮೊದಲಿಗೆ ಎದ್ದವನಿಗೆ ಇವನ ಯಾವ ವಿರೋಧಗಳಿಗೂ ಇನಿತೂ ಸೊಪ್ಪು ಹಾಕದೆ ಮೂಗು ಹಿಡಿದು ಹಾಲಿನ ಬಣ್ಣದಲ್ಲಿದ್ದ ಆದರೆ ಹಾಲಾಹಲದ ರುಚಿಗೆ ಪೈಪೋಟಿ ಕೊಡುತ್ತಿದ್ದ ಪಾಲೆ ಮರದ ಕೆತ್ತೆಗೆ ಜೀರಿಗೆ ಕಾಳುಮೆಣಸನ್ನ ಜೊತೆಗೆ ಹಾಕಿ ಗುದ್ದಿ ತೆಗೆದ "ಆಟಿದ ಮರಂದು" ಕುಡಿಸಲಾಯಿತು. ಅದರ ಕರ್ಕಟೆ ಕಹಿಗೆ ಬೊಬ್ಬೆ ಹೊಡೆಯಲು ತಯ್ಯಾರಾಗಿ ದೊಂಡೆಗೆ ಶೃತಿ ಹಿಡಿಯಲು ಬಾಯಿ ತೆರೆದವನ ಬಾಯಿಗೆ ಬೆಲ್ಲದ ಚೂರೊಂದನ್ನ ಎಸೆದು ಬಾಯಿ ಮುಚ್ಚಿಸಲಾಯಿತು! ಬಲವಂತ ಮಾಡದಿದ್ದರೆ ಕುಡಿಯತ್ತಿದ್ದುದೆ ಸಂಶಯ.

( ಇನ್ನೂ ಇದೆ.)



https://youtu.be/nLKXPp1MwIM

No comments: