ಮಲಯಾಳಿಗಳ ಪರಿಸರಕ್ಕೆ ಹಾನಿಯೆಸಗಿ ಸ್ವಂತಕ್ಕೆ ಅಭಿವೃದ್ಧಿ ಹೊಂದುವ ಮಾನಸಿಕ ದಿವಾಳಿತನದ ಸ್ವಾರ್ಥದ ಸಾಧಾರ ಉದಾಹರಣೆ ಕಾಣಬೇಕೆಂದಿರುವವರು ಒಂದು ಸಲ ಕುಟ್ಟನಾಡಿಗೆ ಭೇಟಿ ಕೊಡಬೇಕು. ಸಂಪೂರ್ಣ ಹಿನ್ನೀರ ಹಿನ್ನೆಲೆಯಲ್ಲಿರುವ ದ್ವೀಪ ಸಮುಚ್ಛಯಗಳ ಜಿಲ್ಲೆ ಅಲಪ್ಪುಳದಲ್ಲಿ ಬಹುಭಾಗ ಹಾಗೂ ಅದಕ್ಕಂಟಿಕೊಂಡಿರುವ ಕೊಟ್ಟಾಯಂ ಕರಾವಳಿ ಹಾಗೂ ಎರಣಾಕುಳಂ ತೀರ ಪ್ರದೇಶದ ತುಸು ಭಾಗಗಳನ್ನ ಸೇರಿಸಿ ಕುಟ್ಟನಾಡು ಎಂದು ಕರೆಯಲಾಗುತ್ತದೆ. ಹಿನ್ನೀರ ಹಿನ್ನೆಲೆಯ ಸುಂದರ ಪರಿಸರ ಹೊಂದಿರುವ ಕುಟ್ಟನಾಡಿನಲ್ಲಿ ಸಿಹಿನೀರಿನ ಅಲಭ್ಯತೆಯ ಕಾರಣ ಕೃಷಿ ಚಟುವಟಿಕೆ ನಡೆಯೋದೆ ಅತ್ಯಲ್ಪ.
ಹಾಗಂತ ಇಲ್ಲವೆ ಇಲ್ಲ ಅಂತೇನಿಲ್ಲ. ಆದರೂ ಎಲ್ಲೆಲ್ಲಿ ನದಿಮುಖಜ ಭೂಮಿ ಚೂರು ಒಳಭಾಗದಲ್ಲಿದೆಯೋ ಅಲ್ಲೆಲ್ಲಾ ಭತ್ತ ಬೆಳೆವ ಗದ್ದೆಗಳಿವೆ. ಇಡಿ ಕುಟ್ಟನಾಡಿನಾದ್ಯಂತ ವಿಫುಲವಾಗಿರುವ ತೆಂಗಿನ ಮರಗಳಿಂದ ಎಳನೀರುˌ ಕಾಯಿˌ ಕಳ್ಳು ಧಾರಾಳವಾಗಿ ದೊರೆಯುತ್ತಿದ್ದು ತೆಂಗಿನ ನಾರಿನ ಹಗ್ಗ ಹೊಸೆಯುವ ಉದ್ಯಮ ಇಲ್ಲಿ ಸಹಜವಾಗಿ ಬೆಳೆದು ನಿಂತಿದೆ. ಕೇರಳ ರಸ್ತೆ ಸಾರಿಗೆ ಸಂಸ್ಥೆ ಕುಟ್ಟನಾಡಿನ ಪರಿಸರದಲ್ಲಿ ದ್ವೀಪಗಳನ್ನ ಬೆಸೆಯುವ ಬೋಟು ಸೇವೆಯನ್ನ ಬಸ್ಸಿನಂತೆಯೆ ಒದಗಿಸುತ್ತಿದೆ. ಇತ್ತೀಚೆಗೆ ಆರಂಭವಾದ "ಕೊಚ್ಚಿನ್ ಮೆಟ್ರೋ" ಸಹ ತನ್ನ ಫೆರ್ರಿ ಸೇವೆಯ ಮೂಲಕ ತೇಲುವ ಮೆಟ್ರೋ ಸೇವೆಯನ್ನು ಎರಣಾಕುಳಂ ವಲಯದಲ್ಲಿ ಪರಿಚಯಿಸಿದೆ. ಕೃಷಿ ಹೊರತು ಪಡಿಸಿ ಕುಟ್ಟನಾಡಿನ ಕುಕ್ಕುಟೋದ್ಯಮ ಕೇರಳದಾದ್ಯಂತ ಜನಪ್ರಿಯವಾಗಿದ್ದ ಕಾಲವೂ ಒಂದಿತ್ತು. ಹಿನ್ನೀರಲ್ಲಿ ಬೆಳೆಸಲಾದ ಕುಟ್ಟನಾಡಿನ ಬಾತುಕೋಳಿಗಳ ಮಾಂಸದ ತನ್ನ ವಿಶಿಷ್ಟ ರುಚಿಯಿಂದ ಮಾಂಸಾಹಾರಿಗಳ ಮನಗೆದ್ದಿತ್ತು. ಇಲ್ಲಿನ ಮೊಟ್ಟೆಗಳಿಗೆ ಬಲು ಬೇಡಿಕೆಯಿದ್ದ ಕಾಲವೂ ಹಿಂದಿತ್ತು. ಒಟ್ಟಿನಲ್ಲಿ ಕುಟ್ಟನಾಡೊಂತರ ಸ್ವರ್ಗದ ಕಿರುಬಾಗಿಲ ಸಂದಿಯಿಂದ ಕಾಣುವ ನಯನ ಮನೋಹರ ದೃಶ್ಯದಂತಿದ್ದು ಅದ್ಯಾರೋ ಅದೃಶ್ಯ ಚಿತ್ರಕಾರ ಮನಸಾರೆ ಬರೆದ ಸುಂದರ ದೃಶ್ಯಕಾವ್ಯವನ್ನ ನೆನಪಿಸುವಂತಿತ್ತು.
ಹೀಗಿದ್ದ ಕುಟ್ಟನಾಡಿನ ಹಣೆಬರಹ ಕೆಡಲು ಮಲೆನಾಡಿನ ಜಿಲ್ಲೆಗಳಾದ ಪಟ್ಟಣಂತಿಟ್ಟˌ ಪಾಲ್ಘಾಟು ಹಾಗೂ ಇಡುಕ್ಕಿ ಜಿಲ್ಲೆಗಳ ಜೊತೆಜೊತೆಗೆ ಕೊಟ್ಟಾಯಂ - ಕೊಲ್ಲಂ - ಎರಣಾಕುಳಂ - ತೃಶೂರಿನ ಮಲೆನಾಡಿನ ಭಾಗಗಳಲ್ಲಿ ಆರಂಭವಾದ ಸಹಜ ಹಸಿರ ಸಿರಿ ಬೋಳಿಸಿ ಬೆಳೆಸಲಾದ ರಬ್ಬರ್ - ಏಲಕ್ಕಿ ಪ್ಲಾಂಟೇಷನ್ˌ ಚಹಾ ತೋಟಗಳು ಹಾಗೂ ಆಧುನಿಕ ಶುಂಠಿ ಕೃಷಿಯ ಅವಕೃಪೆಯಿಂದ ಆರಂಭವಾಯಿತು. ಇಲ್ಲೆಲ್ಲಾ ಬಂಪರ್ ಬೆಳೆ ತೆಗೆಯಲು ಅಪರಾ ತಪರಾ ರಾಸಾಯನಿಕ ಗೊಬ್ಬರ ತಂದು ಸುರಿಯಲಾಯಿತು. ಬೆಳೆದು ನಿಂತ ಬೆಳೆಯ ಬಹುಪಾಲು ದಕ್ಕಿಸಿಕೊಳ್ಳಲು ಎಂಡೋಸಲ್ಫಾನಿನಂತಹ ಕಾರ್ಕೋಟಕ ವಿಷಪೂರಿತ ಕೀಟನಾಶಕಗಳನ್ನ ಅನಗತ್ಯ ಪ್ರಮಾಣದಲ್ಲಿ ಸುರಿದು ನೆಲದ ಆರೋಗ್ಯವನ್ನ ಅದಾಗಲೆ ಹದಗೆಡಿಸಲಾಗಿತ್ತು. ಮಂಡೆಗೆ ಸುರಿದ ನೀರು ಪಾದವನ್ನ ಮುಟ್ಟಲೆಬೇಕಲ್ಲ?
ಸಹಜಾರಣ್ಯದ ಅವ್ಯಾಹತ ಕಡಿತದಿಂದ ಸಿಕ್ಕಾಪಟ್ಟೆ ಮಣ್ಣಿನ ಸವಕಳಿಯಾಗಿ ಮೊದಲಿಗೆ ಈ ಗುಡ್ಡ ಸಾಲಿನಲ್ಲಿ ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿರುವ ಎಂಟಕ್ಕೂ ಅಧಿಕ ಅಣೆಕಟ್ಟುಗಳ ಹೂಳು ಹೆಚ್ಚಿಸಿತು. ಮೊದಲೆ ಮುದಿಯಾಗಿರುವ ಈ ಅಣೆಕಟ್ಟೆಗಳು ಆಗಲೆ ಸರಿಯಾದ ನಿರ್ವಹಣೆಯಿಲ್ಲದೆ ಶಿಥಿಲವಾಗಿ ಅಪಾಯಕಾರಿ ಸ್ಥಿತಿಯಲ್ಲಿದ್ದುˌ ಒಂದೊಮ್ಮೆ ಭೂಕುಸಿತಗಳ ಸರಣಿ ಮುಂದುವರೆದು ದುರದೃಷ್ಟಕ್ಕೆ ಈ ಅಣೆಕಟ್ಟುಗಳ ಅಸ್ತಿಭಾರವೂ ಅಲಗಾಡಲಾಭಿಸಿದರೆ ಮಾತ್ರ ಕುಟ್ಟನಾಡಿನ ಮಂದಿ ಕೆಟ್ಟರು! ನುಗ್ಗಿ ಬರುವ ಜಲಪ್ರವಾಹದ ಪ್ರಳಯ ಸದೃಶ ಸ್ಥಿತಿಯಲ್ಲಿ ಸಂಪೂರ್ಣ ಜಲ ಸಮಾಧಿಯಾಗದೆ ವಿಧಿಯಿಲ್ಲ.
ಸಾಲದ್ದಕ್ಕೆ ಇಲ್ಲಿನ ಹಿನ್ನೀರಿನ ತುಂಬಾ ಮೇಲಿನ ಜಿಲ್ಲೆಗಳ ಪ್ಲಾಂಟೇಷನ್ ಹಾಗೂ ಎಸ್ಟೇಟುಗಳಿಂದ ಹರಿದು ಬರುವ ನದಿಗಳಲ್ಲಿ ತುಂಬಿ ಬರುವ ವಿಷಕಾರಿ ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರದ ಅವಶೇಷಗಳೆಲ್ಲ ಹಿನ್ನೀರಿನಲ್ಲಿ ಬೆರೆತು ನೀರೆಲ್ಲ ಕೆಂಪಾಗಿದೆ. ಈ ವಿಷಕಾರಿ ಜಲ ಅಳಿದುಳಿದ ಸಿಹಿನೀರಿನ ಬುಗ್ಗೆಗಳನ್ನೂ ಪೂತನಿಯ ಮೊಲೆಯಾಗಿಸಿದೆ.
ಸುತ್ತಲೂ ನೀರಿದೆ ಸರಿ ಆದರೆ ಸತ್ತರೂ ಕುಡಿಯುವಂತಿಲ್ಲ! ಬದುಕಿದ್ದವರು ಕುಡಿದರಂತೂ ಸಾವು ಶತಃಸಿದ್ಧ ಅನ್ನುವಷ್ಟು ವಿಷಕಾರಿ ಅದು. ಇದೆ ಕಾರಣದಿಂದಲೆ ಅಲ್ಲಿನ ಬಾತುಕೋಳಿ ಸಾಕಣಿಕೆಯ ಗೃಹೋದ್ಯಮ ಬಹುತೇಕ ನೆಲಕಚ್ಚಿದೆ. ಅಳಿದುಳಿದ ಅಲ್ಲೊಂದು ಇಲ್ಲೊಂದು ಬಾತು ಸಾಕಣೆ ಕೇಂದ್ರಗಳೂ ಅಂತಿಮ ಶ್ವಾಸ ಎಳೆದುಕೊಳ್ಳಲು ಸಮಯ ಎಣಿಸುತ್ತಿದೆ. ಕುಟ್ಟನಾಡಿನ ಬಾತುಕೋಳಿಗಳೆಂದರೆ ಜನ "ಕಾಸು ಕೊಟ್ಟು ಕಾಯಿಲೆ ಕೊಂಡಂತೆ" ಎಂದು ಹೌಹಾರುವಂತಾಗಿದೆ.
ಇಷ್ಟೆಲ್ಲಾ ಅನಾಹುತಗಳಾದ ಮೇಲೆ ಸರಕಾರ ಕೆಟ್ಟ ಮೇಲೆ ಬುದ್ಧಿ ಬಂದವರಂತೆ ಪರಿಹಾರೋಪಾಯಗಳನ್ನು ಹುಡುಕಲು ಏದುಸಿರು ಬಿಡುತ್ತಿದೆ. ಊನವಾಗಿರವ ಕುಟ್ಟನಾಡಿಗೆ ಕಾಲಕಾಲಕ್ಕೆ ಸರಕಾರ ಬಿಡುಗಡೆ ಮಾಡುವ ಯಾವ ಪರಿಹಾರದ ಹಣಕಾಸಿನ ಪ್ಯಾಕೇಜು ಸಹ ಸಹಾಯಕವಾಗಲಾರದು. ಏಕೆಂದರೆ ಆಗಿರುವ ಹಾನಿ ತಿರುಗಿ ಸರಿಪಡಿಸಲಾಗದಂತದ್ದು. ಆದರೆ ಮಾಡಬಾರದ್ದನ್ನ ಮಾಡಿದರೆ ಆಗಬೇಕಾದದ್ದು ಆಗಿಯೆ ತೀರುವಂತೆˌ ಕುಟ್ಟನಾಡು ಕೆಟ್ಟನಾಡಾಗಿರುವ ತನ್ನ ಕಮಂಗಿತನದ ಉದಾಹರಣೆ ಕಣ್ಮುಂದೆಯೆ ಇದ್ದರೂ ಮಲಯಾಳಿಗಳು ಮತ್ತೊಂದು ನಾಡಿನಲ್ಲೂ ಇದೆ ಕುಟ್ಟನಾಡಿನ ಕೃತ್ಯ ಎಸಗಲು ಜಾಗ ಹುಡುಕಿಕೊಂಡು ಗುಳೆ ಹೋಗುತ್ತಲೆ ಇದ್ದಾರೆ. ಪರಿಸರದ ಸಂತುಲಿತತೆಯನ್ನ ಬೇಕಾಬಿಟ್ಟಿ ಮೈಮೇಲೆ ಪ್ರಜ್ಞೆಯಿಲ್ಲದವರಂತೆ ಎಡಬಿಡದೆ ಕೆಡಿಸುತ್ತಲೆ ಇದ್ದಾರೆ.
*****
ಇನ್ನೊಂದು ದೊಡ್ದ ಕ್ಷೇತ್ರದಲ್ಲೇನಾದರೂ ಕೇರಳದ ಅತಿದೊಡ್ಡ ವೈಫಲ್ಯವೇನಾದರೂ ಇದ್ದರೆ ಬಹುಶಃ ಅದು ಹೈನೋದ್ಯಮದಲ್ಲಿ. ದನವನ್ನ ಓಡಾಡುವ ಆಹಾರದ ಬೆಟ್ಟದಂತೆ ಪರಿಗಣಿಸುವವರೆ ಬಹುಸಂಖ್ಯಾತರಾಗಿರುವ ಮಲಯಾಳಿಗಳಲ್ಲಿ ಸಹಕಾರಿ ತತ್ವದಡಿಯಲ್ಲಿ ಒಂದು ಬಲಿಷ್ಠ ಹಾಲುತ್ಪಾದಕ ಮಹಾಮಂಡಳವನ್ನ ಈತನಕ ಕಟ್ಟಲಾಗಿಲ್ಲ.
ಮಿಲ್ಮಾ ಅನ್ನುವ ಸಹಕಾರಿ ತತ್ವದ ಹಾಲುತ್ಪಾದಕ ಸಂಘ ಇದೆಯಾದರೂˌ ಅದರದ್ದೆ ಸಹೋದರ ಸಂಘಟನೆಗಳಾಗಿರುವ ಕರ್ನಾಟಕದ ನಂದಿನಿ ಹಾಗೂ ತಮಿಳುನಾಡಿನ ಆವಿಲ್ ಹಾಲುತ್ಪಾದನೆಯ ಎದುರಿಗದು ಸಿಂಗನ ಮುಂದಿನ ಮಂಗನಂತದ್ದು. ಆಟಕ್ಕುಂಟು ಲೆಕ್ಖಕ್ಕಿಲ್ಲ ಅನ್ನುವಂತಾ ಪರಿಸ್ಥಿತಿ. ಲಾಭದಾಯಕವಾಗಿಲ್ಲದೆ ವರ್ಷವೂ ನಷ್ಟದ ಬಾಬ್ತಿನ ವ್ಯವಹಾರದ ಜೇಡರಬಲೆಯಲ್ಲೆ ಸಿಲುಕಿರುವ ಮಿಲ್ಮಾದ ಬಹುತೇಕ ಹಾಲುತ್ಪಾದನೆಯ ಮೂಲ ನೆರೆಯ ಕರ್ನಾಟಕ ಹಾಲುತ್ಪಾದಕ ಮಹಾಮಂಡಳ. ಅಲ್ಲಿಂದ ಟ್ಯಾಂಕರುಗಳಲ್ಲಿ ತರಿಸುವ ಹಾಲನ್ನ ಇಲ್ಲಿನ ಹೆಸರು ಹೊತ್ತ ಪೊಟ್ಟಣದಲ್ಲಿ ಕಟ್ಟಿ ಗ್ರಾಹಕರಿಗೆ ಪೂರೈಸಲಾಗುತ್ತದೆ ಅಂದರೆ ಅದರ ಶೋಚನೀಯ ಪರಿಸ್ಥಿತಿಯನ್ನ ಒಮ್ಮೆ ಊಹಿಸಿ.
ಚಿನ್ನವದೆಷ್ಟೆ ಇದ್ದರೂ ಹಸಿವಿಗೆ ಹೊಟ್ಟೆಗದನ್ನ ತಿನ್ನಲಾದೀತೆ? ಒಕ್ಕೂಟ ವ್ಯವಸ್ಥೆಯಲ್ಲಿರುವುದು ಸತ್ಯವಾದರೂ ಸಹ ತನಗೆ ಅಗತ್ಯವಿರುವಷ್ಟು ಆಹಾರದ ಉತ್ಪಾದನೆಯಲ್ಲಾದರೂ ಸ್ವಾವಲಂಬಿಯಾಗದಿದ್ದರೆ ಕೇರಳದ ಆಹಾರ ಭದ್ರತೆಯ ಭವಿಷ್ಯ ಕರಾಳವಾದರೂ ಅಚ್ಚರಿಯೇನಿಲ್ಲ. ಆಹಾರ ಧಾನ್ಯಗಳಿಗಾಗಿˌ ಹಾಲಿಗಾಗಿ ಹೀಗೆಯೆ ಪರರಾಜ್ಯಗಳ ಮೇಲೆ ಅವಲಂಬಿತರಾಗಿಯೆ ಮುಂದುವರೆಯುವುದು ರಾಜ್ಯದ ಆರ್ಥಿಕ ಆರೋಗ್ಯದ ದೃಷ್ಚಿಯಿಂದಲೂ ಸಹ ಹಿತಕಾರಿಯಲ್ಲ.
*****
ಬೀಡಿ - ಮೀನು - ತೆಂಗು ಹಾಗೂ ಕಳ್ಳಿನ ಉತ್ಪಾದನೆಯಲ್ಲಿ ಕೇರಳ ಇನ್ನುಳಿದ ರಾಜ್ಯಗಳಿಗಿಂತ ಮುಂದಿರುವುದೇನೋ ನಿಜ. ಆದರೆ ಅದರ ಬಹುಪಾಲು ಅಲ್ಲಿನ ಗ್ರಾಹಕರಿಗೆ ಸಾಕಾಗುವುದಿಲ್ಲ. ಧೂಮಪಾನಿಗಳ ಸಂಖ್ಯೆ ಇಲ್ಲಿ ಅಧಿಕˌ ಮೀನಿಲ್ಲದ ಊಟ ಮಾಡುವ ಶುದ್ಧ ಸಸ್ಯಾಹಾರಿಗಳು ಬಹುತೇಕ ಯಾರೂ ಇಲ್ಲಿಲ್ಲ. ಅಡುಗೆಗೆˌ ತಲೆಗೆ ಹಚ್ಚಲುˌ ಬಾಳೆ ಹಾಗೂ ಗೆಣಸಿನ ಚಿಪ್ಸುಗಳನ್ನ ಕರಿಯಲು ಮೈಗೆ ಮಾಲೀಸು ಮಾಡಲು ತೆಂಗಿನೆಣ್ಣೆಯೆ ಇವರ ಪ್ರಾಥಮಿಕ ಆಯ್ಕೆˌ
( ಇನ್ನೂ ಇದೆ.)
https://youtu.be/fM0ps5v5Z7A
No comments:
Post a Comment