25 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೫.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೫.👊

ಇನ್ನೂ ಸ್ಪಷ್ಟವಾಗಿ ಇದನ್ನ ಅರ್ಥ ಮಾಡಿಸಲು ಕೇರಳದ ಮೇಲ್ವರ್ಗದಲ್ಲಾಗುವ ವೈವಾಹಿಕ ಸಂಬಂಧಗಳ ಮೂಲಕ ಇದನ್ನ ಹೆಚ್ಚು ಸುಲಭವಾಗಿ ವಿವರಿಸಲು ಸಾಧ್ಯವಿದೆ. ಕೇರಳದ ಸ್ಥಳಿಯ ಬ್ರಾಹ್ಮಣರನ್ನ ನಂಬೂದರಿಗಳು ಅನ್ನಲಾಗುತ್ತದೆ. ಅವರಿಗೆ ಮಡಿ ಮೈಲಿಗೆ ಶುದ್ಧತೆಯಿದೆಯಾದರೂ ಪುರೋಹಿತಿಕೆಯ ಅಧಿಕಾರವಿಲ್ಲ. ಹೀಗಾಗಿ ದೇಗುಲಗಳಲ್ಲಿ ಕೇವಲ ಮೇಲುಸ್ತುವರಿ ವಹಿಸುವ ಅವರು ಕೇರಳದ ದೇವಸ್ಥಾನಗಳ ಅರ್ಚನೆಗೆ ತುಳುನಾಡಿನ ಶಿವಳ್ಳಿ ಬ್ರಾಹ್ಮಣರನ್ನ ಕರೆಸುತ್ತಾರೆ. ಅವರನ್ನ "ಪೊಟ್ಟಿ" ಎಂದು ಕರೆಯಲಾಗುತ್ತದೆ. ಈ ನಂಬೂದರಿಗಳ ವಿವಾಹ ಸಂಬಂಧವೆ ಒಂದು ಗೊಂದಲದ ಗೂಡು. 

ಸಾಮಾನ್ಯವಾಗಿ ಬ್ರಾಹ್ಮಣ ನಂಬೂದರಿಗಳು ಹಾಗೂ ಕ್ಷತ್ರಿಯ ನಾಯರುಗಳೆ ಇಲ್ಲಿನ ಜಮೀನ್ದಾರರು. ಕಾಲಾಂತರದಲ್ಲಿ ಕಾರಣಾಂತರಗಳಿಂದ ಇವರಲ್ಲಿ ಕೆಲವರು ಇಸ್ಲಾಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರೂ ಸಹ ತಮ್ಮ ಹಳೆಯ ಹಿಂದೂ ಜಾತಿ ಸೂಚಕ ಮನೆತನಗಳ ಹೆಸರನ್ನ ಬಿಟ್ಚಿಲ್ಲ. ಅಷ್ಟೆ ಅಲ್ಲˌ ತಮ್ಮ ಹಿಂದೂ ಮಾತೃಮೂಲದ "ಮರಿಮಕ್ಕತ್ತಾಯ" ಕೌಟುಂಬಿಕ ಪದ್ಧತಿಗೇನೆ ಅಂಟಿಕೊಂಡಿದ್ದಾರೆ. ಮತಾಂತರದಿಂದ ಬದಲಾಗಿರೋದು ಅವರ ಧಾರ್ಮಿಕ ಶ್ರದ್ಧೆ ಮಾತ್ರ. ಆದರೆ ಸಂಸ್ಕಾರ ಮಾತ್ರ ಅದೆ ಹಳೆಯದೆ. ಇದು ಕೇರಳದಿಂದ ಹೊರಗಿನವರಿಗೆ ವಿಚಿತ್ರ ಅನಿಸೀತು. ಆದರೆ ಮಲಯಾಳಿಗಳಿಗಲ್ಲ.


ಇನ್ನು ಪಿತೃಮೂಲದ ಕೌಟುಂಬಿಕ ಪದ್ಧತಿಯನ್ನ ಅನುಸರಿಸುವ ನಂಬೂದರಿಗಳಲ್ಲಿ ಮನೆಯ ಪಿತ್ರಾರ್ಜಿತ ಸೊತ್ತುಗಳ ಮೇಲೆ ಅಧಿಕಾರ ಕೇವಲ ಮನೆಯ ಮುಂದಿನ ತಲೆಮಾರಿನಲ್ಲಿ ಹುಟ್ಟುವ ಮೊದಲ ಗಂಡು ಮಗುವಿಗಿದ್ದುˌ ಅವನ ನಂತರ ಅವನ ಮೊದಲ ಮಗನಿಗೆ ದಾಟುತ್ತದೆ. ಅಂದರೆ ನಂಬೂದರಿಗಳಲ್ಲಿ ಆಸ್ತಿ ವಿಭಜಿಸುವ ಪದ್ಧತಿ ಇಲ್ಲ. ಹೀಗಾಗಿ ಮನೆಯಲ್ಲಿ ಮದುವೆಯಾಗುವ ಅಧಿಕಾರ ಮನೆಯ ಹಿರಿಯ ಮಗನಿಗೆ ಮಾತ್ರ! ಉಳಿದವರಿಗೆ ಮದುವೆಯ ಭಾಗ್ಯವಿಲ್ಲ?!

ಒಂದೊಮ್ಮೆ ನಂಬೂದರಿಯೊಬ್ಬನಿಗೆ ಆರೆಂಟು ಗಂಡು ಮಕ್ಕಳಿದ್ದರೆ? ಅದಕ್ಕೂ ಪರಿಹಾರ ಈ ಕೌಟುಂಬಿಕ ವ್ಯವಸ್ಥೆಯಲ್ಲಿದೆˌ ಅದನ್ನೆ ಮಲಯಾಳಿಗಳು "ಸಂಬಂಧಂ" ಅನ್ನುತ್ತಾರೆ. ಅದರ ಪ್ರಕಾರ ನಂಬೂದರಿಯ ಮೊದಲ ಮಗ ಕೇವಲ ನಂಬೂದರಿ ಮಹಿಳೆಯನ್ನೆ ಮದುವೆಯಾಗುವ ಮೂಲಕ ಕುಲದ "ರಕ್ತ ಶುದ್ಧತೆ"ಯನ್ನ ಕಾಪಾಡಿಕೊಳ್ಳುತ್ತಾನೆ. ಉಳಿದ ಗಂಡು ಮಕ್ಕಳು ಪ್ರಾಪ್ತ ವಯಸ್ಕರಾದ ನಂತರ ತಮ್ಮಿಂದ ಜಾತಿ ವ್ಯವಸ್ಥೆಯಲ್ಲಿ ಒಂದು ಮೆಟ್ಟಿಲು ಕೆಳಗಿರುವ ಶೂದ್ರ ಕ್ಷತ್ರಿಯ ನಾಯರ್ ಕನ್ಯೆಯ ಜೊತೆಗೆ ಒಂದು ಅನುಕೂಲ ಸಿಂಧು ಸಂಬಂಧ ಇಟ್ಟುಕೊಳ್ಳುತ್ತಾನೆ. ಅದರಲ್ಲೂ ಆ ಮನೆಯ ಯಜಮಾನತಿಯಾಗಿರುವ ಹಿರಿಯ ನಾಯರ್ ಕನ್ಯೆಯ ಜೊತೆ ಅವನ ಕೂಡಿಕೆಗೆ ಆದ್ಯತೆ ಕೊಡಲಾಗುತ್ತದೆ. ಹಾಗಂತ ಅದು ತತ್ಕಾಲಿಕ ಸಂಬಂಧವೇನಲ್ಲ. ಆ ದಾಂಪತ್ಯ ಅವರಲ್ಲಿ ಒಬ್ಬರು ಸಾಯುವತನಕವೂ ಸ್ಥಿರವಾಗಿರೋದೂ ಸಹ ಇದೆ. 


ಆದರೆˌ ಕಾರಣಾಂತರದಿಂದ ಆ ಸಂಬಂಧ ಮುರಿದುಬಿದ್ದರೆ ನಾಯರ್ ಮಹಿಳೆ ಮತ್ತೊಂದು ಸಂಬಂಧವನ್ನ ಕೂಡಿಕೊಳ್ಳಲು ಸ್ವತಂತ್ರ್ಯಳು ಹಾಗೂ ಆ ಸಂಬಂಧ ಮತ್ತೆ ನಂಬೂದರಿಯೊಡನೆಯೆ ಆಗಬೇಕು ಅಂತೇನಿಲ್ಲ. ನಾಯರ ಪುರುಷರನ್ನೂ ಆಕೆ ಇಷ್ಟ ಪಡಬಹುದು. ಅವಳು ಮಾತೃಮೂಲ ಪದ್ಧತಿ ಅನುಸರಿಸುವ ಮನೆಯ ಯಜಮಾನತಿಯಾಗಿರೋದರಿಂದ ಹುಟ್ಟುವ ಮಕ್ಕಳಿಗೆ ತಾಯಿ ಮನೆಯೆ ಸ್ಥಿರ - ಸಹೋದರ ಮಾವನೆ ದಿಕ್ಕು. ಹೀಗಾಗಿ ಹುಟ್ಟಿಸುವ ನಾಯರ್ ತಂದೆಯಂದರಿಗೆ ಅವರನ್ನ ಸಾಕಿ ಬೆಳೆಸುವ ಸಾಮಾಜಿಕ ಹೊಣೆ ಇರುವುದಿಲ್ಲ. ತಂದೆಯ ಕುಲಾಚಾರಗಳನ್ನ ಅವರು ಅನುಸರಿಸುವುದೂ ಇಲ್ಲ. ನಂಬೂದರಿಗಳ ಹಿರಿಮಗನೂ ಸಹ ಒಂದು "ಅಧಿಕೃತ" ಜಾತಿಯೊಳಗಿನ ಮದುವೆಯಾಗಿದ್ದರೂ ಸಹ ನಾಯರ್ ಕನ್ಯೆಯರ ಜೊತೆ ಸಂಬಂಧಂ ಪತಿಯಾಗಬಾರದು ಅಂತೇನಿಲ್ಲ. ಆದರೆ ಅಂತಹ ಸಂಬಂಧಗಳಿಗೆ ಸಮಾಜ ತಿರಸ್ಕಾರ ತೋರುತ್ತದಷ್ಟೆ ಅಲ್ಲ ಅದರಿಂದಾಗುವ ಸಂತಾನಗಳು ಆ ಸಾಮಾಜಿಕ ಹೇವರಿಕೆಯ ಹೊರೆಯನ್ನ ಕೊನೆಯತನಕ ಹೊತ್ತೆ ಬಾಳಬೇಕಾಗುವುದೂ ಇದೆ. ಒಂಥರಾ ಸಾಮಾಜಿಕ ಅಮಾನ್ಯತೆ ಅಂತಹ ವಿಲೋಮ ವಿವಾಹಗಳಿಗಿದೆ. 


ಹೀಗೆ ನಾಯರ್ ಹೆಣ್ಣುಗಳು ನಂಬೂದರಿ ಗಂಡುಗಳೊಂದಿಗೆ ಮಾತ್ರ ಸಂಬಂಧ ಇಟ್ಟುಕೊಳ್ಳುತ್ತಾರೆ ಅಂತೇನಿಲ್ಲ. ನಾಯರ್ ಮಹಿಳೆಯರು ಅವರ  ಊರಿನ ಮೇಲೆ ಸಾಗುವ ನಾಯರ್ ಯೋಧರಿಗೂ ಸಹ ತತ್ಕಾಲಿಕ ಸಂಬಂಧಂ ಉಪಪತ್ನಿಯರಾಗಿರೋದೂ ಇತ್ತು. ಈ ವಿಷಯದಲ್ಲಿ ಉದಾರವಾಗಿರುವ ನಾಯರ್ ಸಮಾಜ ಒಬ್ಬ ಮಹಿಳೆ ಹಾಗೂ ಪುರುಷರು ಬಯಸಿದರೆ ಏಕಕಾಲಕ್ಕೆ ಒಂದೆ ಊರಿನಲ್ಲಿ ನಾಲ್ಕಾರು ಸಂಬಂಧಂ ಮದುವೆ ಮಾಡಿ ಲೈಂಗಿಕ ಸಂಬಂಧ ಹೊಂದಲು ಅಡ್ಡಿ ಮಾಡುವುದಿಲ್ಲ. ಒಂದುವೇಳೆ ಆ ಮಹಿಳೆಯ ಒಬ್ಬ ಯೋಧ ಗಂಡ ಅವತ್ತು ಆ ಊರನ್ನ ದಾಟಲಿದ್ದಾನೆ ಅಂದುಕೊಳ್ಳಿˌ ರಾತ್ರಿ ಮಲಗುವ ಕೋಣೆಯನ್ನ ಹೊಕ್ಕುವ ಮೊದಲು ತನ್ನ ಶಸ್ತ್ರವನ್ನ ಬಾಗಿಲಿಗೆ ಒರಗಿಸಿಟ್ಟು ಬಾಗಿಲು ಹಾಕಿಕೊಳ್ಳುತ್ತಾನೆ. ಒಂದೊಮ್ಮೆ ಆ ನಾಯರ್ ಮಹಿಳೆಯ ಮತ್ತೊಬ್ಬ ಯೋಧ ಪತಿಯೂ ಅದೆ ಸಮಯ ಅಲ್ಲಿಗೆ ಬಂದರೆ ಆ ಗುರುತನ್ನ ನೋಡಿ ಅರ್ಥ ಮಾಡಿಕೊಂಡು ಒಂದಾ ಹೊರಗಿನ ಹಜಾರದಲ್ಲಿ ಮಲಗಿ ರಾತ್ರಿ ಕಳೆಯುತ್ತಾನೆ ಅಥವಾ ಅದೆ ಊರಿನಲ್ಲಿರುವ ತನ್ನ ಇನ್ನೊಂದು ಸಂಬಂಧಂ ಹೆಂಡತಿಯ ಮನೆಗೆ ನುಗ್ಗಿ ತನ್ನ ಶಸ್ತ್ರವನ್ನ ಶಯನಗೃಹದ ಹೊರಗಿಟ್ಟು ಒಳಗೆ ಅವಳೊಂದಿಗೆ ಮಲಗುತ್ತಾನೆ. 


ಹೀಗಾಗಿ ಒಟ್ಟೊಟ್ಟಿಗೆ ಒಬ್ಬರಿಗೆ ನಾಲ್ಕರಿಂದ ಆರು "ಸಂಬಂಧಂ ಭರ್ತಾ" ಅಥವಾ "ಸಂಬಂಧಂ ಭಾರ್ಯ" ಇರೋದು ಒಂದು ಕಾಲದಲ್ಲಿ ಇಲ್ಲಿ ಅತಿ ಸಾಮಾನ್ಯ ಸಂಗತಿಯಾಗಿತ್ತು. ಇದು ಕೈರಳಿ ಸಾಮಾಜಿಕತೆಯಲ್ಲಿರುವ ಲೈಂಗಿಕ ಮುಕ್ತತೆಗೆ ಒಂದು ಸ್ಪಷ್ಟ ನಿದರ್ಶನ.

*****

ಇನ್ನುˌ ಇಂತಹ ಸಂಬಂಧಗಳಿಂದ ಹುಟ್ಟುವ ಮಕ್ಕಳಿಗೆ ಆ ಸಂಬಂಧಂ ಪತಿಯರಲೊಬ್ಬ ತಾನು ತಂದೆ ಎಂದು ಘೋಷಿಸಿ ಮಗುವಿಗೆ ಸಾಮಾಜಿಕ ಮಾನ್ಯತೆ ತಂದು ಕೊಡುತ್ತಾನೆ. ಹಾಗೊಮ್ಮೆ ಯಾವ ತಂದೆಯೂ ಮಗುವನ್ನ ತನ್ನದೆಂದು ಒಪ್ಪಿಕೊಳ್ಳದಿದ್ದರೆˌ ಒಂದಾ ಅದು ನಾಯರರಲ್ಲೆ ಕೆಳವರ್ಗವೆಂದು ಪರಿಗಣಿಸಲಾದ ಗಂಡಸಿನ ಸಂತಾನವಾಗಿರಬೇಕು. ಅಥವಾ ತನಗಿಂತ ಕೆಳಜಾತಿಯ ಗಂಡಸನ್ನ ಕೂಡಿ ನಾಯರ್ ಮಹಿಳೆ ಆ ಮಗುವನ್ನ ಹೆತ್ತಿರಬೇಕು. ಈ ಎರಡೂ ಸಾಧ್ಯತೆಗಳನ್ನ ಆಶ್ಚರ್ಯಕರವಾಗಿ ಒಪ್ಪಿಕೊಳ್ಳದೆ "ಅಕ್ರಮ" ಎಂದು ಘೋಷಿಸುವ ನಾಯರ್ ಹಿರಿಯರು ಆ "ಕೆಟ್ಟಿರುವ" ಮಹಿಳೆಯನ್ನೂ ಹಾಗೂ ಅವಳ ಅವಳ ಸಂತಾನವನ್ನೂ ಜಾತಿಯಿಂದ ಬಹಿಷ್ಕಾರ ಹಾಕುತ್ತಾರೆ! 


ಹಾಗೆ ನೆಲೆ ಕಳೆದುಕೊಂಡ ಅನೇಕ ನಾಯರ್ ಮಹಿಳೆಯರು ವಿದೇಶಿ ವ್ಯಾಪಾರಿ ಅರಬರನ್ನೋˌ ಯಹೂದ್ಯರನ್ನೊˌ ಚೀನಿಯರನ್ನೋ ಇಲ್ಲಾ ಯುರೋಪಿಯನ್ ಕ್ರೈಸ್ತರನ್ನೋ ಕಟ್ಟಿಕೊಂಡು ಅವರ ಉಪಪತ್ನಿಯರಾಗಿದ್ದುಕೊಂಡು ಅವಳ ಹಿಂದಿನ ಸಂಬಂಧದಿಂದ ಹುಟ್ಚಿದ ಮಗುವೂ ಸೇರಿ ಮುಂದೆ ಹೊಸ ಕೂಡಿಕೆಯಿಂದಾದ ಮಗುವೂ ಮತಾಂತರವಾಗಿರೋದೂ ಸಹ ಇದೆ. ವಿದೇಶಿ ಧರ್ಮಗಳು ಕೇರಳದ ಸಮಾಜದಲ್ಲಿ ಕಾಲಕ್ರಮೇಣ ಬೆರೆತು ಹೋಗಲು ಇದೂ ಸಹ ಒಂದು ಕಾರಣ.


ಸಂಬಂಧಂನಿಂದ ಹುಟ್ಟುವ ಮಗುವನ್ನಾಗಲಿ ಅಥವಾ ಸಂಬಂಧಂನಿಂದಾದ ಹೆಂಡತಿಯನ್ನಾಗಲಿ ಆ ನಂಬೂದರಿ ತಾನು ಮಡಿ ಮೈಲಿಗೆಯಿಂದ ಶುದ್ಧನಾಗಿರುವ ಹಗಲ ಹೊತ್ತಿನಲ್ಲಿ ಸಾಮಾಜಿಕವಾಗಿ ಮುಟ್ಟದೆ ಅಸ್ಪರ್ಶ್ಯತೆಯ ಆಚರಣೆಯನ್ನೆ ಮಾಡುತ್ತಾನೆ. ಅವನ ಮೋಕೆ ಕೊಂಡಾಟ ಕಾಮದಾಟಗಳೇನಿದ್ದರೂ ರಾತ್ರಿ ಮಲಗುವ ಕೋಣೆಯ ಕತ್ತಲಲ್ಲಿ ಮಾತ್ರ. ಎಲ್ಲರಿಗೂ ಅವರಿಬ್ಬರ ನಡುವಿನ ಸಂಬಂಧ ಸ್ಪಷ್ಟವಾಗಿ ಅರಿವಿದ್ದರೂ ಹಗಲಲ್ಲಿ ಪರಸ್ಪರ ಮುಟ್ಟಿ ಶುದ್ಧತೆ ಕೆಡಿಸಿಕೊಳ್ಳುವುದಿಲ್ಲ! ಹೀಗಾಗಿಯೆ ಒಂದೆ ನಾಯರ್ ತಾಯಿಯ ಹೊಟ್ಟೆಯಿಂದ ಹುಟ್ಟುವ ಮಕ್ಕಳು ಕುರುಪ್ˌ ಮೆನೊನ್ˌ ಪಿಳ್ಳೆˌ ನಾಯನಾರ್ˌ ತಂಬಿˌ ಕಾರ್ತˌ ನಂಬಿಯಾರ್ˌ ಉನ್ನಿತ್ತನ್ˌ ವಳಿಯತ್ತನ್ˌ ಕೈಮಳ್ ಅಥವಾ ಮನ್ನಾದಿಯನ್ ಹೀಗೆ ವಿಭಿನ್ನ ಕುಲನಾಮ ಹೊಂದಿರೋದು ಸರ್ವೆ ಸಾಮಾನ್ಯ. 


ಇವೆಲ್ಲವನ್ನು ಮಾನ್ಯಮಾಡಿ ಒಪ್ಪಿಕೊಂಡೆ ಇಂದಿನ ಕೇರಳ ಉಳಿದು ಬೆಳೆದು ನಿಂತಿದೆ. ಇಲ್ಲಿನವರಿಗೆ ಇದು ಸಹಜ.

( ಇನ್ನೂ ಇದೆ.)

https://youtu.be/Y8lokIRM75U

No comments: