ಊರಿನಿಂದ ದೂರವಿದ್ದ ಕಾರಣ ಇರುಳಲ್ಲಿ ಅಪರಿಚಿತರು ಅಪಾಯಕಾರಿಯಾಗಿ ವರ್ತಿಸುವ ಸಾಧ್ಯತೆಯ ಸ್ವ ಅನುಭವವಾದುದರಿಂದಲೂˌ ಆಶ್ರಮದ ಸ್ತ್ರೀ ಭಕ್ತರ ಸುರಕ್ಷತೆಯ ದೃಷ್ಟಿಯಿಂದಲೂ ಕಾಸಗೋಡಿನ ಮೊದಲಿದ್ದ ಆ ಆಶ್ರಮಮದ ಸ್ಥಳವನ್ನ ವಿಕ್ರಯಿಸಲು ನಿರ್ಧರಿಸಿದ ಸ್ವಾಮಿ ರಾಮದಾಸರುˌ ಅದರ ಬದಲಿಗೆ ಕಾಙಂನಗಾಡಿನ ಬಳಿಯಿದ್ದ ಮಾವುಂಗಲ್ಲಿನ ಈಗಿರುವ ಬೆಟ್ಟದಂತಹ ಜಾಗವನ್ನ ಕೊಂಡು ಅಲ್ಲಿಗೆ ಶಾಶ್ವತವಾಗಿ ಆನಂದಾಶ್ರಮವನ್ನ ಸ್ಥಳಾಂತರಿಸಲು ನಿರ್ಧರಿಸಿದರು. ತಾವು ನಂಬಿದ್ದ ಪ್ರಭು ಶ್ರೀರಾಮಚಂದ್ರನ ಮೇಲೆ ಭಾರ ಹಾಕಿ ತೆಗೆದುಕೊಂಡಿದ್ದ ಪಪ್ಪನ ಈ ನಿರ್ಧಾರಕ್ಕೆ ಬೆಂಬಲವಾಗಿ ನಿಂತ ಅವರ ಅಪಾರ ಭಕ್ತ ವರ್ಗವೂ ಸಹ ತಮ್ಮ ಕೈಯಿಂದಾದಷ್ಟು ಕೊಡುಗೆ ಸಲ್ಲಿಸಿ ಇಂದಿನ ಆಶ್ರಮದ ಕಟ್ಟಡ ಮೇಲೇಳಲು ಕೈ ಜೋಡಿಸಿದರು. ಹೀಗೆ ಮಂಜಲಪಾಡಿ ಅಥವಾ ಮಾವುಂಗಲ್ಲಿನಲ್ಲಿ ಆಶ್ರಮ ಹೊಸತಾಗಿ ನಿರ್ಮಾಣವಾಯಿತು.
ಬರಿಯ ಅಧ್ಯಾತ್ಮ ಚಿಂತನೆಗೆ ಮಾತ್ರವಲ್ಲದೆˌ ಆಶ್ರಮದಲ್ಲಿ ಊರವರ ಅಗತ್ಯಗಳನ್ನು ಪರಿಗಣಿಸಿ ವಿದ್ಯಾದಾನಕ್ಕಾಗಿ "ಶ್ರೀಕೃಷ್ಣ ವಿದ್ಯಾಶಾಲಾ" ಅನ್ನುವ ಶಾಲೆಯನ್ನು ೧೯೪೨ರಲ್ಲೂˌ ಅದರ ಬೆನ್ನಿಗೆ ಕೌಶಲ್ಯ ತರಬೇತಿ ಸಂಸ್ಥೆ "ಶ್ರೀಕೃಷ್ಣ ಉದ್ಯೋಗಶಾಲಾ"ವನ್ನೂ ಸಹ ಸ್ಥಾಪಿಸಿದರು. ಇದಷ್ಟೆ ಅಲ್ಲದೆ ೧೯೫೨ರಲ್ಲಿ ಒಂದು ಸಣ್ಣ ಆಸ್ಪತ್ರೆಯನ್ನೂ ಸಹ ಪಪ್ಪ ಆರೋಗ್ಯ ಸೇವೆ ಒದಗಿಸುವ ಹಿತದೃಷ್ಟಿಯಿಂದ ಶುರು ಮಾಡಿದ್ದರು. ದಶಕಗಳ ಕಾಲ ಆಶ್ರಮವೆ ನಡೆಸಿದ ಈ ಸಂಸ್ಥೆಗಳನ್ನು ಕಾಲಾಂತರದಲ್ಲಿ ಸರಕಾರಿ ಮೇಲುಸ್ತುವರಿಗೆ ಹಸ್ತಾಂತರಿಸಲಾಗಿದೆ. ಹೀಗೆ ಸಮಾಜದ ವಿವಿಧ ಸ್ತರಗಳ ಸ್ಥಳಿಯರನ್ನೂ ಒಳಗೊಂಡು ಪಪ್ಪ ಆನಂದಾಶ್ರಮದ ಕಲ್ಪನೆಯನ್ನು ಕಾಙಂನಗಾಡಿನಲ್ಲಿ ಸಾಕಾರಗೊಳಿಸಿದ್ದರು. ಬರುಬರುತ್ತಾ ಹೆಚ್ಚಿದ್ದ ಭಕ್ತರ ಸಂಖ್ಯೆಯನ್ನ ಗಂಭೀರವಾಗಿ ಪರಿಗಣಿಸಿ ಮೂಲ ಕಟ್ಟಡ ಸಾಕಾಗದು ಎಂದೆನೆಸಿ ತಂಗುವವರ ಅನುಕೂಲತೆಗಾಗಿ ಹೊಸ ಕಟ್ಟಡಗಳನ್ನ ನಿರ್ಮಿಸಿದರು. ಆಶ್ರಮದ ಆಗ್ನೇಯ ಮೂಲೆಯಲ್ಲಿ "ಅಯೋಧ್ಯ ವನ"ವೆನ್ನುವ ಆಯುರ್ವೇದ ಮೂಲಿಕಾವನವನ್ನೂˌ ಆಶ್ರಮವಾಸಿಗಳ ಹಾಲು-ಹೈನಿನ ಉಪಯೋಗಕ್ಕಾಗಿ ಗೋಶಾಲೆಯನ್ನೂ ಸಹ ಆರಂಭಿಸಿದರು.
ಈ ಆಶ್ರಮ ಆರಂಭವಾದ ಕೆಲವೆ ದಿನಗಳಲ್ಲಿ ಸ್ವಾಮಿ ರಾಮದಾಸರ ಪೂರ್ವಾಶ್ರಮದ ತಂದೆ ಉಬ್ಬುಸದ ಬಾಧೆಯಿದ್ದ ಬಾಲಕೃಷ್ಣರಾಯರು ಹಾಗೂ ಮಡದಿ ರುಕ್ಮಿಣಿಬಾಯಿ ವಯೋಸಹಜ ಕಾರಣಗಳಿಂದ ಕೊನೆಯುಸಿರೆಳೆದರು. ತಮ್ಮ ಕಡೆಯ ಕಾಲದಲ್ಲಿ ಅವರಿಬ್ಬರೂ ಬಾಕಿ ಇನ್ನುಳಿದ ಸಾಮಾನ್ಯ ಭಕ್ತಾದಿಗಳಂತೆ ಇಲ್ಲಿನ ನಿವಾಸಿಗಳಾಗಿಯೆ ಉಳಿದಿದ್ದರು. ಹೆತ್ತವರು ಹಾಗೂ ಬಾಳಸಂಗಾತಿ ಇಬ್ಬರೂ ಇಲ್ಲವಾಗಿˌ ಅದಾಗಲಾಗಲೆ ವಿರಕ್ತ ಜೀವನ ನಡೆಸುತ್ತಿದ್ದ ಸ್ವಾಮಿ ರಾಮದಾಸರು ನಿಜಾರ್ಥದಲ್ಲಿ ವಿರಕ್ತರೆ ಆದರೆನ್ನಬಹುದು. ಅಲ್ಲಿಗೆ ಅವರ ಇಹ ಬಂಧನದ ಕೊನೆಯ ನಂಟು ನಂಟು ಕಡಿದು ಹೋಯಿತು.
ಸ್ವಾಮಿ ರಾಮದಾಸರಿಗೂ ಪ್ರಾಯ ಸಂದುತ್ತಾ ಬಂದಿತ್ತು. ಅವರ ನಂತರ ಅಷ್ಟೆ ಸಮರ್ಥವಾಗಿ ಆಶ್ರಮವನ್ನ ಮುನ್ನಡೆಸುವವರೊಬ್ಬರ ಅಗತ್ಯವಂತೂ ಇತ್ತು. ಆಗ ಅವರಿಗೆ ಕೈ ಸಹಾಯವಾಗಿ ಒದಗಿ ಬಂದವರು ಅನಂತ ಶಿವನ್ ಎನ್ನುವ ಯುವಕ. ಆರು ವರ್ಷದ ಸಣ್ಣಪ್ರಾಯದಲ್ಲೆ ತನ್ನ ತಾಯಿಯನ್ನ ಕಳೆದುಕೊಂಡಿದ್ದ ಅನಂತ ಶಿವನ್ ಮೂಲತಃ ಅಂತಃರ್ಮುಖಿ. ಯವ್ವನದಾರಂಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರಲ್ಲಿ ಅಧ್ಯಾತ್ಮಿಕ ಸೆಳೆತ ಆರಂಭವಾದ ನಂತರ ಸ್ವಯಂ ನಿವೃತ್ತಿ ಪಡೆದಾಗ ಕಾಙಂನಗಾಡಿನ ಆನಂದಾಶ್ರಮ ಅವರನ್ನ ಸೆಳೆಯಿತು. ತನ್ನ ಇಳಿಗಾಲದಲ್ಲಿದ್ದ ಪಪ್ಪನ ಆಪ್ತ ಸಹಾಯಕರಾಗಿ ಮೊದಲಿಗೆ ಆಶ್ರಮವಾಸಿಯಾಗಿ ಸೇರಿದ ಅನಂತ ಶಿವನ್ ಕ್ರಮೇಣ ಪಪ್ಪನ ಆಶಯದಂತೆ ಆಶ್ರಮವನ್ನು ಮುನ್ನಡೆಸಿದ ಎರಡನೆ ತಲೆಮಾರಿನವರು.
ಈ ನಡುವೆ ಅಮೇರಿಕಾ ಹಾಗೂ ಯುರೋಪು ಪ್ರವಾಸ ಮಾಡಿದ ಸ್ವಾಮಿ ರಾಮದಾಸರುˌ ಅಧ್ಯಾತ್ಮಿಕ ಸಾಧನೆಗಾಗಿ ಹೃಷಿಕೇಶಕ್ಕೆ ಹೋಗಿದ್ದ ಅನಂತ ಶಿವನ್ನರನ್ನು ಹಿಂದೆ ಕರೆಸಿಕೊಂಡರು. ಅಲ್ಲಿಂದ ಮುಂದೆ ಅವರಿಗೂ ದೀಕ್ಷೆ ಕೊಟ್ಟು ಸ್ವಾಮಿ ಸತ್ ಚಿದಾನಂದ ಎಂದು ಅವರನ್ನ ಕರೆದರು. ಅವರೂ ಸಹ ಸ್ವಾಮಿ ರಾಮದಾಸರ ಜೊತೆಗೆ ಸಹಾಯಕರಾಗಿ ಈ ವಿದೇಶಿ ಪರ್ಯಾಟನೆಗೆ ಹೊರಟರು. ಆಶ್ರಮದ ಮುಂದಿನ ನಿರ್ವಹಣೆಯ ವ್ಯವಸ್ಥೆಯಾದ ನೆಮ್ಮದಿಯಲ್ಲಿ ಪಪ್ಪ ಸ್ವಾಮಿ ರಾಮದಾಸರು ೧೯೬೩ರ ಜುಲೈ ೨೫ರಂದು ತಮ್ಮ ಇಹದ ಬಾಳ್ವೆ ಮುಗಿಸಿದರು. ಅವರ ಹುಟ್ಟಿನ ಉದ್ದೇಶ ಈಡೇರಿತ್ತು.
ಅವರ ನಂತರ ಸುಮಾರು ಇಪ್ಪತ್ತಾರು ವರ್ಷಗಳವರೆಗೆ ಮಾತೆ ಕೃಷ್ಣಾಬಾಯಿಯವರು ಆಶ್ರಮದ ಮೇಲುಸ್ತುವರಿ ವಹಿಸುತ್ತಾ ಬದುಕಿದ್ದರು. ಅವರ ನಂತರ ೨೦೦೮ರ ವರೆಗೆ ಸ್ವಾಮಿ ಸತ್ ಚಿದಾನಂದರು ಆಶ್ರಮವನ್ನ ಮುನ್ನಡೆಸಿ ಅವರೂ ಕೊನೆಯುಸಿರೆಳೆದರು. ಅವರೆಲ್ಲರ ಸಮಾಧಿಗಳೂ ಸಹ ಆಶ್ರಮದ ಮುಖ್ಯದ್ವಾರದ ಎಡಭಾಗದಲ್ಲಿದೆ. ದಿನದ ಎಲ್ಲಾ ಅವಧಿಯಲ್ಲೂ ಈ ಸಮಾಧಿಗಳೊಂದರಲ್ಲಿ ರಾಮನಾಮ ಸ್ಮರಣೆ ನಡೆಯುವ ಕ್ರಮವಿದೆ. ಆಶ್ರಮದ ಹಳೆಯ ಕಟ್ಟಡದಲ್ಲಿ ಪಪ್ಪ ಸ್ವಾಮಿ ರಾಮದಾಸರˌ ಮಾತೆ ಕೃಷ್ಣಾಬಾಯಿಯವರ ಹಾಗೂ ಸ್ವಾಮಿ ಸತ್ ಚಿದಾನಂದರ ಚಿತ್ರವನ್ನಿಟ್ಟು ಜಗತ್ತಿನ ಸಂತ ಪರಂಪರೆಯ ಎಲ್ಲರ ಚಿತ್ರಗಳನ್ನೂ ಸಹ ಇಲ್ಲಿನ ಗೋಡೆಗೆ ತೂಗು ಹಾಕಲಾಗಿದೆ. ನಿತ್ಯ ಬೆಳಗ್ಯೆ ಮಧ್ಯಾಹ್ನ ಹಾಗೂ ಸಂಜೆ ಮೂರೂ ಹೊತ್ತು ಅಲ್ಲಿ ಆಶ್ರಮಕ್ಕೆ ಭೇಟಿ ಕೊಡುವ ಭಕ್ತಾದಿಗಳು ಭಕ್ತಿಗೀತೆಗಳನ್ನ ಹಾಡುತ್ತಾರೆ ಹಾಗೂ ರಾಮನಾಮ ಸ್ಮರಣೆ ನಡೆಸುವ ಕ್ರಮವಿದೆ.
ಆಶ್ರಮ ಇಂದು ಸ್ವಾಮೀಜಿ ಹಾಗೂ ಮಾತಾಜಿಯವರ ಉಸ್ತುವರಿಯಲ್ಲಿ ಎಂದಿನಂತೆ ಸೇವಾನಿರತವಾಗಿದೆ. ಜಗತ್ತಿನಾದ್ಯಂತ ಇರುವ ಆಶ್ರಮದ ಭಕ್ತಾದಿಗಳು ಇಲ್ಲಿಗೆ ತಪ್ಪದೆ ಭೇಟಿ ಕೊಡುತ್ತಾರೆ. ಯಾರಾದರೂ ಸಹ ಬಯಸಿದರೆ ಥೇಟ್ ನಿತ್ಯಾನಂದಾಶ್ರಮದಂತೆ ಇಲ್ಲಿಗೆ ಬಂದು ಉಳಿದು ತಮ್ಮೊಳಗಿನ ತಮವನ್ನ ಹೋಗಲಾಡಿಸಿಕೊಳ್ಳಲು ಪ್ರಯತ್ನಿಸಬಹುದು. ಸಾಮಾನ್ಯವಾಗಿ ಭೇಟಿ ನೀಡುವವರಿಗೆ ಮೂರು ದಿನಗಳ ಕಾಲ ಉಳಿಯುವ ವ್ಯವಸ್ಥೆ ಇರುತ್ತದೆ.
ಆಶ್ರಮದ ಮುಖ್ಯ ಬಾಗಿಲಿನ ಬಗಲಲ್ಲೆ ಪಪ್ಪನ ಸಮಾಧಿ ಸ್ಥಳದಿಂದ ಕೆಳಗಿರುವ ಊಟದ ಮನೆಯಲ್ಲಿ ಮುಂಜಾನೆ ಆರಕ್ಕೆ ಬೆಳಗಿನ ಚಹಾ - ಏಳೂವರೆಗೆ ಕಾಫಿ ಚಹಾ ತಿಂಡಿ - ಮಧ್ಯಾಹ್ನ ಹನ್ನೆರಡೂವರೆಗೆ ಆರತಿ ನಂತರ ಊಟ - ಮಧ್ಯಾಹ್ನ ಮೂರಕ್ಕೆ ಕಾಫಿ ಚಹಾ ಹಾಗೂ ಸಂಜೆ ಆರೂವರೆಗೆ ರಾತ್ರಿಯೂಟವನ್ನ ಒದಗಿಸುವ ವ್ಯವಸ್ಥೆಯಿದೆ. ಊಟಕ್ಕೆ ಶುಚಿ - ರುಚಿಯಾದ ಚಪಾತಿ ಅನ್ನ ಪಲ್ಯ ಮಜ್ಜಿಗೆ ಅಥವಾ ಹಾಲುˌ ಆಗಾಗ ಪಾಯಸ ಅಥವಾ ಶಿರದ ಸಿಹಿತಿಂಡಿ ಜೊತೆಗೆ ಉಪ್ಪಿನಕಾಯಿ ಇರುತ್ತೆ. ಇಲ್ಲಿ ವಸತಿ ಹಾಗೂ ಊಟ ಸಂಪೂರ್ಣ ಉಚಿತ. ಆಶ್ರಮದ ನಿರ್ವಾಹಕರು ಯಾವ ಕಾರಣಕ್ಕೂ - ಯಾರನ್ನೂ ಹಣ ಕೇಳುವುದಿಲ್ಲ. ಭಕ್ತಾದಿಗಳೆ ಬಯಸಿ ಕಾಣಿಕೆಯನ್ನ ಕೊಟ್ಟರೆ ಮಾತ್ರ ನಮ್ರವಾಗಿ ಸ್ವೀಕರಿಸಿ ಆಶ್ರಮದ ಚಟುವಟಿಕೆಗಳ ಖರ್ಚು-ವೆಚ್ಚಕ್ಕಾಗಿ ವ್ಯಯಿಸುತ್ತಾರೆ.
*****
ಅಲ್ಲಿನ ಆತ್ಮೀಯ ಪರಿಸರ ಅವನ ಗಮನ ಸೆಳೆಯಿತು. ಹೋಗುವಾಗಲೆ ಮಧ್ಯಾಹ್ನದ ಆರತಿಯ ಹೊತ್ತಾಗಿತ್ತು. ಕೊಂಡೊಯ್ದಿದ್ದ ಖಾದ್ಯ ಪದಾರ್ಥಗಳ ಹೊರಕಾಣಿಕೆಯನ್ನ ಆಶ್ರಮದ ಕಛೇರಿಗೆ ಮುಟ್ಟಿಸಿ ಅವನು ಮುಖ್ಯ ಕಟ್ಟಡದಲ್ಲಾಗುತ್ತಿದ್ದ ಆರತಿಯನ್ನ ಕಂಡ. ಅಲ್ಲಿಂದ ಊಟದ ಮನೆಗೆ ಹೊಕ್ಕು ಮೃದುವಾದ ಚಪಾತಿˌ ಚೀನಿಕಾಯಿ ಪಲ್ಯˌ ಸುವರ್ಣಗೆಡ್ಡೆ ಸಾರುˌ ಹೂವಂತ ಅನ್ನˌ ಯಾರೋ ಭಕ್ತರು ಮಾಡಿಸಿದ್ದ ಹಾಲು ಪಾಯಸದ ಜೊತೆಗೆ ಉಪ್ಪಿನಕಾಯಿ ಹಾಗೂ ಮಜ್ಜಿಗೆಯಿದ್ದ ಪುಷ್ಕಳವಾದ ಭೋಜನವನ್ನೂ ಸವಿದ. ಆಶ್ರಮದ ಪರಿಸರ ಆಹ್ಲಾದಕರವಾಗಿತ್ತು. ಗೋಶಾಲೆಯ ಕರುಗಳ ಕಲರವˌ ಪ್ರೌಢ ದನಗಳ ಘನ ಗಾಂಭೀರ್ಯ ಒಂಥರಾ ಖುಷಿ ಕೊಟ್ಟಿತವನಿಗೆ.
ತನ್ನ ಮುಂದಿನ ಕಾಙಂನಗಾಡಿನ ಭೇಟಿಯಲ್ಲಿ ಇಲ್ಲಿಗೆ ಬಂದು ತಂಗುವ ನಿರ್ಧಾರ ಮಾಡಿದವನು ಅದರ ವ್ಯವಸ್ಥೆ ಮಾಡಲು ಯೋಚಿಸಿದ. ಇಲ್ಲಿನ ಶಾಂತ ಪರಿಸರದಲ್ಲಿ ಮೂರುದಿನ ಉಳಿಯುವ ಮನಸಾಯಿತವನಿಗೆ.
( ಇನ್ನೂ ಇದೆ.)
https://youtu.be/2Z9Wxbpc7us
No comments:
Post a Comment