08 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೪.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೪.👊


ಆದರೂ ಅವನ ಆ ದಿನದ ಸಂಬಳವನ್ನ ಉಳಿದ ಕೂಲಿಗಳೆಲ್ಲ ತಮ್ಮ ದುಡಿಮೆಯಿಂದ ತಲಾವಾರು ಚಂದಾ ಹಾಕಿ ಕೊಡುತ್ತಾರೆ! ಅವನ ವಾರ್ತಾಲಾಪ ಸೇವೆಗೆ ಹೀಗೆ ಸಂಬಳ ಸಂದಾಯವಾಗುತ್ತದೆ. ಒಂಥರಾ ಸಮಾಜವಾದಿ ನಡುವಳಿಕೆಯನ್ನ ಇದರಲ್ಲಿ ಕಾಣಬಹುದು. 


ಇನ್ನು "ಪತ್ರಂ"ಗಳೆಂದೆ ಮಲಯಾಳಿಗಳು ಕರೆಯುವ ದಿನಪತ್ರಿಕೆಗಳನ್ನ ಓದದ ಮಲಯಾಳಿಯೆ ಬಹುಶಃ ಇರಲಿಕ್ಕಿಲ್ಲ. ಇಷ್ಟು ಸಣ್ಣ ರಾಜ್ಯದಿಂದ ಮಲಯಾಳಂ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ "ಮಲಯಾಳ ಮನೋರಮಾ"ದಂತಹ ಪತ್ರಿಕೆ ಒಂದು ಹಂತದಲ್ಲಿ ದಿನಕ್ಕೆ ಮೂವತ್ತಾರು ಲಕ್ಷದವರೆಗೂ ಪ್ರಸರಣ ಸಂಖ್ಯೆಯಲ್ಲಿ ಏರಿತ್ತು. ಇವತ್ತು ಅಷ್ಟಿಲ್ಲˌ ಅನಿಸುತ್ತೆ. ಇಪ್ಪತ್ತೈದು ಲಕ್ಷದ ಹತ್ತಿರಕ್ಕೆ ಕುಸಿದಿರಬಹುದು. ಆದರೂ ಆಂಗ್ಲದ "ಟೈಂಸ್ ಆಫ್ ಇಂಡಿಯಾ" ಹಿಂದಿಯ "ದೈನಿಕ ಜಾಗರಣ"ದ ನಂತರ ಭಾರತದ ಹೆಚ್ಚು ಓದುಗರಿರುವ ಪತ್ರಿಕೆ ಮಾತ್ರ ಅದೆ. ಅಂದರೆ ನೂರಕ್ಕೆ ಹತ್ತು ಶೇಕಡಾ ಮಲಯಾಳಿ ಪತ್ರಿಕೆ ಓದುತ್ತಾನೆˌ ಅದೂ "ಮಲಯಾಳ ಮನೋರಮ"ವನ್ನಂತೂ ತಪ್ಪದೆ ಓದುತ್ತಾನೆ ಅಂತಾಯಿತಲ್ಲ!


ಇನ್ನು ಇಲ್ಲಿಂದ ಪ್ರಕಟವಾಗುವ ಪತ್ರಿಕೆಗಳಿಗೂˌ ಇಲ್ಲಿನವರ ರಾಜಕೀಯ ಇಷ್ಟ ಅನಿಷ್ಟಗಳಿಗೂ ನೇರಾನೇರ ಸಂಬಂಧವಿದ್ದುˌ ಬಾಕಿ ಇನ್ನುಳಿದ ಭಾಷೆಗಳ ಪತ್ರಿಕೆಗಳ ರಾಜಕೀಯ ನಿಲುವುಗಳಿಗಿಂತ ಇಲ್ಲಿನ ಪತ್ರಿಕೆಗಳ ರಾಜಕೀಯ ನಿಲುವು ಪ್ರಖರ. ಎಡಪಕ್ಷಗಳ ಮುಖವಾಣಿ "ದೇಶಾಭಿಮಾನಿ"ˌ ಕಾಂಗ್ರೆಸ್ಸಿನ ಮುಖವಾಣಿ "ಮಾತೃಭೂಮಿ"ˌ ಸಂಘ ಪರಿವಾರದವರ ಕರಪತ್ರ "ಜನ್ಮಭೂಮಿ"ˌ ಅತ್ಲಾಗೋ ಇತ್ಲಾಗೋ ಅಂತ ಗೊಂದಲದಲ್ಲಿ ನಡುಪಂಥ ಅನುಸರಿಸುವ "ಕೇರಳ ಕೌಮುದಿ"ˌ ಕಾಸು ಕೊಟ್ಟವರಿಗೆ ಒಲಿಯಲು ತಯಾರಾಗಿ ಕೂತಿರುವ "ಮಲಯಾಳ ಮನೋರಮ" ಹೀಗೆ ಓದುಗರ ಭಾವಕ್ಕೆ ತಕ್ಕಂತೆ ಭಕ್ತಿಯ ಪ್ರದರ್ಶನ ಇಲ್ಲಿನ ದಿನಪತ್ರಿಕೆಗಳಲ್ಲಾಗುತ್ತೆ. ಒಟ್ಟಿನಲ್ಲಿ ಈ ಪತ್ರಂ ಹಾಗೂ ಕಟ್ಟಂಚಾಯಗಳಿಲ್ಲದೆ ಬಹುತೇಕ ಮಲಯಾಳಿಗಳ ಪಾಲಿಗೆ ದಿನದ ಬೆಳಕು ಹರಿಯದು.

*****


ಇದರಿಂದಲೆ ಇಬ್ಬರು ಮಲಯಾಳಿಗಳು ಸೇರಿದರೆ ಅಲ್ಲಿ ಟ್ರೇಡ್ ಯೂನಿಯನ್ ಶುರುವಾಗುತ್ತೆ. ಅಪ್ಪಿತಪ್ಪಿ ಮೂರನೆಯವನೇನಾದರೂ ಕೂಡಿಕೊಂಡರೆ ಪ್ರತಿಭಟನೆಯ ಮೆರವಣಿಗೆ ಹೊರಟು ಬಿಡುತ್ತಾರೆ! ಅನ್ನುವ ಜೋಕು ಮಲಯಾಳಿಗಳಲ್ಲಿಯೆ ಚಾಲ್ತಿಯಲ್ಲಿದೆ. 


ಇತ್ತೀಚೆಗೆ ಮೊದಲಿನಷ್ಟಿಲ್ಲದಿದ್ದರೂ ಸಹ "ಸಮರಂ" ಎಂದು ಮಲಯಾಳಿಗಳು ಕರೆಯುವ ಕೆಂಬಾವುಟ ಹೊತ್ತ ಕಮುನಿಸ್ಟರ ಮುಂದಾಳತ್ವದ ಹೋರಾಟದ ಆಂದೋಲನ ಆಗಾಗ ಅಲ್ಲಲ್ಲಿ ನಡೆಯುತ್ತಿರದಿದ್ದರೆ ಅದು ಕೇರಳವೆ ಅಲ್ಲ. ಅಷ್ಟರ ಮಟ್ಟಿಗೆ ಸಮರಂ ಮಲಯಾಳಿಗಳ ನಿತ್ಯದ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. 


ಇಲ್ಲಿನ ಎಡಪಕ್ಷಗಳೂ ಸಹ ಒಂದೆರಡಲ್ಲˌ ಆಂತರಿಕ ಕಚ್ಚಾಟಗಳ ಫಲವಾಗಿ ಎಡಪಕ್ಷಗಳಲ್ಲೆ ಛಪ್ಪನ್ನರವತ್ತಾರು ಚೂರುಗಳಿಲ್ಲಿವೆ. ಒಂದೊಂದು ಬಣದ್ದು ಒಂದೊಂದು ದಿಕ್ಕಾಗಿದ್ದರೂ ಸಹ ಚುನಾವಣಾ ರಾಜಕೀಯದ ವಿಷಯ ಬಂದಾಗ ಮಾತ್ರ ತಮ್ಮೆಲ್ಲಾ ಆಂತರಿಕ ಭಿನ್ನಾಭಿಪ್ರಾಯ ಮರೆತು ಎಲ್ಲಾ ಎಡಪಕ್ಷಗಳು ಒಂದಾಗಿ ಚುನಾವಣೆ ಎದುರಿಸುತ್ತವೆ.


*****

ಇನ್ನು ಸಣ್ಣ ರಾಜ್ಯವಾಗಿರುವ ಕಾರಣ ಮಲಯಾಳಿಗಳಿಗೆ ಅಭಿವೃದ್ಧಿ ಪಥ ಹಾಗೂ ಪರಿಸರದ ನಡುವಿನ ಅನುಸಂಧಾನ ಯಾವತ್ತಿಗೂ ತೃಪ್ತಿಕರವಾಗಿ ಸಾಧಿಸಲು ಸಾಧ್ಯವಾಗಿಲ್ಲ. ಇಂದಿರಾ ಗಾಂಧಿ ಸರಕಾರದ ಕೃಪೆಯಿಂದ "ಮೌನ ಕಣಿವೆ"ಯಂತಹ ಪರಿಸರ ಸೂಕ್ಷ್ಮ ಪ್ರದೇಶ ಉಳಿದಿದೆ ಅನ್ನೋದನ್ನ ಬಿಟ್ಟರೆ ಉಳಿದಂತೆ ಇಲ್ಲಿ ಪರಿಸರ ಸಂಬಂಧಿ ವಿಷಯಗಳಲ್ಲಾದದ್ದೆಲ್ಲಾ ಎಡವಟ್ಟುಗಳೆ. 


ಕರ್ನಾಟಕದಿಂದ  ಕೊಳ್ಳೆ ಹೊಡೆದ ತುಳುನಾಡಿನ ತಾಲೂಕು ಕಾಸರಗೋಡಿನಲ್ಲಿ ಸಹಜ ಅರಣ್ಯ ಬೋಳಿಸಿ ಬೆಳೆಸಲಾಗಿರುವ ಸರಕಾರಿ ಗೇರು ಅಭಿವೃದ್ಧಿ ಪ್ರಾಧಿಕಾರದ ತೋಟಗಳ ಮೇಲೆ ಹೆಲಿಕ್ಯಾಪ್ಟರಿನಿಂದ ತಂದು ಸುರಿದ ಎಂಡೋಸಲ್ಫಾನಿನ ವಿಷ ಮಳೆಯೆ ಇರಲಿˌ ವಯನಾಡಿನಂತಹ ಮಲೆನಾಡಿನ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಬಾಣಾಸುರ ಅಣೆಕಟ್ಟು ಅಥವಾ  ಕರಪುಳ ಅಣೆಕಟ್ಟೆಯೆ ಆಗಿರಲಿˌ ಸಹಜ ಕಾಡಿದ್ದಲ್ಲಿ ಅಪರಾ ತಪರಾ ಹಬ್ಬಿಸಲಾಗಿರುವ ಪಾಲ್ಘಾಟಿನ ತೃಶೂರು ಕೊಟ್ಟಾಯಂನ ಚಹಾ ತೋಟಗಳ ವಿಸ್ತರಣೆಯಲ್ಲೆ ಆಗಿರಲಿ. ಇಡುಕ್ಕಿ - ಪಟ್ಟಣಂತಿಟ್ಟ ಜಿಲ್ಲೆಗಳ ಕಾಡಂಚು ಅತಿಕ್ರಮಿಸಿ ಎಬ್ಬಿಸಿರುವ ರಬ್ಬರು ಹಾಗೂ ಏಲಕ್ಕಿ ಎಸ್ಟೇಟುಗಳ ವಿಷಯದಲ್ಲೆ ಆಗಿರಲಿ ಒಟ್ರಾಶಿ ಸರಿಯಾಗಿ ನಡುವಿನ ನರದ ಜಾಗದಲ್ಲೆ ಹರಿದು ಇಬ್ಭಾಗವಾಗಿಸಿರುವ ಕೆಸುವಿನೆಲೆಯ ಎಡತುಂಡಿನಂತಹ ಆಕಾರದ ಈ ರಾಜ್ಯ ಕೇರಳ ಅವಿವೇಕಿ ಮಲಯಾಳಿಗಳ ಓತಪ್ರೋತ ಅಭಿವೃದ್ಧಿಯ ಹೊಡೆತ ತಾಳಲಾರದೆ ಕಂಗಾಲಾಗಿ ಹೋಗಿರುವುದಂತೂ ಸುಸ್ಪಷ್ಟ. 


ಸಾಲದ್ದಕ್ಖೆ ಕೇವಲ ಹದಿನಾಲ್ಕೆ ಜಿಲ್ಲೆಗಳಿರುವ ಕೇರಳಕ್ಕೆ ಈಗಾಗಲೆ ಕಾರ್ಯಾಚರಿಸುತ್ತಿದ್ಧ ಕೋಳಿಕ್ಕೋಡುˌ ಕೊಚ್ಚಿನ್ ನಡುಂಬಸ್ಸೇರಿ ಹಾಗೂ ತಿರುವನಂತಪುರಂ ವಿಮಾನ ನಿಲ್ದಾಣಗಳೆ ಧಾರಾಳವಾಗಿ ಸಾಲುತ್ತಿದ್ಧರೂˌ ಅತಿ ಹತ್ತಿರದ ತುಳುನಾಡ ಮಂಗಳೂರು ವಿಮಾನ ನಿಲ್ದಾಣದ ಆದಾಯ ಕಂಡು ಅತಿಯಾಸೆಯಿಂದ ಕುರುಬಿ ಅನಗತ್ಯವಾಗಿ ಪರಿಸರ ಸೂಕ್ಷ್ಮ ಕಣ್ಣೂರಿನ ಮಲೆನಾಡು ಭಾಗದ ಸಂಪೂರ್ಣ ಗುಡ್ಡ ಸಪಾಟು ಮಾಡಿ ನಿರ್ಮಿಸಲಾದ ಹೊಸ ವಿಮಾನ ನಿಲ್ದಾಣ ಲೋಲುಪ ಮಲಯಾಳಿಗಳಿಗಿರುವ ದೂರದೃಷ್ಟಿಯ ಕೊರತೆಗೊಂದು ಜ್ವಲಂತ ನಿದರ್ಶನ. ಅದೂ ಸಹ ಅನಿರೀಕ್ಷಿತ ಜಲಪ್ರವಾಹ ಮೇಲಿಂದ ಮೇಲೆ ಎರಡೆರಡು ಸಲ ಅಲ್ಪಾಂತರಗಳಲ್ಲೆ ರಾಜ್ಯವನ್ನು ಕಾಡಿ ಮಾನವನ ಅಭಿವೃದ್ಧಿ ಪೀಡೆಗಳಿಂದ ವಿಪರೀತವಾಗಿ ಬಳಲಿದ್ದ ಭೂಮಿಯ ಭಯಂಕರ ಭೂಕುಸಿತದ ಸರಣಿಗಳಿಗೆ ಇಲ್ಲಿನ ಮಲೆನಾಡಿನ ಬೆಟ್ಟಗಳ ಸಾಲು ಸಾಕ್ಷಿಯಾಗಿ ಅಪಾರ ಹಾನಿಯಾದ ನಂತರವೂ ಇಂತಹ ಅಪ್ರಯೋಜಕ ಅಭಿವೃದ್ಧಿ ಮಾಡಲು ಹವಣಿಸಿದ್ದು ಅಕ್ಷಮ್ಯ.

ಇಷ್ಟೆಲ್ಲ ಅನಾಹುತಗಳ ಸರಣಿ ಅತ್ಯಾಚಾರಗಳನ್ನೆಸಗಿ ನಿಸರ್ಗ ಕನ್ಯೆಯನ್ನ ಕಾಡಿದ್ದು ಸಾಲದು ಎನ್ನುವಂತೆ ಪ್ರಳಯಾಂತಕ ಯೋಜನೆಯೊಂದನ್ನ ಅನುಷ್ಠಾನಗೊಳಿಸಿ ಪ್ರಕೃತಿಯ ಮೇಲೆ ಇನ್ನಷ್ಟು ವಿಕೃತಿಯನ್ನೆಸಗಲು ಈಗಿನ ಎಡಪಕ್ಷಗಳ ಸರಕಾರ ಟೊಂಕಕಟ್ಟಿ ನಿಂತಿದೆ. 

ಈಗಾಗಲೆ ಅರ್ಧ ಡಝ಼ನ್ ರೈಲ್ವೆ ಜಂಕ್ಷನ್ಗಳಿರುವ ಕೇರಳದಲ್ಲಿ ರೈಲು ಸಾಮೂಹಿಕ ಸಾರಿಗೆಯ ವಿಷಯದಲ್ಲಿ ಮಲಯಾಳಿಗಳೆಲ್ಲರ ಪ್ರಾಥಮಿಕ  ಆಯ್ಕೆಯಾಗಿರಲು ಕಾರಣಗಳಿವೆ. ರಾಜ್ಯದ ಉದ್ದಗಲಕ್ಕೂ ಹರಡಿರುವ ವಿಸ್ಕೃತ ರೈಲು ರಸ್ತೆಗಳ ಜಾಲˌ ನಿರಂತರವಾಗಿ ಇವೆಲ್ಲಾ ನಿಲ್ದಾಣಗಳ ನಡುವೆ ಹೆಚ್ಚಿನ ಸಮಯಾಂತರ ತೋರದೆ ಓಡುವ ರೈಲುಗಳು ಕನಿಷ್ಠ ಖರ್ಚಿನಲ್ಲಿ ಸಂಪರ್ಕ ಸಾಧಿಸಲು ಮಲಯಾಳಿಗಳಿಗೆ ವರದಾನದಂತೆ ಒದಗಿ ಬಂದಿರುವುದು ದಿಟ. ದಕ್ಷಿಣದ ರಾಜಧಾನಿ ತಿರುವನಂತಪುರಂನಿಂದ ಪೂರ್ವದ ಪಾಲ್ಘಿಟಿಗೆ ಕಡಿಮೆ ವೇಗದ ರೈಲಿಗೇನೆ ಹೋಗಿ ತಲುಪಲು ಏಳು ತಾಸು ಸಾಕು. ಉತ್ತರದ ಕಾಸರಗೋಡು ಮುಟ್ಟಲು ಸರಿಸಮಾರು ಹನ್ನೆರಡು ತಾಸು ಬೇಕು. ಅಂತದ್ದರಲ್ಲಿ ಕಾಸರಗೋಡಿನಿಂದ ತಿರುವನಂತಪುರಂ ಸಂಪರ್ಕಿಸಲು ಕೇವಲ ನಾಲ್ಕೆ ನಾಲ್ಕು ತಾಸು ಸಾಕಾಗುವ ಹೊಸ "ಸಿಲ್ವರ್ ಲೈನ್" ಅನ್ನುವ ಅತಿವೇಗದ ರೈಲು ಯೋಜನೆಯನ್ನ ಜಾರಿಗೊಳಿಸಲಾಗಿದೆ. ಈಗಿರುವ ರೈಲ್ವೆ ಜಾಲದಿಂದ ಇದಕ್ಕೆ ಉಪಯೋಗವಿಲ್ಲ. ಹೊಸ ಹಳಿ ಹಾಸಲುˌ ಎತ್ತರಿಸಿದ ಮಾರ್ಗ ಹಾಗೂ ನೆಲಾಂತರ್ಗತ ಮಾರ್ಗ ನಿರ್ಮಿಸಲು ಮತ್ತಷ್ಟು ಪರಿಸರ ಪೀಡನೆ ಆಗಲಿಕ್ಕಿದೆ. ನಾಲ್ಕು ತಾಸಲ್ಲಿ ತಿರುವನಂತಪುರದಿಂದ ಕಾಸರಗೋಡಿಗೆ ಹೋಗಿ ಅಷ್ಟು ತುರ್ತಾಗಿ ಆಗಬೇಕಿರುವುದಾದರೂ ಏನು? ಎನ್ನುವ ಪ್ರಶ್ನೆಗಂತೂ ಇವನಿಗೆ ಉತ್ತರ ಸಿಕ್ಕಿಲ್ಲ. ಒಟ್ಟಿನಲ್ಲಿ ಈ ಮಲಯಾಳಿಗಳು ಅದಾಗಲೆ ಆಗಿರುವ ಅನಾಹುತಗಳಿಂದ ಪಾಠವನ್ನಂತೂ ಕಲಿತ ಯಾವುದೆ ಲಕ್ಷಣಗಳಿಲ್ಲ.

ಇಷ್ಟೆಲ್ಲ ಅವಾಂತರಗಳ ಸರಣಿಯೆ ಕಣ್ಣ ಮುಂದಿದ್ದರೂ ಅದರಿಂದ ಬುದ್ಧಿ ಕಲಿಯದ ಈ ಮಡ್ಡ ಮಲಯಾಳಿ ಅತಿಬುದ್ಧಿವಂತರಿಗೆ ಪರಿಸರ ಪ್ರಜ್ಞೆ ಮರೆತು ಗಬ್ಬೆಬ್ಬಿಸಲು ಪರರ ನಾಡೆ ಆಗಬೇಕಂತೇನೂ ಇಲ್ಲ. ಈ ನವ ಭಸ್ಮಾಸುರರಿಗೆ ಹುಟ್ಟೂರು ಕೇರಳವಾದರೂ ಆಗುತ್ತೆ.

( ಇನ್ನೂ ಇದೆ.)



https://youtu.be/RU57WDLiCWc

No comments: