"ಹೇ ರಾತ್ ಇಸ್ ವಕ್ತ್ ಆಂಚಲ್ ಮೈ ತೇರೇ
ಜಿತನೇ ಭೀ ಹೈಂ ಯಹಂ ಸಿತಾರೇಂ.
ಜೋ ದೇ ದೇ ತೋ ಮುಝಕೋ
ತೋ ಫಿರ್ ಮೈ ಲುಟಾದೂಂ
ಕಿಸೀಕೀ ನಜ಼ರ್ ಪೇ ಯಹಂ ಸಾರೇ./
ಕಹೋ ಕೇ ಯಹಂ ರಂಗೀನ್ ಸಪ್ನೇ ಸಜಾ ಕೇ ಮಿಠಾ ಥೋ ನಾ ದೋಗೇ?
ಅಗರ್ ಹಮ್ ಯಹಂ ಪೂಛೇಂ ಕೀ ದಿಲ್ ಮೈ
ಬಸಾ ಕೇ ಭುಲಾ ಥೋ ನಾ ದೋಗೇ?!//"
ತಿಂಡಿ ತಿಂದು ಕೋಣೆಗೆ ಮರಳಿದವನ ಕಿವಿಗೆ ಮದನ್ ಮೋಹನ ಸಾಬ್ ಸೃಜಿಸಿದ್ದ ಮತ್ತೊಂದು ರತ್ನದಂತಹ ಸಂಯೋಜನೆಯೊಂದು ಮೆಲುವಾಗಿ ಬಿತ್ತು. ಮಹಮದ್ ರಫಿಯವರ ಮನಮೋಹಕ ಧ್ವನಿಗೆ ಮೋಡಿ ಬೆರೆಸುವಂತೆ ಆಶಾ ಭೋಂಸ್ಲೆ ಯುಗಳ ಸ್ವರದಲ್ಲಿ ಉಲಿಯುತ್ತಿದ್ದರು. ಅಲ್ಲಾˌ ಕವಿ ರಾಜೇಂದ್ರಕೃಷ್ಣರಿಗೆ ಆಗಿನ್ನೂ ಅಸ್ತಿತ್ವವೆ ಇದ್ದಿರದ ತನ್ನಂತ ಉತ್ಕಟ ಪ್ರೇಮಿಯ ಮನೋಭಿಲಾಶೆ ಹೇಗೆ ಹೊಳೆಯಿತು ಅಂತ ಅದೆಷ್ಟನೆಯದೋ ಸಲ ಅಚ್ಚರಿಗೊಂಡ.
ಶಾಸ್ತ್ರೀಯವಾಗೇನೂ ಸಂಗೀತ ಕಲಿತವನವನಲ್ಲ. ಸಣ್ಣಂದಿನಲ್ಲಿ ಮನೆಯಲ್ಲಿ ಭಕ್ತಿಗೀತೆಗಳನ್ನˌ ಅರೆ ಶಾಸ್ತ್ರೀಯ ಕೃತಿಗಳನ್ನ ಕ್ಯಾಸೆಟ್ಟುಗಳಲ್ಲಿ ಕೇಳಿ ಬರುತ್ತಿದ್ದಾಗ ಪದೆ ಪದೆ ಕೇಳುತ್ತಿದ್ದದ್ದೆಷ್ಟೋ ಅಷ್ಟೆ. ಅವರ ಮನೆಯಲ್ಲಿ ತಲೆಮಾರಿಗೆ ಒಬ್ಬರಿಗೆ ಈ ಸಂಗಾತಾಸಕ್ತಿಯ ಸೋಂಕು ಗಾಢವಾಗಿ ತಗಲುವುದಿದೆˌ ಅವನಜ್ಜ ಹಾಗೂ ಅವನ ಕಿರಿಯ ಮಾವನಿಗೆ ಚೂರುಪಾರು ಸಂಗೀತದ ಹುಚ್ಚಿದ್ದದ್ದು ಅನುವಂಶಿಕವಾಗಿ ಅವನಿಗೂ ಈಗದು ದಾಟಿಬಂದಂತಿತ್ತು ಅಷ್ಟೆ.
ಬೆಂಗಳೂರಿನಲ್ಲಿ ಅವರ ಸಹೋದರ ಮಾವ ಇಟ್ಟಿದ್ದ ಹೊಟೇಲಿನಲ್ಲಿ ಕೆಲಸವನ್ನೂ ಮಾಡಿಕೊಂಡು ಜೊತೆಜೊತೆಗೆ ಸಂಜೆ ಕಾಲೇಜಿನಲ್ಲಿ ಕಾನೂನು ವ್ಯಾಸಾಂಗವನ್ನೂ ಮಾಡಿಕೊಂಡಿದ್ದ ಅವನ ಸಹೋದರ ಮಾವ ಎಂಬತ್ತರ ದಶಕದ ಕೊನೆಗೆ ತನ್ನ ಸಂಬಳದ ದುಡ್ಡಿನಲ್ಲಿ ಅಜ್ಜನಿಗೊಂದು ಶಾರ್ಪ್ ಕಂಪನಿಯ ಎರಡು ಡೆಕ್ಕುಗಳಿರುವ ಕಡುಕಪ್ಪಿನ ಟೂ ಇನ್ ವನ್ ತಂದು ಕೊಟ್ಟಿದ್ಧ. ಅದೂವರೆಗೂ ಹೊರಗೆ ಬಲೆಬಲೆ ಆಂಟೆನಾ ನೇತು ಹಾಕಿ ಅದರಿಂದ ಸಿಗ್ನಲ್ ಪಡೆಯುತ್ತಿದ್ದ ದೊಡ್ಡ ಡೋಲಿನಂತಹ ರೇಡಿಯೋವನ್ನ ಮಾತ್ರ ಮನೆಯಲ್ಲಿ ಕಂಡು ಗೊತ್ತಿದ್ದ ಪ್ರಸಾದಪುರದಂತಹ ಪುಟ್ಟ ಊರಿನವನಾಗಿದ್ದ ಅವನಿಗೆ ಇದೆ ವಿಸ್ಮಯ. ಬಯಸಿದಾಗ ಧ್ವನಿ ಪೆಟ್ಟಿಗೆಗಳೆರಡನ್ನೂ ನಯವಾಗಿ ಸರಿಸಿ ರಿಕಾರ್ಡರಿನ ಮುಖ್ಯಭಾಗದಿಂದ ಬೇರ್ಪಡಿಸಬಹುದಾಗಿದ್ದ ಆ ಟೂ ಇನ್ ವನ್ ಅವನಂತಹ ಹಳ್ಳಿಮುಕ್ಕನ ಪಾಲಿಗೆ ಒಂದು ಪರಮಾಶ್ಚರ್ಯದ ಮಾಂತ್ರಿಕ ವಸ್ತುವೆ ಆಗಿತ್ತು.
ಯಕ್ಷಗಾನವೆಂದರೆ ರಾತ್ರಿಯಿಡಿ ನಿದ್ದೆಗೆಟ್ಟು ನೋಡುವ ಚಪಲಚನ್ನಿಗರಾಯರಾಗಿದ್ದ ಅವರಜ್ಜನಿಗೆ ಈ ರೆಕಾರ್ಡರಿನ ಆಗಮನ ಮನೆಗಾದ ನಂತರ ಆಗಷ್ಟೆ ಸಂಪೂರ್ಣ ಯಕ್ಷಗಾನ ಕಥಾ ಪ್ರಸಂಗ ಕ್ಯಾಸೆಟ್ಟಿನಲ್ಲಿ ಲಭ್ಯವಾಗುತ್ತಿದ್ದುದು ಸೇರಿ ಎರಡೆರಡು ಬಂಪರ್ ಲಾಟರಿ ಒಂದೆ ಸಲ ಹೊಡೆದಂತಾಗಿ ಯಕ್ಷಗಾನದ ಕ್ಯಾಸೆಟ್ಟುಗಳನ್ನ ಖರೀದಿಸಿದ್ದೂ ಖರೀದಿಸಿದ್ದೆ. ಬಿಡುವಿನ ವೇಳೆಯಲ್ಲಿ ತಿರುಗಿಸಿ ಮುರುಗಿಸಿ ಕೇಳಿದ್ದೇ ಕೇಳಿದ್ದು.
ಯಕ್ಷಗಾನದ ಹಿಂದೆ ಹಿಂದೆಯೆ ವೆಂಕಟೇಶ ಸುಪ್ರಭಾತ ಹಾಗೂ ಸ್ತೋತ್ರದ ಎಂ ಎಸ್ ಸುಬ್ಬಲಕ್ಷ್ಮಿ "ಮಹಾ ಗಣಪತಿಂ" ಸರಾಗವಾಗಿ ನುಡಿಸಿ ವಯಲಿನ್ನಿನಲ್ಲೆ ಮೋಡಿ ಹಾಕುತ್ತಿದ್ದ ಕುನ್ನೈಕುಡಿ ವೈದ್ಯನಾಥನ್ˌ ಗಂಡುವಾದ್ಯದಲ್ಲೆ ಅಗ್ರಗಣ್ಯವಾಗಿರುವ ಸಾಕ್ಸೋಫೋನಿನಲ್ಲಿ ಮೆಲುವಾಗಿ "ವಾತಾಪಿ ಗಣಪತಿಂ ಭಜೇಹಂ" ಮೂಡಿಸುತ್ತಿದ್ದ ಕದ್ರಿ ಗೋಪಾಲನಾಥ್ˌ ಯಾವುದೆ ದೇವರನಾಮವನ್ನಾದರೂ ಮನಮುಟ್ಟುವಂತೆ ಹಾಡುತ್ತಿದ್ದ ಮಂಗಳಂಪಲ್ಲಿ ಬಾಲಮುರಳಿಕೃಷ್ಣˌ ಅದ್ಯಾವುದೋ ಅವ್ಯಕ್ತ ರಾಗದಲ್ಲಿ ಹಾಡಿ ಮನಸನಾವರಿಸುತ್ತಿದ್ದ ಭೀಮಸೇನ ಜೋಷಿˌ ಪಂಡಿತ ಮಲ್ಲಿಕಾರ್ಜುನ ಮನ್ಸೂರˌ ಗಂಗೂಬಾಯಿ ಹಾನಗಲ್ಲˌ ಬಡೇ ಗುಲಾಂ ಅಲಿ ಖಾನ್ˌ ಜಲತರಂಗ ಹೊತ್ತ ಶಿವಕುಮಾರ ಶರ್ಮˌ ಸಿತಾರದ ಅವತಾರ ಪುರುಷ ರವಿಶಂಕರ್ˌ ಪುರಂದರದಾಸರ ಕೀರ್ತನೆಗಳ ಆಗಿನ್ನೂ ಸ್ವಾಮಿಗಳಾಗಿದ್ದ ವಿದ್ಯಾಭೂಷಣರುˌ ಕನಕದಾಸರ ಭಜನೆಗಳ ಡಾ ರಾಜಕುಮಾರ್ˌ ಆರ್ ಎನ್ ಜಯಗೋಪಾಲ - ವಿಜಯನಾರಸಿಂಹ - ಚಿ ಉದಯಶಂಕರರು ಕೊಲ್ಲೂರು ಧರ್ಮಸ್ಥಳ ಉಡುಪಿ ಶೃಂಗೇರಿ ಹೊರನಾಡು ಹಾಗೂ ತಿರುಪತಿಯ ದೇವಾನುದೇವತೆಗಳ ಮಹಿಮಾವಳಿಗಳನ್ನೆಲ್ಲಾ ಬಣ್ಣಿಸಿ ಬರೆದಿದ್ದ ಉಪೇಂದ್ರಕುಮಾರ್ ಎಂ ರಂಗರಾವ್ ಗೋಪಾಲಂ ವೈದ್ಯನಾಥನ್ ಹಾಗೂ ಇಳಯರಾಜಾ ರಾಗ ಸಂಯೋಜಿಸಿ; ಘಂಟಸಾಲಾˌ ಪಿ ಬಿ ಶ್ರೀನಿವಾಸರಿಂದ ಹಿಡಿದು ಎ ಎಂ ರಾಜಾˌ ಸೌಂದರರಾಜನ್ˌ ಎಸ್ ಪಿ ಬಾಲಸುಬ್ರಮಣ್ಯಂˌ ಎಸ್ ಜಾನಕಿˌ ಪಿ ಲೀಲಾˌ ಪಿ ಸುಶೀಲಾˌ ಬಿ ಕೆ ಸುಮಿತ್ರಾˌ ಬೆಂಗಳೂರು ಲತಾˌ ಶೈಲಜಾˌ ಕಸ್ತೂರಿ ಶಂಕರ್ˌ ವಾಣಿ ಜಯರಾಂˌ ಬಿ ಆರ್ ಛಾಯಾˌ ಮನುˌ ಕೆ ಜೆ ಏಸುದಾಸ್ˌ ರಾಜಕುಮಾರ ಭಾರತಿˌ ಜಯಚಂದ್ರನ್ˌ ಡಾ ರಾಜಕುಮಾರ್ ಹೀಗೆ ಥರೇವಾರಿ ಕಂಠಗಳು ಮಧುರಾತಿ ಮಧುರವಾಗಿ ತನ್ಮಯತೆಯಿಂದ ಉಲಿದ ಭಕ್ತಿಗೀತೆಗಳ ಕ್ಯಾಸೆಟ್ಟುಗಳ ಮುಖಾಂತರ ಒಬ್ಬೊಬ್ಬರಾಗಿ ಪುಂಖಾನುಪುಂಖವಾಗಿ ಬಂದು ಅವರ ಮನೆಯ ಕಬೋರ್ಡು ತುಂಬ ತೊಡಗಿದರು.
ಇಷ್ಟೆ ಸಾಲದು ಅನ್ನುವಂತೆ "ಮುದುಕನ ಮದುವೆ" "ಪೊಲೀಸನ ಮಗಳು" ತರಹದ ಕೆಲವು ಅರೆಪೋಲಿ ಉತ್ತರ ಕರ್ನಾಟಕದ ಶೈಲಿಯ ನಾಟಕಗಳ ಧ್ವನಿ ಸುರುಳಿಗಳೂ ಅವರನ್ನ ಸೆಳೆದುˌ ಅದಕ್ಕೂ ಮಿಗಿಲಾಗಿ ಗುರುರಾಜ ಹೊಸಕೋಟಿಯ "ಮಗಾ ಹುಟ್ಯನವ್ವ" ತರದ ವ್ಯಂಗ್ಯಶೈಲಿಯ ಗೀತೆಗಳಿಂದಲೂ ಆಕರ್ಷಿತರಾಗಿ ಅವರ ಕ್ಯಾಸೆಟ್ಚುಗಳ ಆಸ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಹೋದವು.
ಅತ್ತ ಅವನಜ್ಜನ ಕ್ಯಾಸೆಟ್ ರಾಶಿ ಏರುತ್ತಿದ್ದಂತೆ ತನ್ನ ವಯಸ್ಸಿಗೆ ತಕ್ಕಂತೆ ಆ ಕಾಲದ ಚಾಲ್ತಿಯ ಉತ್ತುಂಗದಲ್ಲಿದ್ದˌ ಒಂದರ್ಥದಲ್ಲಿ ಆ ಕಾಲದ ಎ ಆರ್ ರಹಮಾನ್ ಆಗಿದ್ದ ಬಪ್ಪಿಲಾಹಿರಿಯ ಹಿಪ್ಪಿ ಭಕ್ತನಾಗಿದ್ದ ಡಬಲ್ ಪಾಕೆಟ್ ಬೆಡ್ ಶೀಟು ಬಟ್ಟೆಯ ಶರ್ಟು ಹಾಗೂ ಎಲಿಫೆಂಟ್ ಲೆಗ್ ಬೆಲ್ ಬಾಟಂ ಪ್ಯಾಂಟಿನಲ್ಲಿ ಕಂಗೊಳಿಸುತ್ತಿದ್ದ ಇವನ ಅದೆ ಟೇಪ್ ರೆಕಾರ್ಡರ್ ತಂದಿದ್ದ ಮಾವ ತನ್ನ ಆರಾಧ್ಯ ದೈವಗಳಾಗಿದ್ದ ಬಪ್ಪಿ ದಾˌ ಆರ್ ಡಿ ಬರ್ಮನ್ˌ ಲಕ್ಷ್ಮಿಕಾಂತ - ಪ್ಯಾರೇಲಾಲ್ˌ ವಿಜು ಶಾˌ ಕಲ್ಯಾಣಜೀ - ಆನಂದಜೀಯವರ ಸ್ವರ ಸಂಯೋಜನೆಯ ಸಿನೆಮಾ ಧ್ವನಿ ಸುರುಳಿಗಳನ್ನೂˌ "ಹವಾ ಹವಾ ಏ ಹವಾ"ದ ಹಸನ್ ಜಂಗಿˌ "ರಂಭ ಹೋ ಹೋ"ದ ಉಷಾ ಉತ್ತುಪ್ˌ "ಬೂಂ ಬೂಂ"ನ ನಾಝಿ಼ಯಾ ಹಸನ್ˌ ವಿಜಯ ಬೆನಡಿಕ್ಟ್ˌ ಆಲಿಷಾ ಚಿನಾಯ್ˌ ಬಿಡ್ಡುˌ ಶರೋನ್ ಪ್ರಭಾಕರ್ ಹೀಗೆ ತನ್ನ ಪಡ್ಡೆ ವಯಸ್ಸಿಗೆ ಅತ್ಯಾಕರ್ಷಕ ಅನಿಸಿದವರನ್ನೆಲ್ಲ ಕಾಸು ಕೊಟ್ಟು ಕ್ಯಾಸೆಟ್ಟು ಖರೀದಿಸಿ ಮನೆ ಮನ ತುಂಬಿಸಿಕೊಂಡ.
ಅಪ್ಪ ಮತ್ತು ಅಣ್ಣನ ಹವ್ಯಾಸ ಕಂಡು ಇವನ ಚಿಕ್ಕಮ್ಮಂದಿರು ಈ ವಿಷಯದಲ್ಲಿ ಹಿಂದುಳಿಯಲುಂಟೆ? ಬೆಳಗಿನ ಧಾರವಾಡ ಕೇಂದ್ರದ ಚಿತ್ರಗೀತೆಗಳ ನಂತರ ಬೆಳಗಿನ ಎಂಟೂಕಾಲರಿಂದ ಒಂಬತ್ತರತನಕ ದಿನನಿತ್ಯ ಮುಂಬೈ ವಿವಿಧ ಭಾರತಿಯಿಂದ ಪ್ರಸಾರವಾಗುತ್ತಿದ್ದ ನೂತನ ಚಿತ್ರಗೀತೆಗಳನ್ನ ಕೇಳುವ ಗೀಳಿಗೆ ಬಿದ್ದ ಅವರುˌ ಅದಾಗಲಷ್ಟೆ ಚಲನಚಿತ್ರ ಧ್ವನಿವಾಹಿನಿಗಳೂ ಕ್ಯಾಸೆಟ್ಟು ರೂಪದಲ್ಲಿ ದೊರೆಯುತ್ತಿದ್ದು ಅದನ್ನ ದಂಡಿಯಾಗಿ ತಂದು ಕೂಡಿಟ್ಟು ತಮ್ಮ ತಮ್ಮ ಕ್ಯಾಸೆಟ್ ಆಸ್ತಿಯನ್ನೂ ಆಗಾಗ ಇಮ್ಮಡಿಸಿಕೊಳ್ಳತೊಡಗಿದರು. ಅಜ್ಜಿಗಂತೂ ಹೊಲಿಗೆ ಯಂತ್ರ ಮೆಟ್ಟುತ್ತಾ ಮಧ್ಯಾಹ್ನದ ಊಟದ ಹೊತ್ತಲ್ಲಿ ಸಿಲೋನು ಕೇಂದ್ರದೆಡೆ ತಿರುಗಿಸಿˌ ಸಂಜೆ ಕಾಫಿಯ ಹೊತ್ತಲ್ಲಿ ಭದ್ರಾವತಿಯತ್ತ ತಿರುಗಿಸಿ ಹಾಡುಗಳನ್ನಾಲಿಸುವ ಖಯಾಲಿ ಇತ್ತು. ಆಗೀಗ ಇವುಗಳ ಮಧ್ಯೆ ವಿವಿಧ ಕನ್ನಡದ ಗಾಯಕರು ಹಾಡಿದ್ದ ಕವಿಗಳ ಕಾವ್ಯದ ಭಾವಗೀತೆಗಳ ಹಾಗೂ ಜನಪದ ಗೀತೆಗಳ ಕ್ಯಾಸೆಟ್ಟುಗಳೂ ಸೇರಿ ಒಂಥರಾ ಸಂಗೀತದ ಮಿಸಳುಬಾಜಿಯ ಆಸ್ವಾದಿಸುತ್ತಲೆ ಮಧ್ಯೆ ಬೆಳೆದಿದ್ದ ಅವನಿಗೆ ಮೊದಲಿಗೆ ಮನಸಿಗಾಪ್ತವಾಗಿದ್ದೆ ಮದನ ಮೋಹನ ಹಾಗೂ ಇಳಯರಾಜಾ ಸಂಯೋಜನೆಯ ಗೀತೆಗಳು. ಅವರ ಹೆಸರು ಕೇಳರಿಯದ ಕಾಲದಿಂದಲೂ ಅವನವರ ಭಕ್ತೋತ್ತಮ. ಇವತ್ತಿಗೂ ಸಹ ಇದು ಒಂಚೂರು ಬದಲಾಗಿಲ್ಲ. ಹೀಗೆ ಸಂಗೀತ ಪ್ರೀತಿ ಅವನಿಗೆ ಅನುವಂಶಿಕ.
( ಇನ್ನೂ ಇದೆ.)
https://youtu.be/blZBUpgiN_0
No comments:
Post a Comment